ಮೂಲ: ಟಿ ಎಸ್ ಎಲಿಯಟ್

ಆದಿಯಲ್ಲಿದೆ ನನ್ನ ಅಂತ್ಯ೨ ಮನೆಗಳು ಒಂದು
ಕ್ರಮ ಹಿಡಿದು ಏಳುವುವು, ಬೀಳುವುವು, ಕಡಿಯುವುವು
ಬೆಳೆಯುವುವು, ಮರೆಯಾಗುವುವು, ನಾಶವಾಗುವುವು;
ಬಿದ್ದ ಮನೆ ಮತ್ತೆ ಎದ್ದೇಳುವುವು, ಹಿಂದೆ ಮನೆ
ಇದ್ದಲ್ಲಿ ಈಗ ಇದೆ ಮೈದಾನ ಕಾರ್ಖಾನೆ ಇಲ್ಲವೆ ಹೊರರಸ್ತೆ.
ಹಳೆಕಲ್ಲು ಹೊಸ ಕಟ್ಟಡಕ್ಕೆ, ಹಳೆ ಕಟ್ಟಿಗೆ
ಹೊಸ ಉರಿಗೆ, ಹಳೆಯ ಉರಿ ಬೂದಿ, ಅದು ಮಣ್ಣಿಗೆ;
ಮಣ್ಣಿಂದ ಮಾಂಸ ಲೋಮ ಪಿಷ್ಟ, ಅದರಿಂದ
ಪಶು, ಮನುಷ್ಯರ ಮೂಳೆ, ತೆನೆ ಧಾನ್ಯ ಹಸಿರೆಲೆ.
ಹುಟ್ಟು ಸಾವುಗಳಿವೆ ಮನೆಗಳಿಗೆ: ನಿರ್ಮಾಣಕ್ಕೆ
ಕಾಲವಿದೆ ಬಾಳುವೆಗೆ ಪೀಳಿಗೆಗೆ ಕಾಲವಿದೆ
ಸಡಿಲ ಕಿಟಕಿಗಳ ಸಿಡಿಸುವುದಕ್ಕೆ ಗಾಳಿಗೆ
ಕಾಲವಿದೆ ನುಸಿವ ಹೆಗ್ಗಣಕ್ಕೆ ನೆಲೆಯಾಗಿರುವ
ಹಲಗೆ ಗೋಡೆಗಳ ಅತ್ತಿತ್ತ ತಳ್ಳುವುದಕ್ಕೆ೩
ನೀರವ ಸುಭಾಷಿತವ ಹೊಲಿದ ಹಳೆಪರದೆಗಳನ್ನು೪
ಬೀಸಿ ಬಡಿಯುವುದಕ್ಕೆ.

ಆದಿಯಲ್ಲಿದೆ ನನ್ನ ಅಂತ್ಯ. ಬಯಲಿನ ಮೇಲೆ
ಬೆಳಕು ಬೀಳುವುದೀಗ೫ ಆಳ ಓಣಿಗಳ ಮೇಲೆ
ಮರದ ಕೊಂಬೆಗಳು ಹರಡಿ ನಡುಹಗಲಿನಲ್ಲಿಯೂ ಕತ್ತಲೆ,
ಹಾಯುವುದು ಪಕ್ಕದಲ್ಲಿ ವ್ಯಾನು, ಥಟ್ಟನೆ ನೀವು
ಒರಗಿ ನಿಲ್ಲುವಿರಿ ಬದಿಗೆ, ಓ ಕರೆದೊಯ್ಯುತ್ತದೆ
ಬೇಯುವ ಶಾಖದಲ್ಲಿ ಗರಬಡಿದು ನಿಂತಿರುವ ಯಾವುದೋ ಹಳ್ಳಿಗೆ
ವಕ್ರೀಕರಿಸುತ್ತಿಲ್ಲ ಬೂದಿಗಲ್ಲುಗಳು ಅಲ್ಲಿ ಉರಿವ ಬೆಳಕನ್ನು,
ಧಗೆ ಮಬ್ಬಿನಲ್ಲಿ ಬೆಳಕು ಇಂಗಿ ಹೋಗುತ್ತಿದೆ.
ಶೂನ್ಯ ನೀರವದಲ್ಲಿ ಡಾಲಿಯಾ ಹೂವುಗಳು ನಿದ್ದೆ ಹೋಗುತ್ತಿವೆ.
ಮುಸ್ಸಂಜೆ ಗೂಬೆಕೂಗಿಗೆ ಕೊಂಚ ಕಾಯಿರಿ.

ಆ ಬಯಲಿನಲ್ಲಿ
ತೀರ ಹತ್ತಿರ ನೀವು ಬಾರದಿದ್ದಲ್ಲಿ ತೀರ ಹತ್ತಿರ ಬರದೆ
ಅಲ್ಲೆ ನಿಂತಲ್ಲಿ ಬೇಸಿಗೆಯ ನಟ್ಟನಡು ಇರುಳಿನಲ್ಲಿ
ಪಿಳ್ಳಂಗೋವಿಯ ನಾದ, ಪುಟ್ಟ ತಮಟೆಯ ಬಡಿತ ಕೇಳಬಹುದು;೬
ಉಷಃಕಾಲದಲ್ಲಿ ಬೆಂಕಿಕುಂಡದ ಸುತ್ತ ಗಂಭೀರ ಸಂಪನ್ನ
ವಿವಾಹ ಮಂಗಳವಿಧಿಯ ಆಚರಿಸುತ್ತಿರುವ
ಗಂಡು ಹೆಣ್ಣುಗಳ ಜೋಡಿ ಜೋಡಿಗಳನ್ನು ಕಾಣಬಹುದು.
ಕೈಚಾಚಿ ಪರಸ್ಪರ ಕೈಯನ್ನೊ ತೋಳನ್ನೊ ಹಿಡಿದ ಜೋಡಿ೭
ಬೆಂಕಿಕುಂಡದ ಸುತ್ತ ತಿರುಗುತ್ತ ಜ್ವಾಲೆಗಳ ಹಾಯುತ್ತ ಜಿಗಿಯುತ್ತ,
ಅಥವಾ ಎಲ್ಲರು ಸೇರಿ ಸುತ್ತಾಗಿ ಕುಣಿಯುತ್ತ
ಗ್ರಾಮೀಣ ಗಾಂಭೀರ್ಯ, ಗ್ರಾಮೀಣಹಾಸ್ಯ ಖುಷಿ ಎಲ್ಲ ಕಡೆ ಚೆಲ್ಲುತ್ತ,
ಒಡ್ಡು ಬೂಟನ್ನು ತೊಟ್ಟ ಮಣ್ಣ ಹೆಜ್ಜೆಗಳನ್ನ, ಕೆಸರು ಹೆಜ್ಜೆಗಳನ್ನ,
ಭಾರ ಹೆಜ್ಜೆಗಳನ್ನ ಎತ್ತಿ ಇಳಿಸುತ್ತ,
ಬಹಳ ಹಿಂದೆಯೆ ಮಣ್ಣ ತಳ ಸೇರಿ ಧಾನ್ಯಕ್ಕೆ ಸಾರವನ್ನೂಡಿದ
ಒಡ್ಡು ಗ್ರಾಮೀಣರ, ಗ್ರಾಮ್ಯವಿನೋದದಲ್ಲಿ ಕುಣಿವ ಜೋಡಿ.
ತಾಳಕ್ಕೆ ಲಯಕ್ಕೆ ಪಟ್ಟಾಗಿ ಹೊಂದಿಸಿ
ಕುಣಿಯುವ ಹೊತ್ತಿನಲ್ಲಿ ಹೆಜ್ಜೆಯಿಡುವಂತೆ,
ಗೇಯುವ ಕಾಲಗಳಲ್ಲಿ ಗ್ರಹ ತಾರೆ ಮೈತ್ರಿಯಲ್ಲಿ,
ಹಾಲುಹಿಂಡುವ ಹಾಗೂ ಸುಗ್ಗಿಯ ಸಮಯಗಳಲ್ಲಿ,
ಗಂಡುಹೆಣ್ಣುಗಳು ಮೈಬೆಸೆವ ಗಳಿಗೆಗಳಲ್ಲಿ,
ಪಶು ಪ್ರಾಣಿ ಸಂಭೋಗಕ್ಕೆ ಬೆದೆಯೆದ್ದ ಹೊತ್ತಿನಲ್ಲಿ –
ತಾಳ ಲಯಕ್ಕೆ ಬಾಳು ನಡೆಯುವಂತೆ
ಮೇಲಕ್ಕೇಳುತ್ತ ಮತ್ತೆ ಕೆಳಕ್ಕೆ ಇಳಿಯುವ ಪಾದ.
ತಿನ್ನುವುದು ಕುಡಿಯುವುದು, ವಿಸರ್ಜನೆ, ಸಾವು ಎಲ್ಲ ಕಾಲಕ್ಕೆ ತಕ್ಕಂತೆ.೮

ಬೆಳಗು ಬಂತು, ಹಾಗೇ ಜೊತೆಗೆ ಮತ್ತೊಂದು ದಿನ
ಕುದಿತಕ್ಕೆ ಮೌನಕ್ಕೆ ಸಿದ್ಧವಾಗುತ್ತಿದೆ.
ಕಡಲಿನ ಮೇಲೆ ಗಾಳಿ ತೆರೆಯಾಗಿ ಎದ್ದು ಮತ್ತೆ ಜಾರುತ್ತದೆ.
ಇಲ್ಲೋ ಅಲ್ಲೋ ಎಲ್ಲೋ ಇದ್ದೇನೆ ನಾನು.
ಇದ್ದೇನೆ ನನ್ನ ಆರಂಭದಲ್ಲಿ,

II
ನವೆಂಬರಿನ ಕೊನೆಭಾಗ ವಸಂತದ ಗದ್ದಲ ಹೊತ್ತು
ಗ್ರೀಷ್ಮದ ಜೀವಿಗಳ ಜೊತೆ ಏನು ನಡೆಸುತ್ತಿದೆ?
ಹೆಜ್ಜೆಯಡಿ ಬಿದ್ದು ಒದ್ದಾಡುತ್ತಿದೆ ಹಿಮದ ಹನಿ
ಎತ್ತರದ ನೆಲೆಗೆ ಗುರಿಯಿಟ್ಟ ಹಾಲಿಹಾಕ್ಸ್ ಪುಷ್ಪ
ತನ್ನೆಲ್ಲ ಕೆಂಪು ಅಳಿದು ಬೂದಿಬಣ್ಣಕ್ಕಿಳಿದು
ಉರುಳಿ ಬಿದ್ದಿದೆ ಕೆಳಗೆ. ಮುಂಜಾನೆ ಹಿಮ ತಳೆದು
ಗುಲಾಬಿ ಹೂವುಗಳು ಈಗಷ್ಟೆ ಅರಳಿವೆ
ತಿರುಗುವ ತಾರೆಗಳು ಉರುಳಿಸಿದ ಸಿಡಿಲು
ನಕ್ಷತ್ರಲೋಕಗಳ ಯುದ್ಧದಲ್ಲಿ ಬಳಸಿದ
ವಿಜಯೋತ್ಸವದ ರಥವನ್ನು ಅನುಕರಿಸಿದೆ.
ವೃಶ್ಚಿಕ ಸೂರ್ಯನ ವಿರುದ್ಧ ಯುದ್ಧವನ್ನು ಹೂಡಿದೆ
ಸೂರ್ಯಚಂದ್ರರು ಸೋತು ಮುಳುಗಿ ಹೋಗುವವರೆಗೆ
ಧೂಮಕೇತುಗಳು ಅತ್ತು ಉಲ್ಕೆಗಳು ದೂರಕ್ಕೆ ಜಿಗಿದು
ಸ್ವರ್ಗ ಮರ್ತ್ಯಗಳನ್ನು ಬೇಟೆಯಾಡುತ್ತವೆ
ಭಾರಿ ಸುಳಿಯಲ್ಲಿ ಸಿಕ್ಕು ಗರಗರ ತಿರುಗುತ್ತವೆ
ಎಲ್ಲವನ್ನೂ ಸುಡುವ ಪ್ರಳಯ ಜ್ವಾಲೆಗೆ ಅವು ಜಗತ್ತನ್ನೊಯ್ಯುತ್ತವೆ
ಮತ್ತೆ ಮಂಜಿನ ಮುಸುಕು ಎಲ್ಲವನ್ನೂ ಆಳುತ್ತದೆ.

ಹೀಗೆ ಹೇಳುವ ರೀತಿ ಅದೊಂದು ಥರದ ಶೈಲಿ
ಕೇಳುವವನಿಗೆ ಅಂಥ ತೃಪ್ತಿ ತಾರದ್ದು;
ಸಮೆದ ಕಾವ್ಯದ ಜಾಡಿನಲ್ಲಿ ಕೊಂಕಣಸುತ್ತಿ
ಮೈಲಾರಕ್ಕೆ ಹೋಗಿ ತಲುಪುವುದು; ಆಗಲೂ ಅವನು
ಉಳಿಯುವುದು ಶಬ್ದಾರ್ಥಗಳ ಅಸಹ್ಯ ಕಸರತ್ತಿನಲ್ಲಿ
ಕಾವ್ಯ ಮುಖ್ಯವಲ್ಲ ಅಲ್ಲಿ. ಮೊದಲೇ ಹೇಳಿದ್ದಂತೆ
ಇದಲ್ಲ ನಿರೀಕ್ಷಿಸಿದ್ದು, ಬಹುಕಾಲದಿಂದ ನಾವು
ಎದುರು ನೋಡುತ್ತಿದ್ದ ಹೇಮಂತ ಪ್ರಸನ್ನತೆಯ
ಕಾಲದ ವಿವೇಕದ, ಕಾದು ಕೂತಿದ್ದ ಶಾಂತಿಯ ಎಲ್ಲದರ ಮೌಲ್ಯ
ಎಂಥದ್ದಿರಬೇಕಿತ್ತು? ವಂಚಿಸಿ ಹೋದದ್ದು ಅವರು
ಯಾರನ್ನು, ನಮ್ಮನ್ನೋ ಅಥವಾ ತಮ್ಮನ್ನೋ

ಆ ಶಾಂತದನಿ ಹಿರಿಯರು, ವಂಚನೆ ರಸೀತಿಯ ನಮಗೆ
ಬಿಟ್ಟು ಹೋದವರು? ಗೊತ್ತಿದ್ದು ಗೊತ್ತಿದ್ದೂ
ಪೆದ್ದರಾಗಿದ್ದವರ ಪ್ರಸನ್ನ ಗಾಂಭೀರ್ಯ ಅದು,
ಸತ್ತ ರಹಸ್ಯಗಳ ಅರಿವಿನಿಂದಷ್ಟೇ ರೂಪು ತಾಳಿದ್ದ ವಿವೇಕ
ತಮಗೆ ಎದುರಾಗಿದ್ದ, ಅಥವಾ ಎದುರಿಸದೆ ಹೋದ
ಕಾಳಕತ್ತಲೆಯಲ್ಲಿ ಸಹಾಯವಾಗದ್ದು.
ಅನುಭವದಿಂದ ಎದ್ದ ಈ ಎಲ್ಲ ಜ್ಞಾನಕ್ಕೆ
ಹೆಚ್ಚೆಂದರೆ ಒಂದು ಸೀಮಿತ ಬೆಲೆ ಮಾತ್ರ.

ಜ್ಞಾನವೆನ್ನುವುದು ಒಂದು ವಿನ್ಯಾಸ ಒದಗಿಸಿ ಅದನ್ನು
ಸುಳ್ಳಾಗಿಸುತ್ತದೆ; ಏಕೆಂದರೆ ವಿನ್ಯಾಸ ಪ್ರತಿಯೊಂದು ಕ್ಷಣದಲ್ಲೂ
ಬದಲಾಗುತ್ತ ಇರುತ್ತದೆ. ಪ್ರತಿಯೊಂದು ಕ್ಷಣವೂ
ಈ ತನಕ ನಾವು ಏನಾಗಿರುವೆವೊ ಅದೆಲ್ಲದರ
ಗಾಬರಿಗೊಳಿಸುವಂಥ ಹೊಸ ಮೌಲ್ಯಮಾಪನ. ವಂಚಿಸಿದರೂ ಕೂಡ
ಇನ್ನೇನೂ ಕೇಡನ್ನು ತಾರದ್ದು ಯಾವುದೋ
ಅಂಥದ್ದರ ಬಗ್ಗೆ ಮಾತ್ರ ವಂಚಿತರಾಗಿಲ್ಲ ನಾವು.
ದಾರಿಯ ಮಧ್ಯದಲ್ಲಿ, ಮಧ್ಯಮಾತ್ರವೆ ಅಲ್ಲ, ದಾರಿಯುದ್ದಕ್ಕೂ
ಕತ್ತಲು ಕವಿದ ಕಾಡು, ಮುಳ್ಳು ಇಡಿಕಿರಿದ ಮಳೆ, ಬಳ್ಳಿ ಪೊದೆಯ ಅಂಚು
ಭದ್ರ ಹೆಜ್ಜೆಯನ್ನಿಡಲು ಸಾಧ್ಯವಿಲ್ಲದ ಎಡೆ, ಖಳಕಿರಾತರ ಭಯ
ಬೆಳಗುವುದು ಕಲ್ಪನೆ ಇಂಥಲ್ಲಿ, ಎಲ್ಲ ಬಗೆ ಭ್ರಮೆಯ ಸಾಧ್ಯತೆಯಲ್ಲಿ,
ಹೇಳದಿರು ನನ್ನೆದುರು ಹಳಬರ ವಿವೇಕವನ್ನು ಅವರ ಅವಿವೇಕ,
ಭಯದ ಭಯ, ಭ್ರಮಾವೇಶ, ಪಡೆವ ಭಯ ಯಾವನಿಗೊ
ಬೇರೆ ಇನ್ನಾರಿಗೋ ಅಥವಾ ದೇವರಿಗೋ ಸಂಬಂಧಿಸುವ ಭಯ
ನಾವು ಗಳಿಸಲು ಬಯಸಬಹುದಾದ ವಿವೇಕವೆಲ್ಲ
ವಿನಯ ಕುರಿತ ವಿವೇಕ; ವಿನಯವೊಂದೇ ಅನಂತ.

ಮನೆಗಳೆಲ್ಲವೂ ಕಡಲ ತಳದಲ್ಲಿದ್ದಾನೆ
ವರ್ತಕರೆಲ್ಲರೂ ಬೆಟ್ಟದ ತಳದಲ್ಲಿದ್ದಾರೆ

III
ಕತ್ತಲೋ ಕತ್ತಲು, ಎಲ್ಲ ಕಡೆ ಕತ್ತಲು
ಸಾಗುತ್ತಿದ್ದಾರೆ ಎಲ್ಲಾ ಕತ್ತಲಿನಾಳಕ್ಕೆ
ನಕ್ಷತ್ರಗಳ ಮಧ್ಯೆ ಆಕಾಶದಲ್ಲಿ, ಆಕಾಶದೊಳಗಿನ ಅವಕಾಶದಲ್ಲಿ;
ಹಡಗಿನ ಕ್ಯಾಪ್ಟನ್ನರು, ಬ್ಯಾಂಕ್‌ ಮ್ಯಾನೇಜರುಗಳು
ಪ್ರಸಿದ್ಧ ಸಾಹಿತಿಗಳು, ಉದಾರಿ ಕಲಾಪೋಷಕರು
ರಾಜಕಾರಣಿಗಳು, ಆಡಳಿತಗಾರರು, ಪ್ರತಿಷ್ಠಿತ ಅಧಿಕಾರಿಗಳು
ನೂರಾರು ಕಮಿಟಿಗಳ ಎಲ್ಲ ಅಧ್ಯಕ್ಷರು
ವಾಣಿಜ್ಯೋದ್ಯಮಿಗಳು, ಸಣ್ಣ ಕಂಟ್ರಾಕ್ಟರು
ಎಲ್ಲ ಹೋಗುತ್ತಿದ್ದಾರೆ ಈ ಕತ್ತಲಿನಾಳಗಳಲ್ಲಿ
ಅಂಧಕಾರಮಯ ಎಲ್ಲ, ಸೂರ್ಯ ಚಂದ್ರ ಮತ್ತು ಗೋಥನ ಪಂಚಾಂಗ
ಡೈರೆಕ್ಟರುಗಳ ಡೈರೆಕ್ಟರಿಗಳು, ಸ್ಟಾಕ್ ಎಕ್ಸ್ಚೇಂಜ್ ಗೆಜೆಟ್ಟು
ತಣ್ಣಗಾಗಿದೆ ಪ್ರಜ್ಞೆ, ಕರ್ಮಕ್ಕೆ ಪ್ರೇರಣೆ ಇಲ್ಲ.
ಹೊರಟಿದ್ದೇವೆ ನಾವು ಈ ಎಲ್ಲದರ ಜೊತೆ ನೀರವ ಅಂತ್ಯಕ್ರಿಯೆಗೆ;
ಯಾರ ಅಂತ್ಯಕ್ರಿಯೆಯೂ ಅಲ್ಲ, ಹೂಳಲು ಯಾರೂ ಇಲ್ಲ.
ಹೇಳಿದೆ ನನ್ನ ಆತ್ಮಕ್ಕೆ, ನಿಶ್ಚಲವಾಗಿರು ನೀನು,
ಕವಿಯಲಿ ಅಂಧಕಾರ, ದೈವಿಕವಾದದ್ದು ಅದು.೯
ನಾಟಕಮಂದಿರದಲ್ಲಿ ದೃಶ್ಯ ಬದಲುವ ಸಮಯ,
ದೀಪಗಳೆಲ್ಲಾ ಆರಿ ಕತ್ತಲ ಮೇಲೆ ಕತ್ತಲು, ರೆಕ್ಕೆಯ ಪರಪರ ಶಬ್ದ
ಗಿರಿಗಳು ಮರಗಳು ದೂರದ ನಿಸರ್ಗದ ಚಿತ್ರ,
ಕಣ್ಣೆದುರಿನ ದಿಟ್ಟ ದೃಶ್ಯ ಪೂರ್ತಿ ಉರುಳಿ ಜಾರುವಂತೆ
ಅಥವಾ ಸುರಂಗಮಾರ್ಗದಲ್ಲಿ ಚಲಿಸುತ್ತ ಸಾಗಿದ ರೈಲು
ಎರಡು ನಿಲ್ದಾಣಗಳ ನಡುವೆ ಬಹಳ ಕಾಲ ನಿಂತಾಗ
ಪ್ರಯಾಣಿಕರ ಮಾತಿನ ದನಿ ಮೆಲ್ಲಗೆ ಮೇಲೇಳುತ್ತ
ಮತ್ತೆ ನಿಧಾನವಾಗಿ ಎಲ್ಲ ತಣ್ಣಗಾಗುವಂತೆ,
ಪ್ರತಿಯೊಂದು ಮುಖದ ಮೇಲೂ ಭಣಗುಡುವ ಖಾಲಿ ಮನಸ್ಸು
ಯೋಚಿಸುವುದಕ್ಕೆ ಏನೊಂದೂ ಇಲ್ಲದ ಭಯ ಮೂಡುವಂತೆ –
ಅಥವಾ ಕ್ಲೋರೋಫಾರಂ ಆವರಿಸಿ ಚಿತ್ತಕ್ಕೆ
ಪ್ರಜ್ಞೆ ಇದ್ದೂ ಯಾವುದೇ ಅರಿವೂ ಇಲ್ಲದಿರುವಂತೆ-
ಹೇಳಿದೆ ನನ್ನ ಆತ್ಮಕ್ಕೆ, ನಿಶ್ಚಲವಾಗಿರು ನೀನು,
ಯಾವುದೇ ನಿರೀಕ್ಷೆ ಇಲ್ಲದೆ ಕಾಯಬೇಕು ಈಗ
ನಿರೀಕ್ಷೆ ಮಾಡಿದ್ದು ತಪ್ಪಾಗುವ ಸಂಭವವಿದೆ;
ಯಾವುದೆ ಪ್ರೀತಿಯೂ ಇಲ್ಲದೆ ಕಾಯಬೇಕು ಈಗ
ಪ್ರೀತಿ ತೋರಿಸಿದರೆ ಅದು ತಪ್ಪಾಗುವ ಸಂಭವವಿದೆ;
ಹಾಗಿದ್ದೂ ಶ್ರದ್ದೆಯಿದೆ.
ಶ್ರದ್ದೆ, ಪ್ರೇಮ ನಿರೀಕ್ಷೆ ಎಲ್ಲವೂ ಜೊತೆಯಲ್ಲೇ
ಕಾಯುತ್ತ ಕೂತಿವೆ ಈಗ. ಯೋಚನೆಗಿನ್ನೂ ನೀನು ಸಿದ್ಧವಿಲ್ಲವಾಗಿ
ಯೋಚಿಸದೆಯೆ ಕಾಯಬೇಕು. ಕತ್ತಲೆಯೇ ಬೆಳಕು ಈಗ, ಸ್ತಬ್ಧತೆಯೇ ಚಲನೆ.

ಓಡುವ ತೊರೆಗಳ ಪಿಸುದನಿ, ಹಮತದ ಮಿಂಚು,
ಕಾಣದೆ ಸುಗಂಧ ಚೆಲ್ಲುವ ಕಾಡುಬಳ್ಳಿ ಸಂಚು,
ಸ್ಟ್ರಾಬೆರಿ ಹಣ್ಣು ತೋಟದ ಒಳಗೆ ಏನೋ ನಗುದನಿ-
ಇನ್ನೂ ಕಳೆದಿಲ್ಲದ, ಇನ್ನೂ ಬೇಕಿರುವ
ಹುಟ್ಟಿನ ಸಾವಿನ ಸಂಕಟದತ್ತ ಗಮನ ಸೆಳೆಯುವ
ಆನಂದದ ಪ್ರತಿಧ್ವನಿ.

ಹಿಂದೆ ಹೇಳಿದ್ದನ್ನೇ ಮತ್ತೆ ಹೇಳುತ್ತಿರುವೆ
ಎನ್ನುತ್ತಿರುವೆ ನೀನು. ಮತ್ತೆ ಹೇಳುತ್ತೇನೆ ಅದನ್ನು.
ಹೇಳಲೆ ಮತ್ತೆ ಅದನ್ನು? ಅಲ್ಲಿಗೆ ಹೋಗಿ ಸೇರಲು,
ನೀನಿರದಲ್ಲಿಂದ ಹೊರಟು ನೀನಿರುವಲ್ಲಿಗೆ ತಲುಪಲು
ಆನಂದವಿಲ್ಲದ ಪಥದಲ್ಲಿ ಸಾಗಬೇಕು ನೀನು.
ಏನು ನಿನಗೆ ತಿಳಿಯದೊ ಅದನ್ನು ಪಡೆದುಕೊಳ್ಳಲು
ಅಜ್ಞಾನದ ದಾರಿಯಲ್ಲಿ ಹೋಗಬೇಕು ನೀನು
ಪಡೆದುಕೊಳ್ಳಬೇಕಿದ್ದಲ್ಲಿ ನಿನ್ನಲ್ಲಿರದ ವಸ್ತುವನ್ನು
ಎಲ್ಲವನ್ನೂ ಬಿಟ್ಟುಕೊಡುವ ಹಾದಿ ತುಳಿಯಬೇಕು.
ಈಗ ನೀನು ಎಲ್ಲಿಲ್ಲವೊ ಅಲ್ಲಿ ಹೋಗಿ ಮುಟ್ಟಲು
ನೀನಿಲ್ಲದ ದಾರಿಯಲ್ಲಿ ಸಾಗಬೇಕು ನೀನು.
ಏನು ನಿನಗೆ ತಿಳಿಯದೊ ಅದೇ ನಿನ್ನ ತಿಳಿವು
ಏನಿದೆಯೋ ನಿನ್ನ ಬಳಿ ಅದು ನಿನ್ನದ್ದಲ್ಲ
ಈಗ ನೀನು ಎಲ್ಲಿರುವೆಯೊ ಅಲ್ಲಿ ನೀನು ಇಲ್ಲ.

IV
ರೋಗಿಯ ಮೈಯಲ್ಲಾಡಿದೆ ವೈದ್ಯನ ಕತ್ತರಿ
ಕೆಟ್ಟು ಹೋದ ಭಾಗವನ್ನು ಪ್ರಶ್ನಿಸುತಿದೆ ಶಸ್ತ್ರ
ರೋಗದ ಏರಿಳಿತ ಬರೆದ ನಕ್ಷೆಯ ಗೂಢಗಳು
ಮಾಸುತ್ತಿವೆ ಒಂದೊಂದೇ.
ರಕ್ತಸಿಕ್ತ ಹಸ್ತದ ಶಸ್ತ್ರಕ್ರಿಯೆಯ ಹಿಂದೆ
ಕಲೆಗಾರನ ಹರಿತ ಕರುಣೆ ಅನುಭವಕ್ಕೆ ಬರುತಿದೆ.

ನಮ್ಮ ಒಂದೇ ಒಂದು ಸ್ವಾಸ್ಥ್ಯ ನಮಗಂಟಿದ ರೋಗ
ಸಾಯುತ್ತಿರುವ ದಾದಿ ನಮಗೆ ತೋರುತ್ತಿರುವ ಲಕ್ಷ್ಯವೆಲ್ಲ
ಆ್ಯಡಂ ಪಡೆದ ಶಾಪವನ್ನು ನೆನಪಿಸುವಂಥದ್ದೆ ಹೊರತು
ಖುಷಿಪಡಿಸುವುದಲ್ಲ. ಶಾಪದ ಪರಿಹಾರಕ್ಕೆ
ನಮಗಂಟಿದ ರೋಗ ಇನ್ನೂ ಬಲಿಯಬೇಕು.

ಈ ಇಡೀ ಪೃಥ್ವಿಯೆ ನಾವಿರುವ ಆಸ್ಪತ್ರೆ
ಆಳಿದ ಕೋಟ್ಯಾಧೀಶ ಬಿಟ್ಟುಹೋದದ್ದು,
ಇಲ್ಲಿ ಚೆನ್ನಾಗಿತ್ತೊ ನಾವು ಮಾಡಿದ ಕೆಲಸ
ಪೂರ್ತಿ ಪಿತೃಕೃಪೆ ದೊರೆತು ಸಾವನ್ನಪ್ಪುತ್ತೇವೆ.
ಅದು ಎಂದೂ ನಮ್ಮನ್ನು ಬಿಡುವುದಿಲ್ಲ, ಆದರೆ
ಎಲ್ಲ ಕಡೆಯೂ ನಮ್ಮನ್ನು ತಡೆದು ಕಾಯುವಂಥದು.

ಹೆಜ್ಜೆಯಿಂದ ಮಂಡಿತನಕ ಏರುತ್ತಿದೆ ಥಂಡಿ
ಮಿದುಳ ತಂತಿಗಳಲ್ಲಿ ಝೇಂಕರಿಸುತ್ತಿದೆ ಜ್ವರ
ಬೆಚ್ಚಗಾಗಬೇಕಿದ್ದಲ್ಲಿ ಗಡ್ಡೆಗಟ್ಟಬೇಕು ನಾನು ಥಂಡಿಯಲ್ಲಿ ಸೆಟೆದು;
ಪೊದೆಯೇ ಹೊಗೆಯಾದ, ಗುಲಾಬಿಯೆ ಜ್ವಾಲೆಯಾದ
ಪ್ರಾಯಶ್ಚಿತ್ತಾಗ್ನಿಯಲ್ಲಿ ಥರಥರಗುಡಬೇಕು.

ಹನಿಯುವ ರಕ್ತ ನಮ್ಮ ಒಂದೇ ಪಾನೀಯ,
ರಕ್ತ ಮಾಂಸ ನಮ್ಮ ಒಂದೇ ಆಹಾರ :
ಅಷ್ಟಾದರೂ ಕೂಡ ನಾವು ಸ್ವಸ್ಥರಿದ್ದೇವೆಂದು
ವಾಸ್ತವವಾಗಿ ನಾವು ರಕ್ತಮಾಂಸವೆ ಎಂದು
ತಿಳಿಯಲು ಬಯಸುತ್ತೇವೆ. ಅಲ್ಲದೆ ಹಾಗಿದ್ದೂ
ಶುಕ್ರವಾರವಿದನ್ನು ಶುಭವೆನ್ನುತ್ತೇವೆ.

V
ಹೀಗೆ ಇಲ್ಲಿದ್ದೇನೆ ನಡುದಾರಿಯಲ್ಲಿ ಇಪ್ಪತ್ತು ವರ್ಷಗಳ ಹಾದು
ಇಪ್ಪತ್ತು ವರ್ಷ ಪೂರ್ತಿ ವ್ಯರ್ಥ ಸಮೆದಿದ್ದಾವೆ, ಯುದ್ಧವೆರಡರ ಮಧ್ಯಕಾಲ-
ಮಾತನ್ನು ಬಳಸಲು ಕಲಿಯುತ್ತಿದ್ದೇನೆ, ಪ್ರತಿಪ್ರಯತ್ನವೂ ಪೂರ್ತಿ
ಹೊಸ ಬಗೆಯ ಆರಂಭ, ಹೊಸ ಥರದ ಸೋಲು. ಇನ್ನು ಮುಂದೆಂದೂ
ಹೇಳಬೇಕಿಲ್ಲದ ವಿಷಯಕ್ಕೆ ಅಥವಾ ಬಳಸಬೇಕಾಗಿರದ ರೀತಿಗೆ
ಉತ್ತಮ ಶಬ್ದಗಳನ್ನು ಹುಡುಕಬೇಕಿದೆ ಅಷ್ಟೆ. ಹೀಗಾಗಿ ಪ್ರತಿಯೊಂದು
ಸಾಹಸವೂ ಕೂಡ ಹೊಸದೊಂದು ಆರಂಭ; ಕಟ್ಟುಪಾಡುಗಳಿರದ
ಭಾವದ ಸಮೂಹಗಳ, ಖಚಿತವಾಗಿರದ ಅನಿಸಿಕೆಯ ಗೊಂದಲದ
ನಡುವೆ ನಶಿಸುತ್ತಿರುವ ಗೊಡ್ಡು ಸಾಧನ ಹಿಡಿದು
ಅನುಕ್ತ ಪ್ರಾಂತ್ಯದ ಮೇಲೆ ನಡೆಸಿದಾಕ್ರಮಣ. ಬಲ ಬಳಸಿ, ಶರಣಾಗಿ
ಗೆಲ್ಲಬಹುದಾದದ್ದು ಏನಿದೆಯೊ ಎಲ್ಲವೂ ಒಂದೊ ಎರಡೋ ಸಲ,
ಅಥವಾ ಹತ್ತಾರು ಸಲ, ಅನುಸರಿಸಲಾಗದ ವಿಶಿಷ್ಟ ವ್ಯಕ್ತಿಗಳಿಂದ-
ಪ್ರಕಟಗೊಂಡಿವೆ ಮೊದಲೆ – ಸ್ಪರ್ಧೆಯಿಲ್ಲ ಅಲ್ಲೂ –
ಕಳೆದದ್ದನ್ನು ಮತ್ತೆ ಪಡೆಯಲಿಕ್ಕಾಗಿ, ಪಡೆದಂತೆ ತಿರುತಿರುಗಿ
ಮತ್ತೆ ಗತಿಸಿದ್ದನ್ನು ಗಳಿಸುವ ಹೋರಾಟವಷ್ಟೆ ಈಗ ನಮಗುಳಿದಿದೆ.

ಆದರೀ ಸಂದರ್ಭ ಅಷ್ಟು ಅನುಕೂಲವಲ್ಲ.
ಫಲ ಕೂಡ ಲಾಭವೂ ಅಲ್ಲ, ನಷ್ಟವೂ ಅಲ್ಲ.
ನಮಗಿರುವುದೆಲ್ಲವೂ ಕೇವಲ ಪ್ರಯತ್ನ ಮಾತ್ರ.
ಉಳಿದುದೇನಿದ್ದರೂ ನಮಗೆ ಸೇರಿದ್ದಲ್ಲ.೧೦

ಎಲ್ಲಿಂದ ನಮ್ಮ ಆರಂಭವೋ ಅದುವೆ ಮನೆ.
ನಾವು ಬೆಳೆದಂತೆ ಲೋಕ ಅಪರಿಚಿತವೆನಿಸುತ್ತ
ಜಟಿಲಗೊಳ್ಳುತ್ತದೆ ಹುಟ್ಟು ಸಾವುಗಳ ವಿನ್ಯಾಸ
ಹಿಂದು ಮುಂದುಗಳಿಂದ ಪ್ರತ್ಯೇಕಗೊಂಡ ಸಾಂದ್ರಗಳಿಗೆಯಲ್ಲ
ಪ್ರತಿ ಗಳಿಗೆ ಧಗಧಗಿಸಿ ಉರಿವ ಇಡಿ ಬಾಳು.
ಒಬ್ಬ ಮಾನವನ ಜೀವಿತವಲ್ಲ, ಇಂದಿನ ನಮಗೆ
ಅರ್ಥವಾಗದ ಹಳೆಯ ಶಿಲೆಗಳ ಬಾಳೂ ಸೇರಿ,
ನಕ್ಷತ್ರ ಪ್ರಭೆಯ ಕೆಳಗರಳಿದ್ದ ಸಂಜೆಗೇ ಪ್ರತ್ಯೇಕ ಗಳಿಗೆಯಿದೆ;
ಬೀದಿ ದೀಪದ ಕೆಳಗೆ ಬಂದ ಸಂಜೆಗೂ ಹಾಗೇ ಪ್ರತ್ಯೇಕ ಸಮಯವಿದೆ,
(ಫೋಟೋ ಆಲ್ಬಂ ಹಿಡಿದು ಕಳೆದ ಸಂಜೆಗೂ ಕೂಡ).
ಈಗ, ಇಲ್ಲಿ ಎನ್ನುವುದು ಅಮುಖ್ಯವಾದಾಗ
ಪ್ರೇಮ ಬಹುಮಟ್ಟಿಗೆ ಪರಿಪೂರ್ಣವಾಗುತ್ತದೆ
ವೃದ್ಧರಾದವರು ಶೋಧಕರಾಗಬೇಕಿದೆ.
ಅಲ್ಲಿ ಇಲ್ಲಿ ಎಲ್ಲ ಅಮೂಲ್ಯವಾದ ವಿಷಯ. ಸ್ತಬ್ಧರಾಗಿರಬೇಕು,
ಆಗಿರುತ್ತಲೇ ನಾವು ಕತ್ತಲ ಶೈತ್ಯದ ಮತ್ತು ವಿವಿಕ್ತ ಶೂನ್ಯದ ಮೂಲಕ
ಅಲೆಗಳ ಅಳಲು, ಗಾಳಿಯ ಭೀಕರ ಕಿರುಚಲ ಮೂಲಕ
ಸಮುದ್ರಪಕ್ಷಿ ಹಾಯುವ ಅಗಾಧ ಜಲಗಳ ಮೂಲಕ
ಚಲಿಸುತ್ತಿರಬೇಕು ಹಾಗೇ ಇನ್ನೊಂದು ತೀವ್ರತೆಯೊಳಕ್ಕೆ
ಮತ್ತೊಂದು ಮಿಲನಕ್ಕಾಗಿ, ಇನ್ನೂ ಆಳ ವಿನಿಮಯಕ್ಕಾಗಿ.
ಅಂತ್ಯದಲ್ಲಿದೆ ನನ್ನ ಆದಿ.೧೧
*****
೧೯೪೦

೧. ಈಸ್ಟ್ ಕೋಕರ್ : ಇದು ಇಂಗ್ಲೆಂಡಿನ ಸೋಮ‌ರ್ ಸೆಟ್ ಶೈರ್‌ನಲ್ಲಿ ಇರುವ ಒಂದು ಗ್ರಾಮದ ಹೆಸರು. ಕವಿಯ ಪೂರ್ವಜರು ಶತಮಾನಗಳ ಹಿಂದೆ ನೆಲೆಸಿದ್ದ ಸ್ಥಳ ಅದು. ಎಲಿಯಟ್ ವಂಶದ ಪ್ರಾಚೀನರಲ್ಲಿ ಒಬ್ಬನಾದ ಆ್ಯಂಡ್ರೂ ಎಲಿಯಟ್ ೧೬೭೦ರ ಸುಮಾರಿಗೆ ಇಂಗ್ಲೆಂಡ್ ಬಿಟ್ಟು ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂ ಇಂಗ್ಲೆಂಡ್ ಪ್ರದೇಶಕ್ಕೆ ಹೋಗಿ ನೆಲೆಸಿದ. ಈ ಕವನ ಬರೆಯುವ ಮುಂಚೆ ೧೯೩೭ರಲ್ಲಿ ಎಲಿಯಟ್ ಇಂಗ್ಲೆಂಡಿನ ಈ ಪ್ರದೇಶಕ್ಕೆ ಬಂದು ಹೋಗಿದ್ದ; ಇಲ್ಲಿಯ ಕೆಲವು ಸ್ಥಳಗಳ ಛಾಯಾಚಿತ್ರಗಳನ್ನೂ ತೆಗೆದುಕೊಂಡು ಹೋಗಿದ್ದ. ೧೯೪೦ರಲ್ಲಿ ಕವಿ ಈ ಪದ್ಯವನ್ನು ಪೂರ್ತಿಗೊಳಿಸಿ ಮುದ್ರಣಕ್ಕೆ ಕಳಿಸಿದ. ಕನಿಷ್ಠ ಮೂರು ವರ್ಷಗಳ ಕಾಲ ಪದ್ಯದ ವಸ್ತು ಕವಿಯ ಧ್ಯಾನ ಚಿಂತನೆಗಳ ಕಮ್ಮಟದಲ್ಲಿ ಕವಿತೆಯ ರೂಪಕ್ಕೆ ಹವಣಿಸುತ್ತಿರುವುದು ತಿಳಿಯುತ್ತದೆ.

೨. ಆದಿಯಲ್ಲಿದೆ ನನ್ನ ಅಂತ್ಯ: ಈ ಕವಿತೆಯ ಕೀಲಿಕೈ ಎಂಬಂಥ ಸೂತ್ರರೂಪದ ವಾಕ್ಯ; ಪ್ರಾಚೀನ ಗ್ರೀಕ್ ದಾರ್ಶನಿಕ ಹಿರಾಕ್ಲಿಟಸ್ ಹೇಳಿದ The beginning and the end are same ಎಂಬ ಮಾತಿಗೆ ತಳುಕು ಹಾಕಿಕೊಂಡಿರುವ ಸಾಲು. ವಿರುದ್ಧಗಳೆರಡರ ಸಮನ್ವಯ ಹಿರಾಕ್ಲಿಟಸ್‌ನಂತೆ ಎಲಿಯಟ್‌ನಲ್ಲೂ ಮೂಲಭೂತ ವಿಚಾರಗಳಲ್ಲಿ ಬರುತ್ತದೆ. ಇಲ್ಲಿಂದ ಮುಂದಿನ ಹದಿನಾರು ಸಾಲುಗಳಲ್ಲಿ ಕಾಲವು ಹುಟ್ಟುಸಾವುಗಳ ಹೆಜ್ಜೆಹಾಕುತ್ತ, ಬದುಕನ್ನು ಬೆಳೆಸುತ್ತ ಭಕ್ಷಿಸುತ್ತ ಸಾಗಿರುವ ಚಿತ್ರ ಇದೆ. ಒಮ್ಮೆ ಎದ್ದದ್ದೆ ಮತ್ತೆ ಕೆಳಗೆ ಬೀಳುತ್ತ ಬಿದ್ದದ್ದೆ ಮತ್ತೊಂದು ರೂಪದಲ್ಲಿ ಏಳುತ್ತ, ಹೊರಕ್ಕೆ ಅಳಿದಂತೆ ತೋರಿದರೂ ಒಳಗೆ ಜೀವಂತವಿರುವತ್ತ ಮುಂದುವರಿದಿರುವ ಬದುಕಿನ ಸಾತತ್ಯ ಚಿತ್ರಿತವಾಗಿದೆ.

೩. ನುಸಿವ ಹೆಗ್ಗಣಕ್ಕೆ ನೆಲೆಯಾಗಿರುವ…. ತಳ್ಳುವುದಕ್ಕೆ : ಕವಿ ತನ್ನ ಪೂರ್ವಜರಿದ್ದ ಮನೆಯೊಂದರ ಚಿತ್ರವನ್ನೇ ಕಲ್ಪಿಸಿಕೊಂಡು ಬರೆದಂತೆ ತೋರುವ ಸಾಲು.

೪. ನೀರವ ಸುಭಾಷಿತವ ಹೊಲಿದ ಹಳೆಪರದೆಗಳನ್ನು: ಬಾಗಿಲಿಗೆ ತೂಗುವ ಪರದೆಗಳ ಮೇಲೆ ಕಸೂತಿ ಕೆಲಸದಲ್ಲಿ ಸುಭಾಷಿತಗಳನ್ನು ಹೆಣೆವ ಪದ್ಧತಿ ಇತ್ತು.

೫. ಬಯಲಿನ ಮೇಲೆ ಬೆಳಕು ಬೀಳುವುದೀಗ : ತನ್ನ ಪೂರ್ವಜರ ಸ್ಥಳಕ್ಕೆ ಬಂದು ನಿಂತಿರುವ ಕವಿಯೇ ಮಾತನಾಡುತ್ತಿರುವಂತೆ ತೋರುವ ಸಂದರ್ಭ. ನಡುಬೇಸಿಗೆಯ ಮಧ್ಯಾಹ್ನದ ಹೊತ್ತು ಸೂಚಿತವಾಗಿದೆ.

೬. ಬೇಸಿಗೆಯ…. ತಮಟೆಯ ಬಡಿತ ಕೇಳಬಹುದು : ಶತಮಾನಗಳ ಹಿಂದೆ ಈಸ್ಟ್ ಕೋಕರ್ ಗ್ರಾಮದಲ್ಲಿ ಹಳ್ಳಿಗರು ನಡೆಸುತ್ತಿರಬಹುದಾದ, ಬೇಸಿಗೆಯ ನಡುರಾತ್ರಿಯ ಆಮೋದ ನೃತ್ಯದ ಚಿತ್ರ. ಈ ಭ್ರಾಮಕ ದೃಶ್ಯ (ಕವಿ ಕಾಣುತ್ತಿರುವ) ಒಂದು ಕಣಸು ಎಂಬಂತೆ ನಿರೂಪಿತವಾಗಿದೆ.

೭. ಬೆಂಕಿ ಕುಂಡದ ಸುತ್ತ… ಹಿಡಿದ ಜೋಡಿ : ನಡು ಬೇಸಿಗೆಯ ಇರುಳಿನಲ್ಲಿ ಹಳ್ಳಿಗರ ಕುಣಿತವನ್ನು ಚಿತ್ರಿಸುವ ಈ ಸಾಲುಗಳು ಥಾಮಸ್ ಇಲ್ಯಟ್ ಎಂಬಾತ ಬರೆದ The Boke named the Governer’ ಎಂಬ ಪುಸ್ತಕದಿಂದ ತೆಗೆದವು. ಎಲಿಯಟ್‌ನ ಆಧುನಿಕ ಕವನದೊಳಗೆ ಹದಿನಾರನೆಯ ಶತಮಾನದ ಥಾಮಸ್ ಇಲ್ಯಟ್ ಟ್ಯೂಡರ್ ಇಂಗ್ಲಿಷ್‌ನಲ್ಲಿ ಬರೆದ ಸಾಲುಗಳು ಬಂದಿರುವುದು ಕವನದ ಆಶಯದ ದೃಷ್ಟಿಯಿಂದ ಅರ್ಥಪೂರ್ಣವಾದ ತಂತ್ರವಾಗಿದೆ.

೮. ತಿನ್ನುವುದು ಕುಡಿಯುವುದು…. ಕಾಲಕ್ಕೆ ತಕ್ಕಂತೆ : ಬದುಕಿನ ಎಲ್ಲ ಕ್ರಿಯೆಗಳೂ ಲಯಬದ್ಧವಾಗಿ ಸಾಗಿರುವುದನ್ನು ಸೂಚಿಸುವ ಸಂಭ್ರಮದ ಕುಣಿತ ಬದುಕಿನ ಪರಿಸಮಾಪ್ತಿಯಲ್ಲಿ ಮುಗಿದಿದೆ, ಮತ್ತೆ ಹಾಗೇ ಆರಂಭಗೊಳ್ಳುವ ಸಲುವಾಗಿ.

೯. ಕವಿಯಲಿ ಅಂಧಕಾರ, ದೈವಿಕವಾದದ್ದು ಅದು : ಈ ಮೂರನೆಯ ವಿಭಾಗದ ಆರಂಭದಲ್ಲಿ ಬರುವ ಕತ್ತಲು ಎಲ್ಲರನ್ನೂ ನುಂಗುವ ಕತ್ತಲು. ‘ಸಾಗುತ್ತಿದ್ದಾರೆ ಎಲ್ಲಾ ಕತ್ತಲಿನಾಳಕ್ಕೆ’. ಆದರೆ ಈ ಸಾಲಿನಲ್ಲಿ ಸೂಚಿತವಾದ ಅಂಧಕಾರ ಸೇಂಟ್ ಜಾನ್ (ಆಫ್ ದಿ ಕ್ರಾಸ್) ಹೇಳುವ ದೈವಿಕ ಅಂಧಕಾರ (ಆತ್ಮದ ಕರಾಳ ರಾತ್ರಿ).

೧೦. ನಮಗಿರುವುದೆಲ್ಲವೂ… ನಮಗೆ ಸೇರಿದ್ದಲ್ಲ : ಫಲಾಪೇಕ್ಷೆ ಇಲ್ಲದೆ ಕರ್ಮದಲ್ಲಿ ತೊಡಗಬೇಕು. ಏಕೆಂದರೆ “ಬಯಕೆಯೇ ಚಲನೆ” (ಬರ್ನ್ಟ್ ನಾರ್ಟನ್ ಭಾಗ V) “ಫಲದ ಬಯಕೆಯ ನೀಗಿ ಪಡೆದ ಒಳಸ್ವಾತಂತ್ರ್ಯ ಎಲ್ಲ ನೋವುಗಳಿಂದ, ಕರ್ಮಗಳಿಂದ ಬಿಡುಗಡೆ” (ಬರ್ನ್ಟ್ ನಾರ್ಟನ್ ಭಾಗ II). ಈ ಮಾತು ‘ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’ ಎಂಬ ಭಗವದ್ಗೀತೆಯ ಮಾತಿನ ಆಶಯವನ್ನು ಧ್ವನಿಸುತ್ತದೆ.

೧೧. ಅಂತ್ಯದಲ್ಲಿದೆ ನನ್ನ ಆದಿ : ಕವನದ ಆರಂಭದ ಹೇಳಿಕೆಗೆ ವ್ಯತಿರಿಕ್ತವಾಗಿ ತೋರುವ ಹೇಳಿಕೆ. ಆದರೆ ಕವನ ಈ ಹೊತ್ತಿಗೆ ಅವೆರಡರ ಸಮನ್ವಯವನ್ನು ಸಾಧಿಸಿದೆ. ಆದಿ ಅಂತ್ಯದಲ್ಲಿರುವುದರ, ಅಂತ್ಯ ಆದಿಯಲ್ಲಿರುವುದರ ತಾತ್ವಿಕ ಗ್ರಹಿಕೆಯನ್ನು ಸಿದ್ಧಮಾಡಿ ಕೊಡುವುದೇ ಕವಿತೆಯ ಕಾರ್ಯವಾಗಿದ್ದು, ಅದು ಈಗ ಮುಗಿದಿದೆ.