Home / ಕಥೆ / ಸಣ್ಣ ಕಥೆ / ನಂಬಿ ಕೆಟ್ಟವರಿಲ್ಲ

ನಂಬಿ ಕೆಟ್ಟವರಿಲ್ಲ

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್ಟಿಸಿದ. ಅಲ್ಲಿಂದ ಅವನ ‘ಅನ್ನಧಾತ’ ಕೋಣೆಯತ್ತ ಕಣ್ಣು ಹಾಯಿಸಿದ. ಗೋಡೆಯ ಮತ್ತೊಂದು ಮೂಲೆಯಲ್ಲಿ ಗಂಧದ ಮಾಲೆ ಹಾಕಿ ತೂಗಿಸಿದ್ದ ತನ್ನ ಪತ್ನಿಯ ಫೋಟೊದತ್ತ ನೋಡಿದ. ಅವನಿಗೆ ತನ್ನ ಗತ ಜೀವನದ ನೆನಪಾದುವು.

ಸುಮಾರು ಮೂವತ್ತು ವರ್ಷಗಳ ಹಿಂದೆ ತಾನು ತನ್ನ ನಾಲ್ಕು ಸಣ್ಣ ಮಕ್ಕಳೊಂದಿಗೆ ಪತ್ನಿ ಸಮೇತವಾಗಿ, ಕೆಲಸವಿಲ್ಲದೆ ಊರೂರು ಅಲೆದು ಕೊನೆಗೆ ರೈಲು ಹತ್ತಿ ಬಂದು ಇಳಿದ್ದದು ಈ ಊರಿನಲ್ಲಿ. ಆಗ ಅವನಿಗೆ ಆಸರೆ ಕೊಟ್ಟಿದ್ದು ಈ ಬೆಟ್ಟ. ಊರಿನ ಜನ ಈ ಬೆಟ್ಟವನ್ನು ಹೆಣ ಸುಡಲು ಮಾತ್ರ ಉಪಯೋಗಿಸುತ್ತಿದ್ದರು. ಹೆಣ ಸುಟ್ಟು ಆದ ಮೇಲೆ ಇಲ್ಲಿ ಯಾವ ಮನುಷ್ಯನೂ ನಿಲ್ಲುತ್ತಿರಲಿಲ್ಲ. ರಾತ್ರಿಯಾಯಿತೆಂದರೆ ಕ್ರೂರ ಮೃಗಗಳ ಭಯ. ಆದರೆ ಎಲ್ಲಾ ಬಿಟ್ಟವನಿಗೆ ಯಾವುದರ ಭಯವೇನು? ಕಿತ್ತು ತಿನ್ನುವ ಬಡತನ, ನಿರುದ್ಯೋಗ ಅವನ ಎಲ್ಲಾ ತರಹದ ಭಯವನ್ನು ನುಂಗಿಕೊಂಡಿತ್ತು. ಅವನು ಅಲ್ಲಿಯೇ ಮರದಡಿ ಸಂಸಾರ ಹೂಡಿದ.

ಹೆಣ ಸುಡಲು ಬಂದ ಜನರಿಗೆ ಈ ಕಪ್ಪು ದಾಡಿಯ ತರುಣ ಸಂಸಾರ ಸಮೇತನಾಗಿ ಮರದಡಿಯಲ್ಲಿ ಬಿಸಿಲು, ಮಳೆ, ಚಳಿ, ರಾತ್ರಿ, ಹಗಲು ಎನ್ನದೆ ಬಿದ್ದಿರುವುದನ್ನು ಕಂಡು ಆಶ್ಚರ್‍ಯವಾಯಿತು. ಕ್ರೂರ ಮೃಗಗಳಿರುವ ಈ ಹೆಣ ಸುಡುವ ಬೆಟ್ಟದಲ್ಲಿ ಈ ರೀತಿ ಮನುಷ್ಯನೊಬ್ಬ ಸಂಸಾರ ಸಮೇತನಾಗಿ ಬಿದ್ದಿರಬೇಕಾದರೆ ಇವನಲ್ಲಿ ಏನೋ ಒಂದು ಶಕ್ತಿ ಅಡಗಿದೆ ಎಂದು ಜನ ತಮ್ಮ ತಮ್ಮಲ್ಲೇ ಮಾತಾಡಿಕೊಂಡರು. ಮೊದ ಮೊದಲು ಆ ಅಪರಿಚಿತ ತರುಣ ಬಂದ ಜನರಿಗೆ ಭಯದಿಂದ ಕೈ ಮುಗಿಯುತ್ತಿದ್ದರೆ ಕೊನೆ ಕೊನೆಗೆ ಜನರೇ ಅವನಿಗೆ ಕೈ ಮುಗಿಯ ತೊಡಗಿದರು. ಬರುಬರುತ್ತಾ ಕಾಲಿಗೆ ಬೀಳ ತೊಡಗಿದರು. ಕಾಲಿಗೆ ಬಿದ್ದವರಿಗೆ ಆಶೀರ್ವಾದ ಮಾಡುವುದು ಧರ್ಮ ತಾನೇ? ತರುಣ ದಾಡಿ ತೀಡುತ್ತಾ ಆಶೀರ್ವದಿಸಿದ. ಜನರು ತಮ್ಮ ಕಷ್ಟಗಳ ಬಗ್ಗೆ, ರೋಗ ರುಜಿನಗಳ ಬಗ್ಗೆ ಕೈ ಮುಗಿಯುತ್ತಾ, ಅಡ್ಡ ಬೀಳುತ್ತಾ ಅವನಲ್ಲಿ ಪರಿಹಾರ ಕೇಳಿದರು. ಅವನು ಮೇಲೆ ನೋಡುತ್ತಾ ಮೇಲಿನವನಿಗೆ ಕೈ ಮುಗಿದ. ಜನರ ಬೇಡಿಕೆಗಳು ಈಡೇರ ತೊಡಗಿದುವು. ಪ್ರತಿಫಲವಾಗಿ ತರುಣನಿಗೆ ಕಾಣಿಕೆಗಳು ಬರಲಾರಂಭಿಸಿದವು. ಕೆಲವೇ ವರ್ಷದಲ್ಲಿ ಕುಟೀರ ನಿರ್ಮಾಣವಾಯಿತು. ಕೋಣೆ ನಿರ್ಮಾಣವಾಯಿತು. ಜನ ತಂಡೋಪ ತಂಡವಾಗಿ ಬರಲಾರಂಭಿಸಿದರು. ಬೆಟ್ಟಕ್ಕೆ ಕಾಲು ರಸ್ತೆ ನಿರ್ಮಾಣವಾಯಿತು. ವಿದ್ಯುಚ್ಛಕ್ತಿ ವ್ಯವಸ್ಥೆಯಾಯಿತು. ಬೆಟ್ಟದ ತಪ್ಪಲಲ್ಲಿ ಮನೆ, ಅಂಗಡಿ, ವಸತಿಗೃಹಗಳ ಸಂಖ್ಯೆ ಜಾಸ್ತಿಯಾಗ ತೊಡಗಿತು. ಹಳ್ಳಿ ಪಟ್ಟಣವಾಯಿತು.

ಇದು ಮೂವತ್ತು ವರ್ಷದ ಹಿಂದಿನ ಕತೆ. ಈಗ ಈ ಹಣ್ಣು ಮುದುಕನಿಗೆ ಎಪ್ಪತ್ತು ವರ್ಷ. ಮೊದಲ ಮೂರು ಹೆಣ್ಮಕ್ಕಳು ಬೆಳೆದು ಮದುವೆಯಾಗಿ ಹೋದರು. ಹೆಂಡತಿ ತೃಪ್ತಿಯಿಂದಲೇ ತೀರಿ ಹೋದಳು. ಕೊನೆಗೆ ಉಳಿದವರು ಇಬ್ಬರೇ. ಆ ಬಿಳಿದಾಡಿಯ ಮುದುಕ ಹಾಗೂ ಅವನ ಕೊನೆಯ ಮಗ.

ತರುಣ ಮಗ ಕನಸಿನಲ್ಲಿ ಕನವರಿಸುತ್ತಾ ಹೊರಳಾಡಿದಾಗ ಮುದುಕ ವಾಸ್ತವ ಪ್ರಪಂಚಕ್ಕೆ ಬಂದ. ಸೂರ್ಯ ಅದಾಗಲೇ ತನ್ನ ಕಾಯಕದಲ್ಲಿ ತೊಡಗಿದ್ದ. ಮುದುಕ ಗಡಿಬಿಡಿಯಿಂದ ಎದ್ದು ಕುಳಿತ. ತನ್ನ ಲುಂಗಿಯನ್ನು ಸರಿಪಡಿಸಿದ. ಶಾಲನ್ನು ಹೆಗಲ ಮೇಲೆ ಎಳೆದುಕೊಂಡ. ಕಾಲಿಗೆ ಚಪ್ಪಲಿಯನ್ನು ಸಿಕ್ಕಿಸಿದ. ಕೈಯಲ್ಲಿ ಚೊಂಬನ್ನು ಹಿಡಿದುಕೊಂಡು ಜೋರಾಗಿ ಕೂಗಿದ. “ಮಗಾ, ಏಳು ಹೊತ್ತಾಯಿತು. ಜನ ದರ್ಶನಕ್ಕೆ ಬರುವ ಸಮಯವಾಯಿತು. ಕೋಣೆಯೊಳಗೆ ಮಾಡಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಅಲಂಕರಿಸು. ನಾನು ಹೊಳೆ ಕಡೆ ಹೋಗಿ ಬರುತ್ತೇನೆ.” ಬಿಳಿದಾಡಿಯ ಮುದುಕ ಕುಂಟುತ್ತಾ ಒಂದೊಂದೇ ಮೆಟ್ಟಲನ್ನು ಇಳಿದುಕೊಂಡು ಹೊಳೆದಂಡೆಗೆ ಬಂದ. ಬೇಸಿಗೆಯ ಸಮಯ. ಮಳೆಗಾಲದಲ್ಲಿ ನೀರಿನ ಅಬ್ಬರ ಜಾಸ್ತಿಯಿದ್ದರೆ ಬೇಸಿಗೆಯಲ್ಲಿ ಸೊಂಟದವರೆಗೆ ಮಾತ್ರ ನೀರು, ಮಳೆ ಇರಲಿ, ಬಿಸಿಲಿರಲಿ, ಚಳಿಯಿರಲಿ, ತಪ್ಪದೆ ಬೆಳಗ್ಗಿನ ತಣ್ಣೀರು ಸ್ನಾನ ಮುಗಿಸಿಯೇ ಅವನು ಮುಂದಿನ ಕಾರ್ಯವನ್ನು ಮಾಡುತ್ತಿದ್ದ. ದರ್ಶನಕ್ಕೆ ಹಿಂದೆ ಬರುತ್ತಿರುವಷ್ಟು ಜನಸಂದಣಿ ಈಗ ಇಲ್ಲ. ಆದುದರಿಂದ ಮುದುಕನಿಗೆ ಹೆಚ್ಚಿನ ಆತುರವೇನೂ ಇರುತ್ತಿರಲಿಲ್ಲ. ಅಲ್ಲದೆ ಹೆಣ್ಮಕ್ಕಳು ಮದುವೆಯಾಗಿ ಹೋದ ಮೇಲೆ ಅವನು ಅರ್ಧ ಕುಸಿದಿದ್ದ. ಜೊತೆಯಾಗಿ ನಿಂತು ತನ್ನೊಡನೆ ಸುಖ ದುಃಖವನ್ನು ಸಮಾನವಾಗಿ ಹಂಚಿಕೊಂಡ ಹೆಂಡತಿ ತೀರಿ ಹೋದ ಮೇಲಂತೂ ಮುದುಕ ಸಂಪೂರ್ಣ ಜರ್ಜರಿತನಾಗಿದ್ದ. ಈಗ ಅವನಿಗೆ ಮಗನ ಚಿಂತೆ ಮಾತ್ರ.

