Home / ಕಥೆ / ಸಣ್ಣ ಕಥೆ / ಶ್ವೇತಾ

ಶ್ವೇತಾ

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸಂಜೆ ಐದು ಗಂಟೆಗೆ ಎಲ್ಲರೂ ಒಂದಾಗುತ್ತಾರೆ. ಅಲ್ಲಿ ಬರುವ ಎಲ್ಲಾ ಸದಸ್ಯರೂ ಅರವತ್ತು ದಾಟಿದವರೇ, ಇದ್ದದ್ದರಲ್ಲಿ ರವಿಕುಮಾರನೇ ಅತ್ಯಂತ ಕಿರಿಯ, ಅವನಿಗೂ ಇತ್ತೀಚೆಗೆ ಅರವತ್ತಾಯಿತು. ನಾಗೇಂದ್ರ, ಮುರುಗೇಶನ್, ಗೋಪಾಲರಾವ್, ಶ್ರೀನಿವಾಸರಾವ್, ವೇದವ್ಯಾಸಾಚಾರ್, ಎಲ್ಲರೂ ಇನ್ನೂ ಹಿರಿಯರು, ಎಲ್ಲರಿಗೂ ಅವರವರದೇ ಸಮಸ್ಯೆಗಳಿರುತ್ತವೆ. ಆರೋಗ್ಯದ ವಿಷಯ ಮಾಮೂಲು ವಿಷಯ. ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗೂ ಅವರವರ ಡಾಕ್ಟರೇ ಅತ್ಯುತ್ತಮ ಡಾಕ್ಟರು. ಎಲ್ಲರೂ ಆರೋಗ್ಯದ ವಿಷಯದಲ್ಲಿ ಮಹಾ ಪಂಡಿತರು, ಹೀಗೆ ಮಾಡಿ, ಹಾಗೆ ಮಾಡಿ ಎಂದು ಇತರರಿಗೆ ಉಚಿತ ಸಲಹೆ ಕೊಡುತ್ತಾರೆ. ರಾಜಕೀಯದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಇನ್ನು ತಮ್ಮ ತಮ್ಮ ಪತ್ನಿಯ ಬಗ್ಗೆ ಎಲ್ಲರಿಗೂ ಬೇಕಾದಷ್ಟು ಅಸಮಾಧಾನವಿದೆ. ಕೆಲವರು ಬಾಯಿಬಿಟ್ಟು ಹೇಳುತ್ತಾರೆ. ಮತ್ತೆ ಕೆಲವರು ಮನಸ್ಸಿನಲ್ಲಿಯೇ ಕೊರಗುತ್ತಾ ನಿಟ್ಟಿಸಿರು ಬಿಡುತ್ತಾರೆ.

ಈ ದಿನದ ವಿಶೇಷವೆಂದರೆ ಶ್ರೀನಿವಾಸರಾವ್ ಹೇಳಿದರು. “ನಮ್ಮ ಹುಡುಗ ಪ್ರದೀಪನಿಗೆ ಇಪ್ಪತ್ತೆಂಟಾಯ್ತು. ಅವನೂ ಕೂಡಾ ಇಂಜಿನಿಯರಿಂಗೂ, ಎಂ.ಬಿ.ಎ., ಎಲ್ಲಾ ಓದಿದಾನೆ. ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾನೆ. ಆದರೂ ಮದುವೆಗೆ ಒಂದು ಸರಿಹೊಂದುವ ಹುಡುಗಿ ಸಿಕ್ತಾ ಇಲ್ಲ. ಏನು ಮಾಡೋದು ಅಂತ ಗೊತ್ತಗ್ತಾ ಇಲ್ಲ.”

ನಾಗೇಂದ್ರ ರಾಯರು ಮುಂದೆ ಬಂದು ತಮ್ಮ ಸಲಹೆ ಕೊಟ್ಟರು.

‘ಅರೆ ಅದಕ್ಯಾಕೆ ಯೋಚನೆ ಮಾಡ್ತೀರಾ? ಈಗಿನ ಕಾಲದಲ್ಲಿ ಸಾಕಷ್ಟು ಮ್ಯಾಟ್ರಿಮನಿ ಸೈಟ್‌ಗಳಿವೆ. ಅದರಲ್ಲಿ ರಿಜಿಸ್ಟರ್‌ ಮಾಡಿಸಿ ಅರ್ಧಗಂಟೇಲಿ ಮದುವೆ ಪ್ರಸ್ತಾಪಗಳು ಬರಕ್ಕೆ ಶುರು ಆಗತ್ತೆ, ಹತ್ತರಲ್ಲಿ ಒಂದೋ, ನೂರರಲ್ಲಿ ಒಂದೋ ನೋಡಿ, ಮದುವೆ ನಿಶ್ಚಯ ಮಾಡಿಬಿಡಿ’ ಎಂದರು. ಮಿಕ್ಕ ಗೆಳೆಯರೂ ಹೌದು ಹೌದು ಎಂದು ದನಿಗೂಡಿಸಿದರು. ಶ್ರೀನಿವಾಸರಾಯರು ಎದ್ದುನಿಂತು ಹೇಳಿದರು.

“ಸ್ವಲ್ಪ ಇರಿ ಸ್ವಲ್ಪ ಇರಿ. ಇಂತಹ ನಾಲ್ಕಾರು ಮ್ಯಾಟ್ರಿಮನಿಗಳಲ್ಲಿ ನಾವೂ ಈಗಾಗಲೇ ರಿಜಿಸ್ಟರ್ ಮಾಡಿಸಿದೀವಿ, ಮೂರುಸಲ ವಧೂವರರ ಸಮಾವೇಶ”ಕ್ಕೂ ಕೂಡಾ ಹೋಗಿ ಬಂದಿವಿ. ಯಾವುದೂ ಸರಿ ಹೊಂದಲಿಲ್ಲ. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ವಿದೇಶಗಳಿಗೆ ಹೋಗಿ ಬಿಡ್ತಾರೆ, ಯಾವ ದೇಶದವರೆಂದರೆ ಆ ದೇಶದವರು, ಯಾವ ಜಾತಿಯವರೆಂದರೆ ಆ ಜಾತಿಯವರು, ಕೊನೆಗೆ ಮದುವೆ ಆದವರನ್ನು ಹೀಗೆ ಯಾರನ್ನುಂದರೆ ಅವರನ್ನು ಮದುವೆ ಆಗಿ ಬಿಡ್ತಾರೆ. ತಂದೆ ತಾಯಿ ಅನ್ನಕೊಂಡವು ಆ ಬಗ್ಗೆ ಒಂದು ಚಕಾರ ಎತ್ತೋದಿಲ್ಲ.” ನಾಗೇಂದ್ರರಾಯರು ಹೇಳಿದರು. “ಅಯ್ಯೋ ಇವರ ಚಕಾರವನ್ನು ಯಾರು ಕೇರ್ ಮಾಡ್ತಾರ ರಾಯರೇ, ತಂದೆ ತಾಯಿ ಬೇಡಾಂದ್ರೂ ಕೇಳದೇ ತಾವೇ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಬಿಡ್ತಾರೆ’ ಎಂದರು. ರವೀಂದ್ರರವರು ಹೇಳಿದರು, “ನೀವು ಒಂದು ಕೆಲಸ ಮಾಡೀ ಸಾರ್, ನೀವು ಬೆಂಗಳೂರು ಬಿಟ್ಟು ಸಣ್ಣ ಸಣ್ಣ ಪಟ್ಟಣಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯತ್ನ ಮಾಡಿಸಾರ್. ಖಂಡಿತ ಯಾರಾದ್ರೂ ಒಳ್ಳೆಯ ಹುಡುಗಿ ಸಿಕ್ತಾಳೆ” ಎಂದರು.

ಶ್ರೀನಿವಾಸರಾಯರು ಉತ್ತರಿಸಿದರು. ಅದೂ ಆಯ್ತು ಸಾರ್, ಚಿಂತಾಮಣೀಲಿ, ಹಾರೋಹಳ್ಳಿಲಿ, ಕನಕಪುರದಲ್ಲಿ, ಶಿರಾದಲ್ಲಿ, ಶಹಬಾದ್‌ನಲ್ಲಿ, ಶಿವಮೊಗ್ಗದಲ್ಲಿ ಎಲ್ಲಾ ಕಡೆ ಗೆಳೆಯರಿಗೆ ಹೇಳಿಟ್ಟಿದೀನಿ ಸಾರ್. ಈ ಎಲ್ಲಾ ಊರುಗಳಿಗೂ ಹೋಗಿ ಬಂದೆ. ಯಾವ ಪ್ರಯೋಜನಾನೂ ಆಗಲಿಲ್ಲ” ಎಂದು ದೊಡ್ಡ ನಿಟ್ಟುಸಿರು ಬಿಟ್ಟರು. ಕೊನೆಗೆ ಮುರುಗೇಶನ್‌ರವರು ತಮ್ಮ ತೀರ್ಪು ಪ್ರಕಟಿಸಿದರು. “ನೋಡಿ ರಾಯರೇ ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಆದರೆ ಇರೋ ಹೆಣ್ಣು ಮಕ್ಕಳೂ ಕೂಡಾ ಚೆನ್ನಾಗಿ ಓದಿ ವಿದೇಶಗಳಿಗೆ ಹೋಗಿ ಬಿಡ್ತಾರೆ. ಆಮೇಲೆ ತಮಗಿಷ್ಟ ಬಂದವನನ್ನೂ ಮದುವೆ ಆಗ್ತಾರೆ. ಅವನು ಉತ್ತರ ಭಾರತದವನಾಗಿರಬಹುದು ಅಥವಾ ವಿದೇಶೀಯನೇ ಆಗಿರಬಹುದು. ಯಾರ ಮಾತೂ ಕೇಳಲ್ಲ. ತಮ್ಮ ಇಷ್ಟದಂತೆ ನಡಕೋತಾರೆ. ಆದ್ದರಿಂದ ನಾನು ಒಂದು ಉಪಾಯ ಹೇಳ್ತೀನಿ ಹಾಗೆ ಮಾಡಿ. ಸೀದಾ ಅನಾಥಾಶ್ರಮಕ್ಕೆ ಹೋಗಿ. ಚೆನ್ನಾಗಿರೋ ಹುಡುಗಿನ್ನ ನೋಡಿ, ಮಗನಿಗೆ ಮದುವೆ ಮಾಡಿಬಿಡಿ, ನಿಮ್ಮ ಮನೆಗೆ ಬಂದ ಮೇಲೆ, ನಿಮ್ಮ ಮನೆಯ ಭಾಷೆ, ಸಂಸ್ಕೃತಿ ಎಲ್ಲಾ ಕಲಿಸಿ.”

ಎಲ್ಲರೂ ಹೌದು ಹೌದು ಎಂದರು. ಇನ್ನು ಸಮಯವಾಯಿತು ಹೊರಡೋಣ ಎಂದು ಎಲ್ಲರೂ ಹೊರಟರು. ಶ್ರೀನಿವಾಸರಾಯರು ಕೂಡಾ ಹಾಗೆಯೇ ಮಾಡೋಣ ಎಂದು ಕೊಂಡು ಮನೆಯ ಕಡೆ ಹೆಜ್ಜೆ ಹಾಕಿದರು. ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಟ್ಟೆ ಬದಲಾಯಿಸಿ ಸ್ವಲ್ಪಹೊತ್ತು ಟಿ.ವಿ. ನೋಡಿದರು. ನಂತರ ತಮ್ಮ ಪತ್ನಿ ಪದ್ಮಾವತಿಯವರ ಹತ್ತಿರ ಹೋಗಿ, ಈ ದಿನ ಪಾರ್ಕಿನಲ್ಲಿ ನಡೆದ ಚರ್ಚೆಯ ವಿಷಯ ತಿಳಿಸಿ ನಮ್ಮ ಪ್ರದೀಪನ ಮದುವೆಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದರೆ ಹೇಳಿ ಅಂತ ಕೇಳಿದೆ. ಅವರೆಲ್ಲರೂ ನಮಗೆ ಗೊತ್ತಿರೋವು ಯಾರೂ ಇಲ್ಲ ಅಂದುಬಿಟ್ರು, ಒಬ್ರು ಮ್ಯಾಟ್ರಿಮಾನಿಗಳಲ್ಲಿ ನೋಡಿ, ಬೇಕಾದಷ್ಟು ಹುಡುಗಿಯರ ಪ್ರಸ್ತಾಪಗಳು ಸಿಗುತ್ತವೆ ಎಂದರು. ನಾನು ಹೇಳಿದೆ. ಅಂತಹ ಎಷ್ಟೋ ಮ್ಯಾಟ್ರಿಮಾನಿಗಳಲ್ಲಿ ನೊಂದಾಯಿಸಿದ್ದೇವೆ. ಅದೆಷ್ಟೋ ಮದುವೆ ಮಂಗಳ ಧಾಮಗಳಿಗೆ ಹೋಗಿ ಬಂದಿದ್ದೇವೆ. ಅದೆಷ್ಟೋ ವಧೂವರರ ಸಮಾವೇಷಗಳಲ್ಲಿ ಭಾಗವಹಿಸಿದ್ದೇವೆ. ಆದರೆ ನಮಗೆ ಸರಿಹೊಂದುವಂತಹ ಯಾವ ಹುಡುಗೀನೂ ಸಿಗಲಿಲ್ಲ. ಏನು ಮಾಡೋದು ಅಂತ ಹೇಳಿದೆ. ಒಬ್ಬರು ಹೇಳಿದ್ರು, ಬೆಂಗಳೂರು ಬಿಟ್ಟು ಬೇರೆ ಬೇರೆ ಊರುಗಳಲ್ಲಿ ಹೋಗಿ ಪ್ರಯತ್ನ ಮಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೋಗಿ ಪ್ರಯತ್ನ ಮಾಡಿ, ಯಾರಾದರೂ ಬಡಹುಡುಗರು ಸಿಕ್ತಾರೆ ಅಂದ್ರು, ಅದೂ ಕೂಡಾ ಪ್ರಯತ್ನ ಮಾಡಿ ಆಯಿತು. ಹಳ್ಳಿಗಳಲ್ಲಿಯೂ ಕೂಡಾ ಯಾರೂ ಸಿಗ್ತಾ ಇಲ್ಲ ಅಂತ ಹೇಳಿದೆ. ಕೊನೆಗೆ ಒಬ್ರು ಒಂದು ಉಪಾಯ ಹೇಳಿದ್ರು, ನೀವು ಜಾತಿಯತೆ, ಗೋತ್ರ, ನಕತ್ರ, ಜಾತಕ ಮುಂತಾದ ಮೂಢನಂಬಿಕೆಗಳನ್ನು ಬಿಡಿ. ಒಂದು ಅನಾಥಾಶ್ರಮಕ್ಕೆ ಹೋಗಿ, ಚೆನ್ನಾಗಿರೋ ಹುಡುಗೀನ್ನ ಆರಿಸಿಕೊಳ್ಳಿ. ಅವಳಿಗೂ ಒಂದು ಬಾಳು ಸಿಗತ್ತೆ ನಿಮಗೂ ಒಂದು ದಿಕ್ಕಾಗತ್ತೆ ಅಂದ್ರು, ನನಗೂ ಅದೇ ಸರಿ ಅನ್ನಿಸ್ತು. ನೀನೇನಂತೀಯ, ಯಾವುದಾದರೂ ಅನಾಥಾಶ್ರಮಕ್ಕೆ ಹೋಗಿ ನೋಡೋಣವಾ?”

ಪದ್ಮಾವತಿಯವರು ಗಾಬರಿಯಿಂದ ಎದ್ದು ನಿಂತು ಪತಿಯ ಮೇಲೆ ರೇಗಿದರು. “ನಿಮಗೇನು ತಲೆ ಕೆಟ್ಟಿದೆಯೇ? ನಮ್ಮ ಪ್ರದೀಪನಿಗೇನೂ ಅಂತಹ ವಯಸ್ಸು ಆಗಿಲ್ಲ. ಅನಾಥಾಶ್ರಮದ ಹುಡುಗೀನ ತಂದು ಮದುವೆ ಮಾಡಕ್ಕೇ. ಅಲ್ಲಿ ಇರೋ ಮಕ್ಕಳು ಯಾರದು ಏನು ಅಂತ ನಿಮಗೇನಾದ್ರೂ ಗೊತ್ತಿದೆಯೇ? ನಿಮಗೇನು, ಆ ಆಶ್ರಮದವರಿಗೇ ಗೊತ್ತಾಗೋದಿಲ್ಲ. ಎಲ್ಲೋ ಬೀದೀಲಿ ಸಿಕ್ಕ ಮಗೂನ ಯಾರೋ ತಂದು ಕೊಡ್ತಾರೆ. ಇವರು ಸಾಕ್ತಾರೆ. ಅವಕ್ಕೇನು ಸಂಸ್ಕಾರ ಇರತ್ತೆ. ಯಾರಿಗುಟ್ಟಿದ ಮಗುನೋ ಏನೋ? ಸುಮ್ಮೆ ಒಂದು ಹುಡುಗಿ ಅಂತ ಆಗಿಬಿಟ್ಟರೆ ಆಯ್ತಾ. ಮದುವೆ ಮಾಡಿ ಬಿಡೋದಾ? ಅದೆಲ್ಲಾ ಆಗೋದಿಲ್ಲ. ನಮ್ಮ ಜನಾನೇ ಆಗಬೇಕು. ಗೋತ್ರಾ, ನಕ್ಷತ್ರ ಜಾತಕ ಎಲ್ಲಾ ಸರಿಹೋದ್ರೇನೆ ಮದುವೆ ಮಾಡೋದು. ಯಾರೋ ಹೇಳಿದ್ರಂತೆ, ಇವರು ಕೇಳಿದ್ರಂತೆ. ಇಂತಹ ವಿಷಯ ನನ್ನ ಹತ್ತಿರಾನೇ ಬಂದು ಹೇಳೋದಕ್ಕೆ ಎಷ್ಟೇ ಧೈರ್ಯ ನಿಮಗೆ? ಹುಂ” ಎಂದು ಎದ್ದು ಹೋದರು. ಶ್ರೀನಿವಾಸರಾಯರು ತೆಪ್ಪಗೆ ಇಂಗು ತಿಂದ ಮಂಗನಹಾಗೆ, ಸಪ್ಪಗೆ ಮುಖ ಮಾಡಿಕೊಂಡು ತಮ್ಮ ಕೋಣೆಗೆ ಹೋದರು. ಇದಾಗಿ ಮೂರು ವರ್ಷಗಳೇ ಕಳೆದು ಹೋದವು. ಶ್ರೀನಿವಾಸರಾಯರು ಮತ್ತು ಅವರ ಪತ್ನಿ, ಮಗ ಪ್ರದೀಪನಿಗಾಗಿ ನಿರಂತರವಾಗಿ ವಧುವಿನ ಅನ್ವೇಷಣೆಯಲ್ಲಿ ತೊಡಗಿದರು. ಆದರೆ ಯಾವ ಪ್ರಸ್ತಾಪವೂ ಫಲಕಾರಿಯಾಗಲಿಲ್ಲ. ಒಂದು ದಿನ ತಮ್ಮ ಹತ್ತಿರದ ಸಂಬಂಧಿಕರ ಮಗನ ಮದುವೆಗೆಂದು ಮೈಸೂರಿಗೆ ಹೋಗಬೇಕಾಗಿ ಬಂತು. ಆ ಮದುವೆಯಲ್ಲಿ ತಮ್ಮ ಮಗನಿಗೆ ಸರಿಹೊಂದುವ ಯಾವುದಾದರೂ ಹುಡುಗಿ ಸಿಗಬಹುದೆಂದು, ಇವರಿಬ್ಬರೂ ಮೈಸೂರಿಗೆ ಹೋದರು. ಮದುವೆಯ ಸಮಯದಲ್ಲಿ ಅವರಿವರ ಹತ್ತಿರ ತಮ್ಮ ಮಗನಿಗೊಂದು ಒಳ್ಳೆಯ ಹುಡುಗಿ ಇದ್ದರೆ ಹೇಳಿ ಎಂದು ಕೇಳಿದರು. ಆದರೂ ಕೂಡಾ ಹಿಂದೆ ಮುರುಗೇಶನ್‌ರವರು ಹೇಳಿದಂತೆಯೇ ಹೇಳಿದರು. ಈಗಿನ ಕಾಲದಲ್ಲಿ ಮದುವೆಗೆ ಹೆಣ್ಣುಮಕ್ಕಳು ಸಿಗುವುದೇ ಕಷ್ಟವಾಗಿ ಹೋಗಿದೆ. ನೀವು ಒಂದು ಕೆಲಸ ಮಾಡಿ ಸಾರ್, ಯಾವುದಾದರೂ ಅನಾಥಾಶ್ರಮದಲ್ಲಿ ಹೋಗಿ ಒಂದು ಒಳ್ಳೆಯ ಹುಡುಗೀನ ನೋಡಿ ನಿಮ್ಮ ಮಗನಿಗೆ ಮದುವೆ ಮಾಡಿ ಬಿಡಿ ಎಂದರು. ಶ್ರೀನಿವಾಸರಾಯರು ಪೆಚ್ಚಾಗಿ ಕುಳಿತರು. ಸ್ವಲ್ಪ ಹೊತ್ತು ಸಾವರಿಸಿಕೊಂಡು ಹೇಳಿದರು. “ಹಿಂದೆ ಒಂದು ಸಲ ಯಾರೋ ನಮ್ಮ ಸ್ನೇಹಿತರು ಈ ಸಲಹೆ ಕೊಟ್ಟಿದ್ದರು. ನಾನು ಈ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಮಾಡಿದಾಗ ನನ್ನ ಪತ್ನಿ ಸ್ವಲ್ಪವೂ ಒಪ್ಪಲಿಲ್ಲ. ಆ ಹುಡುಗಿ ಯಾರಿಗೆ ಹುಟ್ಟಿದ್ದೂ ಏನೋ? ಯಾವ ಜನವೋ ಏನೋ? ನಮಗ್ಯಾಕೆ ಅಂತಹ ಗ್ರಹಚಾರ ಎಂದು ಬಿಟ್ಟಿದ್ದರು. ಸರಿ ಅಂತ ನಾನೂ ಸುಮ್ಮನಾಗಿ ಬಿಟ್ಟಿದ್ದೆ. ಆಗಿನ ಕಾಲದ ವಿಷಯ ಬಿಡಿ ಸಾರ್, ಈಗ ಅದೊಂದೇ ದಾರಿ ಉಳಿದಿರೋದು. ಅನಾಥಾಲಯದ ಹುಡುಗೀರಿಗೂ ತುಂಬಾ ಡಿಮ್ಯಾಂಡಿದೆ. ಸರಕಾರದವರು ಈ ವಿಷಯದಲ್ಲಿ ಕಠಿಣವಾದ ರೂಲ್ಸ್ಗಳನ್ನು ಮಾಡಿದ್ದಾರೆ. ಅಂದಹಾಗೆ ನಿಮಗೊಂದು ವಿಷಯ ಗೊತ್ತಿದೆಯೋ ಇಲ್ಲವೋ ಎಂದು ಇವರ ಹತ್ತಿರ ಬಂದು ಮೆಲು ದನಿಯಲ್ಲಿ ಹೇಳಿದರು. ಇವತ್ತು ನಡೇತಿದೆಯಲ್ಲಾ ಈ ಮದುವೆಯ ವಧು ಕೂಡಾ ಅನಾಥಾಶ್ರಮದ ಹುಡುಗೀನೇ! ಹುಡುಗನ ಸೋದರಮಾವನೇ ಹುಡುಗೀನ ದತ್ತು ಸ್ವೀಕಾರ ಮಾಡಿದಂತೆ ಮಾಡಿಕೊಂಡು, ಕನ್ಯಾದಾನ ಮಾಡಿ ಕೊಡ್ತಾ ಇದಾರೆ ಎಂದರು. ಕೃಷ್ಣಮೂರ್ತಿ, ಶ್ರೀನಿವಾಸರಾಯರಿಗೆ ಬಹಳ ಆಶ್ಚರ್ಯವಾಯಿತು. ಸಮಯನೋಡಿ, ತಮ್ಮ ಪತ್ನಿ ಪದ್ಮಾವತಿಯವರಿಗೆ ಈ ವಿಷಯ ತಿಳಿಸಿದರು. ಅವರು ಎಂದಿನಂತೆ “ನೀವು ಸುಮ್ಮನಿರಿ” ಎಂದು ಇವರ ಬಾಯಿ ಮುಚ್ಚಿದರು. ಆದರೆ ಶ್ರೀನಿವಾಸರಾಯರು, ತಮ್ಮ ಗೆಳೆಯ ಕೃಷ್ಣಮೂರ್ತಿಯವರ ದೂರವಾಣಿ ಸಂಖ್ಯೆ, ಮನೆಯ ವಿಳಾಸ ಎಲ್ಲಾ ತೆಗೆದುಕೊಂಡು, ನಾನು ಈ ವಿಷಯ ನಿಧಾನವಾಗಿ ಚರ್ಚೆ ಮಾಡುತ್ತೇನೆ. ನನ್ನ ಹೆಂಡತಿ ಮತ್ತು ಮಗ ಇಬ್ಬರೂ ಒಪ್ಪಿಕೊಂಡರೆ, ನೋಡೋಣ. ನಾನು ಬೆಂಗಳೂರಿನಲ್ಲಿ ಯಾವುದಾದರೂ ಅನಾಥಾಶ್ರಮಗಳಿಗೆ ಹೋಗಿ ಯಾವುದಾದರೂ ಒಳ್ಳೆಯ ಹುಡುಗೀರು ಇದಾರೋ ಏನೋ ಅಂತ ವಿಚಾರಿಸ್ತೀನಿ. ನೀವು ಮೈಸೂರಲ್ಲಿ ಯಾವುದಾದರೂ ಅನಾಥಶ್ರಮದಲ್ಲಿ ವಿಚಾರಿಸಿ, ನನಗೆ ಫೋನ್ ಮಾಡಿ ಕೂಡಲೇ ಬರ್ತೀನಿ, ದಯವಿಟ್ಟು ನಮಗೆ ಸ್ವಲ್ಪ ಸಹಾಯಮಾಡಿ ಪುಣ್ಯ ಕಟ್ಟಿಕೊಳ್ಳಿ’ ಎಂದರು. ಅವರೂ ಕೂಡಾ “ನೀವೇನೂ ಚಿಂತೆ ಮಾಡಬೇಡಿ, ನಾನು ಯಾವುದಾದರೂ ನೋಡಿ ನಿಮಗೆ ಫೋನ್ ಮಾಡ್ತೀನಿ” ಎಂದರು.

ಬೆಂಗಳೂರಿಗೆ ಬಂದ ಮೇಲೆ ಒಂದು ದಿನ ಪತ್ನಿ ಸಮಾಧಾನವಾಗಿರುವ ಸಮಯ ನೋಡಿ ಹೇಳಿದರು. “ನೋಡು, ಈಗಿನ ಕಾಲದಲ್ಲಿ ಯಾರ ಮನೆಗಳಲ್ಲೂ ಹೆಣ್ಣು ಮಕ್ಕಳೇ ಇಲ್ಲ. ಇನ್ನು ಇರೋ ಮಕ್ಕಳು ಚೆನ್ನಾಗಿ ಓದಿ ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡೂ ಅಲ್ಲಿ ಇಲ್ಲಿ ಅಂತ ಹೊರಟೋಗ್ತಾರೆ. ಆದ್ದರಿಂದ ನಾವು ಈ ಜಾತಿ, ಮತ, ಜಾತಕ, ನಕ್ಷತ್ರ ಮುಂತಾದ ವಿಷಯಗಳನ್ನು ಮರೆತು, ಯಾವುದಾದರೂ ಒಳ್ಳೆಯ ಹುಡುಗೀನ ನೋಡಿ, ನಮ್ಮ ಪ್ರದೀಪಂಗೆ ಮದುವೆ ಮಾಡಿಬಿಡೋಣ. ಮೊನ್ನೆ ಮೊನ್ನೆ ನಾವು ಮೈಸೂರಿಗೆ ಒಂದು ಮದುವೆಗೆ ಹೋಗಿದ್ವಲ್ಲಾ, ಆ ಮದುವೇಲೂ ಹುಡುಗಿ ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ ಅಂತೆ, ಹುಡುಗನ ಸೋದರಮಾವ ಹುಡುಗಿಯ ತಂದೆ ತಾಯಿ ಆಗಿ ಮಣೆಯ ಮೇಲೆ ಕುಳಿತು, ಧಾರೆ ಎರೆದು ಕೊಟ್ಟರಂತೆ. ಕೃಷ್ಣಮೂರ್ತಿ ಎಲ್ಲಾ ವಿಷಯ ವಿವರವಾಗಿ ಹೇಳಿದರು. ನೀವು ಹಾಗೇ ಯಾವುದಾದರೂ ಒಳ್ಳೆ ಹುಡುಗಿ ಸಿಕ್ಕಿದರೆ ಮದುವೆ ಮಾಡಿಬಿಡಿ ಅಂತ ಸಲಹೆ ಕೊಟ್ಟರು. ನೀನು ಸಿಟ್ಟು ಮಾಡಿಕೋ ಬೇಡ. ನಿಧಾನವಾಗಿ ಯೋಚಿಸಿ ನೋಡು, ಈ ಮಧ್ಯೆ ಈ ಮಾಟ್ರಿಮಾನಿಗಳಲ್ಲಿ ಯಾವುದಾದರೂ ಒಳ್ಳೆಯ ಹುಡುಗಿ ಸಿಕ್ಕಿದರೆ ಒಳ್ಳೇದೇ ಆಯ್ತಲ್ಲಾ’ ಎಂದು ಹೇಳಿ ಪತ್ನಿಯ ಪ್ರತಿಕ್ರಿಯೆಗೆ ಕಾಯದೆ ಹೊರಬಂದರು.

ಮತ್ತೊಂದು ದಿನ ಮಗ ಪ್ರದೀಪನ ಹತ್ತಿರವೂ ಮನ ತೆರೆದು ಮಾತನಾಡಿದರು. ನೋಡು ಪ್ರದೀಪಾ ನಿನಗೂ ಮುವತ್ತೊಂದು ವರ್ಷ ಆಯಿತು. ಈಗಾಗಲೇ ತಡ ಆಯಿತು. ಇಷ್ಟು ಹೊತ್ತಿಗೆ ನಿನಗೆ ಮದುವೆ ಆಗಿ ಎರಡು ಮಕ್ಕಳು ಆಗಿರುತ್ತಿತ್ತು. ಏನೋ ತಡವಾಗುತ್ತಲೇ ಇದೆ. ನೀನೇ ಯಾರಾದರೂ ಸಹಪಾಠಿಯನ್ನೋ, ನಿನ್ನ ಜೊತೆಗೆ ಕೆಲಸ ಮಾಡೋ ಸಹೋದ್ಯೋಗಿಯನ್ನೋ ಇಷ್ಟಪಟ್ಟು ಮದುವೆ ಆಗ್ತಿನಿ ಅಂದ್ರೆ ಅದೂ ಸಂತೋಷಾನೇ, ನಾವೇ ಮುಂದೆ ನಿಂತು ಮದುವೆ ಮಾಡ್ತೀವಿ. ನಾನೂ ನಿನ್ನ ಅಮ್ಮಾನೂ ಹತ್ತಾರು ಮ್ಯಾಟ್ರಿಮಾನಿಗಳಲ್ಲಿ ರಿಜಿಸ್ಟರ್‌ ಮಾಡಿಸಿ ವಧು ನೋಡಿ ನೋಡಿ ಸಾಕಾಗಿ ಹೋಯಿತು. ವಧೂವರರ ಸಮಾವೇಶಗಳಿಗೂ ಹೋಗಿ ಬಂದದ್ದಾಯಿತು. ನೀನೂ ಬಂದಿದ್ದೆ. ಅಲ್ಲೂ ಏನೂ ಆಗಲಿಲ್ಲ. ಮೊನ್ನೆ ನಾನು, ನಿನ್ನಮ್ಮ ಮೈಸೂರಿಗೆ ಒಂದು ಮದುವೆಗೆ ಹೋಗಿದ್ವಿ. ಆ ಮದುವೆ ಹೆಣ್ಣು ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ. ತಂದೆ ತಾಯಿ ಯಾರೂಂತ ಗೊತ್ತಿಲ್ಲ. ಹುಡುಗಿ ಚೆನ್ನಾಗಿದಾಳೆ, ಸ್ವಲ್ಪ ಮಟ್ಟಿಗೆ ಓದಿದಾಳೆ ಅಂತ ಮಾಡಿಕೊಂಡರು. ಆ ಮದುವೆಗೆ ಬಂದಿದ್ದ ನನ್ನ ದೂರದ ಸಂಬಂಧಿ ಕೃಷ್ಣಮೂರ್ತಿ ಹೇಳಿದ. ನೀವೂ ಇದೇ ರೀತಿ ಯಾವುದಾದರೂ ಆನಾಥಾಶ್ರಮದಲ್ಲಿ ಒಳ್ಳೆಯ ಹುಡುಗಿ ಸಿಕ್ಕಿದರೆ ಏಕೆ ಮಾಡಬಾರದು? ಅಂತಾ.. ನನಗೂ ಆ ಸಲಹೆ ಸರಿ ಅನ್ನಿಸಿತ್ತು. ನಿನ್ನ ಅಮ್ಮನ ಹತ್ತಿರಾನೂ ಆ ವಿಷಯ ಹೇಳಿದೆ. ಅವರಿಗೆ ಜಾತಿ, ಮತ, ಗೋತ್ರಾ, ನಕ್ಷತ್ರಾ, ಜಾತಕ ಇದರಲ್ಲೆಲ್ಲಾ ತುಂಬಾ ನಂಬಿಕೆ. ಅದೆಲ್ಲಾ ನೋಡ್ತಾ ಕೂತ್ರೆ ಮದುವೆ ಆಗೋದು ಕಷ್ಟ. ಅದೆಲ್ಲಾ ಬರಿಯ ಮೂಢ ನಂಬಿಕೆ ಅಷ್ಟೇ. ಅದಕ್ಕೇ ನೀನು ಒಪ್ಪಿಕೊಂಡರೆ ಯಾವುದಾದರೂ ಅನಾಥಾಶ್ರಮದಲ್ಲಿ ಹೋಗಿ ನೋಡೋಣಾಂತಿದೀನಿ, ಯೋಚನೆ ಮಾಡಿ ಹೇಳು” ಎಂದರು. ಮಗ ಪ್ರದೀಪನಿಗೆ ಏನು ಹೇಳಲೂ ತೋಚಲಿಲ್ಲ. ಕಾಲೇಜಿನ ದಿನಗಳಲ್ಲಿ ಅವನೂ ಕೆಲವು ಗೆಳತಿಯರನ್ನು ನೋಡಿ ಇಷ್ಟ ಪಟ್ಟಿದ್ದ ಒಬ್ಬಳನ್ನಂತೂ ಮನಸ್ಸಲ್ಲೇ ಪ್ರೀತಿಸತೊಡಸಿದ್ದ, ಆದರೆ ಹೇಳಲು ಧೈರ್ಯ ಸಾಲದೇ ತಡೆದಿದ್ದ ಕೆಲವೇ ದಿನಗಳಲ್ಲಿ ಅವಳ ಮದುವೆ ನಿಶ್ಚಯ ಆಗಿ ಆವಳೇ ಲಗ್ನಪತ್ರಿಕೆ ತಂದು ಕೊಟ್ಟಿದ್ದಳು. ಇನ್ನು ಓದು ಮುಗಿಸಿ ಕೆಲಸಕ್ಕೆ ಸೇರಿದ ಮೇಲೂ ಕೆಲವು ಸಹೋದ್ಯೋಗಿಗಳನ್ನು ಇಷ್ಟಪಟ್ಟಿದ್ದ ಇವನು ಧೈರ್ಯ ಮಾಡಿ ಅವಳ ಮುಂದೆ ತನ್ನ ಪ್ರೇಮ ನಿವೇದನೆ ಮಾಡುವುದರೊಳಗೆ ಇನ್ನೊಬ್ಬ ಗೆಳೆಯ ಅವಸರದಿಂದ ಅವಳ ಹತ್ತಿರ ಮಾತನಾಡಿ, ಅವಳ ತಂದೆ ತಾಯಿಯ ಬಳಿ ಮಾತನಾಡಿ ಮದುವೆಯಾಗಿ ಬಿಟ್ಟಿದ್ದ, ಇನ್ನು ಮನೆಯಲ್ಲಿ ತಂದೆ, ತಾಯಿ ಬಹಳ ಮುತುವರ್ಜಿ ವಹಿಸಿ ವಧು ನೋಡುತ್ತಿದ್ದರು ಯಾವುದಾದರೂ ಒಳ್ಳೆಯ ಹುಡುಗಿ ಸಿಕ್ಕಿದರೆ ಮದುವೆ ಆಗಿ ಬಿಡೋಣ ಎಂದಿದ್ದ. ಅದೂ ಯಾವುದೂ ಫಲಕಾರಿಯಾಗಲಿಲ್ಲ. ಇನ್ನು ಕೊನೆಯ ಅವಕಾಶವೆಂದರೆ, ಅನಾಥಾಶ್ರಮದಲ್ಲಿ ಯಾವುದಾದರೂ ಒಳ್ಳೆಯ ಹುಡುಗಿ ಸಿಕ್ಕಿದರೆ ತಂದು ಮದುವೆಯಾಗುವುದೊಂದೇ ದಾರಿ ಎಂದು ತಂದೆಯವರ ಮಾತಿಗೆ ಒಪ್ಪಿಕೊಂಡ.

ಶ್ರೀನಿವಾಸರಾಯರು ಬೆಂಗಳೂರಿನ ಮೂರು ಅನಾಥಾಶ್ರಮಗಳಲ್ಲಿ ಹೋಗಿ ನೋಡಿ ಬಂದರು. ಪ್ರದೀಪನಿಗೆ ಸರಿಹೊಂದುವಂತಹ ಯಾವ ಹುಡುಗಿಯೂ ಇರಲಿಲ್ಲ. ಮೈಸೂರಿನ ಕೃಷ್ಣಮೂರ್ತಿಯವರಿಗೆ ಪೋನ್ ಮಾಡಿ ಮೈಸೂರಿನಲ್ಲಿ ಯಾವುದಾದರೂ ಅನಾಥಾಶ್ರಮದಲ್ಲಿ ತಮ್ಮ ಮಗನಿಗೆ ಸರಿ ಹೊಂದುವಂತಹ ಹುಡುಗಿ ಯಾರಾದರೂ ಇದ್ದಾಳೆಯೇ ವಿಚಾರಿಸಿರಿ. ನೀವು ಬಾ ಎಂದರೆ ನಾನು ಕೂಡಲೇ ಮೈಸೂರಿಗೆ ಬರುತ್ತೇನೆ ಎಂದು ಹೇಳಿದರು. ಅವರೂ ಸರಿ ವಿಚಾರಿಸ್ತೀನಿ ಎಂದರು.

ಇದಾಗಿ ಇಪ್ಪತ್ತು ದಿನಗಳೇ ಕಳೆದವು, ಕೃಷ್ಣಮೂರ್ತಿಗಳಿಂದ ಯಾವುದೇ ದೂರವಾಣಿ ಕರೆ ಇಲ್ಲ. ಒಂದು ದಿನ ಶ್ರೀನಿವಾಸರಾಯರೇ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಿ ವಿಚಾರಿಸಿದರು. ಕೃಷ್ಣಮೂರ್ತಿಯವರು ಬಹಳ ಉತ್ಸಾಹದಿಂದ ಮಾತನಾಡಿದರು. ರಾಯರೇ ನಿಮ್ಮ ಅದೃಷ್ಟ ಚೆನ್ನಾಗಿದೆ. ನಾನೇ ಈಗ ನಿಮಗೆ ಫೋನ್ ಮಾಡೋಣ ಅಂತ ಇದ್ದೆ. ಅಷ್ಟರಲ್ಲಿ ನೀವೇ ಫೋನ್ ಮಾಡಿದಿರಿ. ಇಲ್ಲೇ ವಿದ್ಯಾರಣ್ಯಪುರಂನಲ್ಲಿ ಒಂದು ಸರ್ಕಾರಿ ಅನಾತ ಬಾಲಿಕಾ ವಸತಿ ಶಾಲೆ ಅಂತ ಇದೆ, ಅಲ್ಲಿ ಒಬ್ಬ ಹುಡುಗಿ ಇದಾಳೆ, ವಯಸ್ಸು ಇಪ್ಪತ್ತೈದು ಇರಬಹುದು. ಅವಳು ಹಿಂದೆ ಏನು ಓದಿದ್ದಳು ಅಂತ ಗೊತ್ತಿಲ್ಲ. ಅವಳ ವಯಸ್ಸಿನ ಆಧಾರದ ಮೇಲೆ ಅವಳನ್ನು ಎಸ್ಸೆಸ್ಸೆಲ್ಸಿಗೆ ಕಟ್ಟಿಸಿದ್ದಾರೆ. ಪಾಠಕ್ಕೂ ಕಳಿಸಿದ್ದಾರೆ. ನೀವು ಎಲ್ಲರೂ ಒಂದು ಸಲ ಬಂದು ನೋಡಿ ಕೊಂಡು ಹೋಗಿ. ನಿಮಗೆ ಸರಿ ಎನಿಸಿದರೆ, ಅವಳ ಪರೀಕ್ಷೆಗಳು ಮುಗಿದ ಮೇಲೆ ಮದುವೆ ವಿಚಾರ ಮಾತನಾಡೋಣ ಎಂದರು. ಶ್ರೀನಿವಾಸರಾಯರು, ಹುಡುಗಿ ನೋಡೋಕೆ ಹೇಗಿದ್ದಾಳೆ? ಅವಳ ಹೆಸರೇನು? ಯಾವ ಯಾವ ಭಾಷೆ ಮಾತಾಡ್ತಾಳೆ? ಎಂದೆಲ್ಲಾ ವಿಚಾರಿಸಿದರು. ಹುಡುಗಿಯ ಹೆಸರು ಶ್ವೇತಾ ಅಂತ, ಹೆಸರಿಗೆ ತಕ್ಕಂತೆ ಬೆಳ್ಳಗೆ ಇದಾಳೆ, ಸಾದಾರಣ ಮೈಕಟ್ಟು, ಕನ್ನಡ ಮಾತ್ರ ಮಾತಾಡ್ತಾಳೆ. ಹಿಂದಿ, ಇಂಗ್ಲಿಷ್ ಕಲಿತಿದ್ದಾಳೆ.. ನಾನು ನನ್ನ ಹೆಂಡತಿ ಇವತ್ತು ಸಾಯಂಕಾಲ ಮತ್ತೆ ಆಶ್ರಮಕ್ಕೆ ಹೋಗಿ ನೋಡಿಕೊಂಡು ಬರ್ತೀವಿ. ನೀವುಗಳು ಯಾವಾಗ ಬರ್ತೀರಿ ಅಂತ ತಿಳಿಸಿ, ನಿಮ್ಮ ಭೇಟಿಗೆ ವ್ಯವಸ್ಥೆ ಮಾಡಿತೀನಿ” ಎಂದರು. ಶ್ರೀನಿವಾಸರವರು ಬಹಳ ಉತ್ಸಾಹದಿಂದ ತಮ್ಮ ಪತ್ನಿಯ ಬಳಿ ಈ ವಿಚಾರ ತಿಳಿಸಿದರು. ಅವರೇನೂ ಅಷ್ಟು ಉತ್ಸಾಹ ತೋರಿಸಲಿಲ್ಲ. ಸಂಜೆ ಮಗ ಮನೆಗೆ ಬಂದಾಗ ಅವನೂ ಕೂಡಾ ಅಷ್ಟೇನೂ ಉತ್ಸಾಹ ತೋರಿಸಲಿಲ್ಲ. ಶನಿವಾರ, ಭಾನುವಾರ ನೋಡೋಣ ಎಂದ, ಭಾನುವಾರ ಮೈಸೂರಿಗೆ ಹೋಗೋಣವೆಂದು ನಿರ್ಧರಿಸಿದರು. ಅದೇ ಪ್ರಕಾರ ಕೃಷ್ಣಮೂರ್ತಿ ಯವರನ್ನು ದೂರವಾಣಿ ಮೂಲಕ ಮಾತನಾಡಿ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಯ ವೇಳೆಗೆ ನಿಮ್ಮ ಮನೆಗೆ ಬರುತ್ತೇವೆ. ನೀವು ನಮ್ಮನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿ ಹುಡುಗಿಯನ್ನು ತೋರಿಸಿ ಎಂದರು.

ಕೃಷ್ಣಮೂರ್ತಿಯವರು ಮತ್ತು ಅವರ ಪತ್ನಿ ರಾಧಾ ಅದೇ ದಿನ ಸಂಜೆ ಆಶ್ರಮಕ್ಕೆ ಹೋಗಿ ವಾರ್ಡನ್ ಸುಚರಿತಾ ಮೇಡಂ ಹತ್ತಿರ ಮಾತನಾಡಿದರು. ಪ್ರದೀಪನ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಕೊಟ್ಟರು. ಸುಚರಿತಾರವರು ಬಹಳ ಸಂತೋಷಪಟ್ಟು, ಆಶ್ರಮದ ನಿಯಮಗಳನ್ನೂ ಮತ್ತು ಸರ್ಕಾರದ ನಿಯಮಗಳನ್ನೂ ವಿವರಿಸಿದರು. ಅದೇ ಪ್ರಕಾರ ರಿಜಿಸ್ಟರ್ಡ್ ಮದುವೆ ಮಾಡಿಸಿ, ನಂತರ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡುವುದಾಗಿ ತಿಳಿಸಿದರು. ಸುಚರಿತಾರವರ ಅನುಮತಿ ಪಡೆದು ಶ್ವೇತಾಳನ್ನು ಅಂಗಡಿಗೆ ಕರೆದೊಯ್ದು ಎರಡೂ ಜೊತೆ ಚೂಡಿದಾರ್ ಡ್ರೆಸ್ಸು ಮತ್ತೆ ಲಂಗ ಬ್ರೌಸ್ ಡ್ರೆಸ್ಸು ಕೊಡಿಸಿ ಚೆನ್ನಾಗಿ ಓದಿ ಎಸ್ಸೆಸ್ಸೆಲ್ಸಿ ಪಾಸು ಮಾಡು, ದೊಡ್ಡ ಇಂಜಿನಿಯರ್ ಹುಡುಗನಿಗೆ ಕೊಟ್ಟು ನಿನಗೆ ಮದುವೆ ಮಾಡ್ತೀವಿ. ನಿನ್ನ ಬಾಳು ಬಂಗಾರವಾಗತ್ತೆ ಎಂದು ಹೇಳಿಹೋದರು.

ಭಾನುವಾರ ಹನ್ನೊಂದುವರೆಯ ವೇಳೆಗೆ ಶ್ರೀನಿವಾಸರಾಯರು, ಅವರ ಪತ್ನಿ ಪದ್ಮಾವತಿಯವರು ಮತ್ತು ಮಗ ಪ್ರದೀಪ್ ತಮ್ಮ ಕಾರಿನಲ್ಲಿ ಬಂದು ಕೃಷ್ಣಮೂರ್ತಿಯವರ ಮನೆಯ ಮುಂದೆ ಇಳಿದರು. ಲಘು ಉಪಹಾರ ಮತ್ತು ಕಾಫಿ ಸೇವಿಸಿ ಎಲ್ಲರೂ ಆಶ್ರಮಕ್ಕೆ ಹೋದರು. ಆಶ್ರಮದಲ್ಲಿ ಎಲ್ಲಾ ಮಕ್ಕಳೂ ಶುಭ್ರವಾಗಿ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಇವರುಗಳನ್ನು ಸ್ವಾಗತಿಸಿದರು. ವಾರ್ಡ್‌ನ್ ಸುಚರಿತಾ ಮೇಡಂ ಅವರ ಕ್ಯಾಬಿನ್‌ನಲ್ಲಿ ಇವರೆಲ್ಲರೂ ಕುಳಿತರು. ಶ್ವೇತಾಳನ್ನು ಕರೆಸಿದರು. ಅವಳು ಗೌರವದಿಂದ ಎಲ್ಲರೊಂದಿಗೂ ಚೆನ್ನಾಗಿ ಮಾತನಾಡಿದಳು. ಪದ್ಮಾವತಿಯವರು ಹಾಡು ಬಂದರೆ ಹಾಡಮ್ಮ ಎಂದರು. ಅವಳು ಆಶ್ರಮದ ಪ್ರಾರ್ಥನೆಯನ್ನೇ ಹಾಡಿದಳು. ನಂತರ ಕೃಷ್ಣಮೂರ್ತಿಯವರ ಕಡೆ ತಿರುಗಿ “ನೋಡಿ ಅಂಕಲ್ ನೀವು ಕೊಡಿಸಿದ ಡ್ರೆಸ್ ಹಾಕ್ಕೊಂಡಿದೀನಿ ಚೆನ್ನಾಗಿ ಕಾಣಿಸ್ತೀನಾ?” ಎಂದು ಮೋಹಕವಾಗಿ ನಕ್ಕಳು, ಕೃಷ್ಣಮೂರ್ತಿಯವರು “ತುಂಬಾ ಚೆನ್ನಾಗಿ ಕಾಣಿಸ್ತಿದೀಯಾಮಾ” ಎಂದರು. ಪ್ರದೀಪ, ಹುಡುಗಿಯನ್ನು ಮಾತನಾಡಿಸಿ, ಪರೀಕ್ಷೆ ಯಾವಾಗ?” ಎಂದು ಕೇಳಿದ “ಏಪ್ರಿಲ್ ಹದಿನಾರರಿಂದ, ಟೈಂ ಟೇಬಲ್ ಬಂದಿದೆ. ಏಪ್ರಿಲ್ ಮೂವತ್ತಕ್ಕೆ ಮುಗಿಯುತ್ತೆ” ಎಂದಳು.

“ಹೇಗಿದೆ ಪ್ರಿಪರೇಶನ್ ಪರೀಕ್ಷೆಗೆ?” ಎಂದ.

“ಪರವಾಗಿಲ್ಲ. ಎಲ್ಲಾ ಓದಿಕೊಂಡಿದೀನಿ, ಗಣಿತಾನೇ ಸ್ವಲ್ಪ ಕಷ್ಟ, ಅಭ್ಯಾಸ ಮಾಡ್ತಾ ಇದೀನಿ” ಎಂದಳು. ಒಂದು ಗಂಟೆಯ ಕಾಲ ಎಲ್ಲರೂ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಎಲ್ಲರಿಗೂ ನಗುನಗುತ್ತಾ ಉತ್ತರಿಸಿದಳು. ಕೊನೆಗೆ ಸುಚರಿತಾ ಮೇಡಂರವರು ಶ್ವೇತಳನ್ನು ನೀನು ಹೋಗಮ್ಮಾ ಓದಿಕೋ ಎಂದು ಹೇಳಿ ತನ್ನ ಕೋಣೆಗೆ ಕಳಿಸಿದರು.

ಅವಳು ಹೊರಟಮೇಲೆ ಶ್ರೀನಿವಾಸರಾಯರು ಮುಖ್ಯವಾದ ಪ್ರಶ್ನೆ ಕೇಳಿದರು. “ಅವಳು ನಿಮಗೆ ಹೇಗೆ ಸಿಕ್ಕಿದಳು? ಎಷ್ಟು ವರ್ಷಗಳಿಂದ ಇಲ್ಲಿದ್ದಾಳೆ? ಅವಳಿಗೆ ತಂದೆ-ತಾಯಿ, ಬಂಧು, ಬಳಗ ಯಾರಾದರೂ ಇದ್ದಾರೆಯೇ?” ಸುಚರಿತಾ ಮೇಡಂರವರು ಉತ್ತರಿಸಿದರು.

“ಅವಳಿಗೆ ತಂದೆ, ತಾಯಿ, ಬಂಧು, ಬಳಗ ಯಾರೂ ಇಲ್ಲ. ಅವಳು ಅನಾಥ ಹುಡುಗಿ. ಇಲ್ಲಿಗೆ ಬಂದುಮೂರು ವರ್ಷಗಳಾದವು. ಅದಕ್ಕೆ ಮುಂಚೆ ಮೇಟಗಳ್ಳಿ ಆಶ್ರಮದಲ್ಲಿದ್ದಳು. ಅಲ್ಲಿಂದ ಸರ್ಕಾರದವರು ಇಲ್ಲಿಗೆ ಕಳಿಸಿಕೊಟ್ಟರು. ಸರ್ಕಾರಿ ಆಸ್ಪತ್ರೆಯ ಡಾಕ್ಟರುಗಳು ಅವಳಿಗೆ ಇಪ್ಪತ್ನಾಲ್ಕು ವರ್ಷ ಇರಬಹುದು ಅಂತ ಪ್ರಮಾಣ ಪತ್ರ ಕೊಟ್ಟಿದ್ದಾರೆ. ತುಂಬಾ ಒಳ್ಳೆಯ ಹುಡುಗಿ, ಬಹಳ ಬುದ್ಧಿವಂತೆ. ಖಂಡಿತಾ ಎಸ್ಸೆಸ್ಸೆಲ್ಸಿ ಪಾಸ್ ಮಾಡ್ತಾಳೆ. ನೀವು ಮದುವೆ ಮಾಡಿಕೊಂಡರೂ ಖಂಡಿತ ಮುಂದಕ್ಕೆ ಓದಿಸಿ ಹುಡುಗಿ ಬಹಳ ಬುದ್ಧಿವಂತೆ. ಇನ್ನು ಸರ್ಕಾರಿ ನಿಯಮಗಳನ್ನು ವಿವರಿಸ್ತೀನಿ ಕೇಳಿ. ಹಾಗೂ ನಿಯಮಗಳ ಪ್ರಿಂಟ್‌ಔಟ್ ಕೂಡಾ ಕೊಡ್ತೀನಿ, ನೀವು ಒಂದು ಬಾಂಡ್‌ಗೆ ಸೈನ್ ಮಾಡಿ ಕೊಡಬೇಕು. ಅದರ ಒಂದು ಕಾಪೀನೂ ಕೊಡ್ತೀನಿ. ತಗೊಂಡು ಹೋಗಿ, ಓದಿ ಯೋಚನೆ ಮಾಡಿ ಹೇಳಿ, ಅವಳ ಪರೀಕ್ಷೆಗಳು ಮುಗಿದ ಮೇಲೆ ಮೇ ತಿಂಗಳಲ್ಲೋ ಜೂನ್ ತಿಂಗಳಲ್ಲೋ ಮದುವೆ ಇಟ್ಟುಕೊಳ್ಳೋಣ” ಎಂದು ಹೇಳಿ ಮಾತು ಮುಗಿಸಿದರು. ಎಲ್ಲರೂ ವಾರ್ಡ್‌ನ್ ಮೇಡಂರವರಿಗೆ ವಂದನೆಗಳನ್ನು ಹೇಳಿ ಹೊರನಡೆದರು.

ಕೃಷ್ಣಮೂರ್ತಿಯವರ ಮನೆಯಲ್ಲಿ ಮತ್ತೆ ಎಲ್ಲರೂ ಕುಳಿತು ಸುದೀರ್ಘ ಚರ್ಚೆ ನಡೆಸಿದರು. ಅವರು ಒಂದು ಒಳ್ಳೆಯ ಮಾತು ಹೇಳಿದರು. “ನಮಗೆ ಹೇಗೂ ಮಕ್ಕಳಿಲ್ಲ. ನಾವು ಆ ಹುಡುಗೀನ ದತ್ತು ಪಡೆದ ಹಾಗೆ ರಿಜಿಸ್ಟರ್ ಮಾಡಿಸಿ, ನಂತರ ನಿಮಗೆ ಧಾರೆ ಎರೆದು ಕೊಡ್ತೀವಿ, ನಿಮ್ಮ ಮನೆ ತುಂಬಿದ ಮೇಲೆ ಅವು ನಿಮ್ಮ ಜಾತಿ, ನಿಮ್ಮ ಗೋತ್ರ, ನಿಮ್ಮ ಮನೆಯ ಮಗಳು. ಅವಳಿಗೆ ನಿಮ್ಮ ಮನೆಯ ಭಾಷೆ, ಆಚಾರ, ವಿಚಾರ ಎಲ್ಲಾ ಕಲಿಸಿ ಎಲ್ಲಾ ಸರಿ ಹೋಗತ್ತೆ ಒಳ್ಳೇದಾಗ್ಲಿ. ನಡೀರಿ ಊಟ ಮಾಡೋಣ” ಎಂದರು.

ಮೇ ತಿಂಗಳಿನಲ್ಲಿ ಕಾನೂನಿನಂತೆ ಎಲ್ಲಾ ಪ್ರಕ್ರಿಯೆಗಳೂ ಮುಗಿದವು. ಕೃಷ್ಣಮೂರ್ತಿ ಮತ್ತು ರಾಧಾರವರ ಪುತ್ರಿಯಾಗಿ ಶ್ವೇತಾಳನ್ನು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನೊಂದಾಯಿಸಲಾಯಿತು. ಅದಾದ ಇಪ್ಪತ್ತು ದಿನಗಳ ಬಳಿಕ ಮೈಸೂರಿನ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಶ್ವೇತಾ ಮತ್ತು ಪ್ರದೀಪರ ಮದುವೆ ಸರಳವಾಗಿ ನಡೆಯಿತು. ಸರ್ಕಾರಿ ನಿಯಮದಂತೆ ಮದುವೆಯ ನೊಂದಣಿಕಾರ್ಯ, ಮೈಸೂರಿನ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿಯೇ ಮಾಡಿಸಲಾಯಿತು. ಈ ಎಲ್ಲಾ ಕಾರ್ಯಗಳಿಗೆ ಕಾರಣೀಭೂತರಾದ ಕೃಷ್ಣಮೂರ್ತಿ ರಾಧಾಬಾಯಿ ದಂಪತಿಗಳಿಗೆ ಮನಃ ಪೂರ್ವಕವಾಗಿ ವಂದನೆಗಳನ್ನು ತಿಳಿಸಿ ಬೆಂಗಳೂರಿಗೆ ಹೊರಟರು. ಶ್ವೇತಾ ಪ್ರದೀಪನ ಮುದ್ದಿನ ಮಡದಿಯಾಗಿ, ಶ್ರೀನಿವಾಸರಾಯರ ಮತ್ತು ಪದ್ಮಾವತಿಯವರ ಮುದ್ದಿನ ಸೊಸೆಯಾಗಿ ಮನ ತುಂಬಿದಳು.

ದಿನಗಳು ಸಂತೋಷದಿಂದ ಉರುಳಿದವು. ಶ್ವೇತಾ ಈಗ ಏಳು ತಿಂಗಳ ಗರ್ಭಿಣಿ. ಮನೆಯಲ್ಲಿ ಮುದ್ದು ಕೃಷ್ಣನ ನಿರೀಕ್ಷೆಯಲ್ಲಿ ಎಲ್ಲರೂ ಆನಂದದಿಂದ ದಿನ ಕಳೆಯುತ್ತಿದ್ದರು. ಎಲ್ಲರೂ ವಿಶೇಷ ಲಕ್ಷವಿಟ್ಟು ಶ್ವೇತಾಳನ್ನು ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಂದುದಿನ ಮನೆಯ ಮುಂದೆ ಯಾರೋ ಭಿಕ್ಷಕರು ಬಂದರು.

“ಧರ್ಮ ಮಾಡೀ ತಾಯಿ, ಎರಡು ದಿನದಿಂದ ಹೊಟ್ಟೆಗೆ ಊಟ ಇಲ್ಲಾ ತಾಯಿ, ಕುರುಡು ಮಗುಗೆ ಒಂದು ತುತ್ತು ಊಟ ಕೂಡಿ ತಾಯಿ.” ಶ್ವೇತಾ ನೆನ್ನೆಯ ತಂಗಳನ್ನ ಮತ್ತು ಇಂದು ಬೆಳಗ್ಗೆ ಮಾಡಿದ ಎರಡು ಚಪಾತಿಗಳನ್ನು ತಂದು ಭಿಕ್ಷುಕರಿಗೆ ಕೊಟ್ಟಳು. ಶ್ವೇತಾಳನ್ನು ನೋಡಿದ ಆ ಭಿಕ್ಷುಕ ಮಹಿಳೆ “ಗೌರೀ” ಎಂದು ಕಿರುಚಿ ತಲೆ ಸುತ್ತಿ ಕುಸಿದುಬಿದ್ದಳು. ದೂರದಲ್ಲಿ ನಿಂತಿದ್ದ ಆ ಭಿಕ್ಷುಕ ಗಂಗಾ ಎಂದು ಕಿರುಚಿ ಅವಳನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿದ್ದ. ಸ್ವಲ್ಪ ದೂರದಲ್ಲಿ ಒಂದು ಮಗು ಅಳುತ್ತಾ ನಿಂತಿತ್ತು. ಅದು ಆ ಭಿಕ್ಷುಕ ದಂಪತಿಗಳ ಮಗು ಆಗಿತ್ತು. ಈ ದೃಶ್ಯವನ್ನು ನೋಡಿದ ಶ್ವೇತಾ “ಅಮ್ಮಾ” ಎಂದು ಕಿರುಚಿಕೊಂಡು, ತಲೆ ತಿರುಗಿ ನೆಲದಮೇಲೆ ಕುಸಿದುಬಿದ್ದಳು. ಆ ಭಿಕ್ಷುಕ ಮನೆಯ ಒಳಗೆ ಬಂದು ಯಾರಾದ್ರೂ ಇದ್ರೆ ಬನ್ನಿ ತಾಯಿ. ಯಾರಾದ್ರೂ ಇದ್ರೆ ಬನ್ನಿ ಅಪ್ಪಾ ತಾಯಿ ಮಗಳು ಒಬ್ಬರನೊಬ್ರು ನೋಡಿ ಜ್ಞಾನ ತಪ್ಪಿ ಬಿದ್ದರೆ ಬನ್ನಿ ತಾಯಿ, ಬನ್ನಿ ಅಪ್ಪಾ ಎಂದು ಕೂಗಿದ. ಅಲ್ಲಿಯೇ ಹಾಲಿನಲ್ಲಿ ಕುಳಿತು ಪೇಪರ್ ಓದುತ್ತಿದ್ದ ಶ್ರೀನಿವಾಸರಾಯರು ಓಡಿಬಂದು ನೋಡಿದರು. ಮನೆಯ ಹೊಸ್ತಿಲಿಗೆ ಈ ಕಡೆ ಶ್ವೇತಾ ಜ್ಞಾನತಪ್ಪಿ ಬಿದ್ದಿದ್ದಾಳೆ. ಹೊಸ್ತಲಿನ ಆ ಕಡೆ ಆ ಭಿಕ್ಷುಕ ಹೆಂಗಸು ಜ್ಞಾನ ತಪ್ಪಿ ಬಿದ್ದಿದ್ದಾಳೆ. ಆ ಭಿಕ್ಷುಕ ಮನುಷ್ಯ ಗಾಬರಿಯಾಗಿ ನೋಡುತ್ತಿದ್ದಾನೆ. ಶ್ರೀನಿವಾಸರಾಯರು ಗಾಬರಿಯಾಗಿ ಪ್ರದೀಪಾ, ಪದ್ಮಾ ಕೂಡಲೇ ಬನ್ನಿ, ಬೇಗ ಬನ್ನಿ ಎಂದು ಕೂಗಿದರು. ಅವರುಗಳು ಬರುವುದರೊಳಗೆ ಅಲ್ಲೇ ಟೀಪಾಯಿ ಮೇಲಿದ್ದ ನೀರಿನ ಜೆಗ್ ತಂದು ಶ್ವೇತಾಳ ಮುಖಕ್ಕೆ ನೀರು ಚುಮುಕಿಸಿದರು. ಅವಳು ಬೆಚ್ಚಿದಂತೆ ಅಲ್ಲಾಡಿ, ಕಣ್ತೆರೆದಳು. ನಂತರ ಆ ಹೆಂಗಸಿನ ಮುಖಕ್ಕೆ ನೀರು ಚಿಮುಕಿಸಿದರು. ಆ ಹೆಂಗಸೂ ಪ್ರಜ್ಞೆ ಬಂದು ಕರೆದಳು, ಮತ್ತೊಮ್ಮೆ ಗೌರೀ ಎಂದು ಕೂಗಿ ಶ್ವೇತಾಳನ್ನು ಹಿಡಿಯಹೋದಳು, ಶ್ವೇತಾ ಕೂಡಾ ಅಮ್ಮಾ ಎಂದು ಹೇಳುತ್ತಾ ಓಡಿಹೋಗಿ ಆ ಹೆಂಗಸನ್ನು ತಬ್ಬಿಕೊಂಡಳು. ಅಷ್ಟರಲ್ಲಿ ಪ್ರದೀಪ ಮತ್ತು ಅವನ ತಾಯಿ ಅಲ್ಲಿಗೆ ಬಂದರು. ಇದೇನು ನಡೆಯುತ್ತಿದೆ ಎಂದು ಎಲ್ಲರೂ ಗಾಬರಿಯಿಂದ ನೋಡತೊಡಗಿದರು. ಗೌರಿ ಗೌರಿ ಎಂದು ಆ ಹೆಂಗಸು ಶ್ವೇತಾಳನ್ನು ನೇವೆರಿಸತೊಡಗಿದಳು. ಆಗ ಪ್ರದೀಪ ಜೋರಾಗಿ ಗದರಿದ ಶ್ವೇತಾ. ಫ್ಲೀಸ್.. ಸುಮ್ಮನೆ ಎದ್ದು ಬಾ. ಅವರು ಯಾರು ಏನು ಅಂತ ನಮಗೊತ್ತಿಲ್ಲ. ಈಗ ನೀನು ನನ್ನ ಹೆಂಡತಿ, ಈ ಮನೆಯ ಸೊಸೆ, ಅವರು ಭಿಕ್ಷಕರು.. ಶ್ವೇತಾ ಎದ್ದು ಬಂದಳು. ಸೋಫಾದ ಮೇಲೆ ಬಂದು ಕುಳಿತಳು. ಒಂದು ಮಾತೂ ಆಡಲಿಲ್ಲ. ಅತ್ತೆಯವರು ಬಂದು ಅವಳಿಗೆ ಒಂದು ಲೋಟ ನೀರು ಕುಡಿಸಿದರು. ಅವಳು ನೀರು ಕುಡಿದು ಸೋಫಾದ ಮೇಲೆ ಕುಳಿತು ಎತ್ತಲೋ ನೋಡುತ್ತಿದ್ದಳು. ಪ್ರದೀಪ ಅವಳನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದ.

ಶ್ರೀನಿವಾಸರಾಯರು ಎದ್ದು ಹೋಗಿ ಆ ಭಿಕ್ಷುಕರಿಗೆ ಗದರಿದರು. “ಏ ನೀವ್ಯಾರೋ ನಮಗೊತ್ತಿಲ್ಲ. ಕೊಟ್ಟಿದ್ದನ್ನು ತಗೊಂಡು ಸುಮ್ಮನೆ ಹೋಗಿ.” ಈಗ ಅವರಿಗೆ ಭಿಕ್ಷೆ ಬೇಕಿರಲಿಲ್ಲ. ಅವರೇನೋ ಹೇಳಬೇಕಿತ್ತು. ಎಲ್ಲವನ್ನು ಹೇಳಬೇಕಿತ್ತು. ಈ ಮನೆಯವರು ಅದನ್ನು ಕೇಳಲು ಸಿದ್ಧರಿಲ್ಲ ಎಂದು ತಿಳಿದಿದ್ದರೂ ಇವರು ಹೇಳಲೇ ಬೇಕಿತ್ತು. ಬಾಯಿಬಿಟ್ಟು ಹೇಳಿಯೇ ಬಿಟ್ಟರು. “ಅಮ್ಮಾ ಆ ಹುಡುಗಿ ನನ್ನ ಮಗಳು ಗೌರಿ. ಆರು ವರ್ಷ ಆಗೋಗಿತ್ತು ತಾಯಿ ಆ ಮಗೀನ ಕಳಕೊಂಡು, ಮಹದೇಶ್ವರನ ಬೆಟ್ಟದ ಜಾತ್ರೆಲಿ ಟೇಪು ಬಳೆ ಕೊಂಡ್ಕೊತಾ ಇದ್ಲು. ನಾವು ಈ ಮಗೀಗೆ ಬಾಳೆ ಹಣ್ಣು ಕೊಡೋವಾ ಅಂತ ಒಂದ್ನಿಮಿಸ ಆ ಕಡೆ ಓಗಿ ಬರೋದೊಳಗೆ ಯಾರ ಜೊತೆ ಎಲ್ಲಿ ಮಾಯವಾಗಿ ಓಗಿಬಿಟ್ಟಲೋ ಕಾಣೆ. ಜಾತ್ರೆ ಮುಗಿಯೋಗಂಟ ಅದೇ ಊರಾಗಿದ್ದು ಎಲ್ಲಾ ಕಡೆ ಹುಡುಕಾಡ್ದು. ಎಲ್ಲೂ ಸಿಗಲಿಲ್ಲ. ಸಿವಾ ಎಲ್ಲಾದ್ರೂ ಮಗೀನಾ ಚೆನ್ನಾಗಿಟ್ಟಿರ್ಲಿಂತ ನನ್ನಪ್ಪಾ ಅಂತ ಆ ಮಾದೇಶ್ವರನಿಗೆ ಕೈ ಮುಗಿದು ನಮ್ಮೂರಿಗೆ ನಾವು ವಾಪಸ್ಸು ಓದೋ! ಅಲ್ಲಿಂದ ನೋಡಿ ಅಪ್ಪಾ ಉಣಕ್ಕೂತ್ರೆ ಊಟ ಸೇರಕ್ಕಿಲ್ಲಾ ಕಣ್ಮುಚ್ಚಿದರೆ ನಿದ್ದೆ ಬರಕ್ಕಿಲ್ಲ. ಗೌರಿ ಗೌರಿ. ಇವತ್ತು ಆ ದೇವಾ ನಮ್ಮೆಲೆ ಕರುಣೆ ತೋರಿಸ್ದಾ, ಸಿವಾ ನನ್ನ ಮಗೀನಾ ಚಂದಾಗಿಟ್ಟಿರ್ಲಿ” ಎಂದು ಹೇಳಿ ಶ್ವೇತಾಳನ್ನು ನೋಡಲು ಮನೆಯ ಒಳಗೆ ಬಂದಳು. ಶ್ವೇತಾ ಇವಳ ಮಾತನ್ನೆಲ್ಲಾ ಮೌನವಾಗಿ ಕೇಳುತ್ತಾ ಸೋಫಾದ ಮೇಲೆ ಒರಗಿದ್ದವಳು, ನಿಧಾನವಾಗಿ ಎದ್ದು ಆ ಹೆಂಗಸಿನ ಕಡೆ ತಿರುಗಿ ‘ಅಮ್ಮಾ’ ಎಂದಳು. ತಲೆ ಸಿಡಿಯುವಂತೆ ವಿಪರೀತ ನೋವಾಯಿತು. ಮೂರ್ಛೆ ಹೋದಳು. ಪ್ರದೀಪ ಅವಳನ್ನು ಸೋಫಾದ ಮೇಲೆ ಮಲಗಿಸಿ, ಅವಳ ಹಣೆಗೆ ನೀರು ಚುಮುಕಿಸಿ, ಅವಳಿಗೆ ಪ್ರಜ್ಞೆ ತರಲು ಯತ್ನಿಸುತ್ತಿದ್ದ. ತಾಯಿಯವರು ಆ ಹೆಂಗಸನ್ನು ಗದರಿಸಿ “ಇಲ್ಲದ್ದನ್ನೆಲ್ಲಾ ಹೇಳಿ ಅವಳ ತಲೆ ಕೆಡಿಸಬೇಡ ಹೋಗಾಚೆ.. ಮೊದಲೇ ಅವಳು ಬಸರಿ ಹುಡುಗಿ. ಹೋಗಾಚೆ….”

ಅಷ್ಟರಲ್ಲಿ ಕಣ್ತೆರೆದ ಶ್ವೇತಾ, ಅಮ್ಮಾ ಅಮ್ಮಾ.. ಎಂದು ಕನವರಿಸತೊಡಗಿದಳು. ಹೊರಗೆ ಹೆತ್ತ ತಾಯಿ ಮಗಳಿಗಾಗಿ ಹಂಬಲಿಸತೊಡಗಿದಳು. ಕರುಳ ಸಂಬಂಧ ಒಬ್ಬರಿಗೊಬ್ಬರ ಸೆಳೆಯಲು ಯತ್ನಿಸುತ್ತಿತ್ತು. ಶ್ರೀನಿವಾಸರಾಯರು ಮತ್ತು ಪದ್ಮಾವತಮ್ಮನವರು ಹೇಗೋ ಮಾಡಿ ಆ ಭಿಕ್ಷುಕದಂಪತಿಗಳನ್ನು ಮನೆಯಿಂದ ದೂರ ಕಳಿಸಿಬಂದರು. ಪದ್ಮಾವತಮ್ಮನವರು ಸೊಸೆಯನ್ನು ನೋಡಲು ಮನೆಗೆ ಹೋದರು. ರಾಯರು ಮೆಲುದನಿಯಲ್ಲಿ ಅವರಿಗೆ ಒಂದು ಮಾತನ್ನು ಹೇಳಿದರು. “ನೋಡಿ ತಾಯಿ ಒಂದು ಸಮಯ ಅವಳು ನಿಮ್ಮ ಮಗಳು ಗೌರೀನೇ ಅಂತ ಒಪ್ಪಿಕೊಳ್ಳೋಣ. ಈಗ ನೀವೇನು ಮಾಡ್ತೀರಿ? ಅವಳನ್ನು ಕರೆದುಕೊಂಡು ನಿಮ್ಮ ಜೊತೆ ಭಿಕ್ಷೆ ಬೇಡಕ್ಕೆ ಹಚ್ತೀರಾ? ಅವಳೀಗೆ ಶ್ವೇತಾ ಅನ್ನೋ ಹೆಸರಿನಿಂದ, ದೊಡ್ಡ ಮನುಷ್ಯರ ಮನೆಯ ಸೊಸೆಯಾಗಿ ಏಳು ತಿಂಗಳ ಬಸುರಿ ಬೇರೆ. ಹೀಗಿರುವಾಗ ನೀವು ಬಂದು, ಅವಳು ಶ್ವೇತಾ ಅಲ್ಲ ಗೌರಿ ಅಂದ್ರೆ ಯಾರು ಒಪ್ತಾರೆ? ಮೈಸೂರಲ್ಲಿರೋ ಅವಳ ತಂದೆ ತಾಯಿ ಒಪ್ತಾರಾ? ಇದಕ್ಕೂ ಮೇಲೆ ನೀವು ಗಲಾಟೆ ಮಾಡಿದರೆ ನಾವೇನು ಮಾಡಕ್ಕಾಗತ್ತೆ? ಹೇಳಿ, ಏಳು ತಿಂಗಳ ಬಸುರಿ ಸೊಸೆನ ನಿಮ್ಮ ಜೊತೆ ಭಿಕ್ಷಕ್ಕೆ ಕಳಿಸಬೇಕಾ? ಅಥವಾ ನಿಮ್ಮನ್ನ ಪೊಲೀಸರಿಗೆ ಹಿಡಿದುಕೊಟ್ಟು ಜೈಲಿಗೆ ಕಳಿಸಬೇಕಾ? ಸರಿ ಸುಮ್ಮನೆ ಹೋಗಿ” ಎಂದು ಮನೆಯ ಕಡೆ ಹೆಜ್ಜೆ ಹಾಕಿದರು. ಆ ಭಿಕ್ಷುಕರ ಮಗು ಇವರ ಮನೆಯ ಮುಂದೆ ಬಿದ್ದಿದ್ದ ಚಪಾತಿಯನ್ನು ಹೆಕ್ಕಿ ಹೆಕ್ಕಿ ತಿನ್ನತೊಡಗಿತ್ತು!

ಶ್ವೇತಾ ಸ್ವಲ್ಪವೂ ಮಾತನಾಡದೇ ಬಿಟ್ಟ ಕಣ್ಣು ಬಿಟ್ಟಂತೆ ಎಲ್ಲಿಯೋ ನೋಡುತ್ತಾ ಸೋಫಾದ ಮೇಲೆ ಒರಗಿ ಕುಳಿತಿದ್ದಳು. ಪ್ರದೀಪ ಹೇಳಿದ “ಶ್ವೇತಾ, ಏಳು ಡ್ರೆಸ್ ಮಾಡಿಕೋ, ಡಾಕ್ಟರ್ ಹತ್ತಿರ ಹೋಗಿ ಬರೋಣ” ಎಂದ. ಅವಳು ಏಳಲೂ ಇಲ್ಲ. ಮಾತು ಆಡಲಿಲ್ಲ. ಪ್ರದೀಪನೇ ಅವಳನ್ನು ಕೈಹಿಡಿದು ರೂಮಿಗೆ ಕರೆದುಕೊಂಡುಹೋಗಿ, ಒಂದು ಡ್ರೆಸ್ ಕೊಟ್ಟು ಹಾಕಿಕೋ ಎಂದ. ಅವಳು ಬಟ್ಟೆ ಬದಲಿಸಲಿಲ್ಲ. ಅವಳ ಬಟ್ಟೆ ಬಿಚ್ಚಿ, ಡ್ರೆಸ್ ತೊಡಿಸಿದ. ಕಾರಿನಲ್ಲಿ ಕೂರಿಸಿದ. ತಂದೆ ತಾಯಿ ಕೂಡಾ ಅವನ ಜೊತೆಗೆ ಹೊರಟರು. ಶ್ವೇತಾಳನ್ನು ನಿಯಮಿತವಾಗಿ ಪರೀಕ್ಷಿಸುತ್ತಿದ್ದ ಡಾ| ಚಿತ್ರಾ ಗೋಪಾಲ್‌ರವರ ಬಳಿಗೆ ಅವರು ಶ್ವೇತಾಳನ್ನು ಪರೀಕ್ಷಿಸಿ “ಹೇಗಿದ್ದೀರಾ ಎಂದು ಕೇಳಿದರು. ಅವಳಿಂದ ಯಾವ ಉತ್ತರವಿಲ್ಲ. ಅವಳ ಹೊಟ್ಟೆ ಪರೀಕ್ಷಿಸಿದರು. ಅವಳ ಗರ್ಭಕ್ಕಾಗಲಿ, ಗರ್ಭದೊಳಗೆ ಬೆಳೆಯುತ್ತಿರುವ ಮಗುವಿಗಾಗಲೀ ಯಾವುದೇ ತೊಂದರೆಯಾಗಿರಲಿಲ್ಲ. ಸರಿ, ನೋಡೋಣವೆಂದು ಅವಳನ್ನು ಎಕ್ಸಾಮಿನೇಷನ್ ಟೇಬಲ್ ಮೇಲೆ ಮಲಗಿಸಿ, ಅವಳಿಗೆ ಏನಾದರೂ ಆಘಾತವಾಗುವ ಘಟನೆ ನಡೆಯಿತೇ? ಎಂದು ವಿಚಾರಿಸಿದರು. ಶ್ವೇತಾ ಅನಾಥಾಶ್ರಾಮದಿಂದ ಬಂದ ಹುಡುಗಿ ಎಂಬ ವಿಷಯವನ್ನು ಇಲ್ಲಿಯವರೆಗೆ ಡಾಕ್ಟರ್‌ರ ಮುಂದೆ ಹೇಳಿರಲಿಲ್ಲ. ಇವರುಗಳು ಮೈಸೂರಿನ ಅನಾಥಾಶ್ರಮದಲ್ಲಿ ಇವಳನ್ನು ನೋಡಿ ಮದುವೆ ಮಾಡಿಕೊಂಡು ಕರೆತಂದರಿಂದ ಆರಂಭಿಸಿ ಈ ದಿನ ಬೆಳಿಗ್ಗೆ ಆ ಭಿಕ್ಷುಕರು ಬಂದು ಇವಳು ನಮ್ಮ ಮಗಳು `ಗೌರಿ’ ಎಂದು ಹೇಳಿದಾಗ ಇವಳು ಮೂರ್ಛೆ ಹೋದವರೆಗೆ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಿದರು. ಡಾ ಚಿತ್ರಾರವರು ಒಂದು ಸಲಹೆ ಕೊಟ್ಟರು. “ನೋಡಿ ಇವಳು ಯಾವುದೋ ದೊಡ್ಡ ಶಾಕ್‌ಗೆ ಒಳಗಾಗಿದ್ದಾಳೆ. ನನ್ನ ಮಟ್ಟಿಗೆ ಹೇಳುವುದಾದರೆ, ಇವಳ ಗರ್ಭಕ್ಕಾಗಲಿ, ಮಗುವಿಗಾಗಲಿ ಯಾವ ಪ್ರಾಬ್ಲಂ ಇಲ್ಲ. ಇವಳನ್ನು ಹತ್ತಿರದ ಯಾವುದಾದರೂ ನರ್ಸಿಂಗ್ ಹೋಂಗೆ ಆಡ್ಮಿಟ್ ಮಾಡಿ, ನನ್ನ ಕ್ಲಾಸ್‌ಮೇಟ್ ಒಬ್ಬರು ಡಾ॥ ರವಿಕುಮಾರ್‌ ಅಂತಿದ್ದಾರೆ. ಅವರು ಸೈಕಿಯಾಟ್ರಿಸ್ಟ್ ಅವರನ್ನು ಕರೆಸಿ ತೋರಿಸೋಣ. ಅವರು ಮುಂದಿನ ಟ್ರೇಟ್‌ಮೆಂಟ್ ಏನು ಮಾಡಬೇಕೋ ಮಾಡ್ತಾರೆ’ ಎಂದರು. ಅದೇ ಪ್ರಕಾರ ಶ್ವೇತಾಳನ್ನು ಹತ್ತಿರದಲ್ಲಿದ್ದ ಉಷಾಕಿರಣ್ ನರ್ಸಿಂಗ್ ಹೋಂಗೆ ಅಡ್ಮಿಟ್ ಮಾಡಿದರು. ಡಾ|| ಚಿತ್ರಾ ಮತ್ತು ಡಾ| ರವಿಕುಮಾರ್ ಇಬ್ಬರೂ ಬಂದು ಇವಳ ಬಗ್ಗೆ ವಿವರವಾದ ಪರೀಕ್ಷೆಗಳನ್ನು ಮಾಡಿ, ಇಂಜೆಕ್ಷನ್ ಕೊಟ್ಟು, ಮತ್ತೆ ರಾತ್ರಿ ಬಂದು ನೋಡುವುದಾಗಿ ಹೇಳಿ ಹೋದರು. ಶ್ವೇತಾ ನಿದ್ರೆಗೆ ಜಾರಿದಳು. ಪ್ರದೀಪ, ನಾನು ಇವಳನ್ನು ನೋಡಿಕೊಳ್ಳುತ್ತೇನೆ, ನೀವಿಬ್ಬರೂ ಮನೆಗೆ ಹೋಗಿ ಸ್ನಾನಮಾಡಿ, ಊಟ ಮಾಡಿ ಬನ್ನಿರಿ ಎಂದನು. ಅದೇ ರೀತಿ ಅವರಿಬ್ಬರೂ ಮನೆಗೆ ಹೊರಟರು. ಸಂಜೆ ನಾಲ್ಕೂವರೆಯ ವೇಳೆಗೆ ಶ್ವೇತಾಳಿಗೆ ಎಚ್ಚರವಾಯಿತು. ನಿಧಾನವಾಗಿ ಎದ್ದು ಕುಳಿತಳು. ಪ್ರದೀಪನನ್ನು ನೋಡಿ ಮುಗಳು ನಕ್ಕಳು. ನೀರು ಬೇಕು ಎಂದು ಕೇಳಿದಳು. ಪ್ರದೀಪ ನೀರು ತಂದುಕೊಟ್ಟ. ನೀರು ಕುಡಿದು, ತಾನೇ ಎದ್ದು ಶೌಚಾಲಯಕ್ಕೆ ಹೋಗಿ ಬಂದಳು. ನಂತರ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು, ಪ್ರದೀಪನೇ ಕೇಳಿದ, ‘ಹಸಿವಾಗ್ತಾ ಇದ್ಯಾ? ಏನಾದರೂ ತಿಂತೀಯಾ?’ “ಹುಂ” ಎಂದು ತಲೆಯಾಡಿಸಿದಳು. ಕೂಡಲೇ ಕ್ಯಾಂಟಿನ್‌ಗೆ ಫೋನ್ ಮಾಡಿ ದೋಸೆ ತರಿಸಿದ. ಬೆಳಗಿನಿಂದ ಅವನೂ ಕೂಡಾ ಏನೂ ತಿಂದಿರಲಿಲ್ಲ. ಅವನೂ ಕೂಡಾ ದೋಸೆ ತರಿಸಿಕೊಂಡು ತಿಂದನು. ಇಬ್ಬರೂ ತಿಂಡಿ ತಿಂದು, ಕಾಫಿ ಕುಡಿದು ಸ್ವಲ್ಪ ಸುಧಾರಿಸಿಕೊಂಡರು. ಪ್ರದೀಪ ಅವಳ ಹಿಡಿದು “ಈಗ ಆರಾಮಾಗಿದಿಯಾ ತಾನೇ? ಹುಂ.. ಬೆಳಗ್ಗೆ ಎಷ್ಟು ಹೆದರಿಸಿ ಬಿಟ್ಟೆ ಶ್ವೇತಾ. ಇರು ಅಮ್ಮ ಅಪ್ಪಂಗೆ ಫೋನ್ ಮಾಡಿ ತಿಳಿಸಿಬಿಡ್ತೀನಿ, ಪಾಪ ಅವರೆಷ್ಟು ಗಾಬರಿ ಮಾಡಿಕೊಂಡಿದ್ದಾರೋ ಏನೋ” ಎಂದು ಅವರಿಗೆ ಫೋನ್ ಮಾಡಿ ತಿಳಿಸಿದ. ಬೆಳಗ್ಗೆ ಏನಾಯಿತೆಂದು ಅವಳೂ ಕೇಳಲಿಲ್ಲ. ಇವನೂ ಹೇಳಲಿಲ್ಲ. ಸಂಜೆ ಹಿರಿಯರು ಬಂದು ಶ್ವೇತಾಳನ್ನು ಮಾತನಾಡಿಸಿ ಹೋದರು. ಡಾ| ಚಿತ್ರಾರವರು ಬಂದು ಮತ್ತೊಮ್ಮೆ ಚೆಕ್ ಮಾಡಿದರು. ಎಲ್ಲಾ ಸರಿಯಾಗಿದೆ. ಒಂದ್ಸಲ ಡಾ||ರವಿಕುಮಾರ್ ಬಂದು ನೋಡಿ ತಮ್ಮ ಟ್ರೀಟ್‌ಮೆಂಟ್ ಶುರು ಮಾಡಲಿ, ನಾಳೆ ಬೆಳಗ್ಗೇನೇ ಮನೆಗೆ ಕಳಿಸೋಣ. ಶಿ ಈಸ್ ಫೈನ್” ಎಂದು ಅವಳ ಬೆನ್ನು ತಟ್ಟಿ ಹೋದರು. ರಾತ್ರಿ ಎಂಟು ಗಂಟೆಗೆ ಡಾ|| ರವಿಕುಮಾರ್ ಬಂದು ಒಂದಷ್ಟು ಪ್ರಶ್ನೆ ಕೇಳಿ, ಚೆಕ್ ಮಾಡಿ, ರಾತ್ರಿ ಊಟ ಆದ ಮೇಲೆ ಇಂಜೆಕ್ಷನ್ ಕೊಡುವಂತೆ ಆಸ್ಪತ್ರೆಯ ವೈದ್ಯರಿಗೆ ಹೇಳಿ, ಹೊರಟರು. ಶ್ವೇತಾ ರಾತ್ರಿ ಯಾವ ಸಮಸ್ಯೆ ಇಲ್ಲದೆ ಆರಾಮವಾಗಿ ನಿದ್ರಿಸಿದಳು. ಮರುದಿನ ಬೆಳಗ್ಗೆ ಡಾಕ್ಟರು ಬಂದು ಮನೆಗೆ ಹೋಗಬಹುದು ಎಂದರು. ಸದ್ಯ ಇಷ್ಟರಲ್ಲಿ ಮುಗಿಯಿತಲ್ಲ ಎಂದು ಮನೆಯವರೆಲ್ಲಾ ನಿಟ್ಟುಸಿರು ಬಿಟ್ಟರು.

ಎರಡುದಿನಗಳ ಬಳಿಕ ಬೆಳಗ್ಗೆ ಸ್ನಾನ ಮಾಡಿ ತಿಂಡಿ ತಿನ್ನುತ್ತಿದ್ದ ಶ್ವೇತಾ ತಾನು ತಿಂಡಿ ತಿನ್ನುತ್ತಿದ್ದ ತಟ್ಟೆಯ ಸಮೇತ ಮನೆ ಹೊರಗೆ ಓಡಿದಳು. ಅಮ್ಮ ತಿಂಡಿ ತಗೋ, ಅಪ್ಪಾ ತಿಂಡಿ ತಗೋ… ರಾಜೂ ತಿಂಡಿ ತಗೋ ಎಂದು ಕಿರುಚುತ್ತಾ ಕುಸಿದುಬಿದ್ದಳು. ಮತ್ತದೇ ಕಥೆ ಮರುಕಳಿಸಿತ್ತು. ಈ ಸಲ ಡಾ|| ರವಿಕುಮಾರರು ಇವಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬನ್ನಿ ನನ್ನ ಗೆಳೆಯ ಡಾ|| ವೆಂಕಟೇಶ್ ಅಂತ ನ್ಯೂರಾಲಜಿಸ್ಟ್ ಇದಾನೆ. ಈ ಕೇಸಲ್ಲಿ ಸಕ್ಯಾಟ್ರಿಸ್ಟ್, ನ್ಯೂರಾಲಜಿಸ್ಟ್, ಸೈಕಾಲಿಜಿಸ್ಟ್ ಎಲ್ಲದೂ ಸೇರಿ ಕೆಲಸ ಮಾಡಬೇಕಾಗಿದೆ ಎಂದರು. ಬೇರೆ ದಾರಿ ಇಲ್ಲದೆ ಶ್ವೇತಾಳನ್ನು ನಿಮ್ಹಾನ್ಸ್‌ಗೆ ಸೇರಿಸಿದರು. ಡಾ|| ವೆಂಕಟೇಶ್ ಬಹಳ ಹೆಸರುವಾಸಿಯಾದ ನ್ಯೂರಾಲಜಿಸ್ಟ್. ರವಿಕುಮಾರ್ ಕಡೆಯಿಂದ ಬಂದವರೆಂದೂ ಬಹಳ ಅಸ್ಥೆವಹಿಸಿ ಅವಳ ಟ್ರೀಟ್‌ಮೆಂಟ್ ಆರಂಭಿಸಿದರು. ಆದರೆ ಒಂದು ಮಾತ್ರ ಹೇಳಿದರು. “ಇವಳು ತುಂಬು ಗರ್ಭಿಣಿಯಾದುದರಿಂದ ಇವಳಿಗೆ ತನ್ನ ಹಳೆಯ ಜೀವನದ ಯಾವುದೇ ವಿಷಯ ತಿಳಿಯದಂತೆ ನೋಡಿಕೊಳ್ಳಿ, ನಾವು ಇವಳ ಪ್ರಸ್ತುತ ಜೀವನವೇ ನಿಜ. ಮಿಕ್ಕಿದ್ದೆಲ್ಲಾ ಕನಸು ಎಂಬಂತೆ ಅವಳ ಮನಃಸ್ಥಿತಿಯನ್ನು ತಯಾರು ಮಾಡುತ್ತೇವೆ. ಒಮ್ಮೆ ಇವಳು ನಾರ್ಮಲ್ ಹುಡುಗಿಯಾಗಿ, ಇವಳ ಹೆರಿಗೆ ಆದಮೇಲೆ ಇವಳಿಗೆ ನಿಜಸ್ಥಿತಿ ತಿಳಿದರೂ ಪರವಾಗಿಲ್ಲ. ಏನೂ ತೊಂದರೆಯಿಲ್ಲ” ಎಂದರು. ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ವೈದ್ಯರ ಸಲಹೆಯಂತೆ ಅವಳಿಗೆ ತನ್ನ ಮದುವೆಯ ಆಲ್ಬಂ ಮತ್ತು ವಿಡಿಯೋ ಚಿತ್ರ ತೋರಿಸಿದರು. ನಿನಗೆ ಆಸೆಯಾದರೆ ಒಂದೆರಡು ದಿನಗಳ ಮಟ್ಟಿಗೆ ಮೈಸೂರಿಗೆ ಹೋಗಿ, ನಿನ್ನ ಆಶ್ರಮ, ನಿನ್ನ ಗೆಳತಿಯರು, ಕೃಷ್ಣಮೂರ್ತಿ ಅಂಕಲ್ ಎಲ್ಲರನ್ನೂ ನೋಡಿ ಬರೋಣ ಬಾ ಎಂದು ಮನೆಯ ನಾಲ್ಕು ಜನ ಮೈಸೂರಿಗೆ ಹೋದರು. ಶ್ವೇತಾ ಆಶ್ರಮದ ತನ್ನ ಗೆಳೆಯ ಗೆಳತಿಯನ್ನು ನೋಡಿ ಬಹಳ ಆನಂದ ಪಟ್ಟಳು. ಪ್ರದೀಪ ಆಶ್ರಮದ ಎಲ್ಲಾ ಮಕ್ಕಳಿಗೂ ಸಿಹಿ ತಿಂಡಿ ಮತ್ತು ಸಮೋಶ ತರಿಸಿಕೊಟ್ಟ, ಸುಚರಿತಾ ಮೇಡಂರವರಿಗೆ ರೇಷ್ಮೆಸೀರೆ ಮತ್ತು ಹೂವು ಹಣ್ಣುಗಳನ್ನು ಕೊಟ್ಟು ಇಬ್ಬರೂ ನಮಸ್ಕರಿಸಿದರು. ಅವರೂ ಮನಃಪೂರ್ವಕವಾಗಿ ಹರಸಿದರು. ಅಲ್ಲಿಂದ ನೇರವಾಗಿ ಕೃಷ್ಣಮೂರ್ತಿಗಳ ಮನೆಗೆ ಹೋದರು. ಅವರು ಬಹಳ ಸಂತೋಷಪಟ್ಟು ಎರಡು ದಿನ ಇಲ್ಲಿಯೇ ಇರಿ. ಶ್ವೇತಾಳಿಗೆ ಒಂದು ಹೂಮುಡಿಸುವ ಹಾಗೂ ಬೆಳೆ ತೊಡಿಸುವ ಶಾಸ್ತ್ರ ಮಾಡೋಣ ಎಂದರು. ಎಲ್ಲರೂ ಸಂತೋಷದಿಂದ ಒಪ್ಪಿದರು. ಪ್ರದೀಪ ಶ್ವೇತಾಳನ್ನು ಕರೆದುಕೊಂಡು, ಅರಮನೆ ಮತ್ತು ಕೆ.ಆರ್.ಎಸ್. ತೋರಿಸಿಕೊಂಡು ಬರುವುದಾಗಿ ಹೊರಟ. ಆ ಸಮಯದಲ್ಲಿ ಶ್ರೀನಿವಾಸರಾಯರು ವಿಷಯ ಪ್ರಸ್ತಾಪಮಾಡಿ, ಶ್ವೇತಾಳ ತಂದೆ ತಾಯಿ ಎಂದು ಹೇಳಿಕೊಂಡು ಬಂದ ಭಿಕ್ಷುಕರ ಬಗ್ಗೆ ಹೇಳಿದರು. ಆದರಿಂದ ಶ್ವೇತಾಳ ಆರೋಗ್ಯದ ಮೇಲಾದ ಪರಿಣಾಮ, ಮುಖ್ಯವಾಗಿ ಅವಳ ಮೆದುಳಿನ ಮೇಲಾದ ಶಾಕ್, ಇವರುಗಳು ಅವಳನ್ನು ವಿವಿಧ ಆಸ್ಪತ್ರೆಗಳಲ್ಲಿ ಸೇರಿಸಿ ಚಿಕಿತ್ಸೆ ಕೊಡಿಸಿದ ವಿಷಯ ಎಲ್ಲವನ್ನು ವಿವರವಾಗಿ ತಿಳಿಸಿದರು. ತುಂಬು ಗರ್ಭಿಣಿಯಾಗಿರುವ ಈ ಹುಡುಗಿಗೆ ಮನಸ್ಸಿನ ಮೇಲಾದ ಆಘಾತ ಮತ್ತು ಅದರಿಂದ ಆಗಬಹುದಾದ ಯಾವುದೇ ಸಮಸ್ಯೆಯ ಬಗ್ಗೆ ತಮ್ಮ ಚಿಂತೆಯನ್ನು ವ್ಯಕ್ತಪಡಿಸಿದರು. ಕೃಷ್ಣಮೂರ್ತಿಯವರು ಎಲ್ಲಾ ವಿಷಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಪರಾಂಬರಿಸಿ ಕೊನೆಯದಾಗಿ ತಮ್ಮ ನಿರ್ಣಯ ತಿಳಿಸಿದರು.

ಶ್ವೇತಾಳಿಗೆ, ಅವಳು ಅನಾಥಶ್ರಮ ಹುಡುಗಿ, ನಾವು ಅವಳನ್ನು ದತ್ತು ಸ್ವೀಕಾರ ತೆಗೆದುಕೊಂಡು ಕನ್ಯಾದಾನ ಮಾಡಿಕೊಟ್ಟ ವಿಷಯ ತಿಳಿದಿದೆ. ಅದೆಲ್ಲಾ ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ರಿಜಿಸ್ಟರ್ ಕೂಡ ಆಗಿದೆ. ಹಾಗಾಗಿ ಆ ಭಿಕ್ಷುಕರು ಬಂದು ಕೇಳಿದರೆ, ಶ್ವೇತಾಳ ತಂದೆ ತಾಯಿ ಮೈಸೂರಿನಲ್ಲಿದಾರೆ, ಅವಳು ಗೌರಿ ಅಲ್ಲ ಶ್ವೇತಾ. ಮಗಳನ್ನು ಕಳೆದುಕೊಂಡ ನಿಮಗೆ ನಿಮ್ಮ ಮಗಳಂತೆಯೇ ಇರುವ ಶ್ವೇತಾ, ನಿಮ್ಮ ಮಗಳು ಗೌರಿಯ ಹಾಗೆ ಕಂಡಿರಬೇಕು. ಇವಳು ಗೌರಿ ಅಲ್ಲ ಶ್ವೇತಾ. ಇನ್ನು ನೀವುಗಳು ಮತ್ತೆಂದೂ ಬರಬೇಡಿ ಅಂತ ಹೇಳಿ, ಒಂದೋ ಎರಡೋ ಸಾವಿರ ರೂಪಾಯಿ ಹಣ ಕೊಟ್ಟು ಕಳಿಸಿ, ಮತ್ತೂ ಬಂದು ಪೀಡಿಸಿದರೆ ಪೊಲೀಸರಿಗೆ ಒಪ್ಪಿಸ್ತೀವಿ ಅಂತ ಹೆದರಿಸಿ, ಸುಮ್ನೆ ಹೋಗ್ತಾರೆ ಎಂದರು. ಹಾಗೆಯೇ ಆಗಲಿ ಎಂದು ಎಲ್ಲರೂ ನಿಶ್ಚಿಂತರಾದರು. ಮರುದಿನ ಶ್ವೇತಾಳಿಗೆ ಬಳೆತೊಡಿಸುವ ಶಾಸ್ತ್ರ ಮಾಡಿದರು. ಅದಾದ ಮರುದಿನ ಬೆಂಗಳೂರಿಗೆ ಹೊರಡುವುದು ಎಂದು ನಿರ್ಧರಿಸಿದರು. ಆಗ ಶ್ವೇತಾ ಒಂದು ಮಾತು ಹೇಳಿದಳು. “ನಾನು ಈ ಆಶ್ರಮಕ್ಕೆ ಬರುವುದಕ್ಕೆ ಮುಂಚೆ ಮೆಂಟ್‌ಗಳ್ಳಿಯ ಒಂದು ಅನಾಥಶ್ರಮದಲ್ಲಿದ್ದೆ. ಅಲ್ಲಿ ನಾಗಮ್ಮ ಮೇಡಂ ಅಂತ ಒಬ್ಬ ಮೇಡಂ ಇದ್ದರು. ಅವರನ್ನು ಸ್ವಲ್ಪ ನೋಡಬೇಕಿತ್ತು” ಎಂದಳು. ಎಲ್ಲರಿಗೂ ಆಶ್ಚರ್ಯವಾಯಿತು. ಸರಿ ನಾಳೆ ಹೋಗಿ ಬರೋಣ ಎಂದು ಆ ರಾತ್ರಿ ಎಲ್ಲರೂ ವಿಶ್ರಮಿಸಿದರು. ಮರುದಿನ ಎಲ್ಲರೂ ಮೇಟಗಳ್ಳಿಯ ಆಶ್ರಮಕ್ಕೆ ಹೋದರು. ನಾಗಮ್ಮ ಮೇಡಂ ನಿವೃತ್ತರಾಗಿ ಮನೆಯಲ್ಲಿದ್ದರು. ಅವರ ಜಾಗದಲ್ಲಿ ಸರಸಿಜಾ ಎಂಬ ಹೊಸ ಮೇಡಂ ಬಂದಿದ್ದರು. ಅವರೂ ಕೂಡಾ ಶ್ವೇತಾಳನ್ನು ಪ್ರೀತಿಯಿಂದ ಮಾತನಾಡಿಸಿದರು. ಶ್ವೇತಾ ನಾಗಮ್ಮ ಮೇಡಂ ಅವರನ್ನು ನೋಡಬೇಕಿತ್ತು ಎಂದಳು. ಇಲ್ಲೇ ಹತ್ತಿರದಲ್ಲಿದ್ದಾರೆ. ಹುಡುಗರನ್ನು ಕಳಿಸುತ್ತೇನೆ. ಕರೆದುಕೊಂಡು ಬರುತ್ತಾರೆ’ ಎಂದರು. ಇಲ್ಲ ನಾವೇ ಹೋಗಿ ಕರೆದುಕೊಂಡು ಬರುತ್ತೇವೆ ಎಂದು ಇಬ್ಬರು ಹುಡುಗರನ್ನು ಇವರ ಕಾರಿನಲ್ಲಿಯೇ ನಾಗಮ್ಮ ಮೇಡಂ ಮನೆಗೆ ಹೋದರು. ಶ್ವೇತಾ, ಅವರಿಗೆ ನಮಸ್ಕಾರ ಮಾಡಿ, ತನ್ನ ಪರಿಚಯ ಹೇಳಿಕೊಂಡಳು. ನಂತರ ನೇರವಾಗಿ ವಿಷಯಕ್ಕೆ ಬಂದಳು.

“ಮೇಡಂ, ನಾನು ಈ ಆಶ್ರಮಕ್ಕೆ ಹೇಗೆ ಬಂದೆ. ನನ್ನನ್ನು ಯಾರು ಕರೆದುಕೊಂಡು ಬಂದು ಸೇರಿಸಿದರು? ನನ್ನ ಹೆಸರೇನು? ನನ್ನ ತಂದೆ ತಾಯಿಯರ ಹೆಸರೇನು? ಏನಾದರೂ ವಿವರಗಳಿವೆಯೇ?” ನಾಗಮ್ಮನವರು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು. “ನನಗೆ ಎಲ್ಲಾ ವಿಷಯಗಳು ನೆನಪಿಲ್ಲ. ಈಗಲೇ ಆಶ್ರಮಕ್ಕೆ ಹೋಗೋಣ, ನಿನ್ನ ಫೈಲ್ ತೆಗೆದು ನೋಡೋಣ. ಎಲ್ಲಾ ವಿವರಗಳು ಸಿಗುತ್ತವೆ. ಆದರೆ ಒಂದಂತೂ ನೆನಪಿದೆ. ನೀನು ಬೆಳ್ಳಗೆ, ತೆಳ್ಳಗೆ, ಸುಂದರವಾಗಿದ್ದೆ ಅಂತ ನಾನೇ ನಿನಗೆ ಶ್ವೇತಾ ಅಂತ ಹೆಸರಿಟ್ಟೆ, ಈಗ ಮದುವೆ ಆಗಿ ಚೆನ್ನಾಗಿದೀಯಾ, ಗರ್ಭಿಣಿಯೂ ಆಗಿದಿಯಾ. ದೇವರು ನಿನ್ನನ್ನು ಚೆನ್ನಾಗಿಡಲಮ್ಮ” ಎಂದರು. ಅಲ್ಲಿಂದ ಎಲ್ಲರೂ ಆಶ್ರಮಕ್ಕೆ ಹೋಗಿ, ಅವಳ ಫೈಲ್ ತೆಗೆಸಿ ನೋಡಿದರು. ಅದರಲ್ಲಿ ದೊರೆತ ವಿವರಗಳ ಪ್ರಕಾರ, ಇವಳನ್ನು ಪೊಲೀಸರು ತಂದು ಸೇರಿಸಿದ್ದರು. ಹೆಸರು ಗೊತ್ತಿಲ್ಲ! ತಂದೆ ತಾಯಿ ಗೊತ್ತಿಲ್ಲ. ಮಗು ಸಿಕ್ಕ ಸ್ಥಳ ಮಹದೇಶ್ವರ ಬೆಟ್ಟ ಎಂದಿತ್ತು. ಶ್ವೇತಾ ಮುಗಳು ನಕ್ಕಳು. ನಾಗಮ್ಮ ಮೇಡಂಗೆ ವಂದನೆಗಳನ್ನು ಹೇಳಿ, ಅವರನ್ನು ಮನೆತಲುಪಿಸಿ, ಹೊರಟರು. ಶ್ವೇತಾ ಬಹಳ ಗೆಲುವಾಗಿದ್ದಳು. ಮನೆ ತಲುಪಿ, ಬಟ್ಟೆ ಬದಲಾಯಿಸಿ ಊಟಕ್ಕೆ ಕುಳಿತರು. ಊಟ ಆದ ಮೇಲೆ, ಸ್ವಲ್ಪ ಹೊತ್ತು ವಿಶ್ರಾಂತಿ ಮಾಡ್ತೀಯಾ? ಇಲ್ಲ ಬೆಂಗಳೂರಿಗೆ ಹೊರಡೋಣವಾ? ಎಂದು ಶ್ವೇತಾಳನ್ನು ಪ್ರದೀಪ ಕೇಳಿದ. ಅವಳು ಹೇಳುವುದೋ ಬೇಡವೋ ಎಂದು ಒಂದು ಕ್ಷಣ ಯೋಚಿಸಿ, ಮಾತನಾಡಲು ಶುರು ಮಾಡಿದಳು.

ದೊಡ್ಡದಾದ ತನ್ನ ಸಮಸ್ಯೆಯನ್ನು ತಾನೇ ಪರಿಹರಿಸಿದ್ದಳು. “ಆ ದಿನ ಬೆಂಗಳೂರಿನಲ್ಲಿ ನಮ್ಮ ಮನೆಯ ಮುಂದೆ ಭಿಕ್ಷೆ ಬೇಡಲು ಬಂದಿದ್ದಾರಲ್ಲಾ ಅವರೇ ನನ್ನ ಹೆತ್ತ ತಂದೆತಾಯಿಯರು! ಹಿಂದೆ ನನ್ನ ಹೆಸರು ಗೌರಿ ಅಂತ ಇತ್ತು. ನಾವು ತುಂಬಾ ಬಡತನದಲ್ಲಿದ್ವಿ, ತಮ್ಮನಿಗೆ ಕಣ್ಣಿಲ್ಲ. ಕಣ್ಣು ಬರಲಿ ಅಂತ ಅಮ್ಮ ಬೇಡಿಕೊಂಡಿದ್ದಳು. ಅದಕ್ಕೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ವಿ, ಅಲ್ಲಿ ನಾನು ಗುಂಪಿನಲ್ಲಿ ಕಳೆದುಹೋದೆ! ಹುಂ, ಎಲ್ಲಾ ಒಳ್ಳೇದೇ ಆಯ್ತು, ದೇವರಂತಹ ಗಂಡ, ಹೆತ್ತ ತಂದೆ ತಾಯಿಗಿಂತಾ ಪ್ರೀತಿಯಿಂದ ನನ್ನ ಮದುವೆ ಮಾಡಿಕೊಟ್ಟ ನೀವು, ಸ್ವಂತ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳಿರೋ ಅತ್ತೆ ಮಾವ ಎಲ್ಲಾ ಸಿಕ್ಕಿದಿರಿ” ಎಂದು ಹೇಳಿ ಅತ್ತೆಯವರ ತೊಡೆಯ ಮೇಲೆ ಮಲಗಿ ಆನಂದ ಬಾಷ್ಪ ಸುರಿಸಿದಳು.

ಕೃಷ್ಣಮೂರ್ತಿಯವರು ಕೇಳಿದರು. ಇದೆಲ್ಲಾ ನಿನಗೆ ಹೇಗಮ್ಮಾ ಗೊತ್ತಾಯ್ತು? ಶ್ವೇತಾ ನಗುನಗುತ್ತಲೇ ಉತ್ತರಿಸಿದಳು. ನಾನು ಮೆಂಟಲ್ ಶಾಕ್‌ಗೆ ಒಳಗಾಗಿ ನಿಮ್ಹಾನ್ಸ್‌ನಲ್ಲಿ ಟ್ರೇಟ್‌ಮೆಂಟ್ ತಗೋಳ್ತಾ ಇದ್ದಾಗ ಒಂದಿನ ನನ್ನನ್ನ ಸಂಮೋಹಿನಿಗೆ ಒಳಪಡಿಸಿ, ಪ್ರಶ್ನೆ ಕೇಳ್ತಾ ಬಂದ್ರು, ನಾನು ಮರೆತು ಹೋದದ್ದನ್ನೆಲ್ಲಾ ಜ್ಞಾಪಿಸಿಕೊಂಡು ಹೇಳ್ತಾ ಬಂದೆ. ಕೊನೆಗೆ ನನಗೆ ಸಂಪೂರ್ಣ ನೆನಪಿನ ಶಕ್ತಿ ಮರುಕಳಿಸಿದ ಮೇಲೆ ಒಂದು ಮಾತು ಹೇಳಿದ್ರು, ಈಗ ನೀನು ಗೌರಿ ಅಲ್ಲ ಶ್ವೇತಾ. ಈಗ ನೀನು ಬಡಹುಡುಗಿಯಲ್ಲ. ಶ್ರೀಮಂತರ ಮನೆಯ ಸೊಸೆ, ಈಗ ನಿನ್ನ ತಂದೆ ತಾಯಿಗಳು ಮೈಸೂರಿನ ಕೃಷ್ಣಮೂರ್ತಿ ದಂಪತಿಗಳು, ಆದುದರಿಂದ ಹಳೆಯದನ್ನು ಬಿಡು, ಹೊಸತನ್ನು ಒಪ್ಪಿಕೊಂಡು ಸುಖವಾಗಿರು ಎಂದರು. ನಾನು ಸರಿ ಅಂತ ಒಪ್ಪಿಕೊಂಡೆ” ಎಂದಳು. ಎಲ್ಲರೂ ಬಿಡುಗಡೆಯ ನಿಟ್ಟುಸಿರು ಬಿಟ್ಟರು. ಕೃಷ್ಣಮೂರ್ತಿಗಳು ಒಂದು ಮಾತು ಹೇಳಿದರು. “ನೋಡು ಮಗು, ನಿನ್ನ ಜನ್ಮ ಕೊಟ್ಟ ತಂದೆ ತಾಯಿ ಎಲ್ಲೇ ಇರಲಿ ಚೆನ್ನಾಗಿರಲಿ. ಮತ್ತೆಂದಾದರು. ಅವರು ನಿನ್ನನ್ನು ನೋಡೋಕೆ ಅಂತ ಬಂದರೆ, ನಮ್ಮ ವಿಳಾಸ ಕೊಟ್ಟು ಇಲ್ಲಿಗೆ ಕಳಿಸಿಕೊಡು, ಅವರಿಗೆ ನಮ್ಮ ದೇವಸ್ಥಾನದಲ್ಲಿ ಏನಾದರೂ ಕೆಲಸ ಕೊಡಿಸ್ತೀನಿ. ಇರೋಕೆ ಜಾಗ ಕೊಡಿಸ್ತೀನಿ. ಹೊಟ್ಟೆಗೆ ಊಟ ಕೊಡಿಸ್ತೀನಿ. ಇನ್ನು ಆ ನಿನ್ನ ಕುರುಡು ತಮ್ಮನಿಗೆ ನಮ್ಮ ಅಂಧರಶಾಲೆಯಲ್ಲಿ ಸೇರಿಸಿ ಟ್ರೈನಿಂಗ್ ಕೊಡಿಸ್ತೀನಿ. ಅವರೇ ಕೆಲಸಾನೂ ಕೊಡಿಸ್ತಾರೆ. ಆಯ್ತಾ? ನೀನು ಮಾತ್ರ ಈ ಮನೆಯ ಮಗಳಾಗಿ, ಶ್ರೀನಿವಾಸರಾಯರ ಮುದ್ದಿನ ಸೊಸೆಯಾಗಿ, ಪ್ರದೀಪನ ಪ್ರೀತಿಯ ಮಡದಿಯಾಗಿ ಚೆನ್ನಾಗಿರು” ಎಂದು ಹರಸಿದರು.

ಅದೇ ಸಂಜೆ ಎಲ್ಲರೂ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಹಿಂತಿರುಗಿದರು. ಬೆಟ್ಟದಂತೆ ಬಂದ ಸಮಸ್ಯೆಗಳು, ಮಂಜಿನಂತೆ ಕರಗಿ, ನೀರಾಗಿ ಹರಿದು ಹೋಯಿತು. ಎಲ್ಲರೂ ನಿರಾಳವಾಗಿ ಕುಳಿತರು. ಕಾರು ವೇಗವಾಗಿ ಬೆಂಗಳೂರಿನಡೆಗೆ ಚಲಿಸಿತು.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...