Home / ಕಥೆ / ಸಣ್ಣ ಕಥೆ / ಜಾತಿಗೇ ಭೂಷಣ!

ಜಾತಿಗೇ ಭೂಷಣ!

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ!

ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ ಹಾಗೆ. ನೀವೂ ಬಿ. ಎ. ಆಗಿದ್ದೀರಿ. ಮೆಟ್ರಿಕ್ಕೂ ಆಗಿದ್ದೀರಿ. ಆದರೆ ನಿಮ್ಮ ಹಣೆಯಲ್ಲಿ ಮಾಸ್ತರಿ ಬರೆದಿದೆ. ವಕೀಲಿ ಮಾಡಿ ದೊಡ್ಡವರಾಗುವದು ನಿಮ್ಮ… ಬೇಜಾರು ಮಾಡಿಕೊಳ್ಳಬೇಡಿ. ನೀವು ದೊಡ್ಡವರಾದರೆ ನಮಗೆಲ್ಲ ಆನಂದವೇ. ದೇವರ ಇಚ್ಛೆ ಏನಿದೆ ಅಂತ ಹೇಳಲಾಗದು.

ನಾನು ನೋಡುತ್ತ ನೋಡುತ್ತ ಇದ್ದಂತೆ ಇಘ್ನೇಶ್ವರ ಭಟ್ಟರು ರಾಯರು ಆಗಿಬಿಟ್ಟರು! ಈಗ ಅವರ ಮನೆಯ ಥಾಟು ನೋಡಿದರೆ ನಮ್ಮ ಜಾತಿಯಲ್ಲಿ ಒಬ್ಬರಾದರೂ ಹೀಗೆ ವೈಭವದಿಂದ ಇದ್ದಾರಲ್ಲ ಅನಿಸುತ್ತದೆ. ಮನಸ್ಸಿಗೆ ಸಂತೋಷವಾಗುತ್ತದೆ. ಮತ್ತೆ ಎಷ್ಟು ಸೌಜನ್ಯ ತುಂಬಿದೆ ಅವರಲ್ಲಿ! ಯಾರೇ ಹೋಗಲಿ, ಮಾತಾಡಿಸುತ್ತಾರೆ. ತಾನು ದೊಡ್ಡ ವಕೀಲ ಅಂತ ಗರ್ವವಿಲ್ಲ. ಇನ್ನೊಂದು ಸಂಗತಿಯೆಂದರೆ ಇಷ್ಟು ಕಲಿತರೂ ದೇವರು-ದಿಂಡರು ಮಡಿ-ಮೈಲಿಗೆ ಬಿಟ್ಟವರಲ್ಲ. ನೋಡಿ, ನಿಮ್ಮ ತಲೆಗೆ ಜುಟ್ಟವಿಲ್ಲ. ಈಗಿನ ಕಾಲವೇ ಹಾಗೆ, ನಾಲ್ಕು ಅಕ್ಷರ ಇಂಗ್ಲೀಷು ಕಲಿತ ಕೂಡಲೇ ಜಂಬ ಬಂದುಬಿಡುತ್ತದೆ. ರಾಯರಿಗೂ ಕ್ರಾಪು ಇದೆ ಎನ್ನಿ. ಆದರೆ ಅದರ ನಡುವೆ ಒಂದು ಜುಟ್ಟವೂ ಇದೆ. ಬ್ರಾಹ್ಮಣ ಅಂದಮೇಲೆ ಬೇಕು ನೋಡಿ, ದೈವ ದೇವರು ಕೈಬಿಡಬಾರದು.

