ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ.
ಹುಟ್ಟಿದ್ದಕ್ಕೆ ಬದುಕಬೇಕು. ಬೆಳೆದು ದೊಡ್ಡವನಾದ ಮೇಲೆ ವೃದ್ಧ ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳಬೇಕು. ಮದುವೆಯಾಗಬೇಕು, ಹೆಚ್ಚೆಂದರೆ ಕೇವಲ ಇಬ್ಬರು ಮಕ್ಕಳ ತಂದೆಯಾಗಬೇಕು. ಅವರ ಜವಾಬ್ದಾರಿಯನ್ನೂ ಬಹು ಕಾಳಜಿಯಿಂದ ನಿಭಾಯಿಸಬೇಕು ಎಂಬುವದವನಿಗೆ ಸಮಾಜ ಹೇಳಿಕೊಟ್ಟಿತ್ತು.
ಎಲ್ಲಾ ಧರ್ಮಗಳೂ, ಧರ್ಮ ಗ್ರಂಥಗಳೂ ನಿತಿ ನಿಜಾಯಿತಿ, ಪ್ರಾಮಾಣಿಕತೆಯನ್ನು ಘೋಷಿಸುತ್ತವೆ ಎಂಬುದವನಿಗೆ ಗೊತ್ತಿತ್ತು. ಚಿಕ್ಕವನಿದ್ದಾಗ ತಂದೆತಾಯಿಯರೂ ಉಪದೇಶ ಕೊಡುತ್ತಿದ್ದರು.
ಈ ಎಲ್ಲಾ ಧರ್ಮಗ್ರಂಥಗಳ ಹೇಳಿಕೆಗಳು ಉಪದೇಶಗಳು ಅವನ ಈಗಿನ ಸ್ಥಿತಿಗೆ ಕಾರಣ.
ಹತ್ತು ವರ್ಷಗಳ ಹಿಂದೆ ಕಾರಕೂನನಾಗಿ ಸೇರಿದ ಅವನು ಈಗಲೂ ಕಾರಕೂನನಾಗೇ ಇದ್ದಾನೆ. ಅವನಿಗಿಂತ ಕಡಿಮ ಸರ್ವೀಸ್ ಇರುವವವರಿಗೆ ಆಗಲೇ ಬಡ್ತಿ ದೊರೆತಿದೆ. ಅದರ ಮೇಲಿಂದ ಹತ್ತು ವರ್ಷಗಳಲ್ಲಿ ಹತ್ತು ಕಡೆ ವರ್ಗಾವಣೆ. ಇದೆಲ್ಲಾ ಅವನ ಮನಸ್ಸಿಗೆ ಬಹಳ ನೋವುನ್ನುಂಟು ಮಾಡಿತ್ತು. ಸಿಟ್ಟಿನಿಂದ ಎಲ್ಲರನ್ನೂ ಕತ್ತರಿಸಿ ಬಿಡಬೇಕೆಂಬ ಭಾವ ಹುಟ್ಟಿ ಮಾಯವಾಗಿತ್ತು.
ಮನೆಯಲ್ಲಿ ವಯಸ್ಸಾದ ತಂದೆ, ತಾಯಿ, ಮಡದಿ ಇಬ್ಬರು ಹೆಣ್ಣು ಮಕ್ಕಳು. ಸಾಲದೆಂಬಂತ ಇಬ್ಬರೂ ಹೆಂಣುಗಳೇ. ಅವನಿಗೆ ಬರುತ್ತಿದ್ದ ಸಂಬಳ, ತಂದೆಯ ಪೆನ್‌ಷನ್‌ನಿಂದಲೂ ಆ ಆರು ಸದಸ್ಯರ ಸಂಸಾರ ತೂಗಿಸುವುದು ಕಷ್ಟವಾಗುತ್ತಿತ್ತು. ಏನೇ ಆಗಲಿ ಅದರಿಂದ ತಿಂಗಳು ಕಳೆಯಬೇಕೆಂಬ ಹಟ.
ಒಂದು ದಿನವಾದರೂ ಮನೆಯಲ್ಲಿ ಎಲ್ಲಾ ಸರಿಯಾಗಿದೆ ಎಂಬ ಮಾತಿಲ್ಲ. ಯಾವಾಗಲೂ ಬೇಕು, ಬೇಕು ಬೇಕು ಏನಾದರೊಂದು ಬೇಕು. ಆ ಇಲ್ಲದರ ಅವಶ್ಯಕತೆ ಅವನಿಗೆ ಗೊತ್ತಿರುತ್ತಿತ್ತು. ಆದರೂ ಅದಿಲ್ಲದೇ ಬದುಕಲಾರವೇ ಎಂಬ ಹಟ.
ತನ್ನ ಸಂಬಳದಲ್ಲೇ ತಂದೆಯ ಪೆನ್‌ಷನ್‌ನಲ್ಲೇ ಸಂಸಾರದ ದೋಣಿಯನ್ನು ತೂಗಿಸಬೇಕೆಂಬುವುದರಲ್ಲಿ ಅದು ಅತಿರೇಕಕ್ಕೆ ಹೋಗುತ್ತಿತ್ತು. ಎಷ್ಟು ಕಡಿಮೆ ವೆಚ್ಚ ಮಾಡಿದರೂ ಅದು ಸಾಲುವುದಿಲ್ಲ ಎಂಬ ಅರಿವಾಗತೊಡಗಿತು. ನಿರ್ವಾಹವಿಲ್ಲದೇ ಮಡದಿ ಅಕ್ಕಪಕ್ಕದಲ್ಲಿ ಮಾಡಿದ ಸಾಲದ ಅರಿವಾಯಿತು. ತನ್ನ ತಾಯಿ ಏಕಾಏಕಿ ಬಹಳ ಅಸ್ವಸ್ಥವಾದಾಗ ಆಸ್ಪತ್ರೆಗೆ ಕರೆದೊಯ್ಯಲು ಮಾಡಿದ ಸಾಲ.
ತಂದೆಯವರ ಕಾಲದಲ್ಲಿ ಸರಕಾರ ಸಂಸಾರ ನಿಯೋಜನೆಯ ಕಾರ್ಯಕ್ರಮ ಈಗಿನಷ್ಟು ಭರವಾಗಿ ಕೈಗೊಂಡಿರಲಿಲ್ಲ. ಇಬ್ಬರು ಮಕ್ಕಳ ನಂತರ ಅವರಿಗೆ ಮತ್ತೆ ಮಕ್ಕಳಾಗಿರಲಿಲ್ಲ. ಅವರ ಪಾಲಿಗದು ದೈವೀಚ್ಛೆ. ರಿಟೈರಾದ ಮೇಲೆ ಬಂದ ಹಣದಿಂದ ಹಿರಿಯಮಗಳ ಮದುವೆ ಮಾಡಿದ್ದರು. ಅದರಿಂದ ಮಿಕ್ಕ ಸ್ವಲ್ಪದು ಮಗನ ಓದಿಗೆ ವೆಚ್ಚವಾಗಿ ಹೋಗಿತು.
