Home / ಕಥೆ / ಸಣ್ಣ ಕಥೆ / ರೇಖೆಗಳು

ರೇಖೆಗಳು

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾಲೆಯತ್ತ ನಡೆದರು. ಅಲ್ಲಿ ಪ್ರಸಾದಕ್ಕಾಗಿ ಅನ್ನ, ಸಾರು, ಪಲ್ಯ ತಯಾರಾಗುತ್ತಿತ್ತು. ಅದನ್ನು ವೀಕ್ಷಿಸಿ, ರೊಟ್ಟಿ ಬಡಿಯುವ ಗುಂಪಿನೆಡೆಗೆ ಸಾಗಿದರು. ಹತ್ತಾರು ಹೆಂಗಸರು ರೊಟ್ಟಿ ಬಡಿಯುತ್ತಿದ್ದರು. ಇನ್ನು ಕೆಲವರು ಬಡಿದ ರೊಟ್ಟಿಗಳನ್ನು ಬೇಯಿಸುತ್ತಿದ್ದರು.

ರೊಟ್ಟಿ ಬಡಿಯುವವರ, ಬೇಯಿಸುವ ಹೆಂಗಸರ ಮಧ್ಯದಲ್ಲಿ, ಚುರುಕಾಗಿ ನಗುನಗುತ್ತಾ ಕೆಲಸ ಮಾಡುತ್ತಿದ್ದ ಚಲ್ವಿಯ ಮೇಲೆ ಸ್ವಾಮೀಜಿಯ ದೃಷ್ಟಿ ಹೋಯಿತು. ಅವರೀರ್ವರ ದೃಷ್ಟಿಗಳು ಲೀನವಾದವು. ತಕ್ಷಣ ವಾಸ್ತವ ಲೋಕಕ್ಕೆ ಬಂದು ಪುಳಕಿತಗೊಂಡ ಸ್ವಾಮೀಜಿ “ನೋಡವ್ವ ನೀವೆಲ್ಲಾ ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿದ್ದೀರಿ, ಸರಿ, ಆದರೆ ನಿಮ್ಮ ಆರೋಗ್ಯದ ಬಗ್ಗೆ ಲಕ್ಷ್ಯವಿರಬೇಕು” ಎಂದು ಹೇಳಿ ಮುನ್ನಡೆದರು. ಈ ಮಾತು ಚಲ್ವಿಗೆ ಹೇಳಿದಂತಿತ್ತು. ಆಕೆ ನಾಚಿ ಸೆರಗು ಸರಿಪಡಿಸುತ್ತಾ ಮುಗುಳ್ನಕ್ಕಿದಳು.

ಪಾಕಶಾಲೆಯ ಪಕ್ಕದಲ್ಲಿಯೇ ಇದ್ದ ಗೋಶಾಲೆಯಲ್ಲಿರುವ ಗೋವುಗಳನ್ನು ಮಾತನಾಡಿಸಿಕೊಂಡು, ಅಲ್ಲಿಯೇ ಕಟ್ಟಿಹಾಕಿದ್ದ ಕರುಗಳನ್ನು ಪ್ರೀತಿಯಿಂದ ನೇವರಿಸುತ್ತಾ ಮುದ್ದಾಡಿ “ಇವುಗಳಿಗೆ ಸರಿಯಾಗಿ ಮೇವು ಹಾಕ್ರಪ್ಪಾ” ಎಂದು ಹೇಳಿ ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ತೋಟದ ಕಡೆ ಹೊರಟರು. ತೋಟದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ತರುಣರೇ ಆಗಿದ್ದರು. ಆ ತರುಣರು ಗಿಡ ನೆಡುವುದರಲ್ಲಿ, ಕಳೆ ಕೀಳುವುದರಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಸ್ವಾಮೀಜಿಯವರು ಕೂಡ ತರುಣರೊಂದಿಗೆ ಕೆಲಸಕ್ಕೆ ಮುಂದಾದರು. ಅವರ ಪರಿಸರ ಪ್ರೇಮವನ್ನು ಮೆಚ್ಚಿಕೊಂಡಿದ್ದ ಈ ತರುಣರು ಸ್ವಾಮೀಜಿಯವರನ್ನು ತುಂಬಾ ಗೌರವಿಸುತ್ತಿದ್ದರು.

ಸ್ವಾಮೀಜಿ ಸಮಾಜಶಾಸ್ತ್ರದಲ್ಲಿ ತತ್ವಶಾಸ್ತ್ರದಲ್ಲಿಯೂ ಎಂ.ಎ. ಪದವೀದರರು. ಎಲ್ಲರ ಮನಸ್ಸನ್ನು ಅರಿತವರು, ಹಿರಿಯರನ್ನು ಗೌರವಿಸುತ್ತಿದ್ದರು. ಕಿರಿಯರನ್ನು ಪ್ರೀತಿಸುತ್ತಿದ್ದರು. ಹೆಣ್ಣುಮಕ್ಕಳನ್ನು ಪ್ರೀತ್ಯಾದರದಿಂದ ಮಾತನಾಡಿಸುತ್ತಿದ್ದರಲ್ಲದೇ ಅವರನ್ನು ತುಂಬಾ ಗೌರವಿಸುತ್ತಿದ್ದರು. ಮಾತನಾಡುವಾಗಲೂ ಅಷ್ಟೇ ನಡೆ, ನುಡಿ ಶುದ್ಧವಾಗಿದ್ದವು. ಪ್ರತಿದಿನ ಸಂಜೆ ವೇಳೆಯಲ್ಲಿ ನಡೆಸುತ್ತಿದ್ದ ಅವರ ಪ್ರವಚನ ಕೇಳಲು ಊರಿನ ಜನರೆಲ್ಲರೂ ಉತ್ಸಾಹದಿಂದ ಬಂದು ಸೇರುತ್ತಿದ್ದರು. ಆ ಊರಿನಲ್ಲಿ ಯುವಕರನ್ನು ಒಂದೇ ಕಡೆ ಕಲೆಹಾಕಿ ಅವರಿಂದ ಒಳ್ಳೆಯ ಕಾರ್ಯವನ್ನು ಮಾಡಿಸುತ್ತಿದ್ದರು. ಕೆಟ್ಟಹಾದಿ ಹಿಡಿಯದಂತೆ ಅವರಿಂದ ಕೆಲಸ ತೆಗೆದುಕೊಳ್ಳುತ್ತಿದ್ದರು. “ಈ ಸ್ವಾಮೀಜಿಯಿಂದ ನಮ್ಮ ಮಕ್ಕಳು ಸನ್ಮಾರ್ಗದಲ್ಲಿ ಸಾಗುತ್ತಿದ್ದಾರೆ” ಎಂದು ಆ ಊರಿನ ಜನ ಈ ಸ್ವಾಮೀಜಿಯವರನ್ನು ಬಹಳ ಪ್ರೀತ್ಯಾದರಗಳಿಂದ ಕಾಣುತ್ತಿದ್ದರು.

ಎಲ್ಲಾ ವೀಕ್ಷಣೆ ಮುಗಿಸಿದ ಬಳಿಕ ಸ್ವಾಮೀಜಿ ತಮ್ಮ ಕೊಠಡಿಗೆ ಹಿಂದಿರುಗಿದರು. ಅಭ್ಯಾಸಕ್ಕೆ ತೊಡಗಿದರು. ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಓದತೊಡಗಿದರು. ಎಷ್ಟು ಓದಿದರೂ ತಲೆಗೆ ಹೋಗುತ್ತಿರಲಿಲ್ಲ. ಒಂದು ಪುಟ ಮುಗಿಸುವುದೇ ಕಷ್ಟವಾಯಿತು. ಅವರ ಮನಸ್ಸು ಮಾತ್ರ ಪದೇ ಪದೇ ಚಂಚಲತೆಯಿಂದ ವಿಚಲನೆಯಾಗುತ್ತಿತ್ತು. “ಛೇ ಯಾಕೆ ಹೀಗಾಗುತ್ತಿದೆ?” ಎಂದು ಪುಸ್ತಕ ಮುಚ್ಚಿಟ್ಟು ದೇವರ ಧ್ಯಾನದಲ್ಲಿ ತೊಡಗಿದರೂ ಕೂಡಾ ಮನಸ್ಸು ಹುಚ್ಚು ಕುದುರೆಯಂತೆ ಓಡುತ್ತಿತ್ತು. ಹಾಗಾಗಿ “ಇದ್ಯಾವುದೂ ಬೇಡ ಗೋಶಾಲೆಗೆ ಹೋದರೆ ಸರಿಯಾದೀತು” ಎಂದು ಅಲ್ಲಿಗೆ ಹೋದರು. ಅಲ್ಲಿ ಗೋವುಗಳನ್ನು ನೋಡಿಕೊಳ್ಳುತ್ತಿದ್ದವರೆಲ್ಲ ಸ್ವಾಮೀಜಿಯವರ ಕಣ್ಣುಗಳನ್ನು ಗಮನಿಸಿ “ಬುದ್ಧಿಯವರು ಯಾರನ್ನೋ ಹುಡುಕುವಂತಿದೆ?” ಎಂದಾಗ “ಇಲ್ಲ, ಇಲ್ಲ, ಯಾರನ್ನೂ ಇಲ್ಲ. ಗೋವುಗಳನ್ನು ನೋಡಲು ಬಂದೆ ಅಷ್ಟೆ” ಎಂದು ಹೇಳಿ ತೋಟದ ಕಡೆ ನಡೆದರು. ಅಲ್ಲಿಯೂ ಸಹ ಇವರು ನೋಡುವ ಪರಿ ಕಂಡು ಅಲ್ಲಿದ್ದ ಯುವಕರು ಧೈರ್ಯದಿಂದ “ಸ್ವಾಮೀಜಿಗಳೆ, ನಿಮ್ಮ ಕಣ್ಣುಗಳು ಏನನ್ನೋ ಹುಡುಕುತ್ತಿರುವಂತೆ ಕಾಣುತ್ತಿದೆ?” ಎಂದಾಗ “ಇಲ್ಲ. ಗಿಡಮರಗಳ ನಡುವೆ ಇದ್ದರೆ ಮನಸ್ಸಿಗೆ ನೆಮ್ಮದಿ ಬರಬಹುದೆಂದು ಇಲ್ಲಿಗೆ ಬಂದೆ. ಹೋಗಿ, ಹೋಗಿ ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ” ಎಂದು ಆ ಯುವಕರಿಗೆ ಹೇಳಿದರು. ಅಂದು ಸ್ವಾಮೀಜಿಯವರ ಮಾತಿನ ಧಾಟಿ, ಅವರ ವರ್ತನೆ ಎಂದಿನಂತಿರಲಿಲ್ಲ. “ನಮಗ್ಯಾಕೆ ಬೇಕು? ಒಣ ಉಸಾಬರಿ” ಎಂದು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡರು ಆ ತರುಣರು.

ಚಲ್ವಿಯು ಸುಂದರ ಬಟ್ಟಲು ಕಂಗಳ ಚೆಲುವೆ. ಎಣ್ಣೆಗೆಂಪು ಮೈ, ಮೋಹಕ ನಗೆಯಿಂದ ಯಾರನ್ನೂ ಬೇಕಾದರೂ ಆಕರ್ಷಿಸುತ್ತಿದ್ದಳು. ಚಿಕ್ಕಂದಿನಿಂದಲೂ ಮಠದಲ್ಲಿಯೇ ಬೆಳೆದವಳು. ಗುಣದಲ್ಲಿ ನಡೆ ನುಡಿಯಲ್ಲಿ ಒಳ್ಳೆಯವಳಾಗಿದ್ದಳು.

ಒಂದು ದಿನ ಚಲ್ವಿಯ ತಂದೆ ತಾಯಿಗಳು ಎಲ್ಲಿಯೂ ಕೆಲಸವಿಲ್ಲದೇ ಮಠಕ್ಕೆ ಬಂದಾಗ ಹಿರಿಯ ಸ್ವಾಮಿಗಳು ಅವರಿಗೆ ಆಶ್ರಯ ನೀಡಿ “ಇಲ್ಲಿಯೇ ಏನಾದರೂ ಕೆಲಸ ಮಾಡಿಕೊಂಡಿರಿ” ಎಂದು ಆಶೀರ್ವದಿಸಿದ್ದರು. ಇವರಿಗೆ ಬಹಳ ವರ್ಷಗಳ ನಂತರ ಚಲ್ವಿಯು ಹುಟ್ಟಿದಳು. ಈಗ ತುಂಬು ಹರೆಯದ ಚೆಲ್ವಿ ನೂರೆಂಟು ಆಸೆಗಳನ್ನು, ಹಂಬಲಗಳನ್ನು ಹೊತ್ತವಳಾಗಿದ್ದಳು. ಇನ್ನು ಸ್ವಾಮೀಜಿಯವರು ತನ್ನನ್ನು ಪ್ರೀತಿಸುತ್ತಿದ್ದಾರೆಂದು ಕಂಡುಕೊಂಡು ಮನದಲ್ಲಿಯೇ ಸಂತಸಗೊಂಡಿದ್ದಳು.

ಹೀಗೆ ದಿನಗಳು ಸರಿದವು. ತಮ್ಮ ಮನಸ್ಸನ್ನು ಹಿಡಿತದಲ್ಲಿಡಲಾಗಲಿಲ್ಲ. ಚಲ್ವಿಯನ್ನು ಸ್ವಾಮೀಜಿಯವರು ಮನದಲ್ಲಿಯೇ ಪ್ರೀತಿಸತೊಡಗಿದ್ದರು. ಪ್ರೀತಿಯ ಸೆಳೆತದಿಂದ ದಿನಕ್ಕೊಮ್ಮೆಯಾದರೂ ಚಲ್ವಿಯನ್ನು ನೋಡದಿದ್ದರೆ ಅವರ ಮನಸ್ಸು ಚಡಪಡಿಸುತ್ತಿತ್ತು. ಮೈಮೇಲೆ ಹಾವು ಹರಿದಾಡಿದಂತಾಗುತ್ತಿತ್ತು. ಈಕೆಯಿಂದ ನನ್ನ ಮನಸ್ಸು ವಿಚಲಿತಗೊಂಡಿದ್ದಕ್ಕಾಗಿ ಆಶ್ಚರ್ಯಗೊಂಡರು. “ನಾನು ಇಷ್ಟು ವರ್ಷ ಬ್ರಹ್ಮಚರ್ಯ ಪಾಲಿಸಿದ್ದೆನಲ್ಲ. ಒಂದು ದಿನವೂ ಹೀಗಾಗಿರರಿಲ್ಲ. ಎಷ್ಟೋ ಸುಂದರ ಹೆಣ್ಣುಮಕ್ಕಳನ್ನು ಕಂಡರೂ ಸಹ ನನ್ನ ಮನ ಮಾತ್ರ ಸ್ವಲ್ಪವೂ ವಿಚಲಿತಗೊಂಡಿರಲಿಲ್ಲ. ರೊಟ್ಟಿ ಬಡಿಯುವ ಚಲ್ವಿಯನ್ನು ಹೆಚ್ಚು ನೋಡಿರಲಿಲ್ಲ. ಆದರೂ ಅಂದು ಆಕೆಗೆ ತನ್ನ ಸೆರಗು ಕೆಳಗೆ ಬಿದ್ದ ಪರಿವೇ ಇರಲಿಲ್ಲ. ಮುಗ್ಧ ಚೆಲುವೆ ಯಾವುದೇ ಅಳುಕಿಲ್ಲದೇ ಕೆಲಸದಲ್ಲಿ ಮಗ್ನಳಾಗಿದ್ದಳು. ಅಂದು ಆಡಿದ ನನ್ನ ಮಾತಿನಿಂದಲೇ ನಾನು ಪುಳಕಿತಗೊಂಡದ್ದು. ನನಗರಿವಿಲ್ಲದಂತೆ ನಡೆದೇ ಹೋಗಿತ್ತು. ಈ ವಯಸ್ಸಿನಲ್ಲಿ ನಾನು ಆಕೆಯ ಮೋಹ ಪಾಶದಲ್ಲಿ ಬೀಳಬೇಕಾದರೆ ನನ್ನ ಗ್ರಹಗತಿಯಲ್ಲಿ ದೋಷವಿರಬಹುದು. ನನ್ನ ಜಾತಕದಲ್ಲೇ ಹೀಗಿರಬಹುದೇ? ನೋಡೋಣ” ಎಂದು ಯೋಚಿಸಿದ್ದರು ಸ್ವಾಮೀಜಿ.

ತನ್ನ ಅಂಗೈಯಲ್ಲಿದ್ದ ರೇಖೆಗಳನ್ನು ಗಮನಿಸಿದರು. ಆ ರೇಖೆಗಳು ವಿವಾಹ ಯೋಗವನ್ನು ಸಾರುತ್ತಿದ್ದವು. ನನ್ನ ವಿವಾಹದ ರೇಖೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಅದಕ್ಕಾಗಿಯೇ ನನಗೆ ಈ ವಯಸ್ಸಿನಲ್ಲಿ ವ್ಯಾಮೋಹ ಶುರುವಾದದ್ದು. ಈ ವಿಚಾರದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗಲಿಲ್ಲ. ಪ್ರಕೃತಿ ನಿಯಮವೇ ಹಾಗೆ, ಯಾರ್‍ಯಾರಿಗೆ ಯಾವ್ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದೆಲ್ಲಾ ಆಗುವುದು. ಎಲ್ಲಾ ಆ ದೈವೇಚ್ಚೆ.

ಚಲ್ವಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದೇ ತಡ ಈ ಮಾತು ಕಾಳ್ಗಿಚ್ಚಿನಂತೆ ಊರೆಲ್ಲಾ ಹಬ್ಬಿತು. ಈ ಸುದ್ದಿ ಮನೆ ಮಾತಾಯಿತು. ಜನರೆಲ್ಲಾ ಕಕ್ಕಾಬಿಕ್ಕಿಯಾದರು. ಊರಿಗೆ ಊರೇ ಅಲ್ಲೋಲ ಕಲ್ಲೋಲವಾಯಿತು. ಶಾಂತವಾಗಿದ್ದ ಊರಿನಲ್ಲಿ ಅಶಾಂತಿಯು ನೆಲೆಗೊಂಡಿತು. ರಸ್ತೆಯೆಲ್ಲಾ ಜನರಿಂದ ತುಂಬಿಹೋಯಿತು. ಎಲ್ಲರ ಬಾಯಿಯಲ್ಲೂ ಅದೇ ಮಾತು. ಅದೇ ವಿಚಾರ

“ಸ್ವಾಮಿಗಳು ಲಗ್ನ ಆಗ್ತಾರಂತೆ.”

“ಸ್ವಾಮಿಗಳು ತಮ್ಮ ಲಗ್ನ ಪತ್ರಿಕೆಯನ್ನ ಮುದ್ರಿಸಿ ಹಂಚುತ್ತಾರಂತೆ.”

“ಇನ್ನು ಮಠದಲ್ಲಿ ತೊಟ್ಟಿಲು ತೂಗ್ತೈತೆ.”

“ಅವರ ಸಂಬಂಧ ಎಷ್ಟು ದಿವಸಗಳಿಂದ ನಡಿತಿತ್ತೋ ಏನೋ! ಏನಾದರೂ ಹೆಚ್ಚು ಕಡಿಮೆಯಾಗಿದೆಯೋ ಹೇಗೆ?”

ಹೀಗೆ ನೂರೆಂಟು ಮಾತುಗಳು ಜನರಿಂದ ಬರುತ್ತಿದ್ದವು. ಮಾತಿಗೆ ಮಾತು ಬೆಳೆದು ರೆಕ್ಕೆ ಪುಕ್ಕ ಹಚ್ಚಿಕೊಂಡು ತೇಲಿ ತೇಲಿ ಬರತೊಡಗಿದ್ದವು. ಜನರಂತೂ ಸ್ವಾಮೀಜಿಯ ಮೇಲೆ ಸಿಟ್ಟಾಗಿದ್ದರು. ಈ ತನಕ ಸ್ವಾಮೀಜಿ ಅವರಿಗೆಲ್ಲಾ ದೇವರಾಗಿದ್ದರು. ಅವರನ್ನು ‘ಬುದ್ಧಿ, ತಂದೆ, ಅಪ್ಪಾಜಿ’ ಎಂದು ಕರೆಯುತ್ತಿದ್ದ ಜನ ಆಕ್ರೋಶದಿಂದ ಅಂವಾ, ಇಂವಾ ಎಂದು ಹೇಳಲು ಆರಂಭಿಸಿದ್ದರು.

ರೊಟ್ಟಿ ಬಡಿಯುವ ಚಲ್ವಿಯನ್ನು ಲಗ್ನ ಮಾಡಿಕೊಳ್ಳಲು ಸ್ವಾಮೀಜಿ ನಿರ್ಧರಿಸಿದ್ದರು. ಈ ನಿರ್ಧಾರವನ್ನು ಕೆಲವರು ಬೆಂಬಲಿಸಿದ್ದರು. ಇನ್ನು ಕೆಲವರು ಪ್ರಬಲವಾಗಿ ವಿರೋಧಿಸಿದ್ದರು. ಈ ಕಾರಣದಿಂದ ಇಡೀ ಊರೇ ಬುಗಿಲೆದ್ದು ಅಶಾಂತಿಯ ಮಡುವಾಗಿತ್ತು.

ಸ್ವಾಮೀಜಿ ಹೆಚ್ಚು ಓದಿಕೊಂಡವರು. ಕ್ರಾಂತಿಕಾರಕ ಮಾತು, ನೇರಮಾತು, ದಿಟ್ಟನಡೆ, ಜನರನ್ನು, ಯುವಕರನ್ನು ಅವರೆಡೆಗೆ ಆಕರ್ಷಿಸುವಂತೆ ಮಾಡಿತ್ತು. ಊರಿನ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡವರು, ಕಾವಿ ಧರಿಸುತ್ತಿದ್ದರು. ಡೋಂಗಿತನ ಅವರಲ್ಲಿರಲಿಲ್ಲ. ಅವರೊಬ್ಬ ಜನಪ್ರಿಯ ಸ್ವಾಮೀಜಿಯಾಗಿದ್ದರು. ಇಂತಹ ವ್ಯಕ್ತಿತ್ವವುಳ್ಳ ಸ್ವಾಮೀಜಿ ಏಕಾ‌ಏಕಿ ರೊಟ್ಟಿ ಬಡಿಯುವ ಚಲ್ವಿಯನ್ನು ಮದುವೆಯಾಗುತ್ತೇನೆಂದು ಹೇಳಿದಾಗ ಮೊದಲು ಜನ ನಂಬಲಿಲ್ಲ. ಆದರೆ ಮದುವೆ ಸಿದ್ಧತೆಗಳು ನಡೆಯಲಾರಂಭಿಸಿದಾಗ ಜನ ಕೆರಳಿದರು. ದಾಂಧಲೆ ಶುರುವಾಯಿತು. ಪರ ವಿರೋಧಗಳು ಹುಟ್ಟುಕೊಂಡವು. ಅನೇಕ ಕಡೆಗಳಿಂದ ಟೀಕೆಗಳು ಬರತೊಡಗಿದವು. ಊರಿನಾಚೆಗೂ ಈ ಮಾತುಗಳು ಹೊರಟವು. ಸುದ್ದಿ ಪತ್ರಿಕೆಗಳ ಕಿವಿಗೂ ಬಿತ್ತು. ವರದಿಗಾರರೆಲ್ಲಾ ಮಠಕ್ಕೆ ಧಾವಿಸಿದರು.

ಸ್ವಾಮೀಜಿಯ ಸಂದರ್ಶನ ನಡೆಸಿದರು. ಎದುರಿಗೆ ಕುಳಿತ ಅವರಿಗೆ ಅಂಗೈ ತೋರಿಸುತ್ತಾ “ನನ್ನ ಅಂಗೈನಲ್ಲಿರುವ ರೇಖೆಗಳನ್ನು ನೋಡಿ. ಇದರಲ್ಲಿ ವಿವಾಹ ಯೋಗವಿದೆ. ಈ ಯೋಗವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದರು.

“ಲಗ್ನಪತ್ರಿಕೆ ಮುದ್ರಿಸಿದ್ದೀರಂತೆ?”
“ಹೌದು ಈ ಗಲಾಟೆಯಿಂದ ಹಂಚಲಾಗಲಿಲ್ಲ.”
“ನೀವು ಸ್ವಾಮೀಜಿಯಾಗುವುದಕ್ಕಿಂತ ಮೊದಲೇ ಯೋಚಿಸಬೇಕಿತ್ತಲ್ಲ?”
“ಈ ಜನರಿಗೆ ಬುದ್ದಿ ಇಲ್ಲ. ನನ್ನನ್ನು ಮಠಕ್ಕೆ ಮರಿ ಬಿಡುವ ಕಾಲದಲ್ಲಿ ಹಿರಿಯ ಸ್ವಾಮೀಜಿಗಳು ನನ್ನ ಅಂಗೈಯಲ್ಲಿರುವ ರೇಖೆಗಳನ್ನು ನೋಡಿರಲಿಲ್ಲವೇ? ನನ್ನ ಜಾತಕವನ್ನು ಅವರು ಅಭ್ಯಾಸ ಮಾಡಿರಲಿಲ್ಲವೇ? ಈ ರೇಖೆಗಳ ಫಲ, ಜಾತಕದ ಫಲ ಅವರಿಗೆ ಗೊತ್ತಿರಲಿಲ್ಲವೇಕೆ? ಈಗ ನನ್ನ ಜಾತಕದಲ್ಲಿದ್ದಂತೆ, ಅಂಗೈ ರೇಖೆಯಂತೆ ನಡೆಯಲೇ ಬೇಕಲ್ಲವೇ? ಈ ಜನ ನನ್ನ ಮದುವೆಯನ್ನೇಕೆ ವಿರೋಧಿಸುತ್ತಾರೋ ತಿಳಿಯುತ್ತಿಲ್ಲ” ಎಂದು ಸ್ವಾಮೀಜಿಯವರು ಬಹಳ ದುಗುಡತೆಯಿಂದ ಪ್ರಶ್ನಿಸುತ್ತಿದ್ದರು.

ಹೊರಗಡೆ ಜನರನ್ನು ವಿಚಾರಿಸಿದರೆ ಸ್ವಾಮೀಜಿಯವರನ್ನು ಹುಚ್ಚು ಹುಚ್ಚಾಗಿ ಬೈಯ್ಯುತ್ತಿದ್ದರು. “ಬೇಕಾದರೆ ರೊಟ್ಟಿ ಬಡಿಯುವ ಹೆಂಗಸನ್ನು ಇಟ್ಟುಕೊಳ್ಳಲಿ, ಆದರೆ ಮದುವೆ ಆಗುವುದು ಬೇಡ” ಎಂದು ಅವರ ಅಭಿಪ್ರಾಯವಾಗಿತ್ತು. “ಪೀಠ ತ್ಯಾಗ ಮಾಡಿ ಬೇಕಾದರೂ ಮದುವೆಯಾಗಬಹುದು” ಎಂದು ಅವರಿವರ ಮಾತುಗಳು.

ಪುರಾಣ ಕಥೆ ಆಧಾರ ನೀಡಿ ಪೀಠ ತ್ಯಾಗ ಮಾಡದೇ ಸ್ವಾಮಿಗಳು ಮದುವೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಕೆಲವರ ಅಭಿಪ್ರಾಯ. ಆದರೆ ಮದುವೆಯಾಗಿ ಪೀಠ ತ್ಯಾಗ ಮಾಡದಿದ್ದರೆ ಸಾಮಾಜಿಕ ವ್ಯವಸ್ಥೆ ಅಡ್ಡಿಯಾಗಿ ಬದುಕಲು ಕಿರಿಕಿರಿ ಉಂಟಾಗುತ್ತದೆ. ಅದಕ್ಕೆ ಬದಲಾಗಿ ಮದುವೆಯಾಗುವುದು ಖಂಡಿತವಾಗಿದ್ದಾಗ ಪೀಠ ತ್ಯಾಗ ಮಾಡುವುದು ಉಚಿತ ಎಂದು ಕೆಲವು ಹಿರಿಯರು ಹೇಳಿದರು. ಇದಕ್ಕೆ ಅನೇಕ ಉದಾಹರಣೆಗಳಿವೆ ಎಂದರು ಕೆಲವರು.

ಚಲ್ವಿಯನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಸ್ವಾಮೀಜಿಯವರ ಹಠ. ಇದರಿಂದ ಊರಿನಲ್ಲಿ ಇವರ ಪರ ವಹಿಸುವ, ವಿರೋಧಿಸುವವರ ಮೆರವಣಿಗೆಗಳು ನಡೆದವು.

ಮಾರನೇ ದಿನ ಪತ್ರಿಕೆಗಳಲ್ಲಿ ಚಿತ್ರ ಸಹಿತ ಸುದ್ದಿಗಳು ಬಂದವು. ಸ್ವಾಮೀಜಿಯವರ ಅಂಗೈ ರೇಖೆಗಳ ಫೋಟೋ ಸಹ ದೊಡ್ಡದಾಗಿ ಬಂದಿತು. ಇಷ್ಟು ದಿವಸ ಗುಸುಗುಸು ಎಂದು ಮಾತನಾಡುತ್ತಿದ್ದ ಈ ಸುದ್ದಿ ಜಗಜ್ಜಾಹೀರವಾಯಿತು. ಸ್ವಾಮೀಜಿಯವರ ಲಗ್ನದ ವಿಚಾರದಿಂದ ಊರು ಎರಡು ಹೋಳಾಯಿತು.

ಒಂದು ಕಡೆ ಸ್ವಾಮೀಜಿಗಳ ಅಂಗೈ ರೇಖೆಗಳನ್ನು ಅಭ್ಯಾಸ ಮಾಡಿದ್ದ ಇಬ್ಬರು ಜೋತಿಷಿಗಳಲ್ಲಿ ಒಬ್ಬರಿಗೆ ವಿವಾಹಯೋಗ ಕಂಡಿದೆ. ಇನ್ನೊಬ್ಬರಿಗೆ ಸನ್ಯಾಸಿ ಯೋಗ ಕಂಡು ಬಂದಿದೆ. ಈ ಇಬ್ಬರು ಜೋತಿಷಿಗಳು ಪರಸ್ಪರ ವಿರೋಧವಾಗಿ ವಿಶ್ಲೇಷಿಸಿದ್ದರು. ಈ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ಹೋಯಿತು. ಪತ್ರಿಕೆಗಳಲ್ಲಿ ಇನ್ನೇನಾದರೂ ವ್ಯತ್ಯಾಸವಾಗಿ ಹೆಚ್ಚು ಕಡಿಮೆ ಪ್ರಕಟವಾದರೆ ಮೊದಲೇ ರೊಚ್ಚಿಗೆದ್ದ ಜನರಿಂದ ಸ್ವಾಮೀಜಿಯವರು ಇಕ್ಕಟ್ಟಿಗೆ ಸಿಲುಕಿ ತೊಂದರೆಯಾದೀತೆಂದು ಊರಿನಲ್ಲಿ ಶಾಂತಿ ಸಭೆ ನಡೆಸಿ ಸ್ವಾಮೀಜಿಯವರನ್ನು ಪೀಠಾಧಿಕಾರಿಗಳಾಗಿ ಮುಂದುವರಿಯುವಂತೆ ಒಪ್ಪಿಸಿತು. ಈ ವಿಷಯವಷ್ಟೇ ಪತ್ರಿಕೆಗಳಲ್ಲಿ ಬರುವಂತಾಯಿತು.

ಇದರಿಂದ ಊರು ಶಾಂತವಾಗಿತ್ತು. ಯಾವುದೇ ಗಲಾಟೆ ಆಗಿಲ್ಲವೆಂಬಂತೆ ಊರು ಸಹಜತೆಗೆ ಮರಳಿತ್ತು.

ಒಂದು ದಿನ ಮಠದಲ್ಲಿ ವಿಚಾರಿಸಿದಾಗ ಸ್ವಾಮಿಗಳು ಮಠದಲ್ಲಿರದೆ ಜಗತ್ ಪರ್ಯಟನಕ್ಕೆ ತೊಡಗಿದ್ದಾರೆಂದು ತಿಳಿಯಿತು. ಆದರೆ ಪಾಕಶಾಲೆಯಲ್ಲಿ ಚಲ್ವಿಯ ಕಣ್ಣಲ್ಲಿ ನೀರು ಸುರಿತಾನೇ ಇತ್ತು. ಆಕೆಯ ದೇಹದ ಸ್ಥಿತಿ ಬದಲಾವಣೆ ಆಗುತ್ತಿತ್ತು. ಆದರೆ ಅದ್ಯಾವುದರ ಪರಿವೇ ಇಲ್ಲದೆ ಆಕೆಯ ಕೈಗಳು ಮಾತ್ರ ರೊಟ್ಟಿಯನ್ನು ಬಡಿಯುತ್ತಲೇ ಇದ್ದವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...