ಒಂದೂರಲ್ಲಿ ತಾಯಿ ಮಗ ಇದ್ದರು. ಮಗನ ಹೆಂಡತಿಯೂ ಬಂದಿದ್ದಳು.

ಸೊಸೆಯ ಕೈಯಿಂದ ಅಡಿಗೆ ಮಾಡಿಸುವಾಗ ಅತ್ತೆಯು ಹಿಟ್ಟು, ಬೇಳೆ, ಖಾರಗಳನ್ನಲ್ಲ ಲೆಕ್ಕಾಚಾರದಿಂದ ತೆಗೆದುಕೊಡುವಳು. ಅದರಿಂದ ಅಡಿಗೆ ಹಾಳಾಗುವುದಕ್ಕೆ ಅವಕಾಶವೇ ಇಲ್ಲವೆಂದು ಅತ್ತೆ ಬಗೆದ್ದಿದ್ದಳು.

ಮಕರಸಂಕ್ರಮಣದ ಕಾಲಕ್ಕೆ ಅತ್ತೆ ಸೊಸೆಯನ್ನು ಕರೆದು, ಮೂರೆಂದರೆ ಮೂರೇ ರೊಟ್ಟಿಯಾಗುವಷ್ಟು ಸಜ್ಜೆಹಿಟ್ಟು, ಮೂರು ಬದನೆಕಾಯಿ ಕೊಟ್ಟಳು, “ಇದರಿಂದ ತಲೆಗೊಂದು ರೊಟ್ಟಿ, ಮೇಲೆ ಇಡಿಗಾಯಿ ಬದನೆಕಾಯಿ ಪಲ್ಲೆ ಆಗುತ್ತದೆ. ಜೋಕೆಯಿಂದ ಮಾಡು” ಎಂದು ಸೂಚಿಸಿದಳು.

ಎಳ್ಳುಹಚ್ಚಿದ ಮೂರುರೊಟ್ಟಿ, ಬದನೆಕಾಯಿ ಪಲ್ಲೆ ಸಿದ್ದಪಡಿಸಿದ ಸೊಸೆಗೆ ಬದನೆಕಾಯಿಪಲ್ಲೆಯ ವಾಸನೆಯು ಆಕೆಯ ಬಾಯಲ್ಲಿ ನೀರೂರಿಸಿತು. ಅದರ ತುಸು ಎಸರು ಕೈಯಲ್ಲಿ ಹಾಕಿಕೊಂಡು ನೆಕ್ಕಿದಳು. ಸೊಗಸಾಗಿತ್ತು. ತನ್ನ ಪಾಲಿನ ಒಂದು ರೊಟ್ಟಿ, ಒಂದು ಬದನೇಕಾಯಿ ತಿಂದೇಬಿಟ್ಟರಾಯಿತೆಂದು ಅದನ್ನೂ ಮುಗಿಸಿದಳು. ಸಾಕೆನಿಸಲಿಲ್ಲ. ಇನ್ನು, ಗಂಡನ ಪಾಲಿನ ರೊಟ್ಟಿ ಪಲ್ಲೆ ತಿನ್ನಬಹುದು. ಅವನಿಗೇನಾದರೂ ನೆವ ಹೇಳಿದರಾಗುವುಉ – ಎಂದು ಎರಡನೇ ರೊಟ್ಟಿಯನ್ನೂ ಆಗು ಮಾಡಿದಳು. ಇನ್ನುಳಿದದ್ದು ಅತ್ತೆಯ ಪಾಲಿನ ರೊಟ್ಟಿ “ಜೀವ ಕೇಳಲೊಲ್ಲದು. ತಿಂದೇಬಿಡುವೆ. ಬಯ್ದಷ್ಟು ಬಯ್ಯಲಿ” ಎಂದು ಅದನ್ನೂ ಬಕ್ಕರಿಸಿಬಿಟ್ಟಳು.

ಉಣ್ಣುವ ಹೊತ್ತಿಗೆ ಗಂಡ ಬಂದನು. ಅತ್ತೆ ಬಂದಳು. ಅವರಿಗೆ ಊಟಕ್ಕೇನೂ ಇರಲಿಲ್ಲ. ಮಾಡಿದ ರೊಟ್ಟಿ ಪಲ್ಲೆ ಎಲ್ಲಿ – ಎಂದು ಅತ್ತೆ ಕೇಳಿದರೆ ಸೊಸೆ ಇದ್ದ ಸಂಗತಿಯನ್ನೆಲ್ಲ ಹೇಳಿಬಿಟ್ಟಳು.

“ಓಡಿದೆಯಾ ? ಇಂಥಾಕೆಯನ್ನು ಏನು ಮಾಡಬೇಕೋ ತಮ್ಮ?” ಎಂದು ಮಗನಿಗೆ ಕೇಳಿದಳು.

“ನಿನಗೆ ತಿಳಿದಂತೆ ಮಾಡವ್ವ” ಎಂದನು ಮಗ.

ಅತ್ತೆಯ ಹೊಟ್ಟೆ ಉರಿಯುತ್ತಿತ್ತು. ಸೊಸೆಯ ಮೇಲೆ ಸಿಟ್ಟು ಬೆಂಕಿಯಾದಳು.

“ಈಕೆಯನ್ನು ಜೀವಸಹಿತ ಸುಟ್ಟು ಬರೋಣ” ಎಂದು ತೀರ್ಮಾನ ಹೇಳಿದ್ದಕ್ಕೆ ಮಗನು ಸಮ್ಮತಿಸಿದನು.

ಗಾಡಿಯಲ್ಲಿ ಕುಳ್ಳುಕಟ್ಟಿಗೆ ಹೇರಿಕೊಂಡು ಮಗಸೊಸೆಯರೊಂದಿಗೆ ಸುಡುಗಾಡಿಗೆ ಹೋದಳು. ಅಲ್ಲಿ ಸೊಸೆಯನ್ನು ಕುಳ್ಳಿರಿಸಿ, ಕುಳ್ಳುಕಟ್ಟಿಗೆ ಒಟ್ಟಿ ಬೆಂಕಿ ಹಚ್ಚಬೇಕೆಂದರೆ, ಕಡ್ಡಿ ಪೆಟ್ಟಿಗೆಯನ್ನು ಮನೆಯಲ್ಲಿಯೇ ಮರೆತು ಬಂದಿದ್ದರು. ಮನೆಗೆ ಹೋಗಿ ಕಡ್ಡಿಪೆಟ್ಟಿಗೆ ತರಲು ಮಗನಿಗೆ ಹೇಳಿದರೆ ಆತನು ಒಲ್ಲೆನೆಂದನು. ತಾಯಿಯೇ ಅವಸರದಿಂದ ಮನೆಯತ್ತ ಧಾವಿಸಿದಳು.

ಹೆಂಡತಿಯ ಸಲುವಾಗಿ ಕರುಣೆ ಬಂದು, ಆಕೆಯನ್ನು ಬದುಕಿಸಿಕೊಳ್ಳುವ ಎತ್ತುಗಡೆ ನಡೆಸಿದನು ಗಂಡ. ಅವ್ವನು ಮನೆಯಿಂದ ಬರುವಷ್ಟರಲ್ಲಿ ಹೆಂಡತಿಯನ್ನು ಕುಳ್ಳಿನ ತಾಳಿಯೊಳಗಿಂದ ಕಡೆಗೆ ತೆಗೆದು, ಅಲ್ಲಿ ಒಂದು ಕಲ್ಲು ಇಟ್ಟು ಕುಳ್ಳು ಕಟ್ಟಿಗೆ ಒಟ್ಟಿದನು. ಒಂದು ಗಿಡವನ್ನೇರಿ ಕುಳಿತುಕೊಳ್ಳಲು ಹೆಂಡತಿಗೆ ಹೇಳಿದನು.

ಅಂದು ಕಳ್ಳರು ಊರಲ್ಲಿ ಕಳವುಮಾಡಿಕೊಂಡು, ಸುಡುಗಾಡಿನ ಬಳಿಯಲ್ಲಿರುವ ಮರದ ಕೆಳಗೆ ಹಂಚುಪಾಲು ಮಾಡಿಕೊಳ್ಳಲು ಅಣಿಯಾದರು. ಅವರನ್ನು ಕಂಡು ಮರದ ಮೇಲೆ ಕುಳಿತ ಹೆಣ್ಣುಮಗಳು ಅಂಜಿ ಚಿಟ್ಟನೆ ಚೀರಿದಳು. ಅದನ್ನು ಕೇಳಿ ಕಳ್ಳರು ಮರದಲ್ಲಿ ಪಿಶಾಚಿಯಿದ್ದಂತೆ ತೋರುತ್ತದೆ. ತಮ್ಮನೆಲ್ಲಾದರೂ ನುಂಗೀತೆಂದು ಎಲ್ಲವನ್ನೂ ಬಿಟ್ಟು ಓಡಿಹೋದರು.

ಸೊಸೆಯು ಎದೆಗಟ್ಟಿಮಾಡಿ ಕೆಳಗಿಳಿದು ನೋಡಿದರೆ ರೂಪಾಯಿ ಸುರಿದಿವೆ. ಬೆಳ್ಳಿ ಬಂಗಾರ ಚೆಲ್ಲಾಡಿದೆ. ಅವನ್ನೆಲ್ಲ ಕಟ್ಟಿಕೊಂಡರೆ ದೊಡ್ಡ ಗಂಟೇ ಆಯಿತು. ದಣಿದಣಿ ಎತ್ತಿ ತಲೆಯ ಮೇಲೆ ಹೊತ್ತುಕೊಂಡು ಮನೆಯ ಹಾದಿ ಹಿಡಿದಳು.

“ಅತ್ತೇ, ಬಾಗಿಲು ತೆರೆ” ಎಂದು ಕೂಗಿದಳು.

ಸೊಸೆಯ ದನಿಯನ್ನು ಗುರುತಿಸಿ “ಇಂದೇ ಸುಟ್ಟು ಬಂದರೆ ಪಿಶಾಚಿಯಾಗಿ ಬೆನ್ನ ಹಿಂದೆಯೇ ಬರಬೇಕೆ ? ಬಾಗಿಲ ತೆರೆಯುವುದೇ ಬೇಡ” ಎಂದು ಡುಕ್ಕು ಹೊಡೆದಳು ಅತ್ತೆ.

“ಒಜ್ಜೆಯಾಗಿದೆ ಅತ್ತೇ. ಆ ಲೋಕದಲ್ಲಿದ್ದ ಮಾವನವರು ಇದನ್ನೆಲ್ಲ ಕಳಿಸಿದ್ದಾರೆ. ಜನರು ನೋಡಿಗೀಡಿದರೆ ನಮ್ಮ ಗತಿ ಏನಾದೀತು ? ದ್ರವ್ಯ, ಬೆಳ್ಳಿ, ಬಂಗಾರ ತಂದಿದ್ದೇನೆ. ಅತ್ತೆ, ಹೆದರಬೇಡ. ಬಾಗಿಲು ತೆರೆ” ಎಂದಳು ಸೊಸೆ.

ಅತ್ತೆ ಮೆಲ್ಲಗೆ ಬಾಗಿಲು ತೆಗೆದು ನೋಡಿದಳು. ಬಂದವಳು ಸೊಸೆಯೇ ಆಗಿದ್ದಾಳೆ. ಪಿಶಾಚಿಗಿಶಾಚಿಯಂತೆ ತೋರಲಿಲ್ಲ. ಬಾಗಿಲು ತೆರೆದು ಒಳಗೆ ಬರಮಾಡಿಕೊಂಡು, ಆಕೆಯ ತಲೆಯ ಮೇಲಿನ ಗಂಟು ಇಳುಹಿ ಒಳಗೊಯ್ದು ಇಟ್ಟಳು. ಮಗನೊಡನೆ ತಾಯಿ ಗಂಟು ಬಿಚ್ಚಿ ನೋಡಿದಳು. ಬೆಳ್ಳಿ ಬಂಗಾರ ರೂಪಾಯಿ ಎಲ್ಲಾ ಇದ್ದವು. ಹಿಗ್ಗಿನಿಂದ ಅತ್ತೆ ಸೊಸೆಯನ್ನು ಕೇಳಿದಳು – “ಇದನ್ನೆಲ್ಲ ಎಲ್ಲಿಂದ ತಂದಿ ?”

“ನನ್ನನ್ನು ನೀವು ಸುಟ್ಟು ಬಂದಿರಿ. ಬಳಿಕ ನಾನು ಆ ಲೋಕಕ್ಕೆ ಹೋದೆ. ಅಲ್ಲಿ ಮಾವನವರು ಭೆಟ್ಟಿಯಾದರು. ಮನೆಯ ಕಡೆಯ ಸುದ್ದಿ ಕೇಳಿದರು.  ಹೆಂಡತಿ, ಮಗ ಇನ್ನೂ ತಾಪತ್ರಯದಲ್ಲಿಯೇ ಇದ್ದಾರೆಂಬ ಸಂಗತಿ ಕೇಳಿ, ಇಷ್ಟೆಲ್ಲ ದ್ರವ್ಯವನ್ನು ಕೊಟ್ಟು ಕಳಿಸಿದ್ದಾರೆ. ಇದೆಲ್ಲ ತೀರಿದ ಬಳಿಕ ಮತ್ತೆ ಬರಲು ತಿಳಿಸಿದ್ದಾರೆ. ಅಲ್ಲಿ ನಾನು ಬಹಳ ಹೊತ್ತು ಇರಲಿಲ್ಲ. ಆದರೂ ಆಲ್ಲಿ ಬಹಳ ವೈಭವ, ಬಹಳ ಸಡಗರ” ಎಂದು ಸತ್ಯಸಂಗತಿಯೇ ಅನಿಸುವಂತೆ ಹೇಳಿದಳು.

“ಈ ಸಾರೆ ನಾನೇ ಹೋಗುತ್ತೇನೆ. ನೀನು ಮನೆಯಲ್ಲಿರು” ಎಂದಳು ಅತ್ತೆ.

“ಇಷ್ಟೆಲ್ಲ ತೀರಿದ ಬಳಿಕ ಹೋಗುವೆಯಂತೆ ಅತ್ತೆ.”

“ಛೇ ಛೇ ! ಇದೆಲ್ಲ ತೀರುವುದು ಎಂದೋ ಏನೋ ! ಕೊಡುವೆನೆಂದ ಕ್ಷಣಕ್ಕೆ ಹೋಗಿಬಿಟ್ಟರಾಯ್ತು” ಎಂದು ನಿಶ್ಚಯಿಸಿ, ಅತ್ತೆ ಮಗನನ್ನು ಕರೆದು ಹೇಳಿದಳು –

“ಗಾಡಿಯಲ್ಲಿ ಕುಳ್ಳು-ಕಟ್ಟಿಗೆ ಹೇರು. ಮರೆಯದೆ ಕಡ್ಡಿಪಟ್ಟಿಗೆ ತಗೋ. ಸುಡುಗಾಡಿಗೆ ಬಂಡಿ ಹೊಡೆ” ಸುಡುಗಾಡಿನಲ್ಲಿ ಕುಳಿತು, ಮಗ ಸೊಸೆಯಂದಿರ
ಕೈಯಿಂದ ಕುಲ್ಲು-ಪೆಟ್ಟಿಗೆ ಒಟ್ಟಿಸಿಕೊಂಡು, ಮನೆಯ ಕಡೆಗೆ ಜೋಕೆ ಎಂದು ಹೇಳಿ, ಬೆಂಕಿ ಹಚ್ಚಲು ತಿಳಿಸಿದಳು.

ಬೆಂಕಿ ಹತ್ತಿಕೊಂಡಿತು. ಅತ್ತೆ ಸುಟ್ಟುಕೊಂಡು ಹೋದಳು. ಗಂಡಹೆಂಡಿರು ಮನೆಗೆ ಬಂದು, ಸುಖದಿಂದ ಬಾಳ್ವೆಮಾಡತೊಡಗಿದರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)