Home / ಕವನ / ಕವಿತೆ / ಢಣ್….ಢಣಾ….ಢಣ್….

ಢಣ್….ಢಣಾ….ಢಣ್….

ಢಣ್ ….ಢಣಾ….ಢಣ್..
ಗಡಿಯಾರದಲ್ಲಿ ಗಂಟೆ ಹೊಡೆಯುತ್ತಿದೆ ಎಂಟು
ನನಗು ಅದಕೂ ಇಹುದು ನಿತ್ಯ ಗಂಟು;
ದೇಹದಲ್ಲಿ ಆಲಸಿಕೆ
ಮನಸಿನಲಿ ಬೇಸರಿಕೆ
ಕಣ್ಣಿನಲಿ ತೂಗುತಿದೆ ಇನ್ನೂನು ತೂಕಡಿಕೆ
ಏಳಲಾರದ ಮನಸು
ಹಾಸಿಗೆಯ ಬಿಟ್ಟು –
ಪಾಪ! ನೆರೆಮನೆಯಲಳುತಿದೆ ಕೂಸು
ಕಿಟಕಿಟಿಯ ಕೊಟ್ಟು!
ಎದ್ದು ಹಾಸಿಗೆ ಮಡಿಸಿ
ಕಸಗುಡಿಸಿ
ಕನ್ನಡಿಗೆ ಎದುರಾಗಿ ನಿಂತು ತಲೆಗೂದಲಲಿ
ಬೆರಳಿರಿಸಿ-
ನನ್ನ ನಾನೇ ಕಂಡು
ಹೂ ನಗೆಯ ಸವಿಯುಂಡು ಅಂತೆ ನಿಂತೆ
ಎದೆಯ ಆಗಸದಲ್ಲಿ
ಮುಗಿಲು ಮುಗಿಲಿಗೆ ತಾಕಿ ಗಗನವೇ ಹರಿವಂತೆ
ಹೊಳೆಯಿತದೊ ಕೋಲ್-ಮಿಂಚು!
ಇದ್ದುದಿರುವಂತೆಯೇ-
ನಿಂತ ನೆಲ, ಮೇಜು ಕುರ್ಚಿ ಟಿಪಾಯಿ ಸೆಲ್ರು
ಅಟ್ಟಹಾಸದ ಕುಣಿತ!
ಮೈ ಕೈಯ ಮಣಿತ.
ಕತ್ತಲೆಯ ಕೋಣೆಯಲಿ
ಮೂಕವಾಗಿಯೆ ಯಾರೊ ಮೇಲ್ವಾಯ್ದು ಬಿದ್ದಂತೆ
ಬಿಡಿಸಿಕೊಳ್ಳುವ ಮುನ್ನ ಯಾರಿಲ್ಲವೆಂಬಂತೆ
ಮನಕೆ ಕವಿಯಿತು ಮಂಕು
ಅಣಕು ಮಿಣುಕು.
ಹೊರಳ ನೋಡಿದೆ ಮತ್ತೆ ಕೋಣೆ ತುಂಬ
ಹರಿದು ಹೋಯಿತು ಸುತ್ತು ಕಣ್ಣ ಬಿಂಬ
ಹ್ಯಾಂಗರಿಗೆ ತೂಗುತಿವೆ ಕೋಟು ಪ್ಯಾಂಟು
ಇತ್ತ ಒಂದೆರಡು ಶರ್ಟು
ಮೇಜು ಶೆಲ್ಫು ಕಪಾಟಿನಲಿ ಪುಸ್ತಕದ ರಾಶಿ
ಸೌಭಾಗ್ಯದಾ ನನ್ನ ಜೀವಕಾಶಿ
ಸರ್ವಸ್ವಕೂ ನನಗೆ ಇದುವೆ ಆಸ್ತಿ
ಮತ್ತೆ ತಲೆಯೊಳಿದೆ ಈ-ಇದಕು ಜಾಸ್ತಿ.
ಏನಿದೆ ಈ ಹೃದಯ ಸಮ
ಉಳಿದೆಲ್ಲವು ಬಿಸಿಲ ಹಿಮ
ಕರೆಯುತಿದೆ ಕರ್ತವ್ಯ ಕೈಯ ಬೀಸಿ
ಉಸಿರು ಉಸುರಿಗು ತನ್ನ ನೆನಪು ಸೂಸಿ
ದಾರಿಯುದ್ದಕು-ಬರಿಯ ಧೂಳೆ ಧೂಳು
ಬಸ್ಸು ಬಂದರೆ ಬಟ್ಟೆ ಎಲ್ಲ ಹಾಳು!
ಢಣ್….ಢಣಾ….ಢಣ್….
ಸಿಪಾಯಿ ಹೊಡೆದನೊ ಗಂಟೆ
ನಿತ್ಯದಂತೆ
ಇದೆ ನೋಡು ಹಾಯ್-ಸ್ಕೂಲು
ನಾ ಮೇಷ್ಟ್ರು
ತಾಸು ತಾಸಿಗು ಗಂಟೆ ಹೊಡೆವರಂತೆ
ಅದಕಾದರೂನು ಬಿಡುವಿಲ್ಲವಂತೆ!
ಉಳಿದವರ ಜೊತೆಗೂಡಿ
ಗಾಣದೆತ್ತಿನ ಜೋಡಿ
ಕ್ಲಾಸು ಕ್ಲಾಸಿಗು ಸುತ್ತಿ ಹೋಗಬೇಕು
ಆ ವಿಷಯ ಈ ವಿಷಯ ಯಾವುದಾದರು ಏನು?
ಬರುತಿರಲಿ ಬರದಿರಲಿ ಕಲಿಸಬೇಕು.
ಕಲಿಸದಿದ್ದರೆ ಹೇಗೆ ಸಾಗಬೇಕು!
ತಲೆ ಹಾರಿ ಹೋದಂತೆ ಜೀವ ಮೌನ
ಸೋತ ನರನಾಡಿಗಳು ನಿಜಕು ಊನ
ಸ್ಟಾಫ್ ರೂಮಿನಲಿ ಕಪ್ಪು ಬಸಿಯ ಗಾನ
ಹೀರುವರು ಮೇಷ್ಟ್ರುಗಳು ಚಹದ ಜೇನ!
ಗಾಳಿಯಲೆಯಲೆಯಲ್ಲಿ ಸಿಗರೇಟ ಧೂಮ
ಅವರಿವರ ನೇಮ!
ಅಲ್ಲಲ್ಲಿ ಕುಳಿತಲ್ಲಿ
ಮೂಲೆ ಮೂಲೆಗಳಲ್ಲಿ
ಕೊರೆದ ಕಡ್ಡಿಗಳೊಡನೆ ಸಿಗರೇಟ ತುಂಡುಗಳು
ಸುಟ್ಟ ಮೋರೆಯ ತೋರಿ ಬಿದ್ದಿರುವವು;
ತಂಬಾಕು ತಿಂದವರ ಕೆಂಜೊಲ್ಲ ಪಿಚಕಾರಿ
ನೊಣಕೆ ಔತಣವನ್ನು ನೀಡಿರುವವು!
ಇರುವ ಶಕ್ತಿಯನೆಲ್ಲ ಹಿಡಿದು ನಿಲಿಸು
ಹುಡುಗರೊಡಗೂಡುತಲಿ ಮತ್ತೆ ಬೆರೆಸು
“ತಿನಬೇಕು ಹಾಕಿದಷ್ಟು
ಹೊರಬೇಕು ಹೇರಿದಷ್ಟು”
ಎನ್ನುವದೆ ಈ ಬಾಳ ಹಾಳಾದ ನೀತಿ
ಹೊಲಸು ಪಿಶಾಚಿ.
………………………….
ಸಿಪಾಯಿ ಹೊಡೆದನೊ ನಿಂತು ಕೊನೆಯ ಗಂಟೆ
ದೇವರಂತೆ!
ಢಣ್….ಢಣಾ….ಢಣ್….
*****
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...