ಬೇಗ ಎದ್ದು ಬಚ್ಚಲೊಲೆಗೆ ಬೆಂಕಿ ಹಾಕಿದಳು. ಸಂಭ್ರಮದಿಂದ ಅಂಗಳ ಸಾರಿಸಿ ರಂಗೋಲಿ ಹಾಕಿ ಬಂದು,

‘ಏಳಮ್ಮಾ ಕೀರ್ತಿ, ಏಳು ಲೇಟಾಗುತ್ತೆ’ ಎಂದು ಮಗಳನ್ನು ಎಬ್ಬಿಸಿಕೊಂಡು ಸ್ನಾನಕ್ಕೆ ಕರೆದುಕೊಂಡು ಹೋದಳು.

‘ಅಮ್ಮಾ! ಹೆಚ್ಚು ಉಜ್ಜ ಬೇಡಮ್ಮ ಕಾಲು ನೋಯುತ್ತೆ’.

‘ಅಲ್ಲೇ, ಮಣ್ಣಾಟ ಆಡ್ತೀಯ. ಕಾಲೆಲ್ಲಾ ಮಣ್ಣಾಗಿರುತ್ತೆ. ಯಾವಾಗಲೂ ಕ್ಲೀನಾಗಿರಬೇಕು ಗೊತ್ತಾಯ್ತಾ’ ಎಂದು ಮಗಳಿಗೆ ಸ್ನಾನ ಮಾಡಿಸಿ ಮೈ ಒರೆಸಿ ಟವಲನ್ನು ಸುತ್ತಿ ‘ನಡಿ’ ಎಂದು ಅವಳನ್ನು ಕಳಿಸಿ

‘ಲೋಹಿತಾ! ಏ ಲೋಹಿತಾ, ಬಾರೋ ಇಲ್ಲಿ. ನಿನಗೂ ಸ್ನಾನ ಮಾಡಿಸ್ತೀನಿ’ ಎಂದು ಬಚ್ಚಲಿನಿಂದಲೇ ಕೂಗಿದಳು ಮಗನನ್ನು.

‘ಕೀರ್ತಿ ನಿಮ್ಮಪ್ಪನ್ನು ಎಬ್ಬಿಸು. ಇನ್ನೂ ಬೆಳಗಾಗಿಲ್ಲ ನಿಮ್ಮಪ್ಪಂಗೆ, ಇವತ್ತು ಉಗಾದಿ ಹಬ್ಬ ಬೇರೆ, ರಜೆ ಅಂದ್ರೆ ಸಾಕು, ಬೆಳಿಗ್ಗೆ ಎಂಟಕ್ಕೆ ಏಳುವುದು’.

‘ಸಾಬೂನು ಹಚ್ಚ ಬೇಡಮ್ಮ ಮುಖಕ್ಕೆ, ಕಣ್ಣುರಿ ಕಣಮ್ಮ’.

‘ಇಲ್ಲಾ ಕಣೋ ಸ್ವಲ್ಪ ಹಚ್ತೀನಿ. ನಿನಗೇನು ತೊಂದರೆ ಆಗೋಲ್ಲ’ ಎಂದು ಮಗನ ತಲೆ, ಮೈ, ಉಜ್ಜಿ ಸ್ನಾನ ಮಾಡಿಸಿ ಮುಗಿಸಿದಳು. ಇಬ್ಬರು ಮಕ್ಕಳಿಗೂ ಒಳ ಉಡುಪು ಹಾಕ್ತಾ

