ಒಡೆತನವನ್ನು ಕಳೆದುಕೊಂಡರೂ ಕೆಂಬಲ್ಲಿನ ಪಾಳಯಗಾರನಿಂದ ಮೈಸೂರನ್ನು ರಕ್ಷಿಸಿ ಕೆಸರೆಯನ್ನು ಸಾಧಿಸಿ ಅನೇಕ ಜಯಗಳನ್ನು ಪಡೆದಿದ್ದ ಬೆಟ್ಟದ ಒಡೆಯರಿಗೂ ರಾಜ ಒಡೆಯರಿಗೂ ಮನಸ್ತಾಪ ತೋರಿತು. ಸ್ವಾರ್ಥ ಪ್ರಿಯರಾಗಿದ್ದ ನೀಚರು ಕೆಲವರು ಈ ಮನಸ್ತಾಪವನ್ನು ಹೆಚ್ಚಿಸಿದರು. ಕಡೆಗೆ ಬೆಟ್ಟದ ಒಡೆಯರು ಮೈಸರನ್ನು ಬಿಟ್ಟು ಶ್ರೀರಂಗಪಟ್ಟಣಕ್ಕೆ ಹೋಗಿ ಅಲ್ಲಿ ರಾಯನ ಆಶ್ರಯವನ್ನು ಹೊಕ್ಕರು. ಅವರ ತಾಳ್ಮೆಯಿಂದ ರಾಯನ ಸೈನ್ಯವು ದುರ್ಬಲವಾಗಿದ್ದುದು ಪ್ರಬಲವಾಯಿತು. ರಾಯನ ಅಧಿಕಾರವು ಭದ್ರವಾಯಿತು. ರಾಯನ ಸಹಾಯದಿಂದ ಮೈಸೂರನ್ನು ತಾವೇ ಪುನಃ ಪಡೆಯಬಹುದೆಂದು ಕೆಲವರು ಬೆಟ್ಟದ ಒಡೆಯರಿಗೆ ಸೂಚಿಸಿದರು. ಅತ್ತ ಕೆಲವರು ರಾಜ ಒಡೆಯರಿಗೆ “ಬೆಟ್ಟದ ಒಡೆಯರು ಶ್ರೀರಂಗಪಟ್ಟಣದಲ್ಲಿ ಸೇರಿಕೊಂಡು ತಮ್ಮ ಅಧಿಕಾರವನ್ನು ತಪ್ಪಿಸಲು ಸನ್ನಾಹಪಡುತ್ತಿದ್ದಾರೆ” ಎಂದು ಹೇಳುತ್ತಿದ್ದರು.
ಆಗ ರಾಜ ಒಡೆಯರವರೇ ಬೆಟ್ಟದ ಒಡೆಯರವರನ್ನು ಹಿಡಿಸಲು ಉಪಾಯ ಮಾಡಿದರು. ಬೆಟ್ಟದ ಒಡೆಯರು ಗರಡಿ ಸಾಧನೆಯನ್ನು ಚನ್ನಾಗಿ ಮಾಡಿ ಬಹಳ ಬಲಶಾಲಿಗಳಾಗಿದ್ದರು. ಆದ್ದರಿಂದ ಅವರನ್ನು ಉಪಾಯದಿಂದಲೇ ಹಿಡಿಯಬೇಕಾಗಿದ್ದಿತು. ಬೆಟ್ಟದ ಒಡೆಯರು ಯಾರನ್ನೋ ನಿಗ್ರಹಿಸಿ “ನನ್ನನ್ನು ಹಿಡಿಯುವವರು ಯಾರು?” ಎಂಬ ಅಭಿಮಾನದಿಂದ ಒಬ್ಬರೇ ಹಿಂತಿರುಗುತ್ತಿದ್ದ ವೇಳೆಯನ್ನು ಹೊಂಚಿಕೊಂಡು ಕೆಲವರು ದಾರಿಯಲ್ಲಿ ಅವಿತುಕೊಂಡರು. ಸಮಯವನ್ನು ಹಿಡಿದು ಬೆಟ್ಟದ ಒಡೆಯರ ಮೇಲೆ ಬಿದ್ದು ಅವರನ್ನು ಬಂಧಿಸಿ ರಾಜ ಒಡೆಯರ ಎದುರಿಗೆ ಕರೆದೊಯ್ದರು.
