೧
ನಾನು ಕ೦ಡಿರುವ ಚೆಲು ಬಾಲೆಯರ ಸೌಂದರ್ಯ
ಸಾರ ಸರ್ವಸ್ವದಂತಿವಳೆಸೆಯುತಿಹಳು
ಕಣ್-ಮನಕೆ ಸ್ನೇಹರಸದೊಸರ ಸೇಚಿಸುತಿವಳು
ತಂಗದಿರನಂತೆ ತಂಪೀಯುತಿಹಳು
೨
ಇವಳ ಕಡೆಗಣ್ಣೋಟದಲ್ಲಿ ಮಿಂಚಿನ ಚಂಚ-
ಲೇಕ್ಷಣವು ಮನೆ ಮಾಡಿ ಕೊಂಡಿರುವುದು
ಇವಳ ಮಂದಸ್ಮಿತದಿ ಪ್ರೇಮ ರಸವೊಸರುತ್ತ,
ಜೊನ್ನವದು ತುಂಬಿ ತುಳುಕುತ್ತಲಿಹುದು
೩
ನಡೆಯುವ ಕಿಶೋರಿಯಾ ಬೆಡಗ ಬಣ್ಣಿಪುದೇನು?
ಬಡನಡುವು ಬಳುಕುತ್ತಲಿರುತಿರುವುದು
ನಿಡು ಜಡೆಯು ನಲಿಯುವುದು. ನಳಿ ತೋಳು ಒಲೆಯುವುದು
ಕಡುಗಾಡಿಯನ್ನವಳು ಸೂಸುತಿಹಳು
೪
ಇವಳ ಎದೆಯುಬ್ಬಿನಲಿ ಜನರ ಮನವನು ಸೆಳೆದು,
ವಶ್ಯವಾಗಿರಿಸುತಿಹ ಮಾಟವಿಹುದು
ಇವಳ ಚೆಂದುಟಿಯಲ್ಲಿ ಸಂಜೆಗೆಂಪಿನ ಸೊಬಗು
ಮುಗ್ಧತೆಯ ಮುಗುಳು ನಗು ನಗುತಿರುವುದು
೫
ಚೂರ್ಣ ಕು೦ತಳವಿವಳ ವದನದಲಿ ನಲಿಯುತ್ತ.
ಸೊಬಗಿನಾ ಚಿತ್ರವನು ಬರೆದಿರುವುದು
ಹುಣ್ಣಿಮೆಯ ಚ೦ದಿರನ ಸೌಂದರ್ಯವನ್ನಿಳಿಕೆ-
ಗೈಯುವುದು ಶೋಭಿಸುವ ಮುಖಕಮಲವು
೬
ಇವಳ ಸವಿನುಡಿಯ ಸರಸತೆಯಲ್ಲಿ ಅಮೃತಮಯ
ಮಾಧುರ್ಯ ಮನೆ ಮಾಡಿ ಮೆರೆದಿರುವುದು
ಈವಳ ಮೆಲುನಡಿಗೆಯವಸರದಲ್ಲಿಯೊಲೆಯುತಿಹ
ಸೆರಗು ನಮ್ಮನು ಸನ್ನೆಯಿಂದ ಕರೆಯುವುದು
೭
ಇವಳೆ ಮುದ್ದಿನ ಕಣಿಯು, ಇವಳೆ ಪ್ರೇಮದ ಮಣಿಯ
ಇವಳೆ ಸೊಗದಾಸರೆಯದಾಗಿರುವಳು
ಇವಳೆ ಸೊಬಗಿನ ಸೂರೆಯಿವಳೆ ನಲವಿನ ನೀರೆ,
ಇವಳೆ ಪ್ರಣಯದ ದೇವಿಯಾಗಿರುವಳು
*****
೧೯೩೪








