ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ ಗುಲಾಬಿ ನಡೆದಿದ್ದಳು. ದೇವಳದ ಪೌಳಿಯ ಮೆಟ್ಟಲು ಏರುವಾಗ ಗಂಟೆಯ ನಿನಾದ ಪ್ರತಿಧ್ವನಿಸಿದ್ದು ಕೇಳಿಸಿತು.
ಕಟ್ಟುನಿಟ್ಟಿನ ಸಂಪ್ರದಾಯದ ಹಿನ್ನೆಲೆ ಇರುವ ಆಕೆಯ ಕುಟುಂಬ ಇಡೀ ಪರಶುರಾಮ ಸೃಷ್ಟಿಯ ವಿಲೋಕನ ಮುಗಿಸಿ ನಿನ್ನೆಯಷ್ಟೇ ಮನೆಗೆ ಮರಳಿತ್ತು. ಪರಿಶುದ್ಧ ಗ್ರಾಮೀಣ ಪರಿಸರದಲ್ಲಿ ಬೆಳೆದ ಗುಲಾಬಿ ಇದೀಗ ತಾಯಿಯೊಂದಿಗೆ ಮಹಾಲಿಂಗೇಶ್ವರನ ದರ್ಶನಕ್ಕಾಗಿ ಬಂದಿದ್ದಾಳೆ.
ಆಗಮೋಕ್ತ ದೇವಸ್ಥಾನವಾಗಿರುವ ಇದು ಅನೇಕ ಐತಿಹ್ಯಗಳನ್ನು ಹೊಂದಿವೆ. ಹಲವು ಕಾರಣಿಕೆಗಳ ಆವಾಸಸ್ಥಾನವಾಗಿ, ಸ್ಥಳ ಗೌರವವನ್ನು ಕಾಪಾಡುವಲ್ಲಿ ಜನರ ನಂಬಿಕೆ ಮೂಲವಾಗಿತ್ತು. ಅನೂಚಾನವಾಗಿ ಇದು ಭಾವುಕ ಜನರ ಸಮ್ಮೋಹಿನಿ ಅಂದರೂ ತಪ್ಪಿಲ್ಲ. ದೇವರ ದರ್ಶನದಿಂದ ಜನ್ಮ ಪುನೀತವಾದ ಧನ್ಯತೆ ಸದಾ ಜನಮನದಲ್ಲಿ.
ದೇವಳದ ಒಳಗೆ ಕಾಲಿಡುತ್ತಿದ್ದಂತೆ ಮಗಳು ಗುಲಾಬಿ ಎದುರಿಗೆ ಕಾಣಿಸಿದ ‘ಸ್ಥಳ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು’ ಎಂಬ ಫಲಕ ನುಡಿಯನ್ನು ವಯಸ್ಸಿನ ಸಹಜ ಉತ್ಸಾಹದಲ್ಲಿ ಸಶಬ್ದ ಓದಿದ್ದನ್ನು ಅವಳಮ್ಮ ಕೇಳಿಸಿಕೊಂಡು ‘ಸುಮ್ಮೆ ಬಾ’ ಎಂದು ಕೈ ಹಿಡಿದೆಳೆದಳು.
ಭಕ್ತರು ತುಟಿ ಮಿಣಿ ಮಿಣಿಸುತ್ತಾ ದೇವರಿಗೆ ಪ್ರದಕ್ಷಿಣೆ ಹಾಕತೊಡಗಿದ್ದರು.
ಒಂದು ವಾರದ ಎಡಬಿಡದ ಪ್ರವಾಸದಿಂದ ದೇಹದ ಉಷ್ಣ ಏರುಪೇರಾಗಿ ಗುಲಾಬಿಗೆ ನಿನ್ನೆಯಿಂದ ಸೊಂಟದ ನೋವು ಕಾಣಿಸಿಕೊಂಡಿತ್ತು. ಅವಳಿಗೆ ಏನನ್ನಿಸಿದರೂ ಯಾರೊಂದಿಗೂ ಹಂಚಿಕೊಳ್ಳದ ಸದಾ ಅಂತರ್‍ಮುಖಿ ಅವಳು. ಅದಕ್ಕೆ ಕಾರಣವೂ ಇತ್ತು. ಅವಳ ಯಾವುದೇ ಯಾಚನೆಯನ್ನು ಪಾಲಕರು ಕೇಳುವ ವ್ಯವಧಾನ ಇಟ್ಟುಕೊಂಡಿರಲಿಲ್ಲ. ಯಾಕೀ ಅಸಡ್ಡೆ ಎಂದು ಯಾರಿಗೂ ಅವರು ಹೇಳಿರಲಿಲ್ಲ.
ಮನದಲ್ಲಿ ದೇವರನ್ನು ನೆನೆಯುತ್ತ ಮೂರು ಸುತ್ತು ಬಂದು ತೀರ್ಥ-ಪ್ರಸಾದ ಪಡೆದಳು. ನಮಸ್ಕರಿಸಲು ಬಗ್ಗಿದವಳಿಗೆ ಸೊಂಟ ಚಳಕ್ಕೆಂದಾಗ ಯಾಕೋ ಹೆದರಿಕೆ ಅನಿಸಿ ಮೈ ಬೆವರತೊಡಗಿತು. ಹಿಂದೆಯೇ ತೊಡೆಯಲ್ಲಿ ಹಸಿಹಸಿಯಾದ ಅನುಭವ.
ಸುತ್ತ ಹರಡಿದ ಗಂಧ, ತೀರ್ಥ ಪ್ರಸಾದದ ಪರಿಮಳ ಆಹ್ಲಾದಕರವಾಗಿತ್ತು. ಏಕಾಏಕಿ ತಂಗಾಳಿ ಬೀಸಿ ಬಂದಾಗ ಗುಲಾಬಿಗೆ ಮಾತ್ರ ಜೊತೆಯಲ್ಲಿ ಹಸಿರಕ್ತದ ಒಗರು ಮೂಗಿನ ಮೂಲಕ ನೆತ್ತಿ ಸುಳಿಗೆ ಮುಟ್ಟಿಸುವುದು. ಅವಳಿಗೆ ಹೀಗಾದುದು ಇದೇ ಮೊದಲಲ್ಲ. ಆದರೂ ದಿನ ತುಂಬು ಮೊದಲೇ ಪ್ರಕೃತಿ ಸಹಜ ಕ್ರಿಯೆಯು ಹಾಜರಾತಿ ಹಾಕಿತ್ತು. ತನ್ನ ಕುಲದೇವರ ಸನ್ನಿಧಿಯಲ್ಲಿ ಆದ ಈ ಅವಗಡಕ್ಕೆ ಮನ ತಕ್ಷಣ ಕಸಿವಿಸಿಗೊಂಡಿತು.
