ದೇಶಕಾಲದ ಸಾಂಸ್ಕೃತಿಕ ರಾಜಕೀಯ

ದೇಶಕಾಲದ ಸಾಂಸ್ಕೃತಿಕ ರಾಜಕೀಯ

(‘ಗೌರಿಲಂಕೇಶ್ ಪತ್ರಿಕೆ’ಯಲ್ಲಿ ‘ದೇಶಕಾಲ’ ನಿಯತ ಕಾಲಿಕ ಕುರಿತು ನಡೆಯುತ್ತಿದ್ದ ವಾಗ್ವಾದದ ಸಂದರ್ಭದಲ್ಲಿ ಅದೇ ಪತ್ರಿಕೆಗೆ ಬರೆದ ಲೇಖನ)

‘ದೇಶಕಾಲ’ ನಿಯತಕಾಲಿಕವನ್ನು ಕುರಿತ ವಾಗ್ವಾದಗಳಿಗೆ ಪ್ರತಿಕ್ರಿಯಿಸುವುದು ನನ್ನ ಉದ್ದೇಶವಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತೇನೆ. ‘ದೇಶಕಾಲ’ ಆರಂಭವಾದಂದಿನಿಂದ ನಾನು ಚಿಂತಿಸಿದ ಹಾಗೂ ಗ್ರಹಿಸಿದ ಸಂಗತಿಗಳ ನೆಲೆಯಲ್ಲಿ ನಾನೀಗ ಬರೆಯುತ್ತಿದ್ದೇನೆ.

ಯಾವುದೇ ರೀತಿಯ ಪತ್ರಿಕೆಯನ್ನು ಸಂಪಾದಿಸುವ, ಪ್ರಕಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅಂತೆಯೇ ಪ್ರಕಟಗೊಂಡದ್ದರ ಬಗ್ಗೆ ಪ್ರತಿಕ್ರಿಯಿಸುವ ಹಕ್ಕೂ ಇದೆ. ಈ ಹಕ್ಕುಗಳು ಪ್ರಜಾ ಪ್ರಭುತ್ವದ ತಾಂತ್ರಿಕ ಸವಲತ್ತುಗಳಾಗಿ ನಮಗೆ ಲಭ್ಯವಾಗಿವೆ. ಒಮ್ಮೆ ಪ್ರಕಟವಾದ ಮೇಲೆ ಯಾವ ಪತ್ರಿಕೆಯಾಗಲಿ, ಪುಸ್ತಕವಾಗಲಿ ಕೇವಲ ಖಾಸಗಿಯಾಗಿರುವುದಿಲ್ಲ. ಅವುಗಳಲ್ಲಿ ಖಾಸಗಿ ವಿಷಯಗಳಿದ್ದರೂ ಪ್ರಕಟಗೊಂಡಾಗ ತನಗೆ ತಾನೇ ಸಾರ್ವಜನಿಕವಾಗುತ್ತವೆ. ಚರ್ಚೆಗೆ ತೆಗೆದು ಕೊಳ್ಳುತ್ತವೆ. ಆದ್ದರಿಂದ ನಾವು ಹಣ ಹಾಕಿ ಕಷ್ಟಪಟ್ಟು ಒಂದು ಪತ್ರಿಕೆ ತರುತ್ತಿದ್ದೇವೆಂಬ ಕಾರಣಕ್ಕೆ ಸರ್ವತಂತ್ರ ಸ್ವಾತಂತ್ರ್ಯ ಲಭ್ಯವಾಗಿದೆಯೆಂದಾಗಲಿ, ನಮಗಿಷ್ಟ ಬಂದಂತೆ ವರ್ತಿಸುತ್ತೇವೆಂದಾಗಲಿ ಭಾವಿಸುವಂತಿಲ್ಲ. ಸಾರ್ವಜನಿಕವಾದ ಎಲ್ಲವೂ ಸಾಮಾಜಿಕವಾಗುವುದರಿಂದ, ಅವುಗಳನ್ನು ಕುರಿತ ಚರ್ಚೆ ವೈಯಕ್ತಿಕವಾಗುವುದಿಲ್ಲ ಆಗಬಾರದು. ಪ್ರಕಟವಾಗುತ್ತಿರುವ ಪತ್ರಿಕೆ/ಪುಸ್ತಕಗಳು ತಳೆಯುವ ನಿಲುವುಗಳನ್ನು ಕುರಿತ ಚರ್ಚೆಗಳು ವೈಯಕ್ತಿಕ ನೆಲೆಯನ್ನು ಮೀರಿದ ಸಾಮಾಜಿಕ ಆಯಾಮವನ್ನು ಪಡೆದುಕೊಂಡಾಗ ಸಾಂಸ್ಕೃತಿಕವಾಗಿಯೂ ಮುಖ್ಯವಾಗುತ್ತವೆ. ತಾತ್ವಿಕ ಸ್ವರೂಪ ಪಡೆಯುತ್ತವೆ. ತಾತ್ವಿಕ ಸ್ವರೂಪವನ್ನು ಪಡೆಯದ ಚರ್ಚೆಗಳಾಗಲಿ, ವಾಗ್ವಾದಗಳಾಗಲಿ ಸಾಮಾಜಿಕ ಚರಿತ್ರೆಯ ಚಲನಶೀಲತೆಗೆ ಯಾವತ್ತೂ ಪೂರಕವಾಗುವುದಿಲ್ಲ. ಇದ್ದಾಗ ಯಥಾಸ್ಥಿತಿ ವಾದಕ್ಕೆ ಪುಷ್ಟಿಕೊಡುತ್ತವೆ; ಹೆಚ್ಚೆಂದರೆ ಪರಿಷ್ಕರಣವಾದದ ನೆರಳಲ್ಲಿ ನೆಮ್ಮದಿಯ ಮುಗುಳ್ನಗೆ ಬೀರುತ್ತ ಬೀಗತೊಡಗುತ್ತವೆ. ಇಲ್ಲವೆ ಸ್ಪಷ್ಟವಾಗಿ ಪ್ರತಿಗಾಮಿಯಾಗುತ್ತವೆ. ಆದರೆ ಸಾಮಾಜಿಕ ಚರಿತ್ರೆಯ ಚಲನಶೀಲತೆಯನ್ನು ಅಂತಃಶಕ್ತಿಯಾಗಿ ಪಡೆದ ಯಾವುದೇ ಕ್ರಿಯೆಗೆ ಜನಮುಖತೆ ತಾನೇ ತಾನಾಗಿ ಲಭ್ಯವಾಗುತ್ತದೆ; ‘ದೇಶಕಾಲ’ವನ್ನು ಕುರಿತ ಚರ್ಚೆ ಮತ್ತು ವಾಗ್ವಾದಗಳಿಗೂ ಇದು ಅನ್ವಯಿಸುತ್ತದೆ. ಮೊಟ್ಟಮೊದಲು ಸ್ವತಃ ‘ದೇಶಕಾಲ’ಕ್ಕೆ ಅನ್ವಯಿಸುತ್ತದೆ. ತಾನು ಹುಟ್ಟಿ ಬೆಳೆಯುತ್ತಿರುವ ‘ದೇಶ’ ಮತ್ತು ‘ಕಾಲ’ದ ಸಾಮಾಜಿಕ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಸಾಂಸ್ಕೃತಿಕ ಮುಖವೆನ್ನುವುದು ಮುಖವಾಡ ಮಾತ್ರವಾಗುವ ಅಪಾಯವೂ ಇರುತ್ತದೆ.

ಮೇಲಿನ ಮಾತುಗಳನ್ನು ಹೀಗೆ ಸ್ಪಷ್ಟಪಡಿಸಬಹುದು; ಸಾಹಿತ್ಯಾದಿ ಕಲೆಗಳು ಸಾಮಾಜಿಕ ಕ್ರಿಯೆಗಳು, ಕೇವಲ ವೈಯಕ್ತಿಕ ಕ್ರಿಯೆಗಳಲ್ಲ. ವೈಯಕ್ತಿಕವೆನ್ನುವ ಅಂಶಗಳ ಮೇಲೆ ಸಾಮಾಜಿಕ ಪರಿಸರ ಮತ್ತು ಚಾರಿತ್ರಿಕ ಸಂದರ್ಭಗಳ ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ವೈಯಕ್ತಿಕತೆ ಮತ್ತು ಸಾಮಾಜಿಕತೆಗಳ ನಡುವೆ ಸಂಬಂಧವಿದ್ದೇ ಇರುತ್ತದೆ; ಸಾಮಾಜಿಕವಾದದ ವೈಯಕ್ತಿಕತೆ ವೈಪರೀತ್ಯವಾಗುತ್ತದೆ. ವೈಯಕ್ತಿಕ ಛಾಪೊಂದು ಇರುವುದು ನಿಜವಾದರೂ ಸಾಮಾಜಿಕ ಉಪೇಕ್ಷೆಯೆನ್ನುವುದು ಬೇಜವಾಬ್ದಾರಿತನವಾಗುತ್ತದೆ. ಇದು ಎಲ್ಲ ಕಲೆಗಳಿಗೂ ಕಲಾಸೃಷ್ಟಿಕಾರರಿಗೂ ಅನ್ವಯಿಸುವ ಮಾತು. ಸಾಮಾಜಿಕತೆಯನ್ನು ಉಪೇಕ್ಷಿಸಿ ವೈಯಕ್ತಿಕತೆಯನ್ನು ವೈಭವೀಕರಿಸಿ ಶ್ರೇಷ್ಠತೆಯ ನಿರ್ಣಯ ಕೈಗೊಳ್ಳುವ ಬೌದ್ಧಿಕ ವಲಯಕ್ಕೆ ಈ ತಾತ್ವಿಕ ಅಂಶಗಳು ಅರ್ಥವಾಗಬೇಕು. ಅರ್ಥವಾಗದಿದ್ದರೆ, ಅರ್ಥಮಾಡಿಕೊಳ್ಳುವ ವಿಮರ್ಶಾ ವಿನಯವಿಲ್ಲದಿದ್ದರೆ, ಅನೇಕ ಪ್ರತಿಭೆಗಳನ್ನು ಅನ್ಯಗೊಳಿಸಿ ತಮ್ಮ ಆಪ್ತ ವಲಯವನ್ನು ಮಾತ್ರ ಅನನ್ಯಗೊಳಿಸುವ ಸಾಂಸ್ಕೃತಿಕ ಹುನ್ನಾರ ಮೇಲುಗೈ ಪಡೆಯುತ್ತದೆ. ಈ ಮಾದರಿಯ ತಾತ್ವಿಕ ಗ್ರಹಿಕೆಯ ಮೂಲಕವೇ ನಾವು ‘ದೇಶಕಾಲ’ ದಂಥ ಮುದ್ರಣ ಮಾದರಿಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ.

‘ದೇಶಕಾಲ’ದ ಬಗ್ಗೆ ಎದ್ದಿರುವ ಅನುಮಾನ ಮತ್ತು ಅಸಹನೆಗಳಿಗೆ ವೈಯಕ್ತಿಕ ಕಾರಣಗಳಿವೆಯೆಂದು ನನಗನ್ನಿಸುವುದಿಲ್ಲ. ವೈಯಕ್ತಿಕ ಕಾರಣಗಳು ಇರಬೇಕಾಗಿಯೂ ಇಲ್ಲ. ಇಲ್ಲಿ ಇರುವುದು ಸಾಮಾಜಿಕ ಕಾರಣಗಳು ಅಥವಾ ಸಾಮಾಜಿಕ ನೆಲೆಯನ್ನೊಳಗೊಂಡ ಸಾಂಸ್ಕೃತಿಕ ಕಾರಣಗಳು.

‘ದೇಶಕಾಲ’ವು ಪ್ರಕಟಣೆಯನ್ನು ಆರಂಭಿಸಿದ ಸಂದರ್ಭವನ್ನು ಜ್ಞಾಪಿಸಿಕೊಳ್ಳೋಣ. ತಮಗಿರುವ ಮುದ್ರಣ ಮಾಧ್ಯಮಗಳ ಮಧುರ ಸಂಪರ್ಕವನ್ನು ಬಳಸಿಕೊಂಡು ಆಗಲೇ ವಿಶೇಷ ಲೇಖನಗಳನ್ನು ಬರೆದು ಪ್ರಕಟಿಸಲಾಯಿತು. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲೆಸುವ ಕ್ಲೀಷೆಯ ಮಾತು ‘ದೇಶಕಾಲ’ದ ವಿಷಯದಲ್ಲಂತೂ ನವನವೋನ್ಮೇಷಶಾಲಿ ಯಾಯಿತು. ಯಾಕೆಂದರೆ ಪರಾಕುಪಂಪನ್ನೊತ್ತುವ ಕೆಲಸ ಹುಟ್ಟಿನ ಸಂದರ್ಭಕ್ಕೆ ಮಾತ್ರ ಮೀಸಲಾಗದೆ ಐದು ವರ್ಷ ತುಂಬಿದ ವಿಶೇಷ ಸಂಚಿಕೆಯ ಬಿಡುಗಡೆ ಸಂದರ್ಭಕ್ಕೂ ವಿಸ್ತರಿಸಿತು. ಈ ವಿಶೇಷ ಸಂಚಿಕೆಯ ಬಿಡುಗಡೆಯನ್ನು ಒಂದು ಚಾರಿತ್ರಿಕ ಸಂಭವವೆಂಬಂತೆ ವೈಭವೀಕರಿಸುವ ಕೆಲಸ ನಡೆಯಿತು. ನಮ್ಮ ಮುದ್ರಣ ಮಾಧ್ಯಮಗಳು ಅಳತೆ ಮೀರಿ ನೀಡಿದ ಪ್ರಚಾರ ‘ದೇಶಕಾಲ’ವು ನಮ್ಮ ಕಾಲದ ನಿಜವಾದ ಏಕೈಕ ಸಾಹಿತ್ಯಕ ಪ್ರತಿನಿಧಿಯೆಂಬ ಭ್ರಮೆ ಮೂಡಿಸಿದವು. ಇಂಥ ಪ್ರಚಾರವು ಬೇರೆ ನಿಯತಕಾಲಿಕಗಳಿಗೆ ಯಾಕೆ ಲಭ್ಯವಾಗಲಿಲ್ಲ ಎಂಬ ಪ್ರಶ್ನೆ ಸಹಜವಾದುದು. ಅಷ್ಟೇ ಅಲ್ಲ ಸಾಂಸ್ಕೃತಿಕ ಭ್ರಮೆ ಮೂಡಿಸುವ ಕೆಲಸ ತೀರಾ ಅನಾರೋಗ್ಯಕರವಾದುದು.

ನಾವು ಒಮ್ಮೆ ಅವಲೋಕಿಸಿಕೊಳ್ಳೋಣ. ಚಂದ್ರಶೇಖರ ಪಾಟೀಲರ ‘ಸಂಕ್ರಮಣ’ವು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕಡಿಮೆಯೆ? ನಲವತೈದು ವರ್ಷಗಳಿಂದ ಪ್ರಕಟವಾಗುತ್ತಿರುವ ‘ಸಂಕ್ರಮಣ’ಕ್ಕೆ ‘ದೇಶಕಾಲ’ದ ಮಾದರಿಯಲ್ಲಿ ಮಹತ್ವ ಮತ್ತು ಪ್ರಚಾರ ಲಭ್ಯವಾಗಿದೆಯೆ? ಮೂವತ್ತು ವರ್ಷಗಳಿಂದ ಪ್ರಕಟವಾಗುತ್ತಿರುವ ಶೂದ್ರ ಶ್ರೀನಿವಾಸರ ‘ಶೂದ್ರ’ ಪತ್ರಿಕೆಯ ಬಗ್ಗೆ ಮುದ್ರಣ ಮಾಧ್ಯಮಗಳು ಎಷ್ಟು ಪ್ರಚಾರ ಕೊಟ್ಟಿವೆ? ಆರ್.ಜಿ. ಹಳ್ಳಿ ನಾಗರಾಜರ ‘ಅನ್ವೇಷಣೆ’ ಇಂದೂಧರ ಹೊನ್ನಾಪುರ ಅವರ ‘ಸಂವಾದ’ಗಳ ಕೊಡುಗೆ ಕಡಿಮೆಯೆ? ಡಾ. ಜಿ. ರಾಮಕೃಷ್ಣರ ಸಂಪಾದಕತ್ವದಲ್ಲಿ ಬರುತ್ತಿರುವ ‘ಹೊಸತು’ ತಿಂಗಳ ಪತ್ರಿಕೆಯು ಪ್ರತಿವರ್ಷವೂ ವಿಶೇಷ ಸಂಚಿಕೆ ತರುತ್ತಿದ್ದರೂ ಆ ಬಗ್ಗೆ ಯಾಕೆ ಮಹತ್ವ ನೀಡುತ್ತಿಲ್ಲ? ಹರಿಹರಪ್ರಿಯರ ‘ಪುಸ್ತಕಮನೆ’, ಮಂಡ್ಯ ಕರ್ನಾಟಕ ಸಂಘದ ‘ಅಭಿವ್ಯಕ್ತಿ’, ಲಿಂಗದೇವರು ಹಳೇಮನೆ ನೇತೃತ್ವದ ‘ಅರುಹು ಕುರುಹು’ – ಇಂಥ ಗಂಭೀರ ಪ್ರಯತ್ನಗಳನ್ನು ಕುರಿತು ಎಲ್ಲಿಯಾದರೂ ಪ್ರಸ್ತಾಪವಾಗಿದೆಯೆ ? ನಾನಿಲ್ಲಿ ಉಲ್ಲೇಖಿಸದ ಇನ್ನೂ ಕೆಲವು ಮಹತ್ವದ ಪ್ರಯತ್ನಗಳು ಇರಲು ಸಾಧ್ಯ. ತಕ್ಷಣಕ್ಕೆ ಇಷ್ಟು ಹೆಸರುಗಳನ್ನು ಹೇಳಿದ್ದೇನೆ. ಈಗ ಕೇಳಿಕೊಳ್ಳೋಣ ಮತ್ತು ಕೇಳೋಣ : ತಪ್ಪು ಎಲ್ಲಿದೆ? ತಪ್ಪು ಯಾರದು ?

ನಮ್ಮ ಸಮಕಾಲೀನ ಸಾಂಸ್ಕೃತಿಕ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ತಪ್ಪುಗಳ ನೆಲೆಯನ್ನು ಕಂಡುಕೊಳ್ಳಬಹುದೆಂದು ನಾನು ಭಾವಿಸಿದ್ದೇನೆ. ನಾನು ಗ್ರಹಿಸಿದಂತೆ ನಮ್ಮ ಸಾಂಸ್ಕೃತಿಕ ಲೋಕವು ‘ಸ್ಥೂಲವಾಗಿ’ ಮೂರು ವಲಯಗಳಲ್ಲಿ ದ್ರುವೀಕರಣಗೊಳ್ಳುತ್ತಿದೆ. ಸಾಂಸ್ಕೃತಿಕ ದ್ರುವೀಕರಣದ ಮೂರು ವಲಯಗಳನ್ನು ಮುಂದಿನಂತೆ ವಿವರಿಸುತ್ತೇನೆ :

೧. ಜಾತಿವಾದ ಮತ್ತು ಕೋಮುವಾದ ಪ್ರಧಾನ ವಲಯವೊಂದು ಗಟ್ಟಿಗೊಳ್ಳುತ್ತಿರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿದೆ. ಜಾತಿವಾದ ಮತ್ತು ಕೋಮುವಾದವನ್ನು ಮೊದಮೊದಲು ಮಗುಮ್ಮಾಗಿ ಇಟ್ಟುಕೊಂಡಿದ್ದವರು ಸಹ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸ್ಪಷ್ಟವಾಗಿ ಬಯಲಾಗುತ್ತಿದ್ದಾರೆ. ಬಯಲಾಗುವ ಪ್ರಕ್ರಿಯೆ ಪ್ರಾರಂಭವಾದದ್ದು ತೊಂಬತ್ತರ ದಶಕದಲ್ಲಿ – ಬಾಬರಿ ಮಸೀದಿಯ ಧ್ವಂಸ ಪ್ರಕರಣದ ನಂತರದಲ್ಲಿ, ದೇಶದಲ್ಲಿ ಕೋಮು ಘರ್ಷಣೆಗಳು ಹೆಚ್ಚಾದಂತೆ ಸಾಂಸ್ಕೃತಿಕ ವಲಯದಲ್ಲೂ ತಲ್ಲಣವುಂಟಾಗತೊಡಗಿ ಸ್ಪಷ್ಟ ನಿಲುವಿಗೆ ಬರುವುದು ಅನಿವಾರ್ಯವಾಯಿತು. ಕೆಲವರು ಅಡ್ಡಗೋಡೆಯ ದೀಪವಾಗಲು ಪ್ರಯತ್ನಿಸುತ್ತಲೇ ‘ದ್ವೀಪ’ ವಾಗತೊಡಗಿದ್ದು ಈಗ ಇತಿಹಾಸ. ತಂತಮ್ಮ ದ್ವೀಪಗಳನ್ನು ದಾಟದೆ ಸಾಮರಸ್ಯ ಮತ್ತು ಸಮಾನತೆಯ ಮಾತಿಗೆ ಅರ್ಥವಿಲ್ಲವೆಂಬುದನ್ನು ಇಂಥವರಿಗೆ ಹೇಳಲೇಬೇಕಾಗಿದೆ. ಜಾತಿ ಮತ್ತು ಕೋಮು ದ್ವೇಷದ ದ್ವೀಪದೊಳಗೆ ಕೂತು ‘ದೀಪ’ ಬೆಳಗುವ ಸಾಂಸ್ಕೃತಿಕ ಕ್ರಿಯೆಗೆ ಮಾನವೀಯ ಸ್ಪರ್ಶ ಹೇಗೆ ಬಂದೀತು? ಸಂವೇದನಾಶೀಲತೆ ಹೇಗೆ ದಕ್ಕೀತು? ನಾನಿಲ್ಲಿ ಜಾತಿ ಎನ್ನುವಾಗ ಒಂದೇ ಜಾತಿಯನ್ನು ಹೇಳುತ್ತಿಲ್ಲ. ಕರ್ನಾಟಕದ ಮಟ್ಟಿಗೆ ಮೇಲ್ ಜಾತಿ ಮತ್ತು ಮಧ್ಯಮ ಪ್ರಬಲ ಜಾತಿಗಳ ನಾಯಕತ್ವದ ಮನಸ್ಸು ಮಲಿನಗೊಂಡಿದೆ. ಸಾಮಾನ್ಯ ಜನರಲ್ಲೂ ಜಾತಿವಾದವನ್ನು ಹುಟ್ಟು ಹಾಕುವಷ್ಟು ಪ್ರಬಲವಾಗಿದೆ. ಕೋಮುವಾದವಂತೂ ಒಂದು ಮನೋನ್ಮಾದವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿದೆ. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಧಾರ್ಮಿಕ ಮೂಲಭೂತವಾದಕ್ಕೆ ಕಟ್ಟುಬಿದ್ದ ಸಾಂಸ್ಕೃತಿಕ ವಲಯದ ದ್ರುವೀಕರಣ ತುಂಬಾ ಅಪಾಯಕಾರಿ ಯಾದುದು. ಆದರೆ ಈ ವಲಯದಲ್ಲಿ ಮುಚ್ಚುಮರೆಯಿಲ್ಲವೆಂಬುದು ಗಮನಾರ್ಹ ಸಂಗತಿ. ಈ ವಲಯಕ್ಕೆ ಮುಖವಾಡಗಳಿಲ್ಲ. ನಿಜ ಮುಖದ ಎರಡು ಕಣ್ಣುಗಳಾಗಿ ಜಾತಿವಾದ ಮತ್ತು ಕೋಮುವಾದಗಳಿರುವುದರಿಂದ ಅದರ ನೋಟವೂ ಸ್ಪಷ್ಟ; ನಮ್ಮ ನೋಟವೂ ಸ್ಪಷ್ಟ. ಹೀಗಾಗಿ ಇವರ ಸಾಂಸ್ಕೃತಿಕ ‘ಆವರಣ’ಗಳು ಅನಾವರಣಗೊಳ್ಳುತ್ತ ಹೋಗುತ್ತವೆ.

೨. ಜಾತಿವಾದ ಮತ್ತು ಕೋಮುವಾದದ ಪರವಾಗಿ ಇಲ್ಲವೆಂಬ ಭಾವನೆ ಮೂಡಿಸುತ್ತಲೇ ಮೇಲ್‌ವರ್ಣ ಮತ್ತು ಮೇಲ್ವರ್ಗಗಳ ಸಂವೇದನಾ ಸೂಕ್ಷ್ಮತೆಗಳನ್ನು ಪ್ರಧಾನವಾಗಿಸಿಕೊಂಡಿರುವ ಇನ್ನೊಂದು ವಲಯವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಬಲವಾಗುತ್ತಿದೆ. ಈ ವಲಯವು ಸೃಷ್ಟಿಶೀಲತೆಯ ವೈಯಕ್ತಿಕ ಅನನ್ಯತೆಯನ್ನು ಮುಂದು ಮಾಡುತ್ತ ಸಾಮಾಜಿಕ ಪರಿಭಾಷೆ ಮತ್ತು ಕಾಳಜಿಯನ್ನು ನಿರ್ಲಕ್ಷಿಸುತ್ತಿದೆ. ಆದರೆ ಮೇಲ್ನೋಟಕ್ಕೆ ಇದು ಜಾತಿವಾದಿ, ಕೋಮುವಾದಿ ಎನ್ನಿಸುವುದಿಲ್ಲ. ಮೇಲ್ವರ್ಣ – ಮೇಲ್ವರ್ಗಗಳ ಪರ ಎನ್ನಿಸುವುದಿಲ್ಲ. ಆದರೆ ಆಳದಲ್ಲಿರುವ ಸಂವೇದನಾಶೀಲತೆ ಮೇಲ್ವರ್ಣ ಮತ್ತು ವರ್ಗಾನುಭವದಿಂದ ರೂಪುಗೊಂಡಿರುವುದು ಸ್ಪಷ್ಟವಾಗುತ್ತಿದೆ. ಜಾತಿ ಕೋಮುವಾದದ ವಿಷಯಕ್ಕೆ ಬಂದರೆ ಅವುಗಳನ್ನು ವಿರೋಧಿಸುವವರೂ ಇಲ್ಲಿದ್ದಾರೆ; ಒಪ್ಪಿ ಮಗುಮ್ಮಾಗಿ ಇರುವವರೂ ಇಲ್ಲಿದ್ದಾರೆ. ಆ ಕಾರಣದಿಂದಲೇ ಜಾತಿವಾದ ಮತ್ತು ಕೋಮು ವಾದಕ್ಕೆ ಸೆಡ್ಡು ಹೊಡೆದಂತೆ ಮಾತಾಡುವ ವಲಯ ಇದಲ್ಲ. ತನ್ನನ್ನು ಆರೋಗ್ಯಕರ ‘ಸಾಮಾಜಿಕ ವಲಯ’ವೆಂದು ಬಿಂಬಿಸಿಕೊಳ್ಳುವ ಸಲುವಾಗಿಯೋ ಏನೋ ಕೆಲವು ಕೋಮುವಾದ ವಿರೋಧಿಗಳಿಗೂ ಕೆಲವು ತಳಸ್ತರದ ಸಾಹಿತಿಗಳಿಗೂ ‘ಸ್ಥಾನಗೌರವ’ವನ್ನೂ ಕಲ್ಪಿಸಲಾಗುತ್ತದೆ. ಹೀಗಾಗಿ ಪಕ್ಷಪಾತರಹಿತ ಸಾಂಸ್ಕೃತಿಕ ವಲಯವೆಂಬ ‘ಕೀರ್ತಿ’ಗೂ ಭಾಜನವಾಗುತ್ತದೆ. ‘ದೇಶಕಾಲ’ವು ಈ ಸಾಂಸ್ಕೃತಿಕ ವಲಯಕ್ಕೆ ಒಪ್ಪುವ ಅಥವಾ ಅತಿ ಹತ್ತಿರವಾಗುವ ಪತ್ರಿಕೆಯೆಂದು ನಾನು ಗ್ರಹಿಸಿದ್ದೇನೆ.

ಇಲ್ಲಿ ‘ದೇಶಕಾಲ’ವು ನನಗೊಂದು ಸಂಕೇತ. ವೈಯಕ್ತಿಕ ಅನುಭವ ಪ್ರಾಮಾಣ್ಯವನ್ನು ಪ್ರಧಾನವಾಗಿ ಪರಿಗಣಿಸುವ ಮತ್ತು ಸಾಮಾಜಿಕ ಆಶಯ ಮತ್ತು ಪರಿಭಾಷೆಗಳನ್ನು ಅಪ್ರಧಾನ ಗೊಳಿಸುವ ಸಾಂಸ್ಕೃತಿಕ ವಲಯದ ಒಂದು ಸಂಕೇತವೇ ‘ದೇಶಕಾಲ’. ಮಧ್ಯಮಮಾರ್ಗಿಯಂತೆ ಕಾಣುವ ಈ ವಲಯವು ಸಾಹಿತ್ಯ ಸೃಷ್ಟಿಯನ್ನು ಸಾಮಾಜಿಕ ನೆಲೆಗಿಂತ ಹೆಚ್ಚಾಗಿ ವೈಯಕ್ತಿಕ ನೆಲೆಯಿಂದ ನೋಡುತ್ತದೆ. ಸಾಮಾಜಿಕವೆನ್ನುವುದು ಹೆಚ್ಚೆಂದರೆ ಒಂದು ಹೊರವಲಯವಾಗಿರುತ್ತದೆ. ಒಳವಲಯವಾಗಿರುವುದಿಲ್ಲ. ಒಳವಲಯವೇನಿದ್ದರೂ ವೈಯಕ್ತಿಕ ಸಂವೇದನೆಯ ತಾಣವೆಂಬ ತಿಳುವಳಿಕೆ. ಇಂಥ ತಿಳುವಳಿಕೆಯ ಮೂಲಕ ಸಾಂಸ್ಕೃತಿಕ ಕ್ರಿಯೆಗೆ ತೊಡಗುವುದೆಂದರೆ ಅದು ‘ನವ್ಯ ಸಾಹಿತ್ಯ ಸಂದರ್ಭದ ಪುನರುತ್ಥಾನ ಪ್ರಕ್ರಿಯೆ’ ಎಂದು ನಾನು ಭಾವಿಸುತ್ತೇನೆ. ನಮ್ಮ ಸಾಹಿತ್ಯವು ಶಿಲ್ಪ, ಭಾಷೆಯ ಮಿತ ಬಳಕೆ, ಸಾಂಕೇತಿಕತೆ – ಇವೇ ಮುಂತಾದ ಕಾರಣಗಳಿಂದ ಗಮನಾರ್ಹ ಕೊಡುಗೆ ನೀಡಿದ್ದರೂ ಸಾಮಾಜಿಕ ಅನುಭವ ಪ್ರಾಮಾಣ್ಯದ ಬದಲು ವೈಯಕ್ತಿಕ ಅನುಭವ ಪ್ರಾಮಾಣ್ಯಕ್ಕೆ ಪ್ರಾಧಾನ್ಯತೆ ನೀಡಿತು. ವೈಯಕ್ತಿಕತೆ ಮತ್ತು ಸಾಮಾಜಿಕತೆಗಳು ಅನಗತ್ಯವಾಗಿ ವಿಭಜನೆಗೊಂಡವು. ಈ ವಿಭಜನೆಯು ‘ದೇಶಕಾಲ’ ವಲಯದಲ್ಲಿ ಪುನರುತ್ಥಾನಗೊಳ್ಳುತ್ತಿದೆ. ಹೀಗಾಗಿಯೇ ಕೃತಿಶ್ರೇಷ್ಠತೆ, ವ್ಯಕ್ತಿಶ್ರೇಷ್ಠತೆಗಳು ಮುನ್ನೆಲೆಗೆ ಬಂದಿವೆ. ಈ ದೃಷ್ಟಿಯಿಂದ ‘ದೇಶಕಾಲ’ದ ವಿಶೇಷ ಸಂಚಿಕೆಯಲ್ಲಿ ೨೧ ಶ್ರೇಷ್ಠ ಕೃತಿಗಳನ್ನೂ ೨೧ನೇ ಶತಮಾನದ ೨೧ ಉತ್ತಮ (ಶ್ರೇಷ್ಠ?) ಲೇಖಕರನ್ನೂ ಗುರುತಿಸಲಾಗಿದೆ. ಹಾಗಾದರೆ ಈ ಕೃತಿ ಮತ್ತು ಕೃತಿಕಾರರಾಚೆಗೆ ಉತ್ತಮ ಕೃತಿ, ಮತ್ತು ಕೃತಿಕಾರರು ಇಲ್ಲವೆ? ಇದೊಂದು ಅವೈಜ್ಞಾನಿಕ ಆಯ್ಕೆಯಾಗುತ್ತದೆಯೆಂಬ ವಿವೇಕ ಸಂಪಾದಕರಿಗಾಗಲಿ, ಆಯ್ಕೆ ಮಾಡಿದ ವಿಮರ್ಶಕರಿಗಾಗಲಿ ಯಾಕೆ ಇಲ್ಲ? ಯಾಕೆಂದರೆ ಹೀಗೆ ಆಯ್ಕೆ ಮಾಡುವುದೇ ಸಾಂಸ್ಕೃತಿಕ ವಿವೇಕವೆಂದು ಈ ವಲಯ ಭಾವಿಸಿದೆ. ಇಂಥ ಆಯ್ಕೆಗಳನ್ನು ದೇಶಕಾಲವಷ್ಟೇ ಅಲ್ಲ ಇನ್ನು ಕೆಲವು ಪತ್ರಿಕೆಗಳೂ ಮಾಡಿವೆ. ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳಿಗೆ ಸಂಬಂಧಿಸಿದ ಇಂಥ ‘ಶ್ರೇಷ್ಠ ಆಯ್ಕೆ’ಯನ್ನು ಮಾಡಿದ ಪತ್ರಿಕೆಗಳಿಗೆ ಅಪ್ಪಿ ತಪ್ಪಿಯೂ ಸಾಮಾಜಿಕ ಕಾಳಜಿ ಪ್ರಧಾನವಾದ ಕಲಾತ್ಮಕತೆಯ ನೆನಪು ಬರುವುದಿಲ್ಲ. ಅನುಮಾನ ಹುಟ್ಟುವುದು ಇದೇ ಕಾರಣಕ್ಕೆ.

ಕಲಾತ್ಮಕತೆ ಮತ್ತು ಶ್ರೇಷ್ಠತೆಗಳ ಗುತ್ತಿಗೆ ಪಡೆದ ವಲಯವೇ ಈ ಮಧ್ಯಮ ಮಾರ್ಗಿ ವಲಯ; ದ್ವಿಪಾತ್ರಾಭಿನಯವನ್ನೂ ಏಕಪಾತ್ರಾಭಿನಯಕ್ಕೆ ತಿರುಗಿಸುವ ಛಾತಿಯುಳ್ಳ ಈ ಸಾಂಸ್ಕೃತಿಕ ವಲಯವು ‘ಸಾಂಸ್ಕೃತಿಕ ಸುಪ್ರೀಂಕೋರ್ಟ್’ ಆಗುವ ಹವಣಿಕೆಯಿಂದ ಕೂಡಿದೆ. ಇದು ಹವಣಿಕೆಯ ಹಂತವನ್ನು ದಾಟಿ ಅಧಿಕಾರದ ಹಂತಕ್ಕೆ ಬರುತ್ತಿರುವುದೇ ಇಂದಿನ ಅಪಾಯ. ಇದು ಕೇವಲ ‘ದೇಶಕಾಲ’ಕ್ಕೆ ಸಂಬಂಧಿಸಿದ್ದಲ್ಲ. ಸಾಂಸ್ಕೃತಿಕ ಕ್ಷೇತ್ರವನ್ನು ಸೂಕ್ಷ್ಮ ಸಂವೇದನೆಗಳ ನೆಪದಲ್ಲಿ ಆಳಲು ಹೊರಟ ದೊಡ್ಡವಲಯವೇ ರೂಪುಗೊಳ್ಳುತ್ತಿರುವ ಅಪಾಯವನ್ನು ನಾವು ಅರಿಯಬೇಕಾಗಿದೆ. ಹಾಗೆಂದು ಸೂಕ್ಷ್ಮ ಸಂವೇದನೆಗಳನ್ನು ವಿರೋಧಿಸಬೇಕಾಗಿಲ್ಲ. ವೈಯಕ್ತಿಕ ಅನುಭವ ಪ್ರಾಮಾಣ್ಯವನ್ನು ಪ್ರಧಾನವಾಗಿಸುತ್ತ, ಸಾಮಾಜಿಕ ಸೂಕ್ಷ್ಮಗಳನ್ನು ನಿರ್ಲಕ್ಷಿಸುತ್ತ, ‘ಮುಕ್ತವಾಗಿ’ ವ್ಯಾಪಿಸುತ್ತಿರುವ ‘ಸಾಂಸ್ಕೃತಿಕ ಕೇಂದ್ರೀಕರಣ’ವನ್ನು ನಾವು ಪ್ರಶ್ನಿಸಬೇಕಾಗಿದೆ. ನೇರವಾಗಿ ಜಾತಿ-ಕೋಮುಗಳನ್ನು ಮುಂದು ಮಾಡಿಕೊಂಡ ಸಾಂಸ್ಕೃತಿಕ ವಲಯಕ್ಕಿಂತ ಈ ‘ಸೂಕ್ಷ್ಮ’ ಸಾಂಸ್ಕೃತಿಕ ವಲಯವು ಪ್ರಗತಿಪರ ಆಶಯಗಳಿಗೆ ಹೆಚ್ಚು ಧಕ್ಕೆ ತರಬಹುದಾದ ಅಪಾಯಗಳನ್ನು ಅವಲೋಕಿಸಬೇಕಾಗಿದೆ. ಯಾವುದೇ ಸಾಂಸ್ಕೃತಿಕ ಚಳವಳಿಗಳಿಲ್ಲ ಎಂದು ಹೇಳುತ್ತಲೇ ಅಗೋಚರ ಸಂಘಟನೆಯಲ್ಲಿ ತೊಡಗಿರುವ ವಲಯ ಇದಾಗಿದ್ದು ಪ್ರಗತಿಪರರು ತಾತ್ವಿಕವಾಗಿ ಮುಖಾಮುಖಿಯಾಗಬೇಕಾಗಿದೆ. ಪ್ರಗತಿಪರ ಚಿಂತನೆಗೆ ಬದ್ಧವಾದವರ ಜೊತೆ ಈ ಮಧ್ಯಮ ಮಾರ್ಗಿ ವಲಯದ ಸಂವಾದ ಸಾಧ್ಯವಾದೀತೆ ಎಂಬ ಅನುಮಾನ ನನ್ನದು. ಯಾಕೆಂದರೆ ಈ ಮಧ್ಯಮಮಾರ್ಗಿ ಸಾಂಸ್ಕೃತಿಕ ವಲಯವು ಸಾಹಿತ್ಯಾದಿ ಕಲೆಗಳಿಗೆ ಸಾಮಾಜಿಕ ಬದ್ಧತೆ ಇರಬೇಕೆಂಬುದನ್ನು ಒಪ್ಪುವುದಿಲ್ಲ.

೩. ಇನ್ನೊಂದು ಸಾಂಸ್ಕೃತಿಕ ವಲಯ ಎಲ್ಲ ಪ್ರಗತಿಪರರನ್ನೂ ಒಳಗೊಂಡದ್ದೆಂದು ಹೇಳಬಹುದು. ಸಾಮಾಜಿಕ ಪ್ರಜ್ಞೆ ಕಾಳಜಿ ಮತ್ತು ಬದ್ಧತೆಯ ಪ್ರತಿಪಾದಕರಾದ ಪ್ರಗತಿಪರರು ಒಂದೇ ಚಿಂತನ ಧಾರೆಯನ್ನು ಹೊಂದಿದವರಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಮಾವೊ, ಲೆನಿನ್ – ಹೀಗೆ ವಿವಿಧ ಚಂತನಧಾರೆಗಳನ್ನು ಪ್ರಧಾನವಾಗಿ ನಂಬಿದವರು ಈ ವಲಯದಲ್ಲಿದ್ದಾರೆ. ಯಾವುದೇ ಒಂದು ‘ವಾದ’ವನ್ನು ತಮ್ಮದೆಂದು ಹೇಳಿಕೊಳ್ಳದ ವಿಶಾಲ ವ್ಯಾಪ್ತಿಯ ಪ್ರಗತಿಪರರೂ ಇದ್ದಾರೆ. ಇನ್ನೂ ಜನರನ್ನು ವಿಶಾಲ ತಳಹದಿಯ ಮೇಲೆ ಒಂದೇ ಸಾಂಸ್ಕೃತಿಕ ವೇದಿಕೆಗೆ ತಂದದ್ದು ಬಂಡಾಯ ಸಾಹಿತ್ಯ ಸಂಘಟನೆ. ಈ ಸಂಘಟನೆಯ ಆರಂಭಕ್ಕೂ ಮುಂಚಿನಿಂದ ದಲಿತ ಸಂಘರ್ಷ ಸಮಿತಿ, ಸಮುದಾಯ ಸಂಘಟನೆಗಳು ಉಂಟುಮಾಡಿದ ಜಾಗೃತಿ ಚಾರಿತ್ರಿಕವಾದದ್ದು. ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಬೇಕೆಂಬ ಪ್ರತಿಪಾದನೆಗೆ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒತ್ತಾಸೆಯಾದ ದಲಿತ ಚಳವಳಿ, ಸಮುದಾಯ ಸಂಘಟನೆಗಳನ್ನು ನೆನೆಯುತ್ತಲೇ ದಲಿತ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳ ವಿಕಾಸವನ್ನು ಗುರುತಿಸುವುದು ಒಂದು ಚಾರಿತ್ರಿಕ ತಿಳುವಳಿಕೆಯಾಗಿದೆ. ಈ ಸಾಹಿತ್ಯ ಚಳವಳಿಗಳ ಶಕ್ತಿ ಕ್ಷೀಣಿಸಿದ್ದರೂ ಫಲಿತಗಳು ಎದ್ದುಕಾಣುತ್ತಿವೆ. ಮುಂಚೆ ಸಾದರಪಡಿಸಿದ ಎರಡು ಸಾಂಸ್ಕೃತಿಕ ವಲಯಗಳಾಚೆ ಇರುವವರೆಲ್ಲ ಪ್ರಗತಿಪರ ಆಶಯಗಳನ್ನು ಅಂತರ್ಗತ ಮಾಡಿಕೊಂಡ ಪ್ರಕ್ರಿಯೆಯಲ್ಲಿ ದಲಿತ, ಬಂಡಾಯ ಸಾಹಿತ್ಯ ಚಳವಳಿಗಳ ಪಾತ್ರ ಇದ್ದೇ ಇದೆ.

ಆದರೆ ಈ ಪ್ರಗತಿಪರ ವಲಯ ಒಂದು ಒಕ್ಕೂಟವಾಗಿ ಉಳಿದಿದೆಯೇ ಅಥವಾ ಬಿಡಿ ಬಿಡಿಯಾಗಿ ಬೆಳೆಯುತ್ತಿದೆಯೆ? ನನಗನ್ನಿಸುತ್ತದೆ : ಚಿಂತನಾ ವಿಧಾನದಲ್ಲಿ ಒಕ್ಕೂಟವಾಗಿದೆ; ಸಂಘಟನೆಯಲ್ಲಿ ಬಿಡಿಬಿಡಿಯಾಗಿದೆ; ಶಿಥಿಲಗೊಂಡ ಸಾಂಸ್ಕೃತಿಕ ವಲಯವಾಗಿದೆ. ಹಾಗೆ ನೋಡಿದರೆ ಎಪ್ಪತ್ತರ ದಶಕದಲ್ಲಿ ‘ಸಂಘಟನೆ’ ಮೇಲುಗೈ ಪಡೆದರೆ, ತೊಂಬತ್ತರ ದಶಕದಲ್ಲಿ ‘ವಿಘಟನೆ’ ಮೇಲುಗೈ ಪಡೆದದ್ದು ಒಂದು ಸಾಮಾಜಿಕ ಘಟನೆಯೇ ಆಗಿದೆ. ಜಾತಿ, ಧರ್ಮ, ರಾಜಕೀಯ – ಹೀಗೆ ಬಹಳಷ್ಟು ಕ್ಷೇತ್ರಗಳು ವಿಘಟನೆಯ ಹಾದಿ ಹಿಡಿಯುತ್ತ ವ್ಯಕ್ತಿ ಪ್ರತಿಷ್ಠೆ ಅಥವಾ ವ್ಯಕ್ತಿ ವಿಶಿಷ್ಟತೆಯನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಪ್ರಧಾನವಾಗಿ ಕಾಣಿಸಿಕೊಂಡಿವೆ. ಮುಕ್ತ ಆರ್ಥಿಕ ಪದ್ಧತಿಯ ಜಾಗತೀಕರಣವು ಬಂಡವಾಳಶಾಹಿಗಳಿಗೆ ಮುಕ್ತವೂ ಜಾಗತಿಕವೂ ಆದಂತೆ ಸಾಮಾಜಿಕ ವಲಯದಲ್ಲಿ ಸ್ವಾರ್ಥ ಮತ್ತು ಲಾಭಗಳನ್ನು ಮೌಲ್ಯವಾಗಿಸತೊಡಗಿತು. ಇದರ ಫಲವಾಗಿ ನಮ್ಮ ಸಾಮಾಜಿಕ ಚಹರೆಯೂ ಬದಲಾಗತೊಡಗಿತು. ಪ್ರಗತಿಪರರಲ್ಲೂ ಸಣ್ಣಪುಟ್ಟ ಚಿಂತನಾ ಛಿದ್ರತೆಗಳು ಹೆಚ್ಚಾದವು. ಕಲಾತ್ಮಕತೆಯ ಹೆಸರಿನಲ್ಲಿ ವಸ್ತು ಪ್ರಧಾನ ಪ್ರಯೋಗಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಟೀಕಿಸುವ, ಕೃತಿಯ ವಿನ್ಯಾಸದಲ್ಲಿ ಉತ್ತಮಿಕೆಯನ್ನು ಹುಡುಕುವ ವಿಮರ್ಶಾ ವೈಖರಿ ಪ್ರಗತಿಪರರಾದ ಕೆಲವರಲ್ಲಿ ಕಾಣಿಸಿಕೊಂಡಿತು. ಶ್ರೇಷ್ಠತೆ – ಕಲಾತ್ಮಕತೆಗಳ ಬಗ್ಗೆ ಹೊಸ ವ್ಯಾಖ್ಯಾನಕ್ಕೆ ಕಾರಣವಾಗುವ ಬದಲು ಮಧ್ಯಮ ಮಾರ್ಗಿ ಸಾಂಸ್ಕೃತಿಕ ವಲಯದ ವಿಚಾರಗಳನ್ನೂ ಬಿಡದೆ ಪ್ರಗತಿಪರ ಹೊಸ ಹುಟ್ಟುಗಳನ್ನು ತುಂಬು ಮನಸ್ಸಿನಿಂದ ಒಪ್ಪದೆ, ಹೊಸ ಬರಹಗಾರರಲ್ಲಿ ಕೆಲವರಿಗಾದರೂ ಗೊಂದಲವುಂಟು ಮಾಡಲಾಯಿತು ಮತ್ತು ಮಾಡಲಾಗುತ್ತಿದೆ. ಈ ಎಲ್ಲ ಅಂಶಗಳು, ‘ದೇಶಕಾಲ’ದಂಥ ಸಾಂಸ್ಕೃತಿಕ ವಲಯಕ್ಕೆ ಹಾಸಲು ಹೊದೆಯಲು ಕೊಟ್ಟ ವರಗಳಾದವು. ಪ್ರಗತಿಪರ ಸಾಂಸ್ಕೃತಿಕ ವಲಯದ ಶಿಥಿಲತೆ; ಈ ‘ದೇಶ-ವಿದೇಶ ಕಾಲ’ಗಳು ವ್ಯಾಪಕವಾಗಲೂ ಸ್ವಲ್ಪಮಟ್ಟಿಗಾದರೂ ಕಾರಣವಾಗಿದೆ. ವಿವಿಧ ಚಿಂತನಾ ಧಾರೆಗಳೂ ಮತ್ತು ವ್ಯಕ್ತಿಗತ ಆಸಕ್ತಿಯಿಂದ ಹುಟ್ಟುವ ವಿರೋಧಗಳೂ ಇಲ್ಲಿ ಕೆಲಸ ಮಾಡುತ್ತಿವೆ. ಇಷ್ಟಾದರೂ ಸಂಘಟನಾತ್ಮಕವಾಗಿ ‘ಶಿಥಿಲವಲಯ’ವಾಗಿರುವ ಪ್ರಗತಿ ಪರರು ವೈರಿವಿರೋಧಿ ಚಿಂತನೆಯಲ್ಲಿ ಶಿಥಿಲವಾಗಿಲ್ಲದಿರುವುದು ಸಮಾಧಾನದ ಸಂಗತಿ. ಈ ಕಾರಣದಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದಿಷ್ಟು ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿ ಉಳಿದುಕೊಂಡಿದೆ. ಇಷ್ಟಾದರೂ ಪ್ರಗತಿಪರ ವಲಯವು ತನ್ನೊಳಗಿನ ವಿರೋಧಗಳು ಮತ್ತು ವೈರುಧ್ಯಗಳನ್ನು ಮೀರಿ ಪ್ರಬಲ ಒಕ್ಕೂಟವಾಗಬೇಕಾಗಿದೆ. ಇದು ಈ ಮೂಲಕ ‘ದೇಶಕಾಲ- ಪುರುಷರಿಗೆ ಉತ್ತರ ಕೊಡುವುದು ಸರಿಯಾದ ಮಾರ್ಗವಾಗುತ್ತದೆ.

ಪ್ರಗತಿಪರ ವಲಯವು ಮೊದಲು ಸಾದರಪಡಿಸಿದ ಪ್ರತಿಗಾಮಿ ಹಾಗೂ ಮಧ್ಯಮಮಾರ್ಗಿ ಸಾಂಸ್ಕೃತಿಕ ವಲಯಗಳಂತೆ ‘ಏಕ’ವಲ್ಲ; ‘ಅನೇಕ’. ಅನೇಕ ಸಾಮಾಜಿಕ-ಸಾಂಸ್ಕೃತಿಕ ವೈವಿಧ್ಯಗಳಿಂದ ಕೂಡಿದ ಪ್ರತಿಭಾವಂತರು ಪ್ರಗತಿಪರ ವಲಯದಲ್ಲಿರುವುದು ನಾಡಿನ ದೊಡ್ಡ ಶಕ್ತಿ ಎಂದೇ ನನ್ನ ಭಾವನೆ. ‘ಏಕ’ದ ಬದಲು ‘ಅನೇಕ’ ಇದ್ದಾಗ ವೈರುಧ್ಯಗಳೂ ಇರುತ್ತವೆ. ಆದರೆ ಅವನ್ನು ಮೀರುವುದು ಅಸಾಧ್ಯವಲ್ಲ. ಸಹಜ ವೈರುಧ್ಯಗಳಾದರೆ ಸಮಸ್ಯೆಯಿರುವುದಿಲ್ಲ. ಆದರೆ ನಿಜವಾದ ಸಮಸ್ಯೆಯಿರುವುದು ನಿಜವಾದ ಸಾಂಸ್ಕೃತಿಕ ವಿರೋಧಿಯನ್ನು ಗುರುತಿಸುವಲ್ಲಿ, ಜಾತಿ ಮತ್ತು ಕೋಮುವಾದದ ಪರವಾಗಿ ಸ್ಪಷ್ಟವಾಗಿ ಗೋಚರಿಸುವ ವಲಯವನ್ನು ವಿರೋಧಿಯೆಂದು ಗುರುತಿಸಿಕೊಳ್ಳುವುದು ಸುಲಭ. ಹಾಗೆ ನೋಡಿದರೆ, ಅವರು ಅಪಾಯಕಾರಿ ಪ್ರಾಮಾಣಿಕರು. ಮುಚ್ಚುಮರೆಯಿಲ್ಲದ್ದರಿಂದ ‘ತಮ್ಮ ವಿಚಾರದ ವಿಷಯದಲ್ಲಿ ಪ್ರಾಮಾಣಿಕರು; ಆದರೆ ಮಧ್ಯಮಮಾರ್ಗಿ ಸಾಂಸ್ಕೃತಿಕ ವಲಯಕ್ಕೆ ಈ ಮಾತನ್ನು ಹೇಳುವಂತಿಲ್ಲ. ಸಾರಾಸಗಟಾಗಿ ಅಪಾಯಕಾರಿ ಎನ್ನಲಾಗದ, ಸಾಮಾಜಿಕ ಸಂಗತಿಗಳಲ್ಲಿ ಪ್ರಗತಿಪರ ಪ್ರಾಮಾಣಿಕರು ಎಂದು ಒಪ್ಪಲಾಗದ ಸಂದಿಗ್ಧವೊಂದು ಕಾಡುವುದುಂಟು. ನಾವು ಖಚಿತಪಡಿಸಿಕೊಳ್ಳಬೇಕಾದ್ದು ಏನೆಂದರೆ – ಸಾಮಾಜಿಕ ಕಾಳಜಿಯನ್ನು ಕರುಳಬಳ್ಳಿಯಾಗಿಸಿಕೊಂಡ ಬದ್ಧ ಬರವಣಿಗೆಯ ಬದ್ಧವಿರೋಧವೇ ಈ ಮಧ್ಯಮಮಾರ್ಗಿ ಸಾಂಸ್ಕೃತಿಕ ವಲಯದ ಸಿದ್ಧಾಂತ. ಆದ್ದರಿಂದ ಪ್ರಗತಿಪರರು ವಿರೋಧಿಸ ಬೇಕಾದ್ದು ಕೇವಲ ಒಂದು ಪತ್ರಿಕೆಯನ್ನಲ್ಲ; ಒಂದು ಸಾಮಾಜಿಕ ಸಮುದಾಯವನ್ನಲ್ಲ ಮಧ್ಯಮ ಮಾರ್ಗಿಗಳ ಸಾಂಸ್ಕೃತಿಕ ರಾಜಕೀಯವನ್ನು; ಈ ರಾಜಕೀಯದ ತಳನೆಲೆಯಾದ ಸಿದ್ಧಾಂತವನ್ನು. ನಾನು ಮೊದಲೇ ಹೇಳಿದಂತೆ ‘ದೇಶಕಾಲ’ ಪತ್ರಿಕೆಯು ಒಂದು ಸಂಕೇತ. ಅದರ ವಿರೋಧವೂ ಸಾಂಕೇತಿಕ, ಸಾಂಕೇತಿಕತೆಯನ್ನು ಮೀರಿದ ಸೈದ್ಧಾಂತಿಕ ಸಂಘರ್ಷಕ್ಕಾಗಿ ನಮ್ಮ ಕಾಲವನ್ನು ಹದ ಗೊಳಿಸೋಣ. ಆಗ ‘ದೇಶಕಾಲ’ ಶಕ್ತಿಗಳು ಶಿಥಿಲವಾಗಬಹುದು ಸ್ವಲ್ಪ ಬದಲಾಗಲೂಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಿರ ಪ್ರಯತ್ನ
Next post ಕವಿತೆ ಹುಟ್ಟಿತೇ?

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys