ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ
ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ
ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ
ರೋಮಾಂಚನವ ಚಿಗುರಿಸಿ
ರಂದ್ರರಂದ್ರವ ಬಯಲಗಾಳಿಗೆ ತೆರೆಸೋ
ನೀಲಿಗಟ್ಟಿರುವೀ ಧಮನಿಗಳಲ್ಲಿ
ಕೆಚ್ಚು ರೊಚ್ಚಿನ ಕೆಂಪು ಹರಿಸೋ
ಒಣಗಿ ಬೆಂಡಾಗಿ ಕಳಚಿ ಕುಸಿಯಲನುವಾಗಿರುವಸ್ಥಿ ಪಂಜರದ
ಮೂಲೆ ಮೂಳೆಗಳನ್ನುಕ್ಕುಗೊಳಿಸಿ ಸ್ಥಿರಗೊಳಿಸೋ
ಅಷ್ಟಾವಕ್ರವಾಗಿ ಅಂಕು ಡೊಂಕಾಗಿ ತುಂಡು ತುಂಡಾಗಿ
ಮಬ್ಬು ಮುಚ್ಚಿದೀ ನೋಟಗಳ
ರವಿಕಿರಣದಂತೆ ಸಹಜ ನೇರಗೊಳಿಸಿ ತೇಜಗೊಳಿಸೋ
ಓರೆ ಕೋರೆಗಳನೊಳವೊಗುವಂತೆ ಚೂಪುಗೊಳಿಸೋ
ಜಡತೆ ಜಿದ್ದು ಪಾಚಿಗಟ್ಟಿ
ಕೂಪಸ್ಥ ಬಂಡೆಯಾದ ಈ ಮಂಡೆಗೊಳಗಳ
ತಿಳಿಗೊಳಿಸೂ ಅರಳಿಸೂ ಸಹಸ್ರದಳದರವಿಂದದಂತೆ
ಭಾವದೊರತೆ ಬತ್ತಿ ಬರಡಾದೀ ಹಳ್ಳಗಳಲಿ
ದೇವರಸ ಗಂಗೆಯನುಕ್ಕಿಸಿ
ನಂದನವನವನರಳಿಸಿ ಹಿಗ್ಗಿಸೋ
ಹೊಂಡ ಹೊಂಡಗಳಲ್ಲಿ ಬಿದ್ದು
ತುಂಡು ತುಂಡು ತಿಂಡಿಗೂ ಭಂಟಾಡವಾಡುವೀ
ಕಪ್ಪೆ ಮೀನುಗಳನೆತ್ತೆತ್ತಿ
ವಿಶಾಲಸಾಗರದಲಿಳಿಸಿ ಬಾಳಿಸೊ
ಬೆದರು ಗೊಂಬೆಗಳೀ ಕಿವುಚು ಮೊಗವಾಡಗಳ ಕಳಚಿ
ಸೂರ್ಯ ಬಿಂಬಗಳ ನೈಜ ನಗೆಯ ತುಳುಕಿಸೋ
ಹರಿ ಹರಿದು ಕಚ್ಚಾಡಿ ಹೋರುವೀ ನಾಯಿಹದ್ದುಗಳ
ಉಗುರು ಹಲ್ಲುಗಳ ಕಿತ್ತು
ಸಹಜೀವನಕೆ ಸಾಧುಗೊಳಿಸೋ
ಕೊಳೆತು ನಾರುವೀ ತಿಪ್ಪೆ ಮನಗಳ
ಗುಡಿಸಿ ಸಾರಿಸೀ ಹಸನುಗೊಳಿಸೋ
ತಿಂದು ಮಲಗಿ ಓಡಾಡುವೀ ಬೆಂತರಗಳಲಿ
ಚೇತನದುಸಿರಾಡಿಸೋ
ನೂತನ ಹಸಿರು ಹೂ ಹಣ್ಣು ಕೊಡುವ
ಚಿರಂತನ ಸಿರಿ ಮೂಡಿಸೋ
ಬಿದ್ದವರ ಮಲಗಿರುವವರ
ಮತ್ತೆ ಮತ್ತೆ ಮರೆವಿಗೆ ಸಂದು ಸುಂದಾಗುವವರ
ಕತ್ತಲು ಒತ್ತೆಗೊಂಡವರ ಮಿತ್ತು ತುತ್ತುಗೊಳ್ಳುವವರ
ಎಬ್ಬಿಸೋ ತಂದೆ ಮೇಲೆಬ್ಬಿಸೋ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)