ಬ್ರಹ್ಮನಿತ್ತಿಹ ಮನಸು, ವಿಷ್ಣುವಿತ್ತಿಹ ಕನಸು,
ರುದ್ರನಿತ್ತಿಹ ಮುನಿಸನಳವಡಿಸಿಕೊಳುತಿಲ್ಲಿ
ನೀ ಬೆಳೆದೆ ಗಂಡೆದೆಯ ಕಣ್ಣೆ, ಹೆಣ್ಣೇ ! ನೆನಸು
ನಿನ್ನ ರೂಪ-ವಿರೂಪಗಳ ನೆನೆದಿರುವಲ್ಲಿ.
ಮುಂದಾದೆ ‘ಚಂದ್ರಮುಖಿ ’, ‘ಕುಂದ ಕುಟ್ಮಲರದನೆ ’
‘ಮೀನಾಕ್ಷಿ’, ‘ಹರಿಣಿ’, ‘ಬಿಂಬಾಧರೆ’ಯು ‘ತನ್ವಂಗಿ’
ಭೂಮಿಯಲ್ಲಿ ಸ್ವರ್ಗದಾ ಸುಖವೀಯುವಂದವೆನೆ
ಕೀರ್ತಿವೆತ್ತಿತು ನಿನ್ನ ರೂಪ-ಧ್ವನಿ-ರಸಭಂಗಿ !
ಎಲ್ಲರಂತೆಯೆ ದೇವ ನಿನ್ನ ಸೃಜಿಸಿದನು, ಹೆಣ್ಣೆ!
ಸ್ವಪ್ನದಾಭರಣಗಳ ತಂದು ತೊಡಿಸಿದನು ಕವಿಯು.
ಎಲ್ಲರಂತೆಯೆ ಅರ್ಧಚೈತನ್ಯ, ಅರ್ಧಮಣ್ಣೆ!
ಅರ್ಧ, ಬಾಳಿನ ರವಿಯು, ಅರ್ಧ- ಬಾಳುವೆಯ ಗವಿಯು.
ಕವಿ ವರ್ಣನೆಗೆ ಸೋತು ನಿನ್ನೆಡೆಗೆ ಬರುವ ಗಂಡು
ಮರಳುವದು ಅಲ್ಲಿಯೂ ದೇವಸೃಷ್ಟಿಯನು ಕಂಡು!
*****