ಗುಡ್ಡ-ಬೆಟ್ಟ ಸಾಲು-ಸಾಲೇ-ಸಾಲು
ಗಗನಚುಂಬಿ ಕೊಡಚಾದ್ರಿಯಲಿ
ಮನತಣಿಯೇ ಕೈಬೀಸಿ ಕರೆತಿಹವು

ಎತ್ತರೆತ್ತರ ಮರ-ಗಿಡ ಕಣ್ಮನಕೆ ಕಾನು-ಕಂಪು
ಕರಿ ಕಲ್ಲು ಗರ್ಭದಲಿ ಚಿಮ್ಮುವ ಜಲಧಾರೆಯಲಿ
ಬೀಸುವ ತಂಗಾಳಿ ಮನಕೊಂದು ಉನ್ಮತ್ತಹಿತವು

ನೇಸರನುದಯದಿ ಪಳ-ಪಳನೆ
ಹೊಳೆಯುತಿದೆ ಎಲೆ ಹಸಿರು ಬೆಟ್ಟ ಮೈ

ಬಾಗಿದ ಬಾನಿನಂಚಿನಲಿ ಚಲುವಿನ ಸಂಜೆಗೆಂಪು
ಚಿಮ್ಮಿ ಸಂತಸದ ಸ್ವಾಗತವ ನೀಡುತಿರಲು
ಮುಗಿಲು ಮಲ್ಲಿಗಿ ಅರಳಿ ಮುದವು ಸಿಗುವುದು ರಾತ್ರಿಯಲಿ

ಬೆಟ್ಟ ತುದಿಯೇರಲು ಮುಳ್ಳು-ಕಲ್ಲು
ಬಲು ದೂರ-ದಾರಿ ಡೊಂಕ-ಡೊಂಕು

ದಣಿದ ಮನಕೆ ಬಯಕೆಯ ನಿರಾಶೆಯಲಿ
ಬದುಕಿನ ಯಾತ್ರೆ ಬಿಡದ ಛಲ
ನಿರಾಶರಾಗದೇ ಧೃತಿಗೆಡದೀಜಿದಾಗ
ಶ್ರಮದ ಪ್ರತಿಫಲ ಮುಪ್ಪಿನಲಿ ಸಾವು
ಅದುವೇ ಬದುಕಿನ ಸಲೆ

ಪ್ರಕೃತಿಯೊಡಲ ಕನ್ನಡಿಯಲಿ
ಹುಟ್ಟು ಸಾವು ಮರು ಹುಟ್ಟು ಗಗನಗ್ರಂಥ
*****