ಬಾಲ್ಯದ ದಿನಗಳು ನೆನಪಾದಾಗ ಅವನಲ್ಲಿ ತಂದೆತಾಯಿಯರ ಬಗೆ ಪ್ರೇಮ ಉಕ್ಕಿ ಬರುತ್ತದೆ. ಅಷ್ಟು ಪ್ರೇಮಾನುರಾಗಗಳಿಂದ, ಯಾವುದಕ್ಕೂ ಕಡಿಮೆಯಾಗದ ಹಾಗೆ ಬೆಳೆಸಿದ್ದರವನನ್ನು. ಅವನಿಗೆ ಸರಕಾರಿ ಕೆಲಸ ಕೊಡಿಸಲು ಅವರೇ ಸಾಕಷ್ಟು ಓಡಾಡಿದ್ದರು. ಕೊನೆಗಾಲದಲ್ಲಿ ಅಂಥಹ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಈ ಬದುಕು ಯಾಕೆ?
ಮಡದಿ ಮಾಡಿದ ಸಾಲವನ್ನು ತೀರಿಸಲು ಅವನು ಸಾಲ ಮಾಡಿದ. ಹಾಗೆಯೇ ಮಕ್ಕಳ ಓದಿನ ಅವಸ್ಥೆ ಗಮನಕ್ಕೆ ಬಂದು ಅವರಿಗೆ ಗೌರವಯುಕ್ತ ಬದುಕು ಕೊಡಲು ಇನ್ನೂ ಸಾಲ ಮಾಡಿದ. ಹಾಗೆ ಸಾಲ. ಪ್ರಾಮಾಣಿಕ ಸರಕಾರಿ ನೌಕರನಿಗೆ ಬಡ್ಡಿ ಇಲ್ಲದೇ ಎಲ್ಲೂ ಸಾಲ ಸಿಗುವುದಿಲ್ಲ. ಅವನ ಜತೆಗೆ ಕೆಲಸ ಮಾಡುವ ಒಬ್ಬರಿಬ್ಬರು ಆ ವ್ಯವಹಾರ ಮಾಡುತ್ತಿದ್ದರು. ಆದರೆ ಅವರು ಹೇಳುತ್ತಿದ್ದ ಮಾತೇ ಬೇರೆ. ತಮಗೆ ಗೊತ್ತಿರುವ ಸೇಠರಿಂದ ಅವರು ಹಣ ತಂದು ಕೂಡತ್ತಾರೆ ಬಡ್ಡಿ ತೆಗೆದುಕೊಳ್ಳುವವನು ಅವನೇ ಐದು ಪಸೆರ್ಂಟ್‌ಗಿಂತ ಕಡಿಮೆ ಇಲ್ಲ. ಹಣ ಕೊಡಿಸಿ ಸಹೋದ್ಯೋಗಿಗಳು ಮಾಡುತ್ತಿದ್ದುದು ಪರೋಪಕಾರದ ಕೆಲಸವಷ್ಟೆ. ಹಾಗೆ ತೆಗೆದುಕೊಂಡ ಸಾಲ ಈವರೆಗೆ ಹತ್ತು ಸಾವಿರವಾಗಿತ್ತು. ಅದರ ಬರೀ ಬಡ್ಡಿ ಐನೂರು. ಬರೀ ಬಡ್ಡಿಯನವನು ಎಷ್ಟು ಕಾಲದಿಂದ ಕೊಡುತ್ತಿದ್ದನೆಂಬುವುದು ಅವನಿಗೆ ನೆನಪಿಲ್ಲ. ಅಸಲು ಹಣಕ್ಕಾಗಿ ಪೀಡಿಸಲಾರಂಭಿಸಿದ್ದ ಸಹೋದ್ಯೋಗಿ. ಅದಕ್ಕಾಗಿ ಇನ್ನೆಲ್ಲಾದರೂ ಇನ್ನೂ ಹೆಚ್ಚಿನ ಬಡ್ಡಿಯ ಸಾಲ ಮಾಡಬೇಕು. ಇಲ್ಲದಿದ್ದರೆ ಆಫೀಸಿನಲ್ಲಿ ಮರ್ಯಾದೆ ಇರುವುದಿಲ್ಲ. ಸಧ್ಯದ ಯೋಚನೆ ಬೃಹದಾಕಾರ ತಾಳಿ ನಿಂತಾಗ ಇದಕ್ಕೆ ಕೊನೆ ಎಲ್ಲಿ ಎಂಬ ಅನಿಸಿಕೆ ಬರುವಹಾಗೇ ಇಲ್ಲ.
ಪ್ರಾಮಾಣಿಕತೆ ಇಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಅವನು ಎಷ್ಟೋ ಸಲ ಆಫೀಸಿನಲ್ಲಿ ಎಲ್ಲರೂ ಹೊರಟುಹೋದ ಮೇಲೂ ಕೆಲಸ ಮಾಡುತ್ತಾ ಕೂಡಬೇಕಾಗಿ ಬರುತ್ತಿತ್ತು. ಎಲ್ಲಾ ಅಧಿಕಾರಿಗಳೂ ಅವನ ಕೆಲಸವನ್ನು, ಕಾರ್ಯದಕ್ಷತೆಯನ್ನು ಮೆಚ್ಚುತ್ತಿದ್ದರೂ ಯಾರಿಗೂ ಅವನು ಬೇಡವಾಗಿದ್ದ. ಸಹೋದ್ಯೋಗಿಗಳಿಗೂ ಅಷ್ಟೆ. ಅದ್ದಕ್ಕೆ ಕಾರಣ ಅವನ ಪ್ರಾಮಾಣಿಕತೆ. ಅದರ ಕಾರಣ ಅವನ ಸಹೋದ್ಯೋಗಿಯರಿಗೂ ಕಿರಿಕಿರಿಯಾಗುತ್ತಿತ್ತು.
“ನೀನೂ ನಾಲ್ಕು ಕಾಸು ಸಂಪಾದಿಸಿ ಸುಖವಾಗಿರು ನಮ್ಮನ್ನು ಯಾಕೆ ಸಾಯಿಸುತ್ತಿ” ಎಂದವನನ್ನು ಕೆಲ ಆತ್ಮೀಯರು ನಯವಾಗಿ ಬೈದಿದ್ದರೂ ಕೂಡ. ಹಾಗೆ ಅನೈತಿಕ ಬದುಕು ಬಾಳುವುದು ತನ್ನಿಂದ ಸಾಧ್ಯವಿಲ್ಲವೆಂದು ಅವನು ತನಗೆ ತಾನೇ ಹೇಳಿಕೊಳ್ಳುತ್ತಿದ್ದ.
ಅವನ ಜತೆಗೆ ಕೆಲಸ ಮಾಡುತಿದ್ದ ಹಲವರ ಬಳಿ ಸ್ಕೂಟರ್‌ಗಳಿದ್ದವು. ಅವರಿಗಿನ್ನೂ ಐದು ವರ್ಷಸರ್ವೀಸ್ ಆಗಿಲ್ಲ. ಅವರುಗಳ ಮಾತಿನ ಧಾರಣೆಯನ್ನೂ ಒಂದು ತರಹದ ಅಸಡ್ಡೆ, ಅಧಿಕಾರಗಳಿದ್ದವು. ಅದಕ್ಕೆ ಕಾರಣ ಅವರಲ್ಲಿರುವ ಧನ ಬಲವೆಂಬುದು ಅವನಿಗೆ ಗೊತ್ತಿತ್ತು. ಆದರೆ ಆ ಸಂಪತ್ತು ಎಲ್ಲಿಂದ ಹೇಗೆ ಬಂತೆಂದು ಯಾರೂ ಕೇಳುವುದಿಲ್ಲ. ಅವರ ಬಳಿ ಹಣವಿದೆ ಅದು ಮುಖ್ಯ.
ಅವನ ಪ್ರಾಮಾಣಿಕತೆಯ ಕಾರಣ, ನೈತಿಕತೆಯ ಮಾತುಗಳ ಅಧಿಕಾರಿಗಳೊಡನೆ ಮಾತಿಗೆ ಮಾತು ಹತ್ತಿಕೊಳ್ಳುತ್ತಿತ್ತು. ಅವರು ಬಾಯಿಮಾತಿನಲ್ಲಿ ಅವರಿಗೆ ಕಾರಣ ಹಣ ಅಡ್ವಾನ್ಸ್ ಮಾಡಿ, ಇಂಥದೇ ಉಪಕರಣಗಳನ್ನು ತರಿಸಿ ಎಂದು ಆದೇಶಿಸಿದಾಗ ಅದೇ ಬರಹದಲ್ಲಿ ಇರಬೇಕು. ಅದಕ್ಕೆ ಅವರು ಅನುಮತಿಸಿದ ಹಾಗೆ ಸಹಿ ಹಾಕಬೇಕು ಎಂದವನ ವಾದ. ಅವನು ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆಫೀಸಿನ ಲೆಕ್ಕಪತ್ರಗಳು ಆಗಬೇಕಾದದು ಹಾಗೆಯೇ. ಒಂದಕ್ಕೆ ವೆಚ್ಚ ಮಾಡಿದ ಹಣ ಇನ್ನೊಂದಕ್ಕೆ ಖರ್ಚು ಮಾಡಿದ ಹಾಗೆ ಜಾಲಿಬಿಲ್ಲುಗಳ ಸಹಿತ ನಮೂದಿಸಲಾಗುತ್ತದೆ, ಎಷ್ಟೋ ಸಲ ಹಣ ಯಾರ ಯಾರದೋ ಕಿಸೆಯಲ್ಲಿ ಹೋಗಿ ಲೆಕ್ಕಪತ್ರಗಳನ್ನು ಸರಿದೂಗಿಸಲು ನಕಲಿ ಬಿಲ್ಲುಗಳು ತರಲಾಗುತ್ತದೆ. ಅಂತಹದಕ್ಕೆಲ್ಲಾ ಅವನು ಒಪ್ಪುವವನಲ್ಲ. ಏನೇ ಮಾಡಿಕೊಳ್ಳಲಿ ಅದೆಲ್ಲಾ ಬರಹದಲ್ಲಿರಬೇಕು. ಅದಕ್ಕೆ ಒಪ್ಪಿದ ಹಾಗೆ ಅಧಿಕಾರಿಯ ಸಹಿ ಇರಬೇಕೆಂಬುವುದು ಅವನ ವಾದ. ಅವನ ಇಂತಹ ಕಿರಿಕಿರಿ ಇಂದ ಬಿಡುಗಡೆ ಹೊಂದಲು ಬೇರೆ ಕೆಲಸಗಳ ಜವಾಬ್ದಾರಿ ಅವರಿಗೊಪ್ಪಿಸಿ ಆದಷ್ಟು ಬೇಗ ಅವನು ತಮ್ಮ ಖಾತೆ ಇಂದ ವರ್ಗವಾಗುವಂತೆ ಮಾಡುತಿದ್ದರು ಅಧಿಕಾರಿಗಳು.
ಅವನ ಇಂತಹ ಅವಸ್ಥೆ ಕಂಡು ಮರಗುವ ಹಿತೈಶಿಯರು ಕೆಲವರಿದ್ದರು. ಆದರೆ ಬಹುಪಾಲು ಸಹೋದ್ಯೋಗಿಗಳ ಪಾಲಿಗೆ ಅವನೊಬ್ಬ ತರಲೆ ಮನುಷ್ಯ, ಹುಚ್ಚ.
ಈಸಲ ವರ್ಗಾವಣೆಯ ಆರ್ಡರ್ ತೆಗೆದುಕೊಂಡು ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ರಿಟೈರ್‌ಮೆಂಟ್‌ಗೆ ಸಮೀಪಿಸುತ್ತಿದ್ದ ಒಬ್ಬ ಹಿರಿಯ ಕಾರಕೂನರು ಅವನ ಭುಜದ ಮೇಲೆ ಕೈಹಾಕಿ ಆತ್ಮೀಯತೆಯಿಂದ ಮಾತಾಡಿದರು. ಅವರೂ ಬಹು ಒಳ್ಳೆಯ ವ್ಯಕ್ತಿ ಲಂಚ ಗಿಂಚದ ಹೆಸರಿಗೆ ಹೋಗುವವರಲ್ಲ ಎಂಬುವುದು ಎಲ್ಲರಿಗೂ ಗೊತ್ತಿತ್ತು.
“ನೋಡು ಎಷ್ಟು ಟ್ರಾನ್ಸ್‌ಫರ್‌ಗಳು! ಇನ್ನೂ ಸರಿಯಾಗಿ ಹತ್ತು ವರ್ಷ ಸರ್ವೀಸ್ ಆಗಿಲ್ಲ. ಹತ್ತು ಕಡೆ ಓಡಾಡಿಬಿಟ್ಟಿದ್ದಿ! ಒಬ್ಬ, ಕೇವಲ ಒಬ್ಬ ಅಧಿಕಾರಿಯೊಡನೆಯೂ ನಿನಗೆ ಕಲೆತು ಮಲೆತು ಇರಲು ಸಾಧ್ಯವಿಲ್ಲವೇ?” ಅವರ ದನಿಯಲ್ಲಿ ಅವನ ಬಗ್ಗೆ ಎಲ್ಲಿಲ್ಲದ ಅನುಕಂಪವಿತ್ತು. ಅವನ ಮುಖದಲ್ಲಿ ಅಷ್ಟು ವರ್ಷಗಳಿಂದ ತುಂಬಿದ ನೋವೆಲ್ಲಾ ಅಚ್ಚೊತ್ತಿದ್ದಂತೆ ಪ್ರತಿಬಿಂಬಿತವಾಯಿತು. ದೈನ್ಯ ದನಿಯಲ್ಲಿ ಹೇಳಿದ.
“ಇದರಲ್ಲಿ ನಂದೇನು ತಪ್ಪು ಸರ್! ನಾನೆಲ್ಲರೊಡನೆಯೂ ಹೊಂದಿಕೊಂಡು ಹೋಗುತ್ತೇನೋ ಯಾಕೋ ನಾನೆಂದರೇ ಯಾರಿಗೂ ಆಗುವುದಿಲ್ಲ”
“ಆ ಯಾಕೋ ನಿನಗೆ ಗೊತ್ತು! ಗೊತ್ತಿಲ್ಲವೇ?” ಬಹು ಆತ್ಮೀಯದನಿಯಲ್ಲಿ ಪ್ರಶ್ನಿಸಿದರವರು.
“ಗೊತ್ತು ಸರ್! ಬಾಯಿಮಾತಿನಲ್ಲಿ ಆಡ್ವಾನ್ಸ್ ಕೊಡು ಎನ್ನುತ್ತಾರೆ. ಜಾಲಿ ಬಿಲ್ಲುಗಳನ್ನು ತಂದು ಕ್ಯಾಶ್‌ಬುಕ್ ತುಂಬು ಎನ್ನುತ್ತಾರೆ. ಅದು ನನ್ನಿಂದಾಗುವುದಿಲ್ಲ. ಅದಕ್ಕೆ ಈ ಟ್ರಾನ್ಸ್‌ಫರ್‌ಗಳು” ಅವನ ಉತ್ತರದಲ್ಲಿ ಸಿಟ್ಟು ನೋವುಗಳು ಮಿಳಿತವಾಗಿದ್ದವು. ಅವನ ಭುಜವನ್ನು ಎರಡೆರಡು ಸಲ ಆತ್ಮೀಯವಾಗಿ ತಟ್ಟಿ ಮಾತಾಡಿದರವರು.
