ಮೇಲುನದಿ ದಂಡೆಯಲಿ ನಡೆದಿದ್ದ ನಾಮನುಜ,
ಮುಂಜಾವಿನಲಿ ಒಬ್ಬನೊಬ್ಬ;
ಮೂಡಿತ್ತು ಮಂದಾನಿಲ, ನೇರದಲಿ ಆದರದಿ;
ವೃಕ್ಷದಲಿ ಉಲಿಉಲಿವ ಹಕ್ಕಿಗಳ ಕೂಡಿ.
ಮೆಲುನುಡಿಯ ಗಾನಕ್ಕೆ, ಮೀಸಲಾಗಿರುವಂತೆ;
ಹಾಡಿದವು ಮಾಮರವನೇರಿರುವ ಹಕ್ಕಿ.
ಹಣ್ಣು ಹೂವ್ಗಳತಾಕಿ ಮಂಡಲದಿ ನಾದದಲಿ
ಕೊರಲಿಂಪು ಗಾನದಲಿ ಸವಿಯನುಣಿಸಿ,
ಮೇಲುನದಿ ದಂಡೆಯಲಿ ನೆರೆದಿತ್ತು-
ಮಂದಹಾಸ- ಅಖಿಲ ಸಮೂಹದ ಕೋಶ.
ದಂಡೆಹಾದಿಯ ಹಿಡಿದು, ಮುಂಜಾವಿನಲಿ;
ಹಾಯುವವ ಮನುಜನಿವನಾರು?
ಹಣ್ಣು ಹೂವ್ಗಳತಾಕಿ ಮಂಡಲದಿ ನಾದದಲಿ
ಕೊರಲಿಂಪು ಗಾನದಲಿ ಬೆರೆಸಿರುವ
ಹಕ್ಕಿಗಳ ಜತೆಗೂಡಿ ಮೇಳದಲಿ
ಹಾಯುವವ ಪಥಿಕನೊ ಏನೊ?
ಸೃಷ್ಟಿ ಮಿಳಿತದಲಿ, ಮೌನನಿಧಿಯಲಿ
ಮುಳುಗಬಂದಿಹನೊ ಏನೊ?
ಚಲುವ ನಲುವಿನ ಲತೆಯ ಮುಡಿಯಲ್ಲಿ ಬಾಳಿ
ಹೊರಳಿ ಬಿರಿದೊಡೆದು ಪರಿಮಳವ ಬೀರುವಾ
ಮುಗುಳ ಮಲ್ಲಿಗೆಗೆ ಮನವ ಮೋಹಿಸಿದನವನು.
ಮುಂಜಾವಿನಲಿ, ಮೇಲುನದಿ ದಂಡೆಮಾರ್ಗದಲಿ;
ಆ ಪಥಿಕ, ತತ್ವೋಪಾಸಕನ ನೇರದಲಿ ಸುತ್ತಲಲಿ
ಮೆರೆದಿತ್ತು ಪ್ರಕೃತಿ ಪ್ರವಾಹ – ಮುಂಜಾವಿನಲಿ
ಪಥಿಕಶ್ರೇಷ್ಟನ ಮಾರ್ಗ ಪೂರ್ಣಕೂಡಿ.
ನಡೆದಿದ್ದನಾಮನುಜ ಮೌನದಲಿ ಎತ್ತಲೋ?
ದಂಡೆಮಾರ್ಗವಬಿಟ್ಟು ನಿಜನಸ್ಥಾನಕೆ ತಾನು.
***
ಮೇಲುನದಿ ದಂಡೆಯಲಿ ಮೂಡಿತ್ತು ಕಿರಣ,
ಪಥಿಕಶ್ರೇಷ್ಠನ ಮಾರ್ಗಕ್ರಮಣ ಹಿಡಿದು;
ಮನದಲ್ಲಿ ನೆಲೆದಿತ್ತು ಗಾಢಭಾವ,
ತತ್ವೋಪಾಸಕನ ಅತ್ಯ೦ತದಾಹ;
ಮೆಲ್ಲನೆಯ ಮನದಲ್ಲಿ ಅಂದಿದ್ದ ರಾಗ,
ಕೊನೆಯಮುಟ್ಟಿತು ಖೇದಕೂಡಿ;
ಗಾಢಭಾವವು ಸ್ಮೃತಿಗೆ ಬಂದು,
ಪಥಿಕಶ್ರೇಷ್ಠನ ಶಾಂತತೆಗೆ ತೊಡರವಿಟ್ಟು.
ಮನದೊಳಗೆ ಚಿಂತಿಸುತ ನೆನೆದಿದ್ದ ಆ ಮೌನಿ,
“ಪ್ರಕೃತಿಯಲಿ ಎಲ್ಲವೆಲ್ಲವು ಗೆಲುವಬೀರಿರಲು
ಜಗವೇಕೆ? ಕಾರ್ಮುಗಿಲ ಭ್ರಾಂತಿಗೆ ಎಳೆಯುತಿದೆಯೆಂದು?
ಸೃಷ್ಟಿ ತೆರೆ ಮಂದಹಾಸದಲಿ ನಾ-ಮೆರೆಯುತಿರಲು
ನೂರಾರು ಜೀವಗಳ ಜೀವಾಳ ಕುಂದಿ ಏಕೆ
ಸವೆಯುತಿದೆಯೆಂದು?
ಜಗದ ಮನದಲಿ ಅನ್ನೋನ್ಯ ಏಕೆ? ನೆಲೆಯಿಸಲಿಲ್ಲ
ಎಂಬ ಚಿ೦ತಾಗ್ನಿ ಉದಯಿಸಿತು ಅವನಲ್ಲಿ,
ಮಧುರವಾಸ – ಆ ಮೇಲುನದಿ ದಂಡೆಯಲ್ಲಿ
ದಹಿಸಿತವನನ್ನು, ಕ್ರೂರಾವೇಶಕ್ರೋಶ.
ಪೃಥ್ವಿಯಲಿ ತಮ್ಮಗಳ ಮೇಲೆ ಮರೆತು
ಮಲಗಿರುವ ಈ ಜನವೇಕೆ? – ಸರಿಪಡಿಸಲೊಲ್ಲರು
ತಮ್ಮಗಳ ಒಳಜಗಳ,” ಎಂದು ಮರುಗಿದನವನು
ಮೌನಿ-ವೀರಸೇನಾನಿ.
ಮುಗಿದಿತ್ತು ಈದೊಂದುಳಿಯ ಪೀಡಾವಿವರಣೆ
ಮೌನಾವಲಂಬಿಯ ಅಭಯ ಯೋಜನೆಯಿಂದ
ವೃಕ್ಷದಲೆ ಉಲಿಉಲಿದಿತ್ತು ಹಕ್ಕಿಗಳು ಕೂಡಿ
ಮೌನಿ ಬೆರೆಸಿದನು ಆ ಕೊರಲಿಂಪು ಗಾನದಲಿ
ಒಮ್ಮೆಯೇ ಖೇದ ಮರೆತು.
ಪ್ರಕೃತಿ ಆರಾಧನೆಗೆ – ತದೇಕಧ್ಯಾನಕ್ಕೆ ಹಿಂದಿರುಗಿ
ಬೇಡಿದನು, ಈಶನಲಿ – ತತ್ವೋಪಾಸಕ, ವೀರಪಥಿಕ.
ಶಾಂತಿಸಮ್ಮತ ಮೂಲಕಾಂತಿ.
*****









