
೧
ಮಳೆ ಬಂತು ಹೊಳೆ ಬಂತು
ಬಿಸಿಲ ತಾಪದಿ ಬೆಂದು-
ನೊಂದ ನೆಲಕೂ ಇಂದು ಜೀವ ಬಂತು
ಮನೆ ಮುಂದೆ ಹೊಸತಿಲಲಿ
ಪ್ರಭೆಯ ಪ್ರತಿಭಾ ಕಿರಣ
ಮನೆಯನೆಲ್ಲವನಿಂದು ಬೆಳಗ ಬಂತು.
೨
ಎದೆಯ ಹೂದೋಟದಲಿ ಬಳ್ಳಿ ಹಂದರದಲ್ಲಿ
ಮೊಗ್ಗೆ ಮೊಗದೋರಿದವು ಕಣ್ಣ ತೆರೆದು
ಕೋಮಲತೆ ಮೈತಳೆಯಿತೆಂಬ ಭಾವನೆಯಲ್ಲಿ
ಮೆಲ್ಲ ಮೆಲ್ಲನೆ ಕೈಯ ಚಾಚಿ ಸರಿದು.
೩
ಉಸಿರು ಉಸುರಿನ ಕೂಡ ಪ್ರೀತಿಯಮೃತ ಸುರಿಸಿ
ಮೌನದಲಿ ಮೃದುವಾಗಿ ಪಕಳೆ ಬಿಡಿಸಿ
ಭೂಮಿ ತಾಯಿಯ ಬಸಿರ ಬಯಕೆ ಉಸಿರಾದಂತೆ
ಕಣ್ಣನರಳಿಸಿ ನೋಡಿ ಎದೆಗೆ ಸರಿಸಿ.
೪
ಮನ ವಿಮಾನವನೇರಿ ದಿಗ್ದಿಗಂತಕು ಹಾರಿ
ಬಣ್ಣ ಬಣ್ಣದ ಸ್ವರ್ಣಲೋಕ ಸೇರಿ;
ರಂಭೆ ರೋಹಿಣಿ ರತಿಯ ಇಂದ್ರ ಚಂದ್ರರ ಕತೆಯ
ಕನಸು ನೆನಸಿಗೆ ದಾರಿ ಛಾಯೆ ಬೀರಿ.
೫
ಕಡಲಿನಾಚೆಗೆ ಕಡಲು ಮುತ್ತು ರತ್ನಗಳೊಡಲು
ಸುಖದ ಸಂಭ್ರಮ ತುಂಬಿದಂಥ ಮಡಿಲು;
ಮೀನಗಾರನ ಹೆಣ್ಣು ಬಲೆಯ ಬೀಸಿದ ಕಣ್ಣು
ಕೊರಳನಪ್ಪಿದ ತೋಳು-ಹೆರಳು ಸಡಿಲು.
೬
ಹೆರಳ ಮಾಲೆಗೆ ಸುರುಳಿ ಸಂಪಿಗೆಯ ಸೌಗಂಧ
ತುಂಬಿ ನಿಂತಿಹ ಎದೆಗೆ ಎದೆಯ ಜೇನು;
ಭೂಮಿ ಹಸುರಾಗಿಹುದು ಮರ ಚಿಗಿತು ನಿಂತಿಹುದು
ಸುಗ್ಗಿ ಬರೆ ಹಿಗ್ಗಿನಲ್ಲಿ ಹಾಡದೇನು?
*****
















