ಯುದ್ಧ : ಒಂದು ಉದ್ಯಮ

ಯುದ್ಧ : ಒಂದು ಉದ್ಯಮ

ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ. ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿ ಯಾಗಿದ್ದವು; ಅಷ್ಟೇ ಅಲ್ಲ. ಆತಂಕಕಾರಿಯೂ ಆಗಿದ್ದವು. ನಾವು ಸಾಮಾನ್ಯವಾಗಿ ನಮ್ಮ ಸೈನ್ಯದ ಬಗ್ಗೆ ಎಲ್ಲಿಲ್ಲದ ಅಕ್ಕರೆ, ಅಭಿಮಾನ ಹೊಂದಿರುತ್ತೇವೆ. ಇದಕ್ಕೆ ದೇಶಭಕ್ತಿಯ ಲೇಪನ ವಿರುತ್ತದೆ. ಸ್ವತಃ ಸೈನಿಕರ ಚರ್ಮದ ಮೇಲೆ ದೇಶಭಕ್ತಿಯನ್ನು ಬರೆಯಲಾಗುತ್ತದೆ. ಆದರೆ ಸೈನಿಕರು ಮನುಷ್ಯರು ಎಂಬುದನ್ನು ನಾವು ಎಷ್ಟು ಸಾರಿ ಮರೆತುಬಿಡುತ್ತೇವೆ. ಮನೆ ಮಂದಿಯನ್ನು ಬಿಟ್ಟು ಗಡಿಗಳಲ್ಲಿ ಬೀಡುಬಿಟ್ಟ ದೇಶಭಕ್ತ ಸೈನಿಕರಲ್ಲಿ ಮನೆ ಮಾಡಿಕೊಳ್ಳುವ ಒಂಟಿತನ ಮತ್ತು ಅದನ್ನನುಸರಿಸಿ ಹುಟ್ಟುವ ವಿಕೃತಿಗಳನ್ನು ನಾವು ಅರ್ಥಮಾಡಿಕೊಳ್ಳುವುದು ತೀರಾ ಅಗತ್ಯ. ತನ್ನ ಆತ್ಮೀಯರಿಂದ ದೂರವಿದ್ದು ಸಾವು ಬದುಕಿನ ಅನಿರೀಕ್ಷಿತಗಳ ಸುಳಿಯಲ್ಲಿ ಸುಖವನ್ನು ಸುಟ್ಟುಕೊಳ್ಳುವ ಸೈನಿಕರಿಗೆ ದೇಶಭಕ್ತಿಯ ಭಾವನೆಯೊಂದು ಭದ್ರತೆ ಒದಗಿಸಲು ಸಾಧ್ಯವಾ? ಅದೊಂದೇ ಬೆಳಕಿನ ಬಣ್ಣದ ಹಾದಿಯಾದೀತೆ?

ಒಂಟಿತನ ಮನುಷ್ಯನೊಬ್ಬನನ್ನು ಕುಗ್ಗಿಸಿ ಅಸಹಾಯಕ ನೆಲೆಗೆ ದೂಡಬಹುದು. ಅಸಹಾಯಕತೆ ಅಸಹನೆ ಆಗುತ್ತ, ಕಡೆಗೆ ಕ್ರೂರವಾಗಿ ಪರಿವರ್ತನೆಗೊಳ್ಳಬಹುದು.