“ರೀ… ರೀ…. ಏಳ್ರೀ ಮೇಲೆ. ಕುಂಭಕರ್ಣ ವಂಶಸ್ಥರು. ನಿದ್ದೆ ಜಾಸ್ತಿ. ಏಳಿ ಏಳಿ….. ಏಳೀಪ್ಪಾ ಅಂದ್ರೆ ಏಳಬೇಕು’ ಎಂದು ಗಂಡನನ್ನು ಎಬ್ಬಿಸಿ ‘ಇವತ್ತು ಕೆಲಸ ಜಾಸ್ತಿ, ಬೇಗ ಎದ್ದು ಸ್ನಾನ ಮುಗಿಸಿ ಬನ್ನಿ. ಬಿಸಿ ಬಿಸಿ ಕಾಫಿ ಕೊಡ್ತೀನಿ. ನನಗೂ ಅದೂ ಇದೂ ಹೆಚ್ಚಿ ಕೊಡ್ತಾ ಸಹಾಯ ಮಾಡಿ’ ಎಂದು ಗಂಡನನ್ನು ಎಬ್ಬಿಸಿ ಚಡ್ಡಿ, ಟವಲ್, ಟೂತ್‌ಬ್ರಷ್‌ಗೆ ಪೇಸ್ಟ್ ಹಚ್ಚಿ ರೆಡಿ ಮಾಡಿ ಕೈಗೆ ಕೊಟ್ಟಳು.

‘ಏನೇ ಇವತ್ತು ಬಹಳ ಖುಷಿಯಾಗಿದ್ದೀಯಲ್ಲೇ’

‘ಏನೂ ಇಲ್ಲ. ಇರೋ ಹಂಗೆ ಇದ್ದೀನಿ. ಇವತ್ತು ಉಗಾದಿ ಹಬ್ಬ ಅಷ್ಟೆ’ ಎಂದಳು ಮುದ್ದಿನ ಹೆಂಡತಿ ರಂಜನಾ.

ಸರಿ, ಗಂಡ ಸ್ನಾನ ಮುಗಿಸಿ ಬಂದು

‘ಕಾಫಿ ಕೊಡೆ’

‘ಕಾಫಿ ಕೊಡ್ತೇನೆ ಮೊದಲು ದೇವಿಗೆ ಕೈಮುಗಿದು ಬನ್ನಿ’

ಕೈ ಮುಗಿದು ಬಂದ ಮೇಲೆ

“ತಗೊಳ್ಳಿ ಬಿಸಿ ಬಿಸಿ ಕಾಫಿ, ನಿಧಾನ ಕುಡಿರಿ ಆರಿಸ್ಕೊಂಡು, ಇಲ್ಲಿಯೇ ಬನ್ನಿ ಅಡುಗೆ ಕೋಣೆಗೆ’ ಎಂದು ಕರೆದಳು.

ಗಂಡ ಅವಳ ಮುಂದೆ ಕುಳಿತು ಕ್ಯಾರೇಟ್ ಹೆಚ್ಚುವುದನ್ನು ಕಂಡು ಅವಳ ಮುಖ ಅರಳಿತು, ಅವಳಿಗೆ ಒಳಗೊಳಗೆ ಖುಷಿಯೋ ಖುಷಿ.

ರಂಜನಾ ತುಂಬಾ ಜಾಣೆ, ಮೊನ್ನೆ ತಾನೇ ಅವಳು ಏನೇನೋ ಪಾಲಿಷ್ ಮಾಡಿ ಗಂಡನಿಂದ ಹಣ ಕಿತ್ತುಕೊಂಡು ಒಂದು ವರ್ಷ ಕಳೆದ ಮೇಲೆ ಹಳೆ ಬಂಗಾರ ಎಲ್ಲಾ ಒಟ್ಟುಗೂಡಿಸಿ ಎರಡು ಓಲೆ ಮಾಡಿಸಿದ್ದಳು, ಹೊಗಳಿಸಿಕೊಳ್ಳುವುದು ಹೆಂಗಸರ ಸ್ವಭಾವ ಅಲ್ವೇ. ಅದಕ್ಕೆ ಈ ಓಲೆಗಳನ್ನು ಗಂಡನಿಗೂ ತೋರಿಸಿ ಪಕ್ಕದ ಮನೆಯವರಿಗೂ, ಸ್ನೇಹಿತರಿಗೂ ತೋರಿಸಿ ತನ್ನ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಳು.

