Home / ಕಥೆ / ಸಣ್ಣ ಕಥೆ / ಇರುವುದೆಲ್ಲವ ಬಿಟ್ಟು………

ಇರುವುದೆಲ್ಲವ ಬಿಟ್ಟು………

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತಂದೆಯನ್ನು ಮೆಚ್ಚಿಕೂಂಡರೂ ಸೈರಿಸಲಾರ. ಅವನ ‘ಪೊಸೆಸಿವ್‍ನೆಸ್’ ದಿನೆ ದಿನೆ ಅಂಕೆ ಮೀರುತ್ತಲಿತ್ತು. ಅವಳು ಅವನು ಕದ್ದುಮುಚ್ಚಿ ಭೇಟಿಯಾದಾಗಲೂ ಪ್ರೀತಿಯ ಪಿಸುಮಾತಿಗೆ ಬದಲಾಗಿ ಆ ಹುಡುಗನ ಬಳಿ ಸರ್ಕಲ್‌ ಬಳಿ ಮಾತಾಡ್ತಾ ನಿಂತಿದ್ದೆಯಲ್ಲ? ಬೀದಿಯಲ್ಲಿ ಎಂಥ ಮಾತು ನಗೆ ಎಂದವನು ಸಿಡಿಮಿಡಿಗುಟುತಿದ್ದುದೇ ಹೆಚ್ಚು. ಇತೀಚೆಗೆ ಪ್ರೀತಿಯ ನೋಟ ಮಾತಿಗಿಂತಲೂ ದೂಷಣೆಗಿಳಿಯುವುದು ವೃಥಾ ಜಗಳ ಕಾಯುವುದು ಅತಿಯಾಗಿದ್ದರಿಂದ ಅವಳೂ ಕಳವಳಗೊಂಡಿದ್ದಳು. ನನ್ನ ಮೇಲೆ ಅಪನಂಬಿಕೆಯೆ? ಅನುಮಾನವೆ ಎಂದವಳು ಸಪ್ಪೆ ಮೋರೆ ಹಾಕಿ ‘ಸಾರಿ’ ಕೇಳಿ ಗದ್ಗದಿತನಾಗುತ್ತಿದ್ದ. ಶ್ರೀಕಾಂತ ತನ್ನನ್ನು ಗಾಢವಾಗಿ ಪ್ರೇಮಿಸುತ್ತಾನೆಂಬ ಕನವರಿಕೆ ಅವಳ ನರನರಗಳಲ್ಲಿ ಚಿಗುರೊಡೆಯುವಾಗ ಅವಳಿಗೂ ಸಂಭ್ರಮ. ಆದರೆ ತಾನು ನಕ್ಕರೂ ಹಂಗಿಸುವ ತಮಾಷೆಯಾಗಿ ಮಾತನಾಡಿದರೆ ‘ತಲೆಹರಟೆ ಸಾಕು’ ಎಂದು ಮುಖಭಂಗ ಮಾಡುವ, ಚಲ್ಲುಚೆಲ್ಲಾಗಿ ಚಿನಾಲಿತರಾ ಆಡ್ಬೇಡ’ ಎಂದಾಗಲಂತೂ ಉದ್ವಿಗ್ನಗೊಂಡಿದ್ದಳು. ‘ಬಾಯಿಗೆ ಬಂದಂತೆ ಮಾತಾಡ್ಬೇಡ ಕಣೋ, ನಾನು ಸ್ವಲ್ಪ ಪ್ರೀಯಾಗಿರ್‍ತೀನಿ. ಅದು ನನ್ನ ನೇಚರ್‌. ನಿನ್ನ ಜಲಸ್‌ ಕೂಡ ನನಗಿಷ್ಟವೆ. ಪ್ರೇಮಿಗಳಿಗೆ ಸಲ್ಫಿಶ್‌ನೆಸ್‌ ಸಹಜ, ಆದರ ಅದೇ ಪ್ರೀಮಕ್ಕಿರುವ ಸ್ಟ್ರೆಂಥ್‌ ಮತ್ತು ವೀಕ್‌ನೆಸ್‌ ಕೂಡ. ಯಾವುದೇ ಹೆಚ್ಚಾದರೂ ಅದು ಅಲರ್‍ಜಿ ರೂಪತಾಳಿ ನಮ್ಮ ಎನ್‌ಜಾಯ್‌ಮಂಟನ್ನೇ ಹಾಳು ಮಾಡಬಾರದಲ್ವೆ’ ಅವಳು ಆಗೀಗ ಅವನ ಸಿಡುಕಿನ ನಡುವೆಯೂ ಉಪದೇಶಿಸುವುದಿದೆ.

ಅವಳು ತನ್ನ ‘ಕಾಲೇಜ್‌ ಡೇ’ ನಲ್ಲಿ ಡ್ಯಾನ್ಸ್‌ ಮಾಡಿದರೂ, ನಾಟಕದಲ್ಲೊಂದು ಪಾತ್ರ ಮಾಡುತ್ತಾನೆಂದರೂ ಶ್ರೀಕಾಂತನ ಕೆನ್ನೆಗಳಿಗೆ ಜಾಂಡೀಸ್‌. ‘ಮಾರಾಯ, ನಾವು ಹುಡುಗೀರು ಮಾಡೋದಪಾ’ ಅಂದರೂ ಪ್ರಸನ್ನನಾಗಲಾರ. ‘ಹುಡುಗರೆದುರು ಕುಣಿಯೋಕೆ ನೀನು ನಾಟಕದವ್ಳಾ? ಕಾಲೇಜಿಗೆ ಹೋಗೋದು ಓದ್ಲಿಕ್ಕೆ ಕುಣಿದು ಕುಪ್ಪಳಿಸೋಕಲ್ಲ. ಎಲ್ಲರಂತೆ ತೆಪ್ಪಗಿರೋಕೇನು ಎಂಬುದವನ ಸಿದ್ಧಾಂತ. ಅಷ್ಟಕ್ಕೇ ಅಸಿಡಿಟಿಯಿಂದ ನರಳುತ್ತಾ ವಾರಗಟ್ಟಲೆ ಅವಳ ಬಳಿ ಮಾತು ಬಿಡುತ್ತಾನೆ. ಅವಳೇ ಪದೆ ಪದೆ ಹಿಂದೆಬಿದ್ದು ಮಾತಾಡಿಸಿ, ಮುತ್ತಿಟು ರಾಜಿ ಮಾಡಿಕೊಂಡ ಪ್ರಕರಣಗಳೆಷ್ಟೋ ಇಬ್ಬರೂ ಲಕ್ಕ ಇಟ್ಟಿಲ್ಲ. ಅವಳೇನು ಸಿರಿವಂತರ ಮನೆಯ ಹುಡುಗಿಯೇನಲ್ಲ. ಅವಳ ಮನೆಯವರಿಗೆ ಹೋಲಿಸಿದರೆ ಶ್ರೀಕಾಂತನ ಮನೆ ಪರಿಸ್ಥಿತಿ ನೂರು ಪಾಲು ಮೇಲು. ಮೇಲಾಗಿ ಅವಳು ಹತ್ತಿರದ ಸಂಬಂಧಿ ಹೀಗಾಗಿ ಎರಡೂ ಮನೆಯವರೂ ಬಂದುಹೋಗಿ ಮಾಡುತ್ತಾರೆ. ಅವಳ ತಂದೆ ಡಿಸಿ ಆಫೀಸಿನಲ್ಲಿ ಗುಮಾಸ್ತ ಸಂಬಳಕ್ಕಿಂತ ಅಧಿಕ ಗಿಂಬಳ ಸಿಗುವುದರಿಂದ ನಿರುಮ್ಮಳ. ಮಗಳ ಡ್ರೆಸು ಮೇಕಪ್‌ಗೆಂದೂ ಕಂಜೂಸ್‌ತನ ತೋರಿದ್ದಿಲ್ಲ. ಓಬ್ಬಳೇ ಮಗಳೆಂಬ ಪ್ರೀತಿ ಬೇರೆ. ಶ್ರೀಕಾಂತ ರೇಲ್ವೆ ಇಲಾಖೆಯಲ್ಲಿ ಗುಮಾಸ್ತನಾಗಿರುವುದರಿಂದ ಹುಡುಗ ಅಡ್ಡಿಯಿಲ್ಲವೆಂಬ ಭಾವ ಅವಳ ತಂದೆಯದ್ದು. ಇಬ್ಬರೂ ಪ್ರೇಮಿಸುತ್ತಿದ್ದಾರೆಂಬ ಸುಳಿವು ಅವರಿಗಿದ್ದರೂ ಅವರೆಂದೂ ಅಡ್ಡಿ ಬಂದಿಲ್ಲ. ಏಕೆಂದರೆ ಸುಲಭವಾಗಿ ವರದಕ್ಷಿಣೆ ಗೋಜಿಲ್ಲದೆ ಮಗಳನ್ನು ದಾಟು ಹಾಕಬಹುದೆಂಬ ಆಸೆ. ಶ್ರೀಕಾಂತನ ಮನೆಯವರಿಗೆ ಮಾತ್ರ ಅವಳಂದರೆ ಅಷ್ಟಕಷ್ಟೆ. ಅವಳ ವೇಷಭೂಷಣ ನೋಡಿಯೇ ಅವಳು ಅಂಕೆಗೆ ಸಿಗದ ಹಣ್ಣೆಂಬ ಅಸಮಾಧಾನವಿದೆ. ಹಾದಿಬೀದಿಯಲ್ಲಿ ಪೋರ್‍ಕಿಗಳೂಂದಿಗೆ ಕಿಸಿಕಿಸಿ ನಗುವ, ಲೋನೆಕ್‌ ಟೀ ಶರ್‍ಟ್‌, ಟೈಟ್‌ ಪ್ಯಾಂಟ್‌ಗಳಲ್ಲಿ ಒಂದಿಷ್ಟು ಹೆಚ್ಚೇ ವಯ್ಯಾರಮಾಡುವ ಅವಳಂಥವಳು ಎಂತ ಸಂಸಾರ ಮಾಡಿಯಾಳೆಂಬ ಶಂಕೆಯ ತಾಯಿಗೆ ಅವನ ತಂಗಿಯರೂ ನೀರೆರೆದು ಪೋಷಿಸಿದ್ದಾರೆ. ‘ನೋಡೋ ಅವಳು ಗಂಡುಬೀರಿ. ಫ್ಯಾಶನ್‌ವಾಲಿ. ನೀನು ತರೋ ಸಂಬಳ ಅವಳ ಸ್ನೋ ಪೌಡರ್‍ಗೂ ಸಾಲೋಲ್ಲ ಕಣೋ. ರೂಪಾನೇ ಮುಖ್ಯವಲ್ಲ. ಅದು ಶಾಶ್ವತವೂ ಅಲ್ಲ. ಗುಣ ಮುಖ್ಯ’ ಎಂದವನ ಅಮ್ಮನು ಗೊಣಗದ ದಿನವೇ ಇಲ್ಲ. ಇಷ್ಟಾಗಿ ಶ್ರೀಕಾಂತನೇನೂ ಸುಂದರನಲ್ಲ. ದೊಡ್ಡ ನೌಕರಿದಾರನಲ್ಲ. ಆದರೂ ಇವನನ್ನು ಪ್ರೀತಿಸುತ್ತಾಳಾದರೂ ಏಕೆಂದು ಅವನ ಅಮ್ಮನ ಮನದ ಕಾರ್‍ನರ್‌ನಲ್ಲೆಲ್ಲೋ ಕಸಿವಿಸಿ ಕವಿದಿದೆ. ಅವಳಾದರೂ ತುಂಬಾ ಪ್ರಾಕ್ಟಿಕಲ್‌ ಹುಡುಗಿಯೆ. ಶ್ರೀಕಾಂಶ ಬರಿ ರೇಲ್ವೆ ಗುಮಾಸ್ತನಾಗಿದ್ದಿದ್ದರೆ ಅವಳ ಕಣ್ಣಂಚಿಗೂ ಅಂವಾ ಬೀಳುತ್ತಿರಲಿಲ್ಲವೇನೋ. ಶ್ರೀಕಾಂತ ಪತ್ರಿಕೆಗಳಿಗೆ ಬರೆದು ಹೆಸರು ಮಾಡಿದ್ದಾನೆ. ಅವಳಿಗೆ ಅವನ ಕಥಗಳು ಸುತ್ರಾಂ ಅರ್‍ಥವಾಗದಿದ್ದರೂ ಅವು ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾಗುವುದರಿಂದ ಅವನು ಮುಂದೆಂದೋ ದೊಡ್ಡ ಕಥೆಗಾರನಾದನೆಂಬ ಭ್ರಮೆ. ಅವಳ ಮನದಲ್ಲಿ ರಂಗೋಲಿ ಬಿಡಿಸಿದೆ. ನಾನ್‌-ಅಕಾಡಮಿಕ್‌ ಬರಹಗಾರನಾದ ಅವನ ಕಥೆಯನ್ನು ವಿಮರ್‍ಶಕರಂತೂ ಮಚ್ಚಿಕೊಂಡಿಲ್ಲವಾದರೂ ಓದುಗರ ಡಾರ್‍ಲಿಂಗ್ ಅವನು. ಸಾಹಿತ್ಯದ ಗಂಧಗಾಳಿಯಿಂದ ಅನುಗಾಲವೂ ದೂರ ಉಳಿದಿದ್ದ ಅವಳು ಶ್ರೀಕಾಂತನ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಹೋಗುತ್ತಾಳೆ. ಬೋರ್‌ ಹೊಡೆದರೂ ಕೂರುತ್ತಾಳೆ. ಅವನಿಂದ ಪದೆ ಪದೆ ಆಟೋಗ್ರಾಫ್‌ ಪಡೆದು ಅವನ ಭಾಷಣಕ್ಕೆ ಹಚ್ಚು ಜೋರಾಗಿ ಚಪ್ಪಾಳೆ ತಟ್ಟುವುದರ ಮೂಲಕ ಅವನ ಮನದ ಕದವನ್ನೂ ತಟ್ಟಿದವಳು. ಗಾಜು ಕಂಗಳ ಬೆಲ್ಜಿಯಂ ಗ್ಲಾಸ್‌ನಂತೆ ಮಿರಿಮಿರಿ ಮಿಂಚುವ ಐದೂವರೆ ಅಡಿ ಸಪೂರ ದೇಹಕ್ಕೆ ಕೂಂಚ ಭಾರವೇ ಎನಿಸುವಷ್ಟು ಮೋಸುಂಬಿ ಗಾತ್ರದ ಮೂಲೆಗಳ ಚೆಲುವೆ ಕವಿಮನದ ಶ್ರೀಕಾಂತನ ಮನಸಳೆಯುವುದೇನೂ ಕಷ್ಟವಾಗಲಿಲ್ಲ. ಅಭಿಮಾನಿಯಾಗಿ ಕಾಣಿಸಿಕೊಂಡವಳು ಕನಸಿಗಿಳಿದಳು ಮನಸಿಗೂ ಹಿತವಾದಳು. ತಾವು ಪ್ರೇಮಿಗಳೆ ಎಂಬುದು ಈವರೆಗೆ ಅವರಿಗೇ ಕನ್‌ಫರ್ಮ್‌ ಆಗದಿದ್ದರೂ ಊರುಕೇರಿಯ ಜನ ಪ್ರೇಮಿಗಳೆಂದೇ ನಂಬಿ ಮೊಹರು ಜಡಿದಿದ್ದಾಗಿದೆ. ಇಷ್ಟಾದರೂ ‘ಐ ಲವ್‌ ಯು’ ಎಂದು ಉಸುರುವ ಎದೆಗಾರಿಕಯಾಗಲಿ ಸಲಿಗೆಯಾಗಲಿ ಇಬ್ಬರೂ ತೋರಲಿಲ್ಲವಾದರೂ, ಅವಳು ತನ್ನ ಸೊತ್ತೆಂಬಂತೆ ನಡೆನುಡಿಯಲ್ಲ ವರ್ತಿಸುವಾಗ ಅವನೂ ತನ್ನನ್ನು ಪ್ರೀತಿಸುತ್ತಿರಬಹುದೆಂದೇ ನಂಬಿದಳು. ಚುಂಬಿಸಿದಳು. ಅವನ ಅಸಹಜ ಯಜಮಾನಿಕೆಯನ್ನವಳು ನಗುತ್ತಲೇ ಸ್ವೀಕರಿಸಿದಳು. ಅವನಲ್ಲೂ ಅದೇ ತೆರನಾದ ಭರವಸೆ ಕುಡಿಯೊಡೆಯುವಾಗಲೇ ತನ್ನ ವರಸೆ ಬದಲಿಸಿಯಾಳಂಬೆ ಕಿಂಚಿತ್ತೂ ಅರಿವಿಲ್ಲದ ಅವನ ಮುಗ್ಧತಯೇ ಅವನಿಗೆ ಮುಳುವಾಯಿತು. ಇಷ್ಟೆಲ್ಲಾ ಯಡವಟ್ಟಿಗೆ ಅವನ ಕಥೆಯೊಂದು ಸಿನಿಮಾಕ್ಕೆ ಆಯ್ಕೆಯಾದದ್ದೇ ಕಾರಣವಾಗಬೇಕೆ. ತನ್ನ ಕಥೆಗಳು ಅವಳ ಮನಸ್ಸನ್ನು ಕದ್ದಿದ್ದು, ಓಕೆ. ಅವಳನ್ನು ತನ್ನಿಂದಲೂ ಕದಿಯಿತೇಕೆ ಎಂಬ ಕೊರಗು ಲೈಫ್‌ಲಾಂಗ್‌ ಉಳಿಯುವಂತೆ ಮಾಡಿತು. ಅವನ ಕಥ ಅವಳ ಜೀವನದಲ್ಲುಂಟು ಮಾಡಿದ ಮ್ಯಾಜಿಕ್ಕೇ ಅವನ ಪಾಲಿಗಾದ ಟ್ರಾಜಿಕ್ಕು ಎಂದರಿವಾಗುವಷ್ಟರಲ್ಲಿ ಅವನ ಪಾಲಿಗೆ ಅವಳು ದುಬಾರಿ ಹೆಣ್ಣಾಗಿ ರೂಪಾಂತಗೊಂಡಿದ್ದಳು. ಅದೆಲ್ಲಾ ಹೇಗಾಯಿತಂದರೆ:

ಅವನ ಕಥೆಯೊಂದು ಪತ್ರಿಕೆಯಲ್ಲಿ ಯಾವ ನಿರೀಕ್ಷಯಿಲ್ಲದೆ ಎಂದಿನಂತೆ ಪ್ರಕಟವಾಗಿ ಯಾರ ಸಂತಸ ಹೆಚ್ಚಿಸಿತೋ ಬಿಟ್ಟಿತೋ ಅವನಂತೂ ದಿಲ್‌ಖುಷ್‌. ಆ ಮರೆಯುವ ಮುನ್ನವೆ ಒಬ್ಬ ಸೂಟ್‌ಕೇಸ್‌ ಹಿಡಿದವ ಕಾರಿನಿಂದ ಇಳಿದು ಮನೆಗೆ ಬಂದ. ಅವನ ಹಿಂದೆಯೇ ಮೂವರು ಸೂಟುಧಾರಿಗಳು. ಅಸಲಿಗೆ ಇವರಲ್ಲಾ ಯಾರು? ಇನ್‌ಕಂಟ್ಯಾಕ್ಸ್‌ನವರು ರೈಡ್‌ ಮಾಡುವಷ್ಟು ಸ್ಥಿತಿವಂತ ತಾನೇನಲ್ಲವೆಂದವನು ಹಳಹಳಿಸುವಾಗಲೇ ಬಂದವರು ತಮ್ಮ ಪರಿಚಯ ಮಾಡಿಕೊಂಡವನ ತಲೆ ಭಾರ ಇಳಿಸಿದರು. ಬಂದವರು ಆರ್ಟ್‌ಫಿಲಂ ಪ್ರೊಡ್ಯೂಸರ್‍ಸ್. ಅವರಲ್ಲೊಬ್ಬ ನಿರ್‍ದೇಶಕ. ಅವನೇ ಮಾತನಾಡಿದ. ನಮ್ಮದು ಲೋಬಜಿಟ್‌ ಫಿಲಂ ನೀವು ದೂಡ್ಡ ಲೇಖಕರು. ದಯಮಾಡಿ ಸಹಕರಿಸಬೇಕೆಂದು ‘ಜಾಕ್’ ಕೊಟ್ಟ. ಕಾರು ನಿಂತಿದ್ದನ್ನು ನೋಡಿ ಕಾಲೇಜಿಂದ ಮನೆಗೆ ಹೊರಟಿದ್ದ ಅವಳು ಕುತೂಹಲದಿಂದ ಒಳ ನುಸುಳಿದಳು. ಬಂದವರು ದುಡ್ಡಿಗೆ ಗುಂಜಾಡುತ್ತಿದ್ದರು. ಶ್ರೀಕಾಂತ ರಾಂಗ್‌ ಆಗಿದ್ದ. ಆರ್ಟ್‌ಫಿಲಂ ಮಾಡೋದಾದ್ರೆ ಕಥೆ ಕೊಡೋದಿಲ್ಲ. ಜನ ನೋಡುವಂತಹ ಸಿನೆಮಾ ಮಾಡ್ರಯ್ಯ ಎಂದು ಶ್ರೀಕಾಂತನು ತೇಜಸ್ವಿ ತರಾ ಪೋಜ್‌ ಕೊಟ್ಟ. ‘ಅಯ್ಯೋ ದುಡ್ಡೇ ಮುಖ್ಯವಲ್ಲ ಕಥೆ ಒಂದು ಸಿನಿಮಾ ಆಯ್ತೋ ದೊಡ್ಡ ಲೇಖಕರ ಸಾಲಿಗೆ ಜಮಾ ಆಗ್ತಿಯಾ ಕಣೋ. ದಿನಾ ಪೇಪರಲ್ಲಿ ಹೆಸರು ಬರುತ್ತೆ. ದುಡ್ಡಿನ ಮುಖ ನೋಡ್ಬೇಡ. ನನ್ನ ಮುಖ ನೋಡು’ ಎಂದವಳು ಇಷ್ಟಗಲ ನಕ್ಕು ಕಣ್ಣಲ್ಲೇ ಮುತ್ತು ಕೊಡುವ ಭರವಸೇನೂ ನೀಡಿದಾಗ ಕಥಗಾರ ಶ್ರೀ ಅಗ್ರಿಮೆಂಟ್‌ ಪೇಪರ್‌ಗಳಿಗೆ ಸಹಿಹಾಕಿದ. ಸಾವಿರ ರೂಪಾಯಿ ಅವನ ಜೇಬಿಗಿಟ್ಟು ತಾಜಾ ಮಾಡಿದರು ಆರ್ಟ್‌ಫಿಲಂ ಖದೀಮರು. ತಮಗೆ ಕಥೆ ಕೊಟ್ಟವನಿಗಿಂತ ಕಥೆ ಕೊಡಿಸಿದ ಹುಡುಗಿ ಅಪ್ಯಾಯವಾಗಿ ಕಂಡಳು. ನೂರಾರು ಹುಡುಗಿಯರ ಮಧ್ಯೆಯೂ ಎದ್ದು ಕಾಣುವಂತಹ ಅವಳ ಯೌವನದ ಪ್ರಖರತೆಗೆ ಕರಗಿ ನೀರಾದರು “ತಮ್ಮ ಹೆಸರು? ಎಂದವಳನ್ನೇ ಪಿಳಿಪಿಳಿಸಿದರು. ಅವಳು ಕೂತಲ್ಲೇ ಕುಲುಕಿ ‘ಶಾಮಿಲಿ’ ಅಂದಳು. ‘ವಾಯ್ಸೂ ಓಕೆ. ತಾವು ಸಿನಮಾದಲ್ಲಿ ಮಾಡ್ತಿರಾ ಶಾಮಿಲೀಜಿ?’ ಎಂದು ಪೀಠಿಕೆ ಹಾಕಿದರು. ನಖಶಿಖಾಂತ ಉರಿದೆದ್ದ ಶ್ರೀ ಅವರನ್ನೆಲ್ಲಾ ಅಕ್ಷರಶಃ ಬೆನ್ನಟ್ಟಿ ಮನೆಯಿಂದಾಚಿಗೆ ಓಡಿಸಿದ್ದ. ಆಮೇಲಾಮೇಲೆ ವಾರಗಟ್ಟಲೆ ಕಾಣದಂತಾಗಿಬಿಡುವ ಶಾಮಿಲಿ ಕುರಿತು ಅವಳ ಮನೆಯಲ್ಲಿ ವಿಚಾರಿಸಿದ. ಅವಳ ಅಕ್ಕನಿಗೆ ಹರಿಗೆಯಾಗಿದೆ ಆಗೀಗ ಬೆಂಗಳೂರಿಗೆ ಹೋಗಿ ಬರುತ್ತಾಳೆಂದು ಹೇಳಿ ಅವಳಪ್ಪ ನಿರ್‍ಲಿಪ್ತನಾಗಿಬಿಟ್ಟಿದ್ದ. ಕಛೇರಿ ಗೆಳೆಯರು ಒಂದು ದಿನ ‘ಕಂಗ್ರಾಟ್ಸ್’ ಹೇಳಿದಾಗ ಅವನಿಗೆ ಅಚ್ಚರಿ. ನಿನ್ನ ಕಥೆ ಸಿನಿಮಾ ಆಗ್ತಿರೋ ಸುದ್ದಿ ಪೇಪರಲ್ಲಿ ಬಂದಿದೆಯಪ್ಪಾ ಎಂದವರು ಫ್ಲಾಶ್‌ನ್ಯೂಸ್ ಬಿತ್ತರಿಸಿದಾಗ ಪೇಪರ್‌ ತರಿಸಿದ. ನೋಡಿದ. ಶ್ರೀಕಾಂತನ ಪಾಲಿಗದು ಹಾರ್ಟ್‌ ಬೇಕಿಂಗ್ ನ್ಯೂಸ್! ಶ್ರೀ ಕಥೆ ಆಧಾರಿತ ‘ಬುಡಕಟ್ಟು ಬೆಡಗಿ’ ಎಂಬ ಚಿತ್ರವೇನೋ ಚಿತ್ರೀಕರಣ ಮುಗಿಸುತ್ತಾ ಬಂದ ವರದಿ ಹ್ಯಾಪಿ ನ್ಯೂಸ್‌. ಆದರೆ ಅದರಲ್ಲಿನ ನಾಯಕಿ ರವಿಕೆ ತೊಡದೆ ಪಾರದರ್‍ಶಕ ಸೆರಗಿನಲ್ಲಿ ಎಲ್ಲಾ ತೆರೆದಿಟ್ಟಿರುವ ಪರಿ ಅವನ ಮೊದಲ ನೋಟಕ್ಕೆ ತುಪ್ಪ ತಿನ್ನಿಸಿತಾದರೂ ಆ ಬೆಡಗಿ ಯಾರೆಂದು ಅರಿವಾದಾಗ ಅದರುಬದರಾಗಿ ಬಿಟ್ಟ. ತಲೆಗೂದಲನ್ನು ಕಿತ್ತುಕೊಂಡ. ತಲೆಗೆ ಮೊಳೆಗಳನ್ನಿರಿಸಿ ಯಾರೋ ಸುತ್ತಿಗೆಯಿಂದ ಜಡಿದಷ್ಟು ಯಾತನೆ. ತನ್ನ ಶಾಮಿಲಿ ತನಗೇ ಗೊತ್ತಿಲ್ಲದೆ ಸಿನಿಮಾದಲ್ಲಿ ಅಭಿನಯಿಸುವುದೆ? ಕುದ್ದು ಕೆಂಡವಾಗಿ ಸುಟ್ಟು ಕರಕಲಾದ. ಅದೊಂದು ಕಲಾತ್ಮಕ ಚಿತ್ರವಾದ್ದರಿಂದ ಅಷ್ಟೊಂದು ಪ್ರಚಾರವೂ ಸಿಗದಿದ್ದರಿಂದ ಶ್ರೀಕಾಂತ ಅಷ್ಟಾಗಿ ಗಾಯಗೊಳ್ಳಲಿಲ್ಲ. ಚಿತ್ರವು ಮುಗಿಯಿತೆಂಬ ಸುದ್ದಿಯಾದರೂ ಶಾಮಿಲಿ ಹಿಂತಿರುಗಿ ಬರುವ ಯಾವ ಲಕ್ಷಣವೂ ಕಾಣಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಅವಳ ಮನೆಗೇ ಹೋದ. ಮನೆ ಡೋರ್‌ಲಾಕ್‌! ಅವಳನ್ನು ನೋಡಲಾಗದೆ ನೋಡದಿರಲಾರದೆ ಬೆಂಗಳೂರಿನಂತಹ ಮಾಯಾ ಬಜಾರ್‌ನಲ್ಲಿ ಅವಳಿರುವುದೂ ತಿಳಿಯಲಾಗದ ಒಳಗೇ ಕುದ್ದು ಹೋದ. ದಿನಗಳು ಬಣ್ಣಗೆಟ್ಟವು. ಶಾಮಿಲಿ ಈಗ ಹೆಸರಾಂತ ಹೀರೋ ಜೊತೆ ಅಭಿನಯಿಸುತ್ತಿರುವ ಚಿತ್ರವೊಂದು ಆರಂಭಗೊಂಡ ಸುದ್ದಿ ಪತ್ರಿಕೆಗಳನ್ನು ಬಣ್ಣ ಮಾಡಿತು. ಅವಳ ಮೊದಲ ಚಿತ್ರಕ್ಕೆ ರಾಷಪ್ರಶಸ್ತಿ ಬಂದಾಗ ನಿರ್‍ಮಾಪಕರಲ್ಲೊಬ್ಬ ಶ್ರೀಕಾಂತನಿಗೆ ಫೋನ್‌ ಹಚ್ಚಿ ವಿಷಯ ತಿಳಿಸುವಷ್ಟು ಔದಾರ್ಯ ತೋರಿದ. ಶಾಮಿಲಿಗೆ ಮೊದಲ ಚಿತ್ರದಲ್ಲೇ ಅತ್ಯುತ್ತಮ್ಮ ನಟಿ ಪ್ರಶಸ್ತಿ ಬೇರೆ ಗಿಟ್ಟಿದೆ ಎಂದು ಹೇಳಿದಾಗಲಂತೂ ಚಿಗುರೂಡೆದಿದ್ದ ಸಂತೋಷವು ಸಡನ್‌ ಆಗಿ ಅಬಾರ್‍ಶನ್ ಆಗಿತ್ತು. ಬಾದಾಮಿ ಹೌಸ್‌ನಲ್ಲಿ ಗೆಳಯರಿಗಾಗಿ ಬಿಟ್ಟಿ ಪ್ರದರ್ಶನವಿದೆ ಬನ್ನಿರೆಂದು ಚಿತ್ರತಂಡ ಕರೆದಾಗ ಇವನು ಹೋಗಲೂ ಇಲ್ಲ-ಅವಳನ್ನು ನೋಡಬೇಕಾದೀತೆಂಬ ಮುಜುಗರದಿಂದ. ಪುಣ್ಯ ವಶಾತ್‌ ಚಿತ್ರ ಯಾವ ಥಿಯೇಟರಿನಲ್ಲೂ ಬಿಡುಗಡೆಯ ಭಾಗ್ಯ ಕಾಣದೆ ಡಬ್ಬಾ ಸರಿದಾಗ ಸಂತೋಷಪಟ್ಟಿದ್ದೂ ಅವನೊಬ್ಬನೆ ಇರಬೇಕು. ಆದರೆ ಶ್ರೀಕಾಂತನ ನಸೀಬೆ ಖೋಠಾ. ಶಾಮಿಲಿ ಮುಂದಿನ ಚಿತ್ರಗಳ ಅಭಿನಯದ ಬಣ್ಣದ ಜಾಹಿರಾತುಗಳು ಎಡಬಿಡದೆ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳತೂಡಗಿದಾಗ ಅರೆ ಹುಚ್ಚನಂತಾದ. ಪತ್ರಿಕೆಗಳನ್ನು ಮನೆಗೆ ತರಿಸುವುದನ್ನೇ ಮನ್ನಾ ಮಾಡಿದ. ಪತ್ರಿಕೆಗಳನ್ನು ಮುಟ್ಟದಷ್ಟು ನೋಡದಷ್ಟು ಸೂಕ್ಷ್ಮವಾದ. ಶಾಮಿಲಿ ತಮ್ಮ ಊರಿಗೆ ಹೆಸರು ತಂದಳೆಂದು ಜನ ಹೆಮ್ಮೆ ಪಡುವಾಗ ಕುಬ್ಜನಾದ. ಅವಳನ್ನು ಕಂಡರಾಗದ ತನ್ನ ಮನೆಯವರೂ ಅವಳ ವಿಚಾರದಲ್ಲೀಗ ‘ಸಾಫ್ಟ್‌’ ಆದಾಗ ಶ್ರೀಕಾಂತ ಪತ್ರಿಕೆಗಳನ್ನು ನೋಡದಿರಬಹುದಾದರೂ ಬೀದಿಯಲ್ಲಿ ಮೆತ್ತಿಕೊಂಡ ಸಿನಿಮಾ ಪೋಸ್ಟರ್, ಫ್ಲೆಕ್ಸ್, ವಿನ್ನೆಲ್‌ಗಳಿಂದ ಬಚಾವಾಗಲು ಸಾಧ್ಯವೆ? ಒಂದರಲ್ಲಿ ಹಿರೋನನ್ನು ಗಾಢವಾಗಿ ತಬ್ಬಿದ್ದಾಳೆ. ಯಾವುದರಲ್ಲೋ ಹಿರೋನೇ ಅವಳ ಮೇಲೆ ಮಲಗಿ ಮುತ್ತಿಡುತ್ತಿದ್ದಾನೆ. ಅರೆಬರೆ ಮೊಲೆಗಳು ಹೊಕ್ಕುಳದ ಕೆಳಗೂ ಮೊಳದುದ್ದ ಬೆತ್ತಲೆ, ಸಿಡಿಲ ತೂಡೆಗಳ ಪ್ರದರ್ಶನ. ಬೀದಿಯಲ್ಲೇ ನಿಂತು ಬಾಯಿ ಚಪ್ಪರಿಸಿಕೂಂಡು ನೋಡುವ ಜನ. ಇದನ್ನೆಲ್ಲಾ ಕಂಡ ಶ್ರೀಕಾಂತನಿಗೆ ಉಂಟಾಗಿದ್ದು ಅಸೂಯೆಯೋ ಅಸಹ್ಯವೋ ಅವನಿಗೇ ತಿಳಿಯದಾಗಿ ದಿನಗಳು ಕೊಳಕಾದವು. ‘ಏನಮ್ಮಾ ನಿನ್ನ ಹುಡ್ಗಿ ದೊಡ್ಡ ಹಿರೋಯಿನ್‌ ಆಗಿಬಿಟ್ಲು. ಏನ್‌ ಸಖತ್ತಾಗಿದಾಳಲ್ಲಯ್ಯ. ಮೋಸ್ಟ್‌ ಸೆಕ್ಸಿ’ ಎಂದೆಲ್ಲಾ ಕೊಂಡಾಡುವಾಗ ಸಹನೆಯ ಕಟ್ಟೆಯೊಡೆದ ಶ್ರೀಕಾಂತ ಕೂಗಾಡಿದ. ‘ಶಾಮಿಲಿ ಸೂಳೆಗಿಂತ ಕಡೆ’ ಅಂದದ್ದೇ ವಿವಾದವಾಗಿ ಜಗಳಕ್ಕೆ ತಿರುಗಿ ಅವಳ ಅಭಿಮಾನಿಗಳಿಂದ ಬೀದಿಯಲ್ಲೇ ಧರ್ಮದೇಟುಗಳೂ ಬಿದ್ದು ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಬಿತರವಾದಾಗ ನೂಂದುಕೊಳ್ಳುವ ಸರದಿ ಈಗ ಮನೆಯವರದ್ದು. ತಿಳಿ ಹೇಳಲು ಯತ್ನಿಸಿ ತಾಯಿ ತಂಗಿಯರು ಸೋತರು. ಕುರುಡಿಗೆ ದೀಪ ಸೇರದೆಂದರೆ ಕರ್‍ನಾಟಕ ಜನತೆಗೂ ಸೇರದಿದ್ದೀತೆ? ಅವಳ ಚಿತ್ರಗಳು ಪೈಪೋಟಿಯ ಮೇಲೆ ಬಿಡುಗಡೆಯಾದವು. ನೂರು ದಿನ ಆಚರಿಸಿಕೂಂಡವು. ಹಳಗೋಡೆ ಹೊಸಕಾಂಪೌಂಡ್‌, ಕಸದ ತೊಟ್ಟಿ, ಲೈಟ್‌ಕಂಬ, ಕಕ್ಕಸಿನ ಮನೆಯಂಬ ಭೇದಭಾವವಿಲ್ಲದೆ ಪೋಸ್ಟರ್‌ಗಳು ಎಲ್ಲೆಂದರಲ್ಲಿ ಅಲಂಕೃತಗೊಂಡಾಗ ಅವನ್ನು ನೋಡದೆ ಅವನು ಕಛೇರಿ ಸೇರುವುದಾದರೂ ಎಂತು? ಎರಡುಮೂರು ವರ್ಷಗಳಲ್ಲೇ ಶಾಮಿಲಿ ಕನ್ನಡದ ಮತ್ತೂಬ್ಬ ಮಾಲಾಶ್ರೀ ಎನ್ನಿಸಿದಳು. ಊರಿಗೆ ಊರೇ ಚಿತ್ರ ನೋಡುವಾಗ ತನ್ನ ಮನೆಯವರೂ ನೋಡಿ ಗುಣಗಾನ ಮಾಡುವಾಗ ಕಿವಿಯಲಿ ಕಾದ ಸೀಸ ಸುರಿದ ಅನುಭವವಾದರೂ ಸೈರಣಗೆಡದೆ ನಿರ್‍ಲಿಪ್ತನಂತಿರಲು ಅಭ್ಯಾಸ ನಡೆಸಿದ. ಟಿವಿಯನ್ನೇ ಎತ್ತಿ ಬಿಸಾಡಿದ ಅವನು ಮನೆಯವರ ಪಾಲಿಗೆ ಹುಚ್ಚನಂತೆ ಭಾಸವಾದ.

ಒಂದು ದಿನ ಅವನ ಮನೆಯ ಮುಂದೆ ಇನ್ನೋವಾ ಕಾರು ಬಂದು ನಿಂತಿತು. ಕನ್ನಡದ ದೊಡ್ಡ ನಿರ್‍ಮಾಪಕರು ಅವನ ಕಥೆಯ ಅಗ್ರಿಮೆಂಟಿಗಾಗಿ ಬಂದರು. ‘ದುಡ್ಡೇನ್ ಕೊಡ್ತಿರ್ರೀ?’ ಎಂದು ಅಸಹಜವಾಗಿ ಸಿಡಿದ. ‘ನೀವು ಕೇಳಿದಷ್ಟು’ ಎಂದು ಚಕ್‌ಬುಕ್ ತೆರೆದು, ‘ಚೆಕ್ಕೋ? ಕ್ಯಾಷೋ? ಅವನ ಮುಖ ನೋಡಿದರು. ಇವನಿಗೇ ನಂಬಲಾಗಲಿಲ್ಲ. ನನ್ನದೊಂದು ಕಂಡೀಷನ್‌ ಅಂದ. ಹೇಳಿ ಎಂಬಂತೆ ನಕ್ಕರು. ಚಿತ್ರಕ್ಕೆ ಶಾಮಿಲಿ ಬಿಟ್ಟು ಹಿರೋಯಿನ್‌ ಯಾರಾದರೂ ಸೈ ಅಂದ. “ಅಯ್ಯೋರಾಮ ಶಾಮಿಲಿ ಮೇಡಂ ಕಳಿಸಿದ್ದಕ್ಕೆ ನಾವು ನಿಮ್ಮ ಹತ್ತಿರ ಬಂದಿದ್ದು. ಕೇಳಿದಷ್ಟು ಹಣ ಪೀಕಲು ಸಿದ್ಧರಾಗಿದ್ದೇ ಆಯಮ್ಮನ ಸಲುವಾಗಿ’ ವಿವರಿಸಿದರು. ಕೆಂಡಾಮಂಡಲವಾದ ಶ್ರೀಕಾಂತ ಯಾವ ನಮೂನೆ ಅವರ ಗತಿಕಾಣಿಸಿ ಸಾಗುಹಾಕಿದನೆಂಬುದು ನಿಮ್ಮ ಕಲ್ಪನೆಗೆ ಬಿಡೋಣ. ಅಲ್ಲಿಂದ ಮುಂದೆ ಅವನು ಕಥೆ ಬರೆಯುವುದನ್ನೇ ಬಿಟ್ಟು ಓನ್ಲಿ ಗಡ್ಡಬಿಟ್ಟ. ಶಾಮಿಲಿ ಅಗ್ದಿ ಭಯಂಕರವಾಗಿ ಫೇಮಸ್‌ ಆಗುತ್ತಾ ಹಾದಿಬೀದಿಯಲಿ ಸೆಕ್ಸಿಯಾಗಿ ಕಂಗೊಳಿಸುವಾಗ, ಎಲ್ಲೆಡೆ ಅವಳ ಟ್ಯಾಲೆಂಟ್ ಅಂಡ್ ಬೋಲ್ಡ್‍ನೆಸ್ಫ಼್ ಬಗ್ಗೆ ಮಾತನಾಡುವಾಗ, ಅಯ್ಯಾ ಎನ್ನಕುರುಡನ ಮಾಡಯ್ಯ, ಅಯ್ಯಾ ಎನ್ನ ಕಿವುಡನ ಮಾಡಯ್ಯ ಎಂದು ಪರಿತಪಿಸಿದ. ಅವಳ ಕುರಿತು ಎಲ್ಲಂದರಲ್ಲೇನು ಮನೆಯಲ್ಲೂ ಕೀಳಾಗಿ ಮಾತನಾಡಲೂ ಭಯಪಡುವಂತಾದ.

ಒಂದು ಶುಭದಿನ ಸ್ಕೋಡಾ ಕಾರೊಂದು ತೇಲಿ ಬಂದು ಶ್ರೀಕಾಂತನ ಮನೆ ಮುಂದೆ ಪಾರ್‍ಕ್‌ ಆಯಿತು. ಜನ ಇಣುಕಿದರು ಹೃದಯಸ್ತಂಭನವೇ ನಿಂತಷ್ಟು ಖುಷಿ. ಶಾಮಿಲಿ ಶ್ರೀಕಾಂತನ ಗೋಡೌನ್‌ ನಂತಹ ಮನೆಗೆ ಬಂದಿದ್ದಾಳೆ! ಮನೆಯವರು ತಕತಕನೆ ಕುಣಿಯುತ್ತಾ ಬರಮಾಡಿಕೊಂಡರು. ಬಾಡಿಗಾರ್‍ಡ್‌ಗಳು ಬಾಗಿಲಲ್ಲೇ ನಿಂತರು. ಜನಜಾತ್ರೆಯಿಂದಾಗಿ ರೋಡ್‌ಜಾಮ್‌. ‘ವಂಯ್’ ಗುಟ್ಟುತ್ತಾ ಪೊಲೀಸ್‌ ವ್ಯಾನೂ ರಕ್ಷಣೆಗೆ ಬಂತು. ತನ್ನ ಅಟ್ಟಹಾಸ ತೋರಲೆಂದು ಬಂದಳೆ ಎಂದವಳನ್ನು ಅಪಾದಮಸ್ತಕ ನೋಡಿ ಅವಳ ಪ್ರಖರತೆಯ ಎದುರು ಮತಿಹೀನನಂತಾದ. ‘ಯೋಯ್! ಏಕೆ ಬಂದೆ?’ ಗೆಟ್ಟ್‌ಔಟ್‌’ ಎಂದು ಅರಚಾಡಿದ. ಜನ ಹೊರಗಡೆ ಅವಳಿಗೆ ಜಯಕಾರ ಹಾಕುವಾಗ ದನಿ ತಗ್ಗಿಸಿದ, ‘ಪ್ಲೀಸ್‌ ಔಟ್‌’ ಎಂದು ಮೂರನೆ ಕಣ್ಣು ತೆರೆದ. ‘ಅಲ್ಲಾಶ್ರೀ, ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವಲ್ಲ. ಈಗಲೂ ನಾನು ಪ್ರೀತಿಸುತ್ತಿದ್ದೇನೆ…… ನನ್ನನ್ನು ಮದುವೆಯಾಗ್ತೀಯಾ ಫ್ಲೀಸ್‌’ ತುಂಬಾ ಮೃದುಮಧುರವಾದ ವಿನಂತಿ ಅವನ ಮುಂದಿರಿಸಿದಳು. ‘ನಿನಗಿಂತ ಸೂಳೆಯನ್ನು ಮದುವೆಯಾಗೋದು ಎಷ್ಟೋ ಮೇಲು. ಅವಳಾದರೂ ಎಲ್ಲವನ್ನೂ ಕತ್ತಲ ಮರೆಯಲ್ಲಿ ಮಾಡಿ ಮುಗಿಸ್ತಾಳೆ…… ನೀನು ಗುಮ್ಮುವಂತೆ ನೋಡಿದ. ‘ಕಲೆಯ ಬಗ್ಗ ಗೌರವವಿರಲಿ. ನಾನು ಕಲಾವಿದೆ? ಕನ್ವಿನ್ಸ್ ಮಾಡಲು ಪ್ರಯತ್ನಿಸಿದಳು. ‘ಬಟ್ಟೆ ಬಿಚ್ಚೋದು ಕಲೆ ಅಲ್ಲ ಕಣೆ… ಕಲೆಯ ಕೊಲೆ’ ರೇಗಿದ. ‘ಸಾರಿ. ಕಲಾತ್ಮಕತೆ, ನೋಡುವ ಕಣ್ಣು ಮನಸ್ಸು ಪವಿತ್ರವಾಗಿರಬೇಕಷ್ಟೆ….. ಫಾರ್‌ ಎಕ್ಸಾಂಪಲ್‌ ಬೇಲೂರ ಶಿಲಾಬಾಲಕಿಯರು…..’ ಅವಳ ಮಾತನ್ನು ತಡೆದು ‘ಶಟ್‌ಅಪ್‌’ ಎಂದಬ್ಬರಿಸಿದ. ‘ಹಣಗಳಿಕೆಗಾಗಿಯೇ ಬೆತ್ತಲಾಗುವ ಆಶೆಬುರುಕಿಯರಿಗಿಂತ ಹೊಟ್ಟೆಪಾಡಿಗಾಗಿ ಬೆತ್ತಲಾಗುವ ಸೂಳೆಯರನ್ನು ನಾನು ಹೆಚ್ಚು ಗೌರವಿಸುತ್ತೇನೆ. ನೀನಿನ್ನು ಹೋಗಬಹುದು’ ಅಂದು ಕೈಜೋಡಿಸಿದ. ‘ಹೋಗುತ್ತೇನಪ್ಪ. ಇಷ್ಟೊಂದು ಗೌರವಿಸುವ ನೀನು ಸೂಳೆಯನ್ನೇ ಏಕೆ ಮುದುವಯಾಗಿ ಆದರ್‍ಶ ತೋರಬಾರದು’ ಕಣಕಿ ಪಕಪಕನೆ ನಕ್ಕಳು. “ನಗಬೇಡ್ವೆ…. ಸೂಳೆಗೇ ಬಾಳು ಕೂಡುತ್ತೇನೆ…. ಛಾಲೆಂಜ್‌’ ಹೆಬ್ಬೆರಳು ತೋರಿದ. ಹೊರಗೆ ಜನಜಾತ್ರೆ ಶೀಟಿ ಗದ್ದಲಗಳ ನಡುವೆ ಶಾಮಿಲಿ ಪಾರಾಗಿ ಹೋಗುವಷ್ಟರಲ್ಲಿ ಲಾಠಿಗಳೂ ಮಹತ್ವದ ಪಾತ್ರವಹಿಸಿದವು. ತನ್ನ ಮನೆಯವರೇ ‘ಮದುವಯಾಗೋ….. ಪಾಪ’ ಎಂದಂದು ಉಗಿಸಿಕೊಂಡು ಸುಮ್ಮನಾದರು. ಶ್ರೀಕಾಂತ ಸುಮ್ಮನಾಗಲಿಲ್ಲ. ವೇಶ್ಯೆಯರ ನಿರಾಶ್ರಿತ ಕೇಂದ್ರಕ್ಕೆ ಹೋಗಿ ವೇಶ್ಯಯೊಬ್ಬಳನ್ನು ಆರಿಸಿ ಬೃಹನ್ಮಠದ ಸಾಮೂಹಿಕ ವಿವಾಹದಲ್ಲಿ ವಿವಾಹ ಆಗಿಬಿಟ್ಟ. ಮನೆಯವರು ಅವನನ್ನು ನಿರ್‍ದಾಕ್ಷಿಣ್ಯವಾಗಿ ಹೊರಗಟ್ಟಿದರು. ಬೇರೆ ಮನೆ ಮಾಡಿದ. ಒಂದಿಷ್ಟು ಪ್ರಚಾರವೂ ಸಿಕ್ಕಿತು. ಆದರೆ ಅವನಿಗೆಲ್ಲಿಯ ನೆಮ್ಮದಿ. ಬೀದಿಯೆಲ್ಲ ಹಂಡತಿಯೊಂದಿಗೆ ಖರೀದಿಗೆ ಹೂರಟರೆ ಎಲ್ಲರೂ ಅವಳನ್ನೇ ಕಿತ್ತುಕೊಂಡು ತಿಂದರು. ಗೋಡೆಗಳ ಮೇಲೆ ಮೈತೆರೆದು ನಿಂತ ಶಾಮಿಲಿಗಿಂತ ತನ್ನ ಪತ್ನಿಯನ್ನೇ ನೋಡುವಾಗ ಅವನಿಗೆ ಹುಚ್ಚು ಹಿಡಿಯುವುದೊಂದು ಬಾಕಿ. ಇದರೊಂದಿಗೆ ಶಾಮಿಲಿ ಚಿತ್ರಗಳ ಅದ್ವಾನಗಳ ನಿಲ್ಲದ ಭರಾಟೆ. ಇದೆಲ್ಲದರಿಂದ ಪಾರಾಗುವುದ್ದೇಗೆಂದು ತಲೆಗೂದಲನ್ನು ಹಿಡಿಹಿಡಿಯಾಗಿ ಕಿತ್ತುಕೊಳ್ಳುವಾಗ ಈ ಸ್ಟೇಟನ್ನೇ ಬಿಟ್ಟು ಹೋದರೆ ಎಂಬ ಐಡಿಯಾ ತಲಯಲ್ಲಿ ಮಿಂಚು ಮೂಡಿಸಿತು. ಹರಸಾಹಸ ಮಾಡಿ ಮದರಾಸಿಗೆ ವರ್‍ಗಾವಣೆ ತಗೆದುಕೂಂಡು ಬಿಟ್ಟ.

ಮದರಾಸಿನ ಅಡೆಯಾರ್‌ ರೋಡಿನಲ್ಲಿ ಸಂಸಾರ ಹೂಡಿದ ಮೇಲೆಯೇ ಅವನಿಗೆ ಆರೋಗ್ಯ ನಿದ್ರೆ ನೆಮ್ಮದಿ ಊಟ ಸೇರಿಕೆಯಾಗಿದ್ದು. ಮೈಕೈ ತುಂಬಿಕೊಂಡ. ಪತ್ನಿ ಅಹಲ್ಯೆಯೂ ಇಚ್ಛೆಯನರಿತ ಸತಿಯಾಗಿ ಸ್ವರ್‍ಗಕ್ಕೆ ಕಿಚ್ಚು ಹತ್ತಿಸಿದಳು. ಬೀದಿಗಿಳಿದರೆ ಸಾಕು ಮದರಾಸಿನಲ್ಲೂ ಸಿನಿಮಾ ಪೋಸ್ಟರ್‍ಸ್‌ ಭರ್ಜರಿ ಹಾವಳಿಯಿತ್ತಾದರೂ ಅಲ್ಲೆಲ್ಲೂ ಶಾಮಿಲಿ ಕಾಣಲಿಲ್ಲ. ಈಗ ತಾನು ನಾರ್‍ಮಲ್‌ ಮನುಷ್ಯನಂತೆ ಕೂತು ಹಂಡತಿ ಜೊತೆ ಸಿನಿಮಾ ನೋಡಿದ. ಟಿ.ವಿ. ಕೊಂಡುತಂದು ಅರ್‍ಥವಾಗದಿದ್ದರೂ ತಮಿಳು ಚಾನಲ್‌ ಮಾತ್ರ ನೋಡಿ ಸುಖಿಸಿದ. ಹಂಡತಿಯೂ ಕನ್ನಡ ಚಾನಲ್‌ಗಳನ್ನು ಇಡಲಿಲ್ಲ. ಗಂಡ ಹಂಡತಿ ನಿಯಮಾನುಸಾರವಾಗಿ ಮಕ್ಕಳು ಮರಿಗೂ ಜನ್ಮ ನೀಡಿದರು. ವರುಷಗಳುರುಳಿದಂತೆ ಶಾಮಿಲಿಯ ಶ್ಯಾಡೋದಿಂದ ಇನ್ನೇನು ಸಂಪೂರ್‍ಣ ಪಾರಾದನೆನ್ನುವ ಸಡಗರದಲ್ಲರುವಾಗಲೆ ಬೀದಿ ಬದಿಯ ಗೋಡೆಯ ಮೇಲ ತಮಿಳಿನ ಸುಪ್ರಸಿದ್ದ ನಾಯಕನ ತೆಕ್ಕಯಲ್ಲಿ ತೊಯ್ದು ತೊಪ್ಪೆಯಾಗಿದ್ದಾಳೆ, ತನ್ನ ಶಾಮಿಲಿ. ಉಸಿರುಕಟ್ಟಿ ವಿಲಿವಿಲಿ ಒದ್ದಾಡಿದ. ಕಛೇರಿಗೆ ಬಂದವನೆ ಇಂಗ್ಲೀಷ್‌ ಪತ್ರಿಕೆಗಳನ್ನೆಲ್ಲಾ ಜಾಲಾಡಿದ. ಅವಳೀಗ ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಾ ಚತುರ್‍ಭಾಷೆಯಾಗಿರುವ ಮಾಹಿತಿ ಹೆಕ್ಕಿದ. ಈಗ ಅಂವಾ ಎಲ್ಲಿ ಹೋಗಿ ಬಚ್ಚಿಟ್ಟು ಕೊಳ್ಳಬೇಕು? ರೇಲ್ವೆ ಇಲಾಖೆ ವಿದೇಶಕ್ಕೆ ತನ್ನನ್ನು ಕಳಿಸೀತೆ. ಕಛೇರಿಯಲ್ಲಿ ತಪುತಪ್ಪಾಗಿ ಕ್ಯಾಷ್‌ಬುಕ್‌ ಬರೆದು ಅಧಿಕಾರಿಯ ಕೆಂಗಣ್ಣಿಗೆ ಗುರಿಯಾದ. ತಪ್ಪುಗಳು ರಿಪೀಟ್‌ ಆದಾಗ ತಾನು ಹುಚ್ಚನಾಗುತ್ತಿದ್ದೇನೆಯೇ ಎಂದವನೇ ಗಾಬರಿಬಿದ್ದ. ಹೆಂಡತಿಗೂ ಅಷ್ಟಿಷ್ಟು ವಿಷಯ ಮನವರಿಕಯಾಗಿತ್ತು. ‘ನೀವು ಇನ್ನೂ ಅವಳನ್ನು ಪ್ರೀತಿಸುತ್ತಿದ್ದೀರಿ ಕಣ್ರಿ, ಅವಳ ಪಾಡಿಗೆ ಅವಳನ್ನು ಬಿಟ್ಟುಬಿಡಿ. ಬೆಳಕನ್ನು ತಡೆಹಿಡಿಯಲು ಸಾಧ್ಯವೆ? ಅವಳ ಮೇಲೆ ದ್ವೇಷ ಬೆಳೆಸಿಕೊಳ್ಳಿ. ಒಬ್ಬರನ್ನು ದ್ವೇಷಿಸುತ್ತಲೂ ಬದುಕಬಹುದು. ಅವಳು ದೂಡ್ಡ ನಟಿಯಾಗಲು ನಾನೇ ಕಾರಣ ಎಂಬ ಸಂತಸ ಹಮ್ಮೆ ಹೆಚ್ಚಿಸಿಕೊಳ್ಳಿ ಆಗಲೂ ಬದುಕು ಸಹನೀಯವಾದೀತು. ಅವಳೇ ಸಂದರ್ಶನಗಳಲ್ಲಿ ನಿಮ್ಮನ್ನು ಸ್ಮರಿಸುತ್ತಾಳಲ್ಲ’ ಸಮಾಧಾನ ಹೇಳಿದ ಅಹಲ್ಯೆಯ ಕೆನ್ನೆಗೊಂದು ಬಾರಿಸಿದ ನಂತರವೆ ಅವನಿಗೆ ಸಮಾಧಾನವಾದದ್ದು. ‘ಶಾಮಿಲಿ ರುಂಬಾ ಅಳಗಾನ ಆರ್‍ಟಿಸ್ಟ್‌, ಉಂಗ ಕರ್‍ನಾಟಕ ಪೊಣ್ಣಯ್ಯ, ವಿ ಮಸ್ಟ್‌ ಬಿ ಪ್ರೌಡ್‌ ಆಫ್‌ ಹರ್‌. ವಯಸ್ಸು ಫಾರ್ಟಿಯಾದರೂ ಇಪ್ಪೂ ಕೂಡ ವೆರಿ ಗ್ಲಾಮರಸ್‌’ ಒಬ್ಬ ಸಹೋದ್ಯೋಗಿಯ ಬಣ್ಣನೆ. ‘ಅವಳ್‌ ಬಾಡಿ ಶೇಪೇ ಒರು ಮಾದರಿ ರುಂಬ ರುಂಬಾ ಸೆಕ್ಸಿ…. ಎನ್ನ ಸೊಲ್ಲರ್?’ ಎಂದು ಕೇಳಿದ ಮತ್ತೊಬ್ಬನನ್ನು ಶ್ರೀಕಾಂತ ಹಿಡಿದು ಬಡಿದ. ಒಂದೆರಡು ಸಲ ಕಛೇರಿ ಮತ್ತು ಬೀದಿಯಲ್ಲೂ ತಮಿಳರ ಮೇಲೆ ಕೈಮಾಡಿ ಸಖತ್ತಾಗಿ ಗೂಸಾ ತಿಂದು ಆಸತ್ರೆ ಸೇರಿದ್ದೂ ಆಯಿತು. ‘ಪೈಥಕಾರ’ ಎಂದವರೇ ಡಿಸೈಡ್ ಮಾಡಿ ದೂರ ಸರಿದರು. ಆಗೀಗ ಶಾಮಿಲಿ ತಮಿಳು ಚಿತ್ರಗಳಲ್ಲೂ ಅಭಿನಯಿಸುತ್ತಾ ಯಶಸ್ಸಿನ ತುತ್ತ ತುದಿಗೇರುವಾಗ ಶ್ರೀಕಾಂತ ಪಾತಳಕ್ಕಿಳಿದ. ಗಂಡ ಹುಚ್ಚನಂತಾಡಹತ್ತಿದಾಗ ಅಹಲ್ಯೆ ಕೊರಗಿ ಕಾಷ್ಠವಾದಳು. ಮಕ್ಕಳಿಬ್ಬರೂ ಕಂಗಾಲು. ಅವರಾಗಲೆ ಹೈಸ್ಕೂಲು ಓದುತ್ತಿದ್ದುದರಿಂದ ಅಪ್ಪನ ಭಗ್ನಪ್ರೇಮಕ್ಕೆ ಕನಿಕರಿಸಬೇಕೋ ಮರುಳತನಕ್ಕೆ ಮರುಗಬೇಕೋ ತೋಚದಂತಾಗಿ ಅವನೊಂದಿಗೆ ಮಾತೇ ಬಿಟ್ಟರು. ಅವನೇನು ಕಮ್ಮಿ? ಮಾತೇ ಮರೆತ. ಇಷ್ಟು ವರ್ಷಗಳಲ್ಲಿ ಮೊದಲಬಾರಿಗೆ ಅಹಲ್ಯಳಿಗೆ ಇಂತಹ ತಿಕ್ಕಲನನ್ನು ಕಟ್ಟಿಕೊಂಡು ತಪ್ಪಮಾಡಿದೆನೆ ಅನ್ನಿಸಿತಾದರೂ ಶಾಮಿಲಿಯ ವಿಷಯದಾಚೆಗೆ ಅವನೊಬ್ಬ ಸಾಚಾ ವ್ಯಕ್ತಿಯೆಂಬ ಗೌರವಭಾವ ಅವಳಲ್ಲಿತ್ತು. ಅವರ ಗೌರವಕ್ಕೆ ಮುಕ್ಕಾಗದಂತೆ ವರ್ತಿಸಿರೆಂದು ಮಕ್ಕಳಿಗೂ ತಿಳಿಹೇಳಿದಳು. ರಾತ್ರಿ ಮಲಗಿದಾಗ ಗಂಡನ ಮೈದಡವಿದಳು. ‘ಶಾಮಿಲಿಗೀಗ ನಲವತ್ತರ ಹತ್ತಿರ… ಅವಳ ಮಾರ್‍ಕೆಟ್ ವಾಲ್ಯೂ ಈಗಾಗಲೇ ಕುಸಿದಿದೆ. ಈವತ್ತಲ್ಲ ನಾಳೆ ಮೂಲಗುಂಪಾಗುತ್ತಾಳೆ. ನಿಮ್ಮ ಆರೋಗ್ಯ, ಮಕ್ಕಳ ಭವಿಷ್ಯದ ಕಡೆ ಗಮನ ಕೂಡಿ’ ಮನಸ್ಸನ್ನೂ ತಡವಿದಳು. ಅವನು ಮಗ್ಗಲು ಬದಲಿಸಿದ. ಅಹಲ್ಯೆ ಊಹಿಸಿದಂತೆಯೇ ಕೆಲಸದ ಮೇಲಿನ ನಿರ್ಲಕ್ಷ್ಯದಿಂದ ಹಣಕಾಸಿನ ಲೆಕ್ಕ ಅಪರಾಶಪರಾ ಆಗಿ ಸಸ್ಪೆಂಡಾಗಿ ಮನೆಗೆ ಬಂದು ಕೂತ. ಪುನಃ ಗಡ್ಡಬಿಟ್ಟ. ತಮಿಳುನಾಡಿನಲ್ಲೂ ಶಾಮಿಲಿ ತಮಿಳಿಗರ ಕಣ್ಮಣಿಯಾದಾಗ ಕುಡಿತಕ್ಕೆ ಶರಣಾದ. ಅವಳು ಮೈ ತುಂಬಾ ಬಟ್ಟೆ ತೊಟ್ಟು ಈಗಲಾದರೂ ಅಭಿನಯಿಸಬಾರದೆ ಎಂದು ಪರಿತಪಿಸಿದ. ತನ್ನ ಮಗನೇ ಶಾಮಿಲಿಯ ಬಣ್ಣದ ಸ್ಟಿಕರ್‌ತಂದು ರೂಮೆಲ್ಲ ಅಂಟಿಸಿಕೂಂಡಾಗ ತೇಲುಗಣ್ಣುಬಿಟ್ಟ ಅಹಲ್ಯ ಮಗನೊಡನೆ ಜಗಳ ಕಾದು, ‘ಪಡಿಚ್ಚಾ ಮಕ್ಕಳಿಕ್ಕು ಇದಿ ನಲ್ಲದಿಲ್ಲ’ ಎಂದು ಕಿತ್ತುಹಾಕಿಸಿದಳು. ಮಗಳು ಅಣ್ಣನ ಪರವಹಿಸಿ ಪ್ರತಿಭಟಿಸಿದಾಗ ಕೆನ್ನಗೆ ರಾಚಿದಳು. ಶ್ರೀಕಾಂತ ಸಣ್ಣಗೆ ನಗುವಾಗ ಅವಳಿಗೆಂತದೋ ಧೈರ್ಯ.

ಒಂದು ದಿನ ಬೆಂಜ್‌ ಕಾರೊಂದು ತೇಲುತ್ತಾ ಬಂದು ಶ್ರೀಕಾಂತನ ಮನೆ ಮುಂದೆ ಸೆಟ್ಲ್ ಆಯಿತು. ಶಾಮಿಲಿ ಕಾರಿನಿಂದ ಇಳಿದಳು! ಊರು ಕೇರಿಯಲೆಲ್ಲಾ ಕ್ಷಣದಲ್ಲೇ ಮಿಂಚು ಹರಿದು ಜನದಟಣಿ ಸೇರಿತು. ಸೆಕ್ಯುರಿಟಿಗಳು ಜನಸಂದಣಿಯಲ್ಲಿ ದಾರಿ ಮಾಡಿಕೊಟ್ಟರು. ‘ವಣಕ್ಕಂ’ ಎಂದು ಜೋರಾಗಿ ಹೇಳಿ ಸರ್ವರಿಗೂ ವಂದಿಸುತ್ತಲೇ ಮನೆಯೊಳಗೆ ತೂರಿಕೊಂಡಳು. ‘ಸೌಖ್ಯಮಾ….. ನಲ್ಲ ಇರಿಕ್ಕಿರೀರ್‌ಗಳ’ ಎಲ್ಲರನ್ನೂ ನಗು ನಗುತ್ತಲೇ ಮಾತನಾಡಿಸಿದಳು. ಸಿನಿಮಾ ದೇವತೆಯೊಬ್ಬಳು ತಮ್ಮ ಮನೆಗೆ ಬಂದಾಗ ಅಹಲ್ಯೆ ಅವಳ ಮಕ್ಕಳಿಗೆ ಸಂತೋಷದಿಂದ ಮಾತೇ ಹೂರಡದು. ಮಕ್ಕಳನ್ನು ಶಾಮಿಲಿ ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿಸಿದಳು. ‘ನೀವು ನಿಮ್ಮಪನ ಹಾಗೆ ಕರ್ರಗಿಲ್ಲ. ಅಮ್ಮನ ಹಾಗೆ ವರಿ ಸ್ಮಾರ್ಟ್’ ಗಲ್ಲ ಹಿಂಡಿದಳು. ‘ನೀನಿನ್ನೂ ಗಡ್ಡ ತೆಗೆದಿಲ್ಲವೇನೋ ಶ್ರೀ? ಪೇಶಂಟ್‌ ತರಾ ಕಾಣ್ತಿದ್ದಿ ಮಾರಾಯ’ ಎಂದವನ ಹೆಗಲು ಮುಟ್ಟಲು ಮುಂದಾದಳು. ಸರಿದುಕೂಂಡ. ಹೂರಗಡೆ ಗದ್ದಲವೋ ಗದ್ದಲ. ಶೀಟಿ ಕೇಕೆ ಜಯಕಾರಗಳ ಮೊರೆತದ ಮಧ್ಯೆಯೂ ಆಹಲ್ಯೆ ಕೂಟ್ಟ ಶರಬತ್‌ ಹೀರಿದಳು. ನೀವೆಲ್ಲಾ ಚೆನ್ನಾಗಿದ್ದೀರಲ್ಲಾ?’ ಕೇಳಿದಳು. ಅವರೆಲ್ಲಾ ನಕ್ಕರೂ ನಗೆ ಶುಷ್ಕವಾಗಿತ್ತು. ‘ನಿನ್ನ ಮನಸ್ಸಿನ್ನೂ ಬದಲಾಗಲಿಲ್ವೇನೋ ಶ್ರೀ? ವಿಷಾದಿಸಿದಳು. ತರಾವರಿ ಪಾತ್ರಗಳಲ್ಲಿ ಅಭಿನಯಿಸಿಯೇ ಲೋಕಾನುಭವ ಕಂಡುಕೊಂಡ ಅವಳ ಸೂಕ್ಷ್ಮಮನಸಿಗೆ ಅರ್‍ಥವಾಗದ್ದೇನಿದೆ. ‘ನಿನಗೊಂದು ಸಂತೋಷದ ಸುದ್ದಿ ಕಣೋ’ ಅಂದಳು. ಅವನು ತಲೆ ಎತ್ತಲಿಲ್ಲ. “ಏನ್ರಿ ಅದು! ಮತ್ತೇನಾದ್ರೂ ನ್ಯಾಶನಲ್‌ ಅವಾರ್‍ಡ್‌ ಬಂತಾ? ರಜನಿ ಚಿತ್ರಕ್ಕೆ ಬುಕ್‌ ಆದ್ರಾ! ಶ್ರೀಕಾಂತನ ಮಗ ಅವಳನ್ನೇ ತಿನ್ನುವಂತೆ ನೋಡಿದ. ‘ಇಲ್ಲ. ಅದಕ್ಕಿಂತ ಹ್ಯಾಪಿ ನ್ಯೂಸ್‌. ನಿಮ್ಪಪನಿಗೂಂದು ನಿಜಕ್ಕೂ ಸರಪ್ರೈಸ್‌’ ನಕ್ಕಳು. ಶ್ರೀಕಾಂತನೆಲ್ಲಿ ರೇಗುತ್ತಾನೋ ಬೈಯುತ್ತಾನೋ ಎಂದೇ ಭಾವಿಸಿದ್ದ ಶಾಮಿಲಿಗೆ ಘೋರ ನಿರಾಶೆ. ಕಲ್ಲಿನ ವಿಗ್ರಹದಂತೆ ಅವನದು ಅಚಲತೆ. ‘ಅಹಲ್ಯಾ’ ಇನ್ನು ಮೇಲೆ ನಾನು ಸಿನಿಮಾಗಳಲ್ಲಿ ಆಕ್ಟ್‌ ಮಾಡೋದಿಲ್ಲ. ಅಷ್ಟೇ ಅಲ್ಲ ಇಂಡಸ್ಟಿಯಲಿಸ್ಟ್‌ ಒಬ್ಬರು ನನ್ನನ್ನು ಮದುವೆಯಾಗ್ತಿದ್ದಾರೆ. ಅಬ್ರಾಡ್ಗೆ ಹೋಗ್ತಾ ಇದೀನಿ. ಅವರು ಕೆನಡಾದಲ್ಲಿದ್ದಾರೆ. ಇನ್ನು ವಾರದಲ್ಲೇ ಭಾರತಕ್ಕೆ ಗುಡ್‌ಬೈ ಹೇಳ್ತಿದೀನಿ’ ಅಂದಳು ಶ್ಯಾಮಿಲಿ. ‘ನಾನು ಈ ನ್ಯೂಸ್‌ ಅನ್ನು ‘ನಕ್ಕೀರನ್‌’ ಪತ್ರಿಕೆಯಲ್ಲಿ ಓದಿದ್ದೆ ಮೇಡಂ. ಗಾಸಿಪ್‌ ಅನ್ಕೊಂಡೆ….. ಬಟ್‌ ತಮಿಳ್ಗನ್ನಡ ಚಿತ್ರರಂಗಕ್ಕಿದು ಹೆವಿ ಲಾಸ್‌’ ಅಂದ ಶ್ರೀಕಾಂತನ ಮಗ, ‘ಅಭಿಮಾನಿಗಳಿಗೆ ಲಾಸು. ಇಷ್ಟಪಡದವರಿಗೆ ಪೀಸು’ ಕುಲುಕುಲು ನಕ್ಕಳು. ’ಹಾಲಿಹುಡ್‌ನಲ್ಲಿ ಮಿಂಚ್ತೀರಾ ಆಂಟಿ’ ಶ್ರೀ ಮಗಳ ಕುತೂಹಲ. ‘ನೊ ಮೈ ಸ್ವೀಟ್‌ ಗರ್‍ಲ್‌… ಆಂಟಿ ಆದ್ಮೇಲೆ ಆಕ್ಟಿಂಗ್‌ ಸಾಕು. ನನ್ನ ಬಾಡಿಗೂ ಮೈಡಿಗೂ ರೆಸ್ಟ್‌ ಬೇಕಲ್ಲಾ?’ ಮತ್ತೆ ರಾಗವಾಗಿ ನಕ್ಕಳು. ನಾನು ಆಂಟಿ ಅಂದೆ ಅಂತ ಕೋಪಮಾ ಮೇಡಂ?’ ‘ಇಲ್ಲ ಪೊಣ್ಣೆ. ಕೋಪಂ ತಾಪಂ ಲವ್‌ ಸಂಟಿಮೆಂಟು ಎಲ್ಲಾ ಬಿಟ್ಟವರು ಮಾತ್ರ ಸಿನಿಮಾದಲ್ಲಿ ಗೆಲ್ಲೋಕೆ ಸಾಧ್ಯ… ಅಪ್ರೊಂ ವರಲಾಮಾ? ನಿಮಗೇನು ತೊಂದರೆ ಇದ್ದರೂ ಹೇಳಿ ಐ ವಿಲ್‌ ಹೆಲ್ಪ್‌ ಯು. ಆದರೆ ನಿಮ್ಮಪ್ಪನ ಸ್ವಾಭಿಮಾನ ನಂಗೊತ್ತು ಅವರು ಈವರೆಗೆ ನನ್ನ ಬಡಿದು ಆಚೆಗೆ ಅಟ್ಟದಿರೋದೆ ಪುಣ್ಯ. ಪೂಯಿಟ್ಟು ವರ್ರೆಂ’ ಹೊರಟು ನಿಂತಳು. ಶ್ರೀಕಾಂತ ಆರಾಮ ಕುರ್ಚಿ ಬಿಟ್ಟು ಮೇಲೇಳಲೇಯಿಲ್ಲ. ‘ಶ್ರೀ’ ಅನ್ನುತ್ತಾ ಬಳಿ ಬಂದಳು. ಕೇಳಬಾರದೆಂದುಕೂಂಡರೂ ತಡೆಯಲಾರದೆ ಕೇಳಿಯೇ ಬಿಟ್ಟಳು. ‘ನನ್ನ ಒಂದಾದರೂ ಫಿಲಂ ನೋಡಿದ್ದಿಯಾ?’ ದೀನಳಾಗಿ ನೋಡಿದಳು. ಅತ್ತಿಂದಿತ್ತ ತಲಿಯಾಡಿಸಿದ, ‘ಹಾಗಾದರ ನಾನು ನಟಿಯಾಗಿ ಗೆಲ್ಲಲೇ ಇಲ್ಲ ಕಣೋ’ ನಿಡುಸುಯ್ದಳು. ‘ಇನ್ನು ಮುಂದಾದರೂ ಆರೋಗ್ಯದ ಕಡೆ ಗಮನ ಕೂಡು. ಸಾಧ್ಯವಾದರೆ ನನ್ನನ್ನು ಕಮಿಸಿಬಿಡು’ ತಟ್ಟನೆ ಅವನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಹೊರಟುಬಿಟ್ಟಳು. ಹೊರಗಡೆ ರೋಡ್‌ ಬ್ಲಾಕ್‌ ಆಗಿ ಗದ್ದಲವೋ ಗದ್ದಲ. ಶೀಟಿ ಕೇಕೆ. ‘ಶಾಮಿಲಿ ವಾಳ್ಗೆ’ ಎಂಬ ಅಬ್ಬರವೆಲ್ಲಾ ಮುಗಿದಾಗ ಮಳೆ ಹೊಯ್ದು ಬಿಟ್ಟಂತ ನಿಶಬ್ದ. ಟಾಟಾ ಮಾಡಿ ಅಹಲ್ಯ ಮಕ್ಕಳೂಂದಿಗೆ ಒಳಬಂದಾಗ ತನ್ನ ಸಮಸ್ತ ಬದುಕೆಲ್ಲಾ ಬರಿದಾಗಿ ಹೋಯಿತೇನೋ ಎಂಬಂತೆ ಪುಟ್ಟ ಮಗುವಿನೋಪಾದಿಯಲ್ಲಿ ಬಿಕ್ಕಿಬಿಕ್ಕಿ ಅಳುತ್ತಿದ್ದ ಅವನನ್ನು ಯಾರೂ ಸಂತೈಸುವ ಸಾಹಸ ಮಾಡಲಿಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...