“ನಾನು ಇಷ್ಟು ವರ್ಷ ಹೇಗೆ ಕೆಲಸ ಮಾಡಿದೆ?”
ಅದಕ್ಕವನು ಏನೂ ಉತ್ತರಿಸಲಿಲ್ಲ. ತಲೆ ಕೆಳೆಗ ಹಾಕಿ ಅವರೊಡನೆ ನಡೆಯುತ್ತಿದ್ದ. ಮತ್ತೆ ಅವರೇ ಮಾತಾಡಿದರು.
“ನೋಡು ಅವರುಗಳು ಹೇಳಿದ ಹಾಗೆ ಕೇಳಿದರೆ ನಿನ್ನ ಗಂಟೇನೂ ಹೋಗುತ್ತದೆ! ನಿನ್ನ ನೀತಿ ನಿಜಾಯಿತಿ, ಪ್ರಾಮಾಣಿಕತೆ ಇಂದ ಈ ದೇಶವನ್ನು ಉದ್ಧಾರ ಮಾಡುವುದು ಸಾಧ್ಯವಿಲ್ಲ. ನೀನು ಏನೂ ನೋಡಿಲ್ಲ. ನನ್ನ ಕಂಣೆದುರೇ ಎಂತೆಂತ ವಿಷಯಗಳು ನಡೆದು ಹೋಗಿವೆ. ಎಲ್ಲವನ್ನು ನೋಡಿ ನೋಡದವನಂತೆ ಇದ್ದು ಬಿಡುತಿದ್ದೆ ಅಷ್ಟೆ, ಅಧಿಕಾರಿಯರು ಹೇಳಿದ್ದಕ್ಕೆಲ್ಲಾ ನಮ್ರವಾಗಿ ತಲೆ ಹಾಕುತ್ತಿದ್ದೆ. ಅವರು ಹೇಳಿದಂತೆ ಲೆಕ್ಕಪತ್ರಗಳನ್ನು ಬರೆದು ಅವರ ಸಹಿ ತೆಗೆದುಕೊಳ್ಳುತ್ತೇನೆ. ಇದರಿಂದ ಅವರಿಗೂ ಖುಶಿ ನನಗೂ ಒಳ್ಳೆಯವನೆಂಬ ಹೆಸರು…”
“ಹಾಗಾದರೆ ನೀವೂ ಲಂಚ ತಗೆದುಕೊಂಡು ಕೆಲಸ ಮಾಡುತ್ತಿದ್ದೀರೆಂದು ಜನರಾಡಿ ಕೊಳ್ಳುವದಿಲ್ಲವೇ?” ಅವರ ಮಾತನ್ನು ನಡುವೆ ತಡೆದು ಅವರ್‍ಯಾವ ಘೋರಾಪರಾಧ ಮಾಡುತ್ತಿರುವಂತಹ ದನಿಯಲ್ಲಿ ಕೇಳಿದ.
“ಎಲುಬಿಲ್ಲದ ನಾಲುಗೆಯವು ಏನು ಬೇಕಾದರೂ ಮಾತಾಡಿಕೊಳ್ಳಲಿ ಅದರಿಂದ ನನಗೇನೂ ಆಗುವುದಿಲ್ಲ. ನಾನು ಯಾವ ತರಹದ ಅನೈತಿಕ ಕೆಲಸವನ್ನು ಮಾಡುತಿಲ್ಲವೆಂಬುವುದು ನನಗೆ ಗೊತ್ತು… ಅಷ್ಟು ಸಾಕು… ನೀನು ನನ್ನ ಹಾಗೆ ಕೆಲಸ ಮಾಡಿದರೆ ಈ ವರ್‍ಗಾವಣೆಯ ಗೊಳಿರುವುದಿಲ್ಲ!”
ಅವನು ಅವರ ಮಾತುಗಳನ್ನೇ ಮೆಲಕು ಹಾಕುತ್ತಿರುವಂತೆ ಹೆಜ್ಜೆಗಳನ್ನು ಹಾಕುತ್ತಿದ್ದ.
ಕೆಲ ಹೆಜ್ಜೆಗಳ ಮೌನದ ನಂತರ ಗಂಭೀರ ದನಿಯಲ್ಲಿ ಬಂತವರ ಮಾತು.
“ನನ್ನ ಮಾತು ಕೇಳದಿದ್ದರೆ ಬರೀ ವರ್ಗಾವಣೆಯ ಹಿಂಸೆಯೇ ಅಲ್ಲ, ಜನರ ದೃಷ್ಟಿಯಲ್ಲಿ ನೀನೊಂದು ಹುಡುಗಾಟಿಕೆಯ ವಸ್ತುವಾಗಿ ಬಿಡುತ್ತಿ. ಯೋಚಿಸು ನಿನ್ನ ನೀನು ಬದಲಿಸಿಕೊಳ್ಳಲು ಯತ್ನಿಸು”
ಅಲ್ಲಿಂದ ಅವರ ದಾರಿಗಳು ಬೇರೆಯಾದವು. ಅವರ ಮಾತುಗಳನ್ನೇ ಮಲುಕು ಹಾಕುತ್ತಾ ಮನೆ ಸೇರಿದ, ಅವನ ಇಬ್ಬರು ಮಕ್ಕಳು ಯಾವುದೋ ವಿಷಯಕ್ಕಾಗಿ ಜಗಳವಾಡುತ್ತಿದ್ದರು. ತಂದೆ ಬಂದು ಮೂಲೆಯಲ್ಲಿ ಕೆಮ್ಮುತ್ತಾ ಕುಳಿತಿದ್ದರೆ ತಾಯಿ ಮಕ್ಕಳನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದರು. ಅವನು ಬಟ್ಟೆ ಬದಲಿಸಿ ಕೈಕಾಲು ತೊಳೆಯಬಂದು ಕೂಡುತ್ತಿದ್ದಂತೆ ವಿಧೇಯವಾಗಿ ಅವನೆದುರು ಕಾಫಿ ಲೋಟ ಹಿಡಿದು ಬಂದಳು ಮಡದಿ. ಅದನ್ನು ತೆಗೆದುಕೊಳ್ಳುತ್ತಾ ಅವಳನ್ನು ಮೊದಲ ಸಲ ನೋಡುತ್ತಿರುವಂತೆ ನೋಡಿದ. ಅವಳು ಬಹಳ ಕೃಶವಾಗಿರುವುದು ಮೊದಲ ಸಲ ಅವನಲ್ಲಿ ವಿಚಿತ್ರ ಸಂಕಟ ಹುಟ್ಟಿಸಿತು. ಬತ್ತಿಯ ಸ್ಟೋವಿನಂತೆ ಅವಳೂ ಕರಗುತ್ತಿದ್ದಾಳೆ ಎಂದುಕೊಂಡ. ಕರುಳನ್ನು ಬಲವಾಗಿ ಹಿಸುಕಿದಂತಹ ಹಿಂಸೆ.
ಕಡಿಮೆ ಕಾಫಿ ಪುಡಿ, ಕಡಿಮೆ ಹಾಲಿರುವ ಬಿಸಿನೀರಿನಂತಹ ಕಾಫಿಯನ್ನು ಕುಡಿಯತೊಡಗಿದ. ಅದವನಿಗೆ ಅಭ್ಯಾಸವಾಗಿಬಿಟ್ಟಿತು. ಮಕ್ಕಳು ತಮ್ಮ ಜಗಳ ಅಜ್ಜಿ ಇಂದ ಪರಿಹಾರವಾಗುವುದಿಲ್ಲವೆಂದು ತಮ್ಮ ತಮ್ಮ ದೂರುಗಳೊಡನೆ ತಂದೆಯ ಬಳಿ ಬಂದರು. ಅವರನ್ನು ಸಿಟ್ಟಿನಿಂದ ಗದರಿದ. ಅವರು ಏನೂ ಅರ್ಥವಾಗದಂತೆ ತಂದೆಯ ಕಡೆ ನೋಡಿದಾಗ ಇಬ್ಬರನ್ನೂ ಅಲ್ಲಿಂದ ಕರೆದುಕೊಂಡು ಹೊರಟುಹೋಗಿದ್ದಳವನ ಮಡದಿ.
ನ್ಯಾಯ, ನೀತಿ, ನಿಜಾಯಿತಿ, ಪ್ರಾಮಾಣಿಕತೆ, ಧರ್ಮ, ನೈತಿಕತೆ ಎಂಬಂತಹ ಶಬ್ದಗಳಲ್ಲಿ ತನ್ನನ್ನು ತಾನೇ ಬಿಗಿದುಕೊಂಡು ಎಲ್ಲರ ನೋಟದಲ್ಲಿ ಒಂದು ತಮಾಷೆಯ ವಸ್ತುವಾಗುತಿದ್ದೇನೆ. ನಾಲ್ಕು ಜನ ನನ್ನನ್ನೇ ಅಲ್ಲ ನನ್ನ ಇಡೀ ಸಂಸಾರವನ್ನು ನೋಡಿ ನಗುವಂತಾಗಿದೆ. ಈ ಅಬನಾರ್ಮಲ್ ಎಂಬ ಹಣೆ ಪಟ್ಟಿ ಇಂದ ಬಿಡುಗಡೆ ಹೊಂದಬೇಕು. ಈತರಹದ ವರ್ಗಾವಣೆಯ ಗೋಳುಗಳಿಂದ ಮುಕ್ತನಾಗಬೇಕು. ಇಲ್ಲದಿದ್ದರೆ ತನಗೆ ಹುಚ್ಚು ಹಿಡಿದರೂ ಹಿಡಿಯಬಹುದು ಎನಿಸಿತು.
ಹಾಗೆ ಅವನೊಬ್ಬನೆ ಎಷ್ಟು ಹೊತ್ತು ಕುಳಿತಿದ್ದನೆಂಬ ಅರಿವು ಅವನಿಗಿಲ್ಲ. ಮಡದಿ ಊಟಕ್ಕೆ ಎಬ್ಬಿಸಲು ಬಂದಾಗ ಬೆಚ್ಚಿಬಿದ್ದು ಎದ್ದು ಅವಳನ್ನು ಹಿಂಬಾಲಿಸಿದ.
ಅಂದು ರಾತ್ರಿ ಗಂಡನ ವರ್ತನೆ ವಿಚಿತ್ರವಾಗಿ ಕಂಡಿತು ಮಡದಿಗೆ. ಆದರೂ ಅವಳು ಆ ಬಗ್ಗೆ ಏನೂ ಮಾತಾಡಲಿಲ್ಲ. ಬಡತನ ಸಿಟ್ಟನ್ನು ಬೇಗ ತರಿಸುತ್ತದೆ ಎಂಬುವದವಳಿಗೆ ಗೊತ್ತಿತ್ತು.
ಮರುದಿನ ಅವನು ಹೊಸ ಜಾಗಕ್ಕೆ ಹೋಗಿ ಸೇರಿದಾಗ ಅಲ್ಲಿದ್ದ ಸಹೋದ್ಯೋಗಿಗಳು ಅವನನ್ನು ವಿಚಿತ್ರ ಪ್ರಾಣಿಯೊಂದನ್ನು ನೋಡುವಂತೆ ನೋಡಿದರು. ಅದನ್ನು ಗಮನಿಸಿದವನಂತೆ ಎಲ್ಲರೊಡನೆಯೂ ನಗುನಗುತ್ತಾ ಮಾತಾಡಿದ. ಅಲ್ಲಿನ ಅಧಿಕಾರಿಯೂ ಅವನಂತೆ ಹೊಸಬರು. ಅದರಿಂದ ಯಾವ ಚುಚ್ಚು ಮಾತುಗಳನ್ನೂ ಕೇಳಿಸಿಕೊಳ್ಳುವ ಪ್ರಸಂಗ ಒದಗಿಬರಲಿಲ್ಲ. ಆ ದಿನದ ಕೆಲಸ ಯಾವ ಅಡ್ಡಿ ಅಡಚಣೆಯೂ ಇಲ್ಲದೇ ಮುಗಿಯಿತು. ಕಾರಣವಿಷ್ಟೆ ಅವನೆದುರು ಬಂದ ಫೈಲುಗಳಿಗೆಲ್ಲಾ ಹೆಚ್ಚು ತಲೆ ಕೆಡಿಸಿಕೊಳ್ಳದೇ ಸಹಿ ಹಾಕಿದ್ದ.
ಮನೆಗೆ ಬಂದಾಗ ಪತಿಯ ಮುಖದಲ್ಲಿ ದಣಿವು ಕಾಣದಿದ್ದದು ಅವಳಿಗೆ ಆಶ್ಚರ್ಯ ಹುಟ್ಟಿಸಿತು. ತಿಳಿಯಾದ ಕಾಫಿ ಕುಡಿಯುತ್ತಾ ಅವಳೊಡನೆ ಅಕ್ಕರೆಯಿಂದ ಮಾತಾಡಿದ. ಮಕ್ಕಳೊಡನೆ ತಾನೂ ಮಗುವಾಗಿ ಆಟವಾಡಿದ. ಬಹು ಕಳಕಳಿಯಿಂದ ತಂದೆ ತಾಯಿಯರ ಯೋಗಕ್ಷೇಮ ವಿಚಾರಿಸಿದ.
ಒಂದು ರಾತ್ರಿಯಲ್ಲಾದ ಅವನ ಈ ಬದಲಾವಣೆಗೆ ಕಾರಣ ಅವನ ದೃಢನಿರ್ಧಾರ. ಲೋಕದ, ಸಮಾಜದ ಯಾವ ಆಗುಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದೆಂಬ ನಿರ್ಧಾರ. ನಾಲ್ವರಲ್ಲಿ ತಾನೂ ಒಬ್ಬನಾಗಬೇಕು ಎಂಬ ನಿರ್ಧಾರ, ಅಂತಹ ನಿರ್ಣಯ ತೆಗೆದುಕೊಳ್ಳಲು ಅವನಿಗೆ ಬಹಳ ಹಿಂಸೆಯಾಗಿತ್ತು. ಏನೇ ಆಗಲಿ ತನ್ನ ನಿರ್ಧಾರವನ್ನು ಪಾಲಿಸುತ್ತೇನೆ ಎಂದು ತನಗೆ ತಾನೇ ವಚನ ಕೊಟ್ಟುಕೊಂಡಿದ್ದ. ಅದು ಬೇರೆ ಯಾರಿಗೂ ತಿಳಿಯುವ ಹಾಗಿರಲಿಲ್ಲ.
ಹಾಗೆ ಎರಡು ದಿನ ಕಳೆಯುವುದರಲ್ಲಿ ಅವನು ಮನೆಯಲ್ಲಿ ಇಲ್ಲದಾಗ ಯಾರೋ ಒಂದು ಕೆ.ಜಿ. ಮಿಠಾಯಿ ಕೊಟ್ಟು ಹೋಗಿದ್ದರು. ಮೊದಲಿನ ದಿನಗಳಂತೆ ಅದಕ್ಕವನು ಸಿಟ್ಟು ಆವೇಶಗಳನ್ನು ತೋರಲಿಲ್ಲ. ಮನೆ ಮಂದಿಯೊಡನೆ ತಾನೂ ಅದರ ಸವಿಯನ್ನು ಸವಿದ. ಈ ಎರಡು ದಿನಗಳಲ್ಲೇ ಬದಲಾದ ವರ್ತನೆಗೆ ಅಭ್ಯಸಿತಳಾಗಿದ್ದಳವನ ಮಡದಿ.
ಹಾಗೆ ಆರಂಭವಾದ ಅವನ ಜೀವನದ ಇನ್ನೊಂದು ಮಗಲು ನೋಡು ನೋಡುತ್ತಿದ್ದಂತೆ ಊಹಿಸಲಸಾಧ್ಯವಾಗುವ ಪರಿಣಾಮಗಳನ್ನು ತೋರತೊಡಗಿತು. ಕೆಟ್ಟಚಟಗಳು ಬಹುಬೇಗ ಮನುಷ್ಯನನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಂಡು ಬಿಡುತ್ತವೆ. ಅವನೇ ಅದರ ಕಡೆಜಾರಿದಾಗ ಅದರಿಂದ ಹೊರಬರಲು ಸಾಧ್ಯವಾಗದಂತಹ ಸುಳಿ ನಿರ್ಮಾಣವಾಗಿಬಿಡುತ್ತದೆ. ಅವನಿಗೆ ಆದದ್ದೂ ಅದೇ.
ಕೆಲಸದಲ್ಲಿ ಬಹು ಜಾಣನಾದ, ದಕ್ಷನಾದ ಅವನು ಬಹುಬೇಗ ತನ್ನ ಅಧಿಕಾರಿಯವರ ನಂಬಿಕೆಗೆ ಪಾತ್ರನಾದ. ಸಮಯಕ್ಕಿಂತ ಮೊದಲು ಆಫೀಸಿಗೆ ಬರುವುದು, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದನಂತರವೂ ಕೆಲಸ ಮಾಡುತ್ತಿರುವುದು ಕಂಡ ಅಧಿಕಾರಿಯರಿಗೆ ಅವನ ಬಗ್ಗೆ ಎಲ್ಲಿಲ್ಲದ ಅಭಿಮಾನ. ಅವನಿಲ್ಲದಿದ್ದರೆ ಆ ಆಫೀಸು ನಡೆಯುವುದೇ ಇಲ್ಲವೇನೋ ಎಂಬ ಮಟ್ಟಿಗೆ ಅವನು ತನ್ನ ವರ್ಚಸನ್ನು ಬೆಳೆಸಿಕೊಂಡ.
ಕೈಕೆಳಗಿನವರಿಗೂ ಅವನ ಬಗ್ಗೆ ಅದರ, ಗೌರವಗಳು. ಮೊದಲಿನಂತಹ ತಾತ್ಸಾರ ಭಾವವನ್ನು ತೋರುವ ಧೈರ್ಯವನ್ನೂ ಯಾರೂ ಮಾಡುತ್ತಿರಲಿಲ್ಲ. ತಲೆ ಎತ್ತಿದರೆ ಸಾಕು ಅಟೆಂಡರ್ ಅವನ ಬಳಿ ಓಡಿಬರುತ್ತಿದ್ದ. ಅಧಿಕಾರಿಯರು ಅವನು ಹೇಳಿದಂತೆ ಕೇಳುತ್ತಾರೆಂಬುವುದು ಎಲ್ಲರಿಗೂ ಗೊತ್ತಾಗಿತು.
ಫೈಲುಗಳಲ್ಲಿ ತನಗೆ ಬೇಕಾದವರಿಗೆ ಸಹಾಯವಾಗುವಂತೆ ಹೇಗೆ ಬರೆಯ ಬೇಕೆಂಬುವುದು ಅವನಿಗೆಯಾರೂ ಹೇಳಿಕೊಡಬೇಕಾಗಿರಲಿಲ್ಲ. ಅದರಿಂದ ಅಧಿಕಾರಿಯರು ಕೂಡ ತಮಗೆ ಆಗಬೇಕಾದ್ದುದನ್ನು ಅವನಿಗೆ ಸೂಕ್ಷ್ಮವಾಗಿ ಹೇಳುತ್ತಿದ್ದರು. ಅಂತಹ ಅವರ ಅನೈತಿಕ ಬೇಡಿಕೆಗಳನ್ನು ಕೂಡ ಬಹು ಸಮರ್ಥವಾಗಿ ಫೈಲ್‌ನಲ್ಲಿ ನಮೂದಿಸುತ್ತಿದ್ದ. ಅವನು ಬರೆದದ್ದು ತಪ್ಪೆಂದು ಎಂತಹ ಪ್ರವೀಣನೇ ಆಗಲಿ ಗುರುತಿಸುವುದು ಕಷ್ಟ. ಹಾಗಿರುತಿತ್ತು. ಅವನ ಪದಗಳ ಜೋಡಣೆ, ವಾಕ್ಯಗಳ ರಚನೆ.
ಒಂದು ಕೆ.ಜಿ. ಮಿಠಾಯಿಯಿಂದ ಆರಂಭವಾದ ವ್ಯವಹಾರ ಪಾರ್ಟಿಗಳಲ್ಲಿ ಮಾರ್ಪಟ್ಟಿತು. ನಂತರ ನೋಟುಗಳು ತುಂಬಿದ ಲಕೋಟೆಗಳು ಮನೆಗೆ ಬರತೊಡಗಿದವು. ಇಷ್ಟಾದರೂ ಅವನು ಬಹು ಪ್ರಾಮಾಣಿಕ ನಿಷ್ಠಾವಂತ ಕೆಲಸಗಾರ ಎಂಬ ಬಿರುದಿಗೆ ತೃಣಮಾತ್ರವೂ ಧಕ್ಕೆ ಬರಲಿಲ್ಲ. ಅವನಿಂದ ಅವನ ಕೆಲಸದಿಂದ, ಆಫೀಸಿನಲ್ಲಿ ಕೆಳಗಿನಿಂದ ಮೇಲಿನವರೆಗೂ ಎಲ್ಲರಿಂದ ಹೊಗಳಿಕೆಯೇ.
ಮನೆಯಲ್ಲಿನ ವಾತಾವರಣ ಪೂರ್ತಿ ಬದಲಾಗಿ ಬಿಟ್ಟಿತ್ತು. ಮೊದಲಿನದನ್ನು ಬಿಟ್ಟು ಈಗ ಬೇರೆ ಬಡಾವಣೆಯಲ್ಲಿ ದೊಡ್ಡ ಮನೆಯನ್ನು ಬಾಡಿಗೆಗೆ ಪಡೆದಿದ್ದ. ಸಾಲದ ಗೋಜೇ ಇಲ್ಲ. ಅವನ ಮಡದಿ ಮೂರು ನಾಲ್ಕು ಕಡೆ ಚೀಟಿಗಳನ್ನು ಹಾಕಲು ಆರಂಭಿಸಿದ್ದಳು. ಅವೂ ೫೦ ಸಾವಿರ, ಲಕ್ಷದ ಚೀಟಿಗಳು. ಎಲ್ಲರಿಗೂ ಏನು ಬೇಕಾದರದು ಸಿಗುವಂತಾಗಿತ್ತು. ಮೊದಲಿನ ಹಳೆಯ ಬೇರೆ ಟಿ.ವಿ.ಯ ಸ್ಥಾನವನ್ನು ದೊಡ್ಡ ಕಲರ್ ಟಿ.ವಿ. ಅಲಂಕರಿಸಿತು. ಅದೂ ಅಲ್ಲದೇ ಮನೆಗೆ ಬೇಕಾದ, ಬೇಡವಾದ ಎಲ್ಲ ವಸ್ತುಗಳನ್ನೂ ಕೊಂಡಿದ್ದ. ಒಳ್ಳೆಯ ಬಡಾವಣೆಯಲ್ಲಿ ಸೈಟೊಂದನ್ನು ಕೊಂಡು ಮನೆ ಕಟ್ಟಿಸುವ ಯೋಜನೆ ಹಾಕುತಿದ್ದ.
ಇಷ್ಟೆಲ್ಲಾ ಆದರೂ ಅವನ ಮಡದಿ ಮತ್ತು ತಾಯಿ ತಂದೆಯರಿಗೆ ಏನೋ ಹೇಳಿಕೊಳ್ಳಲಾರದಂತಹ ಅತೃಪ್ತಿ. ಮಕ್ಕಳಿಗೂ ಯಾವುದೋ ಮೂಲೆಯಲ್ಲಿ ಒಂದು ತರಹದ ಅಸಮಾಧಾನ, ಅದು ಅವನ ಗಮನಕ್ಕೂ ಬಂದಿರಲಿಲ್ಲ. ಮೊದಲಿನಂತೆ ಅವನಿಗೆ ತನ್ನ ಇಡೀ ಸಂಸಾರದವರೊಡನ ಕುಳಿತು ಆತ್ಮೀಯವಾಗಿ ಸುಖದುಃಖಗಳನ್ನು ಹಂಚಿಕೊಳ್ಳಲು ಸಮಯವೇ ಇರುತ್ತಿರಲಿಲ್ಲ. ಮನೆಯವರಿಗೆಲ್ಲಾ ಅವನಿಗೆ ಯಾವಾಗಲೂ ಯಾವುದೋ ಯೋಚನೆ ಕಾಡುತ್ತಿದೆಯೇನೋ ಎನಿಸುತ್ತಿತ್ತು. ಅವನಿಗೆ ಈಗ ಅಂಟಿಕೊಂಡದ್ದು ಒಂದೇ ಯೋಚನೆ ಹಣವನ್ನು ಹೇಗೆ ಬೆಳೆಸಬೇಕೆಂಬ ಯೋಚನೆ. ಅದಕ್ಕಾಗ ಅವನು ಮನೆಗೆ ಬಂದಾಗ ಬೇರೆಯ ಮನುಷ್ಯನೇ ಆಗಿಬಿಡುತ್ತಿದ್ದ. ಹಣದ ಪಿಪಾಸೆ ಮಾಡುವ ಕೆಲಸವಿದೆಂಬ ಅರಿವು ಅವನಿಗೂ ಇರಲಿಲ್ಲ.
ಮೊದಲು ಹತ್ತು ಇಪ್ಪತ್ತು ರೂಪಾಯಿಗಳಿಗಾಗಿ ಹಲ್ಲುಗಿಂಚುತಿದ್ದ ಅವನೀಗ ಲಕ್ಷಾಂತರಗಳ ಮಾತುಗಳನ್ನು ಬಹು ಸಲೀಸಾಗಿ ಆಡುತಿದ್ದ. ಆಫೀಸಿನಲ್ಲಿ ತಿಂಗಳ ಕೊನೆಯಲ್ಲಿ ಬಹುಜನ ಅವನಲ್ಲಿ ಕೈಗಡ ಪಡೆಯುತ್ತಿದ್ದರು. ಯಾರು ಮುತುವರ್ಜಿ ಇಂದ ಸಾಲ ತೀರಿಸುವರೋ ಅಂತಹವರಿಗೆ ಅವನು ಹಣ ಕೊಡುತಿದ್ದದ್ದು.
ಅವನ ಹಿಂದೆ ಜನರು ಅವನ ಬಗ್ಗೆ ಏನು ಮಾತಾಡಿಕೊಳ್ಳುತ್ತಿದ್ದಾರೆ ಎಂಬ ಅರಿವು ಅವನಿಗಿರಲಿಲ್ಲ. ಹಳೆಯ ಕೆಲ ಆಪ್ತರು, ಹಿತೈಷಿಯರೂ ಅವನಿಂದ ದೂರ ಸರಿಯುತ್ತಿದ್ದಾರೆಂಬುವುದೂ ಅವನ ಗಮನಕ್ಕೆ ಬರಲಿಲ್ಲ.
ದಿನಗಳೂ ಉರುಳುತ್ತಾ ಹೋದ ಹಾಗೆ ಮಕ್ಕಳು ದೊಡ್ಡವರಾಗ ತೊಡಗಿದರು. ವೃದ್ಧ ತಂದೆ ತಾಯಿಯರು ಇನ್ನೂ ವೃದ್ಧರಾದರು. ಮಡದಿಯ ಮುಖದಲ್ಲಿ ಸುಕ್ಕುಗಳು ಎದ್ದು ಕಾಣುತ್ತಿದ್ದವು. ಅಷ್ಟರಹೊತ್ತಿಗೆ ಅವನು ಮಗನ ಹೆಸರಿನಲ್ಲಿ ಒಂದು ಉದ್ಯಮವನ್ನೂ ಸ್ಥಾಪಿಸಿದ್ದ. ಅದೂ ಕೂಡ ಅವನಿಗೆ ಹೇರಳವಾಗಿ ಸಂಪಾದಿಸಿಕೊಡುತ್ತಿತ್ತು. ಈಗವನು ಧನವಂತರ ಶ್ರೇಣಿಗೆ ತಲುಪಿಬಿಟ್ಟಿದ್ದ. ತಾ ಕೊಂಡ ಸೈಟಿನಲ್ಲಿ ಭವ್ಯ ಬಂಗಲೆಯೂ ಕಟ್ಟಿಸಿಯಾಗಿತ್ತು. ಯಾತರ ಕಡಿಮೆ ಇಲ್ಲದಿದ್ದರೂ ಇನ್ನೂ ಇನ್ನೂ ಸಂಪಾದಿಸಬೇಕೆಂಬ ಆಸೆ ಅವನನ್ನು ಹಿಂಬಾಲಿಸುವುದು ಬಿಟ್ಟಿರಲಿಲ್ಲ.
ಒಂದು ಸಂಜೆ ಆಫೀಸಿನಿಂದ ಬರುತ್ತಿದ್ದಾಗ ಅವನು ಕನಸು ಮನಸ್ಸಿನಲ್ಲಿಯೂ ಎಣಿಸದಂತಹ ಘಟನೆ ನಡೆಯಿತು. ಸಮಯವಾದುದರಿಂದ ಬೇರೆ ಕೆಲಸಗಾರರು ಆಗಲೆ ತಮ್ಮ ತಮ್ಮ ಮನೆಗಳಿಗೆ ಹೋರಟುಹೋಗಿದ್ದರು. ಸದ್ದುಗದ್ದಲವಿಲ್ಲದ ನಿರ್ಜನ ಅಂಗಣದಲ್ಲಿ ಅವನು ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಾಗ ದನಿಯೊಂದು ಕೇಳಿಸಿತು.
“ಹೇಗಾದರೂ ಹಣ ಬೇಕು ಕಣೋ ಇಲ್ಲದಿದ್ದರೆ ಅಮ್ಮ ಸತ್ತು ಹೋಗುತ್ತಾಳೆ”
ಮೌನದ ಕಾರಣ ಅದವನಿಗೆ ಸ್ಪಷ್ಟವಾಗಿ ಕೇಳಿಸಿತು. ಅತ್ತಕಡೆ ನೋಟ ಹರಿಸಿದ. ಕಟ್ಟಡದೊಂದು ಮೂಲೆಗೆ ನಾಲ್ವರು ಕೆಳದರ್ಜೆಯ ಕೆಲಸಗಾರರು ಮಾತಾಡುತ್ತಾ ನಿಂತಿದ್ದರು.
“ಅಮ್ಮ ಸತ್ತು ಹೋಗುತ್ತಾಳೆ” ಎಂಬ ಮಾತಿನ ಕಾರಣ ಅವನು ಅವರ ಕಡೆ ಹೆಜ್ಜೆ ಹಾಕತೊಡಗಿದ. ಮೊದಲು ಮಾತಾಡಿದವನೇ ಇನ್ನೊಮ್ಮೆ ಆರ್ತದನಿಯಲ್ಲಿ ಹೇಳಿದ
“ಹತ್ತು ಪಸೆರ್ಂಟ್ ಆದರೂ ಪರವಾ ಇಲ್ಲ ಕಣೋ ಹಣ ಬೇಕು”
ಆ ಮಾತು ಮುಗಿಯುವಲ್ಲಿ ಅವನು ಅವರ ಹತ್ತಿರ ಬಂದಿದ್ದ. ಎಲ್ಲಾ ಪರಿಚಯಸ್ಥ ಮುಖಗಳೇ, ಅವನನ್ನು ನೋಡಿ ಅವರಲ್ಲಿ ಒಂದು ತರಹದ ಮುಜುಗರದ ಭಾವ ಹುಟ್ಟಿ ಬಂದದ್ದು ಅವನ ಗಮನಕ್ಕೆ ಬರಲಿಲ್ಲ.
“ಯಾರ ಅಮ್ಮ ಸಿರಿಯಸ್ ಇದ್ದಾಳೆ? ಯಾರಿಗೆ ಹಣ ಬೇಕು?”
ದನಿಯಲ್ಲಿ ಅವನಿಗರಿವಿಲ್ಲದಂತೆ ಹಣದ ಮದ ವ್ಯಕ್ತವಾಗಿತ್ತು.
“ನಿಮ್ಮ ದರಿದ್ರ ಲಂಚದ ಹಣ ಬೇಡ ಸ್ವಾಮಿ! ಅದರಿಂದ ನಾಳೆ ಸಾಯುವ ನನ್ನ ಅಮ್ಮ ಈಗಲೇ ಸತ್ತಾಳು”
ತಕ್ಷಣ ಬಂತು ಆವರೆಗೆ ಹಣ ಯಾಚಿಸುತ್ತಿದ್ದವನ ಪ್ರತಿಕ್ರಿಯೆ. ದನಿಯಲ್ಲಿ ಹೇಸಿಗೆಯ ಭಾವವೂ ತುಂಬಿತುಳುಕುತ್ತಿತ್ತು.
“ನನ್ನ ಮಗನಿಗೆ ಸಿಗಬೇಕಾದ ಕೆಲಸ ಇನ್ನೊಬ್ಬನಿಗೆ ಕೊಡಿಸಿದಿರಿ. ಅದರಿಂದ ಅವನು ನೇಣುಹಾಕಿಕೊಂಡು ಸತ್ತ. ಸಾಕು ನಿಮ್ಮ ಉಪಕಾರ, ಹೋಗಿ ಇಲ್ಲಿಂದ! ನಾವು ಏನಾದರೂ ಮಾಡಿಕೊಳ್ಳುತ್ತೇವೆ!” ಬಹು ನಿಷ್ಟುರ ದನಿಯಲ್ಲಿ ಹೇಳಿದ ಇನ್ನೊಬ್ಬ.
ಅವನಿಗೆ ಅವರ ಕಡೆ ತಲೆ ಎತ್ತಿ ನೋಡುವ ಧೈರ್ಯವೂ ಆಗಲಿಲ್ಲ. ದಿಗ್ಮೂಡನಾದ ಅವನು ನಿಧಾನವಾಗಿ ತನ್ನ ವಾಹನದ ಕಡೆಗೆ ಹೆಜ್ಜೆ ಹಾಕಿದ.
ಆದಿನ ಹೇಗೆ ಮನೆಗೆ ಸೇರಿದನೆಂಬ ಅರಿವು ಅವನಿಗಿಲ್ಲ. ಅವನ ಕಳೆಗುಂದಿದ ಮುಖವನ್ನು ಮನೆಯವರು ಯಾರೂ ಗಮನಿಸಲಿಲ್ಲ. ಆ ಅಭ್ಯಾಸವನ್ನು ಅವರೆಂದೋ ಬಿಟ್ಟುಬಿಟ್ಟಿದ್ದರು.
ಅವನ ಮನದಲ್ಲಿ ಎಂತಹ ಹಾಲಾಹಲವಾಗಿತೆಂಬುವುದು ಊಹಿಸುವುದೂ ಕಷ್ಟ. ಮರುದಿನದಿಂದ ಅವನು ಕಾಣೆಯಾದ.
ಮಡದಿ ಮಕ್ಕಳು ಅವನನ್ನು ಹುಡುಕಿಸಲು ಮಾಡಬೇಕಾದುದನ್ನೆಲ್ಲಾ ಮಾಡಿದರು. ಆದರೂ ಈವರೆಗೂ ಅವನ ಪತ್ತೆ ಇಲ್ಲ. ಸತ್ತಿದ್ದಾನೋ ಬದುಕಿದ್ದಾನೋ ಎಂಬುವುದು ಕೂಡ ಗೊತ್ತಿಲ್ಲ. ಶ್ರೀಮಂತನಾದ, ಯಾವುದಕ್ಕೂ ಚಿಂತೆಯೂ ಇಲ್ಲದ ಯಾರ ಶತ್ರುತ್ವವನ್ನೂ ಕಟ್ಟಿಕೊಳ್ಳದ ಈತ ಹೀಗೆ ಏಕಾಏಕಿ ಕಣ್ಮರೆಯಾಗಲು ಕಾರಣವೇನೆಂಬುವುದೇ ಎಲ್ಲರಿಗೂ ಆಶ್ಚರ್ಯ.
*****









