ಟೋಪಿ ಮಾರುತಿ

ಟೋಪಿ ಮಾರುತಿ

“ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?” ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ.

“ಥೂ ಗುಬ್ಬಿ, ಮಲ್ಲಾಡದಾಗ ನಿನಗಿನ್ನೂ ಮಳೀನ ಆಗಿಲ್ಲ! ಸುಳ್ಳಽ ಇಲ್ಲಿ ಗೂಡು ಮಾಡಿಕೊಂಡು ನನ್ನ ತಲೀಮ್ಯಾಲ ಹಳ್ಳು ಹಾಕ್ತೀ! ರಂಡೆ…ದ್ದು!”

ಬೇಸಿಗೆಯ ರಣರಣ ಬಿಸಿಲು, ಭಾವಿಯ ಮೇಲೆ ಎಂಥ ನೆರಳೂ ಇಲ್ಲ. ಅವನು ಹಾಗೆಯೇ ಕೊಡವನ್ನು ಜಗ್ಗುತ್ತಿರುತ್ತಾನೆ. ಒಂದು ಕೊಡ ಮೇಲೆ ಬರಬೇಕಾದರೆ ಅವನಿಗೆ ಒಂದು ತಾಸಾದರೂ ಹತ್ತುತ್ತದೆ.

“ಏ ಹಣಮಾ, ಏನು ನಿನ್ನ ನೀರೋ? ಒಂದು ದಿನ ಭಾವ್ಯಾಗ ಬಿದ್ದು ಸತ್ತರೆ ಸಾಯಬಾರ್‍ದ! ನಿನ್ನ ಕೂಳಿನ ಸಲುವಾಗಿ ನಮ್ಮ ಕೆಲಸೆಲ್ಲ ಹಾಂಗೆಽ ಬಿದ್ದಾವ.” ಎಂದ ಅಡಿಗೆಯ ಮನೆಯಿಂದ ಕೇಳಿಸುತ್ತದೆ.

ಹನುಮಂತನಿಗೆ ಆಗ ಎಚ್ಚರಿಕೆ. ಒಂದು ಕೈಯಲ್ಲಿ ಒಂದು ಕೊಡವನ್ನೂ ಇನ್ನೊಂದು ಕೈಯಲ್ಲಿ ಇನ್ನೊಂದನ್ನೂ ಹಿಡಿದುಕೊಂಡು ಬೈಯುತ್ತ, ಏನೋ ವಟಗುಡುತ್ತ ಭಾವಿಯನ್ನು ಬಿಡುತ್ತಾನೆ.

ಹಣಮಂತನಿಗೆ ಬೇಗನೆ ಊಟ ಮಾಡುವುದು ಗೊತ್ತೇ ಇರಲಿಲ್ಲ. ಬೆಳಗಿನಲ್ಲಿ ಆರುಗಂಟೆಗೆ ಎದ್ದವನು ಮಧ್ಯಾಹ್ನ ಎರಡು ಗಂಟೆಯಾದರೂ ಅವನ ಕೆಲಸಗಳೇ ತೀರುತ್ತಿರಲಿಲ್ಲ. ಮುಂಜಾನೆ ಎದ್ದು ಉಧೋ ಲಕ್ಷ್ಮಣ ಎಂದು ಎರಡು ಮೂರು ಮೈಲು ದೂರವಿರುವ ಮಾರುತಿಯ ಗುಡಿಗೆ ಹೋಗಿಬರಲು ಅವನೆಂದೂ ತಪ್ಪುತ್ತಿರಲಿಲ್ಲ. ಮಾರುತಿಯ ಅಂಗಾರವನ್ನಿಷ್ಟು ಹಣೆಗೆ ಬಡಿದು ಕೊಂಡರೆ ಅವನಿಗೆ ದೇವರ ಮೇಲಿನ ಭಕ್ತಿಯನ್ನು ತೋರಿದ ತೃಪ್ತಿಯಾಗುತ್ತಿರಲಿಲ್ಲ. ಮನೆಯ ಹಿತ್ತಿಲದಲ್ಲಿರುವ ತುಳಸೀ ವೃಂದಾವನದ ಸುತ್ತು ಕನಿಷ್ಟ ಪಕ್ಷ ೮-೧೦ ಸಲವಾದರೂ ತಿರುಗುತ್ತಿದ್ದು, ಆ ಮೇಲೆ ಅಲ್ಲಿಯ ಮೃತ್ರಿಕೆಯನ್ನು ಹಣೆಗೆ ಬಡಿದುಕೊಳ್ಳದೆ ಅವನು ಎಂದೆಂದಿಗೂ ವೃಂದಾವನವನ್ನು ಬಿಟ್ಟು ಆಗಲುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನೇಸರನು ನೆತ್ತಿಯ ಮೇಲೆ ಬರುವ ವೇಳೆಯಾಗುತ್ತಿತ್ತು. ಮನೆಯಲ್ಲಿಯ ಸಣ್ಣವರೂ ದೊಡ್ಡವರೂ ಅವನನ್ನು ಬೈದೂ ಬೈದೂ ನೀರು ಜಗ್ಗಲು ಹೇಳುತ್ತಿದ್ದರು. ಹಣಮಂತ ಬಾವಿಯ ಮೇಲೆ ನಿಂತುಕೊಂಡರೆ ತೀರಿತು. ಅವನ ಪಾದ ನೀರಿನಲ್ಲಿ ಇನ್ನೂ ಇದ್ದೂ ಕಾಲೆಲ್ಲ ಸೆಲೆತರೂ ಅಲ್ಲಿ ಕಮಲದ ಬಳ್ಳಿ ಬೆಳೆದರೂ ಅವನಿಗೆ ಎಚ್ಚರಿಕೆಯಿರುತ್ತಿರಲಿಲ್ಲ.

