ಬೀದಿ ಜನಸಂದಣಿಗೆ
ಕಾರು ರಿಕ್ಷಾಗಳಿಗೆ
ಕೂಗಿ ಹೇಳುತ್ತಾನೆ :
“ಎಲೆಲೆ ಇರುವೆಗಳೆ,
ವೃಥಾ ನನ್ನ ಕಾಲಡಿಗೆ ಬಿದ್ದು
ಅಪ್ಪಚ್ಚಿಯಾಗದಿರಿ-ತೊಲಗಿ”
ನಡೆಯುತ್ತಾನೆ ಮಹಾವೀರ ಗೊಮ್ಮಟನಂತೆ
ಒಳಗೊಳಗೆ ನಗುತ್ತಾನೆ
ದೊಡ್ಡಮಂದಿಯ ಕಾಲಿಗೆರಗುತ್ತಾನೆ
ಮುಜರೆ ಮಾಡುತ್ತಾನೆ
ಮುಸುರೆ ತಿನ್ನುತ್ತಾನೆ
ಅವರ ಹೆಂಡಿರ ಕಲೆಗಳಲ್ಲಿ
ಬೊಂಬೆ ಆಗುತ್ತಾನೆ
ಕುಣಿಯುತ್ತಾನೆ ಮಾರ್ಕೇಟು ಚೌಕಗಳಲ್ಲಿ
ಮರ್ಕಟನ೦ತೆ
ಒಳಗೊಳಗೆ ಅಳುತ್ತಾನೆ
ಮನುಷ್ಯರ ಕಂಡಾಗ ಮುಖ
ಸಿಂಡರಿಸುತ್ತಾನೆ
ಜನಸರಿದಣಿಯಿಲ್ಲದಲ್ಲೆ
ಸಂಚರಿಸುತ್ತಾನೆ
ಏನೇನೋ ನೆನಪಾಗಿ ಮಂಕಾಗುತ್ತಾವೆ
ಬಸ್ಸಿಲ್ಲಿ ಅಥವಾ ಸರ್ಕಸ್ಸಿನಲ್ಲಿ
ಬದಿಯಲ್ಲಿ ಕುಳಿತವರ
ಮೂಸಿ ನೋಡುತ್ತಾನೆ
ಮುಖ ಸಿಂಡರಿಸಿ ವಾಕರಿಸಿ
ಕ್ಯಾಕರಿಸಿ ಉಗುಳುತ್ತಾನೆ
ಒಳಗೊಳಗೆ ಸಾಯುತ್ತಾನೆ.
*****