ಎಚ್.ಎಸ್ ವೆಂಕಟೇಶಮೂರ್ತಿಯವರ ‘ಕನ್ನಡಿಯ ಸೂರ್ಯ’

ಎಚ್.ಎಸ್ ವೆಂಕಟೇಶಮೂರ್ತಿಯವರ ‘ಕನ್ನಡಿಯ ಸೂರ್ಯ’

ಬಹುವಾಚಿತ ‘ಉತ್ತರಾಯಣ’ ಕವಿತೆಗಳ ನಂತರ ನಾಲ್ಕು ವರ್ಷದ ಅವಧಿಯಲ್ಲಿ ಎಚ್‌.ಎಸ್.ವೆಂಕಟೇಶಮೂರ್ತಿ ತಮ್ಮ ಹೊಸ ಕವಿತೆಗಳ ಸಂಗ್ರಹ-`ಕನ್ನಡಿಯ ಸೂರ್ಯ’ ತಂದಿದ್ದಾರೆ. ಉತ್ತರಾಯಣ ಕವಿತೆಗಳಲ್ಲೇ ಕಾಣಿಸಿದ ಕೆಲವು ಹೊರಳುಗಳು ಅವರ ಈ ಹೊಸ ಸಂಕಲನದಲ್ಲಿ ಇನ್ನೂ ನಿಚ್ಚಳವಾಗಿವೆ. ಅವರ ಕಾವ್ಯದಲ್ಲಿ ಕಾಣುವ ಈ ಬದಲಾವಣೆ ಸಮಕಾಲೀನ ಕಾವ್ಯಕ್ಕೆ ಸ್ಪಂದಿಸುವ ಗತಿಯದೂ ಮತ್ತು ಅವರ ಮಾಗಿದ ಜೀವನ ದೃಷ್ಟಿಯ ಬಿಂಬವೂ ಆಗಿರುವಂತೆ ಕಾಣುತ್ತದೆ. ಈ ಹೊರಳುಗಳನ್ನು ಸಂರಚನಾತ್ಮಕ ಮತ್ತು ಜೀವನದೃಷ್ಟಿಯಲ್ಲಾದ ಬದಲಾವಣೆ ಎಂದು ಗುರುತಿಸಬಹುದೇನೊ. ಆ ದೃಷ್ಟಿಯಿಂದ ‘ಕನ್ನಡಿಯ ಸೂರ್ಯ’ದ ಕವಿತೆಗಳು ಒಂದು ತಿಟ್ಟಿನ ತಿರುವಿನಲ್ಲಿ ನಿಂತಂತೆ ಕಾಣುತ್ತಿದೆ.

ಇದುವರೆಗೂ ಎಚ್ಚೆಸ್ವಿ ಕಾವ್ಯವನ್ನು ನವ್ಯೋತ್ತರ, ಭಾವಗೀತಾತ್ಮಕ ಹೀಗೆ ಹಲವು ಹೆಸರುಗಳಿಂದ ಕರೆದು ಓದಲಾಗುತ್ತಿದೆ. ಆದರೆ ನಿರಂತರ ಎನ್ನುವಂತೆ ಕಾವ್ಯೋದ್ಯೋಗ ಮಾಡುತ್ತಾ ಬಂದಿರುವ ಎಚ್ಚೆಸ್ವಿ ಅವರಿಗೆ ಎಲ್ಲ ಮಾರ್ಗಗಳೂ ತೆರೆದ ದಾರಿಗಳೇ. ಅವುಗಳಲ್ಲಿ ಹೊಕ್ಕು ಬರುವುದು ಅವರಿಗೆ ಕಾವ್ಯದ ಪ್ರಯೋಗಶೀಲತೆಯಾಗಿದೆ. ಯಾವ ಇಸಮ್ಮುಗಳಿಗೆ ಸೇರದೆ, ಆದರೆ ಅದನ್ನು ತಳ್ಳಿಹಾಕದೆ ನೋಡುವ ಕ್ರಮ ಸಮನ್ವಯದ್ದು ಎನ್ನುವುದಾದರೆ ಎಚ್ಚೆಸ್ವಿ ಪರಂಪರೆಯ ಸಮರ್ಥ ಸಮನ್ವಯಕಾರ. ಅಂದರೆ, ಅವರು ತಮ್ಮ ಮುಂದಿರುವ ಎಲ್ಲ ಮಾರ್ಗಗಳನ್ನೂ ಸತತವಾಗಿ ಶೋಧಿಸುತ್ತಾ ಒಂದು ಸ್ವಯಂ ಪಾಕವನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ.

ಪರಂಪರೆಯನ್ನು ಅದರ ಧನಾತ್ಮಕ ಕಾರಣಗಳಿಗಾಗಿ ಒಪ್ಪಿ, ಮುಂದುವರೆಸಬಯಸುವ ಎಚ್ಚೆಸ್ವಿ ಅವರ ಮುಂದಿರುವ ಸವಾಲು ಎಂದರೆ ವರ್ತಮಾನದ್ದೇ. ಅವು ಹಲವು ರೀತಿಯಲ್ಲಿ ಅವರ ಮುಂದಿವೆ. ಒಂದು, ಕಾವ್ಯದ ದೃಷ್ಟಿಯಿಂದ ಅವರಿಗೆ ಹೊಸ ಮಾರ್ಗದ ಅವಶ್ಯಕತೆಯಿದೆ ಎನ್ನಿಸಿದರೆ ಇನ್ನೊಂದು ಕಡೆಯಿಂದ ಹಿಂಸೆಯನ್ನು ಅಡಕಗೊಳಿಸಿಕೊಂಡ ವರ್ತಮಾನವು ತದೇಕವೆಂಬಂತೆ ಘಟಿಸುತ್ತಿರುವಾಗ ಅದನ್ನು ಯಾವ ರೂಪದಲ್ಲಿ ಹಿಡಿದಡಲು ಬಂದೀತು ಎನ್ನುವ ಸವಾಲು. ಇದೆಲ್ಲಕ್ಕೂ ಮಿಗಿಲಾಗಿ ಉತ್ತರಾಯಣ ಕವಿತೆಗಳಲ್ಲಿ ನಿರೂಪಿಸಿದ ಹೆಂಡತಿಯ ನೆನಪು ಅವರನ್ನು ಕಾವ್ಯದ ಸುಕುಮಾರ ಅಂಶಗಳನ್ನು ಬಿಟ್ಟು ತಾವು ನೋಡಿದ, ತಮಗೆ ತಾಗಿದ ವ್ಯಕ್ತಿಗಳನ್ನು ಮನ‌ ಸೃಷ್ಟಿಸುವುದು ತಾವು ಕಟ್ಟಬೇಕಾದ ಸಾಂಸ್ಕೃತಿಕ ಚರಿತ್ರೆಯನ್ನು ಮುನ್ ಕಾಣಿಸುವಂತೆ ಮಾಡಿದೆ. ಎಚೆಸ್ವಿ ಕಥನದ ಆಯಾಮಗಳನ್ನು ಬಳಸಿಕೊಳ್ಳುತ್ತಾ ಕಾವ್ಯ ಕಟ್ಟುವ ಹದ ಕಂಡುಕೊಳ್ಳುತ್ತಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತಿದೆ.

`ಕನ್ನಡಿಯ ಸೂರ್ಯ’ ಕವಿತೆಗಳ ವಿಶಿಷ್ಟತೆ ಎಂದರೆ ಅವುಗಳಲ್ಲಿ ಒಂದು ಬಗೆಯ ಪ್ರಬಂಧ ಧ್ವನಿ ಕೇಳುತ್ತದೆ. ಪ್ರಬಂಧವೆನ್ನುವುದನ್ನು ಇಲ್ಲಿ ಬೇಕೆಂತಲೆ ಬಳಸಿದ್ದೇನೆ. ಏಕೆಂದರೆ ಪ್ರಬಂಧವೆನ್ನುವುದು ಒಂದು ಗದ್ಯಲಾಲಿತ್ಯ ಮತ್ತು ಪದ್ಯದ ಲಯಗಳನ್ನು ಆತ್ಮಾರ್ಥಕವಾಗಿ ನಿರೂಪಿಸುವ ಹದವಾದ ಪ್ರಕಾರ, ಅದರ ಸುಭಗತೆಯು ಕವಿತೆಗೆ ಸಾಧಿಸಿಕೊಳ್ಳುವ ಯತ್ನವಿಲ್ಲಿ ಕಾಣುತ್ತದೆ. ಉತ್ತರಾಯಣದ ಕವಿತೆಗಳಲ್ಲಿ ಅನುಸರಿಸಿದ ಸತೀಆಖ್ಯಾನದ ಮಾದರಿಯನ್ನು ಎಚ್ಚೆಸ್ವಿ ಇಲ್ಲಿ ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಹೆಚ್ಚಿನಂಶ ವ್ಯಕ್ತಿವಿಶೇಷಗಳೇ ಎದ್ದು ಕಾಣುವಂತಿರುವುದು ಈ ದೃಷ್ಟಿಯಿಂದ ಆಕಸ್ಮಿಕವೇನಲ್ಲ. ತಮ್ಮ ಸುತ್ತಲಿನವರನ್ನೆಲ್ಲ ಎಚೆಸ್ವಿ ಕಂಡರಿಸುವ ವಿಧಾನ ಕಥನ ಕವಿತೆಗೆ ಹತ್ತಿರವಿದೆ. ದುರ್ಗದ ಪೈಲ್ವಾನ್ ನಂಜಪ್ಪನ ಕತೆ ಕವಿತೆಯಾಗಿ ಜೀವ ತಳೆಯುವುದು ಎಷ್ಟು ಸಹಜವೋ ಅಷ್ಟೇ ಸಲೀಸಾಗಿ ಕೊನೆಗಾಲದ ಪುತಿನ ಕವಿತೆಯಲ್ಲಿ ಮೂಡುತ್ತಾರೆ. ಮೂರ್ತಿ, ರಾಧಾಕೃಷ್ಣ, ರಾಜಲಕ್ಷ್ಮಿರಮೇಶ್ ಮತ್ತು ಲಕ್ಷ್ಮಿ ಹೀಗೆ ಕವಿ ಕಂಡ ಹಲವರ ಜೀವನ ಕಥನಗಳು ಕವಿತೆಯ ಧಾಟಿಯಲ್ಲಿ ಮೂಡುವುದು ಅವರ ಕಾವ್ಯದ ಹೊಸ ತಿರುವು ಎನಿಸುತ್ತದೆ. ಹಾಗೆಯೇ ಅವು ಸಾನೆಟ್ ರೂಪದಲ್ಲಿ, ಗೀತೆಯ ರೂಪದಲ್ಲಿ ಬರುವುದನ್ನು ಗಮನಿಸಿದರೆ ಸಾನೆಟ್‌ ಪ್ರಕಾರದ ಆತ್ಮಾರ್ಥಕ ವಿಧಾನದ ಬಳಕೆ ತಿಳಿಯುತ್ತದೆ.

ಇಂದು ಸಮಕಾಲೀನ ಸಾಹಿತ್ಯದ ಒಲವುಗಳು ಆತ್ಮಕತೆಗಳು ಮತ್ತು ಕಥನಗಳತ್ತ ತಿರುಗುತ್ತಿದೆ. ಸಮಕಾಲೀನರನ್ನೇ ಕಥನಗಳಾಗಿಸಿ ಚರಿತ್ರೆಯನ್ನು ಕಟ್ಟುವ ಉಪಚರಿತ್ರೆಯ ಕಾಯಕವನ್ನು ಇಂದು ಕಥಾನಕಗಳು ಮಾಡುತ್ತಿರುವ ಹೊತ್ತಲ್ಲಿ ಎಚ್.ಎಸ್.ವಿ ಅವರಂತಹ ಕವಿ ಅದನ್ನು ತಮ್ಮ ಕವಿತೆಗಳ ಮೂಲಕವೂ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ಈ ಅಂಶವನ್ನು ಗಮನಿಸಿದರೆ ಎಚೆಸ್ವಿ ಕಾವ್ಯದ ಹೊರಳು ಕಾಣುತ್ತದೆ. ಪ್ರಾಯಶಃ ಎಚ್.ಎಸ್.ವಿ ಅವರಂತೆಯೇ ಅವರ ಸಮಕಾಲೀನರನೇಕರು ವ್ಯಕ್ತಿ ಚಿತ್ರಣಗಳ ಕಥನಗಳನ್ನು ಪುನಾ ನಿರೂಪಿಸುತ್ತಿದ್ದಾರೆ. ಇದು ಎಚ್.ಎಸ್.ವಿ ತಮ್ಮನ್ನು ಒಂದು ರೀತಿಯಲ್ಲಿ ಸಮಕಾಲೀನಗೊಳಿಸಿಕೊಳ್ಳುವ ರೀತಿ, ಆದರೆ ಉಪಚರಿತ್ರೆಗಳ ಕಟ್ಟುವ ಎಚ್‌.ಎಸ್.ವಿ ಅವರ ರೀತಿ ಅದಕ್ಕೇ ಸೀಮಿತವಾಗಿಲ್ಲ. ಅವರು ಅದಕ್ಕೆ ಪೂರ್ಣಬದ್ಧರೂ ಆಗಿಲ್ಲ. ಅವರ ಕಾವ್ಯದ ಮೂಲ ಆಕರಗಳು ಉಪಕತೆಗಳ ತುಂಡು ಸರಣಿಯಲ್ಲ. ಮಹಾಕಥನಗಳೆನಿಸಿದ ರಾಮಾಯಣ ಮತ್ತು ಮಹಾಭಾರತಗಳು ಅವರ ಆಕರಗಳು, ಆ ಮಹಾಕಥಾನಕಗಳನ್ನು ಪುನಾ ಸಮಕಾಲೀನ ಪರಿಸರಕ್ಕೆ, ಬದುಕಿಗೆ ಒಗ್ಗುವಂತೆ ಮುರಿದು ಕಟ್ಟುವುದು ಹೇಗೆ ಎಂಬ ಕಡೆ ಅವರ ಗಮನವಿದೆ. ಅಂದರೆ ಪರಂಪರೆಯ ಸತ್ವವೆನ್ನುವುದು ಇಂದು ಬಾಳಿಕೆ ಬರುತ್ತದೋ ಇಲ್ಲವೋ ಎಂಬ ಶೋಧ ಅದು, ಆದ್ದರಿಂದ ಅವರು ಸತತವಾಗಿ ರಾಮ ಕೃಷ್ಣರ ಕತೆಗಳನ್ನು ಪುನಾ ನಿರೂಪಿಸುತ್ತಾ ಬಂದಿದ್ದಾರೆ. ಇದರಿಂದ ಸಮಕಾಲೀನ ಕಥನ ಮತ್ತು ಪುರಾಣದ ಕಥನ ಎರಡು ಭಿನ್ನ ಮಾದರಿಗಳನ್ನು ಏಕಕಾಲದಲ್ಲಿ ಪ್ರಯೋಗಿಸುವ ವಿಘಟಿತ ಕಥನವನ್ನು ಅವರು ಪುನಾ ಜೋಡಿಸಲು ಬಯಸುತ್ತಿದ್ದಾರೆಯೇ ಅನ್ನಿಸದಿರದು.

‘ಕನ್ನಡಿಯ ಸೂರ್ಯ’ದ ಬಹುಮುಖ್ಯ ಕವಿತೆಗಳು ಎಂದರೆ ರಾಮ ಕೃಷ್ಣರ ಮೂಲಕ ವರ್ತಮಾನದ ಬದಲಾವಣೆಗಳ ತಲ್ಲಣಗಳನ್ನು ಹೇಳುವಂತವು. ರಾಮಕೃಷ್ಣರ ಕತೆಗಳನ್ನು ಎಚೆಸ್ವಿ ಇಲ್ಲಿ ನೋಡಿರುವುದು ಸ್ಥಳಪಲ್ಲಟದ ಕಥನಗಳಾಗಿ. ರಾಮ ರಾಮಾಯಣದುದ್ದಕ್ಕು ವನವಾಸಿ, ಜೊತೆಗೆ ತನ್ನ ಹೆಂಡತಿ, ತಮ್ಮನೊಂದಿಗೆ ಒಂದೆಡೆಯಿಂದ ಇನ್ನೊಂದೆಡೆ ವಸತಿ ಬದಲಾಯಿಸುತ್ತಿರುವವನು. ಕೃಷ್ಣನಿಗೆ ಹುಟ್ಟಿನಿಂದಲೂ ಸ್ಥಳ ಬದಲಾವಣೆ ಆಗುತ್ತಲೇ ಇದೆ. [ರಾಮ ಕೃಷ್ಣರು ಕಳೆದರೀಪರಿ ತಮ್ಮ ಬಾಳಿನ/ ಗರಿಷ್ಠಭಾಗ ಹುಟ್ಟೂರ ಬಿಟ್ಟು ಆಗಿ ಪರದೇಶವಾಸಿ(ನಿರ್ಗಮನ)]. ಮಹಾಕಥನಗಳಲ್ಲಿ ಪ್ರಯಾಣ ಬದುಕಿನ ಸಂಕೇತವಾಗಿ ಹೊಸ ಅನುಭವಗಳ ಸಂಕೇತವಾಗಿ ನಿಲ್ಲುವಂತದ್ದು. ಆದರೆ ನಿರ್ದಿಷ್ಟ ಜಾಗದಿಂದ ಕದಲುತ್ತಾ ಹೋಗುವ ಪಲ್ಲಟದ ಕ್ರಿಯೆ ಆಧುನಿಕ ಸಮಾಜಗಳಲ್ಲಿ ಬದುಕಿನ ಸಹಜ ಗತಿಯ, ಅನುಭವ ವಿಕಾಸದ ಕುರುಹುಗಳಾಗಿ ಉಳಿದಿಲ್ಲ. ಇಲ್ಲಿರುವುದು ಸ್ಥಳ ಪಲ್ಲಟಗಳ ಹಿಂಸೆಯ, ನೋವಿನ ಅನುಭವ ಕಥನ.

ಆದ್ದರಿಂದ ಸಹಜವಾಗಿಯೇ ರಮ್ಯಕಥನದ ಧಾಟಿ ಬದಲಾಗಿದೆ. ಬದಲಾವಣೆಯ ವಾಸ್ತವ ಮಾತ್ರ ಕಣ್ಣಿಗೆ ರಾಚುತ್ತಿದೆ. ಏಕೆಂದರೆ ರಾಮ ಕಾಡಿನಿಂದ ಬಂದಿದ್ದಾನೆ, ಕೃಷ್ಣ ಹಳ್ಳಿಯಿಂದ ನಗರಕ್ಕೆ ಬಂದಿದ್ದಾನೆ. ಹಾಗೆ ಹಿಂದಿರುಗಿ ಬಂದವರಿಗೆ ಕಂಡಿದ್ದು ಭ್ರಷ್ಟಗೊಂಡ ತಮ್ಮ ನಾಡುಗಳನ್ನು.

ಮುಗ್ಧಗೋಕುಲ, ಮಥುರಾನಗರಿಯಾಗಿತ್ತು.
ಅಯೋಧ್ಯೆ ಎಂಥೆಂಥವರೋ ಹಾಳುಗೆಡಹಿದ
ದುರ್ಭೇದ್ಯದಂಡಕ. ಕುಟ್ಟಿ ಚಕಣಾಚೂರು ಗೋಪುರ
ಬುರುಜು ಬತೇರಿ. ಅರಮನೆಯ ಪಾಳಲ್ಲಿ ಠಳಾಯಿಸು
ತ್ತಿದ್ದವು ಕೆಂಗಣ್ಣ ಕಿರುಬ ಗಸಗಸ ಮಸೆಯುತ್ತ….
(ನಿರ್ಗಮನ)

ಇಲ್ಲಿನ ರಾಮ ಮತ್ತು ಕೃಷ್ಣಕತೆಗಳಲ್ಲಿ ಸರಳರೇಖೆಯಲ್ಲಿ ಸಾಗುವ ಬದುಕಿನ ಚಲನೆಯಿಲ್ಲ. ಬದಲಾಗಿ ಪುನರಾಗಮನದಲ್ಲಿ ಕಾಣುವ ಚಿತ್ರಗಳಿವೆ. ‘ಪರಿವರ್ತನೆ’ ಕವಿತೆಯಲ್ಲಿ ರಾಮ ಹದಿನಾಲಕ್ಕು ವರ್ಷಗಳ ನಂತರ ಕಪ್ಪಿಟ್ಟ ಮುಖ, ಬತ್ತಿದ ದೇಹವಾಗಿ ಕಾಣುತ್ತಿದ್ದರೆ ಅವನ ಎದುರಲ್ಲಿ ನಿಂದ ಭರತ ಸಹ ಹಿಂದಿನಂತಿಲ್ಲ. ಏನೋ ಅವಿಶ್ವಾಸದ ಎಳೆ ಇಬ್ಬರ ವರ್ತನೆಯಲ್ಲಿ ಕಾಣುತ್ತಿದೆ. ಯಾಕೆ ಭರತ ಮತ್ತು ರಾಮರ ನಡುವೆ ಸಂಬಂಧ ಸಡಿಲಾದಂತೆ ತೋರುತ್ತದೆ? ಕೃಷ್ಣನ ರಾಧೆಯೇಕೆ ಇಲ್ಲಿ ಬಸವಳಿದಿದ್ದಾಳೆ? ಕವಿ ಹೀಗೆ ವರ್ತಮಾನದ ವಿಷಾದವನ್ನು ಈ ಪರಿಯಲ್ಲಿ ಕಂಡುಕೊಳ್ಳುವ ರೀತಿಯೇ ಇದು? ಇದೇ ವಿಷಾದ ಕಟುವಾಗಿ ಮೈದೋರುವುದು ‘ಸಂಡೂರಿನಲ್ಲಿ’ ಕವಿತೆಯಲ್ಲಿ. ಅದು ತತಕ್ಷಣದ ವರ್ತಮಾನ. ಇನ್ನೇನು ನಮ್ಮ ತನಕ ಬಂದೇ ಬಿಟ್ಟ ವಾಸ್ತವ. ಇಲ್ಲಿ ಬದಲಾವಣೆಯ ವ್ಯಂಗ್ಯ ತುಸು ವಾಚ್ಯ ಎನ್ನುವಂತೆಯೇ ವ್ಯಕ್ತವಾಗುತ್ತದೆ. ನವಶ್ರೀಮಂತರು ಏರೋಪ್ಲೇನುಗಳ ಕೆಂಧೂಳು ಬೆಳ್ಳಕೊಕ್ಕರೆ ಕತ್ತ ಕುಯ್ಯಲಿಕ್ಕೆ ಬರುವ ಚಿತ್ರ ಸಂಡೂರಿನ ಹೊಸ ಕಲ್ಪನೆಯನ್ನು ಕೊಡುವಂತೆ ಮಾಡಿದೆ. ಈ ವಿಷಾದಕಥನದ ಛಾಯೆ ಸಂಕಲನದ ತುಂಬೆಲ್ಲಾ ಬಿದ್ದಂತೆ ತೋರುತ್ತದೆ.

ಕಥನದ ಸಾಧ್ಯತೆಗಳನ್ನು ಕವಿತೆಯಲ್ಲಿ ಧ್ಯಾನಿಸುವ, ವಿಸ್ತರಿಸುವ ಅವಕಾಶಗಳನ್ನೆಲ್ಲ ಬಳಸಿಕೊಂಡ ಕವಿ ಕಾವ್ಯಧರ್ಮವನ್ನು ಅದರ ಅಂತರಂಗದಲ್ಲಿ ಉಳಿಸಿಕೊಳ್ಳಬೇಕೆಂಬ ಆಶೆಯನ್ನು ಬಿಟ್ಟುಕೊಟ್ಟಿಲ್ಲ. ಎಚ್ಚೆಸ್ವಿ ಒಬ್ಬ ಕಾವ್ಯೋದ್ಯೋಗಿ. ಅವರಿಗೆ ಕಾವ್ಯ ಎಲ್ಲಿ ಮಿಡಿಯಬೇಕಾಗುತ್ತದೆ ಎಂಬ ಅರಿವು ಖಂಡಿತಾ ಇದೆ. ಕಾವ್ಯವನ್ನೇ ಅಭಿಮುಖ ಮಾಡಿ ನಿಲ್ಲುವ ಪ್ರಶ್ನೆಯನ್ನು ಅವರಿಲ್ಲಿ ತಮ್ಮ ಮೊದಲ ಕವಿತೆ ‘ಹಕ್ಕಿ ಮತ್ತು ನಳ’ ಕವಿತೆಯಲ್ಲೇ ಎತ್ತಿಕೊಂಡಿದ್ದಾರೆ. ಹಕ್ಕಿ ಹಿಡಿಯಲು ನಿಂತ ನಳನ ಉದ್ದೇಶ ‘ಹೊಟ್ಟೆಗೆ ಹಿಟ್ಟು’ ಗಳಿಸಿಕೊಳ್ಳುವುದು. ಅದಕ್ಕಾಗಿ ಅವನು ತನ್ನ ಮಾನಮುಚ್ಚಿದ ಚೀರವನ್ನೇ ಒತ್ತೆಯಿಟ್ಟು ಹಕ್ಕಿ ಹಿಡಿಯುವ ಕೆಲಸ ಆರಂಭಿಸಿದ. ಇಲ್ಲಿ ಹಕ್ಕಿ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಲ್ಲ; ಆದರೆ ಹೀಗೆಂದು ಬಿಡುವಂತಿಲ್ಲ. ಸಿಗುವುದೆಂಬ ಆಶೆಯೊಂದಿಗೇ ಬಲೆ ಬೀಸಬೇಕು ಎನ್ನುವುದನ್ನು ಕವಿ ಸ್ಪುಟವಾಗಿ ಹೇಳುತ್ತಾರೆ. ಕೆಲವೊಮ್ಮೆ ಬೆತ್ತಲೆ ನಿಲ್ಲುವ ಸಂದರ್ಭ ಬಂದರೂ ಬರಬಹುದು. ಆದರೆ ಹಕ್ಕಿ ಹಿಡಿವ ಕ್ರಿಯೆಯಿಂದ ದೂರಾಗುವುದು ಸಾಧ್ಯವೇ? ಎನ್ನುವುದು ಕವಿಯ ಪ್ರಶ್ನೆ. ಹಸಿವು ಮತ್ತು ಸೌಂದರ್ಯದ ನಡುವಿನ ಕಂದರವನ್ನು ಗುರುತಿಸುತ್ತಲೇ ಇಡೀ ಸಂಗತಿಯನ್ನು ಕವಿತೆಯ ಚರ್ಚೆಯಾಗಿಸಿಬಿಡುವುದು ಕವಿಯ ಮಧ್ಯಪ್ರವೇಶವಲ್ಲದೆ ಮತ್ತೇನೂ ಅಲ್ಲ. ಅಂದರೆ, ಕವಿತೆಯ ಉದ್ದೇಶಕ್ಕೆ ತನ್ನದೇ ಆದ ತಾತ್ವಿಕ ಗೆರೆ ಹಾಕಿಕೊಳ್ಳುವುದರ ಮೂಲಕ ಕವಿತೆಯ ಪ್ರಶ್ನೆ ಜೀವನ್ಮರಣದ್ದು ಎಂದು ಹೇಳುವುದು. `ಇನ್ನೊಂದು ರಂಗವಲ್ಲಿ’ ಕವಿತೆಯಲ್ಲಿ ಕವಿಯ ಮಂಡಿಯ ನೋವು ಮಾಯವಾಗುವುದಕ್ಕೆ ಕವಿತೆ ಕಾರಣ ಎಂದು ನಿರ್ಭಿಡೆಯಿಂದ ಕವಿ ಒಪ್ಪಿಕೊಳ್ಳುತ್ತಾರೆ. ಕವಿತೆ ಎನ್ನುವುದು ಹೇಗೆ ತನ್ನ ದೃಷ್ಟಿಯಲ್ಲಿ ಬಹೂಪಯೋಗಿ ಎಂದು ಅವರು ಇಂತಹ ಅನೇಕ ಕವಿತೆಗಳಲ್ಲಿ ನಿರೂಪಿಸುತ್ತಾರೆ.

ಕವಿತೆಗೆ ಒಂದು ಜೀವಕಾರುಣ್ಯದ ನೆಲೆ ಇದೆ. ಅದಿಲ್ಲದೆ ಬದುಕು ಉಳಿಯಲಾರದೆಂದು ಕವಿತೆ ತನ್ನ ಆಂತರ್ಯದಲ್ಲಿ ಪೋಷಿಸಿಕೊಂಡು ಬರುತ್ತದೆ. ಈ ಜೀವಕಾರುಣ್ಯದ ಸೆಲೆಯನ್ನು ಹೇಗಾದರೂ ಸರಿ ವರ್ತಮಾನದಲ್ಲಿ ಮರುಕಳಿಸುವಂತೆ ಮಾಡಬೇಕು ಎನ್ನುವುದು ಕವಿಯ ಆಶಯ. ಅದನ್ನು ಪುನಃ ಕಥನಗಳ ಮೂಲಕವೇ ಸಾಧಿಸಲು ಯತ್ನಿಸುತ್ತಾರೆ. ಇಲ್ಲಿ ಉದಾಹರಿಸಬಹುದಾದ ಕವಿತೆಯೆಂದರೆ, ‘ತಿನ್ನಬಾರದ ಹಣ್ಣು’ ಕಣ್ವ ತಿನ್ನುವ ಏಕಮಾತ್ರ ಫಲ ತಪ್ಪಿಹೋದದರ ಪರಿಣಾಮಗಳನ್ನು ಇಲ್ಲಿ ವಿವರಿಸಲಾಗಿದೆ. ಇದೊಂದು ಪಾರಾಯಣದ ಪದ್ಯದಂತಿದೆ. ಅದನ್ನು ಕೇಳಿದವರಿಗೆ ಫಲಾಫಲವು ದಕ್ಕುವ ರೀತಿಯಲ್ಲಿ ಅದನ್ನು ವಿವರಿಸಲಾಗಿದೆ. ಕೊನೆಗೆ ಈ ಕತೆ ದೃಷ್ಟಾಂತವಾಗುವುದು ಒಂದು ಸಣ್ಣ ಹಣ್ಣಿನ ಹಿಂದೆ ಎಂಥಾ ಕತೆಯಿರುತ್ತದೆ ಮತ್ತು ಅದರ ಜೀವಜಾಲದ ಬೇರುಗಳು ಎಲ್ಲೆಲ್ಲೆ ಬೆಸೆದುಕೊಂಡಿವೆಯೋ, ಅದನ್ನು ಕಡಿದರೆ ಆಗುವ ರಣಾಗ್ರವನ್ನು ಅರಿತು ನಡೆಯಬೇಕು ಎನ್ನುವ ವಿವೇಕವನ್ನು.

ಜೀವಕಾರುಣ್ಯವನ್ನು ಒತ್ತಿ ಹೇಳುವ ಇನ್ನೊಂದು ಮುಖ್ಯ ಸೂಚನೆ ಎದೆಹಾಲಿನದು. ಅದನ್ನು ಒಂದು ಮುಖ್ಯ ತತ್ವವಾಗಿ ಬೆಳೆಸಲು ಕವಿ ಯತ್ನಿಸಿದ್ದಾರೆ. ಕೃಷ್ಣ ರಾಧೆಗೆ ತನ್ನ ತಾಯಿ ಯಶೋದಾ ಬಗ್ಗೆ ಹೇಳುವಲ್ಲಿ ತಾಯಿಯೆಂಬುವಳು ಪರಿಚಯವಾಗಿದ್ದೇ ಅವಳ ಅಮೃತಕುಂಭದಿಂದ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ‘ಬೇಲೂರಶಿಲಾಬಾಲಿಕೆ ಮತ್ತು ಹಸಿದ ಹುಡುಗ’ ಕವಿತೆ ಶಿಲಾಬಾಲಿಕೆಯ ಸೌಂದರ್ಯವನ್ನು ಸಂಪೂರ್ಣ ತಾಯ್ತನದಿಂದ ಕಂಗೊಳಿಸುವಂತೆ ಮಾಡುತ್ತದೆ. ಹಸಿದ ಹುಡುಗನಿಗೆ ಶಿಲಾಬಾಲಿಕೆ ಕಾಣುವುದು ಅಮ್ಮನಾಗಿ, ಅವಳ ಎದೆಚೀಪುತ್ತಾ ನಿಲ್ಲುವ ಹುಡುಗ ಮತ್ತು ಮಗು ಎದೆ ಕಚ್ಚಿದ ಕೂಡಲೇ ತಾಯ್ತನದಿಂದ ಸಹಜವಾಗಿ ಉಕ್ಕುವ ಹಾಲು ಶಿಲಾಬಾಲಿಕೆಯ ಕಲ್ಲಿನ ಎದೆಯಲ್ಲೂ ಉಕ್ಕುವುದು ಒಂದಕ್ಕೊಂದು ಪರಸ್ಪರ . ಇದು ರಮ್ಯ ಉದಾಹರಣೆಯಾಗುವುದಾದರೂ ಮೂರ್ತಿಯವರಲ್ಲಿ ಹಾಲು ಉಕ್ಕುತ್ತಿರುವ ಪ್ರತಿಮೆಗಳಂತೆ ಹಾಲು ಬತ್ತಿರುವ ಎದೆಗಳ ಪ್ರಸ್ತಾಪ ಕೂಡ ಇದೆ. ಅಲ್ಲಿ ಕೂಡ ಎದೆಯೂಡುವಿಕೆ ಕಾರುಣ್ಯದ ಸಂಕೇತವಾಗಿದೆ ((ತುಟಿಗಿಟ್ಟಳು ತನ್ನ ಬತ್ತಿದ/ ಮೊಲೆಯ ಸುಕ್ಕಿಟ್ಟ ತೊಟ್ಟ(ಮಹಾನಿರ್ಣಯ)).

ಜೀವಕಾರುಣ್ಯದ ವ್ಯಾಪ್ತಿ ಸೀಮಿತವಾದುದಲ್ಲ. ಅದು ಸಣ್ಣ ಸಣ್ಣ ಭಾವಗಳಿಂದ ಹಿಡಿದು ದೊಡ್ಡದವರೆಗೂ ಚಾಚಿಕೊಂಡಿರಬಹುದು. ಉದಾಹರಣೆಗೆ ಕನ್ನಡಿಯ ಸೂರ್ಯನನ್ನು ತಿದ್ದುವ ಬರಿಹಣೆಯ ಅಮ್ಮನ ತಳಮಳ ಬಣ್ಣಿಸುವ ಕವಿತೆ ಕೂಡ ಅವಳಿಗೆ ನ್ಯಾಯ ದೊರೆಯಬೇಕಾದ್ದು ಕೂಡ ಸಹಜ ಎನ್ನುವುದು ಒಳಭಾವ ಜೀವಕಾರುಣ್ಯದ ಪರಿಧಿಯಲ್ಲೇ ಬರುವಂತದ್ದು. ವಿಶಾಲ ಭಿತ್ತಿಯಲ್ಲಿ ಕಾಶಿ, ಅಯೋಧ್ಯಾ ನಗರಗಳು ಕೊಳತು ನಾರುವುದನ್ನು ಚಿತ್ರಿಸುವಾಗ ದೇವರು ಎಲ್ಲಿದ್ದಾನೆ ಎಂಬುದಕ್ಕೆ ಉತ್ತರ ಅಧ್ಯಾಹಾರವಾಗುತ್ತದೆ. ಹಾಗೆಯೇ ರಾಮ ಎಂದರೆ ಕಲ್ಲು ದೇವರಲ್ಲ, ನೀರು ಎನ್ನುತ್ತದೆ ಇಲ್ಲಿನ ಒಂದು ಕವಿತೆ, ಬೇಲೂರ ಬಾಲಿಕೆಯ ಕಲ್ಲುತನ ಕರಗಿ ಸ್ತನ್ಯ ದ್ರವಿಸುವುದರೊಂದಿಗೆ ಕಲ್ಲು ಜೀವವಾಗುತ್ತದೆ. ಹೀಗೆ ಸ್ಥಾವರದಿಂದ ಜಂಗಮಕ್ಕೆ ಜಿಗಿಯುವ ಚಲನೆ ಕವಿತೆಯಲ್ಲಿ ನಿರೀಕ್ಷಿತವಾಗಿ ಬರುತ್ತವೆ. ಈ ಜಂಗಮವನ್ನು ಸೂಚಿಸುವ ಸ್ಥಲವಾಗಿ ಕವಿತೆ ಉಳಿಯುತ್ತದೆ, ‘ಜೀವಾನುಕಂಪೆ ತುಂಬಿದ ಮಾಧವ ದ್ವೀಪ, ಗಾರುಗದ್ದಲದ ನಡುವೆಯೇ ಒಂದು ಹೃದ್ಗೀತೆ’ಯಾಗಿ ಉಳಿಯುತ್ತದೆ.

ಕವಿತೆಗೊಂದು ಆಧುನಿಕ ಮೀಮಾಂಸೆ ಕಟ್ಟುವ ಯತ್ನದಲ್ಲಿರುವ ಕವಿ ಇಲ್ಲಿ ಕವಿತೆಯನ್ನು ಹಸಿವಿನ ಎದುರು ನಿಲ್ಲಿಸುವ ಸಂಪ್ರದಾಯವನ್ನು ಮತ್ತೊಮ್ಮೆ ಕೆಣಕಿದ್ದಾರೆ. ‘ಹಕ್ಕಿ ಮತ್ತು ನಳ’ ಎನ್ನುವ ಆರಂಬಿಕ ಕವಿತೆಯಲ್ಲಿ ಎತ್ತುವ ಪ್ರಶ್ನೆ ‘ಭಾಷೆಯನ್ನು ಹೇಗೂ ಬಳಸಬಹುದು…’ ಇಂತಹ ಕವಿತೆಗಳಲ್ಲಿ ಮುಂದುವರೆಯುತ್ತದೆ. ಕವಿಯ ಪಾಲಿಗೆ ಕವಿತೆ ದೊಡ್ಡದೇ. ವಾಸ್ತವದ ಸಮಸ್ಯೆ, ಸವಾಲುಗಳಿಗೆ ಅದು ನೇರರೂಪದಲ್ಲಿ ಉತ್ತರ ಕೊಡುವುದು ಸಾಧ್ಯವೇ? ಕವಿತೆಯ ಉತ್ತರದಾಯಿತ್ವ ಕೊನೆಗೂ ಸಂಕೇತಗಳೇ ಎನ್ನುವಂತೆ ಎಚ್ಚೆಸ್ವಿ ಬಂದು ನಿಲ್ಲುವುದು ಅಮೂರ್ತ ನೆಲೆಗೆ ((ಗೊತ್ತುಂಟು ಬಲ್ಲವರಿಗೆ-ಶಬ್ದಗಳ ವಸತಿ ನಿಶ್ಯಬ್ದದೊಳಗೆ'(ಪುತಿನ ಹೇಳಿದ್ದು)). ಪಕ್ಷುಬ್ಧ ವರ್ತಮಾನದಲ್ಲಿ ಕವಿತೆ ಸ್ಪುಟವಾದ ಉತ್ತರ ಕೊಡಲಾರದು. ರೂಪದ ಕುರುಹುಗಳನ್ನು ದಾಟಿ ಅರೂಪಕ್ಕೆ ಹೋಗುವ ನಡೆ ಅದರ ನೆಲೆಯಾಗಿದೆ. ರಾಮಕೃಷ್ಣರು ತಮ್ಮ ಅವತಾರಗಳನ್ನು ಕೊನೆಗೊಳಿಸುವುದಾದರು ಎಲ್ಲಿ?

ರಾಮಕೃಷ್ಣರು, ಸಾಕಿನ್ನು ನಿಮಗೆ ಮಣ್ಣಿನ ನೆರೆಯೆಂದು
ನಿಟ್ಟುಸಿರಿಡುತ್ತ ದಕ್ಷಿಣೇಶ್ವರದತ್ತ, ಸಾತ್ವಿಕರ ಮಾನಸವ
ಧ್ಯಾನಮೌನದ ನಗ್ನ ನೆರಳ ಕಡೆಗೆ
(ನಿರ್ಗಮನ)

ಆದರೆ ಪದದ ಹುಟ್ಟಿನ, ವಿನ್ಯಾಸದ ಕ್ರಿಯೆ ಘಾಸಿಗೊಳಿಸುವ ಪ್ರಕ್ಷುಬ್ಧದ ಕ್ರಿಯೆ ಎಂಬ ಸೂಚನೆಗಳೂ ಇಲ್ಲಿ ಸಿಗುತ್ತಿವೆ. ಕವಿತೆಯ ಆಸರೆ ಉಳಿಸಿಕೊಳ್ಳುವ ಹಂಬಲದ ಇಕ್ಕೆಲದಲ್ಲಿಯೇ ಇಂತಹ ಸಾಲುಗಳು ಕಾಣಿಸುವುದು ಸಂದಿಗ್ಧದ ಮನಃಸ್ಥಿತಿಯನ್ನು ಎತ್ತಿ ತೋರುವಂತಿದೆ.

ಕನ್ನಡಿಯ ಸೂರ್ಯದ ಕವಿತೆಗಳನ್ನು ಓದಿಗಾನಿಸಿಕೊಂಡಾಗ ಹೊಸದಕ್ಕೆ ಸ್ಪಂದಿಸುತ್ತ ಹಳೆಯದನ್ನು ಬಿಟ್ಟುಕೊಡದೆ ಏನನ್ನಾದರೂ ಹೇಳಬೇಕೆಂಬ ಭಾವವಿರುವುದು ಗಮನಕ್ಕೆ ಬರುತ್ತದೆ. ಸಂಘರ್ಷಮಯ ವರ್ತಮಾನಕ್ಕೆ ಹಲವು ಕಥನಗಳನ್ನು ಕಟ್ಟುವುದು ಈ ಸಂಕಲನದ ಮುಖ್ಯ ಗುರಿಯಾಗಿದೆ. ಕಥನವಾದರೂ ಪುರಾಣೇತಿಹಾಸಗಳ ಸಮಕಾಲೀನ ಚರಿತ್ರೆಯಗಳ ಕೂಡು ಬಿಂದುವಿನ ನೆಲೆಯಾಗಿದೆ. ಆದರೆ ಇವು ಇಬ್ಬಗೆಯ ಹಾದಿಗಳಲ್ಲವೇ? ಇವನ್ನು ಬೆಸೆಯುವ ಕೆಲಸ ತಾತ್ವಿಕವಾಗಿ ಸಾಧುವಾಗಬಹುದೇ ಎನ್ನುವ ಅನುಮಾನ ಸುಳಿಯುತ್ತದೆ. ‘ಮೂಲಮೂರ್ತಿಗೆ ಮೊರೆ…’ ಎಂಬ ಕವಿತೆ ಛಿನ್ನ, ಭಂಜಕ ಪ್ರತಿಮೆಗಳಲ್ಲಿ ಜೀವಧಾರಣೆ ಮಾಡಲು ಮೂಲಮೂರ್ತಿಯನ್ನು ಕರೆಯುತ್ತಿರುವುದು ಮತ್ತೆ ಚರಿತ್ರೆಯ ಯಾವ ಗತಿಯತ್ತ ಒಯ್ಯುತ್ತದೆ? ಆಧುನಿಕ ಚರಿತ್ರೆಗಳನ್ನು ಸಂಕೇತಿಸುವ ಹೊತ್ತಲ್ಲಿ ನೀರಿನಂತೆ ಜಂಗಮ ಸ್ವರೂಪಿಯಾಗಿ ಕಲ್ಪಿಸಿಕೊಂಡಾಗ ಮೂಲಮೂರ್ತಿಯ ಕಲ್ಪನೆಯನ್ನು ಎಲ್ಲಿಡಬಹುದು? ಇಂತಹ ಹಲವು ಪ್ರಶ್ನೆಗಳು ಸಂಕಲನದ ಮುಂದಿವೆ.

`ಕನ್ನಡಿಯ ಸೂರ್ಯ’ ಎತ್ತಿಕೊಳ್ಳುವ ಹಲವು ಸಂದಿಗ್ಧಗಳು ಮತ್ತು ಅವುಗಳಿಂದ ಬಿಡಿಸಿಕೊಳ್ಳುವ ರೀತಿ ಇವು ಕವಿಯೊಬ್ಬನ ವರ್ತಮಾನದ ಸಂಗತಿಯೇ. ದಿನಮಾನದಲ್ಲಿ ಮೊಳೆಯುವ ಹಲವು ಜನ, ಹಲವು ಸಂಗತಿಗಳು ಕವಿತೆಯಾಗಿ ಮಾರ್ಪಾಟುಗೊಂಡು ಚಣಕಾಲದ ‘ಮಾಧವ ದ್ವೀಪ’ವಾಗಿ ಉಳಿಯುವ ಕ್ರಿಯೆಯ ಶ್ರದ್ಧೆ ಮಾತ್ರ ಇಲ್ಲಿ ಅನನ್ಯವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂ ನಂ ಮಾತು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…