ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು.
ತಟ್ಟೆಯ ಬಿಡಾರದಲ್ಲಿ ಸಾಲೆ ನಡೆಸುತ್ತಿದ್ದ ನಮಗೆ ಹೆಬ್ಬಾರರಿಂದ ತುಂಬಾ ಸಹಾಯಪಡೆದು, ಊರಲ್ಲಿ ನೂರಿನ್ನೂರು ರೂಪಾಯಿಗಳ ವರ್ಗಣಿಯನ್ನು ಕೂಡಿಸಿ ಒಂದು ಸಣ್ಣ ಸಾಲೆಯ ಮನೆಯನ್ನು ಕಟ್ಟಿಸಬಹುದೆಂಬ ಆಸೆ ಮೂಡಿತು.
ಹೆಣ್ಮಾಸ್ತರರೂ ನಾನೂ ಹೆಬ್ಬಾರರ ಮನೆಗೆ ಹೋದೆವು. ಯಜ್ಞದ ತಯಾರಿಯ ಗಡಬಡೆಯಲ್ಲಿ ಅವರು ನಮಗೆ ಭೆಟ್ಟಿ ಕೊಡಬೇಕಾದರೆ ನಾವು ಅವರ ಮನೆಯ ಹೊಳ್ಳಿಯನ್ನು ನಂಪು ಮಾಡಬೇಕಾಯಿತು! ಅಂತೂ ಹೆಬ್ಬಾರರು ಸ್ವಲ್ಪ ಪುರಸೊತ್ತು ಮಾಡಿಕೊಂಡು ದರ್ಶನವಿತ್ತರು. ನಾವು ನಮ್ಮ ಬಿನ್ನಹವನ್ನು ಅವರ ಮುಂದಿಟ್ಟೆವು. “ಛೇ! ಛೇ! ಈ ಯಜ್ಞದ ಕಾರ್ಯ ವೊಂದು ಮೊದಲು ಆಗಲಿ ” ಅಂದರು ಹೆಬ್ಬಾರರು. ಅದು ಆದ ಮೇಲೆ “ಯಜ್ಞಕ್ಕಾಗಿ ಕೈಯಲ್ಲಿದ್ದುದೆಲ್ಲ ಖರ್ಚಾಯಿತು” ಎಂದು ಅವರು ಹೇಳಬಹುದೆಂಬ ಭೀತಿಯಿದ್ದುದರಿಂದ ನಾವು ಸರಸ್ವತಿಯ ಗುಣಗಾನ ಮಾಡಿ ಸಾಲೆಯ ದುರ್ದೆಶೆಯನ್ನು ವಿವರಿಸಿದೆವು; ಸಾಲೆ ಕಟ್ಟಿಸುವದೂ ಒಂದು ದೇವಕಾರ್ಯವೆಂದೇ ತಿಳಿಸಿಹೇಳಿದೆವು.
“ನಿಜವಾಗಿ ಹೇಳಲೊ? ನಮ್ಮ ಮನೆಯ ಮಕ್ಕಳು ಕಲಿತು ಉದ್ಧಾರ ಮಾಡಬೇಕಾಗಿಲ್ಲ” ಹೆಬ್ಬಾರರು ತಮ್ಮ ಅಂತರ್ಗತ ಒಡಕು ದನಿಯೆತ್ತಿದರು.
“ಊರಿನ ಮಕ್ಕಳಿಗಾದರೂ….” ನಮ್ಮ ಹೆಡ್ ಮಾಸ್ತರರು ಕುಯ್ ಗುಟ್ಟಿದರು.
“ಊರಿನವರು ಹಾಳಾದರು! ಅವರ ಮಕ್ಕಳ ಸಲುವಾಗಿ ನಾನು ಖರ್ಚು ಮಾಡಬೇಕೆಂದೆಲ್ಲಿದೆ? ಎಲ್ಲರೂ ವಂತಿಗೆ ಹಾಕಲಿ, ನನ್ನ ಪಾಲಿಗೆ ಬಂದುದನ್ನು-ಎಲ್ಲರಷ್ಟೇ-ನಾನು ಕೊಟ್ಟೇ ಕೊಡುತ್ತೇನೆ.
“ನಿಮ್ಮಂಥವರು ಎಲ್ಲರಷ್ಟೇ ಅಂದರೆ ಹೇಗೆ? ಪೂರ್ವ ಕಾಲದಿಂದಲೂ ದೊಡ್ಡವರ ಆಶ್ರಯದಿಂದಲೇ ಸರಸ್ವತಿಯ ಆರಾಧನೆ ನಡೆಯುತ್ತ ಬಂದಿದೆ.” ನಾನು ತುಸುಮುಂದೆ ಸರಿದು ನುಡಿದೆ.
ಅದೆಲ್ಲ ಹಿಂದಿನಕಾಲದ ಮಾತು. ಆಗ ಯಜ್ಞಯಾಗಾದಿಗಳು ಸರಿಯಾಗಿ ನಡೆಯುತ್ತಿದ್ದವು. ಈಗ ದೈವ ದೇವರು ಕೈಬಿಡಹತ್ತಿದ್ದಾನೆ. ಒಂದು ಪೂಜೆ, ಪುನಸ್ಕಾರ ಏನೂ ಕೇಳಬಾರದು. ಅದಕ್ಕಾಗಿಯೇ ಈ ಯಜ್ಞವೊಂದು ಆಗಲಿ ಎಂದು ನನ್ನ ಪ್ರಯತ್ನ, ಎಷ್ಟೇ ಖರ್ಚು ಬಂದರೂ ಬರಲಿ, ಯೋಗ್ಯವಾಗಿ ಮಾಡಿಸುತ್ತೇನೆ. ಇದರಿಂದ ಊರಿನ ಕಲ್ಯಾಣವಾದರೂ ಆಗಲಿ…. ಇಂಥ ಯಜ್ಞ ಮಾಡಿಸುವುದು ಹುಡುಗಾಟಿಕೆಯಲ್ಲ. ನೋಡಿ, ಕಳೆದ ಇನ್ನೂರು ವರ್ಷಗಳಿಂದ ಇಂಥ ಒಂದೂ ಯಜ್ಞ ಈ ಸೀಮೆಯಲ್ಲಿ ಆಗಿಲ್ಲ. ಏನೋ ದೇವರು ಮಾಡು ಎಂದು ಪ್ರೇರಣೆ ಕೊಟ್ಟಿದ್ದಾನೆ…. ನಿಮಗೆ ಹೇಳುತ್ತೇನೆ; ಸಾಮಾನ್ಯ ರಿಂದ ಆಗುವ ಕೆಲಸ ಅಲ್ಲ ಇದು….”
“ಛೇ! ಛೇ! ಹಿಂದಿನಕಾಲದಲ್ಲಿ ರಾಜರು ಮಹಾರಾಜರು ಮಾತ್ರ ಮಾಡಿಸುತ್ತಿದ್ದರು. ಈಗಿನ ಕಾಲದಲ್ಲಿ ಸಾಮಾನ್ಯರನ್ನು ಬಿಟ್ಟು ದೊಡ್ಡ ದೊಡ್ಡ ಶ್ರೀಮಂತರಿಗೂ ಸಾಧ್ಯವಿಲ್ಲ.
“ಸಾಧ್ಯವಿದ್ದರೂ ಈ ಬಗೆಯ ಮನಸ್ಸಾಗುವದಿಲ್ಲ. ನೋಡಿ, ಧರ್ಮ ಕೆಡುತ್ತಿರುವ ಈ ಕಾಲದಲ್ಲಿ ದೇವ ಕಾರ್ಯಗಳನ್ನು ಮಾಡುವ ಮನಸ್ಸಾಗುವದಕ್ಕೂ ಒಂದು ಪುಣ್ಯಬೇಕು ನೋಡಿ.”
“ಹೌದು ಅಂದೆ. ನಿಮಗೆ ಈ ಮನಸ್ಸು ಬಂತು ಅಂತ ಶಂಕರ ಹೆಗಡೆ ಯವರಿಗಾಗಲಿ…” ಹೆಡ್ ಮಾಸ್ತರರ ಮಾತು ಮುಗಿಯುವ ಮುಂಚೇ ಹೆಬ್ಬಾರರು ಬಾಯಿಹಾಕಿ “ಥೂ! ಆ ಹೆಗಡೆ ಮಣ್ಣು ತಿಂದ. ಅವನಿಗೆ ಇದೆ ಯಜ್ಞ ಮಾಡುವ ಯೋಗ್ಯತೆ ಅಂದೆ” ಎಂದು ತಮ್ಮದೊಡ್ಡಸ್ತನವನ್ನು ಕಾಯ್ದು ಕೊಂಡರು. ಜನರು ಶಂಕರ ಹೆಗಡೆಯನ್ನು ತನ್ನಷ್ಟು ಶ್ರೀಮಂತನೆಂದು ಗಣಿಸುತ್ತಾರಲ್ಲ ಎಂಬ ಅವರ ಮತ್ಸರ ಹೊರಹೊಮ್ಮಿದ್ದನ್ನು ಕಂಡು ನಾನು
“ಆದರೂ ಒಳ್ಳೆಯವರು ಹೆಗಡೆಯವರು. ಮೊನ್ನೆ….” ಅನ್ನುವ ಮುಂಚೆ “ಈಗಿನ ಕಾಲದಲ್ಲಿ ಎಲ್ಲರೂ ಒಳ್ಳೆಯವರೇ” ಎಂದು ಹೇಳಿ ಹೆಬ್ಬಾರರು ಎದ್ದು ಬಿಟ್ಟರು.
ಎಷ್ಟು ಪ್ರಯತ್ನಿಸಿದರೂ ಹೆಬ್ಬಾರರಿಂದ ಸಾಲೆಯ ಕಟ್ಟಡಕ್ಕೆ ಸಹಾಯ ಪಡೆಯುವದು ಸಾಧ್ಯವಾಗಲಿಲ್ಲ. “ಬಂದವರನ್ನು ಬರಿಗೈಯಲ್ಲಿ ಕಳುಹಿಸ ಬಾರದು ಅಂತ…ತಕ್ಕೊಳ್ಳಿ….” ಎಂದು ಒಳಗಿನಿಂದ ಒಂದು ರೂಪಾಯಿಯನ್ನು ತಂದುಕೊಟ್ಟರು. ನಾವು ಕೆಟ್ಟ ಮೋರೆಯಿಂದ “ನಿಮ್ಮಂಥವರು….. ಅಂದೆವು. “ಈಗ ಹೇಳಿದುದೆಲ್ಲ ಅವರವರ ಅಡಚಣಿ ಅವರವರಿಗೆ” ಎಂದವರೇ ಕೆಲಸದ ಗಡಿಬಿಡಿ ತೋರಿಸುತ್ತ ಅಂಗಳಕ್ಕೆ ಇಳಿದರು. ನಾವೂ ಏಳಲೇ ಬೇಕಾಯಿತು.
X X X
ಕಾಶಿ ರಾಮೇಶ್ವರಗಳಿಂದ ಸಾಧುಸಂತರು ಬಂದರು. ಸಪ್ತಮಠಗಳ ಗುರುಗಳೂ ಆಗಮಿಸಿದರು. ದೇವಸ್ಥಾನದ ಎದುರಿಗೆ ತೇರುಬೀದಿ ತುಂಬ ಅತಿಥಿಗಳೇ ಅತಿಥಿಗಳು. ಹೆಬ್ಬಾರರ ವ್ಯವಸ್ಥೆಯೂ ಕಡಿಮೆಯದಾಗಿತ್ತಿಲ್ಲ. ಸ್ನಾನ ಶಾಲೆ, ಸಂಧ್ಯಾವಂದನ ಸಾಲೆ, ಚಹಾ ಕಾಫಿ ಸಾಲೆ, ಭೋಜನ ಸಾಲೆ- ಹೀಗೆ ಬೇರೆ ಬೇರೆ ಸಾಲೆಗಳನ್ನು ಕಟ್ಟಿಸಿದರು. ಸಮೀಪವೇ ಇದ್ದ ನಮ್ಮ ತಟ್ಟಿಯ ಸಾಲೆಯು ಯಜ್ಞ ಕಾರ್ಯ ಮುಗಿಯುವವರೆಗೆ ಬಂದು ಆಗಿತ್ತು; ಅದನ್ನು ಮೇಲೋಗರಕ್ಕೆ ಕಾಯಿಪಲ್ಲೆ ಕೊಚ್ಚುವ ಸಾಲೆಯನ್ನಾಗಿ ಮಾಡಿದ್ದರು! ಊರಿನ ಹೆಬ್ಬಾರರಿಗೆ ಒಂದು ರೂಪಾಯಿ ವರ್ಗಣಿ ಕೊಟ್ಟ ಶ್ರೀಮಂತ ದಾನ ಶೂರರಿಗೆ ನಮ್ಮ ತಟ್ಟೆಯ ಸಾಲೆಯನ್ನು ಬಿಟ್ಟು ಕೊಡುವದಿಲ್ಲವೆಂದು ಹೇಳುವ ಧೈರ್ಯ ಯಾರಿಗೆ?
ಹದಿನೈದು ದಿನಗಳವರೆಗೆ ಯಜ್ಞಕಾರ್ಯ ಸಾಗಿತು. ದಿನಕ್ಕೆ ೧೦೧ ಸತ್ಯ ನಾರಾಯಣ ಪೂಜೆ, ೧೦೩ ಇದು, ೧೧೦ ಅದು ಅಂತ ಬಹಳ ವೈಭವದಿಂದ ನಡೆಯಿತು. ಈ ಕಾರ್ಯಗಳಿಗೆಲ್ಲ ಕಳಸ ಕಟ್ಟುವಂತೆ ಹೆಬ್ಬಾರರು ದೇವರಿಗೆ ಏಳೂವರೆ ಸಾವಿರ ರೂಪಾಯಿಗಳ ಬೆಲೆಯ ಚಿನ್ನದ ಕಿರೀಟವನ್ನು ಮಾಡಿಸಿ ಹಾಕಿ ಧನ್ಯರಾದರು. ಊರಿಗೆ ಊರೇ ಹೆಬ್ಬಾರರನ್ನು ಕೊಂಡಾಡಿತು. ಆಗಮಿಸಿದ ಸಂತರು, ಗುರುಗಳು, ಸನ್ಯಾಸಿಗಳು, ದ್ವಿಜವೃಂದಗಳು ಹೆಬ್ಬಾರರಿಗೆ ಹೊರಿಸಿಕೊಟ್ಟು ಹೋದ ಹರಕೆಯ ಭಾರವನ್ನು ಯಾರಿಗೂ ತೂಗಬರುವಂತಿಲ್ಲ.
ಬ್ರಾಹ್ಮಣ ಜನ್ಮಕ್ಕೆ ಬಂದು ಹಣ ಗಳಿಸಿ ಕೃತಾರ್ಥನೆಂದು ಹೆಬ್ಬಾರರು ಆಧ್ಯಾತ್ಮಿಕ ಆನಂದದಿಂದ ಓಲಾಡುತ್ತಿರುವಾಗಲೇ ಊರಲ್ಲಿ ಮೈಲಿ ಹಬ್ಬ ಹತ್ತಿತು. ಕಾಶಿ ರಾಮೇಶ್ವರಗಳಿಂದ ಯಾವ ಯಾವ ರೋಗಗಳ ಬೀಜಗಳು ನಮ್ಮೂರಿನಲ್ಲಿ ಬಿದ್ದವೋ ೭|| ಸಾವಿರ ರೂಗಳ ಕಿರೀಟ ಧರಿಸಿದ ಆ ದೇವನೇ ಬಲ್ಲ! ಇದೇ ಸಮಯದಲ್ಲಿ ಊರಲ್ಲೆಲ್ಲ ಹಾಹಾಕಾರವೆದ್ದಿತು. ೭|| ಸಾವಿರ ರೂ. ಗಳ ಕಿರೀಟವನ್ನು ಯಾರೋ ಅಪಹರಿಸಿಬಿಟ್ಟರು! ಇದಕ್ಕೂ ಹೆಚ್ಚಿನದೆಂದರೆ ಸ್ವತಃ ಯಜ್ಞ ಮಾಡಿಸಿದ ಹೆಬ್ಬಾರರಿಗೇ ‘ದೇವಿ’ ಪ್ರಸನ್ನಳಾಗಿದ್ದಾಳೆಂಬ ಸುದ್ದಿ ಖಾತ್ರಿಯಾಯಿತು.
“ಕಿರೀಟದ ಕಳವಾದದ್ದು ದೇವರ ಮನಸ್ಸಿಗೆ ಬರಲಿಲ್ಲ. ಊರಿನವರೆಲ್ಲ ಹೋಗಿ ಬಾಗಿಲು ಕಟ್ಟಿ ಬೇಡಿಕೊಳ್ಳಬೇಕು. ತಪ್ಪಾಯಿತು, ಇನ್ನೊಂದು ಇದಕ್ಕೂ ಹೆಚ್ಚಿನ ಕಿರೀಟ ಮಾಡಿಸಿಹಾಕುತ್ತೇವೆ, ಕೋಪಿಸಿಕೊಳ್ಳಬಾರದು ಎಂದು……..” ಹಾಸಿಗೆಯ ಮೇಲಿಂದ ಹೆಬ್ಬಾರರು ಊರವರಿಗೆ ಸಂದೇಶ ಕಳುಹಿಸಿದರು.
ಶ್ರೀದೇವರ ಕೋಪ ಹೆಚ್ಚುವದಕ್ಕಿಂತ, ೭|| ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಕಿರೀಟವು ದೇವರ ತಲೆಗೆ ಬೀಳುವದಕ್ಕಿಂತ, ಮುಂಚೆ ಮೈಲೀ ಖಾತೆಯವರು ಬಂದು ಯೋಗ್ಯ ಚಿಕಿತ್ಸೆ ಮಾಡಿದದರಿಂದ ಊರು ಉಳಿಯಿತು.
“ಹೆಬ್ಬಾರರ ಯಜ್ಞ ದೇವರ ಮನಸ್ಸಿಗೆ ಬಂದಿಲ್ಲವೆಂತ ತೋರುತ್ತದೆ” ಯಾರೋ ಕಿಡಿಗೇಡಿಗಳು ಹೇಳಿದರು.
ಚಿನ್ನದ ಕಿರೀಟದ ಕಳವಿನಿಂದ ದೇವರಿಗೆ ಸಿಟ್ಟು ಬಂದಿತೆಂದು ಬ್ರಾಹ್ಮಣ ವೃಂದ ಸಾರಿತು. “ಬೇರೆಯವರಿಗೆ ಟೊಪ್ಪಿಗೆಹಾಕಿ ಗಳಿಸಿದ ಹಣ!” ಅಂದರು ಕೆಲವರು.
“ಸರಸ್ವತಿಗೆ ತಳಮಳವಾಗಿರಬೇಕು” ನಾವು ನಮ್ಮೊಳಗೇ ಅಂದು ಕೊಂಡೆವು.
*****