ಅವಳಿಗೆ ಏನೋ ತಟ್ಟನೆ ಹೊಳೆದಂತಾಗಿ

‘ನೀವು ಹೆಚ್ತಾ ಇರಿ’ ಎಂದು ಹೋಗಿ ಮಕ್ಕಳಿಗೆ ಹೊಸಬಟ್ಟೆ ತೊಡಿಸಿದಳು. ಮಕ್ಕಳು ತಮ್ಮ ಹೊಸ ಬಟ್ಟೆಯನ್ನು ಅವರಪ್ಪನಿಗೆ ತೋರಿಸಲು ಅಡುಗೆ ಕೋಣೆಗೆ ಓಡಿದವು. ಮಕ್ಕಳಿಗೆ ಸಂಭ್ರಮವೋ ಸಂಭ್ರಮ.

ರಂಜನಾ ಬಂದು ಒಲೆಯ ಮುಂದೆ ಕೂತಳು.

‘ಎಷ್ಟೊತ್ತು ಹೋಗುವುದು?’

ಉತ್ತರಿಸದೆ ಮೌನವಾಗಿದ್ದಳು.

ತಲೆ ಎತ್ತಿ ನನ್ನ ಹೆಂಡ್ತಿ ಮುಖ ನೋಡ್ತೇನೆ ಒಂದು ರೀತಿಯಾಗಿತ್ತು. ಲವಲವಿಕೆ ಇರಲಿಲ್ಲ. ಆದರೂ ಅದನ್ನು ತೋರಿಸದೆ ಒಬ್ಬಟ್ಟು ಮಾಡಿದ್ಲು. ವಡೆ ಮಾಡಿದ್ಲು. ಕೋಸುಂಬರಿ ಮಾಡಿದ್ಲು, ಅಂತು ಅಡುಗೆ ಎಲ್ಲಾ ಮಾಡಿ ಮುಗಿಸಿದಳು.

ನನ್ನ ಜೊತೆ ಇದ್ದಾಗ, ಊಟ ಮಾಡುವಾಗ, ನಗುನಗುತ್ತಾ ಇದ್ದಳು.

‘ಯಾಕೆ ಒಂದು ಥರಾ ಇದ್ದೀಯಾ?’

‘ಏನೂ ಇಲ್ಲಾರೀ, ಬೆಳಿಗ್ಗೆ ಬೇಗ ಎದ್ದಿದ್ದೆ. ಅದಕ್ಕೆ ಸ್ವಲ್ಪ ತಲೆ ನೋಯ್ತಾ ಇದೆ…ರೀ ಅಷ್ಟೆ’ ಎಂದು ಮಾತು ಮರೆಸಿದಳು.

ಹಬ್ಬ ಮುಗಿದು ಎರಡು ಮೂರು ದಿನ ಕಳೆದಿದೆ. ಮೂರ್ತಿ ಆಫೀಸಿನಿಂದ ಮನೆಗೆ ಬಂದಿದ್ದ. ಹೆಂಡತಿ ಖುಷಿಯಾಗಿ ಬಿಸಿ ಕಾಫಿ ತಂದ್ಕೊಟ್ಟು, ಗಂಡನ ಜೊತೆ ಸಂತೋಷವಾಗಿ ಮಾತಾಡಿದ್ಲು. ರಾತ್ರಿ ಊಟವಾದ ಮೇಲೆ, ಎರಡು ಮಕ್ಕಳ ತಾಯಾಗಿರುವುದನ್ನು ಮರೆತು ಮೂರ್ತಿಯ ತಲೆಯ ಕೂದಲಲ್ಲಿ ಬೆರಳಾಡಿಸುತ್ತಾ ಗಂಡನನ್ನು ಬಿಗಿದಪ್ಪಿ ಎರಡು ಮುತ್ತು ಕೊಟ್ಟು… ಅವನಿಗೆ ಆಶ್ಚರ್ಯವೋ ಆಶ್ಚರ್ಯ. ಇಷ್ಟು ದಿವಸದ ಮೇಲೆ ನನ್ನ ಹತ್ತಿರ ಬಂದಿದ್ದಾಳೆಂದರೆ, ನನಗೆ ಒಂದು ರೀತಿ ಖುಷಿಯೂ ಆಯಿತು.

ನಿಧಾನವಾಗಿ,

ನೋಡ್ರಿ, ನಾನೊಂದು ತಪ್ಪು ಮಾಡಿದೀ…ನ್ರೀ… ನೀವು ಹೊಡೆದ್ರೂ ಸೈ, ಬೈದ್ರೂ ಸೈ, ಆದರೂ ನಾನು ನಿಮ್ಮೆದುರಿಗೆ ಎಲ್ಲಾ ಹೇಳಿಬಿಡ್ತೀನಿ’ ಅಂತ ಶುರು ಮಾಡಿದಳು.

ನೋಡಿ, ಮೊನ್ನೆ ಕೀರ್ತಿಗೆ ಮಾಡಿಸಿದ ಓಲೆ ಇತ್ತಲ್ಲ ಅದನ್ನು ಹಬ್ಬದಿವಸ ಅವಳ ಕಿವಿಗೆ ಹಾಕೋಣ ಎಂದು ಪೆಟ್ಟಿಗೆ ತೆಗಿತೀನಿ, ಅದರಲ್ಲಿ ಒಂದೇ ಒಂದು ಓಲೆ ಇದೆ ಕಣ್ರೀ, ನನ್ನ ಎದೆ ಝಲ್ ಎಂದಂತಾಯ್ತುರಿ. ಎಲ್ಲಾ ಸೀರೆಗಳನ್ನು ಒಂದೊಂದಾಗಿ ತೆಗೆದು ನೋಡ್ದೆ ಕಣ್ರೀ, ಎಷ್ಟು ಹುಡುಕಿದ್ರೂನೂ ಓಲೆ ಮಾತ್ರ ಸಿಗಲಿಲ್ಲಾರೀ, ನಾನು ಯಾರ ಕೈಗೂ ಕೊಟ್ಟಿಲ್ಲ. ಬೇರೆ ಕಡೆಗೂ ಇಟ್ಟಿಲ್ಲಾರೀ. ಏನೇ ಮಾಡಿದ್ರೂ ಅದೊಂದು ಓಲೆ ಮಾತ್ರ ಸಿಗ್ತಾ ಇಲ್ಲಾ’ ಎಂದು ಹೇಳುವಾಗ ಅವಳ ಮುಖ ವೇದನೆಯಿಂದ ತುಂಬಿತ್ತು. ಮುಖದ ಮೇಲೆ ಕಣ್ಣೀರು ಮಾತ್ರ ದಳದಳ ಇಳೀತಿತ್ತು. ಇದಿಷ್ಟನ್ನು ಹೇಳುವಷ್ಟರಲ್ಲಿ ಅವಳಿಗೆ ಸಾಕು ಸಾಕಾಗಿ ಹೋಗಿತ್ತು.

ಮೂರ್ತಿಗೆ ತಡೆಯಲಾರದಷ್ಟು ಸಿಟ್ಟು ಬಂದಿತ್ತು. ಆದರೂ ಅದನ್ನು ತೋರಿಸದೆ ಸಮಾಧಾನವಾಗಿ,

‘ಮನೆಗೆ ಯಾರಾದ್ರೂ ಬಂದಿದ್ರಾ?’

‘ಇಲ್ಲಾರಿ’ ಎಂದಳು ಮೆಲುದನಿಯಿಂದ.

‘ಹಾಗಾದ್ರೆ ಎಲ್ಲಿ ನಿನ್ನ ಪೆಟ್ಟಿಗೆ ತೋರ್‍ಸು, ನಾನೊಮ್ಮೆ ಹುಡುಕ್ತೀನಿ’ ಎಂದಿದ್ದೇ ತಡ, ಅವಳು ಕರಕೊಂಡು ಹೋಗಿ,

‘ಇದೇ ಕಣ್ರ್‍ಈ ನನ್ನ ಪೆಟ್ಟಿಗೆ’ ಎಂದು ತೋರಿಸಿದಳು.