ಇನ್ನೊಂದು ವಿಷಯ ಹೇಳಿ ನಿಮಗೆ? ಚಿಲ್ಲರೆ ವಕೀಲರ ಹಾಗೆ ಅದನ್ನು ತಂದುಕೊಡಿ, ಇದನ್ನು ಕಳುಹಿಸಿ ಅನ್ನುವವರಲ್ಲ ರಾಯರು. ಆದರೆ ನೋಡಿ, ಅವರ ಮನೆಗೆ ರಾಶಿರಾಶಿಯಾಗಿ ಅಡಿಕೆ, ತೆಂಗು, ಬೆಲ್ಲ, ತುಪ್ಪ ಬಂದು ಬೀಳುತ್ತವೆ. ಅದು ಅವರ ಜನ್ಮಾವಸ್ಥೆ, ಭಟ್ಟರೆ. ನಮ್ಮಂಥವರಿಗೆ ರಾಯರ ಮನೆಗೆ ಒಂದು ಬಾಳೆ ಕೊನೆ ಕೊಟ್ಟು ಬಂದರೆ ಏನೋ ತೃಪ್ತಿ. ಅಂಥ ದೊಡ್ಡ ಮನುಷ್ಯರು ನಮ್ಮ ತೋಟದ ಹಣ್ಣು ತಿಂದರಲ್ಲ ಎಂಬ ಆನಂದ! ದೊಡ್ಡವರ ಬಾಯಿಗೆ ಬೀಳಲಿಕ್ಕೂ ಒಂದು ಪುಣ್ಯ ಬೇಕು ನೋಡಿ.”

“ನಿಮಗೆ ತಿಳಿಯಿತೋ?…….. ”

ಈಗ “ತಿಳಿಯಿತು ಹೆಗಡೇರೆ” ಅನ್ನದೆ ಇರಲು ಸಾಧ್ಯವಾಗಲಿಲ್ಲ. ವಕೀಲಿಯಿಂದ ಹಣ ಗಳಿಸಿ ಮೆರೆಯುವ ಜಾತಿಯ ಒಬ್ಬ ಜೀವಿಯನ್ನು ಹೀಗೆಲ್ಲ ಆರಾಧಿಸುವ ಹೆಗಡೆಯವರ ಹುಂಬತನಕ್ಕಾಗಿ ಮನ ನೊಂದು ಕೊಂಡಿತು. ನೋಡಿದರೆ ಇಡೀ ಚೌಕು ಗ್ರಾಮಕ್ಕೇ ಮುಖಂಡರೆನಿಸುವ ಹೆಗಡೆಯವರು, ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಅವರಂತೆ ನಮ್ಮ ಜಾತಿಯಲ್ಲಿ ರಾಯರಂಥ ದೊಡ್ಡವರೂ ಇದ್ದಾರೆಯೆಂದು ಹೆಮ್ಮೆ ತಾಳಬೇಕೊ? ಅಥವಾ ಇವರ ಹುಂಬತನಕ್ಕೆ ನಗಬೇಕೋ?

“ನಿಮಗೆ ತಿಳಿಯಿತೋ ಭಟ್ಟರೆ, ನಮ್ಮ ಜಾತಿಯಲ್ಲಿ ರಾಯರಂಥವರು ಒಬ್ಬಿಬ್ಬರಿದ್ದರೂ ಸಾಕು, ಜಾತಿಗೇ ಒಂದು ಭೂಷಣ.”

“ಜಾತಿಯವರಿಗಾಗಿ ವಕೀಲರು ಏನೇನು ಮಾಡಿದ್ದಾರೆ ಹೆಗಡೇರೆ?”

“ಏನು ಮಾಡಿದ್ದಾರೆ ಅಂದರೆ? ಏನು ಮಾಡಬೇಕು ಅವರು? ನಮ್ಮ ಜಾತಿಗೇ ಹೆಸರು ತಂದುಕೊಟ್ಟಿದ್ದಾರೆ. ಬೇರೆ ಜಾತಿಯವರು ಈಗ ಸ್ವಲ್ಪ ನಮ್ಮ ಜಾತಿಯಲ್ಲಿ ಕಲಿತವರು ಇದ್ದಾರೆ ಎಂಬುದನ್ನು ಅರಿತಿದ್ದಾರೆ. ನಮ್ಮ ಜಾತಿಗೆ ಮರ್ಯಾದೆ ಕೊಡುತ್ತಾರೆ.”

“ಓಹೋ ಹಾಗೋ! ವಕೀಲರನ್ನು ಕಂಡಕೂಡಲೇ ಇತರರೂ ಅವರಿಗೆ ಮಾಡುವ ನಮಸ್ಕಾರ ನಮ್ಮ ಜಾತಿಗೇ ಅನ್ನಿ, ಹಾಗಾದರೆ!!”