ಒಂದು ಕ್ಷಣದ ನಾಚಿಕೆ ನಡುವೆ ಒಂದು ಹುಂಡು ರಕ್ತ ಪ್ರಾಂಗಣದಲ್ಲಿ ಹಾಸಿದ ಹಾಸುಗಲ್ಲಿನ ಮೇಲೆ ಬಿದ್ದಿದ್ದು ಕಾಣುವುದು.
ಒಮ್ಮೆಲೆ ಗುಲಾಬಿಯ ಎದೆ ಧಸಕ್ಕೆಂದಿತು. ಭಯದಿಂದ ಸುತ್ತಲೂ ಕಣ್ಣಾಡಿಸಿದಳು. ಎಲ್ಲರೂ ಭಕ್ತಿಪರವಶರಾಗಿ ಕಣ್ಣು ಮುಚ್ಚಿದ್ದರು. ಯಾರೂ ತನ್ನೆಡೆಗೆ ನೋಡುತ್ತಿಲ್ಲ ಎಂಬ ಖಾತ್ರಿಗೆ ಸಮಾಧಾನದ ನಿಟ್ಟುಸಿರು ಆಕೆಗೆ ಗೊತ್ತಾಗದಂತೆ ಹೊರಬಂದಿತ್ತು. ಕಾಲಿನಿಂದ ಮೆತ್ತಗೆ ಆ ಹುಂಡನ್ನು ತಿಕ್ಕಿದಳು. ಕಾಣದಾಯಿತು.
ಹೆದರಿಕೆಯಿಂದ ಮೈ ಬಿಸಿ ಏರತೊಡಗಿತು, ಎದೆ ಡವಡವ ಹೊಡೆದುಕೊಂಡಿತು. ಉಸಿರಾಟದ ವೇಗ ತಗ್ಗಿ ಕ್ಷಮತೆ ತನ್ನಷ್ಟಕ್ಕೆ ಕುಸಿದಿತ್ತು. ಹಿಂದಿನಿಂದ ತೊಡೆಗಳೆರಡು ಸಣ್ಣಗೆ ನಡುಗತೊಡಗಿದ್ದು, ಎವೆ ಇಕ್ಕುವುದರಲ್ಲಿ ಕಂಪನ ಇಡೀ ದೇಹ ಪಸರಿಸಿತ್ತು.
ಹೊಟ್ಟೆಯೊಳಗೆ ವಿಚಿತ್ರ ಸಂಕಟವಾಗತೊಡಗಿತು. ಹೇಳಲಾಗದ ಆತಂಕ. ಹೊರಹೋಗಬೇಕೆಂದರೂ ಅಮ್ಮ ಮತ್ತೆ ಕರೆದಾಳು, ತಾನು ಮಾಡಿಕೊಂಡ ಅನಾಹುತ ಗೊತ್ತಾಗಿ ಬಯ್ದಾಳು, ಗುಲ್ಲೆದ್ದು ಪಜೀತಿಗಿಟ್ಟುಕೊಳ್ಳುವುದನ್ನು ಬಯಸದೆ, ಗುಟ್ಟು ಮಾಡಿದಳು. ಹಾಗೆಯೇ ಗರ್ಭಗುಡಿಯ ಒಳಗೆ ದೇವರ ದೈನ್ಯತೆಯ ದೃಷ್ಟಿ ಹರಿಸಿದಳು. ಹಠಾತ್ತನೆ ಅಲ್ಲೆಲ್ಲಾ ರಕ್ತದ ಓಕುಳಿ ಚೆಲ್ಲಿದಂತೆ ಎಲ್ಲಾ ಕೆಂಪು ಕೆಂಪು, ಅರ್ಚಕರೂ ಆರಕ್ತ ತನಗೆ ಭ್ರಮೆ ಆವರಿಸಿದೆಯೇ ಅನಿಸಿ ಸುತ್ತಲೂ ನಿಂತವರನ್ನೊಮ್ಮೆ ಅವಲೋಕಿಸಿದರೆ ಎಲ್ಲೆಲ್ಲೂ ಕೆಂಪುಮಯ. ಅಯ್ಯೋ! ತನಗೇಕೆ ಹೀಗಾಗುತ್ತಿದೆ? ಉಸಿರುಗಟ್ಟಿ, ತಲೆ ಗಿರ್ ಎಂದಂತಾಗಿ ಹಣೆಗೆ ಕೈ ಕೊಟ್ಟು, ಅಲ್ಲೇ ಕುಕ್ಕರುಗಾಲಲ್ಲಿ ಕುಳಿತಳು.
‘ಗುಲಾಬಿ ಬಾ ಹೊತ್ತಾಗುತ್ತೆ’ ಎಂದು ಕರೆಯುವುದನ್ನೇ ಕಾಯುತ್ತಿದ್ದಂತೆ ಅಮ್ಮನ ಹಿಂದೆ ಓಡೋಡಿ ಬರುವ ಮೊದಲೊಮ್ಮೆ ತಾನು ಕುಳಿತೆಡ ಏನಾದರೂ ಗುರುತು ಇದೆಯೇ ಎಂದು ಸಿಂಹಾವಲೋಕನ ಮಾಡಿದಳು. ಏನೂ ಇಲ್ಲದ ಸಂತೈಕೆಯಲ್ಲಿ ಕಾಲು ಹಾಕಿದಳು.