ಸ್ನಾನ ಮುಗಿಸಿದ ಮುದುಕ ತನ್ನ ಮೈವರಸುತ್ತಾ ಒಮ್ಮೆ ಸುತ್ತಲೂ ನೋಡಿದ. ಶಾಂತವಾಗಿ ಹರಿಯುವ ನದಿ, ಅನತಿ ದೂರದಲ್ಲಿ ಕಾಣುವ ಹಸಿರು ಬೆಟ್ಟಗಳ ಸಾಲು ಸಾಲು, ನೀಲ ಆಕಾಶ, ಹಿತವಾಗಿ ಬೀಸುವ ಗಾಳಿ, ಈ ಪ್ರಕೃತಿ ನಮಗೆ ಎಲ್ಲವನ್ನೂ ಕೊಡುತ್ತಿದೆ. ಪ್ರತೀಯೊಬ್ಬರಲ್ಲೂ ತಾರತಮ್ಯವನ್ನು ರೂಪಿಸಿಯೇ ಈ ಜಗತ್ತನ್ನು ಮುನ್ನಡೆಸುತ್ತದೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡುವ ಪ್ರಕೃತಿಗೆ ನಾನು ಹಿಂದೆ ಕೊಟ್ಟ ಋಣವೇನು? ಪ್ರಕೃತಿಯ ಋಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಅನ್ಯಾಯ, ಮೋಸವೆಸಗುವುದು ತೀರ ಅಕ್ಷಮ್ಯ ಅಪರಾಧವಾಗುತ್ತದೆ. ತಾನು ಜನರ ಮುಗ್ಧತೆಯ ದುರುಪಯೋಗ ಮಾಡುತ್ತಿದ್ದೇನೆಯೇ ಎಂದು ನೆನಸಿದಾಗ ಅವನ ಮುದಿ ಮೈ ಲಘುವಾಗಿ ಕಂಪಿಸಿತು. ಹೌದು ದೇಹ ಮಾಗಿದಾಗಲೇ ತಪ್ಪಿನ ಅರಿವಾಗುತ್ತದೆ.

ಅವನು ನಿಧಾನವಾಗಿ ಮೆಟ್ಟಿಲೇರುತ್ತಾ ಕುಟೀರಕ್ಕೆ ಬಂದ. ಮಗ ಇನ್ನೂ ಮಲಗಿಯೇ ಇದ್ದ. ಮುದುಕ ಕೋಪದಿಂದ ಕುದಿಯ ತೊಡಗಿದ. ಬಾಗಿ ತನ್ನ ಬಲಗೈಯಿಂದ ಮಗನ
ಬೆನ್ನಿಗೆ ಬಲವಾಗಿ ಗುದ್ದಿದ.

“ನಿನಗೆ ಜವಾಬ್ದಾರಿಯಿಲ್ಲ. ಶುದ್ಧ ಸೋಮಾರಿ, ದುಡಿದವನಿಗೆ ಮಾತ್ರ ಗೊತ್ತು ಬೆವರಿನ ಬೆಲೆ, ಕುಳಿತಲ್ಲೇ ಹಣ ಬಂದು ಬೀಳುತ್ತದೆ. ಕಷ್ಟ ನಿನ್ನ ಸಮೀಪ ಬಂದಿಲ್ಲ. ನಾನು ಸತ್ತ ಮೇಲೆ ನಿನಗೆ ಎಲ್ಲಾ ತಿಳಿಯುತ್ತದೆ.” ಮುದುಕ ಒಂದೇ ಸವನೆ ವಟಗುಟ್ಟುತ್ತಿದ್ದಂತೆ ಮಗ ದಿಢೀರನೆ ಎದ್ದು ಸ್ನಾನಕ್ಕೆ ಓಡಿದ.

ಬಿಳಿದಾಡಿಯ ಮುದುಕ ಆಲೋಚಿಸ ತೊಡಗಿದ. ತಪ್ಪು ತನ್ನದೇ, ಈ ಊರಿಗೆ ಬಂದಾಗ ಅವನಿನ್ನೂ ಕೆಲವು ತಿಂಗಳ ಹಸುಳೆ. ಅವನು ಬುದ್ದಿಗೆ ಬರುವಾಗ ನಾನು ಎಲ್ಲಾ ಸಂಪಾದಿಸಿ ಆಗಿತ್ತು. ಕಷ್ಟ ಅವನು ಹುಟ್ಟಿದ ಕ್ಷಣವೇ ಮಾಯವಾಗಿತ್ತು. ಅದೃಷ್ಟದ ಮಗುವೆಂದು ಕೊಂಡಾಟದಲ್ಲಿ ಸಾಕಿದ್ದೆ. ಈಗ ಉಪಯೋಗಕ್ಕೆ ಬಾರದ ಪ್ರಾಣಿಯಾಗಿದ್ದಾನೆ. ಇಲ್ಲ ಇವತ್ತೊಂದು ತೀರ್ಮಾನವಾಗಲೇಬೇಕು. ಅವನಿಗೆ ಜವಾಬ್ದಾರಿ ಕೊಡಲೇಬೇಕು. ಮಗ ಸ್ನಾನ ಮುಗಿಸಿ ಬಂದ ಕೂಡಲೇ ಮುದುಕ ಅವನನ್ನು ಹತ್ತಿರ ಕರೆದು ಕೂರಿಸಿದ.

“ನೋಡು ಮಗಾ, ನೀನು ಪ್ರಾಯಕ್ಕೆ ಬಂದಿದ್ದೀಯಾ, ಈ ಕಸುಬನ್ನು ನಂಬಬೇಡ. ಇದು ಕ್ಷಣಿಕ ಸುಖ ಕೊಡುವ ವಿದ್ಯೆ, ಇದಕ್ಕೆ ಭವಿಷ್ಯ ಇಲ್ಲ. ನಿನಗೆ ಗೊತ್ತಿದೆ. ಮೊದಲಿನಷ್ಟು ಜನ ಈಗ ಬರುತ್ತಿಲ್ಲ. ಜನ ಬುದ್ಧಿವಂತರಾಗಿದ್ದಾರೆ. ದೇವರುಧರ್ಮದಲ್ಲಿ ನಂಬಿಕೆ ಕಡಿಮೆಯಾಗಿದೆ. ಜನರು ನಾಸ್ತಿಕರಾಗುತ್ತಿದ್ದಾರೆ. ಈಗೇನೋ ನಮ್ಮಿಬ್ಬರ ಜೀವನ ಕಷ್ಟದಲ್ಲಿ ನಡೆಯುತ್ತದೆ. ಮುಂದೆ ನೀನು ಮದುವೆಯಾಗಿ ಸಂಸಾರಿಯಾಗುವಾಗ ಈ ಆದಾಯ ಎನೂ ಸಾಲದು. ನೀನು ನಿನ್ನ ದಾರಿಯನ್ನು ನೋಡಿಕೋ. ನಾನು ನಿನಗೆ ಸ್ವಲ್ಪ ಹಣ ಕೊಡುತ್ತೇನೆ. ಎಲ್ಲಿಯಾದರೂ ಹೋಗಿ ವ್ಯಾಪಾರ ಮಾಡಿಕೋ. ಕಷ್ಟಕಾಲದಲ್ಲಿ ಸಹಾಯವಾಗಲೆಂದು ಈ ಕತ್ತೆ ಮರಿಯನ್ನು ಕೂಡಾ ನಿನಗೆ ಕೊಡುತ್ತಿದ್ದೇನೆ. ನಿನಗೆ ಆಪತ್ಕಾಲದಲ್ಲಿ ಸಹಾಯವಾಗಬಹುದು. ಮಾರಿದರೆ ಒಳ್ಳೆಯ
ದುಡ್ಡು ಸಿಗುತ್ತದೆ.” ಮುದುಕ ಮಗನ ಉತ್ತರಕ್ಕೂ ಕಾಯದೆ ಎದ್ದು ಹೋದ.

ಮಗನಿಗೆ ತಂದೆಯ ಮಾತು ಸರಿಕಂಡಿತು. ತಾನು ಇನ್ನು ಎಷ್ಟು ದಿನ ತಂದೆಗೆ ಅವಲಂಬಿಸಿಕೊಂಡು ಇರುವುದು? ತಾನಿನ್ನು ಹೀಗೆ ಸೋಮಾರಿಯಾಗಿ ಉಳಿದರೆ ಮುಂದೆ ಜೀವನ ಸಾಗಿಸುವುದು ಖಂಡಿತ ಕಷ್ಟ ಸಾಧ್ಯವಾಗಬಹುದು. ನಾನು ಕೂಡಾ ದುಡಿಯಬೇಕು. ನನ್ನ ಕಾಲಿನಲ್ಲೇ ನಿಲ್ಲಬೇಕು. ಅವನೊಂದು ನಿರ್ಣಯಕ್ಕೆ ಬಂದ. ತಂದೆಯಿಂದ ಆಶೀರ್ವಾದ ಪಡೆದುಕೊಂಡು ಕತ್ತೆಮರಿಯೊಂದಿಗೆ ದೇಶಾಂತರ ಹೋದ.

ಹಲವು ವರ್ಷಗಳು ಸಂದುವು. ಮಗನ ಪತ್ತೆಯಿಲ್ಲ. ಹೋದ ಮಗ ತಿರುಗಿ ಬರಲೇ ಇಲ್ಲ. ಆಧುನಿಕತೆಯ ಭರಾಟೆಯಲ್ಲಿ ಮುದುಕನ ವ್ಯಾಪಾರ ಸಂಪೂರ್ಣ ಕುಸಿಯಿತು. ಭಕ್ತಾದಿಗಳ ಸಂಖ್ಯೆ ಇಳಿಯಿತು. ಆಗೊಮ್ಮೆ ಈಗೊಮ್ಮೆ ದಿವಸಕ್ಕೆ ಒಂದೆರಡು ಜನ ಬಂದರೆ ಅದೇ ವಿಶೇಷ. ಕುಳಿತು ತಿಂದ ಜೀವವಾದುದರಿಂದ ಮುದುಕನ ಆರೋಗ್ಯ ಸಂಪೂರ್ಣ ಕೆಟ್ಟಿತು. ಮುದುಕ ಮೂಲೆ ಸೇರಿದ. ಮಗನ ನೆನಪಾಗುತ್ತಲೇ ಕಣ್ಣೀರಿಡುತ್ತಿದ್ದ. ಒಂಟಿತನ ಅವನ ಧೈರ್ಯವನ್ನೆಲ್ಲಾ ಕಸಿದುಕೊಂಡಿತು. ಮಗನ ಹೆಸರು ಹೇಳಿಕೊಂಡು ಕನವರಿಸುತ್ತಿದ್ದ. ಕೆಲವು ಹಳೆಯ ಅನುಯಾಯಿಗಳು ಅವನಲ್ಲಿ ಧೈರ್ಯ ತುಂಬಿದರು. ಮಗ ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎಂದು ಧೈರ್ಯ ತುಂಬಿದರು. ಆದರೆ ಅವರ ಆಶ್ವಾಸನೆಗಳೆಲ್ಲಾ ನೀರ ಮೇಲಣ ಹೋಮದಂತಾಯಿತು. ಕೊನೆಗೆ ಯಾರೋ ಒಬ್ಬ ಪುಣ್ಯಾತ್ಮ ಒಂದು ಉಪದೇಶ ಹೇಳಿಕೊಟ್ಟ.

“ನೋಡಜ್ಜಾ, ನೀನು ಹೀಗೆ ಕುಳಿತರೆ ಕೊರಗಿ ಹೋಗಿ ಸತ್ತು ಹೋಗುತ್ತೀಯಾ. ನೀನು ಹೇಗಾದರೂ ಮಾಡಿ ಪ್ರಯಾಣ ಮಾಡುವುದಾದರೆ ನಾನೊಂದು ಉಪಾಯ ಹೇಳುತ್ತೇನೆ. ನಿನಗೊಂದು ಸಂತರ ವಿಳಾಸ ಕೊಡುತ್ತೇನೆ. ರೈಲಿನಲ್ಲಿ ಒಂದು ಹಗಲಿಡೀ ಪ್ರಯಾಣ ಮಾಡಬೇಕಾಗುತ್ತದೆ. ಅಲ್ಲೊಂದು ಪವಿತ್ರ ಸ್ಥಳವಿದೆ. ಒಬ್ಬರು ಮಹಾಪುರುಷರಿದ್ದಾರೆ. ಅವರು ತನ್ನ ದಿವ್ಯದೃಷ್ಟಿಯಿಂದ ಎಲ್ಲಾ ತಿಳಿದುಕೊಂಡಿದ್ದಾರೆ. ಅಲ್ಲಿಗೆ ಹೋಗಿ ಅವರಲ್ಲಿ ನಿನ್ನ ಕತೆಯನ್ನು ಹೇಳು, ಖಂಡಿತ ಪರಿಹಾರ ಸಿಗುತ್ತದೆ.” ಮುದುಕನಿಗೆ ಸರಿಕಂಡಿತು. ದೇಹದಲ್ಲಿ ಹೊಸ ಚೈತನ್ಯ ಬಂದ ಹಾಗಾಯಿತು. ಒಬ್ಬನೇ ಹೋಗಲು ಸ್ವಲ್ಪ ಅಂಜಿದರೂ ಸಮಸ್ಯೆ ಪರಿಹಾರವಾಗುವ ಆಶೆಯಿಂದ ಧೈರ್ಯ ತುಂಬಿಕೊಂಡು, ಆ ಮಹಾಪುರುಷನನ್ನು ಕಾಣಲು ಮುದುಕ ಪ್ರಯಾಣ ಬೆಳೆಸಿದ.

ನಿಗದಿತ ವಿಳಾಸ ತಲುಪಿದಾಗ ರಾತ್ರಿಯಾಗಿತ್ತು. ಮುದುಕ ತುಂಬಾ ಸುಸ್ತಾಗಿದ್ದ. ಮಹಾಪುರುಷರು ತಂಗಿದ್ದ ಸ್ಥಳ ಅನತಿ ದೂರದಲ್ಲಿದ್ದು, ಮುದುಕ ತುಂಬ ಉತ್ಸಾಹದಿಂದ ಅವರ ಕಡೆ ಪಾದ ಬೆಳೆಸಿದ. ಅನತಿ ದೂರದಲ್ಲಿ ಜನದಟ್ಟಣೆ ಕಂಡು ಅವಕ್ಕಾದ. ಅಷ್ಟೊಂದು ಜನ ಸಾಗರವನ್ನು ಅವನ ಜೀವಮಾನದಲ್ಲೇ ಅವನು ಕಂಡಿರಲಿಲ್ಲ. ಅಲ್ಲಿ ಭಕ್ತಾಧಿಗಳು ಹೆಣ್ಣು-ಗಂಡೆಂಬ ಭೇದ-ಭಾವವಿಲ್ಲದೆ ಒಂದು ಅಲಂಕರಿಸಿದ ಸಣ್ಣ ಕೋಣೆಯ ಸುತ್ತ ನೂಕುನುಗ್ಗಲಿನಲ್ಲಿ ಸಿಲುಕಿ ಕೊಂಡಿದ್ದರು. ಮುದುಕನಿಗೆ ಅದೇನೆಂದು ನೋಡಿ ಹೋಗಲು ಮನಸ್ಸಾದರೂ ಆ ಜನಜಂಗುಳಿ ನೋಡಿ ಭಯವಾಯಿತು. ಅವನು ದೂರದಿಂದಲೇ ಆ ಕೋಣೆಯ ಕಡೆ ಮುಖ ಮಾಡಿ ಅಡ್ಡಬಿದ್ದ. ತನ್ನ ದುಃಖವನ್ನು ಮನದಲ್ಲೇ ನೆನಸಿಕೊಂಡು ಅದರ ಪರಿಹಾರಕ್ಕಾಗಿ ಪ್ರಾರ್ಥಿಸಿದ. ತನ್ನ ಮಗ ಶೀಘ್ರ ಮರಳಿ ಬರಲಿ ಎಂದು ಬೇಡಿಕೊಂಡ. ಅಲ್ಲಿಂದ ಮಹಾಪುರುಷರು ತಂಗಿದ್ದ ಬಂಗ್ಲೆ ಕಡೆ ನಡೆದ. ಬಹಳ ತಾಸು ಕಾದೂ ಕಾದೂ ಕೊನೆಗೂ ಮಹಾಪುರುಷರ ಭೇಟಿ ಪ್ರತ್ಯೇಕ ಎ.ಸಿ. ಕೋಣೆಯಲ್ಲಿ ನಡೆಯಿತು. ಮಹಾಪುರುಷರನ್ನು ಕಂಡೊಡನೆ ಮುದುಕ ಅಡ್ಡ ಬೀಳಲು ತಯಾರಾದ. ಆದರೆ ಆ ಮಹಾಪುರುಷ ಅದಕ್ಕೆ ಅವಕಾಶ ನೀಡದೆ ಮುದುಕನನ್ನು ಅಪ್ಪಿಕೊಂಡ. ಮಹಾಪುರುಷನ ಕಣ್ಣಿನಲ್ಲಿ ಕಣ್ಣೀರು ಧಾರಾಕಾರವಾಗಿ ಇಳಿಯುತ್ತಿತ್ತು. ಅವನು ಮುದುಕನ ಮಗನೇ ಆಗಿದ್ದ. “ಏನ್ ಮಗಾ, ಏನಿದೆಲ್ಲಾ? ಹೇಗೆ ಇದನ್ನೆಲ್ಲಾ ಸಾಧಿಸಿ ಬಿಟ್ಟೆ ಮಗನೇ?” ಮುದುಕ ಸಂತೋಷದಿಂದ ಮಗನನ್ನು ವಿಚಾರಿಸಿದ.

“ಅಪ್ಪಾ ಇದೆಲ್ಲಾ ಅವನ ದಯ. ಅದಿರಲಿ ನೀನು ಹೇಗಿದ್ದೀಯಾ ಅಪ್ಪಾ? ಕಾರಣಾಂತರಗಳಿಂದ ಬರಲಾಗದ್ದಕ್ಕೆ ನನ್ನನ್ನು ಕ್ಷಮಿಸಪ್ಪ, ನಿನ್ನನ್ನು ನಾನು ಖಂಡಿತ ಮರೆತಿಲ್ಲ ಅಪ್ಪಾ. ಭಕ್ತರು ನನ್ನನ್ನು ಈ ಬಂಧನದಿಂದ ಹೊರ ಬರಲು ಬಿಡುತ್ತಿಲ್ಲ. ಹೋಗಲಿ ಬಿಡು, ನೀನೇ ಬಂದೆಯಲ್ಲಾ. ಇನ್ನು ಎಲ್ಲಿಯೂ ಹೋಗಬೇಡ, ಇಲ್ಲೇ ಇರು. ಮತ್ತೆ ನೀನು ಆ ನೂಕುನುಗ್ಗಲಿನ ಸ್ಥಳದ ದರ್ಶನ ಮಾಡಿದೆಯಾ?”

“ಹೌದು ಮಗನೇ”
“ಅಡ್ಡ ಬಿದ್ದಿಯಾ ಅಪ್ಪಾ?”
“ಹೌದು ಮಗನೇ.”

ಮಗನಿಗೆ ನಗು ಬಂತು. ಅವನು ತಂದೆಯ ಸಮೀಪ ಬಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.

“ಅಪ್ಪಾ, ಅದು ನೀನು ಕೊಟ್ಟ ಕತ್ತೆಮರಿ ಹೂತ ಸ್ಥಳ”

ಮುದುಕನಿಗೆ ಆಶ್ಚರ್ಯವಾಗಲೇ ಇಲ್ಲ. ಅವನು ಜೋರಾಗಿ ನಗ ತೊಡಗಿದ. ಅವನಿಗೆ ನಾಚಿಕೆಯೂ ಆಗಲಿಲ್ಲ.

“ಅಪ್ಪಾ ಏಕೆ ನಗುತ್ತಿಯಾ. ಅದು ನೀನು ಕೊಟ್ಟ ಕತ್ತೆ ಮರಿ ಹೂತ ಸ್ಥಳ.” ಮಗ ಮತ್ತೊಮ್ಮೆ ಮುದುಕನ ಕಿವಿಯ ಸಮೀಪ ಪುನರುಚ್ಚಿಸಿದ.

ಮುದುಕ ಪುನಃ ನಗ ತೊಡಗಿದ. ನಕ್ಕು ನಕ್ಕು ಸುಸ್ತಾದ ಮೇಲೆ ಮುದುಕ ಮಗನ ಕಿವಿಯಲ್ಲಿ ಗುಟ್ಟಾಗಿ ಹೇಳಿದ.

“ಹೌದು ಮಗಾ, ನಾನು ನಗದೆ ಇನ್ನೇನು ಮಾಡಲಿ? ಅದರ ಪೂರ್ವಜರ ಸ್ಥಳವೇ ನನ್ನ ಬಳಿ ಇರುವುದು.”
*****

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...