ಗಡಿ ಪ್ರದೇಶದಲ್ಲಿ ಪರಸ್ಪರ ಕ್ರೌರ್ಯದ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೇ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಅಭಿಪ್ರಾಯ. ಪರಸ್ಪರ ಮುತ್ತಿಗೆ ನಡೆದಾಗ ಗಡಿ ಗ್ರಾಮಗಳಲ್ಲಿ ಅತ್ಯಾಚಾರ ನಡೆಯುತ್ತಿದೆಯೆಂದು ಎರಡು ರಾಷ್ಟ್ರಗಳ ಕೆಲವು ಸೈನಿಕರು ಇದರಲ್ಲಿ ಭಾಗಿಗಳೆಂದು ಈ ಗೆಳೆಯ ಘಟನೆಗಳ ಸಮೇತ ವಿವರಿಸುತ್ತಾನೆ. ನಾವು ಸಾಮಾನ್ಯವಾಗಿ ನಮ್ಮವರೆಲ್ಲ ಸಜ್ಜನರೂ ಸಂಭಾವಿತರೂ ಎಂದು ನಂಬಿರುತ್ತೇವೆ ಅಥವಾ ಹಾಗೆ ನಂಬಿಸಲಾಗಿರುತ್ತದೆ. ಹಾಗಾಗಿ ನಮ್ಮವರು ಎಂದೂ ಸಭ್ಯತೆಯ ಗಡಿ ದಾಟುವುದಿಲ್ಲವೆಂದು ನಾವು ಭಾವಿಸುತ್ತೇವೆ. ಆದರೆ ಭೌಗೋಳಿಕ ಗಡಿ ದಾಟಿದ ಸೈನ್ಯ ಸಭ್ಯತೆಯ ಗಡಿಯನ್ನು ದಾಟುವ ಸಂಭವ ಇರುತ್ತದೆಂಬ ಸತ್ಯ ಸೈನ್ಯದಲ್ಲಿದ್ದು ಹೊರಬಂದು ಉಸಿರಾಡುತ್ತಿರುವವರ ಮಾತುಗಳಿಂದ ವ್ಯಕ್ತವಾಗುತ್ತದೆ.

ಯುದ್ಧಕ್ಕೆ ಸದಾ ಸಿದ್ಧವಾಗಿ ಕಾಯುತ್ತ ಕೂರುವ ಸೈನಿಕರ ಮನಸ್ಸಿನಲ್ಲಿ ದೇಶಭಕ್ತಿಯ ಬೇರುಗಳನ್ನು ಬಲಪಡಿಸುವುದು ಅನಿವಾರ್ಯ. ಸೈನಿಕರೂ ಉಪ್ಪು ಹುಳಿ ತಿನ್ನಬಯಸುವ ಹುಲುಮಾನವರೆಂದೊ ಏನೋ ಕೌಟಿಲ್ಯನ ಅರ್ಥಶಾಸ್ತ್ರವು ಅವರಿಗೆ ಮದ್ಯ ಮಾಂಸಾದಿ ವಿಶೇಷ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಈಗ ಮಿಲಿಟರಿಯವರು ಸದರಿ ಸೌಲಭ್ಯಗಳಿಲ್ಲದೆ ಸುಲಭ ದರದಲ್ಲಿ ವಿಶೇಷ ವಸ್ತುಗಳನ್ನು ಒದಗಿಸುವ ಪದ್ದತಿಯಿದೆ. ಇದಕ್ಕಾಗಿ ಮಿಲಿಟರಿ ಸ್ಟೋರ್‌ಗಳೇ ಇವೆ. ಇದೆಲ್ಲ ಲೌಕಿಕವಾಯಿತು. ಇಹಲೋಕದ ಸವಲತ್ತುಗಳ ವಿಷಯವಾಯಿತು. ಪರಲೋಕ ಪ್ರಲೋಭನೆಗಳನ್ನು ಮುಂದೊಡ್ಡಿ ಸ್ವಾಮಿನಿಷ್ಠೆ ಮತ್ತು ನಾಡ ನಿಷ್ಠೆಯನ್ನು ಬಲಗೊಳಿಸುತ್ತ ಬಂದ ಒಂದು ಸಂಪ್ರದಾಯ ನಮ್ಮಲ್ಲಿದೆ. ಉಳಿದರೆ ವೀರಜಯ ಸತ್ತರೆ ವೀರ ಸ್ವರ್ಗವೆಂಬ ಕಲ್ಪನೆಯಲ್ಲಿ ಸೈನಿಕರನ್ನು ಶೌರ್‍ಯದ ಶೃಂಖಲೆಯಲ್ಲಿ ಕಟ್ಟಿಹಾಕಿದ ಚರಿತ್ರೆಯನ್ನು ನಾವು ಗಮನಿಸಬೇಕು. ಯುದ್ಧದಲ್ಲಿ ಹೋರಾಡಿ ಸತ್ತರೆ ಸ್ವರ್ಗದ ಬಾಗಿಲಷ್ಟೇ ತೆರೆದಿರುವುದಿಲ್ಲ, ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾದಿರುತ್ತಾರೆಂಬ ಕಲ್ಪನೆಯು ಇಹದಲ್ಲಿ ಇಲ್ಲವಾದದನ್ನು ಪರದಲ್ಲಿ ಪಡೆಯಬಹುದೆಂಬ ಭ್ರಮೆಯನ್ನು ಮೂಡಿಸುತ್ತವೆ. ‘ಧರ್ಮಯುದ್ಧ’ಗಳಿಗಾಗಿ ಕಳೆದುಕೊಂಡ ಭಾಗ್ಯ ಮತ್ತು ಭಾವನೆಗಳನ್ನು ಸ್ವರ್ಗದಲ್ಲಿ ಗಳಿಸಬಹುದೆಂಬ ನಿರೀಕ್ಷೆಯು ‘ನಾಡ ನಿಷ್ಠೆ’ಯ ಮೂಲ ಬೇರಾಗುತ್ತದೆ. ಭಾವೋದ್ರೇಕದ ನರನಾಡಿಯಾಗುತ್ತದೆ. ಆಗ ಸಾವು ಅಂತ್ಯವಾಗುವುದಿಲ್ಲ. ಸ್ವರ್ಗ ಸುಖದ ನಾಂದಿಯಾಗುತ್ತದೆ. ಹೀಗೆ ಮುಂದಿನ ಸೈನಿಕರು ಒಳಗನ್ನು ತುಂಬಿಕೊಳ್ಳುತ್ತ ಹೋರಾಡಿದರು.

ಆದರೆ ಈಗ ವೀರಸ್ವರ್ಗ ಕಲ್ಪನೆಯನ್ನು ಚಲಾವಣೆಯಲ್ಲಿ ತರಲಾಗದು. ವಿಶೇಷ ಸೌಲಭ್ಯಗಳನ್ನೇ ಇಹದ ಸ್ವರ್ಗ ಸುಖವೆಂದು ಭಾವಿಸುವ ವಾತಾವರಣವನ್ನಷ್ಟೇ ಈಗ ನಿರ್ಮಿಸಬಹುದು. ಎಂದಿನಂತೆ ದೇಶಭಕ್ತಿಯ ಭಾವನಾತ್ಮಕವನ್ನು ಉದ್ರೇಕಗೊಳಿಸಬಹುದು; ಒಡೆದುಹೋಗದಂತಹ ಶಿಸ್ತಿನ ಬೆಸುಗೆ ಹಾಕುವುದಂತೂ ಮಿಲಿಟರಿ ವ್ಯವಸ್ಥೆಯ ಮುಖ್ಯ ಕೆಲಸವಾಗಿರುವುದು ಸ್ವಾಭಾವಿಕ.

ಆದರೆ ನಾವು ನಿಮ್ಮ ಒಳಿತಿಗಾಗಿ ಸಾಯಲು ಸಿದ್ಧವಾಗಿ ಬದುಕುತ್ತಿರುವ ಸೈನಿಕರ ಆಂತರಂಗಿಕ ಮನುಷ್ಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಬಟ್ಟೆ ಬಂದೂಕಗಳಲ್ಲಿ ಬತ್ತಿ ಹೋಗುತ್ತಿರುವ ಮನುಷ್ಯನನ್ನು ಕಾಣುವ ನೆಲೆ ನಿಲುವುಗಳಿಗೆ ನಾವು ಹಾತೊರೆಯಬೇಕು.

ಯುದ್ಧದ ಸಂದರ್ಭದಲ್ಲಿ ಸೈನಿಕರ ಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ನನ್ನ ಸ್ನೇಹಿತ ಹೇಳಿದ ಸನ್ನಿವೇಶವೊಂದು ಸಾಕು. ಒಂದು ಯುದ್ಧ ನಡೆದಾಗ ನನ್ನ ಸ್ನೇಹಿತನೂ ಅದರಲ್ಲಿ ಭಾಗವಹಿಸಿದ್ದ. ರಾತ್ರಿಯಲ್ಲಿ ಗುಂಡು ಹಾರಿಸುತ್ತ, ಕಾಲಿಗೆ ಗುಂಡೇಟು ತಿನ್ನುತ್ತಾ, ಕುಸಿದು ಬಿದ್ದ. ಸಣ್ಣ ಕಂದಕಕ್ಕೆ ಬಿದ್ದ ಅನುಭವವಾಯಿತಾದರೂ ಪ್ರಜ್ಞೆ ತಪ್ಪಿದ್ದರಿಂದ ಮುಂದಿನ ಕೆಲವು ಗಂಟೆಗಳು ಏನೊಂದೂ ಅರಿವಿಗೆ ಬರಲಿಲ್ಲ. ಆತನಿಗೆ ಸ್ವಲ್ಪ ಎಚ್ಚರ ಮೂಡಿದಾಗ ಬೆಳಕು ಮೂಡುತ್ತಿತ್ತು. ನಾನು ಮೆತ್ತೆಯ ಮೇಲೆ ಮಲಗಿದಂತೆ ಅನ್ನಿಸಿತು. ರಾತ್ರಿ ಯಾರೊ ತನ್ನನ್ನು ಆಸ್ಪತ್ರೆಗೆ ಸೇರಿಸಿರಬಹುದೆಂದು ಕಣ್ಮುಚ್ಚಿಕೊಂಡು ಕಷ್ಟಪಟ್ಟು ಏಳುತ್ತಾ, ನೋಡಿದ. ತಾನು ಆ ಕಂದಕದಲ್ಲಿ ಬಿದ್ದಿದ್ದ ಎರಡು ಹೆಣಗಳು ಮೇಲೆ ಮಲಗಿದ್ದ! ಮನುಷ್ಯ ಹೆಣಗಳ ಮೇಲೆ ಮನುಷ್ಯ ಮಲಗಿದ ಸಂದರ್ಭಕ್ಕೆ ವಿಶೇಷ ವ್ಯಾಖ್ಯಾನ ಬೇಕಾಗಿಲ್ಲ. ಇದು ಯುದ್ಧದ ಅಮಾನವೀಯತೆಗೆ ಸಂಕೇತವಾಗಿರುವ ಒಂದು ಸತ್ಯ ಚಿತ್ರ.

ಯುದ್ಧ ಹೇಗೆ ಮನುಷ್ಯ ಸಂಬಂಧಗಳನ್ನು ದೂರ ಮಾಡುತ್ತ ಅಮಾನವೀಯವಾಗಬಲ್ಲದು ಎಂಬುದಕ್ಕೆ ‘ಯಶೋಧರ ಚರಿತೆ’ಗೆ ಮೂಲವಾದ ಪ್ರಾಕೃತದ ‘ಯಶಸ್ತಿಲಕ ಚಂಪು’ವಿನಲ್ಲಿ ಬರುವ ಅಮೃತಮತಿ ಪ್ರಸಂಗವು ಒಂದು ಉತ್ತಮ ಉದಾಹರಣೆಯಾಗುತ್ತದೆ. ಅಮೃತಮತಿಯು ಅಷ್ಟಾವಂಕನೆಂಬ ಆಳಿನೊಂದಿಗೆ ಸಂಬಂಧ ಬೆಳೆಸಿದ ಸಂದರ್ಭವನ್ನು ‘ಯಶೋಧರ ಚರಿತೆ’ಯು ಚಿತ್ರಿಸಿದೆಯಾದರೂ ಈ ಸಂಬಂಧ ಬೆಳೆದದ್ದಕ್ಕೆ, ಯುದ್ಧಕ್ಕೂ ಇರುವ ಸಂಬಂಧವನ್ನು ‘ಯಶಸ್ತಿಲಕ ಚಂಪೂ’ ಕೃತಿ ಸೊಗಸಾಗಿ ಧ್ವನಿಸುತ್ತದೆ. ಈ ಕೃತಿಯಲ್ಲಿ ಸದಾ ಯುದ್ಧ ನಿರತನಾದ ಗಂಡ ಯಶೋಧರನಿಂದ ಅಲಕ್ಷಿತಳಾದ ಅಮೃತಮತಿಯು ಅಷ್ಟಾವಂಕನ ಸಂಬಂಧವನ್ನು ಬಯಸುತ್ತಾಳೆ, ಬೆಳೆಸುತ್ತಾಳೆ. ಯುದ್ಧವು ಉಂಟುಮಾಡುವ ಒಂಟಿತನದ ಸಂದರ್ಭದಲ್ಲಿ ಅಮೃತಮತಿ ತನ್ನದೇ ಹಾದಿ ಹಿಡಿಯುತ್ತಾಳೆ. ಗೆದ್ದ ಕಡೆಯಲ್ಲೆಲ್ಲ ಕನ್ಯೆಯರ ಕೈ ಹಿಡಿಯುವ ಕಲೆಗಳು ರಾಜರಿಗೆ ಒಂಟಿತನ ಕಾಡಿಸದೆ ಇರಬಹುದು. ಆದರೆ ಯುದ್ಧದಲ್ಲಿ ಸಕ್ರಿಯರಾದ ಸೈನಿಕರು ಮತ್ತು ಅಂತಃಪುರದಲ್ಲಿ ಅಂತರಂಗವನ್ನು ಸುಟ್ಟುಕೊಳ್ಳುತ್ತ ಕಾಯುವ ರಾಣಿಯರಿಗೆ ಒಂಟಿತನ ಕಾಡಿಸಿದೆ.

ಜನಹಿತ ರಕ್ಷಣಾ ಸಾಧನವೆಂಬಂತೆ ವಿಜೃಂಭಿಸಲ್ಪಟ್ಟ ಯುದ್ಧವು ವಾಸ್ತವವಾಗಿ ಸಾಮ್ರಾಜ್ಯ ವಿಸ್ತರಣೆಯ ಸಾಧನವಾಗಿತ್ತು. ಸಾವು ನೋವುಗಳಲ್ಲಿ ಶೌರ್ಯವನ್ನು ಮೆರೆಸುವ ‘ಮಾಧ್ಯಮ’ವಾಗಿತ್ತು. ಆದರೆ ಯುದ್ಧ ಎಂಬುದು ಒಂದು ವ್ಯಾಪಾರವಾಗುತ್ತಿರುವ ಬಗೆಯನ್ನು ಆಳದಲ್ಲಿ ಕಂಡುಕೊಂಡ ಪ್ರತಿಭೆಗಳು ನಮ್ಮಲ್ಲಿವೆ. ರನ್ನನ ಗದಾಯುದ್ಧದಲ್ಲಿ ಭೀಷ್ಮರು ಶರಶಯ್ಯೆಯ ಮೇಲೆ ಮಲಗಿದ್ದಾಗ ಬಾಣವನ್ನು ಲೇಖನಿಯಾಗಿ ಪತಾಕೆಯನ್ನು ಪತ್ರವಾಗಿ ಮತ್ತು ಮದಕರಿಯ ರಸವನ್ನು ಸರಿಯಾಗಿ ಬಳಸಿ ಶಾಂತಿಯ ಆಶಯವನ್ನು ದಾಖಲಿಸುವ ರೀತಿಯಲ್ಲಿ ಇಲ್ಲಿ ನೆನೆಯಬಹುದು. ಇದೆ ಗದಾಯುದ್ಧದಲ್ಲಿ ದುರ್ಯೋಧನ ಸಾಮಾನ್ಯನಂತೆ ರಣರಂಗದಲ್ಲಿ ಬರಿಗಾಲಿನಲ್ಲಿ ಬಂದು ಸಂಕಟಿಸುವ ಸನ್ನಿವೇಶವನ್ನು ನೋಡಬಹುದು. ಚರಿತ್ರೆಯಲ್ಲಿ ಯುದ್ಧಾನಂತರದ ಅಶೋಕನ ತಳಮಳ ಮತ್ತು ತೀರ್ಮಾನಗಳನ್ನು ಗಮನಿಸಿರಬಹುದು. ಇವೆಲ್ಲವೂ ಯುದ್ಧದ ದುರಂತಕ್ಕೆ ಒಡ್ಡಿದ ವ್ಯಾಖ್ಯಾನಗಳು.

ಕುಮಾರವ್ಯಾಸ ಭಾರತದ ಕರ್ಣ ಪರ್ವದಲ್ಲಿ ಯುದ್ಧವನ್ನು ‘ಉರಿಯಪೇಟೆ’ಯೆಂದೂ ಸೈನಿಕರನ್ನು ‘ಪತಂಗದ ಸರಕು’ ಎಂದೂ ಧ್ವನಿಸಲಾಗಿದೆ. ಪೇಟೆ ಮತ್ತು ಸರಕು-ಎಂಬ ಪದಗಳ ಬಳಕೆಯೇ ಮನುಷ್ಯ ಸಂಬಂಧ ದೂರವಾದ ವ್ಯಾಪಾರವನ್ನು ಸೂಚಿಸುತ್ತದೆ. ಇಲ್ಲಿ ಸೈನಿಕರು ಕೇವಲ ಸರಕುಗಳು ಮಾತ್ರ. ಇವರು ಉರಿಯಪೇಟೆಯಲ್ಲಿ ಮಾರಿಕೊಳ್ಳುವುದಕ್ಕೆ ಬಂದವರು.

ಇವತ್ತಿನ ಸನ್ನಿವೇಶಕ್ಕೆ ಬರೋಣ. ಯುದ್ಧವು ಸಾಮ್ರಾಜ್ಯಶಾಹಿ ಧೋರಣೆಯ ಸಂಕೇತವಾಗಿರುವುದಷ್ಟೇ ಅಲ್ಲ, ಸಾಮ್ರಾಜ್ಯಶಾಹಿ ರಾಷ್ಟ್ರಗಳು ಒಂದು ಉದ್ಯಮವು ಆಗಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳು ವಿಶೇಷವಾಗಿ ಅಮೆರಿಕ-ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಅಭದ್ರಸ್ಥಿತಿಯಲ್ಲಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ದೇಶಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಆಳದಲ್ಲಿ ಬಲಗೊಳಿಸುತ್ತ ತಮ್ಮ ಬಲವನ್ನು ವೃದ್ಧಿಸಿಕೊಳ್ಳುತ್ತವೆ. ಸೋವಿಯತ್ ಗಣರಾಜ್ಯ ಚೂರಾದ ಮೇಲಂತೂ ಅಮೆರಿಕಾವೊಂದೇ ಬಲಿಷ್ಠ ರಾಷ್ಟ್ರವಾಗಿ ವಿಜೃಂಭಿಸುತ್ತಿದೆ; ಇತರ ದೇಶಗಳ ಬಗ್ಗೆ ಫರಮಾನುಗಳನ್ನು ಹೊರಡಿಸುತ್ತದೆ. ತೊಟ್ಟಿಲ್ ಮಗುವನ್ನು ಚಿವುಟಿ ಜೋಗುಳ ಹಾಡುವ ರಾಜನೀತಿಯನ್ನು ಅನುಸರಿಸುವ ಬಲಾಢ್ಯ ರಾಷ್ಟ್ರ ಎಲ್ಲ ದೇಶಗಳಿಗೂ ಮಿಲಿಟರಿ ಸಾಮಗ್ರಿಗಳನ್ನು ಮಾರಾಟ ಮಾಡುವ ಉಪಾಯವನ್ನು ಹುಡುಕಿಕೊಳ್ಳುತ್ತದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ- ಇತ್ಯಾದಿಗಳ ನಡುವೆ ಒಮ್ಮತ ಮೂಡದೆ ಇದ್ದಾಗ ಯುದ್ಧದ ಭಯವಂತೂ ಮೂಡಿರುತ್ತದೆ. ಯುದ್ಧದ ಈ ಭಯವೂ ಹಾಗೇ ಮುಂದುವರಿಯುವಂತೆ ನೋಡಿಕೊಳ್ಳುವ ಬಲಾಢ್ಯರು ತಮ್ಮ ಮಿಲಿಟರಿ ಉತ್ಪಾದನೆಗೆ ದೇಶಗಳನ್ನು ಮಾರುಕಟ್ಟೆಯನ್ನಾಗಿಸಿಕೊಳ್ಳುತ್ತವೆ. ಅಕ್ಕಪಕ್ಕದ ದೇಶಗಳಂತೆ ಮಿಲಿಟರಿ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಚಿಕ್ಕಪುಟ್ಟ ದೇಶಗಳೆಲ್ಲ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ವಸತಿ ಮುಂತಾದ ಮೂಲಭೂತ ಅಗತ್ಯಗಳಿಗಿಂತ ಮಿಲಿಟರಿಗಾಗಿಯೇ ಹೆಚ್ಚು ಖರ್ಚು ಮಾಡುತ್ತದೆ. ಅಂತರರಾಷ್ಟ್ರೀಯ ಮಿಲಿಟರಿ ಮಾರುಕಟ್ಟೆಗೆ ಖಾಯಂ ಸದಸ್ಯರಾಗುತ್ತವೆ.

ಈಗ ನೀವೇ ಹೇಳಿ: ಯುದ್ಧ ಎನ್ನುವುದು ಒಂದು ಉದ್ಯಮ ವಾಗುತ್ತಿದೆಯಲ್ಲವೆ? ದೇಶಭಕ್ತಿಯ ಗೌರವಾರ್ಥವಾಗಿ ಬೇಕಾದರೆ, ಯುದ್ಧವನ್ನು ‘ದೇಶಪ್ರೇಮೋದ್ಯಮ’ ಎನ್ನೋಣ!
*****
೧೨-೦೩-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಹಳ ಕಂಡಿದ್ದೇನೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೭

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys