ಬಂಡವಾಳ: ಭಕ್ತ ಮತ್ತು ಭಗವಂತ

ಬಂಡವಾಳ: ಭಕ್ತ ಮತ್ತು ಭಗವಂತ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ ವಹಿಸಿಕೊಂಡವರು ಸ್ಥಳೀಯ ಬಂಡವಾಳ ಕ್ರೋಢೀಕರಣಕ್ಕಿಂತ ವಿದೇಶಿ ಬಂಡವಾಳವನ್ನು ಆಹ್ವಾನಿಸಲು ಹಾತೊರೆಯುತ್ತಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರು ಇವರಿಗೆ ಅಧಿಕಾರ ಕೊಟ್ಟರೆ, ಇವರು ಬಂಡವಾಳಗಾರರಿಗೆ ಅಧಿಕಾರ ಕೊಡುತ್ತಿದ್ದಾರೆ. ‘ಈ ಪರಿಯ ಸೊಬಗ ಇನ್ನಾವ ದೇವರಲು ಕಾಣೆ’ ಎನ್ನುತ್ತ ಬಂಡವಾಳಗಾರರನ್ನೇ ದೇವರೆಂಬಂತೆ ಭಾವಿಸಿ ಮುಕ್ತ ಆರ್ಥಿಕ ನೀತಿಗೆ ‘ಹರಿ-ಖಾರ’ರಾದವರು ನರಸಿಂಹರಾವ್ ಮತ್ತು ಮನಮೋಹನಸಿಂಗ್ ಅವರು. ತೊಂಬತ್ತರ ದಶಕದ ಆರಂಭದಲ್ಲಿ – ಸರಿಸುಮಾರು ಬಾಬರಿ ಮಸೀದಿಯ ಮೇಲಿನ ದಾಳಿ ಸಂದರ್ಭದಲ್ಲಿ ಇವರಿಬ್ಬರೂ ದೇಶದ ಮಿಶ್ರ ಆರ್ಥಿಕ ನೀತಿಯ ಮೇಲೆ ದಾಳಿ ಆರಂಭಿಸಿದರು. ಸಂಘ ಪರಿವಾರ ಮತ್ತು ಬಿ.ಜೆ.ಪಿ.ಯವರು ಮಂದಿರ-ಮಸೀದಿ ವಿವಾದ ಮೂಲಕ ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ ನೀಡುತ್ತ ನಮ್ಮ ಸಂವಿಧಾನಕ್ಕೆ ಅಪಚಾರವಾಗುವಂತೆ ವರ್ತಿಸುತ್ತಿದ್ದರೆ, ನರಸಿಂಹ ರಾವ್ – ಸಿಂಗ್ ಜೋಡಿ ಮತ್ತು ಕಾಂಗ್ರೆಸ್‌ನವರು ನಮ್ಮ ನೆಲದ ಕಾನೂನಿಗೆ ಬದ್ದವಾಗುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿ ನಮ್ಮ ಸಂವಿಧಾನಕ್ಕೆ ಅವಮಾನ ಮಾಡಿದರು.

ಮುಂದೆ, ಮಾನ್ಯ ವಾಜಪೇಯಿಯವರ ಸರ್ಕಾರವೂ ಭಿನ್ನವಾದ ನಿಲುವು ತಳೆಯಲಿಲ್ಲ. ಕೋಮುವಾದ ಕಡಿಮೆಯಾಗಲಿಲ್ಲ. ಹಿಂದೂ ಕೋಮುವಾದಿಗಳ ಜೊತೆಗೆ ಮುಸ್ಲಿಂ ಕೋಮುವಾದಿಗಳು ಹೆಚ್ಚತೊಡಗಿದರು. ಸ್ವದೇಶಿ ಘೋಷಣೆಯ ಸರ್ಕಾರಕ್ಕೆ ವಿದೇಶಿ ಬಂಡವಾಳದ ಆಕರ್ಷಣೆ ಒಂದು ಆದರ್ಶವಾಯಿತು. ಈ ದಿಕ್ಕಿನಲ್ಲಿ ಕೃಷಿ ಕ್ಷೇತ್ರಕ್ಕೆ ಬಲವಾದ ಪೆಟ್ಟು ನೀಡುವಂತಹ ನಿರ್ಧಾರವನ್ನು ಈ ಸರ್ಕಾರ ಕೈಗೊಂಡು ಮುನ್ನೂರಕ್ಕೂ ಹೆಚ್ಚು ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯ ಅವಕಾಶ ನೀಡಿತು. ವಿದೇಶಿ ಕೃಷಿ ಉತ್ಪನ್ನಗಳು ಯಾವುದೇ ನಿಯಂತ್ರಣವಿಲ್ಲದೆ ನಮ್ಮ ದೇಶಕ್ಕೆ ಬರುವಂತಾಗಿ ಸ್ವದೇಶಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಧಕ್ಕೆ ತರಲಾಯಿತು. ಮುಕ್ತ ಆರ್ಥಿಕತೆಯ ಮತ್ತು ಬಿ.ಜೆ.ಪಿ. ನೇತೃತ್ವದ ಸರ್ಕಾರಗಳಲ್ಲಿ ಸ್ಪರ್ಧೆಯಿರುವುದು ಸ್ಪಷ್ಟವಾಯಿತು. ಜಾಗತೀಕರಣದ ಫಲವಾಗಿ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ವಿಸ್ತಾರವಾಗುವ ಬದಲು ಸೀಮಿತವಾಗತೊಡಗಿತು. ನಮ್ಮ ಸರ್ಕಾರಗಳು ಸ್ವಾಗತಿಸಿದ ಜಾಗತೀಕರಣವು ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಒದಗಿಸಲಿಲ್ಲ. ಬದಲಾಗಿ ಜಾಗತಿಕ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸಿತು. ಇದು ವಿದೇಶಿ ಬಂಡವಾಳಗಾರರಿಗೆ ವರವಾಗಿ ಪರಿಣಮಿಸಿತು. ಅಮೇರಿಕದ ಹಿಂದಿನ ಅಧ್ಯಕ್ಷ ಬುಷ್, ಭಾರತಕ್ಕೆ ಬಂದಾಗ ಈ ದೇಶವು ತಮ್ಮ ಉತ್ಪನ್ನಗಳಿಗೆ ಉನ್ನತ ಮಾರುಕಟ್ಟೆ – ಎಂದು ಹೇಳಿದ್ದನ್ನು ಇಲ್ಲಿ ನೆನೆಯಬಹುದು. ಬಂಡವಾಳಗಾರರಿಗೆ ಭಾರತವು ಮಾರುಕಟ್ಟೆಯೇ ಹೊರತು ‘ಮಾನವಕಟ್ಟೆ’ಯಲ್ಲ.

ವಿದೇಶಿ ಸಾಲ ಮತ್ತು ಬಂಡವಾಳದ ಅಪಾಯಗಳನ್ನು ಕುರಿತು ಬ್ರೆಜಿಲ್‌ನ ಕಾರ್ಮಿಕ ನಾಯಕ ಲೂಯಿಸ್ ಇಗ್ನೆಷಿಯೋಸಿಲ್ವಾ ಅವರು ೧೯೮೫ರ ಆಗಸ್ಟ್‌ನಲ್ಲಿ ಆಡಿದ ಮಾತುಗಳು ಮಾನವೀಯವಾಗಿದೆ. ಅವರು ಹೇಳುತ್ತಾರೆ” “ಮೂರನೇ ವಿಶ್ವಯುದ್ಧ ಆರಂಭವಾಗಿದೆ. ಈ ಯುದ್ದವು ಬ್ರೆಜಿಲ್, ಲ್ಯಾಟಿನ್ ಅಮೇರಿಕ ಮತ್ತು ತೃತೀಯ ಜಗತ್ತನ್ನು ಹಾಳು ಮಾಡುತ್ತದೆ. ಈ ಯುದ್ಧದಲ್ಲಿ ಯೋಧರು ಸಾಯುವುದಿಲ್ಲ. ಅದರ ಬದಲು ಮಕ್ಕಳು ಸಾಯುತ್ತಾರೆ. ಅಸಂಖ್ಯಾತ ಗಾಯಾಳುಗಳು ಕಾಣಿಸುವುದಿಲ್ಲ. ಅವರ ಜಾಗದಲ್ಲಿ ಅಸಂಖ್ಯಾತ ನಿರುದ್ಯೋಗಿಗಳು ಕಾಣಿಸುತ್ತಾರೆ. ಸೇತುವೆಗಳನ್ನು ನಾಶಮಾಡುವ ಬದಲು ಕಾರ್ಖಾನೆಗಳನ್ನು, ಶಾಲೆಗಳನ್ನು, ಆಸ್ಪತ್ರೆಗಳನ್ನು ಮತ್ತು ಇಡೀ ಆರ್ಥಿಕತೆಯನ್ನು ಧ್ವಂಸ ಮಾಡಲಾಗುತ್ತದೆ. ಇದು ಅಂತಿಂಥ ಯುದ್ಧವಲ್ಲ. ವಿದೇಶಿ ಸಾಲದ ಯುದ್ದ; ತೃತೀಯ ಜಗತ್ತಿನ ಮೇಲೆ ಅಮೇರಿಕದ ಯುದ್ದ ಇದರ ಪ್ರಮುಖ ಆಯುಧವೆಂದರೆ- ಬಡ್ಡಿ, ಈ ಆಯುಧ ಅಣುಬಾಂಬಿಗಿಂತ ಮರಣಾಂತಿಕವಾದದ್ದು. ಲೇಸರ್ ಕಿರಣಕ್ಕಿಂತ ವಿನಾಶಕಾರಿಯಾದದ್ದು.”

ಈ ಮಾತುಗಳು ನಿಜವಾಗುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಆದರೆ ಆಳುವ ಸರ್ಕಾರಗಳು ಆರ್ಥಿಕ ಸುಧಾರಣೆಯ ಜಪವನ್ನು ಬಿಟ್ಟಿಲ್ಲ. ಶಬ್ದವಿಲ್ಲದ ಯುದ್ಧ ನಿಂತಿಲ್ಲ. ಬಂಡವಾಳಗಾರರ ಗುಂಡುಗಳು ಸದ್ದಿಲ್ಲದೆ ಶ್ರಮ ಸಂಸ್ಕೃತಿಯ ನೆಲೆಗಳನ್ನು ನಾಶಮಾಡತೊಡಗಿವೆ. ಸಾರ್ವಜನಿಕ ವಲಯದ ಅನೇಕ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಇಲ್ಲವೆ ಖಾಸಗಿಯವರಿಗೆ ವಹಿಸಿಕೊಡಲಾಗುತ್ತಿದೆ. ಅಭಿವೃದ್ದಿಗೆ ಮತ್ತೊಂದು ಹೆಸರೆಂಬಂತೆ ಪ್ರಚಾರ ಪಡೆಯುತ್ತಿರುವ ಮೋದಿ ಗುಜರಾತ್‌ನಲ್ಲಿ ಎಂಟು ಸಾವಿರದಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ. ಇಡೀ ದೇಶವನ್ನು ಖಾಸಗೀಕರಣಗೊಳಿಸುವುದೇ ಸುಧಾರಣೆಯಂದು ನಂಬಿಸಲಾಗುತ್ತಿದೆ. ಆರೋಗ್ಯ ಶಿಕ್ಷಣದಂತಹ ಅನಿವಾರ್ಯ ಆದರ್ಶಗಳನ್ನೂ ಖಾಸಗಿಯವರ ಮಡಿಲಿಗೆ ಹಾಕಿ ‘ಎಲ್ಲವೂ ಸರ್ಕಾರ ಮಾಡಲಾದೀತೆ’ ಎಂದು ಹೇಳುವ ಪಾಠ ಪ್ರಾರಂಭವಾಗಿದೆ. ಕಳೆದ ಐದಾರು ವರ್ಷಗಳಲ್ಲಿ ಗುಜರಾತ್‌ನಲ್ಲಿ ಒಂದೂ ಸರ್ಕಾರಿ ಶಾಲೆ ಆರಂಭವಾಗಿಲ್ಲವೆಂದು ಒಂದು ಮಾಹಿತಿ ಹೇಳುತ್ತದೆ. ಭರತ್ ಮೂಲ ಎನ್ನುವವರು ಗುಜರಾತ್ ಹೈಕೋರ್ಟಿಗೆ ಅರ್ಜಿ ಹಾಕಿ ಪಡೆದ ಮಾಹಿತಿಯಂತೆ ನಾಲ್ಕು ವರ್ಷಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಭರತ್ ಮೂಲ ಕೇಳಿದ್ದು ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು. ಸರ್ಕಾರ ಹೇಳಿದ್ದು ಎಷ್ಟು ಜನ ಸತ್ತಿದ್ದಾರೆಂದು, ಎರಡೂ ಒಂದೇ ಇದ್ದೀತು!

ಅಭಿವೃದ್ಧಿಯೊಂದರೆ ಗುಜರಾತ್ ಎಂದು ಬಿಂಬಿಸುತ್ತಿರುವುದರಿಂದ ನಾನಿಲ್ಲಿ ಮೋದಿ ಗುಜರಾತನ್ನು ಉದಾಹರಿಸಿದ್ದೇನೆಯೇ ಹೊರತು ಅಲ್ಲಿ ಬಿ.ಜೆ.ಪಿ. ಸರ್ಕಾರಿ ಇದೆಯೆಂದಲ್ಲ. ಎಲ್ಲ ಸರ್ಕಾರಗಳಿಗೂ ‘ಮನಮೋಹನ ಸಿಂಗ್ ಮಾದರಿ’ ಯೇ ಮೂಲವಾಗಿರುವಾಗ ಮೋದಿ ಮಾದರಿಯನ್ನೇಕೆ ಪ್ರತ್ಯೇಕಿಸಲಿ ? ಮೋದಿಯವರು ಬಂಡವಾಳಗಾರರಿಗೆ ಹೆಚ್ಚು ಅನುಕೂಲಕರವಾಗಿದ್ದಾರೆಂದು ತಿಳಿಯುವುದೇ ಸರಿ. ಈ ಬಂಡವಾಳಗಾರರು ಎಲ್ಲಿಯವರೆಗೆ ಹೋಗುತ್ತಾರೆಂದರೆ ಮುಲಾಯಂ ಸಿಂಗ್ ಅವರ ಪಕ್ಷದಿಂದ ರಾಜ್ಯಸಭೆಗೆ ಹೋದ ಅನಿಲ್ ಅಂಬಾನಿಯವರನ್ನು ಒಳಗೊಂಡಂತೆ ಕೆಲವು ಬೃಹತ್ ಬಂಡವಾಳಗಾರರು ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಎಂದು ಮಾಧ್ಯಮಗೋಷ್ಠಿಯೊಂದರಲ್ಲಿ ಆಶಿಸಿದರು; ಘೋಷಿಸಿದರು. ಎಲ್ಲಿಯ ಸಮಾಜವಾದಿ ಪಕ್ಷ? ಎಲ್ಲಿಯ ಅಂಬಾನಿ? ಬಂಡವಾಳಕ್ಕೆ ಅರ್ಥವಾಗುವುದು ಲಾಭ ಮತ್ತು ನಷ್ಟದ ನೆಲೆ ಮಾತ್ರ.

ವಿದೇಶಿ ಸಾಲ ಮತ್ತು ಬಂಡವಾಳಗಳು ನಮ್ಮ ದೇಶದ ಮನೋಧರ್ಮವನ್ನೇ ಬದಲಾಯಿಸುತ್ತ ಬಂದದ್ದರಿಂದ ಖಾಸಗೀಕರಣವೇ ಶ್ರೇಷ್ಠವೆಂಬ ಭಾವನೆ ಬಲವಾಯಿತು. ಖಾಸಗೀಕರಣ ಕೇಂದ್ರಿತ ಆರ್ಥಿಕ ಸುಧಾರಣೆಗಳನ್ನು ವಿರೋಧಿಸುವವರನ್ನು ಗೇಲಿಗೊಳಪಡಿಸಲಾಯಿತು. ಅಭಿವೃದ್ಧಿ ವಿರೋಧಿಗಳೆಂದು ಹಳಿಯಲಾಯಿತು. ಸಾಮಾಜಿಕ ನ್ಯಾಯ ಕೇಳುವವರನ್ನು ಸಮಾಜ ವಿಭಜಕರೆಂದು ಬಿಂಬಿಸಲಾಯಿತು. ಉದ್ಯಮ ಕೇಂದ್ರಿತ ವಿಚಾರಗಳನ್ನು ವಿವಿಧ ವಲಯಗಳಲ್ಲಿ ಹೊಸ ಪರಿಭಾಷೆಯೊಂದಿಗೆ ವಿಜೃಂಭಿಸುವ ಕೆಲಸ ನಡೆಯತೊಡಗಿತು. ಈ ವಿಷಯದಲ್ಲಿ ಮಾಧ್ಯಮಗಳು- ವಿಶೇಷವಾಗಿ ಆಂಗ್ಲ ಭಾಷೆಯ ವಿದ್ಯುನ್ಮಾನ ಮಾಧ್ಯಮಗಳು – ಸ್ಪರ್ಧೆಗಿಳಿದಂತೆ ವರ್ತಿಸಿದವು. ಅವುಗಳ ಚಾಲಕ ಶಕ್ತಿ ಬೃಹತ್ ಬಂಡವಾಳವಲ್ಲವೆ?

ಆದರೆ ಈಗಲಾದರೂ ಸತ್ಯ ಅರ್ಥವಾಗಿದೆಯೆ ? ಅಮೇರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗ ಭಾರತ ಬೆಚ್ಚಿ ಬಿದ್ದದ್ದು ಯಾಕೆ? ಹಿಂದೆ ‘ರಷ್ಯಾದಲ್ಲಿ ಮಳೆ ಬಂದರೆ ಇಂಡಿಯಾದ ಕಮ್ಯುನಿಸ್ಟರಿಗೆ ನೆಗಡಿಯಾಗುತ್ತದೆ’ಯೆಂದು ಗೇಲಿ ಮಾಡುವವರಿದ್ದರು. ಈಗ ‘ಅಮೇರಿಕದಲ್ಲಿ ಮಳೆಯಾದರೆ ಇಡೀ ಇಂಡಿಯಾಕ್ಕೆ ನೆಗಡಿಯಾಗುತ್ತದೆ’ ಎಂದು ಹೇಳಬಹುದೆ? ಹೀಗೆ ಹೇಳಿದರೆ ಅದು ಗೇಲಿಯಂತೂ ಅಲ್ಲ. ನಿಜ ಅಮೇರಿಕದ ಅನೇಕ ಬ್ಯಾಂಕುಗಳು ದಿವಾಳಿಯಾದಾಗ, ಆರ್ಥಿಕ ಹಿಂಜರಿತ ಉಂಟಾದಾಗ ನಮ್ಮ ದೇಶ ಬೆಚ್ಚಿದರೂ ಗರಿಷ್ಠ ಪ್ರಮಾಣದ ಪರಿಣಾಮ ಉಂಟಾಗಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳ ಸಂಬಳ ಕಡಿತವಾಯಿತು. ಅನೇಕರಿಗೆ ಕೆಲಸ ಹೋಯಿತು. ಅಂಥವರ ಜೀವನ ಶೈಲಿ ಏರುಪೇರಾಯಿತು. ರಿಯಲ್ ಎಸ್ಟೇಟ್ ವಲಯಕ್ಕೆ ಹಿಂಜರಿತವುಂಟಾಯಿತು. ಆದರೆ ನಮ್ಮ ದೇಶೀಯ ಬ್ಯಾಂಕುಗಳಾವುವೂ ದಿವಾಳಿಯಾಗಲಿಲ್ಲ. ಒಟ್ಟು ಆರ್ಥಿಕತೆಗೆ ಹೆಚ್ಚು ಧಕ್ಕೆಯಾಗಲಿಲ್ಲ. ಒಂದು ವೇಳೆ ಸಂಪೂರ್ಣ ಖಾಸಗೀಕರಣವಾಗಿದ್ದರೆ ? ಪರಿಣಾಮವನ್ನು ಯಾರಾದರೂ ಊಹಿಸಬಹುದು.

ಒಂದು ವಿಷಯವನ್ನು ಇಲ್ಲಿ ಹೇಳಬೇಕು. ಮನಮೋಹನಸಿಂಗ್ ನೇತೃತ್ವದ ಸರ್ಕಾರವು ನಮ್ಮ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಬಹುಪಾಲು ಠೇವಣಿಯನ್ನು ವಿದೇಶಿ ಬ್ಯಾಂಕುಗಳಿಗೆ ವರ್ಗಾಯಿಸಲು ಯೋಚಿಸಿತ್ತು. ಜೀವವಿಮಾ ನಿಗಮದಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಪ್ರಾವಿಡೆಂಟ್ ಫಂಡ್‌ನ ಹಣವನ್ನು ಷೇರುಪೇಟೆಯಲ್ಲಿ ತೊಡಗಿಸುವಿಕೆ- ಇಂತಹ ಚಿಂತನೆಗೂ ಮುಂದಾಗಿತ್ತು. ಈ ಎಲ್ಲವನ್ನೂ ತಡೆದವರು ಸರ್ಕಾರಕ್ಕೆ ಬಾಹ್ಯಬೆಂಬಲ ಕೊಟ್ಟಿದ್ದ ಎಡಪಕ್ಷಗಳು. ಎಡಪಕ್ಷಗಳ ಬಗ್ಗೆ ಯಾರಿಗೆ ಎಷ್ಟೇ ಭಿನ್ನಾಭಿಪ್ರಾಯವಿರಲಿ, ಇದೊಂದು ನಿಯಂತ್ರಣ ನಡೆಯದಿದ್ದರೆ ನಮ್ಮ ಬ್ಯಾಂಕುಗಳು ಮತ್ತು ಜೀವವಿಮಾ ನಿಗಮಗಳ ಗತಿ ಏನಾಗುತ್ತಿತ್ತು ಎಂಬುದನ್ನು ಪಕ್ಷ-ಪಾತರಹಿತವಾಗಿ ಯೋಚಿಸಬೇಕು. ೨೭-೭-೨೦೦೯ರಂದು ವರದಿಯಾದಂತೆ ಅರ್ಥಸಚಿವ ಪ್ರಣವ್ ಮುಖರ್ಜಿಯವರು ರಾಷ್ಟ್ರೀಕೃತ ಬ್ಯಾಂಕುಗಳ ಪಾತ್ರವನ್ನು ಹೊಗಳಿ ಆರ್ಥಿಕ ಹಿಂಜರಿತದಿಂದ ದೂರವುಳಿಯಲು ಈ ಬ್ಯಾಂಕುಗಳೂ ಕಾರಣವೆಂದು ಒಪ್ಪಿಕೊಂಡಿರುವುದನ್ನು ಗಮನಿಸಬೇಕು. ಖಾಸಗಿವಲಯದಷ್ಟೇ ಸಾರ್ವಜನಿಕ ವಲಯವೂ ದಕ್ಷತೆಯಿಂದಿರಲು ಸಾಧ್ಯವೆಂಬುದಕ್ಕೆ ಅನೇಕ ಉದಾಹರಣೆಗಳಿವೆ. ವಿಪರ್ಯಾಸವೆಂದರೆ ನಮ್ಮ ಸರ್ಕಾರಗಳು ಪೂರ್ಣ ಪ್ರಮಾಣದ ಮನಸ್ಸಿನಿಂದ ಸಾರ್ವಜನಿಕ ವಲಯದ ಪುನಚೇತನಕ್ಕೆ ಮುಂದಾಗುತ್ತಿಲ್ಲ. ಅಷ್ಟೇಕೆ ಸ್ವದೇಶಿ ಮಂತ್ರದ ವಾಜಪೇಯಿಯವರ ಮಂತ್ರಿಮಂಡಲದಲ್ಲಿ ‘ಹೂಡಿಕೆ ಹಿಂತೆಗೆತ’ಕ್ಕಾಗಿ ಒಂದು ಸ್ವತಂತ್ರ ಸಚಿವ ಖಾತೆಯನ್ನೇ ಸೃಷ್ಟಿಸಲಾಯಿತು!

ಇನ್ನೊಂದು ವಿಪರ್ಯಾಸವೆಂದರೆ ಈಗ ವಿಶ್ವ ಸಂಸ್ಥೆಗಿಂತ ವಿಶ್ವಬ್ಯಾಂಕ್ ಮುಖ್ಯವಾಗುತ್ತಿದೆ. ಅದರ ಆದೇಶಗಳಿಗೆ ನಮ್ಮಂಥ ರಾಷ್ಟ್ರಗಳು ತಲೆಬಾಗುತ್ತಿವೆ. ಯಾಕೆ ಹೀಗೆಂದು ಕೇಳಿದರೆ ಬಂಡವಾಳ ಬೇಕಲ್ಲ ಎಂಬ ಉತ್ತರ ಸಿಗುತ್ತದೆ.

ಇಷ್ಟೆಲ್ಲ ಹೇಳಿದ ಮೇಲೆ – ಬಂಡವಾಳವೇ ಬೇಡ – ಎಂದು ಹೇಳಬೇಕೆ ಎನ್ನುವ ಪ್ರಶ್ನೆ ಎದುರಾಗಬಹುದು. ಇಲ್ಲ, ಬಂಡವಾಳವೇ ಬೇಡ ಎನ್ನುವುದು ಈಗಿನ ವಸ್ತುಸ್ಥಿತಿಗೆ ಹೊಂದುವುದಿಲ್ಲ. ಹಾಗಾದರೆ ವಿದೇಶಿ ಬಂಡವಾಳ? ಅದನ್ನೂ ಈಗ ಹಿಂದಕ್ಕೆ ಕಳಿಸುವ ಸನ್ನಿವೇಶ ಕಾಣುತ್ತಿಲ್ಲ. ಹಾಗೆಂದು ನಾವು ಬಂಡವಾಳಕ್ಕೆ ಗುಲಾಮರಾಗಬೇಕಿಲ್ಲ. ಧಾರ್ಮಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ಬಂಡವಾಳಕ್ಕೆ ಭಕ್ತರಾಗಬೇಕಿಲ್ಲ, ನಾವು ಭಕ್ತರಾದರೆ ಬಂಡವಾಳ ಭಗವಂತನಾಗುತ್ತದೆ. ಈಗ ಆಗಿರುವ ಅಪಾಯ ಇದೇ ಆಗಿದೆ. ನಮ್ಮ ದೇಶದ ಭಕ್ತರು ಭಗವಂತನ ಎದುರು ಶರಣರಾಗುತ್ತಾರೆ; ದಾಸರಾಗುತ್ತಾರೆ. ಭಗವಂತನನ್ನು ಒಲಿಸಿಕೊಳ್ಳಲು ಸರ್ವತ್ಯಾಗಕ್ಕೂ ಸಿದ್ಧರಾಗುತ್ತಾರೆ. ಪ್ರಾಣತ್ಯಾಗಕ್ಕೂ ಸಿದ್ಧ. ಕಾಣದ ಕೈಲಾಸವೊ ವೈಕುಂಠವೊ ಲಭ್ಯವಾಗುತ್ತದೆಯೆಂಬ ನಿರೀಕ್ಷೆಯಲ್ಲಿ ನಿಂತ ನೆಲವನ್ನು ಬಿಟ್ಟು ಹೋಗುವ ಮನಸ್ಥಿತಿ.

ಈಗ ಬಂಡವಾಳವೇ ಭಗವತನಂತಾಗಿದೆ. ಜನರೆಲ್ಲ ಭಕ್ತರಾಗಿರಬೇಕೆಂದು ಬಯಸುತ್ತಿದೆ. ಇದು ಅದಲು ಬದಲಾಗಬೇಕು. ಬಂಡವಾಳ ಬರುವುದಾದರೆ ಭಕ್ತನಾಗಿ ಬರಲಿ; ಭಗವಂತನಾಗಿ ಬರುವುದು ಬೇಡ. ಬಂಡವಾಳ ಭಕ್ತನಾದರೆ ಜನರು ಭಗವಂತನ ಸ್ಥಾನದಲ್ಲಿರುತ್ತಾರೆ. ಜನರು ಕೊಡುವ ವರ ಮತ್ತು ಶಾಪಕ್ಕೆ ಬಂಡವಾಳವು ಸಿದ್ಧವಾಗಿರಬೇಕಾಗುತ್ತದೆ. ಬಂಡವಾಳವು ಜನರಿಗಾಗಿಯೇ ಹೊರತು ಜನರು ಬಂಡವಾಳಕ್ಕಾಗಿಯಲ್ಲ. ಆದ್ದರಿಂದ ಬಂಡವಾಳ ಭಗವಂತನಾಗುವುದು ಬೇಡ. ಭಕ್ತನಾಗಬೇಕು. ಈ ಬುದ್ದಿ ಸರ್ಕಾರಗಳಿಗೆ ಮೊದಲು ಬರಬೇಕು ಇಲ್ಲದಿದ್ದರೆ ಜನರು ಬುದ್ದಿ ಕಲಿಸಬೇಕು…. ಬುದ್ದಿ ಕಲಿಸಬೇಕೆಂಬ ಬುದ್ದಿ ಬಂದೀತೆ ? ಮಾನವ ಶಕ್ತಿ ಮೇಲುಗೈ ಪಡೆದೀತೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೪
Next post ಬಡತನ

ಸಣ್ಣ ಕತೆ

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys