ಆಶೆ ಬಿಡು ಎಂದ ಬುದ್ಧ
ಏನು ಮಾಡಲಿ ನಾನಿಲ್ಲ ಸಿದ್ಧ.

ಬಯಸದೆ ಹುಟ್ಟಿ ಬಂದೆ
ಬಯಕೆಯ ಬುಟ್ಟಿಯಾದೆ

ಬುಟ್ಟಿಯನ್ನೇ ನೆಚ್ಚಿಕೊಂಡೆ
ಗಂಡ ಮಕ್ಕಳ ಹಚ್ಚಿಕೊಂಡೆ

ಬದುಕನ್ನ ಒಪ್ಪಿಕೊಂಡೆ
ಬೆಂಕಿಯನ್ನ ಅಪ್ಪಿಕೊಂಡೆ

ಆಶೆ ಬಿಡು ಎಂದ ಬುದ್ಧ
ಏನು ಮಾಡಲಿ ನಾ ಬದ್ಧ

ಸಂಸಾರ ಸಾಗರವಂತೆ
ದುಃಖದ ಆಗರವಂತೆ
ಇದ್ದೂ ಇಲ್ಲದಂತಿರಬೇಕಂತೆ
ನೀರೊಳಗಿನ ತಾವರೆ ಎಲೆಯಂತೆ

ಎಲ್ಲವ ತಿಳಿದೂ ತಿಳಿದೂ
ಇರುವೆ ಯಾಕೋ ಇನ್ನೂ ಸಾಕೆನಿಸಿಲ್ಲ ಗುರುವೆ

ನಾ ಪಡಕೊ ಬಂದದ್ದೇ ಈ ಸಂತೆ
ನಾನಿಲ್ಲೇ ಹೀಗೆ… ನಿಶ್ಚಿಂತೆ.
*****