ತನ್ನ ತಂದೆ- ತಾಯಿ ಎಲ್ಲಿರುವರು ? ಅವರ ಹೆಸರೇನು ? ಇದೇನೂ ಹಣಮಂತನಿಗೆ ಗೊತ್ತಿರಲಿಲ್ಲ. ನಿನ್ನ ತಂದೆಯ ಹೆಸರೇನೆಂದು ಕೇಳಿದರೆ ಸಣ್ಣ ಹುಡುಗರ ಹಾಗೆ ‘ತಂದೆ’ ಎಂದು ಹೇಳುತ್ತಾನೆ. ತಾಯಿಯ ಹೆಸರನ್ನು ಹೇಳುವುದೂ ಹಾಗೆಯೇ. ಅವನು ಚಿಕ್ಕವನಿರುವಾಗಲೇ ಅನಾಥನಾಗಿ ನಮ್ಮ ಮನೆಯಲ್ಲಿಯೇ ವಾಸವಾಗಿದ್ದಾನೆ. ನನ್ನ ತಂದೆಗೂ ಅವನ ಸಂಪೂರ್ಣ ಪರಿಚಯವಿರಲಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿ ಅವನ ಪರಂಪರೆ ಬಹಳ ಹಿಂದಿನದು. ತಂದೆಯ ಕಾಲದಲ್ಲಿಯೇ ಅವನು ನನ್ನ ಮನೆಗೆ ಊಳಿಗಕ್ಕೆ ಬಂದು ಇನ್ನೂ ಇಲ್ಲಿಯೇ ನೆಲೆಸಿದ. ವರುಷಗಳುಗುಳಿದಂತೆ ಹಣಮಂತನಿಗೂ ತನ್ನ ಹಳೆಯ ದಿನಗಳ ನೆನಪು ಹಾರಿ ಹೋಗಿದೆ. ಏನೋ ಅಲ್ಪ ಸ್ವಲ್ಪ ಸುದ್ದಿ ಅವನು ಹೇಳುತ್ತಾನೆ.

ಹಣಮಂತನಿಗೆ ಇದೀಗ ಎಂಬತ್ತು ವರುಷ ಅವನು ಯಾವಾಗಲೂ ಮುದುಕನಿದ್ದಂತೆ ನನಗೆನಿಸುತ್ತದೆ. ಏಕೆಂದರೆ ಅವನು ಚಿಕ್ಕವನಿದ್ದುದು ನನಗೆ ಗೊತ್ತೇ ಇಲ್ಲ. ಎಂಬತ್ತು ವರುಷ ಬಾಳಿನಲ್ಲಿ ಬೆಂದು ಅವನ ಮೈದೊಗಲು ಮುದುಡಿ ಹೋಗಿದೆ. ಬೆನ್ನು ಬಾಗಿದೆ. ಕಣ್ಣು ಒಳಸೇರಿ ನೆತ್ತಿಯನ್ನು ಮುಟ್ಟುವಂತೆ ತೋರುತ್ತದೆ. ಹುಟ್ಟಿದಾಗಲೂ ಅವನು ಹೀಗೆಯೇ ಇರಬೇಕೇ? ಅವನನ್ನು ನಾನು ನೋಡುತ್ತಿದ್ದುದು ಇದೇ ರೂಪದಲ್ಲಿಯೇ ಅವನನ್ನು ಕಲ್ಪಿಸುವುದು ಯಾವಾಗಲೂ ಇದೇ ಆಕಾರದಲ್ಲಿಯೇ.

ನನಗೂ ಹಣಮನಿಗೂ ವಿಶೇಷವಾದ ಪರಿಚಯ. ನಾನು ಓದುವ ಕೋಣೆಯ ಬಳಿಯಲ್ಲಿಯೇ ಸಾಮಾನಿನ ಸ್ಥಳ. ಎಪ್ಪತ್ತು ವರುಷ ನಮ್ಮ ಮನೆಯಲ್ಲಿದ್ದರೂ ಅವನಿಗೇನು ಪ್ರತ್ಯೇಕ ಕೋಣೆಯಾಗಲೀ ಕಪಾಟಾಗಲಿ ಇರಲಿಲ್ಲ. ಅವನ ಸಾಮಾನುಗಳೂ ವಿಶೇಷವಾಗಿರಲಿಲ್ಲ. ಯಾವುದೋ ಹಳೆಯ ಟ್ರಂಕು ಮಾತ್ರವಿತ್ತು. ಅದರಲ್ಲಿ ಅವನೇನು ಇಡುತ್ತಿದ್ದನೋ ತಿಳಿಯುವ ಹಾಗಿಲ್ಲ. ನಾವು ಯಾರಾದರೂ ಅದರ ಬಳಿ ಸಾರಿದರೆ ಅವನಿಗೆ ಎಲ್ಲಿಲ್ಲದ ಸಿಟ್ಟು.

ಹಣಮಂತನಿಗೆ ಮಡಿ-ಮೈಲಿಗೆಗಳ ಹೌಸು ಬಹಳ, ನೇಮ-ನಿತ್ಯಗಳು ನಿತ್ಯವೂ ಆಗದಿದ್ದರೆ ಅವನಿಗೆ ಬಹಳ ಸಂತಾಪ. ಹಬ್ಬ ಶ್ರಾದ್ಧದ ದಿನಗಳನ್ನು ಎಂದಿಗೂ ಮರೆಯುವ ಹಾಗಿಲ್ಲ. ತನ್ನ ತಂದೆ ಸತ್ತ ತಾರೀಖನ್ನು ನಮ್ಮ ತಂದೆಯ ಅಜ್ಜನವರು ಹೇಳಿಕೊಟ್ಟಿದ್ದರಂತೆ. ಅದನ್ನು ತನ್ನ ಮನದಲ್ಲಿ ಮೂಡಿಸಿಕೊಂಡಿದ್ದ. ಶ್ರಾದ್ಧದ ದಿನ ಅವನ ಕಡೆಯಿಂದ ಉಂಡಿಗಳನ್ನು ಸೆಳೆಯುವದು ನಮ್ಮ ರೂಢಿ. ಹಣಮಂತನು ಶ್ರಾದ್ಧ ಮಾಡಿಸುವನೆಂದರೆ ಅಂದು ನಮಗೆಲ್ಲ ಹಬ್ಬ. ಬೆಳಗಿನಿಂದ ಊಟದ ಹೊತ್ತಿನ ವರೆಗೆ ಸಂಪೂರ್ಣ ಏಕಾದಶಿ. ಹಬ್ಬದದಿನಗಳಲ್ಲಿ ನಾವು ಸುದಾಮನಂತೆ ಇದ್ದರೂ ಸಹ ಹಣಮಂತನು ಮಾಡಿಸಿದ ಶ್ರಾದ್ದದ ದಿನಗಳಲ್ಲಿ ನಾವು ಪಕ್ಕಾ ಸುರಪುರದ ಆಚಾರ್ಯರಾಗಿ ಬಿಡುತ್ತಿದ್ದೆವು. ಪಾಪ ಬಡವ! ಆದರೆ ನಮಗೆಲ್ಲಿ ಅದರ ಎಚ್ಚರಿಕೆ? ಉಂಡಿ ತಿನ್ನುವುದರಲ್ಲಿ ಮೇಲಾಟ ನಡೆಯುತ್ತಿತ್ತು.

ಹಣಮಂತನು ಹಜಾಮತಿಯನ್ನು ಮಾಡಿಸಿಕೊಂಡರೆ ಸುಮ್ಮನೆ ಯಾವುದಾದರೊಂದು ಕೊಂಡದಲ್ಲಾಗಲೀ ಕೆರೆಯಲ್ಲಾಗಲೀ ಮೈ ಮುಳುಗಿಸಿಕೊಂಡು ಶುದ್ಧವಾಗಿ ಬರುತ್ತಿರಲಿಲ್ಲ. ಅವನಿಗೆ ಅಂದು ಬಿಸಿನೀರಾಗಬೇಕು. ಅಬ್ಬಾ! ಅದೆಂಥ ಶ್ರೀಮಂತತನ! ಅಂದು ಅವನಿಗೆ ಎಣ್ಣೆ ಶೀಗೇಕಾಯಿ ಬೇಕು. ಎರಡು ಮೂರು ಬಕೀಟು ನೀರಾದರೂ ಅವನ ಮಡಿವಂತಿಕೆಗೆ ಸಾಕಾಗುತ್ತಿರಲಿಲ್ಲ. ಇಂಥ ಸೌಕರ್ಯ ಆಳಾಗುವವನಿಗೆ ಹೇಗೆ ದೊರೆಯಬೇಕು ? ಇದಕ್ಕಾಗಿ ಅವನು ಹುಡುಗರ ವಶೀಲಿ ಸಂಪಾದಿಸಿದ್ದ. ಅವನ ಮುಂದೆ ಹಾಯ್ದು ಹೋಗುವ ಪ್ರತಿಯೊಬ್ಬ ಹುಡುಗನನ್ನು ಭಿಕ್ಷುಕರಿಗಿಂತ ಕಡೆಯಾಗಿ ಅತ್ಯಂತ ಆಳವಾದ ಕನಿಕರದ ಉದ್ಗಾರದಿಂದ ಈಗ ಕಾಲು ಬೀಳುವನೋ ಅನ್ನುವಂತೆ ಮಾತನಾಡಿಸುತ್ತಿದ್ದ. ಅವನ ದೈನ್ಯದುಂಬಿದ ಧ್ವನಿಗೆ ಎಲ್ಲಿಯೂ ಮನ್ನಣೆ ದೊರೆಯುತ್ತಿರಲಿಲ್ಲ. ಕೊನೆಗೆ ನನ್ನ ಕಡೆಗೆ ಬರುವುದು ನಿಶ್ಚಿತ. “ಅಪ್ಪ, ಶ್ಯಾಣ್ಯಾ ಈ ವರುಷ ೧ನೇ ನಂಬರ ಬರ್‍ತೀ ನೀನು” ಎಂದು ನನ್ನ ಹರಸಿ ಇನ್ನೂ ಒಂದೆರಡು ಮಾತು ಅಂದು, ನನ್ನನ್ನು ಬಚ್ಚಲ ಮನೆಗೆ ಒಯ್ಯುತ್ತಿದ್ದ. ನಾನು ಚಿಕ್ಕವನಾಗಿದ್ದುದರಿಂದ ಅವನ ಮಾತಿಗೆ ಮರುಳಾಗುತ್ತಿದ್ದೆ. ಆದರೆ ಅದಕ್ಕಿಂತ ಹೆಚ್ಚಾಗಿ ನನ್ನದೊಂದು ಕೆಲಸವೂ ಆಗುತ್ತಿತ್ತು. ಅವನು ನಾನು ಬೇಡಿದಷ್ಟು ನೀರು ಜಗ್ಗಿ ಕೊಡುತ್ತಿದ್ದ. ನಾನು ಮಾಡಿದ ಉಪಕಾರ ಮರೆಯುದಿಲ್ಲ. ಹಣಮಪ್ಪನ ಸಲುವಾಗಿ ನಾನು ತಯಾರಾಗುವಷ್ಟರಲ್ಲಿ “ತಾನು ಮದುಕನಾದರೂ ಚೈನಿ ಬ್ಯಾರೆ ಬೇಕು ಮಹಾರಾಯಗ” ಎಂದು ಒಳಗಿನಿಂದ ಧ್ವನಿ ಬರುತ್ತಿತ್ತು.

ಪ್ರತಿದಿನ ಎರಡು ಸಲ ದೇವಾಲಯಕ್ಕೆ ಹೋಗುವುದು ಹಣಮಪ್ಪನ ರೂಢಿಯಷ್ಟೆ. ಅವನು ಸಂದಿ ಗೊಂದಿಯಲ್ಲಿ ಹಾದು ಹೋಗುತ್ತಿರುವಾಗ ಚಿಕ್ಕ ಚಿಕ್ಕ ಹುಡುಗರು ಮನೆಯ ಮುಂದೆ ನಿಂತುಕೊಂಡು “ಏ ಹನುಮಾ ಹೊಂಟೇನಪಾ, ನಾವೂ ಬರತೇವು” ಎಂದು ಕೂಗುತ್ತಿದ್ದವು. ಆ ಹುಡುಗರಿಗಾಗಿ ಪ್ರೀತಿಯಿಂದ ಅವನು ಚುರುಮರಿ ದಾಣಿಗಳನ್ನು ಸಂಗ್ರಹಿಸಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದ. ಪ್ರತಿಯೊಬ್ಬ ಹುಡುಗನ ಕೈಯಲ್ಲಿ ಒಂದು ಮುಷ್ಟಿ ಹಾಕಿ “ನನ್ನ ಹೆಗಲ ಮ್ಯಾಲೆ ಎತ್ತಿಕೊಂಡು ಹೋಗ್ತಿನಿ ಬರೀಯಾ?” ಎಂದು ಕೇಳುತ್ತಿದ್ದ, ಚಿಕ್ಕ ಮಕ್ಕಳು ಅವನ ಹೆಗಲನ್ನೆ ಕ್ರೀಡಾಂಗಣ ಮಾಡಿ ಒಂದೆರಡು ನಿಮಿಷ ಆಟವಾಡಿ ಮನೆಗೆ ಓಡಿ ಹೋಗುತ್ತಿದ್ದವು. ಹಣಮಪ್ಪನು ದಾರಿಯನ್ನು ಬಿಟ್ಟು ಹೊರಳುವಾಗ್ಗೆ ಈ ಮುದ್ದು ಮಕ್ಕಳು “ಏ ಹನಮಪ್ಪಾ!” ಎಂದು ಒಳಗೊಳಗಿನ ಧ್ವನಿಯಿಂದ ಕೈ ಮಾಡಿ ಕೂಗುತ್ತಿದ್ದವು.

ಹಣಮಪ್ಪನಿಗೆ ತಾನು ಎಂದಾದರೂ ಲಗ್ನ ವಾಗಬೇಕು, ಮಕ್ಕಳನಾಡಿಸಬೇಕು ಎಂಬ ವಿಚಾರ ತಲೆಯಲ್ಲಿ ನುಸುಳಿತ್ತೋ ಇಲ್ಲವೋ! ನಾನೊಮ್ಮೆ ಅವನಿಗೆ “ನಿನ್ನ ಹೆಂಡತಿ ಎಲ್ಲಿ?” ಎಂದು ಚೇಷ್ಟೆ ಯಿಂದ ಕೇಳಿದ್ದಕ್ಕೆ ಮೊದಲು ಭಯಂಕರ ಸಿಟ್ಟಿಗೆದ್ದ. “ಏಕೆ ವೈಕುಂಠಕ್ಕೆ ಹೋಗಿದ್ದಾಳೇನು? ಇನ್ನೊಬ್ಬಳನ್ನು ತಂದು ಕೊಡಲೋ?” ಎಂದೂ ಕೇಳಿದ್ದೆ. ಅದಕ್ಕೆ ಅವನು ಮೌನಾವತಾರ ತಾಳಿ, ಆ ಮೇಲೆ “ನಮ್ಮಂಥವರು ಮದುವೆಯಾಗಬಾರದು. ದೇವರು ಹೇಳ್ಯಾನ” ಅನ್ನುತ್ತಿದ್ದ.

ರಾಮ ಸೀತೆ ಅವರೇ ಜಗತ್ತಿನಲ್ಲಿಯ ಸ್ತ್ರೀ ಪುರುಷರೆಂದು ಹಣಮಪ್ಪನಿಗೆ ಎನಿಸುತ್ತದೆ. ಅವರೇ ತಂದೆ- ತಾಯಿ. ಅವರೇ ಈ ಭೂಮಿಯಲ್ಲಿ ಇದ್ದಾರೆ. ಅವರದೇ ಸೇವೆಯನ್ನು ಮಾಡಬೇಕು. ಎಂಬುದು ಅವನ ವಿಚಾರ- ಅಲ್ಲ- ಅದೇನೋ ಅವನಲ್ಲಿ ಬೇರೂರಿದ ಭಾವನೆ. ಅಂತೇ ಅವನು ಸಂಪೂರ್‍ಣ ರಾಮಾಯಣ ನಾಟಕವನ್ನು ನೋಡಲು ಎಂದೂ ಮರೆಯುತ್ತಿರಲಿಲ್ಲ. ನಮ್ಮೂರಲ್ಲಿ ರಾಮಾಯಣ ದೊಡ್ಡಾಟವನ್ನಾಗಿಯೇ ಆಡಲಿ, ನಾಟಕವನ್ನಾಗಿಯೇ ಆಡಲಿ, ಆ ವೇಳೆಯಲ್ಲಿ ಹಣಮಂತನು ಹಾಜರಾಗಿರುವುದು ಸ್ವಾಭಾವಿಕವಾಗಿತ್ತು. ಇದು ಊರ ಜನರಿಗೆ ಅರಿತ ಮಾತಾಗಿತ್ತು. ಅಪರಂಪಾರ ಜನದಟ್ಟಣಿ ಇರಬೇಕು, ಆ ಗದ್ದಲಲ್ಲಿ ನುಸುಳಿಹೋಗುವ ಹಣಮಪ್ಪನ ಅಪೂರ್‍ವವಾದ ವೈಖರಿಯನ್ನು ನೋಡುವಂತಿರುತ್ತಿತ್ತು. ಕಲಾವಾಣಿ ಕಂಪನಿಯ “ಸಂಪೂರ್‍ಣ ರಾಮಾಯಣ” ವನ್ನು ಸುರ್‍ಯೋದಯದ ವರೆಗೆ ಕಣ್ತುಂಬ ನೋಡಿ ಮನೆಗೆ ಬಂದು ಮಾರುತಿಯು ತನ್ನ ಮಿತ್ರಮಂಡಲಿಯೊಡನೆ ಹಾಡಿದ “ರಘುಪತಿ ರಾಘವ ರಾಜಾರಾಮ………” ಪಲ್ಲವಿಯನ್ನು ನೀರು ಸೇದುವ ಮುಂದೆ ಕುಣಿಕುಣಿದು ಎಷ್ಟು ಹಾಡಿದರೂ ಹಣಮಂತನಿಗೆ ಸಂತೃಪ್ತಿಯಿರಲಿಲ್ಲ.

ಒಂದು ದಿನ ದೇವಾಲಯದಿಂದ ತಿರುಗಿ ಬರುತ್ತಲೇ ಹಣಮಂತ ಹಾಸಿಗೆ ಹಾಸಿ ಬಿದ್ದು ಕೊಂಡ. ರಾತ್ರಿ ಊಟಕ್ಕೆ ಏಳಲಿಲ್ಲ. ಹೊಟ್ಟೆಗೆ ಏನೂ ಬಸಿದುಕೊಳ್ಳಲಿಲ್ಲ. ಏನನ್ನಾದರೂ ತೆಗೆದುಕೊಳ್ಳಲು, ಎರಡು ಮೂರು ಸಲ ನನ್ನ ತಂದೆ ಕೇಳಿದರು. ಅದಕ್ಕೆ ಹಣಮಂತನ ಒಪ್ಪಿಗೆ ಸಿಗದ್ದರಿಂದ ಅವರೂ ಹಾಗೆಯೇ ಬಿಟ್ಟು ಬಿಟ್ಟರು.

ಹಣಮಂತನು ಮಲಗಿಕೊಳ್ಳುತ್ತಿದ್ದುದು ನನ್ನ ಕೋಣೆಯ ಬಾಗಿಲಲ್ಲಿಯೇ, ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಒಂದೇ ಸವನೆ ನರಳುವ ದನಿ ಕೇಳಬಂತು. ಎದ್ದು ಹೋಗಿ ಹಣಮಂತನನ್ನು ಮುಟ್ಟಿ ನೋಡಿದೆ. ಅಬ್ಬಾ! ಭಯಂಕರ ಜ್ವರ! ನಾನು ಬಂದಕೂಡಲೇ ನನ್ನ ಕೈಗಳನ್ನು ಗಟ್ಟಿ ಯಾಗಿ ಹಿಡಿದುಕೊಂಡ. ಅವನ ಕಣ್ಣುಗಳಲ್ಲಿ ಧಾರೆಯಾಗಿ ನೀರು ಬರುತ್ತಿದ್ದವು.

ಅವನಿಗೆ ಬಂದ ಕಟ್ಟಿನ ಜ್ವರಗಳು ಬೇಗನೆ ಕಡಿಮೆಯಾಗಲಿಲ್ಲ. ಡಾಕ್ಟರ ಔಷಧಿಯನ್ನು ನಿರಾಕರಿಸಿದ. ಅವರು ಮೀನ ಮುಂತಾದ ಪ್ರಾಣಿಗಳನ್ನು ಕೊಂದು ಔಷಧ ಕೊಡುವರೆಂದು ಅವನ ಭಾವನೆ. ಯಾವನೋ ಒಬ್ಬ ಬ್ರಾಹ್ಮಣ ವೈದ್ಯ ಕೊಟ್ಟ ಔಷಧಿಯನ್ನೆ ತಿಂದ ನಾಲ್ಕು ದಿನ ಹಾಸಿಗೆಯಲ್ಲೇ ಉರುಳಾಡಿದ. ಜ್ವರ ಕಡಿಮೆಯಾಗಿ ಎದ್ದು ಓಡಾಡುತ್ತಿರುವಾಗ ಮಸಣದಿಂದ ಅದೇ ಎದ್ದು ಬಂದ ಎಲುಬಿನ ಹಂದರದಂತೆ ವಿಕಾರವಾಗಿ ತೋರುತ್ತಿದ್ದ.

ಈ ಮಾತಿಗೆ ಎರಡು ಮೂರು ವರುಷ ಮೊದಲು ನಾನು ನಮೂರನ್ನು ಬಿಟ್ಟು ಬೇರೆ ಊರಿಗೆ ಕೆಲಸಕ್ಕಾಗಿ ಹೋಗಿ ಬಿಟ್ಟಿದ್ದೆ. ಹೀಗಾಗಿ ಹಣಮಂತನ ಭೆಟ್ಟಿ ನನಗೆ ವಿಶೇಷವಾಗಿ ಆಗಿರಲಿಲ್ಲ. ನನ್ನಾಕೆಗೆ ಒಮ್ಮೆ ನೆಮ್ಮದಿ ಇಲ್ಲದಾಗ್ಗೆ ಒಬ ನೀರಿನವನನು ಹಲವು ತಿಂಗಳು ಇಟ್ಟುಕೊಂಡಿದ್ದೆ. ಅವನ ಕೆಲಸ ಎಂಟು ಕೊಡಗಳನ್ನು ದಿನಾಲೂ ಹಾಕುವುದು. ಒಂದು ದಿನ ಒಂದು ಕೊಡ ಹೆಚ್ಚು ನೀರು ಬೇಕಾದರೆ ಅವನಿಗೆ ಹೆಚ್ಚಿನ ಹಣ ತೆರಬೇಕಾಗುತ್ತಿತ್ತು. ಅಬ್ಬಾ! ಆಗ ನಮ್ಮ ಹಣಮಂತನ ನೆನಪಾಗದೆ ಇರುತ್ತಿರಲಿಲ್ಲ. ನಮ್ಮೂರಿಗೆ ಸೂಟಿಗೆಂದು ಬಂದಾಗ್ಗೆ ಹಣಮಪ್ಪನ ಮುಂದೆ ಈ ಸುದ್ದಿಯನ್ನು ಹೇಳಿದೆ. ಅವನು ಮೌನವಾಗಿಯೇ ಇದ್ದ.

ಇದೀಗ ಅವನಲ್ಲಿ ವಿಪರೀತವಾದ ಬದಲಾವಣೆಯಾಗಿದೆ. ಅವನು ಮೊದಲಿನಂತಿಲ್ಲ. ಅವನಿಂದ ಕೆಲಸವಾಗುವ ಹಾಗಿಲ್ಲ. ಎಂಬತ್ತು ಎಂಬತ್ತೈದು ವರುಷದ ಮುದುಕನಾದರೂ ಅವನಿಗೆ ಜ್ವರ ಬಂದೊಡನೆ ಸರನೆ ಇಳಿದು ಹೋದ. ಆದರೂ ಅವನು ನೀರು ಜಗ್ಗುವುದನ್ನು ಬಿಟ್ಟಿರಲಿಲ್ಲ. ತನ್ನ ಕೈ ಯಿಂದಾದಷ್ಟು ಎಂಟ-ಹತ್ತು ಕೊಡಗಳನ್ನಾದರೂ ಜಗ್ಗಿ ಹಾಕುತ್ತಿದ್ದ. ಆದರೆ ಇಂಥ ಕೆಲಸ ನಮ್ಮ ತಂದೆಯವರ ಮನಸ್ಸಿಗೆ ಬರಲಿಲ್ಲ. ಬಹಳ ಜನ ಮನೆಯಲ್ಲಿರುವುದು. ಎಂಟು-ಹತ್ತು ಕೊಡ ನೀರಿನಿಂದೇನಾಗಬೇಕು? ನೀರಿನ ಬಗ್ಗೆ ವ್ಯವಸ್ಥೆ ಬೇಗನೆ ಆಯಿತು.

ನಾನು ಒಂದು ದಿನ ಒಂದು ಕಾದಂಬರಿಯನ್ನೋದುತ್ತಿದ್ದಾಗ ಹೊರಗಿನಿಂದ ಏನೋ ಗಲಿಬಿಲಿ ಕೇಳಬಂತು, ಕೋಣೆಯಿಂದ ಹೊರಬಿದ್ದು ನೋಡಿದೆ, ನಾಲ್ಕೈದು ಹುಡುಗರು ಮುಕುರಿದ್ದಾರೆ, ಹಣಮಪ್ಪನ ಹಾಸಿಗೆಯನ್ನು ತಲೆ ಬಾಗಿಲ ಹೊರಗೆ ಒಗೆಯುವ ಸಿದ್ಧತೆಯಲ್ಲಿದ್ದಾನೆ.

ಮುದುಕ ಅವರಿಂದ ಹಾಸಿಗೆಯನ್ನು ಬಿಡಿಸಿಕೊಳ್ಳುವ ಅಸಾಧ್ಯ ಪ್ರಯತ್ನದಲ್ಲಿದ್ದಾನೆ. ನಾನು ಸಮೀಪಕ್ಕೆ ಬರಲು ಅವರೆಲ್ಲ ಅಲ್ಲಿಂದ ಚದುರಿಬಿಟ್ಟರು. ಹಣಮಂತ ತನ್ನ ಹಾಸಿಗೆಯನ್ನು ಹೊತ್ತುಕೊಂಡು ತೇಕುತ್ತ ಒಳಗೆ ಬಂದು ನನ್ನನ್ನು ಹರಸುವ ನೋಟವಾಗಿ ಅವನ ಕಣ್ಣುಗಳು ಕಂಡವು. ಆದರೆ ಅವನಿಗೆ ಮಾತು ಬರಲಿಲ್ಲ.

ಅದೇ ಸಂಜೆಯ ಊಟವಾದಮೇಲೆ ನಾನು ಅಡುಗೆಯ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದೆ. ಅಷ್ಟರಲ್ಲಿ ಅಡುಗೆಯ ಮನೆಯಿಂದ ಈ ನುಡಿಗಳು ಕೇಳಬಂದವು –

“ಇವನ್ಯಾರು ನಮಗ? ಇವಗೇಕೆ ನಮ್ಮಲ್ಲಿ ಊಟ? ಸುಮ್ಮನೆ ಮನೆ ಬಿಟ್ಟು ಹೊರಗೆ ಹಾಕಿ. ಬೇಕಾದಲ್ಲಿ ಬಿದ್ದುಕೊಳ್ಳಲಿ.”

“ಅವನಿಗೇನು ನಾಚಿಗೀನ ಇಲ್ಲ. ಎಷ್ಟು ಬೈಯಬೇಕು? ಎಷ್ಟು ಹೊಡಿಬೇಕು?”

“ಒಲ್ಲೆ ಹೆಂಗ ಅಂತಾನ?”

“ಕುತ್ತಿಗೆ ಹಿಡಿದು ಹೊರಗೆ ದಬ್ಬಿರಿ ಅಂತ ಇವತ್ತ ಆ ಸಂದಿಯ ನಾಲ್ಕೈದು ಹುಡುಗರಿಗೆ ಹೇಳಿದ್ದೆ…….”

ನಾನು ಹಾಗೆಯೆ ಕೋಣೆಗೆ ಹೋದೆ. ರಾತ್ರಿ ನಿದ್ರೆನು ಬರಲಿಲ್ಲ.

ಎರಡು ಮೂರು ದಿನ ಉರಳಿ ಹೋದ ಮೇಲೆ ಒಂದು ದಿನ ಹಲವು ಹುಡುಗರು ಆ ಟ್ರಂಕನ್ನು ಎತ್ತುವ ಸಾಹಸ ಮಾಡಿದರಂತೆ, ಹಣಮಪ್ಪ ಅಳುತ್ತ ನನ್ನ ಬಳಿ ಬಂದು ಈ ಅನ್ಯಾಯದ ಸಂಗತಿ ವರ್ಣಿಸಿದ. ಆ ಟ್ರಂಕನ್ನು ಜೊತೆಯಾಗಿಟ್ಟು ಕೊಳ್ಳಲು ಹೇಳಿ ಅದನ್ನು ನನ್ನ ಸ್ವಾಧೀನಪಡಿಸಿದ. ಆದರೆ ಅದರ ಕೀಲಿಕ್ಕೈ ಮಾತ್ರ ನನ್ನ ಕಡೆಗೆ ಕೊಡಲಿಲ್ಲ. ಅದನ್ನು ತೆಗೆಯಕೂಡದೆಂದು ಎಚ್ಚರಿಸಿ ಹೋದ.

ರಾತ್ರಿ ಮತ್ತೆ ವಿಚಾರಿಸಿದೆ. ತಂದೆ ಕಡುತರ ಸ್ವಭಾವದವರು. ಅವರ ವಿರುದ್ದ ಹೋಗುವುದೇ? ಸೂಟಿ ಮುಗಿದು ತಿರುಗಿ ಹೋಗುವ ಮುಂದೆ ಅವನನ್ನು ಕರೆದುಕೊಂಡು ಹೋಗಬೇಕೆಂದು ನಿರ್ಧಾರ ಮಾಡಿದೆ. ಅವನಿಗೆ ಕೇಳಿದೆ. ಆತನು ಒಪ್ಪಲಿಲ್ಲ.

ಹಣಮಂತನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತ ಬಂದಿತು. ಅವನಿಗೆ ಕೂಳು ಹಾಕುವುದನ್ನೂ ಬಿಟ್ಟು ಬಿಟ್ಟರು. ಇಡೀ ದಿನ ಉಪವಾಸನೈದ. ರಾತ್ರಿ ಗುಪ್ತವಾಗಿ ಅವನ ಕೈಯಲ್ಲಿ ಹಲವು ರೂಪಾಯಿ ಕೊಟ್ಟೆ. ನನಗೆ ಸ್ನಾನಕ್ಕೆ ನೀರು ತೋಡಿದ.

ಅವನ ಸ್ಥಾನ ಈಗ ಬದಲಾಯಿಸಲ್ಪಟ್ಟಿತು. ಹೊರಗಿನ ಸಣ್ಣ ಕಟ್ಟೆಯ ಮೇಲೆ ಮಲಗುವುದಕ್ಕೆ ಆರಂಭಿಸಿದ. ಚಳಿಯಿರಲಿ, ಮಳೆಯಿರಲಿ, ಅವನು ಮಲಗಿ ಕೊಳ್ಳುವುದು ಅಲ್ಲಿಯೇ.

ಮನೆಯಲ್ಲಿ ಕೂಳು ಸಿಗುವುದು ದುಸ್ತರವಾದ ಮೇಲೆ ಅನ್ನ ಹಾರದಲ್ಲಿ ಮನೆಮನೆಗೆ “ಓಂ ಭವತಿ ಭಿಕ್ಷಾಂದೇಹಿ” ಪ್ರಾರಂಭವಾಯಿತು. ಆದರೆ ಅದನ್ನೆಲ್ಲ ತಂದು ನಮ್ಮ ಮನೆಯಲ್ಲಿಯೇ ಒಂದು ಮೂಲೆಯಲ್ಲಿ ಕೂತು ತಿನ್ನುತ್ತಿದ್ದ. ಒಮ್ಮೊಮ್ಮೆ ರಾತ್ರಿ ಹನ್ನೆರಡು ಗಂಟೆಗೆ ಅವನು ರೊಟ್ಟಿ ಕಟೆಯುವ ಸಪ್ಪಳ ಕೇಳಿ ಬರುತ್ತಿತ್ತು. ಮನುಷ್ಯ ಭಿಕ್ಷೆಗೆ ಟೊಂಕ ಕಟ್ಟಿದ ಮೇಲೆ ಅಭಿಮಾನ ಹೇಗೆ ನಿಲ್ಲಬೇಕು? ಹಣಮಪ್ಪ ಎಲ್ಲಿಯಾದರೂ ಹಾದುಹೋದರೆ ಅವನು ಹಾಸ್ಯಕ್ಕೆ ಗುರಿಯಾಗುತ್ತಿದ್ದ.

ನಾಟಕಕ್ಕೆ ಹೋದರೂ ಇದೇ ರೀತಿಯ ಫಜೀತಿ, ರಾಮಾಯಣ ನೋಡಲು ಅವನ ಬಳಿ ರೊಕ್ಕವಿರುತ್ತಿರಲಿಲ್ಲ. ಆದರೂ ಯಾರ ವಸೂಲಿಯಿಂದಾದರೂ ಹೋಗಬೇಕೆಂಬ ಆಸೆ ಅವನದು ಒಂದು ಸಲ ನಾಟ್ಯ ರಂಗದ ಮೇಲೆ ಅವನನ್ನು ತಂದು ಲಗಾ ಒಗಿಸಿದರಂತೆ! ಅವನಿಗೊಂದು ಬಾಲವನ್ನೂ ಹಚ್ಚಿದ್ದರಂತೆ.

ನಾನು ಊರಿಗೆ ಹೋಗುವ ದಿನ ಹಣಮಂತನನ್ನು ಮಾತನಾಡಿಸಲು ಬಾವಿಕಟ್ಟೆಯ ಕಡೆ ಹೋದೆ. ಅವನೇನನ್ನೊ ಮಾತನಾಡುತ್ತಿದ್ದ.

“ಕಾಗೀ, ಬಾರಪಾ ಇಲ್ಲ ಕೂಡು.”

ಬಾವಿಯ ಮೇಲೆ ಒಂದು ಕಾಗೆ ಇತ್ತು. ಅದಕ್ಕೆ ಕೆಲವು ಡಾಣಿಗಳನ್ನು ಬಗೆದ.

“ಗುಬ್ಬಿ, ಕುಣಿಯಪಾ”

ಕುಂಬಿಯ ಮೇಲೆ ಕುಳಿತ ಗುಬ್ಬಿಗೆ ಹಲವನ್ನು ಬಗೆದ.

“ಹಾ, ಇಂದು ಶ್ರಾದ್ಧವು ಮುಗಿಯಿತು!”

“ಯಾವ ಶ್ರಾದ್ಧ?” ಎಂದು ನಾನು ಕೇಳಿದೆ.

ಅವತ್ತೇ ಅವನ ತಂದೆಯ ಶ್ರಾದ್ಧವಿತ್ತಂತೆ. ನನಗೆ ಹಿಂದಿನ ಉಂಡಿಯ ನೆನಪಾಯಿತು.

ಅಂದು ಊರಿಗೆ ಹೋಗಿ ಬರುತ್ತೇನೆಂದು ಹೇಳಿದಾಗ್ಗೆ ನನ್ನ ಕೈ ಕಾಲು ಗಟ್ಟಿಯಾಗಿ ಹಿಡಿದುಕೊಂಡು ಅವನು ಅತ್ತು ಬಿಟ್ಟ.

ನಾನು ಊರಿಗೆ ಹೋದ ಎರಡು ದಿನಗಳಲ್ಲಿಯೇ ಹಣಮಪ್ಪನಿಗೆ ಮತ್ತೆ ಭಯಂಕರ ಜ್ವರ ಬಂದ ಸುದ್ದಿ ನನ್ನ ಕಿವಿಗೆ ಮುಟ್ಟಿತು. ಅವನು ತನ್ನ ಟ್ರಂಕು ಬಹಳ ನೆನಿಸುತ್ತಿದ್ದನಂತೆ. ಆ ಸುದ್ದಿ ತಿಳಿದ ಕೂಡಲೇ ನಾನು ಮತ್ತೆ ತಿರುಗಿ ಟ್ರಂಕನ್ನು ತೆಗೆದುಕೊಂಡು ಬಂದೆ.

ಆದರೆ ಹಣಮಂತ ಮನೆಯಲ್ಲಿರಲಿಲ್ಲ. ಜ್ವರದಲ್ಲಿ ಎದ್ದು ಮಾರುತಿಯ ಗುಡಿಗೆ ಹೋಗಿದ್ದ. ನಾನು ತಿರುಗಾಡುತ್ತಾ ಹೋಗುವ ಹೊತ್ತಿಗೆ ನನಗೊಂದು ಸುದ್ದಿ ಬಂತು. ವಿಚಿತ್ರ ವ್ಯಥೆ ನನ್ನನ್ನು ನುಂಗಿ ಬಿಟ್ಟಿತು. ಹಣಮಂತ ಮಾರುತಿಯ ಪಾದ ಸೇರಿದನಂತೆ.

ಚಿತೆಯು ಆರಿಹೋದರೂ ನನ್ನ ಕಣ್ಣಲ್ಲಿ ಇನ್ನೂ ಉರಿ ಕಾಣುತಿತ್ತು. ಧೈರ್‍ಯಮಾಡಿ ಟ್ರಂಕಿನ ಕೀಲಿ ಮುರಿದೆ. ಮುರಿಯುವ ಹೊತ್ತಿಗೆ ಹಣಮಪ್ಪ ಚೀರಿದಂತಾಯಿತು; ಒಳಗೆ ಒಂದು ಜರತಾರಿ ವಸ್ತ್ರದ ಟೊಪ್ಪಿಗೆ ಇತ್ತು. ಅದರಲ್ಲಿ ನೂರು ರೂಪಾಯಿಗಳಿದ್ದವು. ಆ ರೂಪಾಯಿಗಳು ಅವನ ಅಂತ್ಯ ವಿಧಿಗೆಂದು ಬಳಿಸಲಾದವು.

ಅದರಲ್ಲಿ ಅತ್ಯಂತ ಪ್ರಾಚೀನ ಕಾಗದವೊಂದಿತ್ತು. ಅದು ನನ್ನ ಕೈ ಸೇರಿತು. ಸಾವಧಾನದಿಂದ ತೆರೆದು ನೋಡಿದೆ. ಅದರಲ್ಲಿ ಹಣಮಪ್ಪನ ಮನೆತನದ ಬಗ್ಗೆ ಸ್ವಲ್ಪ ಇತಿಹಾಸವಿತ್ತು.

ಅವರು ಟೋಪಿ ಮನೆತನದವನಾಗಿದ್ದನು. ಆ ಮನೆತನದವರು ಯಾವುದೊ ಅರಸರ ಆಸ್ಥಾನದಲ್ಲಿ ಸೈನ್ಯಾಧಿಕಾರಿಯಾಗಿದ್ದರಂತೆ. ರಾಜಮನೆತನದ ವಿಶ್ವಾಸಕ್ಕಾಗಿ ಅವರಿಗೆ ಅರಸನು ಒಂದು ರಾಜ ಚಿಹ್ನದ ಟೊಪ್ಪಿಗೆಯನ್ನು ಕೊಟ್ಟಿದ್ದನಂತೆ. ಆದ್ದರಿಂದ ಅವರಿಗೆ “ಟೋಪಿ” ಎಂದು ಅಡ್ಡ ಹೆಸರು ರೂಢಿಯಾಗಿತ್ತಂತೆ.

ಆ ರಾಜರು, ಆ ಸೈನ್ಯಾಧಿಕಾರಿಗಳು ಹಣಮಪ್ಪ ಎಲ್ಲರೂ ನಾಶವಾಗಿ ಹೋದರು. ಆದರೆ ಆ ದಿನ ನನ್ನ ಕಣ್ಣಿಗೆ ಕಂಡುದು ಆ ಟೊಪ್ಪಿಗೆಯೊಂದೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಗನ ಗ್ರಂಥ
Next post ಇಲ್ಲೇ ಇರುವೆ..

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…