ಗುಡಿಯಿಂದ ಹೊರಗೆ ಹೆಜ್ಜೆ ಇಡುವಾಗ ಬಾನಂಗಳದಲ್ಲಿ ಚುಕ್ಕೆಗಳು ಮಿನುಗುತ್ತಿದ್ದವು. ಆಷಾಢದ ಕತ್ತಲು ಮೌನಕ್ಕೆ ಹೆಪ್ಪಿಟ್ಟಿತ್ತು. ಮನೆ ಮುಟ್ಟುವುದರೊಳಗೆ ರಪರಪನೆ ಬಿದ್ದ ಮಳೆಗೆ ಒಂದಿಷ್ಟು ಕಣ್ಣು ಹಿಗ್ಗಿ ಖುಷಿ ಮೂಡಿತು. ಮರುಕ್ಷಣದಲ್ಲಿ ಮಾಯವಾಗುತ್ತಾ ಆತಂಕ ಹೊಮ್ಮಿತು.
ಮನೆಗೆ ಬಂದವಳು ಬಚ್ಚಲಿಗೆ ಹೋಗಿ ಬಂದು ಹೊರಗೆ ಕುಳಿತುಕೊಂಡಳು. ಮೂರು ದಿನಗಳ ಈ ಅವಸ್ಥೆಯನ್ನು ಸಹಜವಾಗಿ ಒಪ್ಪಿಕೊಂಡವಳಿಗೆ ಈವರೆಗೆ ಯಾತನೆ ಅನಿಸಿರಲೇ ಇಲ್ಲ. ಆದರೆ ಇಂದಿನ ಪರಿಸ್ಥಿತಿಯೇ ಬೇರೆಯಾಗಿ, ಕುಂತಲ್ಲಿ ನಿಂತಲ್ಲಿ ಗಾಬರಿ ಗಾಬರಿ ಆಯಿತು. ಗಂಟಲೊಣಗಿ ನಾಲಿಗೆ ಹುಡಿ ಹಾರುತ್ತಿತ್ತು. ಅಮ್ಮನಿಂದ ನೀರು ತರಿಸಿ ಕುಡಿದರೂ ಗುಲಾಬಿಗೆ ಏನೋ ಕಳೆದುಕೊಂಡಂತಾಗಿತ್ತು. ‘ಅಮ್ಮಾ, ಯಾಕೋ ಒಂಥರಾ ಸಂಕಟ ಆಗುತ್ತೆ’ ಎಂದದ್ದು ತಾಯಿಗೆ ಕೇಳಿತೋ ಇಲ್ಲವೊ, ಅವಳಾಗಲೇ ಪಡಸಾಲೆ ದಾಟಿಯಾಗಿತ್ತು.
ರಾತ್ರಿಯ ಊಟಕ್ಕೆ ಜಗುಲಿಯಲ್ಲಿ ಕುಳಿತರೆ ವಾಕರಿಕೆ ಬಂದಂತಾಯ್ತು. ಎದ್ದು ಹೊರಗೆ ಓಡಿದಳು. ವಾಂತಿ ಬರಲಿಲ್ಲ. ಕರುಳು ಕಿತ್ತು ಬಂದಂತೆ ಬಿಕ್ಕಳಿಕೆಗೆ ಊಟ ರುಚಿಸಲಿಲ್ಲ. ಬಟ್ಟಲಿಗೆ ಬಡಿಸಿದ್ದನ್ನು ಕತ್ತಲಲ್ಲಿ ಊಳಿಡುತ್ತಿದ್ದ ನಾಯಿಗೆ ಹಾಕಿ ಬಾಯಿ ಮುಕ್ಕಳಿಸಿ ಬಂದಳು.
ಮರುದಿನ ಆ ಬಾಲೆಯ ಮುಖದಲ್ಲಿ ಮಿನುಗುವ ಕಾಂತಿ ಮಾಯವಾಗಿತ್ತು. ಅವ್ಯಕ್ತತೆ ಮಡುಗಟ್ಟಿದಂತಿದ್ದ ಕಣ್ಣುಗಳು ಗೊಂದಲ ಗಲಿಬಿಲಿ ಅನುಭವಿಸುತ್ತಿರುವುದನ್ನು ಖಚಿತಗೊಳಿಸುತ್ತಿದ್ದವು. ಮುಖದ ತುಂಬಾ ಭಯ, ಹೇಸಿಗೆ ಮತ್ತೆ ಭಯ ಒಂದಾದ ಮೇಲೊಮ್ಮೆ ಹೊಮ್ಮುತ್ತಿದ್ದುದನ್ನು ಯಾರೂ ಕಾಣುವ ಕಾರಣವಿರಲಿಲ್ಲ. ಗೊತ್ತಿದ್ದೂ ಮಾಡಿದರೆ ತಪ್ಪು. ಆದರಿಲ್ಲಿದು ಪ್ರಕೃತಿ ಸಹಜ ಕ್ರಿಯ. ‘ಆದು ನಿನ್ನ ತಪ್ಪಲ್ಲ’ ಎಂದು ಹೇಳಲು ಗುಲಾಬಿ ತನ್ನ ಭ್ರಾಮಕ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲೇ ಇಲ್ಲ. ಸಮಸ್ಯೆಯಾದೀತು ಅಂದುಕೊಂಡು ರಹಸ್ಯ ಕಾಪಾಡಿದ್ದು, ‘ಕಟ್ಟಿಟ್ಟ ಬುತ್ತಿ’ಯಾಯಿತು. ತಾನಾಗಿ ಎಳೆದುಕೊಂಡ ಧೂಳಿಗೆ, ಖಿನ್ನತೆಯ ಹೊರತಾಗಿ ಬೇರೆ ಭಾವ ಮೂಡುವ ಸಾಧ್ಯತೆ ಇರಲಿಲ್ಲ.
ತಲೆಗೆ ನೀರೆರೆದುಕೊಂಡ ನಂತರವೂ ತನ್ನ ಮೈಯಿಂದ ಹೊರಬಿದ್ದ ಆ ತೊಟ್ಟು ರಕ್ತ ಕುಂತರೆ, ನಿಂತರೆ, ಮಲಗಿದರೆ ಸ್ಮೃತಿಪಟಲದಲ್ಲಿ ಹಾದು ಆಕೆಯನ್ನು ಹೈರಾಣಗೊಳಿಸತೊಡಗಿತು. ಆ ಕ್ಷಣದಿಂದ ಮನಸ್ಸು ವಿಲವಿಲನೆ ಒದ್ದಾಡುತ್ತ ಎಂದೆಂದಿಗೂ ನಿರಾಳವಾಗಲೇ ಇಲ್ಲ. ಅಬ್ಬಲಿತ ಏಕಾಂಗಿತನವು ಬೆಳೆಯದ ಆತ್ಮವಿಶ್ವಾಸದ ನಡುವೆ ತನ್ನನ್ನು ತಾನೇ ಜರಿದುಕೊಳ್ಳುವಲ್ಲಿ ತನ್ನ ಮೇಲಿನ ನಂಬಿಕೆ ಕುಸಿಯಲು ಕಾರಣವಾಯಿತು. ಅಲ್ಲಿಂದ ಋಣಾತ್ಮಕ ಭಾವನೆಗಳು ಆಕೆಯ ತಳವನ್ನು ಅಲ್ಲಾಡಿಸುತ್ತಾ, ನಗು ತುಟಿಗಳಲ್ಲಿ ಮತ್ತೆಂದೂ ಅರಳದಂತೆ ನೋಡಿಕೊಂಡವು. ಮಂಕು ಕವಿದ ಹಾಗೆ ಮೂಲೆ ಹಿಡಿದು ಕೂತುಕೊಳ್ಳಲು ಶುರುಮಾಡಿದಳು.
ತನ್ನಿಂದ ದೇವಳದ ಮೈಲಿಗೆಯಾಯಿತು. ತಾನು ಅಶುದ್ಧಳು. ಅಪವಿತ್ರ ಮಾಡಿರುವುದರಿಂದ ತನಗೆ ಕ್ಷಮೆ ಇಲ್ಲ. ದೇವರು ಶಾಪ ಕೊಡುತ್ತಾರೆ ಎಂದೆಲ್ಲಾ ತಪ್ಪು ಲೆಕ್ಕಾಚಾರ ಹಾಕಿಕೊಂಡಿದ್ದಳು.
ಗುಲಾಬಿಯ ಈ ಎಣಿಕೆಯು ಧರ್ಮದ ಹೆಸರಿನಲ್ಲಿ ಕಂದಾಚಾರಿಗಳು ಒಪ್ಪಿಕೊಂಡ ತಪ್ಪು ನಿರ್ಧಾರಗಳನ್ನು ಮೂಲವಾಗಿಟ್ಟುಕೊಂಡಿತ್ತು. ಅದರ ಸತ್ಯಾಸತ್ಯತೆಗಳನ್ನು ಅಳೆಯುವ ವಯಸ್ಸು ಗುಲಾಬಿಯದಾಗಿರಲಿಲ್ಲ. ಯಾವತ್ತೋ ಒಮ್ಮೆ ಹಿರೇರು ‘ದೇವಸ್ಥಾನಗಳಲ್ಲಿ ರಕ್ತ ಬೀಳಿಸಬಾರದು’ ಅಂದದ್ದೇ ಸುಪ್ತ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿ ನಿಕ್ಷಿಪ್ತಗೊಂಡಿತ್ತು. ಸಾಲದ್ದಕ್ಕೆ ದೇವಳದ ಗೋಡೆ ಬರಹದಲ್ಲಿ ಮಿಳಿತಗೊಂಡ ಎಚ್ಚರಿಕೆ, ಹೊರಲಾರದ ಹೊರೆಯಾಗಿ ಅಶಕ್ತ ಮನಸ್ಸನ್ನು ತೀವ್ರವಾಗಿ ಆಕ್ರಮಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಪಕ್ವ ಮನಸ್ಸಿಗೆ ಆಘಾತವಾಯಿತು. ಅದನ್ನು ಎದುರಿಸುವಷ್ಟು ಒತ್ತಡವಿಲ್ಲದೇ ಹಿಂಡುವ ಮನ ಚಿಂದಿಯಾಯಿತು.
ಚಿಂತನೆಗೆ ತುಡಿಯಲಶಕ್ತ ಮನ ಅಂತರ್‍ಮುಖಿಯಾದದ್ದು ಇನ್ನಷ್ಟು ಕುಗ್ಗಿಸಲು ನೆರವಾಯಿತು. ಮೂಢನಂಬಿಕೆಯು ನೀರುಗೊಬ್ಬರ ಹಾಕಿ ಪೋಷಿಸಿದಾಗ ನೋವು ಹೆಪ್ಪುಗಟ್ಟಿತು. ಆಂತರ್ಯದ ತುಮುಲ ಇತ್ಯಾತ್ಮಕವಾಗದೇ, ಸಮಸ್ಯೆ ಒಳಗೇ ಉಲ್ಬಣಿಸುತ್ತ ಹೋಯಿತು.
‘ಅಪ್ಪಾ, ನಾನು ಪಾಪ ಮಾಡಿದ್ದೇನೆ. ನಾನು ಸಾಯಬೇಕು’ ಎಂದು ಸ್ವಗತದಲ್ಲಿ ಹಲುಬುತ್ತಿದ್ದಳು. ನಿಟ್ಟುಸಿರು ಬಿಡುತ್ತಾ ‘ದೇವರೇ ಕ್ಷಮಿಸಿ ಬಿಡು’ ಎಂದು ಬಾರಿಬಾರಿಗೂ ಹಪಾಹಪಿಸಿ ಕೈ ಮುಗಿಯುತ್ತಿದ್ದಳು.
ಒಂದೊಮ್ಮೆ ಗುಲಾಬಿ ತನ್ನನ್ನು ತಾನು ದೇವಸ್ಥಾನದಲ್ಲಿ ಕಳೆದುಕೊಂಡೆ ಅಂದುಕೊಂಡವಳಿಗೆ ಮತ್ತೆಂದೂ ಕನಸು ಕಟ್ಟಲಿಲ್ಲ. ನಿಜದ ಬದಕಿಗೆ ಹಿಂದಿರುಗಲಾಗದೆ, ಇಂದಿನ ಬಾಳು ಬಾಳಲಾಗದೆ ಎಡಬಿಡಂಗಿಯಾದಳು.
ಕೋಳಿ ಕೊರಕಿದಂತೆ ಅನ್ನ ನೀರನ್ನು ಹೆಕ್ಕತೊಡಗಿದಳು. ಪದೇ ಪದೇ ಕೈಕಾಲು ತೊಳೆಯುವುದು; ಒಮ್ಮೆ ಹಾಕಿಕೊಂಡ ಬಟ್ಟೆ ಗಂಟೆಯೊಳಗೆ ಕಳಚಿ ಮತ್ತೆ ತೊಳೆದು ಒಣಗಿಸುವುದು; ಒಣಗಿದ ಬಟ್ಟೆಯನ್ನು ಪುನಃ ತೊಳೆದು ಒಣಗಿಸುವುದು; ಬಳಸಿದ ನೆಲವನ್ನು ಹಗಲೆಲ್ಲಾ ಒರೆಸುವುದೇ ಒಂದು ಗೀಳು, ಉಂಡ ತಟ್ಟೆ ಲೋಟ ಮೇಲಿಂದ ಮೇಲೆ ತೊಳೆದಿಡುವುದು. ಹೀಗೆ ಒಂದೇ ಸವನೆ ಮಾಡಿದ್ದನ್ನೇ ಮಾಡಲು ಗುಲಾಬಿಗೆ ಯಾವ ಸಂಕೋಚ, ಬೇಸರ ಇರಲಿಲ್ಲ. ಉಳಿದಂತೆ ಅವಳ ಚಟುವಟಿಕೆಗಳು ಮಾಮೂಲಾಗಿದ್ದವು.
ಮತ್ತೆ ಮತ್ತೆ ಹೀಗಾಯಿತಲ್ಲ ಎಂಬ ಕೊರಗು ಕೀಳರಿಮೆ ಮೂಡಿಸಿತು. ಸತತವಾಗಿ ಕಾಡಿ ನಿತ್ಯದ ಪ್ರಕ್ರಿಯೆಯ ಕ್ರಮ ತಪ್ಪಿತು, ಆರೋಗ್ಯ ಕೆಟ್ಟಿತು. ಸೂಕ್ಷ್ಮ ಮನಸ್ಸಿನ ಗುಲಾಬಿಯನ್ನು ನಿರಂತರ ತನ್ನ ಹಿಡಿತದಲ್ಲಿಟ್ಟುಕೊಂಡು ಒದ್ದಾಡುವಂತೆ ಮಾಡಿತು. ನಿದ್ರೆ ಮಾಯವಾಯಿತು. ಮಾನಸಿಕ ಹಿಂಸೆ ಕ್ರಮೇಣ ದೈಹಿಕವಾಗಿಯೂ ಪೀಡಿಸಲು ತೊಡಗಿತು. ಯಾವುದರಲ್ಲೂ ಆಸಕ್ತಿ ಇರದೇ ರಕ್ತಹೀನತೆಯಿಂದ ಮುಖ ಬಾಡಿ ಬಸವಳಿಯಿತು. ತಲೆನೋವು ಹಿಂಡಿ, ಕಣ್ಣುರಿಯಿಂದ ಕಣ್ಣುಗಳು ಕೆಂಪು ಕೆಂಪಾದವು. ಋತುಚಕ್ರ ಏರುಪೇರಾಯಿತು. ದೇಹ ಕ್ಷೀಣಿಸಿ ಮುಸುಡಿ ನೋಡಿದವರು ಹೌಹಾರುವಂತೆ ಬದಲಾದಳು. ನಂಬಿದ ದೇವರು ನೆಮ್ಮದಿ ಕೊಡದೇ ಒಮ್ಮೆ ಮುದುಡಿದ ಗುಲಾಬಿ ಮತ್ತೆ ಅರಳಲೇ ಇಲ್ಲ.
ದಿನಾಲೂ ದೇವಸ್ಥಾನದಿಂದ ಕೇಳುವ ಸುಪ್ರಭಾತದೊಂದಿಗೆ ಧುತ್ತೆಂದು ಬಿಚ್ಚಿಕೊಳ್ಳುವ ಹುಂಡಿನ ನೆನಪು ಮತ್ತೆ ಮತ್ತೆ ಹಲುಬುವಂತೆ ಮಾಡುತ್ತಿತ್ತು. ಇಂತಹ ವಿವೇಚನೆ ಇಲ್ಲದ ನಂಬಿಕೆ ಬೆಳೆಸಿಕೊಂಡು ತಲೆ ವಾಸಿಯಾಗದ ಮನೋದೈಹಿಕ ಕಾಯಿಲೆಯ ಗೂಡಾಯಿತು. ಭ್ರಮಾಧೀನ ಅವಸ್ಥೆ ಮುಟ್ಟಿತು.
ಮನ ಮಿಡಿಯುವ ಆಕೆಯ ಬೆನ್ನು ಹಿಡಿದ ಜೀವನ ನೋಡಿದರೆ ಎಂಥವರಿಗೂ ಇಡೀ ಸಮಾಜದ ಮೇಲೆ ಹೇಸಿಗೆ ಹುಟ್ಟುತ್ತದೆ. ಇಂತಹ ಜೀವಂತ ನಂಬಿಕೆಗಳು ಸೃಷ್ಟಿಸುವ ಯಾತನೆಗಳು ಶಬ್ದಾತೀತವಾಗಿ, ಮನಸ್ಸು ಘಾಸಿಗೊಳ್ಳುತ್ತದೆ.
ಅಪರಾಧೀ ಗೀಳು ಶಮನವಾದೀತು ಎನ್ನಲು ಅವಳಾಗಿ ಅದರ ಆಳಕ್ಕೆ ಇಳಿಯಬೇಕಾದ ಸಮಯದಲ್ಲೇ ಇಳಿದಿರಲಿಲ್ಲ. ಈಗಿನ ತ್ರಿಶಂಕು ಸ್ಥಿತಿಯಲ್ಲಿ ಹೇಗೆ ಇಳಿದಾಳು!
ಕಾಲಿನಿಂದ ತಿಕ್ಕಿದಾಗಲೇ ಅವಳೊಳಗೆ ನುಗ್ಗಿದ ಆ ಹುಂಡು ರಕ್ತ ಗುಲಾಬಿಯ ತಲೆಯಲ್ಲಿ ದಾಂಧಲೆ ಎಬ್ಬಿಸಿದ್ದು ನಿಜ. ಈ ಮಾತಿಗೆ ಮಾತಿಲ್ಲದ ಗುಲಾಬಿಯ ಬದುಕು ಮಾತ್ರ ಸಾಕ್ಷಿಯಾಗಲಿಲ್ಲ. ಸಾಂಕ್ರಾಮಿಕಗೊಂಡು ಇಡೀ ಕುಟುಂಬವನ್ನು ಮೌನದಲ್ಲಿ ಹಿಂಸಿಸಿ ಮೆರೆಯುತ್ತಿರುವುದು ಅಷ್ಟೇ ಸತ್ಯ.
ಪೋಷಕರು ಪ್ರಾರಂಭದಲ್ಲೇ ಮೈಯೆಲ್ಲಾ ಕಣ್ಣಾಗಿ ಕಂಡು, ಕಿವಿಯಾಗಿ ಕೇಳಿದ್ದರೆ ಇಷ್ಟೆಲ್ಲಾ ಪಡಿಪಾಟಲು ಬೀಳಬೇಕಾಗಿರಲಿಲ್ಲ. ಅದು ಹೇಳಿದಷ್ಟು ಸುಲಭವೂ ಆಗಿರಲಿಲ್ಲ. ಗುಲಾಬಿಯ ಸುಪ್ತ ಪ್ರಜ್ಞೆಯ ಕ್ರಿಯೆಯ ಪರಿ ಅವಳ ಜಾಗ್ರತ ಪ್ರಶ್ನೆಗೂ ಅರಿವಾಗಿರಲಿಲ್ಲ. ಗುಟ್ಟು ವಿಪರೀತಕ್ಕಿಟ್ಟುಕೊಂಡಾಗಲೇ ಮುಟ್ಟಿ ನೋಡಿಕೊಳ್ಳುವಂತಾದುದು.
ಇತ್ತೀಚಿನ ಮೌನದಲ್ಲಿ ತಾನಾಯಿತು, ತನ್ನ ಮಾಡಿದ್ದೇ ಮಾಡುವ ಕೆಲಸವಾಯಿತು. ಯಾವುದೇ ಉಪಟಳ ಆಕೆಯಿಂದ ಅನ್ಯರಿಗೆ ಇರಲಿಲ್ಲ. ಹಾಗಾಗಿ ಸಂಬಂಧಿಕರು ಆಕೆಯನ್ನು ದೂರೀಕರಿಸದೇ ಉಪೇಕ್ಷಿಸಿದ್ದರು. ಈ ತೀರಾ ಕ್ಷುಲ್ಲಕ ಕಾರಣದ ಮೂಲವನ್ನು ಕೆದಕುವುದಕ್ಕೆ ಅವರಾರೂ ಹೋಗಲಿಲ್ಲ. ಸಮಾಜದೊಂದಿಗೆ ಬೆರೆತು ಸುಖದುಃಖ ಹಂಚಿಕೊಳ್ಳದ ಆ ಹೆದರಿದವಳ ಮೇಲೆ ಯಾರೂ ಬಟ್ಟೆಹಾವು ಎಸೆಯದಿರುವುದು ಮೊದ್ದು ಬಾಲೆಯ ಪುಣ್ಯ.
ಈ ನಡುವೆ ತಾಯಿಗೆ ಅರ್‍ಥವಾಗದ ಮಗಳ ಸ್ಥಿತಿ ನೆನೆದು ಜೀವನವೇ ಜಿಗುಪ್ಸೆ ಅನಿಸತೊಡಗಿತ್ತು. ಮಗಳ ಸುಖ ಬಯಸಿ ಜವಾಬ್ದಾರಿ ತಂದೆ ವೈದ್ಯರಿಗೆ ತೋರಿಸಿ ತಂದ ಔಷಧಿ ಮುಟ್ಟಿರಲಿಲ್ಲ. ‘ನನಗೇನೂ ಆಗಿಲ್ಲ. ಯಾಕೆ ತೊಗೋಬೇಕು’ ಎಂದು ಕೇಳುತ್ತಿದ್ದಳು. ಯಂತ್ರ ಮಂತ್ರ ಆಯಿತು. ನಾಗನ ಉಪದ್ರವ ಎಂದು ಅದಕ್ಕೂ ಶಾಂತಿ ಮಾಡಿಸಿದ್ದರು. ಯಾವುದಕ್ಕೂ ಜಗ್ಗದಾದಾಗ ಅಪ್ಪನ ಅಸಡ್ಡೆ ಅನಿವಾರ್‍ಯವಾಯಿತು.
ಒಂದೆಡೆ ಮನಸ್ಸು ಕೆಟ್ಟಿದ್ದು ಗುಲಾಬಿಯದಾದರೂ ಇನ್ನೊಂದೆಡೆ ಬದುಕು ಬತ್ತಿದ್ದು ಅವಳ ಹೆತ್ತಬ್ಬೆಯದು. ದಿನಕಳೆದಂತೆಲ್ಲ ಪರಿಹಾರ ಕಾಣದ ಹೆತ್ತವಳ ಆತಂಕ ಹೆಚ್ಚುತ್ತಾ ಹೋಗಿತ್ತು. ಮಗಳ ಅವ್ಯಕ್ತ ಧಗೆ ಶಮನಗೊಳಿಸುವಲ್ಲಿ ಇನ್ನು ತ್ರಾಸದಾಯಕ ಎಂದು ಕೈ ಚೆಲ್ಲುವಂತೆಯೂ ಇರಲಿಲ್ಲ. ತೀವ್ರ ಕಾಡಿಸಿ ಹೀಗೇಕಾಯ್ತು ಎನ್ನುವ ಅಳಲು, ಆಗಾಗ ಸುರಿಯುವ ಕಣ್ಣೀರನ್ನು ಸೆರಗಿನಂಚಿನಿಂದ ಒರೆಸಿಕೊಳ್ಳುವುದನ್ನು ಬಿಟ್ಟರೆ, ಅಸಹಾಯಕವಾಗಿ ಪ್ರೀತಿಯಿಂದ ತಲೆ ನೇವರಿಸುತ್ತಿದ್ದಳಷ್ಟೇ. ತಮ್ಮ ನಂತರ ಮಗಳ ಗತಿ ಏನು ಎಂಬ ಚಿಂತೆ ನಿರಂತರ ಪೀಡಿಸಿ ಚಿತ್ತ ಸ್ವಾಸ್ಥ್ಯ ಅಲ್ಲಾಡಿ ಹೋಗಿತ್ತು.
* * *
ಇಷ್ಟು ದಿನ ಮಾನಸಿಕ ತೊಳಲಾಟದಲ್ಲಿ ತಟ್ಟೆ ಲೋಟ – ವಸ್ತ್ರಗಳೊಂದೊಗೆ ಮೌನ ಸಂಭಾಷಣೆ ನಡೆಸಿದ ಗುಲಾಬಿಯು ಅನುಭವಿಸಿರುವ ಕಷ್ಟ ಸಾಕು. ವಿಮೋಚನೆ ನೀಡೋಣ ಅನಿಸಿರಬೇಕು, ಆ ಮಹಾಲಿಂಗೇಶ್ವರನಿಗೆ ಹೇಳಿ ಕಳಿಸಿದ ಹಾಗೆ ವೈದ್ಯೆ ನಳಿನಿ ಅತ್ತಿಗೆಯ ರೂಪದಲ್ಲಿ ಮನೆ ತುಂಬಿಕೊಂಡರು.
ಐಬಿನ ಮೂಲವನ್ನು ಕೆದಕುತ್ತಾ ಹೋದ ವೈದ್ಯೆ (ಅಳಿಯ ಸಂತಾನ ವ್ಯವಸ್ಥೆ ಕುಟುಂಬದಲ್ಲಿ ಗುಲಾಬಿಯ ದೊಡ್ಡಮ್ಮನ ಸೊಸೆ), ಗುಲಾಬಿಯ ಜಾಗೃತ ಮನಸ್ಸಿನ ಕೊಂಡಿ ಕಳಚಿಕೊಂಡದ್ದು ಎಲ್ಲಿ ಎಂದು ಹುಡುಕಲು ಮೊದಲು ಮಾಡಿದರು. ಸಿಕ್ಕನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದರು.
ಸೋತವಳಿಗೆ ಗೆಲ್ಲುವ ಮನೋಸ್ಥೈರ್‍ಯ ತುಂಬುವುದು ಮುಖ್ಯ. ಮೊದಮೊದಲು ಗುಲಾಬಿ ಸ್ಪಂದಿಸಿರಲಿಲ್ಲ. ಶಿಥಿಲವಾದ ಮನಸ್ಸನ್ನು ಸರಿಪಡಿಸಲು ಆಕೆಗೆ ದೃಢವಾದ ಮನೋಬೆಂಬಲ ಕೊಟ್ಟರು. ಗುಲಾಮಳನ್ನಾಗಿ ಮಾಡಿಕೊಂಡ ದುಗುಡ ಹೊಡೆದೋಡಿಸಬೇಕಾಗಿತ್ತು. ಹಾಗಾಗಿ ಆ ಭಯ ಮಿಶ್ರಿತ ಸುಪ್ತ ಪ್ರಜ್ಞೆಗೆ ತಿಳಿಹೇಳುವ ಸನ್ನೆಯಾಗಿ ನಿಂತರು. ಆತ್ಮೀಯ ಗೆಳತಿಯಂತೆ ಒಡನಾಡಿದರು. ಮಸುಕಾಗಿ ಗ್ರಹಿಸಲು ಶಕ್ತರಾದರು. ಕೊನೆಗೆ ಮನದಾಳದ ವಶೀಕರಣದಲ್ಲಿ ಎಲ್ಲವೂ ಸ್ಪಷ್ಟವಾಯಿತು.
ಇನ್ನೂ ಸತ್ತಂತಿಹ ಗುಲಾಬಿಯನ್ನು ಅರಳಿಸುವ ಛಲ ಈಗ ಡಾ|| ನಳಿನಿ ಅವರದಾಯಿತು.
ಆಕೆಯಿಂದ ತಪ್ಪಾಗಿಲ್ಲ. ಅದೊಂದು ಪ್ರಕೃತಿ ಸಹಜ ಕ್ರಿಯೆ ಎಲ್ಲರಿಗೂ ಆಗುವಂತಹದು. ಆಕಸ್ಮಿಕವಾಗಿ ಆದುದಕ್ಕೆ ನೀನು ಹೊಣೆಯಲ್ಲ ಎನ್ನುವ ಆತ್ಮವಿಶ್ವಾಸ ಮೂಡಿಸಲು ಹೆಣಗಿದರು. ಕಡಿದು ಹೋಗಿದ್ದ ಮನಸ್ಸಿನ ಎಳೆಗಳು ನಿಧಾನವಾಗಿ ಮತ್ತೆ ಜೀವತುಂಬಿಕೊಳ್ಳಲು ತೊಡಗಿದಾಗ ಸಮಾಧಾನದ ನಿಟ್ಟುಸಿರು ಡಾ| ನಳಿನಿಯಿಂದ ಬಂತು.
ಬೆಂಬಲ ನೀಡಿ ಆಪ್ತರಾದ ಡಾ|| ನಳಿನಿ ಈ ಮನೆಗೆ ಬಂದ ದಿನದಿಂದ ಎಂದೂ ತನ್ನಂತೆ ಹೊರಗೆ ಕೂತದ್ದು ಕಾಣದೇ ‘ಅತ್ತಿಗೆ ಮದುವೆಗೆ ಮೊದಲೇ ಬಸಿರಿಯಾಗಿದ್ದರೇ’ ಎನ್ನುವ ಮುಗ್ಧ ಸಂಶಯ ಗುಲಾಬಿಯ ಒಳಹೊಕ್ಕು ಕೊರೆದಾಗ, ಬಾಯಿಬಿಟ್ಟು ಅಷ್ಟೇ ಮುಗ್ಧವಾಗಿ ಕೇಳಿದ್ದಳು. ಅದಕ್ಕೂ ಡಾ|| ನಳಿನಿ ನಂಬಿಕೆಯ ಉತ್ತರವಿತ್ತರು. ಹೆಣ್ಣು ತಿಂಗಳಿಗೊಮ್ಮೆ ಹೊರಗೆ ಕೂರುವ ಕಾಲ ಬದಲಾಗಿ ಬಹಳ ದಿನವಾಯ್ತು. ಸುರಕ್ಷೆಯ ಕವಚ ತೊಟ್ಟು ಎಲ್ಲರಂತೆ, ಎಂದಿನಂತೆ ಕೆಲಸದಲ್ಲಿ ತೊಡಗಬಹುದು ಎಂದು ನಂಬಿಕೆ ಹುಟ್ಟಿಸಿ ನಿರೂಪಿಸಿದರು. ಸ್ವಚ್ಛತೆ ಕಾಪಾಡಿಕೊಳ್ಳಲು ತೋರಿಸಿಕೊಟ್ಟರು.
ಅಷ್ಟುದ್ದಕ್ಕೆ ಬೆಳೆದಿದ್ದ ಗುಲಾಬಿಯ ತಲೆಗೂದಲಲ್ಲದೇ ಆಕೆಯ ತಲೆಯೊಳಗೆ ಮೆದುಳೂ ಇದೆ ಎಂಬುದನ್ನು ಮನದಟ್ಟು ಮಾಡುವಲ್ಲಿ ಶ್ರಮಿಸಿದ್ದರು ನಳಿನಿ. ಅತ್ತಿಗೆ ಹೊರಗಿನ ಪ್ರಪಂಚ ಎಷ್ಟು ವಿಶಾಲವಾಗಿದೆ ಎಂದು ತೋರಿಸಿದಾಗ ಒಂದೊಂದರಲ್ಲೂ ಮಗುವಿನಂತೆ ಆಸಕ್ತಿ ಮೂಡಿಸಿಕೊಳ್ಳಲು ಶಕ್ತಳಾದಳು.
ಒಂದು ರಾತ್ರಿ ಗುಲಾಬಿ ಮಲಗಿದ್ದಳು. ಕತ್ತಲಲ್ಲಿ ಮೂಗೇರಿಸಿಕೊಳ್ಳುವ ಮುಸಿ ಮುಸಿ ಶಬ್ದ ಕೇಳುತ್ತಿತ್ತು. ಎಲ್ಲೋ ಹುದುಗಿದ್ದ ಕಟ್ಟೆ ಒಡೆದು ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು. ಎಲ್ಲರ ಜೊತೆ ಎಲ್ಲರಂತೆ ವರ್ತಿಸಲು ಹಂಬಲಿಸುತ್ತಿತ್ತು ಮನ ಎಲ್ಲ ತಿಳಿಯಾಗುತ್ತಿದ್ದಂತೆ, ಉದ್ವೇಗಗೊಂಡವಳಂತೆ ಕಾಣಿಸಿದಳು. ಮೈ ಬೆವರತೊಡಗಿತ್ತು. ಸಾವಕಾಶವಾಗಿ ನಿದ್ದೆ ಆವರಿಸಿತು. ರಾತ್ರಿಯೆಲ್ಲ ನಿರಾಳ ಮಲಗಿ ಬೆಳಿಗ್ಗೆ ಏಳುವಾಗಿನ ಸೂರ್ಯ ಕೆಂಪಾಗಿ ಕಾಣಲೇ ಇಲ್ಲ. ಮುದುಡಿದ್ದ ಗುಲಾಬಿ ಅರಳಿಬಿಟ್ಟಿತ್ತು. ಹಕ್ಕಿಗಳ ಚಿಲಿಪಿಲಿಗೆ ಮನ ಸ್ಪಂದಿಸತೊಡಗಿತ್ತು.
ಕಳೆದುಕೊಂಡಿದ್ದ ಮನೋಸ್ಥೈರ್‍ಯ ದಿನೇ ದಿನೇ ಹೆಚ್ಚುತ್ತಾ ಹೋಗಿ ಪೊರೆ ಕಳಚಿದ ಹಾವಿನಂತೆ ಮಿಂಚತೊಡಗಿದಳು. ನಾನು ಚೆನ್ನಾಗಿದ್ದೇನೆ. ಪ್ರಪಂಚವಿಡೀ ಚೆನ್ನಾಗಿದೆ ಎಂದು ಆಕೆಯ ಹೃದಯ ಕೂಗಿ ಹೇಳುತ್ತಿತ್ತು. ಅತ್ತಿಗೆಯ ಸಾರಥ್ಯದಲ್ಲಿ ಸಂಪ್ರದಾಯವನ್ನು ಕಡೆಗಾಣಿಸದೇ ಆಧುನಿಕತೆಗೆ ಹೊಂದಿಕೊಂಡ ಗುಲಾಬಿಯ ಮನಸ್ಸು ಈಗ ಪ್ರೀತಿಯ ಎಲ್ಲಾ ಅನುಭವಗಳಿಗೆ ತೆರೆದುಕೊಂಡಿದೆ.
ಇದೀಗ ಸತ್ತು ಬದುಕಿದ ಹೆಣ್ಣು ಜೀವ ಇಂತಹ ಸಾವಿರಾರು ಶಬ್ದಗಳ ಬಲೆ ಹೆಣೆದುಕೊಂಡು ಕತೆಯಾದಾಳು ಎಂದು ಯಾರೂ ಊಹಿಸಿರಲಿಲ್ಲ. ಒಂದು ಹನಿ ರಕ್ತ ಗುಲಾಬಿಯ ಮನಸ್ಸಿನ ಮೇಲೆ ತನ್ನ ಸ್ವತ್ತುಗಾರಿಕೆ ಮೆರೆದದ್ದು ಸುಂದರ ಬದುಕಿನ ವಿಪರ್‍ಯಾಸವೇ ಸರಿ!
*****