ಅವನು ಒಂದೊಂದೇ ಸೀರೆ ತೆಗೆದು ಜಾಡಿಸಿ ನೋಡಿದ. ಯಾವ ಸೀರೇಲೂ ಅದು ಸಿಕ್ ಹಾಕೊಂಡಿರಲಿಲ್ಲ. ಒಲೆ ಕಾಣದಾದಾಗ ಅವಳಿಗೆ ಅಳು ತಡೆಯದೆ ಉಮ್ಮಳಿಸಿ ಬಂತು. ಬಿಕ್ಕಿಸುತ್ತಾ

‘ನಾನು ಎಲ್ಲಾ ಸೀರೇನೂ ಜಾಡ್ಸಿ ಜಾಡ್ಸಿ ಇಟ್ಟಿದೇನ್ರಿ’

ಆದ್ರೂ ಮೂರ್ತಿ ತಡೆಯದೇ,

‘ನಿನ್ನ ಮದುವೆ ಧಾರೆ ಸೀರೆ ತೆಗೀ’

ಅಲ್ಲೇ ತೂಗು ಹಾಕಿದ್ದ ಹ್ಯಾಂಗರ್‌ನಲ್ಲಿತ್ತು ಆ ಸೀರೆ. ಅದನ್ನು ತಂದು ಕೊಟ್ಟಳು. ನಾನು ಅದನ್ನು ಜಾಡಿಸ್ತಾ ಹೋದೆ. ಮೊದಲು ಗೊತ್ತಾಗಲಿಲ್ಲ. ಕೊನೆಗೆ ಕೊನೆ ತುದಿಯ ಸೆರಗನ್ನೊಮ್ಮೆ ನಿಧಾನವಾಗಿ ಜಾಡಿಸಿದಾಗ ಒಂದೇ ಮೂಲೆಯಲ್ಲಿ ಭಾರ ಅನ್ನಿಸ್ತು, ಏನೋ ಸಣ್ಣ ಕಲ್ಲು ಕಟ್ಟಿದಂತೆ ಭಾಸವಾಗುತ್ತಿತ್ತು. ನನಗೆ ಅನುಮಾನ ಬಂತು. ಅಲ್ಲಿ ನೋಡಿದಾಗ ಸೆರಗಿನ ಗುಂಜಿನಲ್ಲಿ, ತೊಟ್ಟಲ್ಲಿ ಮಲ್ಕೊಂಡ ಹಾಗೆ ಓಲೆ ಮಲಗಿತ್ತು. ಕಣ್ಣಿಗೆ ಕಾಣಿಸ್ತಾ ಇರಲಿಲ್ಲ. ಆದರೆ ನಿಧಾನವಾಗಿ ಜಾಡಿಸುವಾಗ ಮಾತ್ರ ಓಲೆಯ ತೂಕ ಅದರ ಇರುವಿಕೆಯನ್ನು ಹೇಳುತ್ತಿತ್ತು.

ಅದನ್ನು ಬಿಡಿಸಿ ತೆಗೆದಾಗ ನೀವು ತುಂಬಾ ಒಳ್ಳೆಯವರು ಕಣ್ರೀ, ಕಷ್ಟಪಟ್ಟು ಹಣ ಜೋಡ್ಸಿ ಮಾಡ್ಸಿದ್ದೂ….ರ್ರೀ…’ ಎಂದು ಹೇಳುವಾಗ ಆಕೆಯ ಮುಖ ಹಿಗ್ಗಿ ಹೀರೇಕಾಯಿಯಂತಾಗಿತ್ತು.

ಮಾರನೇ ದಿನವೇ ಮೂರ್ತಿಗೆ ಇಷ್ಟವಾದ ಜಾಮೂನು ಮಾಡಿ ಎರಡೆರಡರ ಬದಲಿಗೆ ನಾಲ್ಕು ಜಾಮೂನು ಹಾಕಿ

‘ಹೇಗಿದೇರಿ’

‘ನಿನ್ನೆ ರಾತ್ರಿ ಕೊಟ್ಟೆಯಲ್ಲ, ಆ ಎರಡು ಮುತ್ತುಗಳು ಜಾಮೂನಿಗಿಂತ ಸಿಹಿಯಾಗಿದ್ದವು ಕಣೇ’

ಎಂದಾಗ ಅವಳ ಮುಖ ನಾಚಿ ಕೆಂಪಾಗಿತ್ತು.
*****