ರಾಜ ಒಡೆಯರಿಗೆ ಸೋದರ ಹತ್ಯವನ್ನು ಮಾಡುವ ಯೋಚನೆಯಿರಲಿಲ್ಲ. ಇತರರ ಪಕ್ಷವನ್ನು ಬೆಟ್ಟದ ಒಡೆಯರು ಸೇರದ ಹಾಗೆ ಮಾಡಬೇಕೆಂದಿದ್ದರು. ಮೈಸೂರಿನ ಪಕ್ಕದಲ್ಲಿಯೇ ಸೇರಿದ್ದರೆ ಬೆಟ್ಟದ ಒಡೆಯರಿಂದ ಎಷ್ಟು ಸಹಾಯವಾದೀತೆಂದು ಯೋಚಿಸುತ್ತಿದ್ದರು. ಆದ್ದರಿಂದ ಬೆಟ್ಟದ ಒಡೆಯರು ಬಂದ ಕೂಡಲೇ ಅವರ ವಿಶ್ವಾಸವನ್ನು ಸಂಪಾದಿಸುವ ಯೋಚನೆಯಲ್ಲಿದ್ದರು. ಬೆಟ್ಟದ ಒಡೆಯರಿಗೆ ತಮ್ಮನ್ನು ಮೋಸದಿಂದ ಹಿಡಿದೊಯ್ದರೆಂದು ಮನಸ್ಸಿನಲ್ಲಿ ಕೋಪವುಕ್ಕಿತ್ತು. ಆ ಸ್ಥಾನವನ್ನು ಬೆಟ್ಟದ ಒಡೆಯರು ಪ್ರವೇಶಿದ ಕೂಡಲೆ ರಾಜ ಒಡೆಯರು ಗದ್ದುಗೆಯಿಂದ ಇಳಿದು ಕೈಗಳನ್ನು ತೆರೆದಕೊಂಡು ಬಂದರು. ರಾಜ ಒಡೆಯರು, ಸೋದರನನ್ನು ಅಪ್ಪಿ ಕೊಳ್ಳ ಬೇಕೆಂದು ಹಾಗೆ ಇಳಿದು ಬಂದರು; ಬೆಟ್ಟದ ಒಡೆಯರಿಗೆ ತಮ್ಮನ್ನು ಕೊಲೆಮಾಡುವುದಕ್ಕೆ ಹೀಗೆ ರಾಜ ಒಡೆಯರು ಬರುತ್ತಿದ್ದಾರೆಂದು ತೋಚಿತು. ಆದ್ದರಿಂದ ಸಮೀಪಕ್ಕೆ ಬಂದಕೂಡಲೆ ಬೆಟ್ಟದ ಒಡೆಯರು ತಮ್ಮನ್ನು ಹಿಡಿದುಕೊಂಡಿದ್ದ ಭಟರನ್ನು ಕ್ಷಣ ಮಾತ್ರದಲ್ಲಿ ತಳ್ಳಿ ರಾಜ ಒಡೆಯರ ಮೇಲೆ ಹಾರಿ ಕೆಳಕ್ಕೆ ಕೆಡವಿ ಬಿಟ್ಟರು. ಆಸ್ಥಾನಿಕರೂ ಪರಿವಾರದವರಣ ಹಾಹಾ ಎಂದು ಎಲ್ಲರೂ ಸೇರಿ ಬೆಟ್ಟದ ಒಡೆಯರನ್ನು ಹಿಡಿದು ಬಂಧಿಸಿದರು. ರಾಜ ಒಡೆಯರು ಎಷ್ಟು ಸುತ್ತಮುತ್ತಲವರನ್ನು ಕುರಿತು “ಬೆಟ್ಟದ ಒಡೆಯರನ್ನು ಕೂಡಲೆ ಕರೆದುಕೊಂಡು ಹೋಗಿ ಅವರ ಮನೆಯನ್ನು ಸೇರಿಸಿ” ಎಂದು ಬೆಟ್ಟದ ಒಡೆಯರನ್ನು ಕುರಿತು “ತಾವು ತಮ್ಮ ಮನೆಯಿಂದ ಹೊರಗೆಬಂದರೆ ತಮಗೆ ಅಪಾಯವಿರುತ್ತದೆ. ಜೋಕೆ!” ಎಂದರು. ಭಟರು ಬೆಟ್ಟದ ಒಡೆಯರನ್ನು ಅವರ ಮನೆಯಲ್ಲಿ ಬಿಟ್ಟು ಸುತ್ತಲೂ ಕಾವಲಿರುತ್ತಿದ್ದರು.
ಹೀಗಿದ್ದಾಗ ಕುಮಾರ ನರಸರಾಜನೆಂಬೊಬ್ಬ ಒಡೆಯರ ನೆಂಟನು ಸ್ವಂತ ಹಗೆತನದಿಂದಲೋ ಒಡೆಯರ ಮೆಚ್ಚುಗೆಯನ್ನು ಪಡೆಯುವ ಆಲೋಚನೆಯಿಂದಲೋ ಕಟುಕರವನೊಬ್ಬನನ್ನು ಕರೆಸಿ ನಿರ್ಬಂಧದಲ್ಲಿದ್ದ ಬೆಟ್ಟದ ಒಡೆಯರ ಕಣ್ಣುಗಳನ್ನು ಕೀಳುವ ಹಾಗೆ ಅಪ್ಪಣೆಕೊಟ್ಟನು. ಈ ಸಮಾಚಾರವು ರಾಜಒಡೆಯರು ಹೊರಗೆ ಹೊರಡಲನುವಾಗಿ ಕುದುರೆಯನ್ನೇರುವ ವೇಳೆಗೆ ತಿಳಿಯ ಬಂತು. ಕೂಡಲೆ ರಾಜ ಒಡೆಯರು ಕುದುರೆಯನ್ನು ಬಿಟ್ಟು “ಕುಮಾರ ನರಸರಾಜನನ್ನು ಅವನ ತಮ್ಮಂದಿರೊಡನೆ ಆಸ್ಥಾನಕ್ಕೆ ಕರೆದುಕೊಂಡು ಬನ್ನಿ!” ಎಂದು ಅಪ್ಪಣೆಮಾಡಿ ಅರಮನೆಯೊಳಕ್ಕೆ ಹೋದರು. ನರಸರಾಜನು ಬರುತ್ತಲೇ ” ಏನಯ್ಯ, ನರಸರಾಜ! ನೀನು ಈಗಲೇ ನಿನ್ನ ತಮ್ಮನ ಕಣ್ಣನ್ನು ನಿನ್ನ ಕಠಾರಿಯಿಂದ ಇರಿಯಬೇಕೆಂದು ನಮಾಜ್ಞೆ, ಕಠಾರಿಯಿರುವುದೋ?” ಎಂದು ರಾಜಒಡೆಯರು ಕೋಪದಿಂದ ಕೇಳಿದರು. ನರಸರಾಜನು ದಿಕ್ಕೆಟ್ಟು “ಮಹಾ ಸ್ವಾಮೀ! ನನ್ನ ತಮ್ಮನೇನು ಅಪರಾಧಮಾಡಿದನು?” ಎಂದು ಕೇಳಲು, ರಾಜಒಡೆಯರು “ನೀಚನೇ! ನನ್ನ ಸೋದರ ಬೆಟ್ಟದ ಒಡೆಯರೇನಪರಾಧಮಾಡಿದರು?” ಎಂದು ಗರ್ಜಿಸಿದರು. ನರಸರಾಜನು ನಡುಗುತ್ತ ನಿಂತನು. ಆಗ ರಾಜಒಡೆಯರು ಭಟರನ್ನು ಕುರಿತು! ಕರೆದುಕೊಂಡು ಹೋಗಿ ಈ ಹೇಡಿಯನ್ನು” ಎನ್ನಲು ಭಟರು ಹಾಗೆಯೇ ಮಾಡಿದರು. ಮತ್ತೆ ಕೆಲವು ಭಟರನ್ನು ಕಳುಹಿಸಿ ರಾಜಒಡೆಯರು ಬೆಟ್ಟದ ಒಡೆಯರನ್ನು ಕರೆಸಿದರು. ಅವರು ಬಂದಕೂಡಲೆ ರಾಜಒಡೆಯರು ಅವರನ್ನು ಅಪ್ಪಿಕೊಂಡು ಕುಳ್ಳಿರಿಸಿ“ ತನ್ನನ್ನು ಬಂಧಿಸುವುದಕ್ಕಾಗಲಿ ಹಿಂಸೆಪಡಿಸುವುದಕ್ಕಾಗಲಿ ನನಗಿಷ್ಟವಿಲ್ಲ. ಇನ್ನು ತಾವು ಎಲ್ಲಿ ತಮಗೆ ಇಷ್ಟವೋ ಅಲ್ಲಿ ಇರಬೇಕು. ಮೈಸೂರಿನಲ್ಲಿ ತುಂಟರು ಹೆಚ್ಚುತ್ತಿದ್ದಾರೆ. ತಾವು ಇಲ್ಲಿರುವುದಕ್ಕಿಂತ ಬೇರೆ ಸ್ಥಳದಲ್ಲಿರುವುದು ಒಳ್ಳೆಯದು. ತಮ್ಮ ಪ್ರಯಾಣದ ಅನುಕೂಲಕ್ಕೆ ಈ ಹಣದ ಚೀಲವನ್ನು ತೆಗೆದುಕೊಳ್ಳಿ” ಎಂದು ಆದರದಿಂದ ಮಾತನಾಡಿದರು. ಬೆಟ್ಟದ ಒಡೆಯರು ಮೈಸೂರನ್ನು ಬಿಟ್ಟು ರಂಗಸಮುದ್ರವೆಂಬ ಹಳ್ಳಿಯಲ್ಲಿ ನೆಲೆಸಿ ರಾಜಒಡೆಯರಲ್ಲಿ ವಿಶ್ವಾಸದಿಂದ ಉಳಿದ ಜೀವಮಾನವನ್ನು ಕಳೆದರು.
*****
[ವಿಲ್ಕ್ಸ್ ಸಂ.೧ ಪುಟ ೨೫]