ಬಸವ ನಾಮ ಸ್ಮರಣೆಯೆ ಪುಣ್ಯ
ಬಸವನ ನೆನೆಯುವ ಜನುಮವೆ ಧನ್ಯ || ಪ ||
ಬಸವೇಶ್ಚರ ಬಸವಣ್ಣನೆ ಮಾನ್ಯ
ಗುರುಬಸವೇಶನೆ ಶರಣವರೇಣ್ಯ || ಅ.ಪ.||

ಎಲ್ಲ ಧರ್ಮಗಳ ಸಾರವ ಹೀರುತ
ವೀರಶೈವವನು ರೂಪಿಸಿದೆ
ಜ್ಞಾನ ಭಕ್ತಿ ವೈರಾಗ್ಯ ಕರ್ಮಗಳ
ಸಮಗ್ರ ಧರ್ಮವ ತೋರಿಸಿದೆ || ೧ ||

ಅಂತರಂಗ ಶಿವಧ್ಯಾನವು ತುಂಬಿ
ಬಹಿರಂಗದಿ ಜಗಕಲ್ಯಾಣ
ಇಹಪರ ಎರಡರ ಸೇತುವೆ ಜೋಡಿಸಿ
ಮಾನವ ಜನ್ಮಕೆ ಸನ್ಮಾನ || ೨ ||

ಸಕಲ ಜೀವರಿಗೆ ಲೇಸನ್ನೆಣಿಸಿದೆ
ದೀನ ದಲಿತರಿಗೆ ಮಾನ್ಯತೆಯು
ಗಂಡು ಹೆಣ್ಣುಗಳ ಜಾತಿ ಭೇದಗಳ
ಅಳಿಸಿದೆ ಸಮತೆಯ ಸಾಧನೆಯು || ೩ ||

ಲೌಕಿಕ ಸಂಪದ ಭೋಗ ಭಾಗ್ಯಗಳ
ಶಿವನ ಪ್ರಸಾದವು ಎನ್ನುತ ತಿಳಿದೆ
ಸಮಾಜ ಸೇವೆಗೆ ಎಲ್ಲವು ಮೀಸಲು
ಎನ್ನುತ ಸ್ವಾರ್ಥದ ಬೇರನು ಅಳಿದೆ || ೪ ||

ದುಡಿಯದೆ ಏನೂ ಸಾಗದು ಜಗದಲಿ
ದುಡಿಯದೆ ತಿನ್ನಲು ಅದು ದ್ರೋಹ
ದುಡಿಯುವ ಕಾಯಕ ತತ್ವವ ತೋರಿದೆ
ದುಡಿಮೆಯೆ ಶರಣರ ನಿಜದಾಹ || ೫ ||

ಸತ್ಯದಾಚರಣೆಯು ನಿತ್ಯ ಕಾಯಕವು
ಶಿವನಿಗಿಷ್ಟವೆಂದೆ
ಸರಳ ಸನ್ನಡತೆ ಶಿವನ ಅನುಭಾವ
ಸಾರ್ಥಕವು ಬದುಕಿಗೆಂದೆ || ೬ ||

ಹೇಗೆ ನುಡಿಯುವುದು ಹೇಗೆ ನಡೆಯುವುದು
ಎಂಬ ರೀತಿಗಳ ಜನರಿಗೆ ಕಲಿಸಿದೆ
ನುಡಿದಂತೆ ನಡೆವ ಧೈರ್ಯ ಶ್ರದ್ಧೆಗಳ
ತುಂಬಿದೆ ಕೈಲಾಸವನ್ನಿಲ್ಲಿಳಿಸಿದೆ || ೭ ||

ಸುಳ್ಳು ಕಳವು ಕೊಲೆ ಕೋಪ ಹೇವರಿಕೆ
ಹೊಗಳು ತೆಗಳುಗಳು ಪಾಪ
ನೀತಿ ಸೂತ್ರಗಳ ಜನಕೆ ನೀಡಿದೆಯೊ
ಇದುವೆ ಧರ್ಮ ಕಲಾಪ || ೮ ||
*****