ಮಕರ ಸಂಕ್ರಮಣದ ಕಾಲಕ್ಕೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರನ ಜಾತ್ರೆ ಆಗುತ್ತದೆ. ಆ ಕಾಲಕ್ಕೆ ಸುತ್ತಲಿನ ಹತ್ತಿಪ್ಪತ್ತು ಹರದಾರಿಗಳಿಂದ ಜನರು ಬಂದು ಸೇರುತ್ತಾರೆ. ದೇವರಿಗಾಗಿ ಬರುವವರೂ ಅಷ್ಟೇ. ವ್ಯಾಪಾರಕ್ಕಾಗಿ ಬರುವವರೂ ಅಷ್ಟೇ. ಏತಕ್ಕಾಗಿ ಅಲ್ಲಿಗೆ ಹೋದರೂ ಅಲ್ಲಿ ನಡೆಯುವ ಮನೋರಂಜನೆಯ ಅನೇಕ ಕಾರ್ಯಕ್ರಮಗಳನ್ನು ನೋಡಿ ತಣಿಯುತ್ತಾರೆ. ಆದ್ದರಿಂದ ಹಾಡಿಕೆ, ಬಯಲಾಟ, ತೊಟ್ಟಿಲು ತೂಗಾಟ, ಚಿರಿಕೆಗಾಣ ಮೊದಲಾದ ಸೌಕರ್ಯಗಳನ್ನು ಸ್ಥಳಿಕರು ಜಾತ್ರೆಗೆ ಬಂದವರಿಗೆ ಒದಗಿಸುತ್ತಾರೆ. ಹಾಗೂ ಕಲಾವಿದರಿಗೆ ಊಟವಸತಿಗಳನ್ನು ಕಲ್ಪಿಸಿಕೊಡುವರಲ್ಲದೆ, ಸಂಭಾವನೆಯನ್ನೂ ಅವರವರ ಯೋಗ್ಯತೆಗೆ ತಕ್ಕಷ್ಟು ಕೊಟ್ಟು ಮರ್ಯಾದಿಸುವರು.

ಒಂದು ಹಳ್ಳಿಯ ಲಾವಣಿಕಾರನೊಬ್ಬನು ಹೆಗಲಿಗೊಂದು ಡಪ್ಪ, ಬಗಲಿಗೊಂದು ತುಂತೂನಿ ಸಿಕ್ಕಿಸಿಕೊಂಡು ಸೊಲ್ಲಾಪುರಕ್ಕೆ ಹೊರಟನು. ಹೊತ್ತೇರುವವರೆಗೆ ದಾರಿ ನಡೆದು, ಬದಿಯಲ್ಲಿ ಕಾಣುವ ಕಂಜೀಮರದ ನೆರಳಲ್ಲಿ ಬಿಸಿಲು ಕಳೆದು ಮುಂದೆ ಸಾಗಬೇಕೆಂದು ನಿರ್ಧರಿಸಿದನು. ತಣ್ಣಗಿನ ನೆರಳಿನಲ್ಲಿ
ತಾಸರ್ಧತಾಸು ಉರುಳಾಡಿದ ಮೇಲೆ ದಣಿವು ಹಗುರಾದಂತಾಯಿತು. ಎದ್ದು ಕುಳಿತು ಮೇಲೆ ನೋಡಿದರೆ ಇನ್ನೂ ಬಿಸಿಲು ಬಹಳ. ಬಿಸಿಲು ತಗ್ಗಿದ ಮೇಲೆ
ಹೊರಟರಾಯಿತೆಂದು ಬಗೆದನು. ಆದರೆ ಅಲ್ಲಿಯವರೆಗೆ ಏನು ಮಾಡುವದು? ಅವನ ಕಾಯಕ ಇದ್ದೇ ಇತ್ತು.

ತುಂತೂನಿಯನ್ನು ಕೈಗೆ ತೆಗೆದುಕೊಂಡು, ಸ್ವರಕಟ್ಟಿ ತನ್ನ ಲಾವಣಿಯ ಪುನರಾವರ್ತನೆಗೆ ತೊಡಗಿದನು. ತುಂತೂನಿ ಒತ್ತಟ್ಟಿಗೆ ಲಾವಣಿ ಒತ್ತಟ್ಟಿಗೆ ಸ್ವರವೂ
ಕೂಡುವಂತಿಲ್ಲ. ಲಾವಣಿಕಾರನು ಕಿವಿಕಿತ್ತಿದ ಆಡಿನಂತೆ ಹಲಬುತ್ತಿದ್ದಾನೆ. ಆ ಅಪಸ್ವರಗಾಯನವನ್ನು ಕೇಳಲಿಕ್ಕಾಗದೇ, ಕಂಜೀಮರದಲ್ಲಿ ವಾಸವಾಗಿದ್ದ ದೆವ್ವ ಬಂದು ಲಾವಣಿಕಾರನಿಗೆ ಬೇಡಿಕೊಂಡಿತು – “ಬಿಸಿಲು ಹೊತ್ತಿನಲ್ಲಿ ಹಾಡುವುದು ಬೇಡ. ತಲೆನೋಯತೊಡಗಿದೆ. ನಿಲ್ಲಿಸು.”

ಲಾವಣಿಕಾರನು ಹೇಳಿದನು – “ನಾಳೆಯೇ ಸೊಲ್ಲಾಪುರದಲ್ಲಿ ಜಾತ್ರೆ. ಜಾತ್ರೆಯಲ್ಲಿ ನಾನು ಹಾಡಬೇಕಾಗಿದೆ. ಹಾಡಿದರೆ ಹತ್ತೆಂಟು ರೂಪಾಯಿ ಸಂಭಾವನೆ
ಸಿಗುವದು. ಅದಕ್ಕಾಗಿ ನನ್ನ ಹಾಡಿನ ರೂಢಿ ಮಾಡಿಕೊಳ್ಳುತ್ತಿದ್ದೇನೆ.”

“ನಿನ್ನ ಅಪಸ್ವರ ಗಾಯನವನ್ನು ಕೇಳಿ ಸಂಭಾವನೆ ಕೊಡುವವರು ಬೇರೆ ಇರುವರೇ ? ಇಂಥಾ ಲಾವಣಿ ಹಾಡಿ ಹತ್ತೆಂಟು ರೂಪಾಯಿ ಗಳಿಸುವುದಕ್ಕಿಂತ
ಒಂದು ಯುಕ್ತಿಯನ್ನು ಹೇಳಿಕೊಡುತ್ತೇನೆ. ಮಾಡಬಾರದೇ?” ಎಂದು ಕೇಳಿತು ಆ ದೆವ್ವ.

“ಏನದು ನೀನು ಹೇಳುವ ಯುಕ್ತಿ?” “ಮೊದಲು ಹಾಡುವುದನ್ನು ನಿಲ್ಲಿಸಿ, ತುಂತೂನಿಯನ್ನು ತೆಗೆದಿಡು. ಆ ಬಳಿಕ ಹೇಳುವೆನು” ಎನ್ನಲು ಲಾವಣಿಕಾರನು
ತುಂತೂನಿಯ ತಂತಿಯನ್ನು ಸಡಿಲುಮಾಡಿ, ಬದಿಗೆ ಸರಿಸಿಯಿಟ್ಟು ದೆವ್ವ ಹೇಳುವುದನ್ನು ಕೇಳುವುದಕ್ಕೆ ತವಕದಿಂದ ಕುಳಿತನು.

ದೆವ್ವ ಹೇಳಿತು – “ನಾನು ಸೊಲ್ಲಾಪುರಕ್ಕೆ ಹೋಗಿ, ಅಲ್ಲಿಯ ಒಬ್ಬ ದೊಡ್ಡ ಶ್ರೀಮಂತನ ಹೆಂಡತಿಗೆ ಬಡಕೊಳ್ಳುತ್ತೇನೆ. ಯಾರ ಮಂತ್ರತಂತ್ರಗಳಿಗೂ ನಾನು
ಬಿಟ್ಟುಹೋಗುವುದಿಲ್ಲ. ನೀನು ದೆವ್ವ ಬಿಡಿಸುತ್ತೇನೆಂದು ಹೇಳುತ್ತ ಅಲ್ಲಿಗೆ ಬಾ. ನೂರು ರೂಪಾಯಿ ಪ್ರತಿಫಲ ಕೇಳು. ನೀನು ಮಂತ್ರ ಹಾಕಿದಂತೆ ಮಾಡು.
ಚಿಫ್ ಎಂದು ಊದು. ಸಾಕು, ನಾನು ಬಿಟ್ಟು ಹೋಗುತ್ತೇನೆ. ಆಯಿತೇ?”

ಲಾವಣಿಕಾರನು ಹಿಗ್ಗಿ ಸೊಲ್ಲಾಪುರಕ್ಕೆ ಹೊರಟನು. ಅಷ್ಟರಲ್ಲಿ ಶ್ರೀಮಂತನ ಹೆಂಡತಿಗೆ ದೆವ್ವ ಬಡಕೊಂಡ ಸುದ್ದಿ ಹಬ್ಬಿಬಿಟ್ಟಿತ್ತು. ಲೆಕ್ಕವಿಲ್ಲದಷ್ಟು ಮಾಂತ್ರಿಕರೂ ಅಸಂಖ್ಯ ತಾಂತ್ರಿಕರೂ ಹೋಗಿ ತಮ್ಮ ವಿದ್ಯೆಯನ್ನು ಪ್ರಯೋಗಿಸಿದರೂ ಪ್ರಯೋಜನವಾಗಿರಲಿಲ್ಲ. ಲಾವಣಿಕಾರನೂ ಶ್ರೀಮಂತನ ಮನೆಗೆ ಹೋಗಿ,
ತಾನೂ ದೆವ್ವ ಬಿಡಿಸಬಲ್ಲೆನೆಂದು ಹೇಳಿದನು. ತನ್ನ ಪ್ರಯತ್ನದಿಂದ ದೆವ್ವ ಬಿಟ್ಟು ಹೋದರೆ ನೂರು ರೂಪಾಯಿ ಕೊಡಬೇಕಾಗುವದೆಂದೂ ತಿಳಿಸಿದನು. ಗುಮಾಸ್ತರು
ಆತನನ್ನು ಕರೆದೊಯ್ದು, ದೆವ್ವಿನ ಮುಂದೆ ಕುಳ್ಳಿರಿಸಿದರು. ದೆವ್ವ ಆತನನ್ನು ಗುರುತಿಸಿತು. ಲಾವಣಿಕಾರನು ಒಂದಿಷ್ಟು ಬೂದಿ ತರಿಸಿ ಅದಕ್ಕೆ ಮಂತ್ರಹಾಕಿ
ಚಿಫ್ ಎಂದು ದೆವ್ವಿನ ಮುಖದ ಮೇಲೆ ಊದುತ್ತಲೇ ದೆವ್ವ ಹೋಗುವೆನೆಂದು ಎದ್ದೇನಿಂತಿತು. ಯಾವುದೋ ದಾರಿಗುಂಟ ಹತ್ತಿಪ್ಪತ್ತು ಹೆಜ್ಜೆ ಓಡಿಹೋಗಿ ಬಿಟ್ಟಿತು.

ದೆವ್ವಿನ ಬಾಧೆಯನ್ನು ದೂರಗೊಳಿಸಿದ್ದಕ್ಕಾಗಿ ಆ ಲಾವಣಿಕಾರನಿಗೆ ಉಡುಗೊರೆಯನ್ನಿತ್ತು ಗೊತ್ತುಮಾಡಿದ ನೂರು ರೂಪಾಯಿ ಸಂಭಾವನೆ ಕೊಟ್ಟು ಕಳಿಸಿದರು. ಆತನು ಜಿಗಿದಾಡುತ್ತ ತನ್ನೂರಿಗೆ ತೆರಳಿದನು.

ಕೆಲವು ದಿನ ಕಳೆಯುವಷ್ಟರಲ್ಲಿ, ಸಾಹುಕಾರನ ಹೆಂಡತಿಯನ್ನು ಬಡಕೊಂಡು ಸವಿಗೊಂಡ ದೆವ್ವ ಮತ್ತೆ ಬಂದು ಸೇರಿಕೊಂಡಿತ್ತು. ಗುಮಾಸ್ತರೆಲ್ಲರೂ ಪುನಃ
ಮಾಂತ್ರಿಕರನ್ನು ಕರೆತರಹತ್ತಿದರು. ಲಾವಣಿಕಾರನಿಗೂ ಆ ಸುದ್ದಿ ತಿಳಿಯಿತು. ಸೊಲ್ಲಾಪುರದ ಸಾಹುಕಾರನ ಮನೆಗೆ ಹೋಗಿ, ನೇರವಾಗಿ ದೆವ್ವಿನ ಮುಂದೆ
ಕುಳಿತು ತನ್ನ ಮಂತ್ರ ಪರಿಸತೊಡಗಿದನು ದೆವ್ವ “ಮತ್ತೇಕೆ ಬಂದೆಯೋನೀನು ? ನಿನ್ನ ವಚನದಿಂದ ಪಾರಾಗಿದ್ದೇನೆ. ಇನ್ನು ನಿನ್ನ ಮಂತ್ರಕ್ಕೆ ನಾನು ಬೆಚ್ಚುವುದಿಲ್ಲ. ಒಳ್ಳೆಯ ಮಾತಿನಲ್ಲಿ ಇಲ್ಲಿಂದ ಹೊರಟುಹೋಗು” ಎಂದಿತು.

ಲಾವಣಿಕಾರನು ಬಹಳಹೊತ್ತು ಮಂತ್ರ ಮಣಮಣಿಸಿದರೂ ಉಪಯೋಗವಾಗಲಿಲ್ಲ. ಬೇಸರಿಯುವ ಹೊತ್ತಿಗೆ ಯುಕ್ತಿ ನೆನಪಾಯಿತು. ಸಾಹುಕಾರನ ಗುಮಾಸ್ತರಿಗೆ ಹೇಳಿ ಒಂದು ತುಂತೂನಿ ಸ್ವರಕಟ್ಟಿ ತನ್ನ ಲಾವಣಿ ಹಾಡಲು ಆರಂಭಿಸುತ್ತಲೇ ದೆವ್ವ ಎದ್ದು ಕುಣಿದಾಡತೊಡಗಿತು-

“ಹಾಡಬೇಡವೋ ಮಹಾರಾಯಾ, ನಿನ್ನ ಅಪಸ್ವರದ ಗಾಯನ ಕೇಳಿ ತಲೆ ಸೀಳತೊಡಗಿತು. ಹೋಗುತ್ತೇನಣ್ಣಾ, ಈ ಸಾರೆ ಹೋದರೆ ಮತ್ತೆಂದೂ ಮರಳಿ ಬರುವದಿಲ್ಲ. ನಿಜವಾಗಿಯೂ ಹೋಗಿಬಿಡುತ್ತೇನೆ” ಎನುತ್ತ ಆ ದೆವ್ವವು ಶ್ರೀಮಂತನ ಹೆಂಡತಿಯನ್ನು ಬಿಟ್ಟು ಹೋದದ್ದು ಹೋಗಿಯೇ ಬಿಟ್ಟಿತು. ಮತ್ತೆ ಮುಖ ತೋರಲಿಲ್ಲ.

ಲಾವಣಿಕಾರನ ಪ್ರಯತ್ನಕ್ಕೆ ಆ ಶ್ರೀಮಂತನು ಬೊಗಸೆ ಬೊಗಸೆ ಸಂಭಾವನೆ ಕೊಟ್ಟು ಕಳಿಸಿದನು. ಆದರೆ ದೆವ್ವ ಕಲಿಸಿದ ಮಂತ್ರ ದೆವ್ವಿಗೇ ಮುಳುವಾಯಿತು.
ಅದರ ಮಂತ್ರಕ್ಕೆ ತಿರುಮಂತ್ರವಾಯಿತು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)