Home / ಕವನ / ಕವಿತೆ / ಮೋಹನ ಮುರಲಿ

ಮೋಹನ ಮುರಲಿ

ಶಾರದ ಚಂದ್ರನು ಬಾನಿನ ನೀಲಿಗೆ
ಬೆಳ್ನಗು ಹೂವನು ಮುಡಿಸಿಹನು
ದಧಿ ಧವಲಾಚ್ಛ ಜ್ಯೋತ್ಸ್ನಾ ಲಹರಿಯು
ಭೂಮಿಗೆ ಬರಿಸಿತು ಪುಲಕವನು

ಮಲಯ ಸಮೀರನು ಯಮುನಾ ಜಲದೊಡ-
ನಾಡುತ ತೀಡುತ ಬರುತಿಹನು
ವೃಂದಾವನದಲಿ ಧ್ಯಾನಾವಸ್ಥಿತ
ವೃಕ್ಷಗಳೊಳಿಯನೆಬ್ಬಿಪನು

ಸಂಧ್ಯಾ ಸುಮಗಳ ಮೋಹಕ ಸೌರಭ
ಗಾಳಿಗೆ ಗರಿಗಳ ನಿಮಿರಿಸಿತು
ರಾತ್ರಿಯ ಮೌನದ ಕಡಲಲಿ ಮುರಲಿಯ
ತಾನವು ತೆರೆಗಳ ತೇಲಿಸಿತು

ವನದಲಿ ಹರ್ಷೋನ್ಮತ್ತ ಕಿಶೋರ ಮ-
ನೋಹರ ಕೃಷ್ಣನು ವಿಹರಿಪನು
ಪ್ರಕೃತಿಯ ಸೌಂದರ್ಯಾಮೃತ ಸಾಗರ
ವೀಚಿಗಳೋಳಿಯೊಳಾಳುವನು

ಅವನ ಕರಾಗ್ರದ ಚೇತನವಿಲ್ಲದ
ವೇಣುವು ಜೀವವನಾಂತಿಹುದು
ತುಟಿಗಳ ಸೊದೆಯನು ಹೀರುತ, ಮೆಲ್ಪಿನ
ನಾದಸಮುದ್ರವನಕ್ಕಿಪುದು

ಸವಿಗೊಳಲಿನ ಸರವೆಳೆಗೊಲ್ಲತಿಯರ
ಚಿತ್ತವ ಚಂಚಲವಾಗಿಸಿತು
ಹಾಸಿದ ಹಾಸಿಗೆಯನು ತನುವುಳಿಯಿತು
ಮನವಿಂಚರದಲಿ ಮುಳುಗಿತ್ತು

ಮುರಲೀ ನಾದಕೆ ತಾಳವನಿಕ್ಕುತ,
ಕಾಲ್‌ ಮುನ್ನಡೆಯಿತು ವನದೆಡೆಗೆ
ಕೊಳಲುಲಿಯವರನು ಸೆಳೆಯಿತು, ತಂದಿತು
ಲೀಲಾ ಗೋಪಾಲಕನೆಡೆಗೆ

ಬಿಡು ಜಡೆಯೆಳಲುವ ಕಾಂತಿಯ ಕಣ್ಗಳ
ಕೆಂಪಿನ ಕೆನ್ನೆಯ ಕನ್ನೆಯರು
ಮುಕುಲಸ್ತನಗಳ ನಳಿತೋಳ್‌ಬಳ್ಳಿಯ
ಕಿರುನಡುನೆರಸಿದ ಚೆನ್ನೆಯರು

ಓಡುತ ಹಾರುತ ನಲಿಯುತ ನೆಗೆಯುತ,
ತಮ್ಮನು ತಾವೇ ಮರೆಯುತ್ತ,
ಕುಣಿಯುತ, ಮಣಿಯುತ, ಬಂದರು ನಿ೦ದರು
ನಂದ ಕುಮಾರನ ಬಳಸುತ್ತ

ನೂತನ ಜಲಧರ ನೀಲ ಶರೀರನು
ಪೀತಾ೦ಬರವನ್ನುಟ್ಟವನು,
ಕುಟಿಲಾಲಕ ಚಯ ಚಿತ್ರಿತ ಫಾಲನು
ಮುಗ್ಧ ಸ್ನಿಗ್ಧಾಂಬಕಯುತನು;

ಚಂಚಲ ಕುಂಡಲ ಮಂಡಿತ ಗಂಡ-
ಸ್ಥಲ ಯುಗ ಸ೦ಶೋಭಿತ ಮುಖನು,
ನವಿಲಿನ ಗರಿಯ ಕಿರೀಟವನಾ೦ತಿಹ
ವನಮಾಲಿಯು ನಡು ನಿ೦ದಿಹನು

ಸಪ್ತ ಸ್ವರದಲಿ ವಿಧ ವಿಧ ರಾಗವ
ಸಿರಿಗೊಳಲಿನ ಮುಖ ಸೂಸಿತ್ತು
ಕಾಳಿಂದಿಯು ಹೊನಲಿಡುವುದ ಮರೆಯುತ,
ಆಲಿಸುತ೦ತೆಯೆ ನಿ೦ದತ್ತು

ಪಶು ಮೃಗ ಗಣಗಳು ತಮ್ಮೆದೆಯನು ತೆರೆ-
ದಿಂಚರವನು ಮೊಗೆದೀಂಟಿದುವು
ಮರಗಳು ಎಲೆಗಿವಿಗಳನುರೆ ನಿಮಿರಿಸಿ,
ಗೀತಾಮೃತದಲಿ ಮುಳುಗಿದುವು

ಜಡ ಪ್ರಕೃತಿಯು ಚೈತನ್ಯವನಾನುತ
ಗಾನಾನ೦ದದಿ ಬೆರೆದತ್ತು
ಗೋಪೀವೃಂದವು ಶ್ರೀ ಕೃಷ್ಣಾತ್ಮದೊ-
ಳೈಕ್ಯಾಮರತೆಯ ಗಳಿಸಿತ್ತು
*****
೧೯೪೩

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...