ಪುಟ್ನಂಜಿ! ಬಿರ್‍ಬಿರ್‍ನೆ ಬಾಗಿಲ್ನ ತೆರದಿಕ್ಕು
ಬೇವಾರ್‍ಸಿ ಬಂದೌನೆ ಕಾಯ್ತೌನೆ- ತಡವಾದ್ರೆ
ಗಾಳ್ಯಾಗಿ ಬಂದು ಬಡದೇನು. ೧

ನನ್ ರತ್ನ! ನೀ ಬಂದು ಬಡಿಗಿಡಿಯೋದ್ ಎಲ್ಬಂತು?
ಗಾಳ್ಯಾಗಿ ನೀ ಬಂದ್ರೆ ನನಗೇನು-ನಾನೊಂದು
ಮೀನಾಗಿ ವೊಳೆಯಾಗ ಮುಳುಗೇನು. ೨

ಮೀನಾಗಿ ನೀ ನೀರ್‍ಗೆ ಮೋಚ್‌ಗೀಚ್ಕೊಂಡ್ರೇನಂತೆ
ನಿನ್ಗೆ ನಾ ಸುಂಸುಂಕೆ ಬಿಟ್ಟೇನ- ಬೆಸ್ತ್ರೋವ
ನಾನಾಗಿ ಬಂದು ನಿಂಗ್ ಇಡದೇನು. ೩

ಮೀನನಿಡಿಯಲು ನೀನು ಬೆಸ್ತನಾದ್ರ್ ಏನೀಗ
ಮೋಡ್ವಾಗಿ ನಾನ್ ಆರಿ ವೋಗೇನು-ಆಕಾಸ
ದಲ್ಲೆಲ್ಲ ಮೆಲ್ಮೆಲ್ನೆ ಜಾರೇನು. ೪

ಮೋಡ್ವಾಗಿ ಮೇಗಡೇ ಮೇಲ್ಮೆಲ್ನೆ ನೀ ವೋಗು
ಅನಿಮಳೆ ರೂಪಾವ ತಾಳೇನು-ನಾ ಬಂದು
ನಿನ್ ಜೊತೆಗೆ ಆಯಾಗಿ ಬಾಳೇನು. ೫

ಅನಿಮಳೆ ನೀನಾಗಿ ನನ್ನೇನ್ರ ಮುಟ್ಬಂದ್ರೆ
ಬೂಮೀಲಿ ಅಸರುಲ್ಲು ಆದೇನು-ವುಲ್ಲಾಗಿ
ನಿನ್ ಮರ್‍ತು ವೊರ್‍ವಾಗಿ ಬೆಳದೇನು ೬

ನೀನ್ ಅಸರು ವುಲ್ಲಾಗಿ ಬೆಳೆದು ಬಾ ಬೇಬೇಗ
ಕುರಿಯಾಗಿ ಆರಾರ್‍ತ ಬಂದೇನು-ನಿನ್ ತಬ್ಬಿ
ಮುತ್ತಿಕ್ಕಿ ಮುಕ್ಕಿ ನಾ ಮುಗಿಸೇನು. ೭

ಕುರಿಯಾಗಿ ನೀ ಬಂದು ವುಲ್ಲ ಮುಕ್ಕೋದಾದ್ರೆ
ವೊಲಿಯೋವ ಸೂಜಿ ನಾನ್ ಆದೇನು- ಚಿಪ್ಪಿಗನ
ಬಟ್ಟೇಲಿ ವೊಕ್ಕು ನಾ ನಡದೇನು. ೮

ಸೂಜಾಗಿ ಚಿಪ್ಪಿಗನ ಬಟ್ಟೇಲಿ ನೀನೋದ್ರೆ
ದಾರಾದ ಬದಕ ನಾನ್ ಇಡದೇನು-ನೆಗ ನೆಗ್ತ
ಸೂಜೀಯ ಯಿಂದೇನೆ ಬಂದೇನು. ೯
*****