“ಮತ್ತೆ?”

“ಅದಂತೂ ಆಯಿತು ಬಿಡಿ. ನಮ್ಮ ಜಾತಿಯವರ ಶಿಕ್ಷಣಕ್ಕೆ, ಸಮಾಜ ಸುಧಾರಣೆಗೆ…. ಇದಕ್ಕೆಲ್ಲ ಅವರು ಏನೇನು ಮಾಡಿದ್ದಾರೆ ಅಂದೆ.”

“ಭಾಳ ಮಾಡಿದ್ದಾರೆ. ಸಂಸ್ಕೃತ ಸಾಲೆಗೆ ಮೊನ್ನೆ ಮೊನ್ನೆ ಮೂರು ರೂಪಾಯಿ ಕೊಟ್ಟಿದ್ದಾರೆ….”

ನನಗೆ ನಗು ತಡೆಯಲಾಗಲಿಲ್ಲ.

“ನೋಡಿ ಹೆಗಡೇರೆ, ರಾಯರ ಕಕ್ಷಿಗಾರರೆಲ್ಲ ನಮ್ಮ ಜಾತಿಯವರೇ ಅಲ್ಲವೇ?”

“ಎಲ್ಲ ನಮ್ಮ ಜಾತಿಯವರೇ ಅಲ್ಲ. ಜಾತಿಯ ವಕೀಲರೇ ಇರುವಾಗ ಬೇರೆ ಜಾತಿಯ ವಕೀಲರ ಹತ್ತಿರ ಹೋಗುವದು ತಪ್ಪಾಗುವದಿಲ್ಲವೆ? ಇನ್ನು ವಿರುದ್ಧ ಪಕ್ಷದವರು ಬೇರೆ ವಕೀಲರ ಹತ್ತಿರ ಹೋಗುತ್ತಾರೆ. ಆದರೆ ಕೋರ್ಟಿನ ಕೆಲಸ ಅಂದಕೂಡಲೇ ಮೊದಲಿಗೆ ಬರುವದು ರಾಯರ ಮನೆಗೇ.”

“ಅಂದರೆ ರಾಯರ ಸಂಪತ್ತೆಲ್ಲ ನಮ್ಮ ಜಾತಿಯವರಿಂದ ಬಂದದ್ದೇ ಅನ್ನಿ.”

“ಸಂಶಯವೇ? ಜಾತಿಯವರ ಹಣ ಜಾತಿಯವರಿಗೆ ಹೋಗುವದು ನ್ಯಾಯ.”

“ಓಹೋ ಸರಿ ಸರಿ. ಅದಿರಲಿ ಹೆಗಡೇರೆ. ಕೋರ್ಟಿನ ಮೆಟ್ಟಿಲು ಹತ್ತಿದ ನಮ್ಮ ಜಾತಿಯ ಎಷ್ಟು ಕುಟುಂಬಗಳು ಹಾಳಾದವು?”

“ಅರೆ! ಸಾವಿರಾರು ಮನೆ-ಗುಂದ ಬಿದ್ದು ಹೋಗಿದ್ದಾವೆ. ನಮ್ಮೂರಲ್ಲಿಯೇ ಇಪ್ಪತ್ತು ಇಪ್ಪತ್ತೈದು ಕುಟುಂಬ ಇತಿಶ್ರೀ ಆಗಿವೆ. ಕೋರ್ಟಿನ ಪ್ರಭಾವ ಅಂದರೆ ಏನೆಲ್ಲ ಆಗುತ್ತದೆ ಅಂತ ಹೇಳಲು ಬರುವದಿಲ್ಲ. ನೋಡಿ ನಿಮಗೊಂದು ಸಂಗತಿ ಹೇಳುತ್ತೇನೆ….”

“ತಡೆಯಿರಿ, ಹೆಗಡೇರೆ. ಇಷ್ಟೆಲ್ಲ ಕುಟುಂಬ ಹಾಳಾಯಿತು ಅನ್ನುತ್ತೀರಿ. ರಾಯರೇ ಈ ಕುಟುಂಬಗಳ ವಕೀಲಿ ಮಾಡಲಿಲ್ಲವೇ?”

“ಹೆಚ್ಚಾಗಿ ಎಲ್ಲ ‘ಕೇಸೂ’ ರಾಯರ ಹತ್ತಿರವೇ ಹೋಗಿದ್ದವು. ಆದರೆ ವ್ಯಾಜ್ಯ ಅಂದಮೇಲೆ ಹೀಗೆ ಆಗುವದೇ”

“ಒಂದೊಂದು ದಾವೆಗೆ ಹಾಳಾದ ಈ ಮನೆತನಗಳು ಎಷ್ಟೆಷ್ಟು ಹಣ ಸುರಿದಿರಬಹುದೆಂದು ನಿಮ್ಮ ತರ್ಕವಿದೆ?”

“ಸಾವಿರ ಗಟ್ಟಲೆ ಹಣ ಸುರಿದೇ ಹಾಳಾದದ್ದಲ್ಲವೇ?”

“ಹಾಗಾದರೆ ಈ ಸಾವಿರ ಗಟ್ಲೆ ಹಣದ ಬಹುಭಾಗ ರಾಯರ ಮನೆಯನ್ನೇ ಸೇರಿತು ಅನ್ನಿ!”

“ಹಾಗೆಂದರೆ ಹೇಗೆ? ವಕೀಲಿ ಮಾಡಿದ್ದಕ್ಕಾಗಿ ಅವರು ಹಣ ತೆಗೆದು ಕೊಂಡರು. ನಸೀಬ ಕೆಟ್ಟು ಎಷ್ಟೋ ಮನೆತನಗಳು ಹಾಳದವು. ಹೀಗಿರುವಾಗ ರಾಯರ ಮನೆಗೆ ಆ ಹಾಳಾದ ಕುಟುಂಬಗಳ ಹಣವೆಲ್ಲ ಬಂದಿತೆಂದು ಹೊಟ್ಟೆ ಕಿಚ್ಚು ಪಟ್ಟಕೊಳ್ಳುವದು ಸರಿಯಲ್ಲ. ಯಾರಾರಿಗೆ ಎಷ್ಟೆಷ್ಟು ಸಲ್ಲಬೇಕೋ ಅಷ್ಟಷ್ಟೇ ಸಲ್ಲುತ್ತದೆ.”

“ನೋಡಿ, ಹೆಗಡೇರೆ, ಒಬ್ಬ ಕಳ್ಳ ಬಂದು ರಾತ್ರೆ ಬೆಳಗಾಗುವುದರೊಳಗೆ ಇಡೀ ಕೇರಿಯ ಮನೆಯನ್ನೆಲ್ಲ ಇತಿಶ್ರೀ ಮಾಡಿಕೊಂಡು ಹೋಗುತ್ತಾನೆಂದು ತಿಳಿಯಿರಿ.”

“ಕಳ್ಳ ಅಂದಕೂಡಲೆ ನೆನಪಾಯಿತು. ನೋಡಿ ಮೊನ್ನೆ ನಮ್ಮ ನೆರೆ ಮನೆಯ… ಅಂತೂ ಕಳ್ಳರು ಬಹಳವಾಗಿದ್ದಾರೆ. ಇವರಿಗೆಲ್ಲ ಸರಕಾರದವರು ಗುಂಡುಹಾಕುವದಿಲ್ಲ ಏಕೋ?”

“ನಮ್ಮ ಜಾತಿಯವನೇ ಕಳವು ಮಾಡಿ ಶ್ರೀಮಂತನಾಗಿ ‘ರಾಯರು’ ಅನಿಸಿಕೊಂಡು ಮೆರೆದರೆ ಅವನು ನಮ್ಮ ಜಾತಿಗೇ ಭೂಷಣನಾಗುವದಿಲ್ಲವೇ?”

“ಅಂತೂ ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮ ಮಾಡಿ ರಾಯರು ಕಳ್ಳರು ಅಂತ ನಿಮ್ಮ ಅಭಿಪ್ರಾಯವಲ್ಲವೋ ಹೌದೋ?”

“ನನ್ನ ಅಭಿಪ್ರಾಯ ಹಾಗಲ್ಲ. ವಿಚಾರಮಾಡಿದರೆ ಹಾಗೆ ಅನಿಸುತ್ತದೆ. ಅಷ್ಟೇ.”

ಹೆಗಡೆಯವರಿಗೆ ನನ್ನ ಮಾತು ಹಿಡಿಸಲಿಲ್ಲ. ಬೇಸರ ಗೊಂಡವರಂತೆ ಅವರು ಅಡ್ಡಮೋರೆ ಹಾಕಿದರು. ನನ್ನ ಮೇಲೆ ಅವರು ಸಿಟ್ಟಿಗೆದ್ದರೂ ಚಿಂತೆಯಿಲ್ಲವೆಂದು ಹೇಳಿದೆ.

“ಹೆಗಡೇರೆ, ಜಾತಿಯ ಅಭಿಮಾನ ತೋರಿಸಿ ಹಳ್ಳಿಯ ಹುಂಬರನ್ನು ಕೋರ್ಟಿನ ನೆವದಿಂದ ಸುಲಿದುಕೊಳ್ಳುವದು ದೊಡ್ಡಸ್ತನವಲ್ಲ. ಅದಕ್ಕಾಗಿ ನೀವು ರಾಯರನ್ನು ತಲೆಯಮೇಲಿಟ್ಟುಕೊಂಡು ಪೂಜಿಸಬೇಕಾಗಿಲ್ಲ. ನಿಮ್ಮೆಲ್ಲರಿಂದ ತಾನು ಜಾತಿಗೆ ಭೂಷಣ ಎಂದೆನಿಸಿಕೊಂಡು ಶ್ರೀಮಂತರಾಗುವ ಯುಕ್ತಿ ಅವರಿಗಿದೆ. ಅವರನ್ನು ದೊಡ್ಡವರೆಂದು ಹೊಗಳಿ ಅವರ ಬುರುಡೆಯೊಳಗೆ ಬೀಳುವ ಬುದ್ದಿ ನಿಮಗಿದೆ!”

“ನೀವು ಇಷ್ಟು ಹೇಳಿದಮೇಲೆ ನಾನೂ ಒಂದು ಮಾತು ಹೇಳಿಬಿಡಲೆ? ವಕೀಲಿಯನ್ನೂ ಕಾರ್ಕೂನಿಕೆಯನ್ನೂ ಮಾಡಿ ಹಣಗಳಿಸಲಾಗದೆ ಹೊಟ್ಟೆ ಕಿಚ್ಚಿನಿಂದ ನೀವು ಈ ಮಾತು ಅನ್ನುತ್ತೀರಿ. ಅಲ್ಲವೇ ಮಾಸ್ತರರೇ ?…….. ”

ಅಂದು ಹೆಗಡೆಯವರೂ ನಾನೂ ತುಸು ಸಿಡಿದುಕೊಂಡರೂ ಮತ್ತೆ ಇಲ್ಲದ ಪುರಾಣಗಳಿಂದ ಗೆಳೆಯರಾದೆವು. ರಾಯರ ಘನತೆಯನ್ನು ತೋರಿಸಿ ಕೊಡುವೆನೆಂದು ಹೆಗಡೆಯವರಿಗೆ ಹೇಳಿದೆ. ಅವರೂ ಒಪ್ಪಿಕೊಂಡರು.

ರಾಯರೊಡನೆ ನನಗಿದ್ದ ಅಲ್ಪ ಸ್ವಲ್ಪ ಬಳಿಕೆಯನ್ನು ಹೆಚ್ಚಿಸಿಕೊಂಡೆ. ನಮ್ಮ ಜಾತಿಯ ಒಂದು ಸಭೆ ಕರೆದು ಜಾತಿಯ ಬಡಮಕ್ಕಳ ಶಿಕ್ಷಣಕ್ಕಾಗಿ ಒಂದು ಫಂಡು ಕೂಡಿಸಬೇಕೆಂಬ ಯೋಜನೆಯನ್ನು ಕುರಿತು ರಾಯರೊಡನೆ ಹತ್ತು ಹದಿನೈದು ದಿನ ಚರ್ಚಿಸಿದೆ. ಅದರ ಉತ್ತರ ನಾನು ನಿರೀಕ್ಷಿಸಿದ್ದೇ ಆಯಿತು!

ಈಗ ನಾನೂ ರಾಯರೂ ತುಂಬಾ ಪರಿಚಿತರು. ಪರಸ್ಪರರ ಅಭಿಪ್ರಾಯಗಳನ್ನು ಭಿಡೆಯಿಲ್ಲದೆ ಒಬ್ಬರೊಬ್ಬರೆದುರು ವ್ಯಕ್ತಮಾಡುತ್ತೇವೆ.
X X X X

“ನೀವು ಇಲ್ಲೇ ಕುಳಿತು ನಮ್ಮ ಮಾತುಕತೆಯನ್ನು ಕೇಳಿರಿ” ಎಂದು ಹೆಗಡೆಯವರನ್ನು ಹೊರಗೆ ಕೂಡ್ರಿಸಿ ರಾಯರನ್ನು ಕಾಣಹೋದೆ.

“ಮತ್ತೆ ಜಾತಿಯಮಕ್ಕಳ ಶಿಕ್ಷಣ ಅನ್ನುತ್ತ ಬಂದಿರಿ ಹೌದೋ ಅಲ್ಲವೋ? ನೋಡಿ ಭಟ್ಟರೆ, ನಿಮಗೆ ಮಾಸ್ತರಿಕೆಯಿಂದ ಬರುವ ಸಂಬಳ ಸಾಲದಿದ್ದರೆ ನಾಲ್ಕು ಮನೆಗಳ ಖಾಸಗೀ ಶಿಕ್ಷಣ ಹಿಡಿದುಕೊಡುವೆ. ತಿಂಗಳಿಗೆ ೨೦-೨೫ ರೂ. ಹೆಚ್ಚಿಗೆ ಆಗಬಹುದು ನಿಮ್ಮ ಉತ್ಪನ್ನ. ಆದರೆ ಈ ಜಾತಿ ಮಕ್ಕಳ ಶಿಕ್ಷಣವನ್ನೇಕೆ ಸುತ್ತುಕೊಳ್ಳುತ್ತೀರಿ? ನಮ್ಮ ಜಾತಿಯನ್ನು ಸುಧಾರಿಸಿಕೊಳ್ಳಲಿಕ್ಕೆ ಬ್ರಹ್ಮ ಸರಸ್ವತಿಯರೆಲ್ಲ ಬಂದರೂ ಸಾಲದು. ಅಜ್ಞಾನ ಅಹಂಕಾರಗಳಲ್ಲಿ ಅದು ಕೊಳೆಯುತ್ತಿದೆ. ಅದರ ಗೊಡವೆಯೇಕೆ? ಚೇಷ್ಟೆಗಾಗಿ ಹೇಳುತ್ತೇನೆ ಮಿಸ್ಟರ್ ಭಟ್, ನಮ್ಮ ಜಾತಿಯವರೆಲ್ಲ ಸುಶಿಕ್ಷಿತರಾಗಿ ಬಿಟ್ಟರೆ ನಮ್ಮಂಥ ವಕೀಲರು ಸಾಯಬೇಕೆ?! (Dont take me seriously!) ಇನ್ನೂ ನಿಮ್ಮ ಹಟವಿದ್ದರೆ ಮಾಡಿರಿ. ಅಲ್ಲ ಅನ್ನುವದಿಲ್ಲ. ನನ್ನ ಪಾಲಿನ ವಂತಿಗೆಯನ್ನು ಕೊಡುತ್ತೇನೆ. ಆದರೆ ನಾನೇ ಅದರ ಅಧ್ಯಕ್ಷನಾಗಬೇಕೆಂದರೆ ಸಾಧ್ಯವಿಲ್ಲ. ನನ್ನ ಕೆಲಸವೇ ನನಗೆ ಭಾರವಾಗಿದೆ. ಇದಕ್ಕೆಲ್ಲ ವೇಳೆಯೇ ಸಿಗುವದಿಲ್ಲ…

ನಾನು ಹೊರಗೆ ಬರುವಾಗ ಹೆಗಡೆಯವರು ತಮ್ಮ ಎರಡೂ ಕಿವಿಗಳನ್ನು ಎಳೆದು ಗೇಣುದ್ದ ಮಾಡಿಕೊಂಡು ಕುಳಿತಿದ್ದರು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...