ಸಕ್ರನೆಂಬುವನ ಬಂಡಾಯದ ವೃತ್ತಾಂತವು

ಸಕ್ರನೆಂಬುವನ ಬಂಡಾಯದ ವೃತ್ತಾಂತವು

ಚಿತ್ರ: ಕಿಶೋರ್‍ ಚಂದ್ರ
ಚಿತ್ರ: ಕಿಶೋರ್‍ ಚಂದ್ರ

ಡಾಂಬರಿನ ಆ ದೊಡ್ಡ ರಸ್ತೆ ಕವಲೊಡೆಯುವುದು ರೈಲು ಗೇಟಿನ ಹತ್ತಿರ. ಒಂದು ರಸ್ತೆ ನೇರ ಊರೊಳಕ್ಕೆ ಹೋದರೆ ಮತ್ತೊಂದು ಬೈಪಾಸ್ ರಸ್ತೆ. ಅದರ ಮಗ್ಗಲಲ್ಲಿರುವುದೇ ಗಾಂಧಿ ಕಾಲನಿ. ನೂರಾರು ಗುಡಿಸಲು ಅಲ್ಲಿ ಒತ್ತೊತ್ತಾಗಿ ಉಸಿರುಗಟ್ಟವಂತೆ ಹಬ್ಬಿಕೊಂಡಿವೆ. ಅದರಾಚೆಗೆ ತುಸು ದೂರದಲ್ಲಿ ನಗರದ ಕೊಳೆ, ಕಸ ಗುಡ್ಡೆಗುಡ್ಡೆಯಾಗಿ ಬಿದ್ದಿದೆ. ಹೆಗ್ಗಣಗಳು ಒಳಗೊಳಗೆ ಸುರಂಗ ತೋಡುತ್ತವೆ. ಮಲಿನ ನೀರು ಬಚ್ಚಲುಗುಂಡಿ, ಇಕ್ಕಟ್ಟಾದ ರಸ್ತೆಗಳಲ್ಲಿ ಖಾಯಂ ನಿಂತು ಭಯಂಕರ ಸೊಳ್ಳೆಗಳ ಸಂತಾನ ವೃದ್ಧಿಸಿದೆ. ಸೂರಿನ ನೆಲ ಶಿಥಿಲವಾದರೂ, ಸೊಳ್ಳೆಗಳು ರಕ್ತ ಹೀರಿದರೂ ಕಂಗೆಡದೆ ಬದುಕಿರುವ ಇಲ್ಲಿನ ಬಡನಿವಾಸಿಗಳ ಜೀವನಪ್ರೀತಿ ಅಗಾಧ. ಅಂಥ ಪ್ರೀತಿಗಾಗಿ ಹೋರಾಟ ಮಾಡುತ್ತಿರುವವರಲ್ಲಿ ಸಕ್ರಪ್ಪನೂ ಒಬ್ಬ. ಎಲ್ಲರಿಗೂ ಅವನು ಸಕ್ರನೆಂದೇ ಚಿರಪರಿಚಿತ.

ನಲವತ್ತು-ನಲವತ್ತೈದರ ವಯೋಮಾನ ಅವನದು. ದೇಹ ಶಕ್ತವಾಗಿಲ್ಲ. ಕೂಲಿಗಾಗಿ ಸಂತೆ, ಮಾರ್ಕೆಟ್ ಎಂದು ಅಂಡಲೆಯುತ್ತಾನೆ. ಚಿಕ್ಕ ಚಿಕ್ಕ ನಾಲ್ಕು ಮಕ್ಕಳಿವೆ. ಬಡತನಕ್ಕೆ ಉಂಬುವ ಚಿಂತೆ ಎನ್ನವಂತೆ ಮಕ್ಕಳು ಯಾವಾಗಲೂ ಹಸಿದುಕೊಂಡಂತೆ ತಿನ್ನಲು ಏನಾದರೂ ಬೇಡುತ್ತಲೋ, ರೊಟ್ಟಿ ರೊಟ್ಟಿ ಎನ್ನುತ್ತಲೋ ಪ್ರಲಾಪಿಸುತ್ತಲೇ ಇರುತ್ತವೆ. ಮಕ್ಕಳ ಹಸಿವು ಹಿಂಗಿಸುವ ಪರಿಗಾಗಿ ಸಕ್ರ ಚಿಂತಿಸುತ್ತಲೇ ಇರುತ್ತಾನೆ. ಅವನ ಹೆಂಡತಿ ರುಕ್ಕಿ. ಅವಳಿಗೂ ರಕ್ತಹೀನತೆ, ಆದರೂ ನಾಲ್ಕಾರು ಶ್ರೀಮಂತ ಮನೆಗಳ ಕಸ-ಮುಸುರೆಗೆ ಹೋಗುತ್ತಾಳೆ. ಅವರು ಎತ್ತಿಕೊಟ್ಟ ತಿನಿಸನ್ನು, ಬಟ್ಟೆಗಳನ್ನು ಮಕ್ಕಳಿಗೆ ಒದಗಿಸಿ ಸಂಭ್ರಮಿಸುತ್ತಾಳೆ.

ಸಕ್ರ ಮೈಗಳ್ಳನಲ್ಲ, ಸೂರ್ಯನೊಂದಿಗೆ ಎದ್ದು ಕೂಲಿ ಹುಡುಕಿಕೊಂಡು ಹೋಗುತ್ತಾನೆ. ರೈಲು, ಬಸ್ಸು ನಿಲ್ದಾಣಗಳಲ್ಲಿ ಅವನಿಗೆ ಪ್ರವೇಶ ನಿಷಿದ್ಧ. ಸಂತೆ, ಮಾರ್ಕೆಟಿನಲ್ಲಿ ಕೂಲಿಯ ಅವಕಾಶವಿದ್ದರೂ ಸರಕು, ಸರಂಜಾಮುಗಳಿಗೆ ತಡಕಾಡಬೇಕು. ಅಲ್ಲಿ ಕೂಲಿ ಮನುಷ್ಯರಿಗೇನೂ ಕಮ್ಮಿಯಿಲ್ಲ. ಒಂದು ವಸ್ತು ಕಣ್ಣಿಗೆ ಬಿದ್ದರೆ ಇರುವೆ ಮುಕ್ಕುರುವಂತೆ ಕೂಲಿಗಳು ಧಾಂಗುಡಿಯಿಡುವರು. ದೊಡ್ಡ ಬಾಯಿಯ, ಗಟ್ಟಿ ದೇಹದವರು ಸಕ್ರನ ಪಾಲಿನ ಅದೃಷ್ಟನ್ನು ಕಬಳಿಸಿ ಬಿಡುವರು. ಇದರ ನಡುವೆಯೂ ಅವನು ಇಪ್ಪತ್ತು ಮೂವತ್ತು ರೂಪಾಯಿಗಳನ್ನು ಆರಾಮವಾಗಿ ಗಳಿಸಬಲ್ಲ. ಮನಸು ಮಾಡಿದರೆ ಇದಕ್ಕೂ ಹೆಚ್ಚಿನ ಹಣ ಸಿಗಬಲ್ಲದು ಅವನಿಗೆ. ತಕರಾರಿನ ಜಾಯಮಾನವಲ್ಲ ಸಕ್ರನದು. ನಡವಳಿಕೆ ವಕ್ರವಲ್ಲ. ಎಷ್ಟೋ ಜನ ಕೂಲಿಗಳು ಅಹಂಕಾರಿಗಳು. ಅವರು ಮನುಷ್ಯರಂತೆ ವರ್ತಿಸುವುದಿಲ್ಲ ಎಂದು ಆರೋಪಿಸುವ ಮಂದಿ ಸಕ್ರನನ್ನು ಪ್ರೀತಿಸುತ್ತಾರೆ. ಅವನು ಹಣಕ್ಕಾಗಿ ಪೀಡಿಸುವುದಿಲ್ಲ. ಕೊಟ್ಟಷ್ಟು ಸ್ವೀಕರಿಸುತ್ತಾನೆಂದು ನಂಬುಗೆ ಅವರದು. ಆದರೆ ಅದು ಸಕ್ರನ ಸಂಸಾರವನ್ನು ಸುಖವಾಗಿ ಇಟ್ಟಿಲ್ಲ.

ಸಕ್ರ ಮನೆಗೆ ಬಂದಾಗ ಮಧ್ಯಾಹ್ನದ ಹೊತ್ತು ರುಕ್ಕಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಕುಳಿತಿದ್ದಳು. ನರಳುತ್ತ ಮಲಗಿದ ಮಗಳ ಮೈ ಕೆಂಡವಾಗಿತ್ತು. ಅಡುಗೆ ಒಲೆ ತಣ್ಣಗಿತ್ತು. ನೆಲದ ಮೇಲೆ ಹೊಟ್ಟೆ ಹೊಸೆಯುತ್ತ ಹಸಿವಿನ ತಹತಹಿಕೆಯಲ್ಲಿ ಮೂರು ಗಂಡು ಮಕ್ಕಳು ಸಣ್ಣಗೆ ಆಕ್ರಂದಿಸುತ್ತಿದ್ದವು. ಸಕ್ರನ ಅಂಗಿಯ ಜೇಬಿನಲ್ಲಿದ್ದುದು ಹತ್ತು ರೂಪಾಯಿ ಮಾತ್ರ, ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೋ? ಮಕ್ಕಳಿಗೆ ತಿನ್ನಲು ಏನಾದರೂ ತಂದುಕೊಡಬೇಕೋ? ಚಿಂತೆ ಕಾಡತೊಗಿತ್ತು ಅವನಿಗೆ.

ಇಂಥ ಸಂದಿಗ್ಧ ಹೊತ್ತಲ್ಲಿ ನಾಜೂಕಪ್ಪ ಅವತರಿಸಿದ. ರಾಜಕೀಯ ಪಕ್ಷವೊಂದರ ಸಂಘಟನಾ ಕಾರ್ಯದರ್ಶಿಯಾದ ನಾಜೂಕಪ್ಪ ಬೆರಗಿನ ಮಾತುಗಾರ. ಪಕ್ಷದ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವ ತಂತ್ರಗಾರಿಕೆಯಲ್ಲಿ ನಿಪುಣ. ಗಣ್ಯಾತಿಗಣ್ಯರು ತಮ್ಮ ಭಾಷಣದ ಯಶಸ್ಸಿಗೆ ಅವನನ್ನೇ ಅವಲಂಬಿಸುವರು. ಈಗಂತೂ ಚುನಾವಣಾ ಸಮಯ ರಾಜಕಾರಣಿಗಳಿಗೆ ಅವನೇ ಉಸಿರು. ಅವರಿಗೆ ನಾಜೂಕಪ್ಪ ಹೇಗೆ ಅನಿವಾರ್ಯವೋ, ಸಕ್ರನಂಥವರು ನಾಜೂಕಪ್ಪನಿಗೆ ಅನಿವಾರ್ಯ. ಅದಕ್ಕೇ ಅವನು ಸಕ್ರನನ್ನು ಹುಡುಕಿಕೊಂಡು ಬಂದದ್ದು. ಸಕ್ರನಿಗೂ ಅವನಿಗೂ ಹಳೆಯ ಪರಿಚಯ.

ನಾಜೂಕಪ್ಪನ ಮುಖ ನೋಡಿದ್ದೆ ಸಕ್ರನ ಕಣ್ಣು ಅರಳಿಕೊಂಡವು. “ಬರ್‍ರಿ, ನಾಜೂಕಪ್ಪ ಎಷ್ಟು ದಿನ ಆತು ನಿಮ್ಮನ್ನೋಡಿ” ಎಂದು ಚಾಪೆ ಹರಡಿದ. ಕುಳಿತ ನಾಜೂಕಪ್ಪ ತೆಳ್ಳಗೆ ನಗುತ್ತ “ಪಕ್ಷದ ಕೆಲಸ, ಸಮಾಜದ ಕೆಲಸ ಪುರುಸೊತ್ತಿಲ್ಲೋ ಮಹಾರಾಯ” ಎಂದ.

“ಪ್ರತ್ಯಕ್ಷ ಭಗವಂತನ ದರುಶನ ಮಾಡಿದ್ಹಂಗ ಆತ್ರಿ ನನ್ಗ!” ಉಲ್ಲಾಸದಿಂದ ಉದ್ಗರಿಸಿದ ಸಕ್ರ.

“ಖರೆ ದೇವರಂದ್ರ ನೀನೊ ಸಕ್ರಣ್ಣ. ನಿನ್ನಂಥವರ ಸೇವೆಗೆ ಇರೋರು ನಾವು” ವಿನಮ್ರವಾಗಿ ಹೇಳಿದ ನಾಜೂಕಪ್ಪ ಅದನ್ನು ಒಪ್ಪಿಕೊಳ್ಳದ ಸಕ್ರ.

“ಹಂಗ್ಯಾಕಂತೀರಿ ನಾಜೂಕಪ್ಪ? ನಮ್ಮಂಥ ಬಡೂರ ಪಾಲಿಗೆ ನೀವಽಽ, ಅಲ್ಲೇನು ಆಧಾರ?” ಎಂದ.

“ಬಡತನ-ಸಿರಿತನ ಮುಖ್ಯ ಅಲ್ಲೊ ಸಕ್ರಣ್ಣ. ಮನುಷ್ಯತ್ವ ದೊಡ್ಡದು” ಎನ್ನುತ್ತ ಗುಡಿಸಲಿನ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಾಜೂಕಪ್ಪ.

“ಯಾಕ, ಗಂಡ-ಹೆಂಡ್ತಿ ಮುಖ ಒಣಗಿಸ್ಕೊಂಡು ಕುಂತೀರಿ?” ಎಂದ.

“ಹುಡುಗಿಗೆ ಜ್ವರಾ ಬಂದಾವರಿ. ಹುಡುಗರು ಹಸ್ಗೊಂಡು ಅಳಾಕ ಹತ್ತ್ಯವು ಇವತ್ತ ನೋಡಿದ್ರ ಕೂಲೀನಽ, ಸಿಗಲಿಲ್ಲ. ಕಿಸೆದಾಗ ಹತ್ತು ರೂಪಾಯಿ ಇಟ್ಕೊಂಡು ದಿಕ್ಕು ತಿಳಿಲಾರ್‍ದ ಕುಂತಿನಿ” ನಿಟ್ಟುಸಿರಿಟ್ಟ ಸಕ್ರ.

“ನಾನಿರಾಕಲೇ ನಿನಗ್ಯಾಕ ಚಿಂತಿ?” ಕಾಳಜಿ ಅಭಿವ್ಯಕ್ತಿಸಿದ ನಾಜೂಕಪ್ಪ.

“ಚಿಂತಿ ಬಿಟ್ಟರ ಮತ್ತೇನದರಿ ನಮ್ಗ?” ಹತಾಶೆ ವ್ಯಕ್ತಪಡಿಸಿದ ಸಕ್ರ.

“ಸುಖದ ಕಾಲ ಬರತೈತಿ ತಡ್ಕೋ ಈ ಸಲ ಎಲೆಕ್ಷನದಾಗ ನಮ್ಮ ಪಕ್ಷ ಗೆಲ್ಲೋದು ಗ್ಯಾರಂಟಿಯೇನಪಾ, ನಾವು ಸರಕಾರ ರಚನಾ ಮಾಡಿದ ಮ್ಯಾಲೆ ಈ ನಾಡಿನ್ಯಾಗ ಬಡೂರಽಽ ಇರಬಾರದ್ದು ಹಾಂಗ ಮಾಡ್ತೀವಿ. ಶ್ರೀಮಂತರು, ಬಡೂರಾಗ, ನಾವು ಸಮಾನತೆ ತರ್ತೀವಿ” ಆಶ್ವಾಸನೆ ಕೊಟ್ಟ ನಾಜೂಕಪ್ಪ.

“ಯಾರಽಽ ರಾಜ್ಯಾ ಆಳಿದ್ರೂ ಬಡೂರ ಬದುಕು ಪತ್ರೋಳಿನಽಽ ಬಿಡ್ರಿ” ಸಕ್ರ ಬೇಸರದ ಧ್ವನಿ ಹೊರಡಿಸಿದ.

“ಇದಽಽ ನೋಡಪ ನಿರಾಶಾ ಅನ್ನುದು. ಶುಕ್ರ-ವಕ್ರ ಎಲ್ಲಾನೂ ಒಂದಽ ಥರಾ ಇರೂದಿಲ್ಲ ಸಕ್ರಣ್ಣ”

“ಬಡೂರು ಸಾಯೋದ್ರೊಳಗಽಽ ಶುಕ್ರ ಬಂದ್ರ ಚಲೋರಿ” ಎಂದ ಸಕ್ರ.

“ಕತ್ತಲಿನ್ಯಾಗ ಕುಂತವಂಗ ಹೊಸ ಸೂರ್ಯ ಕಾಣಿಸುದಿಲ್ಲ ಸಕ್ರಣ್ಣ. ಮೊದಲ ನಿನ್ನ ಎದ್ಯಾನ ಚಿಂತಿ ತಗದು ಹಾಕು. ಬೆಳಕಿನ ದಾರಿ ಹುಡುಕು. ತಗೋ ಈ ನೂರು ರೂಪಾಯಿ ತಂಗಿಗೆ ಕೊಡು. ಹುಡುಗರಿಗೆ ಏನಾರ ತಂದು ತಿನಿಸಲಿ. ಹಸಿವನ್ನು ಹತ್ತಿಕ್ಕಬಾರ್‍ದು. ಹಸಿದ ಹೊಟ್ಟೆ ಮರಮರ ಅಂದ್ರ ಜಗತ್ತು ಚೂರು ಚೂರು ಆಗತ್ತ. ರುಕ್ಕವ್ವ ನಾನು ಡಾಕ್ಟರಿಗೆ ಒಂದು ಚೀಟಿ ಬರ್‍ದು ಕೊಡ್ತಿನಿ. ಸರಕಾರಿ ದವಾಖಾನಿಗೆ ಮಗಳನ್ನು ಕರ್‍ಕೊಂಡು ಹೋಗಿ ತೋರ್‍ಸು. ಈಗ ನಿನ್ನ ಗಂಡನ್ನ ನನ್ನ ಕೂಡ ಕರ್‍ಕೊಂಡು ಹೋಗ್ತಿನಿ” ನಾಜೂಕಪ್ಪ ಮನ ಕರಗುವಂತೆ ಹೇಳಿದ.

“ಎಲ್ಲಿಗರಿಯಣ್ಣಾ?” ರುಕ್ಕಿ ಕೇಳಿದಳು.

“ಇವತ್ನಿಂದ ಇಲೆಕ್ಷನ್ ಪ್ರಚಾರ ಜೋರಾಗಬೇಕಾಗೇತಿ. ನಮ್ಮ ಪಾರ್ಟಿ ಲೀಡರು ಬರ್‍ತಾರ. ಈ ನಗರದಾಗ ಮತ್ತ ಸುತ್ತ ಮುತ್ತಲಿನ ಊರಾಗ ಹಗಲು-ರಾತ್ರಿ ಕಾರ್ಯಕ್ರಮ ನಡಿತಾವು. ಒಂದು ಟ್ರಕ್ ಮಂದಿನ್ನ ಕರ್‍ಕೊಂಡು ಹೋಗುವ ಜವಾಬ್ದಾರಿ ನನ್ನ ಮ್ಯಾಲೆ ಐತಿ. ಒಬ್ಬೊಬ್ಬ ಮನಿಷ್ಯಾಗ ದಿವಸಕ್ಕ ನೂರು ರೂಪಾಯಿ ಅಷ್ಟಲ್ಲದಽಽ ಊಟ, ಚಹ, ನಾಷ್ಟಾ ಬ್ಯಾರೇನೂ ಐತಿ”.

“ಅಲ್ಲಿ ಕೂಲಿ ಎನು ಮಾಡಬೇಕ್ರಿಯಣ್ಣ?” ಕೇಳಿದಳು ರುಕ್ಕಿ.

“ಕೂಲಿ-ನಾಲಿ ಏನೂ ಇಲ್ಲ. ಸುಮ್ಮನ ಕುಂತು ಭಾಷಣ ಕೇಳುದು. ನಡುನಡುಕ ಚಪ್ಪಾಳಗಿ ಹೊಡೆಯೂದು. ಆಮ್ಯಾಲೆ ಘೋಷಣಾ ಕೂಗುದು ಅಷ್ಟ…..” ಸಕ್ರ ಹಿಂದಿನ ಚುನಾವಣೆಗಳಲ್ಲಿನ ಅನುಭವವನ್ನು ನೆನಪು ಮಾಡಿಕೊಂಡು ಹೇಳಿದ.

“ಇಷ್ಟು ಹಗರು ಕೆಲಸಕ್ಕ ಅಷ್ಟು ರೊಕ್ಕ ಕೊಡ್ತಾರ ಅವರು?” ಕೌತುಕದಿಂದ ಕೇಳಿದಳು ರುಕ್ಕು.

“ರೊಕ್ಕಕ್ಕ ಕಿಮ್ಮತ್ತಿಲ್ಲಬೆ ತಂಗಿ. ಈಗ ನೀರಿನಂಗ ಚೆಲ್ಲತಾರ. ಆಮ್ಯಾಲೆ ಸಲಿಕಿಯಿಂದ ಬಳ್ಕೋತಾರ. ಇದೆಲ್ಲ ನಿಮ್ಗ ಅರ್ಥಾಗುದಿಲ್ಲ ಬಿಡ್ರಿ” ಎನ್ನುತ್ತ ಸಕ್ರನನ್ನು ಕರೆದುಕೊಂಡು ಅವಸರದಿಂದ ಹೊರಟ ನಾಜೂಕಪ್ಪ.

ಜನರನ್ನು ತುಂಬಿಕೊಂಡು ಟ್ರಕ್ಕು ಊರಿಂದೂರಿಗೆ ಚಲಿಸುತ್ತಲೇ ಇತ್ತು. ಬೆಳಗು ಮಧ್ಯಾಹ್ನವೊ, ಸಂಜೆ-ರಾತ್ರಿಯೊ ವೇದಿಕೆಯ ಮುಂದೆ ನೇತಾರರಿಗಾಗಿ ಕಾಯುತ್ತ ಜಯಕಾರ ಹಾಕುತ್ತ ಕುಳಿತಿರುತ್ತಿದ್ದ ಜನರಿಗೆ ತಿನ್ನಲು ತುಸು ಉಪ್ಪಿಟ್ಟು, ವಗ್ಗರಣೆಖಾರಾ ಸಿಕ್ಕುತ್ತಿತ್ತು. ಊಟವಂತೂ ಇಲ್ಲ. ಓಡುವ ಕುದುರೆಯ ಮುಂದೆ ಕೋಲು ಹಿಡಿದು, ಅದರ ತುದಿಗೆ ಹುಲ್ಲು ಕಟ್ಟಿದಂತೆ ಹಸಿದ ಜನಕ್ಕೆ ಮುಂದಿನೂರಿನಲ್ಲಿ ಊಟವೆಂದು ಹೇಳಿ ಕಾರ್ಯಕರ್ತರು ಅವರನ್ನು ಭಾಷಣ ಮುಗಿದ ಕೂಡಲೇ ಟ್ರಕ್ಕಿನಲ್ಲಿ ಕುರಿಗಳಂತೆ ತುಂಬಿ ಸಾಗಹಾಕುತ್ತಿದ್ದರು. ರಸ್ತೆಯ ಮಧ್ಯೆ ನೀರು ಕಂಡಲ್ಲಿ ಜಳಕ. ಎಲ್ಲೋ ಒಂದು ಕಡೆಗೆ ಉಪ್ಪಿಟ್ಟಿನ ಸಮಾರಾಧನೆ. ಕುಡಿಯಲು ಒಂದು ಕಪ್ಪು ಚಹ. ಎಲೆಯಡಿಕೆ ಜಗಿಯಲಾದರೆ, ಸೇದಲು ಬೀಡಿ. ಸಭೆಯಲ್ಲಿ ಗದ್ದಲವೆಬ್ಬಿಸಿ ಮಿಸುಕಾಡಿದರೆ ಕೈಗಳಿಗೆ ಬ್ರೆಡ್ಡಿನ ತುಂಡೋ, ನಾಲ್ಕಾರು ಬಿಸ್ಕೀಟು ಇಡಲಾಗುತ್ತಿತ್ತು. ಎರಡು ದಿನ ಅನ್ನ, ರೊಟ್ಟಿಯ ದರ್ಶನವೇ ಇಲ್ಲ. ಒಡಲ ಬ್ರಹ್ಮಾಂಡದ ಹಸಿವನ್ನು ಹತ್ತಿಕ್ಕಿಕೊಂಡ ಜನ ಕೈಗೆ ದೊರಕಬಹುದಾದ ಹಣದ ಲೆಕ್ಕಾಚಾರದಲ್ಲಿ ನೇತಾರರ ಭಾಷಣವನ್ನು ಆಲಿಸುತ್ತಿದ್ದರು.

ಧುರೀಣರ ಮಾತೆಂದರೆ ಮಾತು. ಸಭೆಗೆ ಸಭೆಯೇ ಬೆರಗಾಗುತ್ತಿತ್ತು. ಚಂದದ ಶಬ್ದಗಳು, ಪರಿಣಾಮಕಾರಿ ದೃಷ್ಟಾಂತಗಳು, ರೋಚಕಗೊಳಿಸುವ ಅಡ್ಡಕಥೆಗಳು, ನವರಸಗಳೆ ಹಾವಭಾವದಲ್ಲಿ ಪುಟಿಯುತ್ತಿದ್ದರೆ ಚಪ್ಪಾಳೆಯ ಮೇಲೆ ಚಪ್ಪಾಳೆ, ಕಗ್ಗತ್ತಲಿನಲ್ಲಿ ತಡಕಾಡುವರ ಎದುರು ಸೂರ್ಯನನ್ನು ಬೆಳಗಿಸುತ್ತೇವೆ ಎಂದರು. ಚಂದ್ರನ ಬೆಳದಿಂಗಳನ್ನು, ನಕ್ಷತ್ರಗಳ ನಗೆಯನ್ನು ಚೆಲ್ಲುತ್ತೇವೆ ಎಂದರು. ಹಸಿದ ಒಡಲಿಗೆ ಅಮೃತ ಹನಿಸುತ್ತೇವೆ. ಸ್ವರ್ಗದಲ್ಲಿ ತೇಲಿಸುತ್ತೇವೆ ಎಂದರು. ಅವರ ಭರವಸೆಯ ವರಸೆಗಳಿಂದ ಜನರು ಭ್ರಮಾಧೀನರಾಗಿ ಬಲೂನು ಉಬ್ಬಿದಂತೆ ಹಿಗ್ಗುತ್ತ ಚಪ್ಪಾಳೆ ತಟ್ಟುತ್ತ ಜಯವಾಗಲಿ ನಾಯಕರಿಗೆ…. ಎಂದು ಏರುಧ್ವನಿಯಲ್ಲಿ ಕೂಗುತ್ತಲೇ ಇದ್ದರು.

“ರೊಟ್ಟಿಯಿಂದ ನಮ್ಮ ಬದುಕು. ರೊಟ್ಟಿಯಿಂದ ಈ ದೇಶ. ಈ ಪ್ರಪಂಚ ಉಸಿರಾಡಿಸುವುದಽಽ ಈ ರೊಟ್ಟಿಯಿಂದ….!” ಧುರೀಣನೊಬ್ಬನ ಈ ಉದ್ಗಾರ ಸಭಿಕರನ್ನು ರೋಮಾಂಚನಗೊಳಿಸಿತು. ಎಲ್ಲೋ ಕಳೆದುಹೋದವನಂತೆ ಕುಳಿತಿದ್ದ ಸಕ್ರನ ಎದುರು ರೊಟ್ಟಿಯೇ ಕುಣಿಯತೊಡಗಿತ್ತು. ಅವನ ಎಡಕ್ಕೂ-ಬಲಕ್ಕೂ, ಮೇಲಕ್ಕೂ, ಕೆಳಕ್ಕೂ ರಾಶಿರಾಶಿ ರೊಟ್ಟಿ. ಜೋಳ, ಸಜ್ಜೆಯ ರೊಟ್ಟಿ, ಅಚ್ಚ ಬಿಳಿಯದು, ಅರಿಷಿಣ ಬಣ್ಣದ್ದು, ಎಳ್ಳು ಹಚ್ಚಿದ್ದು, ತೆಳ್ಳಗಿನದು, ದಪ್ಪನೆಯದು, ಚಿಕ್ಕ-ದೊಡ್ಡಗಾತ್ರದ್ದು. ಹಿಂಡು ಹಿಂಡಾಗಿ ಬಂದರು ಅಸಂಖ್ಯಾತ ಹಸಿದ ಮಂದಿ. ನೂಕಿ, ನುಗ್ಗಿ ರೊಟ್ಟಿಯನ್ನು ಕೈಗೆತ್ತಿಕೊಂಡರು. ಮುರಿದು ಬಾಯಿಗಿಟ್ಟು ಗಬಗಬನೆ ತಿನ್ನತೊಡಗಿದರು. ಸಕ್ರನ ಮಕ್ಕಳಂತೂ ಎರಡೂ ಕೈಗಳಲ್ಲಿ ರೊಟ್ಟಿ ಹಿಡಿದು ಕುಣಿದಾಡತೊಡಗಿದರು. ರೊಟ್ಟಿಯ ಹಬ್ಬದ ಸಡಗರ ರುಕ್ಕಿಯ ಮುಖವನ್ನು ಅರಳಿಸಿತ್ತು.

“ಧುರೀಣರಿಗೆ ಜಯವಾಗಲಿ, ಆಳುವ ಪ್ರಭುಗಳಿಗೆ ಜಯವಾಗಲಿ, ಭೋಲೋ ಭಾರತ ಮಾತಾಕೀ ಜಯ್….” ಆಕಾಶ ಭೇದಿಸುವಂತೆ ಕೂಗಿದ್ದರು ಜನ. ಸಕ್ರ ವಾಸ್ತವಕ್ಕೆ ಬಂದಿದ್ದ. ಐದು ದಿನಗಳ ಚುನಾವಣಾ ಪ್ರಚಾರ ಸಮಾರೋಪ ಕಂಡಿತು. ಊರು, ಹೆಂಡತಿ, ಮಕ್ಕಳನ್ನು ನೆನಪು ಮಾಡಿಕೊಂಡ ಜನ ಟ್ರಕ್ಕಿನ ಹತ್ತಿರ ಬಂದು ಸೇರಿದರು. ರಣಗುಡುವ ಸೂರ್ಯ ಅವರ ನೆತ್ತಿಯನ್ನು ಉರಿಸುತ್ತ, ಹಟ್ಟೆಗಿಳಿದು ಹಸಿವನ್ನು ಕೆರಳಿಸಿದ. ಅವರ ಕಣ್ಣು ನಾಜೂಕಪ್ಪನಿಗಾಗಿ ಹುಡುಕಾಡಿದವು. ಅವನು ಗೆಸ್ಟ್‌ಹೌಸಿನಲ್ಲಿ ಇದ್ದಾನೆಂದು ಯಾರೋ ಪಿಸುಗುಟ್ಟಿದರು. ಸಕ್ರನ ಹೆಜ್ಜೆಗಳು ಅತ್ತಕಡೆಗೆ ಚಲಿಸಿದವು. ಉಳಿದವರು ಅವನನ್ನು ಹಿಂಬಾಲಿಸಿಕೊಂಡು ಹೋದರು.

ಗೆಸ್ಟ್‌ಹೌಸಿನ ಹಿಂಬದಿಯಲ್ಲಿ ಹಾಕಿದ್ದ ಶಾಮಿಯಾನದಲ್ಲಿ ಹತ್ತಿಪ್ಪತ್ತು ಜನ ಕುಳಿತು ಮೆತ್ತಗೆ ಮಾತಾಡುತ್ತ ನಗುತ್ತ ವಿಸ್ಕಿ, ರಮ್ಮು ಹೀರುತ್ತ ಖುಷಿಯಾಗಿದ್ದರು. ನಾಜೂಕಪ್ಪ ಅವರೊಂದಿಗೆ ಬೆರೆತು ಹೋಗಿದ್ದ. ಒಂದು ಬದಿಗೆ ಬಿಳಿಬಟ್ಟೆ ಹೊದಿಸಿದ ದೊಡ್ಡ ಟೇಬಲ್ ಮೇಲೆ ಕಡಕ್ ರೊಟ್ಟಿ, ಪರೋಟಾ, ಚಿಕನ್, ಮಟನ್, ಫಿಶ್‌ಫ್ರಾಯ್, ಆಮ್ಲೇಟ್, ಮಸಾಲೆ ರೈಸ್ ಘಮಘಮಿಸುತ್ತಿದ್ದವು.

ಅದರ ಜಾಡು ಹಿಡಿದು ಒಳ ನುಗ್ಗಿ ಬಂದರು ಜನ. ಅವರ ಮುಂದೆ ಸಕ್ರ ಇದ್ದ. ಅರೆಬರೆ ನಶೆಯಲ್ಲಿದ್ದ ಶಾಮಿಯಾನ ಅವರನ್ನು ನೋಡಿ ತತ್ತರಿಸಿತು. ನಾಜೂಕಪ್ಪ ದಿಢೀರೆಂದು ಎದ್ದು ಬಂದು ಸಕ್ರನನ್ನು ದಬಾಯಿಸಿದ. ಮಹಾನ್ ನಾಯಕರ ಎದುರು ಅಗೌರವದಿಂದ ನಡೆದುಕೊಳ್ಳಬಾರದೆಂದು ಎಚ್ಚರಿಸಿದ. ಅವನ ತಗಡು ಮಾತುಗಳನ್ನು ಧಿಕ್ಕರಿಸಿ “ನಮ್ಗ ಊಟ ಬೇಕು, ರೊಕ್ಕ ಬೇಕು” ಎಂದು ಕೂಗಿದ ಸಕ್ರ. ಉಳಿದವರ ಅವಾಜು ಅದರೊಂದಿಗೆ ಸೇರಿಕೊಂಡಿತು. ಜನರನ್ನು ಅಲ್ಲಿಂದ ಪಲ್ಲಟಿಸಲು ನಾಜೂಕಪ್ಪನಿಂದ ಸಾಧ್ಯವಾಗಲಿಲ್ಲ. ಗೆಸ್ಟ್‌ಹೌಸಿನ ಕೆಲಸಗಾರರೊಂದಿಗೆ ಒಂದಿಬ್ಬರು ದಢೂತಿ ಕಾರ್ಯಕರ್ತರು ಜನರನ್ನು ಚದುರಿಸಲು ತಮ್ಮ ಬಲ ಪ್ರಯೋಗಿಸಿದ್ದು ನಿರ್ವೀರ್‍ಯವೆನಿಸಿತು. ಜಿಗುಟತನ ನರನಾಡಿ ತುಂಬಿಕೊಂಡಿತೋ ಎನ್ನುವಂತೆ ಸಕ್ರ ಅವರನ್ನು ಸೀಳಿಕೊಂಡು ಹೋಗಿ ರೊಟ್ಟಿಗೆ ಕೈಹಾಕಿದ. ಉಳಿದವರೂ ಅವನನ್ನು ಅನುಸರಿಸಿದರು.

ದಿಗಿಲುಗೊಂಡ ರಾಜಕೀಯ ಮಂದಿ ಆಕ್ರೋಶದಿಂದ “ಪೋಲಿಸರಿಗೆ ಫೋನ್ ಮಾಡ್ರಿ” ಎಂದರು. ಒಂದಿಬ್ಬರು ಜನರ ಕೈಯಲ್ಲಿದ್ದ ರೊಟ್ಟಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಸಕ್ರ ಅವರನ್ನು ದೂರಕ್ಕೆ ನೂಕಿ “ಹೊಟ್ತುಂಬ ಉಣ್ಣೂನು ಬರ್‍ರಿ” ಎಂದು ಆಹ್ವಾನಿಸಿದ. ರೊಟ್ಟಿ, ಪರೋಟಗಳ ಮೇಲೆ ಚಿಕನ್, ಮಟನ್, ಕೈಗೆ ಸಿಕ್ಕಿದ್ದನ್ನು ಬಡಿಸಿಕೊಂಡು ತಿನ್ನಲು ಶುರುವಿಟ್ಟುಕೊಂಡರು ಜನ. “ನಾಚಿಕಿ ಇಲ್ದವರ, ಭಿಕಾರಿ ಹಾಂಗ ಹಿಂಗ್ಯಾಕ ಮಾಡಾಕ ಹತ್ತೀರಿ” ನಾಜೂಕಪ್ಪ ಕೆಟ್ಟ ಸ್ವರದಲ್ಲಿ ಕೂಗಿಕೊಂಡ. ಅವನ ಬೈಗಳು ತಮಗೆ ಸಂಬಂಧಿಸಿದ್ದು ಅಲ್ಲವೆಂಬಂತೆ, ಅಂತ ಆಹಾರವನ್ನು ಎಂದಿಗೂ ಕಂಡಿಲ್ಲವೋ ಎಂಬಂತೆ, ತಮ್ಮದು ಅನಂತಕಾಲದ ಹಸಿವು ಎನ್ನುವಂತೆ ಊಟದಲ್ಲಿ ಮೈಮರೆತಿದ್ದರು ಜನ. ನಾಜೂಕಪ್ಪನ ಹತ್ತಿರ ಬಂದ ಸಕ್ರ `ಅವರು ಬಾಳಾ ಹಸದಾರ ನಾಜೂಕಪ್ಪ. ಇಲ್ಲೀತನಕ ತಡಕೊಂಡಿದ್ದಽಽ ಹೆಚ್ಚನ್ನು….” ಎಂದ.

ಪೋಲೀಸ್ ವ್ಯಾನ್ ಬಂದು ನಿಂತಿತು. ಹತ್ತಾರು ಜನ ಪೋಲಿಸರು ಮುಖ ಧುಮುಗುಡಿಸುತ್ತ ವ್ಯಾನ್ ಇಳಿದರು. ಜೀಪಿನಿಂದಿಳಿದ ಡಿವೈಎಸ್ಪಿ ತ್ವರಿತವಾಗಿ ಶಾಮಿಯಾನದೊಳಗೆ ನುಗ್ಗಿಬಂದ. ನಿರ್ಭೀತರಾಗಿಯೇ ಇದ್ದರು ಜನ. “ಒದ್ದು ಎಳಕೊಂಡು ನಡೀರಿ ಈ ಹರಾಮ್‌ಖೋರ ಮಕ್ಕಳನ್ನ” ಮಾಜಿ ಮಂತ್ರಿಯೊಬ್ಬರು ವಿಕಾರವಾಗಿ ಕೂಗಿದರು. “ನಡೀಲೆ ಬದ್ಮಾಶ್, ಹಲ್ಕಾನನ್ಮಗನೆ…..” ಎಂದು ತನ್ನ ಸಂಸ್ಕಾರ ನಾಲಗೆಯಿಂದ ಅನಾಗರಿಕರ ಭಾಷೆ ಬಳಸುತ್ತ ರಾಕ್ಷಸಿ ಕೈಗಳಿಂದ ಒಬ್ಬೊಬ್ಬನ ಚಂಡಿಗೆ ಕೈಹಾಕಿ ವೀರಾವೇಶ ಪ್ರದರ್ಶಿಸಿದ ಡಿವೈಎಸ್ಪಿ. “ಹಸಿದೋರು ಯಾರಿಗೂ ಅಂಜುದಿಲ್ಲ ಸಾಹೇಬರ” ಸಕ್ರ ಧೈರ್ಯದಿಂದ ಹೇಳಿದ.

“ದಂಗಾ ನಡಸ್ತಿಯೇನಲೆ ಮಿಂಡರಿಗುಟ್ಟಿದವನೆ. ಓಂದಽಽ ಒದ್ರ ನೆಲಾ ಬಿಟ್ಟು ಏಳಂಗಿಲ್ಲ ನೀನು” ಡಿವೈಎಸ್ಪಿ ಕೆಂಡದ ಕಣ್ಣಿಂದ ಸಕ್ರನನ್ನು ದಿಟ್ಟಿಸಿದ.

“ನಾವು ಬದ್ಮಾಶರು, ಪುಂಡರು, ಮಿಂಡರಿಗುಟ್ಟಿದವರು ಅಲ್ರಿ ಸಾಹೇಬರ. ಬಡೂರು. ಕೂಲಿಜನ. ನಿಮ್ಹಂಗ ಮನಿಷ್ಯಾರು. ಈ ರಾಜಕೀಯ ಮಂದಿ ನಮ್ಮನ್ನ ದೇವರಂತ ಕರೀತಾರ. ದೊರೆಗಳು ಅಂತಾರ. ನಮ್ಮ ಸೇವಾ ಮಾಡ್ತಿವಂತಾರ; ಈಗ ನೋಡಿದ್ರ ಉಪವಾಸ ಕೊಲ್ಲಾಕ ಹತ್ತ್ಯಾರ” ಕಠೋರ ಸತ್ಯವನ್ನು ಹೇಳಿದ ಸಕ್ರ.

“ಇಂವಾ ಸುಳ್ಳು ಹೇಳಾಕ ಹತ್ತ್ಯಾನ. ಇವರ್‍ಯಾರೋ ನಮ್ಗ ಗೊತ್ತಿಲ್ಲ, ಒಮ್ಮೇಲೆ ನುಗ್ಗಿ ಬಂದು ಇಲ್ಲಿ ದಾಂಧಲೆ ನಡಿಸ್ಯಾರ” ಅಪ್ಪಟ ಸುಳ್ಳು ಹೇಳದ ಒಬ್ಬ. ಆ ಮಾತು ಕೇಳಿಯೂ ಕೇಳದಂತೆ ನಿಂತಿದ್ದ ನಾಜೂಕಪ್ಪ. ಸಹನೆಯ ಕಟ್ಟೆಯೊಡೆದವನಂತೆ ಡಿವೈಎಸ್ಪಿ ಸಕ್ರನ ಎದೆಯ ಮೇಲೆನ ಅಂಗಿ ಹಿಡಿದು ಜೋರಾಗಿ ಎಳೆದ. ಸಕ್ರ ಗಟ್ಟಿಯಾಗಿ “ಸಾಹೇಬರ ಈ ರೊಟ್ಟಿ, ಅನ್ನದ ಮ್ಯಾಲೆ ನಮ್ಮ ಹಕ್ಕು ಐತಿ” ಎಂದ. ಅವನನ್ನು ವ್ಯಾನಿನತ್ತ ದೂಡಿದ ಡಿವೈಎಸ್ಪಿ “ಜೈಲಿನ್ಯಾಗ ಚಲೋತಂಗ ತಿನಸ್ತೀನಿ ನಡಿ ಮಗನ” ಎಂದ.

ಜನರ ರಕ್ತ ಕಳಕಳ ಅಂದಿತು. “ಪೋಲಿಸರ ದಬ್ಬಾಳಿಕೆಗೆ ಧಿಕ್ಕಾರ…. ಬಡವರ ಹೊಟ್ಟೆ ಮ್ಯಾಲೆ ಹೊಡೆವ ಪುಢಾರಿ ರಾಜಕಾರಣಿಗಳಿಗೆ ಧಿಕ್ಕಾರ” ಒಕ್ಕೊರಲಿದರು ಅವರು. ಸಕ್ರ “ಹೋರಾಟ….. ಹೋರಾಟ…..” ಎಂದು ಪ್ರತಿಕ್ರಿಯೆಯ ಧ್ವನಿ ಮೊಳಗಿಸುತ್ತ ಎಲ್ಲರೂ ವ್ಯಾನೊಳಗೆ ತೂರಿಕೊಂಡರು. ಕೂಗು ಅಬ್ಬರಗೊಳ್ಳುತ್ತಲೇ ಇತ್ತು. ಅದು ಸಾಮಾನ್ಯವಲ್ಲ ಅನಿಸತೊಡಗಿತ್ತು ನಾಜೂಕಪ್ಪನಿಗೆ. ಭೂಮಿ ಬಾಯಿ ಬಿಡುವುದೋ ಆಕಾಶ ಛಿದ್ರಗೊಳ್ಳುವುದೋ, ವ್ಯಾನ್ ಸ್ಪೋಟಗೊಳ್ಳುವುದೋ ಎಂದು ದಿಗಿಲುಗೊಳಗಾದ ಅವನಿಗೆ ಸಕ್ರನ ವರ್ತನೆ ವಿಚಿತ್ರವಾಗಿ ತೋರಿತ್ತು. ಏಕಾಏಕಿ ಸಕ್ರ ಹೀಗೇಕೆ ಬದಲಾದನೆಂದು ತಲೆಕೆದರಿಕೊಂಡ ನಾಜೂಕಪ್ಪ.

ಸಕ್ರ ದೊಡ್ಡ ಧ್ವನಿಯಲ್ಲಿ “ರೊಟ್ಟಿಗಾಗಿ ಜೇಲಾಗ್ಲಿ, ಬೂಟಿನ ಒದೆತ, ಲಾಟಿಯ ಹೊಡೆತ ಬೀಳ್ಲಿ. ಬಂದೂಕಿನ ಗುಂಡು ಎದಿಯಾಗ ಹೋಗ್ಲಿ” ಎನ್ನುತ್ತಿದ್ದ. ಜನರು ತತ್‌ಕ್ಷಣ ಅವನ ಮಾತುಗಳನ್ನು ಪ್ರತಿಧ್ವನಿಸುತ್ತಿದ್ದರು.

ಸಕ್ರ ನುರಿತ ಬಂಡಾಯಗಾರನಂತೆ ಗೋಚರಿಸಿದ ನಾಜೂಕಪ್ಪನಿಗೆ. ತಂಗಾಳಿ ಬಿರುಗಾಳಿಯಾಗುವುದೆಂದರೇನು? ಮಂಜುಗಡ್ಡೆ ಉರಿದ ಕೆಂಡದಂತೆ ಪ್ರಜ್ವಲಿಸುವುದೆಂದರೇನು? ಅವನ ತಾಕತ್ತಿನ ಹಿಂದೆ ವಿರೋಧ ಪಕ್ಷದವರ ಕೈವಾಡವೇನಾದರೂ ಇದ್ದಿರಬಹುದೆ? ಗುಮಾನಿ ನಾಜೂಕಪ್ಪನನ್ನು ತೀವ್ರವಾಗಿ ಆವರಿಸಿಕೊಂಡಿತು. ಸಕ್ರನದು ಹಸಿವಿನ ಸಿಟ್ಟು ಎಂದು ಅವನಿಗಾಗಲಿ, ರಾಜಕೀಯ ಮುತ್ಸದ್ದಿಗಳಿಗಾಗಲಿ ಹೊಳೆಯಲೇ ಇಲ್ಲ.

ಪ್ರತಿಭಟನೆಗಾರರ ಕೆಚ್ಚು ಪ್ರತಿಕ್ಷಣಗಳ ಮೈತುಂಬಿಕೊಳ್ಳತೊಡಗಿತ್ತು. ನಾಜೂಕಪ್ಪನ ಸೂಕ್ಷ್ಮಗಳ ಜೀವಿದ್ರವ್ಯ ಬತ್ತಿದಂತಾಗಿದ್ದರೆ, ರಾಜಕಾರಣಿಗಳ ತಂತ್ರಗಳು ನಪುಂಸಕವೆನಿಸಿದವು. ಕೂಲಿಗಳನ್ನು ಕುರಿಗಳೆಂದು ತಿಳಿದಿದ್ದೆ ತಪ್ಪಾಯಿತೆಂದುಕೊಂಡ ನಾಜೂಕಪ್ಪ.

ವ್ಯಾನಿನ ಒಳಗೂ ಹೊರಗೂ ತುಂಬಿ ತುಳುಕಾಡತೊಡಗಿದ ಜನ ಅಪಾಯಕಾರಿಗಳಂತೆ ಕಂಡು ಬಂದರು. ಅವರಿಗೆ ಬುದ್ಧಿ ಕಲಿಸಲು ಯೋಚಿಸಿದ ಡಿವೈಎಸ್ಪಿ ಸೊಂಟದಲ್ಲಿನ ಪಿಸ್ತೂಲು ತೆಗೆದು, ಆಕಾಶಕ್ಕೆ ಕೈಯೆತ್ತಿ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ. ನಾಜೂಕಪ್ಪನ ಎದೆಗುಂಡಿಗೆ ಝಲ್ಲೆಂದಿತು. ರಾಜಕೀಯ ಮಂದಿಯ ನಶೆ ಜರ್‍ರನೆ ಪಾದಕ್ಕಿಳಿಯಿತು.

“ಗುಂಡು ಹೊಡೆವ ಪುಂಡರಿಗೆ ಮುರ್ದಾಬಾದ್…….” ಜನರ ಸಮೂಹದಿಂದ ಸಿಡಿದು ಬಂದಿತು ಒಂದು ಧ್ವನಿ. “ಒಬ್ಬೊಬ್ಬರ ಎದಿಗುಂಡಿಗಿ ಒಡೆದು ಹಾಕ್ತೀನಿ” ತಲೆಕೆಟ್ಟವರಂತೆ ಚೀತ್ಕರಿಸಿದ ಡಿವೈಎಸ್ಪಿ. ಚುನಾವಣೆ ಹೊಸ್ತಿಲಲ್ಲಿ ಅಮಾಯಕರ ಹೆಣ ಉರುಳಿದರೆ ಮತದಾರರು ತಮ್ಮ ಪಕ್ಷದ ಗೋರಿ ಕಟ್ಟುತ್ತಾರೆ. ಅಧಿಕಾರ ದಕ್ಕಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ವಿರೋಧ ಪಕ್ಷದವರಿಗೆ ತಾವೇ ಈ ಮೂಲಕ ರತ್ನಗಂಬಳಿಯನ್ನು ಹಾಸಿಕೊಟ್ಟಂತಾಗುತ್ತದೆ ಎಂದು ಮಾಜಿ ಶಾಸಕರೊಬ್ಬರು ಕಳವಳಿಸಿದರು. ಜಾಗೃತರಾದ ಮಾಜಿ ಸಚಿವರು ಈ ಜನರನ್ನು ನಾವು ಸಂಭಾಳಸ್ತೀವಿ. ನೀವು ವಾಪಸ್ ಹೋಗಿ ಬಿಡ್ರಿ” ಎಂದು ಡಿವೈಎಸ್ಪಿಗೆ ಹೇಳಿ, ವ್ಯಾನಿನಿಂದ ಸಕ್ರನನ್ನು ಕೆಳಗಿಳಿಸಿ “ನಮ್ಮಿಂದ ಸ್ವಲ್ಪ ಎಡವಟ್ಟಾತು ಸಕ್ರಣ್ಣ” ಎನ್ನುತ್ತ ಅವನ ಹೆಗಲ ಮೇಲೆ ಕೈಹಾಕಿಕೊಂಡು ಶಾಮಿಯಾನದತ್ತ ನಡೆದರು.

“ಈ ಪಕ್ಷ ನಿಮ್ಮದು. ನಾವೂ ನಿಮ್ಮವರು ಸಕ್ರಣ್ಣ.” ಪಕ್ಷದ ಕಾರ್ಯದರ್ಶಿ ದೇಶಾವರಿ ನಗೆಯಾಡುತ್ತ ಹೇಳಿದರು.

“ಇದು ಸತ್ಯ ಅಹಿಂಸೆಯ ಪಕ್ಷ. ಗಾಂಧೀಜಿ ಸಿದ್ಧಾಂತವನ್ನು ಒಪ್ಕೊಂಡೋರು ನಾವು. ನಿಮ್ಮಂಥ ಬಡವರು, ಕೂಲಿಕಾರರು ನಮ್ಮ ಪಕ್ಷದ ಜೀವಾಳ. ನೀವಿಲ್ಲ ಅಂದ್ರ ನಾವ್ಯಾವ ಗಿಡದ ತಪ್ಪಲೊ ಸಕ್ರಣ್ಣ. ಭಗವಂತ ಈ ಭೂಮಿ ಸೃಷ್ಟಿ ಮಾಡದಾ ನಿಮ್ಮಂಥ ಒಳ್ಳೆ ಮನುಷ್ಯಾರನ ಸೃಷ್ಟಿ ಮಾಡದಾ. ನೀವು ನಮ್ಗ ಸ್ಥಾನ-ಮಾನ ಕೊಟ್ರಿ. ನಿಮ್ಮ ಋಣದಾಗ ಇದ್ದೋರು ನಾವು ನಮ್ಮ ತಪ್ಪು ಒಪ್ಕೊಂತೀವಿ. ಎಲ್ಲಾರ್‍ನೂ ಶಾಮಿಯಾನದೊಳಗೆ ಕರ್‍ಕೊಂಡು ಬಾ ನೀನು, ಹೊಟ್ಟೆ ತುಂಬ ಊಟ ಮಾಡ್ರಿ. ನಿಮ್ಗ ಕೈ ತುಂಬ ರೊಕ್ಕಾ ಕೊಟ್ಟು, ಸುರಕ್ಷಿತ ನಿಮ್ಮೂರಿಗೆ ಕಳಿಸಿ ಕೊಡ್ತೀವಿ” ಹೊಟ್ಟೆಯಲ್ಲಿನ ಹರಳು ಕರಗುಂತೆ ಮಾತಾಡಿದ ಮತ್ತೊಬ್ಬ ಧುರೀಣ.

ಊರಸವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುವ ರಾಜಕಾರಣಿಗಳ ರೀತಿಗೆ ತತ್ತರಗೊಂಡ ಡಿವೈಎಸ್ಪಿ ಕೂಡಲೇ ಜೀಪೇರಿಕೊಂಡು ಹೋದ. ಅವನ ಹಿಂದೆಯೇ ಪೋಲೀಸ್ ವ್ಯಾನು ತೆವಳುತ್ತ ಸಾಗಿತು. ನಾಜೂಕಪ್ಪನಂತೂ ತನ್ನೆರಡೂ ಹಸ್ತಗಳನ್ನು ಫೆವಿಕಾಲಿನಿಂದ ಭದ್ರಪಡಿಸಿಕೊಂಡಂತೆ ಸಕ್ರನ ಎದುರಲ್ಲಿ ಮುಗಿದುಕೊಂಡೆ ನಿಂತಿದ್ದ.

ನೆರೆದ ಜನರಲ್ಲಿ ಒಂದಿಬ್ಬರು ಸಕ್ರನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು. `ಸಕ್ರಣ್ಣನಿಗೆ ಜಯವಾಗಲಿ’ ಹರ್ಷೋದ್ಗಾರ ಮುಗಿಲು ಮುಟ್ಟಿತು. ವಿವಶರಾಗಿ ನಿಂತಿದ್ದ ಶಾಸನಾಧೀಶರಿಗೆ ಶಾಮಿಯಾನದ ಎತ್ತರಕ್ಕೇರಿದ ಸಕ್ರನ ಕಾಲುಗಳು ವಾಮನನ ಪಾದಗಳಂತೆ ಕಂಡವು.

***

 

ಕೀವರ್ಡ್ಸ್: ಫೆವಿಕಾಲ್, ಊಸರವವಳ್ಳಿ, ರಾಜಕಾರಣಿ, ಗುಡಿಸಲು, ಕೂಲಿ,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂಥಾ ನಗಿ ಬಂತೋ ಎನಗೆ
Next post ನಮ್ಮನಿಮ್ಮಗಾಗದು

ಸಣ್ಣ ಕತೆ

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…