‘ಕವಿತೆ ಹುಟ್ಟಿತೇ?’
ಜೀವ ಬಾಯಾಗಿ
ಕಾತರದ ಕಣ್ಣಾಗಿ

ಸುಕೋಮಲ
ರೇಷಿಮೆಯ ಹುಳು
ಒದ್ದಾಡುತ್ತಿದೆ
ಮುಲುಗುಟ್ಟುತ್ತಾ
ನಿರ್ವಾತದ ಗೂಡಿನೊಳಗೇ
ಸುಡು ನೀರ ಕಾವಿಗೆ.

ದಾರದೆಳೆ
ಎಳೆ ಮೂಡಲು,
ಬೇರ್ಪಡಬೇಕು
ತನುವಿಗಂಟಿದ ತೊಗಲು,

ಇನ್ನೆಷ್ಟು
ಕುದಿಯಲೇರಿಳಿಯಬೇಕೋ
ಜೀವ ಹದವಾಗಲು?

ಕವಿತೆ ಹುಟ್ಟಿತೇ?
ಸುಮ್ಮನೆ!

ಪಾದಭಾರಕ್ಕೆ ನಲುಗಿ
ನೋಯಬಾರದು ಭೂಮಿ
ಉರಿದು ಸುಟ್ಟೀತು
ಒಡಲ ಬೀಜರಾಶಿ.
ಕರುಳ ಸೆರಗೊಡ್ಡಿ
ಬೇಡುತಿದೆ ಪ್ರಾಣ…..

ಬದುಕ ಹಂಬಲಿಸಿ
ಬಡಿವ ಕೈ ಕಾಲು ಸೋತು

ಈಗ ಒಂದೊಂದೇ…
ರೇಷಿಮೆಯ ಎಳೆ
ಸುರಳೀತ ಬಿಚ್ಚಿಕೊಳುತಾ…….
ತೆರೆದಿದೆ ಕವಿತೆ ಕಣ್ಣು !
*****