ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತ

ದಸರಾ ರಜೆಯಲ್ಲಿ ಮೂರ್ತಿ ಬೆಂಗಳೂರಿನಿಂದ ಹಳ್ಳಿಗೆ ಬಂದಿದ್ದ. ಐಶ್ವರ್ಯವಂತರಾದ ತಂದೆತಾಯಿಯರಿಗೆ ಅವನೊಬ್ಬನೇ ಮಗ; ತಾಯಿಯ ಪ್ರೇಮದ ಬೊಂಬೆ. ಇಪ್ಪತ್ತುಮೂರು ವರ್ಷ ವಯಸ್ಸಿನವನಾದರೂ ತಾಯಿ ಅವನನ್ನು ಎರಡು ವರ್ಷದ ಮಗುವಿನಂತೆ ಮುದ್ದಿಸುತ್ತಿದ್ದಳು. ಅವನು ಏನು ಮಾಡಿದರೂ ತಾಯಿಗೆ ಅದು ತಪ್ಪಾಗಿ ತೋರುತ್ತಿರಲಿಲ್ಲ. ಮಡಿಮೈಲಿಗೆ ಎಂದರೆ ಆಕೆಗೆ ಜೀವಕ್ಕಿಂತಲೂ ಹೆಚ್ಚು. ಆದರೂ ಒಂದು ದಿನ ಮೂರ್ತಿ ಶೂಜ್ ಹಾಕಿಕೊಂಡು ಅಡಿಗೆಮನೆ ಯೊಳಗೆ ನುಗ್ಗಿದಾಗ ‘ಪಾಪ, ಚಿಕ್ಕ ಹುಡುಗ, ಅವನಿಗೇನು ಗೊತ್ತು’ ಎಂದು ಹೇಳಿ ಅವನನ್ನು ಕ್ಷಮಿಸಿದ್ದಳು. ಮೂರ್ತಿಗೂ ಹಾಗೆಯೇ ಅಮ್ಮ ಎಂದರೆ ಪ್ರಾಣ. ಅವಳ ಮಾತುಗಳನ್ನು ಎಂದೂ ಮೀರುತ್ತಿರಲಿಲ್ಲ. ಕಾಲೇಜಿಗೆ ಎರಡು ದಿನ ರಜ ಸಿಕ್ಕಿದರೆ ಸಾಕು; ತಾಯಿಯನ್ನು ನೋಡುವುದಕ್ಕೆ ಹಳ್ಳಿಗೆ ಓಡಿ ಬರುತ್ತಿದ್ದ. ಅಣ್ಣ ತಂಗಿ, ಸ್ನೇಹಿತ ಎಲ್ಲಾ ಅವನಿಗೆ ಅವನ ಅಮ್ಮ. ಅವಳ ಪ್ರೇಮಪೂರ್ಣವಾದ ಸವಿನುಡಿಗಳನ್ನು ಕೇಳುವುದಕ್ಕೆ ಮೂರ್ತಿಗೆ ಬಹಳ ಆಸೆ. ನೋಡಿದವರು ಅವರನ್ನು ತಾಯಿ ಮಗ ಎನ್ನುವುದರ ಬದಲು ಸ್ನೇಹಿತರು ಎಂದು ಹೇಳುತ್ತಿದ್ದರು.

ಮರ್ತಿಯ ತಂದೆ ಬಹಳ ವಿಚಿತ್ರ ಪ್ರಕೃತಿಯ ಮನುಷ್ಯ. ಮೂರ್ತಿಯ ಮನಸ್ಸು ಎಷ್ಟು ಕೋಮಲವೋ ಅಷ್ಟೇ ಕಠಿಣ ಆತನ ಮನಸ್ಸು. ಹಣವನ್ನು ಶೇಖರಿಸುವುದಲ್ಲದೆ ಖರ್ಚು ಮಾಡುವುದೆಂದರೆ ಅವನಿಗೆ ಪ್ರಾಣಸಂಕಟ. ಮೂರ್ತಿಯ ಸೂಟುಗಳನ್ನೂ ಶೂಗಳನ್ನೂ ನೋಡುವಾಗ ಹಣ ಕಳೆಯುವ ದುರ್ವ್ಯಸನವೆಂದು ಕಿಡಿಕಿಡಿಯಾಗುತ್ತಿದ್ದನು. ಮಗನ ಮೇಲೆ ಕೋಪ ಬಂದಾಗ ಹೆಂಡತಿಗೆ ಹೊಡೆಯುವುದು ಅವನ ಪದ್ಧತಿ. ತಾಯಿಗೆ ಕೊಡುವ ಕ್ರೂರ ಶಿಕ್ಷೆಯನ್ನು ನೋಡಲಾರದೆ ಮೂರ್ತಿ ತಂದೆಯೊಡನೆ ಹಣ ಕೇಳುವುದನ್ನೇ ಬಿಟ್ಟುಬಿಟ್ಟಿದ್ದನು. ತಂದೆಯೇ ಪ್ರತಿ ತಿಂಗಳ ಮೊದಲನೆಯ ತಾರೀಖಿನಲ್ಲಿ ‘ಹಣ ಖರ್ಚು ಮಾಡುವುದು ಪಾಪ’ ಎಂದು ಒಂದೂವರೆ ಗಜ ಕಾಗದ ಬರೆದು ಹದಿನೈದು ರೂಪಾಯಿಗಳನ್ನು ಕಳುಹಿಸುತ್ತಿದ್ದನು. ಮತ್ತೊಂದು ತಿಂಗಳ ಮೊದಲನೆಯ ತಾರೀಖಿನವರೆಗೂ ಆ ಹದಿನೈದು ರೂಪಾಯಿಗಳಲ್ಲಿ ಮೂರ್ತಿ ದಿನ ಕಳೆಯಬೇಕಿತ್ತು. ಮುವತ್ತನೆಯ ತಾರೀಖಿನ ದಿನ ಮೂರ್ತಿ ಪ್ರತಿಯೊಂದು ಕಾಸಿನ ಲೆಕ್ಕವನ್ನು ಬರೆದು ತಂದೆಗೆ ಕಳುಹಿಸಬೇಕು. ಅವನು ಖರ್ಚು ಮಾಡಿದ್ದು ಸರಿ ಎಂದು ತೋರಿದರೆ ಮರುದಿನ ತಂದೆ ಹಣ ಕಳುಹಿಸುತ್ತಿದ್ದನು. ಇದಲ್ಲದೆ ಮೂರ್ತಿ ಪ್ರತಿವರ್ಷ ಪ್ರತಿ ಕ್ಲಾಸಿನಲ್ಲಿಯ ಮೊದಲನೆಯವನಾಗಿರಬೇಕೆಂದು ತಂದೆಯ ಇಚ್ಛೆ. ಹಿಂದಿನ ವರ್ಷ ಮೂರ್ತಿ ಸೆಕೆಂಡ್ ಕ್ಲಾಸಿನಲ್ಲಿ ಬಂದುದಕ್ಕಾಗಿ ಒಂದು ತಿಂಗಳು ಅವನೊಡನೆ ಮಾತಾಡಿರಲಿಲ್ಲ. ತಾಯಿಯ ಅತ್ಯಧಿಕ ಸ್ನೇಹವೇ ಇದಕ್ಕೆ ಕಾರಣವೆಂದು ಅವಳಿಗೂ ಬೇಕಾದಷ್ಟು ಏಟುಗಳು ಬಿದ್ದಿದ್ದವು.

ತಾಯಿಯ ಅಸಹನೀಯ ವೇದನೆಯನ್ನು ನೋಡಲಾರದೆ ಮೂರ್ತಿ ಹೇಗಾದರೂ ಮಾಡಿ ಈ ವರ್ಷ ಮೊದಲನೆಯವನಾಗಬೇಕೆಂದು ಹಗಲು ರಾತ್ರಿ ಓದುತ್ತಿದ್ದನು. ತಂದೆಯ ಈ ತರದ ಕಠೋರ ವ್ಯವಹಾರದಿಂದ ತಾಯಿ ಮಕ್ಕಳ ಪ್ರೇಮವು ದಿನದಿನಕ್ಕೆ ದೃಢವಾಗುತ್ತಿತ್ತು.

ಮೂರ್ತಿ ಊರಿಗೆ ಬಂದ ದಿನವೇ ಅವನ ತಂದೆ ಏನೋ ಕೆಲಸದ ಸಲುವಾಗಿ ಒಂದುವಾರ ಬೆಂಗಳೂರಿಗೆ ಹೋಗಬೇಕಾಯಿತು. ಆ ದಿನ ಅವನ ತಾಯಿ ಬೇಗ ಬೇಗನೆ ಕೆಲಸಗಳನ್ನೆಲ್ಲಾ ತೀರಿಸಿ ಮಗನೊಡನೆ ಮಾತಾಡುತ್ತಾ ಮನೆಯ ಮುಂದಿನ ಜಗುಲಿಯ ಮೇಲೆ ಕೂತಿದ್ದಳು. ನೆರೆಮನೆಗಳ ಪುಟ್ಟ ಪುಟ್ಟ ಹುಡುಗಿಯರು ಒಳ್ಳೆಯ ಸೀರೆಗಳನ್ನುಟ್ಟುಕೊಂಡು ನಗುನಗುತ್ತಾ ನವರಾತ್ರಿಯ ಬೊಂಬೆಗಳನ್ನು ನೋಡುವ ಕುತೂಹಲದಿಂದ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ಎಳೆ ಪ್ರಾಯದ ಮಕ್ಕಳ ಆ ಆನಂದದ ನಲಿದಾಟವನ್ನು ನೋಡುತ್ತ ತಾಯಿ ಮಗ ಇಬ್ಬರೂ ಮಾತುಗಳನ್ನು ಮರೆತು ಮೂಕರಂತೆ ಕೂತಿದ್ದರು. ಮೂರ್ತಿಯ ತಾಯಿಗೆ ಮಕ್ಕಳೆಂದರೆ ಬಹಳ ಪ್ರೀತಿ. ರಸ್ತೆಯಲ್ಲಿ ಓಡಾಡುತ್ತಿದ್ದ ಮಕ್ಕಳಲ್ಲಿ ಒಂದು ಮಗು (ಸುಮಾರು ನಾಲ್ಕು ವರ್ಷ ಪ್ರಾಯದ್ದು) ಬಹಳ ಮುದ್ದಾಗಿತ್ತು. ಆ ಮಗುವಿಗೊಂದು ಪುಟ್ಟ ಸೀರೆ ಉಡಿಸಿದ್ದರು. ಅದೇ ಮೊದಲನೆಯ ಸಾರಿ ಅದು ಸೀರೆ ಉಟ್ಟುದಾಗಿರಬೇಕೆಂದು ತೋರುತ್ತದೆ. ಅದರ ಆನಂದವು ಮೇರೆ ಮೀರಿತ್ತು. ಗಾಳಿಗೆ ಹಾರಾಡುತ್ತಿದ್ದ ಅದರ ಗುಂಗುರು ಕೂದಲುಗಳೂ ಉದ್ದವಾದ ರೆಪ್ಪೆಗಳ ನಡುವಿನ ಕರಿತುಂಬಿಗಳಂತಹ ವಿಶಾಲವಾದ ಕಣ್ಣುಗಳೂ ಕೆಂಪುತುಟಿಗಳಿಂದ ಒಪ್ಪುವ ಬಾಯಿಯ ನಗೆಯನ್ನು ಹೊರಚೆಲ್ಲುತ್ತಿದವು. ಏನೋ ಒಂದು ಪದವನ್ನು ಹೇಳುತ್ತ ಕಂಕುಳಲ್ಲೊಂದು ಬೊಂಬೆಯನ್ನು ಎತ್ತಿ ಕೊಂಡು ಆ ಮಗು ಸಂತೋಷವನ್ನು ಬೀರುತ್ತ ರಸ್ತೆಯಲ್ಲಿ ಬರುವುದನ್ನು ನೋಡಿ ಮೂರ್ತಿಯ ತಾಯಿ ‘ಬಾಮ್ಮ ಪ್ರಭಾ’ ಎಂದರು. ಆಕೆಯ ಮಾತು ಕೇಳಿ ಪ್ರಭಾ ಓಡೋಡುತ್ತ ಬಂದು ‘ಅತ್ತೆ ಬೊಂಬೆ ನೋದಿಲ್ಲಿ’ ಎಂದು ತನ್ನ ಬೊಂಬೆಯನ್ನು ತೋರಿಸತೊಡಗಿದಳು. ಮೂರ್ತಿಯ ತಾಯಿ ಆ ಮುದ್ದಿನ ರಾಶಿಯನ್ನು ಎತ್ತಿಕೊಂಡು ಅವಳ ಕೆನ್ನೆಗಳಿಗೆ ಮುತ್ತು ಕೊಟ್ಟು ‘ನೋಡು ಮೂರ್ತಿ ಬಂದಿದ್ದಾನೆ, ಮಾತಾಡು’ ಎಂದು ಹೇಳಿ ಅವಳಿಗೆ ಕೊಡುವುದಕ್ಕೆ ತಿಂಡಿ ತರುವುದಕ್ಕಾಗಿ ಒಳಕ್ಕೆ ಹೋದರು. ‘ನನ್ನ ಬೊಂಬೆ ನೋಡು ಮೂತಿ’ ಎಂದು ಸುರುಮಾಡಿದಳು ಪ್ರಭೆ ಮೂರ್ತಿಯೊಡನೆ ಮಾತಿಗೆ ಚಿಕ್ಕಂದಿನಿಂದಲೂ ಅವನಿಗೆ ಪರಿಚಯವಿತ್ತು ಪ್ರಭೆಯದು. ನೆರೆಮನೆಯ ನಾರಾಯಣರಾಯರ ಮಗಳು ಅವಳು. ನಲಿನಿ ಸಣ್ಣ ಪ್ರಭೆಯನ್ನು ಎತ್ತಿಕೊಂಡು ಅವನ ತಾಯಿಯೊಡನೆ ಹಿತ್ತಲು ಬೇಲಿಯ ಹತ್ತಿರ ನಿಂತುಕೊಂಡು ಮಾತಾಡುತ್ತಿದ್ದಾಗ ಎಷ್ಟೋ ಸಾರಿ ಮೂರ್ತಿ ಅವಳಿಂದ ಪ್ರಭೆಯನ್ನು ಎತ್ತಿಕೊಂಡು ಆಡಿಸಿದ್ದನು. ಹಳೆಯ ಸ್ನೇಹಿತರಿಬ್ಬರು ಜೊತೆಯಾದರೆ ಮಾತಿಗೆ ಕೊನೆ ಮೊದಲಿದೆಯೇ? ಪ್ರಭೆ ಆ ದಿನ ತನ್ನ ಮನೆಗೆ ಹೋಗುವಾಗ ರಾತ್ರಿ ಎಂಟುಗಂಟೆ ಹೊಡೆದು ಹೋಗಿತ್ತು. ಮೂರ್ತಿಯೇ ಅವಳನ್ನು ಮನೆಗೆ ತಲುಪಿಸಿದ.

-೨-
ಮರುದಿನ ಬೆಳಗ್ಗೆ ಮೂರ್ತಿ ಹಿತ್ತಲಲ್ಲಿದ್ದ ಸಂಪಿಗೆಯ ಮರ ಹತ್ತಿ ತಾಯಿಗಾಗಿ ಹೂ ಕೊಯ್ಯುತ್ತಿದ್ದ. ಮರವು ಬಹಳ ಎತ್ತರವಾಗಿತ್ತು, ಎತ್ತರದ ಕೊಂಬೆಯೊಂದರ ಮೇಲೆ ಕುಳಿತು ಮೂರ್ತಿ ಹೂ ಕೊಯ್ಯತಿದ್ದಾಗ, ನೆರೆಮನೆಯ ನಲಿನಿ ಪಾತ್ರೆ ಬೆಳಗುತ್ತಾ ಕೊಳದ ಹತ್ತಿರ ಕುಳಿತಿದ್ದುದನ್ನು ಕಂಡ. ಜಗುಲಿಯ ಮೇಲೆ ಮುದ್ದು ಪ್ರಭೆ ಎಳೆಗರು ಒಂದಕ್ಕೆ ಪುಟ್ಟ ಕೈಯಿಂದ ರೊಟ್ಟಿ ಕೊಡುತ್ತಿದ್ದಳು. ಪ್ರಭೆಯ ಸುಂದರವಾದ ಮುಖವು, ಬಾಲಸೂರ್ಯನ ಹೊಂಬಿಸಿಲು ಬಿದ್ದು ಅರಳಲನುವಾದ ಕಮಲದಂತೆ ತೋರುತ್ತಿತ್ತು, ಅವಳ ಚಪಲ ಚಂಚಲ ನಯನಗಳು ಸಂತೋಷದ ಸುಳಿನಗೆಯನ್ನು ಬೀರುತ್ತಿದ್ದವು. ಜಡೆ ಹೆಣೆದಿರಲಿಲ್ಲ. ಕೂದಲೆಲ್ಲಾ ಕೆದರಿ ಮುಖವನ್ನು ಸುತ್ತಿ, ಮುತ್ತಿಡುತ್ತಿದ್ದಂತೆ ಕಾಣುತಿತ್ತು. ಮೂರ್ತಿ ಅವಳನ್ನು ನೋಡನೋಡುತ್ತ ಲೋಕವನ್ನೇ ಮರೆತುಬಿಟ್ಟ. ಅಷ್ಟು ಸುಂದರವಾಗಿತ್ತು, ಆ ಮುದ್ದು ಮಗುವಿನ ನಿಷ್ಕಲಂಕವಾದ ರೂಪರಾಶಿ. ಪ್ರಭೆ ಮೂರ್ತಿಯನ್ನು ನೋಡಲಿಲ್ಲ. ರೊಟ್ಟಿ ಮುಗಿದೊಡನೆ ಇನ್ನೊಂದು ತರುವುದಕ್ಕಾಗಿ ಒಳಗೆ ಹೋದಳು. ಆಗ ಮೂರ್ತಿಗೆ ಪ್ರಜ್ಞೆ ಬಂತು. ‘ಮುದ್ದು ಪ್ರಭೆ ಎಷ್ಟು ಮುದ್ದಾಗಿದ್ದಾಳೆ! ನನಗಂತಹ ಒಬ್ಬಳು ತಂಗಿ ಇದ್ದಿದ್ದರೆ-’ ಎಂದು ನಿಟ್ಟುಸಿರುಬಿಟ್ಟು ಮೂರ್ತಿ ಹೂ ಕೊಯ್ಯತೊಡಗಿದ.

ಸ್ವಲ್ಪ ಹೊತ್ತಿನ ತರುವಾಯ ಮೂರ್ತಿ ‘ಪ್ರಭೆ ಬಂದಳೇ’ ಎಂದು ಆಕಡೆ ತಿರುಗಿ ನೋಡಿದ-ಬಂದಿರಲಿಲ್ಲ. ನಲಿನಿ ಮಾತ್ರ ಮೊದಲಿನಂತೆ ಪಾತ್ರೆ ಬೆಳಗುತ್ತಾ ಕೂತಿದ್ದಳು. ಅವಳ ಮುಖ ಕಾಣುತ್ತಿರಲಿಲ್ಲ. ಬೆನ್ನಿನ ಮೇಲೆ ಹರಿದಾಡುತ್ತಿದ್ದ ಅವಳ ಉದ್ದವಾದ ಜಡೆ ಮಾತ್ರ ಮೂರ್ತಿಗೆ ಕಾಣಿಸುತ್ತಿತ್ತು. ಆ ಜಡೆಯ ಪರಿಚಯವೂ ಮೂರ್ತಿಗಿತ್ತು. ಆದುದರಿಂದಲೇ ಮರ್ತಿಗೆ ಪಾತ್ರೆ ಬೆಳಗುತ್ತಿದ್ದವಳು ನಲಿನಿ ಎಂದು ಗೊತ್ತು.

ನಲಿನಿ ಪ್ರಭೆಯ ದೊಡ್ಡಮ್ಮನ ಮಗಳು. ಅದೇ ಊರಿನವಳು. ತಾಯಿತಂದೆ ಇಲ್ಲದ ತಬ್ಬಲಿ. ನಲಿನಿ ಹುಟ್ಟಿದ ವರ್ಷವೇ ತಂದೆ ತೀರಿ ಹೋಗಿದ್ದ. ಎರಡು ವರ್ಷಗಳ ತರುವಾಯ ಅವಳ ತಾಯಿ ಆತ್ಮಹತ್ಯ ಮಾಡಿಕೊಂಡಿದ್ದಳು. ಅಂದಿನಿಂದ ಪ್ರಭೆಯ ತಾಯಿತಂದೆಯರೇ ನಲಿನಿಗೂ ತಾಯಿತಂದೆ. ಅವಳ ಚಿಕ್ಕಮ್ಮ ಅಕ್ಕನ ಅನಾಥ ಮಗಳನ್ನು ಬಹಳ ಆದರದಿಂದ ಸಾಕುತ್ತಿದ್ದಳು.

ನಲಿನಿಯ ತಾಯಿಯ ಆತ್ಮಹತ್ಯದ ವಿಷಯ ಜನರು ಅನೇಕ ವಿಧವಾಗಿ ಹೇಳುತ್ತಿದ್ದರು. ಸತ್ತುಹೋದ ತನ್ನ ತಾಯಿಯ ವಿಷಯವಾಗಿ ಜನರ ಮಾತು ಕೇಳಿ ಕೇಳಿ ನಲಿನಿಯ ಮನಸ್ಸು ನೊಂದುಹೋಗಿತ್ತು. ಅವಳ ಚಿಕ್ಕಪ್ಪ ಅವಳ ಮದುವೆಯ ಸಲುವಾಗಿ ಬಹಳ ಪ್ರಯತ್ನ ಪಟ್ಟಿದ್ದರೂ ‘ತಾಯಿಯ ಶೀಲ ನಡತೆಗಳು ಚನ್ನಾಗಿರಲಿಲ್ಲ. ಮಗಳೂ ಅವಳ ದಾರಿ ಹಿಡಿಯದಿರಲಾರಳು’ ಎಂದುಕೊಂಡು ಅವಳಿಗೆ ಹದಿನೈದು ವರ್ಷಗಳು ತುಂಬಿದ್ದರೂ ಯಾರೂ ಅವಳನ್ನು ಮದುವೆಯಾಗಿರಲಿಲ್ಲ. ಮೂರ್ತಿಗವಳದು ಚಿಕ್ಕಂದಿನಿಂದಲೂ ಗೊತ್ತು. ತಾಯಿ ಕೆಟ್ಟವಳಾದರೆ ಮಗಳ ಅಪರಾಧವೇನು ? ಎಂದವನು ಕೇಳುತ್ತಿದ್ದ. ಮೂರ್ತಿ ಸಣ್ಣವನಾಗಿದ್ದಾಗ ನಲಿನಿಯೊಡನೆ ಆಡುತ್ತಿದ್ದ. ಮರದಿಂದ ಅವಳಿಗೆ ಹೂ ಕೊಯ್ಫ಼ು ಕೊಡುತ್ತಿದ್ದ. ಅವಳಿಗೆ ಚಿತ್ರ ಬಿಡಿಸಿ ಕೊಡುತ್ತಿದ್ದ. ದೊಡ್ಡವನಾದಂತೆ ಅವರಿಬ್ಬರೊಳಗೆ ಮಾತುಕತೆ ನಿಂತುಹೋಗಿತ್ತು. ಮೂರ್ತಿ ಬೆಂಗಳೂರಿಗೂ ಹೋದ. ಇನ್ನೊಂದು ಕಾರಣವೇನೆಂದರೆ ಅವನ ತಂದೆ ನಲಿನಿಯೊಡನೆ ಮಾತನಾಡಕೂಡದೆಂದು ಮಾಡಿದ ಆಜ್ಞೆ. ಆಜ್ಞೆಗೆ ಮೂರ್ತಿ ಹೆದರದವನಾದರೂ ತಾಯಿಗೆ ತೊಂದರೆಯಾದೀತೆಂಬ ಭಯದಿಂದ ಸುಮ್ಮನಿದ್ದ. ಅವಳೊಡನೆ ಮಾತಾಡಿ ನಾಲ್ಕೈದು ವರ್ಷಗಳಾಗಿ ಹೋಗಿದ್ದವು. ಅವನಿಗೆ ಅವಳೊಡನೆ ಮಾತು ಬಿಡುವುದೂ ಕಷ್ಟವಾಗಿರಲಿಲ್ಲ. ಬೆಂಗಳೂರಿಗೆ ಹೋದ ಮೇಲಂತೂ ‘ನಲಿನಿ’ ಎಂಬ ವ್ಯಕ್ತಿ ಈ ಲೋಕದಲ್ಲಿದೆ ಎಂಬುದನ್ನೇ ಅವನು ಮರೆತುಬಿಟ್ಟಿದ್ದ. ಈಗವಳ ಜಡೆ ನೋಡಿದೊಡನೆ ಅವನಿಗೆ ಹಿಂದಿನ ದಿನಗಳ ಚಿಕ್ಕ ನಲಿನಿಯ ಸ್ಮರಣೆಯಾಯಿತು. ಅವಳಿಗೆ ಹೂಗಳ ಮೇಲಿದ್ದ ಪ್ರೇಮ ನೆನಪಾಯ್ತು. ನಾಲ್ಕು ಹೂ ಕೊಯಿದುಕೊಟ್ಟರೆ ತಪ್ಪೇನು ಎಂದುಕೊಂಡು ತುಂಬ ಹೂಗಳಿದ್ದ ಒಂದು ಸಣ್ಣ ಕೊಂಬೆಯನ್ನು ಮುರಿದು ಅವಳು ಕೂತಿದ್ದ ಕಡೆಗೆ ಎಸೆದನು. ಸದ್ದು ಕೇಳಿ ಅವಳು ತಿರುಗಿ ನೋಡಿದಳು. ಮೂರ್ತಿ ಅವಳ ಮುಖ ನೋಡಿದ. ಅಂದು ತನ್ನೊಡನೆ ಮರಹತ್ತಿ, ಬೇಲಿ ಮುರಿದು ಕಲ್ಲೆಸೆದು ಓಡಾಡುತಿದ್ದ ನಲಿನಿಯ ನಗು ಮುಖದ ಬದಲು, ಹೇಳಲಾರದಂತಹ ಯಾವುದೋ ಒಂದುತರದ ಸಹನಾತೀತ ವೇದನೆಯನ್ನು ಮುಚ್ಚಲಾಗದಿದ್ದರೂ ಮುಚ್ಚಲು ಯತ್ನಿಸುವ ಮುಖದ ನಳಿನಿಯನ್ನು ನೋಡಿ ಕೋಮಲ ಪ್ರಕೃತಿಯ ಮೂರ್ತಿ ‘ಅಯ್ಯೋ’ ಅಂದುಕೊಂಡ. ನಲಿನಿ ಬಿದ್ದಿದ್ದ ಹೂಗಳನ್ನು ನೋಡಿದಳು. ಮರದ ಮೇಲಿದ್ದ ಮೂರ್ತಿ ಅವಳಿಗೆ ಕಾಣಿಸಲಿಲ್ಲ. ಗಾಳಿಗೆ ಬಿದ್ದಿರಬಹುದೆಂದು ಯೋಚಿಸಿ ಕೈಗಳನ್ನು ತೊಳೆದು ಕೊಂಡು ಹೂಗಳನ್ನು ತೆಗೆದುಕೊಂಡಳು.

ಹೂವನ್ನು ಕೈಗೆ ತೆಗೆದುಕೊಳ್ಳುವಾಗ ಮುಚ್ಚಿದ ಮೋಡಗಳ ನಡುವಿನಿಂದ ಒಂದು ನಿಮಿಷ ಇಣಿಕಿನೋಡಿದ ಬಿಸಿಲಿನಂತೆ ಅವಳ ಮುಖದಲ್ಲಿ ಎಳೆನಗೆಯೊಂದು ಮೂಡಿ ಮಾಯವಾಯಿತು. ಬೇಕಾದ್ದಕಿಂತಲೂ ಹೆಚ್ಚಿನ ಬಹುಮಾನ ಆ ನಗುವೊಂದರಲ್ಲೇ ದೊರೆಯಿತೆಂದುಕೊಂಡು ಮೂರ್ತಿ ಅವಳಿಗೆ ಗೊತ್ತಾಗದಂತೆ ಮರವಿಳಿದು ತಾಯಿಯನ್ನು ಹುಡುಕುತ್ತ ಒಳಗೆ ಹೋದ.

-೩-
ಪ್ರಭೆ ಸುಂದರಿ ಎಂಬುದರಲ್ಲಿ ಸಂದೇಹವಿಲ್ಲ. ಬೆಳಗಿನ ಹೊತ್ತು ಸೂರ್ಯನುದಯಿಸುವುದನ್ನು ಇದಿರು ನೋಡುತ್ತ ಅರಳಲನುವಾದ ಕಮಲದಂತೆ ಅವಳ ಮುಖ. ನಲಿನಿ ಪ್ರಭೆಯಂತೆ ಸುಂದರಿಯಲ್ಲ. ಆದರೆ ಅಪರೂಪದಲ್ಲೆಲ್ಲಾದರೂ ಒಂದು ನಗು ನಲಿನಿಯ ದುಃಖಾವೃತವಾಗಿದ್ದ ಮುಖದಲ್ಲಿ ನೋಡಿದರೆ ಆಗವಳ ಮುಖವು ಅರೆಬಿರಿದ ಕುಮುದ ದಂತೆ ತೋರುತ್ತಿತ್ತು. ಪ್ರಭೆಯ ಬಣ್ಣ ಗುಲಾಬಿಮಿಶ್ರಿತವಾದ ಬಿಳುಪು. ನಲಿನಿ ಕಪ್ಪುಮಿಶ್ರಿತವಾದ ಕೆಂಪು. ಪ್ರಭೆಯ ಕಣ್ಣುಗಳು ಚಪಲ ಚಂಚಲ. ಸ್ಥಿರ ಗಂಭೀರ ನಲಿನಿಯ ಕಣ್ಣುಗಳು. ಆ ಕಣ್ಣುಗಳು ಏನನ್ನಾದರೂ ನೋಡುತ್ತಿರುವಾಗ ಹೇಳಲಸಾಧ್ಯವಾದ ಒಂದು ತರದ ಲಾವಣ್ಯವು ಅವಳ ಮುಖದ ಮೇಲೆ ನಲಿಯುತ್ತಿತ್ತು; ಬೆಳಕನ್ನು ತೋರಿಸಿದರೆ ಜಿಂಕೆ ಮರಿ ಆಶ್ಚರ್ಯದಿಂದ ನೋಡುವಾಗ ಹೇಗೋ ಹಾಗೆ.

ಮೂರ್ತಿ ಮೂರು ದಿನಗಳಿಂದಲೂ ಮರಹತ್ತಿ ನಲಿನಿಗೆ ತಿಳಿಯದಂತೆಯೇ ಅವಳು ಪಾತ್ರೆ ಬೆಳಗುವಾಗ ಅವಳನ್ನು ನೋಡುತ್ತಿದ್ದನು. ಪ್ರಭೆಯನ್ನು ತಿಂಡಿ ಕೊಟ್ಟು ಮನೆಗೆ ಕರೆತಂದು ಹೂ ಕೊಟ್ಟು ಕಳುಹಿಸುತ್ತಿದ್ದ, ನಿನ್ನ ತಾಯಿಗೆ ಕೊಡೆಂದು ಹೇಳಿ. ನಲಿನಿಗೂ ಅದು ತಲುಪುವದೆಂದು ಅವನಿಗೆ ಗೊತ್ತು. ಚಿಕ್ಕಂದಿನ ತುಂಟಾಟಿಕೆಯು ನಲಿನಿಯ ಎಂದೂ ಮಾಡದಿದ್ದ ಅಧಿಕಾರವನ್ನು, ಸ್ಥಿರ-ಗಂಭೀರ ನಯನಗಳ ನಲಿನಿಯ ರೂಪವು ಮೂರ್ತಿಯು ಹೃದಯದ ಮೇಲೆ ನಡೆಸತೊಡಗಿತು.

ಮೂರ್ತಿಯ ತಾಯಿಗೂ ಅನಾಥೆ ನಲಿನಿಯ ಮೇಲೆ ಅಪಾರ ಪ್ರೇಮ. ಗಂಡನು ಊರಿನಲ್ಲಿಲ್ಲದಾಗ ಅವಳನ್ನೂ ಪ್ರಭೆಯನ್ನೂ ಮನೆಗೆ ಕರೆದುಕೊಂಡು ಬಂದು ಜಡೆ ಹೆಣೆದು ತಿಂಡಿ ಕೊಟ್ಟ ಉಪಚರಿಸುತ್ತಿದ್ದಳು, ನಲಿನಿಯ ವಿಷಾದಮಯ ಜೀವನಕ್ಕಾಗಿ ಎಷ್ಟೋ ಸಾರಿ ಯಾರಿಗೂ ಕಾಣದಂತೆ ಅವಳು ಕಣ್ಣೀರು ಸುರಿಸಿದ್ದಳು. ‘ದೇವರೇ, ನಲಿನಿ ಒಳ್ಳೆಯವನ ಮಡದಿಯಾಗಿ ಸುಖಸಂತೋಷದಿಂದಿರುವಂತೆ ಮಾಡು’ ಎಂದವಳು ನಲಿನಿಯನ್ನು ನೋಡಿದಾಗಲೆಲ್ಲಾ ಮನಸ್ಸಿನಲ್ಲಿಯೇ ಮೊರೆಯಿಡುತ್ತಿದ್ದಳು.

ಮೂರ್ತಿ ಬಂದು ಆರು ದಿನಗಳಾಗಿದ್ದವು. ಆ ದಿನ ಸಾಯಂಕಾಲ ಅವನ ತಾಯಿ ಹಿತ್ತಲು ಜಗುಲಿಯ ಮೇಲೆ ಕುಳಿತು ನಲಿನಿಯ ತಲೆ ಬಾಚುತ್ತಿದ್ದಳು. ಮೂರ್ತಿ ಮರಹತ್ತಿ ಹೂ ಕೊಯ್ಯುತ್ತಿದ್ದ ನಲಿನಿಗಾಗಿ. ಪ್ರಭೆ ಮರದ ಕೆಳಗೆ ನಿಂತು ಪುಟ್ಟ ಕೈಗಳನ್ನು ಮೇಲೆ ಚಾಚಿ ಹೂ ಬೇಡುತ್ತಿದ್ದಳು. ಅವಳಿಗೆ ಮೂರ್ತಿ ಮೇಲಿಂದ ಒಂದು ಹೂ ಎಸೆದ. ಅದನ್ನು ಆಯ್ದುಕೊಂಡು ‘ನಲಿನಿಗೆ’ ಎಂದಳ ಪ್ರಭೆ. ‘ಅವಳೇ ಕೇಳಿದರೆ ಕೊಡುತ್ತೇನೆ’ ಎಂದ ಮೂರ್ತಿ. ಮೂರ್ತಿ ಅವಳನ್ನು ಆರು ದಿನಗಳಿಂದ ನೋಡುತ್ತಿದ್ದರೂ ಅವಳವನನ್ನು ನೋಡಿದ್ದು ಆ ದಿನ. ಅವನೊಡನೆ ಮಾತಾಡದೆ ನಾಲ್ಕೈದು ವರ್ಷಗಳಾಗಿವೆ. ಹಿಂದೆ ಅವಳೊಡನೆ ಆಡುತ್ತಿದ್ದ ಮೂರ್ತಿ ಈಗ ದೊಡ್ಡವನಾಗಿದ್ದಾನೆ. ಕಾಲೇಜಿನಲ್ಲಿ ಬಿ. ಎ. ಓದುತ್ತಿದ್ದಾನೆ. ಬಹಳ ನಾಚಿಕೆಯಾಯಿತು. ನಲಿನಿಗೆ ಮೂರ್ತಿಯ ಮಾತು ಕೇಳಿ. ಹೂಗಳ ಮೇಲೆ ಅವಳಿಗೆ ಬಲು ಪ್ರೀತಿಯಾದರೂ ‘ಮೂರ್ತಿಯೊಡನೆ ಕೇಳಲಾರೆ’ ಎಂದುಕೊಂಡಳು. ಆದರೆ ಅವನ ತಾಯಿ ‘ಅದೇಕೆ ನಲಿನಾ, ಕೇಳಬಾರದೇ! ಮೂರ್ತಿಯೊಡನೆಯೂ ಸಂಕೋಚವೇ’ ಎಂದಳು. ಮೂರ್ತಿಯು ಮಾತು ಕೇಳಿ ನಾಚಿಕೆಯಿಂದ ಬಗ್ಗಿದ್ದ ಮುಖವನ್ನು ಮತ್ತಷ್ಟು ಬಗ್ಗಿಸಿಕೊಂಡು ‘ಮೂರ್ತಿ, ನನಗೊಂದು ಹೂ’ ಎಂದಳು. ಅವಳು ಕೇಳಿದ್ದು ಒಂದು ಹೂ, ಆದರೆ ಮೂರ್ತಿ ಕೆಳಗಿಳಿದು ಬಂದು ಬುಟ್ಟಿಯಲ್ಲಿದ್ದ ಎಲ್ಲಾ ಹೂಗಳೂ ಸುರಿದುಬಿಟ್ಟ. ಅವಳ ತಲೆಯ ಮೇಲೆ. ನಾಚಿಕೆಯಿಂದ ನೆಲವನ್ನು ನೋಡುತ್ತಿದ್ದ ನಲಿನಿಯ ಕಣ್ಣುಗಳು ಕೃತಜ್ಞತೆಯ ಪುಟ್ಟ ನಗು ವೊಂದರೊಡನೆ ಮೂರ್ತಿಯ ಮುಖವನ್ನು ಮೆಲ್ಲನೊಂದು ಸಾರಿ ನೋಡಿ ರೆಪ್ಪೆಗಳ ಮರೆಯಲ್ಲಿ ಅಡಗಿಬಿಟ್ಟವು. ಮೂರ್ತಿಯ ತಾಯಿ ‘ನೋಡು; ಬಾಚಿದ ತಲೆ ಎಲ್ಲಾ ಹುಡುಗಾಟ ಮಾಡಿ ಕೆದರಿಬಿಟ್ಟೆ’ ಎಂದು ನಕ್ಕರು. ಚಿಕ್ಕ ಪ್ರಭೆ ‘ನನಗೆ ಮಾತ್ರ ಒಂದೇ ಹೂ-ನಲಿನಿಗೆ ತಂಬ’ ಎಂದು ಜಗಳವಾಡತೊಡಗಿದಳು.

ಮೂರ್ತಿಗೆ ಯಾರ ಮಾತುಗಳೂ ಕೇಳಿಸಲಿಲ್ಲ ನಲಿಯು ನಗುವಿನೊಡನೆ ನೋಡಿದ ನೋಟವು ಮಾತ್ರ ಅವನ ಕಣ್ಣಿದಿರಿನಲ್ಲಿ ನಲಿದಾಡುತ್ತಿತ್ತು.

-೪-
ಮೂರ್ತಿಯ ರಜ ತೀರಿಹೋಯಿತು. ಮರುದಿನ ಬೆಳಗಿನ ಎಂಟು ಗಂಟೆಯ ಬಸ್ಸಿನಲ್ಲಿ ಹೊರಡಬೇಕಾಗಿತ್ತು. ಹೊರಡುವ ಸನ್ನಾಹಗಳೆಲ್ಲವೂ ಪೂರೈಸಿದ್ದವು. ನಲಿನಿಯನ್ನು ನೋಡುವುದು ಮಾತ್ರ ಬಾಕಿ ಇತ್ತು. ಆದರವಳನ್ನು ನೋಡುವುದು ಹೇಗೆ ? ಅವಳು ಪಾತ್ರೆ ಬೆಳಗುವುದಕ್ಕೆ ಕೊಳದ ಹತ್ತಿರ ಬರುವ ಮೊದಲೇ ಬಸ್ಸು ಹೊರಟು ಹೋಗುತ್ತಿತ್ತು.

ಅವಳನ್ನು ನೋಡುವುದಕ್ಕೆಂದೇ ಅವರ ಮನೆಗೆ ಹೋಗುವುದು ಅಸಾಧ್ಯದ ಕೆಲಸ. ಪ್ರಭೆಯ ನೆವನದಿಂದ ಹೋಗುವುದೆಂದರೆ ಅವಳು ಬೆಳಗಿನಿಂದಲೂ ಇವನ ಮನೆಯಲ್ಲೇ ಇದ್ದಾಳೆ. ನಲಿನಿಯನ್ನು ನೋಡುವುದು ಸಾಧ್ಯವಿಲ್ಲ ಎಂದು ನಿಟ್ಟುಸಿರು ಬಿಟ್ಟು ತಂದೆ-ತಾಯಿಯವರಿಗೆ ನಮಸ್ಕರಿಸಿ ಮನೆಯ ಬಾಗಿಲಲ್ಲಿ ಬಂದು ನಿಂತ ಬಸ್ಸನ್ನು ಹತ್ತಿದ. ಮಗನನ್ನು ಕಳುಹಿಸುವಾಗ ತಾಯಿಗೆ ಬೇಸರವಾದರೂ ಮಗನ ಮುಖವನ್ನು ನಗುನಗುತ್ತಾ ನೋಡಿ ‘ದೇವರೇ, ನನ್ನ ಮಗುವನ್ನು ರಕ್ಷಿಸುವ ಭಾರ ನಿನ್ನದು’ ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡಳು.

ಬೆಂಗಳೂರು ತಲುಪಿ ಎರಡು ವಾರಗಳಾದ ತರುವಾಯ ಮೂರ್ತಿ ನಲಿನಿಯ ವಿಷಯವಾಗಿ ತಾಯಿಗೊಂದು ಕಾಗದ ಒರೆದ, ನಲಿನಿಯನ್ನು ತಾನು ಮದುವೆಯಾಗಬೇಕೆಂಬ ಬಯಕೆಯನ್ನು ಸೂಚಿಸಿ ಅವಳ ವಿಷಯವಾಗಿ ತನಗೆ ಬರೆಯಬೇಕೆಂದು ಬೇಡಿಕೊಂಡಿದ್ದ. ತಾಯಿಗೆ ಮಗನ ಮದುವೆ, ಅದರಲ್ಲೂ ನಲಿನಿ ಸೊಸೆಯಾಗುವಾಕೆ ಎಂದು ತಿಳಿದು ಸಂತೋಷವೇ ಆದರೂ ತನ್ನ ಗಂಡನು ಈ ಮದುವೆಯಾಗದಂತೆ ಮಾಡುವನೆಂದು ಅವಳಿಗೆ ಗೊತ್ತಿದ್ದುದರಿಂದ, ಮೂರ್ತಿಯು ಕಾಗದ ಓದಿ ಅವಳಿಗೆ ಸಂತೋಷಕ್ಕಿಂತ ಹೆಚ್ಚಾಗಿ ವ್ಯಸನವೇ ಉಂಟಾಯಿತು.

ನಲಿನಿಯ ಅಪರಾಧವಲ್ಲದಿದ್ದರೂ ಅವಳನ್ನು ತಿರಸ್ಕರಿಸುವುದಕ್ಕೆ ಮೂರ್ತಿಯ ತಂದೆಗಿದ್ದ ಕಾರಣವು ಬಹಳ ಬಲವಾದುದೇ ಆಗಿತ್ತು. ಅವಳ ತಾಯಿಯ ಆತ್ಮಹತ್ಯಕ್ಕೆ ಜನರಿಗೆ ಗೊತ್ತಿಲ್ಲದಿದ್ದರೂ ತಾನೇ ಕಾರಣನೆಂದು ಅವನ ಮನಸ್ಸಿಗೆ ಗೊತ್ತಿತ್ತು. ಮೂರ್ತಿಗಾಗಲೀ ಅವನ ತಾಯಿಗಾಗಲೀ ಈ ವಿಷಯ ತಿಳಿಯದು. ಆದರೂ ಇಬ್ಬರಿಗೂ ಗೊತ್ತು, ನಲಿನಿಯನ್ನು ಸೊಸೆಮಾಡಿಕೊಳ್ಳುವುದಕ್ಕೆ ಅವನು ವಿರೋಧಿಸುವನೆಂದು. ಮಗನಿಗೆ ಬರೆಯುವಾಗ ತಾಯಿ ನಲಿನಿಯ ವಿಷಯವೆಲ್ಲವನ್ನೂ ಬರೆಯುವಳು. ಅವಳು ಸೊಸೆಯಾದರೆ ತನ್ನ ಸಂತೋಷಕ್ಕೆ ಮಿತಿಯಿರಲಾರದು ಎಂದುಕೊಳ್ಳುವಳು. ಗಂಡನನ್ನು ಯೋಚಿಸುವಾಗ ಮಾತ್ರ ಅವಳ ಆಸೆ ಎಲ್ಲಾ ನಿರಾಶೆಯಾಗುವುದು.

ದಿನಗಳೊಂದೊಂದಾಗಿ ಕಳೆದವು. ಮೂರ್ತಿ ಮಾತ್ರ ನಿರಾಶೆಗೆಡೆ ಗೊಡದೆ ಉತ್ಸಾಹದಿಂದ ಆನಂದದಿಂದ ಓದತೊಡಗಿದ; ಓದಿ ಪಾಸಾಗಿ ಕೆಲಸ ಸಂಪಾದಿಸಿ ತಾಯಿಯನ್ನು ತಂದೆಯ ಕ್ರೂರತನದಿಂದ ಪಾರು ಮಾಡುವುದಕ್ಕಾಗಿ-ನಲಿನಿಯನ್ನು ಮದುವೆಯಾಗುವುದಕ್ಕಾಗಿ.

ಕೊನೆಗೆ ಪರೀಕ್ಷೆಯ ದಿನವೂ ಬಂತು. ಚೆನ್ನಾಗಿ ಓದಿದ್ದ ಮೂರ್ತಿಗೆ ಕಷ್ಟವಾಗಲಿಲ್ಲ. ಚೆನ್ನಾಗಿಯೇ ಮಾಡಿದ. ಪರೀಕ್ಷೆ ಮುಗಿದು ರಜ ಸಿಕ್ಕುವುದೇ ತಡ-ಹೊರಟು ಬಿಟ್ಟ ಊರಿಗೆ. ಎಂದಿನಂತೆ ತಾಯಿಯನ್ನು ಮಾತ್ರ ನೋಡುವ ಉತ್ಸಾಹದಿಂದಲ್ಲ-ನಲಿನಿಯನ್ನೂ ಕಾಣಬಹುದೆಂಬ ಆತುರದಿಂದ.

ತಂದೆಗೆ ಮಗ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರುವನೆಂದು ಸ್ವಲ್ಪ ಸಮಾಧಾನವಾಗಿತ್ತು. ಅವನ ದುರುಗುಟ್ಟುವ ಕಣ್ಣುಗಳಲ್ಲಿ ಮೂರ್ತಿಯನ್ನು ನೋಡುವಾಗ ಮಳೆಗಾಲದ ಬಿಸಿಲಿನಂತೆ ಪ್ರೇಮದ ಸುಳಿಯೊಂದು ಸುಳಿದು ಮಾಯವಾಗುತ್ತಿತ್ತು. ಅವನ ತಾಯಿಯ ಮೇಲೂ ಕೋಪ ಕಡಿಮೆಯಾಗಿತ್ತು. ತಂದೆಯ ಮನಸ್ಸು ಸಮಾಧಾನ, ಶಾಂತತೆ ತಾಳಿರುವುದನ್ನು ನೋಡಿ ಮೂರ್ತಿ ನಲಿನಿಯ ಸುದ್ದಿ ಎತ್ತಲು ಸುಸಮಯವನ್ನು ಕಾಯುತ್ತಿದ್ದ.

ಮೂರ್ತಿ ಊರಿಗೆ ಬಂದು ನಾಲ್ಕು ದಿನಗಳಾಗಿದ್ದವು. ಆ ದಿನ ಮಧ್ಯಾಹ್ನ ಊಟಮಾಡಿ ಕೈತೊಳೆಯುವುದಕ್ಕೆ ಬಚ್ಚಲಮನೆಗೆ ಹೋಗಿ ಹಿಂತಿರುಗುತ್ತಿದ್ದ. ಅಂಗಳವನ್ನು ದಾಟಿಕೊಂಡು ಹೋಗಬೇಕು ಬಚ್ಚಲಿಗೆ. ಅಂಗಳಕ್ಕೆ ಬರುವಾಗ ಬೇಲಿಯ ಹತ್ತಿರ ನಿಂತು ಪ್ರಭೆ ‘ಮೂತೀ’ ಎಂದಳು. ಮೂರ್ತಿ ಹತ್ತಿರಹೋಗಿ ಪ್ರಭೆಯನ್ನು ಎತ್ತಿ ಬೇಲಿ ದಾಟಿಸಿದ. ಅವಳೂ ಊಟಮಾಡಿ ಬಂದವಳು, ಕೈ ತೊಳೆದೇ ಇರಲಿಲ್ಲ. ‘ನಲಿನಾ ಕೈ ತೊಳ್ಸೋಕ್ಕೆ ಬತ್ತಾಳೆ. ಇಲ್ಲಿ ಅಡ್ಕೊತೀನಿ, ಮಾತಾ ಬೇಡ’ ಎಂದು ಅಲ್ಲೇ ಕೂತುಬಿಟ್ಟಳು. ನಲಿನಿಯ ಹೆಸರು ಕೇಳಿದ ಕೂಡಲೆ ಮೂರ್ತಿ ತಾನೂ ಅಲ್ಲೇ ನಿಂತುಬಿಟ್ಟ. ನಾಲೈದು ನಿಮಿಷ-ಮೂರ್ತಿಗೆ ನಾಲೈದು ಗಂಟೆಗಳ ತರುವಾಯ ನಲಿಸಿ ಚಂಬಿನಲ್ಲಿ ನೀರನ್ನು ತೆಗೆದು ಕೊಂಡು ಬಂದು ‘ಪ್ರಭಾ’ ಎಂದು ಕೂಗಿದಳು. ಪ್ರಭೆ ಮಾತಾಡಲಿಲ್ಲ. ಮೆಲ್ಲಮೆಲ್ಲನೆ ಹಿಂದಕ್ಕೆ ಸರಿದು ಅವಳಿಗೆ ಕಾಣದಂತೆಯೇ ಮೂರ್ತಿಯ ಮನೆಯೊಳಗೆ ನುಗ್ಗಿ ಬಿಟ್ಟಳು. ಪ್ರಭೆಯನ್ನು ಕಾಣದೆ ನಲಿನಿ ಬೇಲಿಯ ಹತ್ತಿರ ಬಂದಳು. ಮೂರ್ತಿ ನಿಂತಿದ್ದಾನೆ! ನೋಡಿ ನಾಚಿಕೆಯಿಂದವಳ ಮುಖವು ಕೆಂಪಾಗಿಹೋಯಿತು. ಹಿಂತಿರುಗತೊಡಗಿದಳು. ಮೂರ್ತಿ ‘ನಲಿನಾ ಓಡೋದೇಕೆ; ನಾನೇನು ಹುಲಿಯೆ?’ ಎಂದ. ‘ಪ್ರಭೆ ಕೈ ತೊಳಸ್ಬೇಕು. ಎಲ್ಲೋ ಅಡಗಿಕೊಂಡಿದ್ದಾಳೆ’ ಎಂದುಕೊಂಡು ಒಂದು ಹೆಜ್ಜೆ ಮುಂದಿಟ್ಟಳು. ‘ಪ್ರಭೆ ನಮ್ಮನೇಲಿದ್ದಾಳೆ. ಒಂದು ನಿಮಿಷ ನಿಲ್ಲು ನಲಿನಾ’ ಎಂದ ಮೂರ್ತಿ ಅತಿ ದೈನ್ಯವಾಗಿ, ನಲಿಸಿ ಹಿಂತಿರುಗಿ ‘ಕೆಲಸವಿದೆ ಏನು?’ ಎಂದಳು.

‘ಏನು ನಲಿನಾ, ಇಷ್ಟೊಂದು ನಾಚಿಕೆ ನನ್ನೊಡನೆ! ಗುರುತೇ ಇಲ್ಲವೇ ನನ್ನದು? ನನ್ನೊಡನೆ ಜಗಳಾಡುತ್ತಿದ್ದುದೆಲ್ಲಾ ಮರೆತು ಹೊಯಿತೆ?’ ಎಂದ ಮೂರ್ತಿ.

‘ಆಗ ನಾವು ಚಿಕ್ಕೊರಾಗಿದ್ದೆವು; ಆಗಿನ ಮಾತೇಕೆ ಈಗ-’ ನಲಿನಿ ಉತ್ತರವಿತ್ತು ಹಿಂತಿರುಗಲನುವಾದಳು.

‘ಸ್ವಲ್ಪ ತಡೆ ನಲಿನಾ-ಎಷ್ಟೊಂದು ಅವಸರ-ಆಗ ಚಿಕ್ಕವಳಾಗಿದ್ದೆ. ಹಳೆಯ ಸ್ನೇಹಿತನೊಡನೆ ಎರಡು ಮಾತೂ ಆಡಬಾರದಷ್ಟು ದೊಡ್ಡ ಮನುಷ್ಯಳಾಗಿ ಬಿಟ್ಟಿದ್ದೀಯಾ ಈಗ?’

‘ಹಾಗಲ್ಲ ಮೂರ್ತಿ, ನಾನಂದದ್ದು ಹಾಗಲ್ಲ.’

‘ಮಾತ್ಹೇಗೆ ನಲಿನಾ?’

ಒಳಗಿನಿಂದ ‘ನಲಿನಾ-ನಲಿನಾ-ನಲಿನಾ’ ಎಂದು ಅವಳ ಚಿಕ್ಕಮ್ಮ ಕೂಗಿದರು.

‘ಕೂಗುತ್ತಾರೆ, ಕೆಲಸವಿದೆ, ಹೋಗಬೇಕು.’

ನಲಿನಿ ಮೂರ್ತಿ ಮುರುಮಾತೆತ್ತುವುದರೊಳಗೆ ಓಡಿ ಬಿಟ್ಟಳು.

ನಲಿನಿ ಮಾಯವಾದೊಡನೆ ಮೂರ್ತಿಯ ಮುಖ ಮೋಡ ಮುಸುಕಿದ ಚಂದ್ರನಂತಾಯಿತು.

ಕೂಗುತ್ತಾರೆ! ಕೆಲಸವಿದೆ !! ಹೋಗಬೇಕು !!

ನಲಿನ-ತನ್ನ ನಲಿನ ಬೇರೆಯವರ ಒಂದು ಕೂಗಿಗೆ ಓಡಬೇಕು! ಹೃದಯವು ಹಾತೊರೆಯುತ್ತಿದ್ದರೂ ತನಗವಳನ್ನು ಹತ್ತಿರ ನಿಲ್ಲಿಸಿ ಕೊಳ್ಳುವ ಅಧಿಕಾರವಿಲ್ಲ….

ತಂದೆಯೊಡನೆ ಮಾತಾಡಿ ಆ ಅಧಿಕಾರವನ್ನು ಪಡೆಯುವುದಕ್ಕೆ ಶಕ್ತನಾಗಲೇಬೇಕೆಂದು ನಿರ್ಧರಿಸಿ ಒಳಗೆ ಹೋದ. ತಾಯಿ, ಊಟಮಾಡುತ್ತಿದ್ದಳು. ಹತ್ತಿರವೇ ಪ್ರಭೆ ಕೂತು ಏನೇನೋ ಮಾತಾಡುತ್ತಿದ್ದಳು. ಎಂದಿನಂತೆ ತಾಯ ಹತ್ತಿರ ಕೂತು ಮಾತಿಗಾರಂಭಿಸದೆ ನಡುಮನೆಗೆ ಹೋದ. ಅವನ ತಂದೆ ಪೇಪರ್ ಓದುತ್ತಾ ಕೂತಿದ್ದರು. ಮಗನನ್ನು
ಕಂಡು ಪೇಪರ್ ಮೇಜಿನ ಮೇಲಿರಿಸಿ ಆಶ್ಚರ್ಯದಿಂದ ಅವನ ಮುಖ ನೋಡಿದರು. ಏಕೆಂದರೆ ಯಾವಾಗಲೂ ಮೂರ್ತಿ ತಂದೆಯನ್ನು ಹುಡುಕಿ ಕೊಂಡು ಹೋಗುವುದು ವಾಡಿಕೆಯಾಗಿರಲಿಲ್ಲ. ತಂದೆಯ ಇದಿರು ಧೈರ್ಯವಾಗಿ ನಿಂತು ಮಾತಾಡುವುದು ಮೂರ್ತಿಯ ಜೀವನದಲ್ಲಿ ಇದೇ ಮೊದಲನೆಯ ಸಲ. ಮೂರ್ತಿಯ ಮಾತುಗಳನ್ನು ಕೇಳಿ ಮೊದಲವನ ತಂದೆ ವಿಸ್ಮಯದಿಂದ ಕಲ್ಲಿನ ಪ್ರತಿಮೆಯಂತೆ ಕುಳಿತಿದ್ದನು. ಕೊನೆಗೆ ಅವನ ಮಾತುಗಳ ಅರ್ಥವು ಸರಿಯಾಗಿ ತಿಳಿದ ಮೇಲೆ ಕಠಿಣ ಸ್ವರದಿಂದ ಒಂದೇ ಒಂದು ಶಬ್ಬದಲ್ಲಿ ಪ್ರತ್ಯುತ್ತರವಿತ್ತನು: –

‘ಆಗದು.’

ಮೂರ್ತಿ ಈ ಉತ್ತರವನ್ನು ಮೊದಲೇ ನಿರೀಕ್ಷಿಸುತ್ತಿದ್ದ. ಆದುದರಿಂದ ಅಪ್ರತಿಭನಾಗಲಿಲ್ಲ. ಧೈರ್ಯದಿಂದ ದೃಢವಾಗಿ ಹೇಳಿದೆ: ‘ನಾನು ಅವಳನ್ನೇ ಮದುವೆಯಾಗುತ್ತೇನೆ. ನಿಮ್ಮ ಇಚ್ಛೆಗೆ ವಿರೋಧವಾಗಿ ನಡೆಯುವುದಕ್ಕೆ ಕ್ಷಮಿಸಿ.’

-೬-
ಮೂರ್ತಿ ಯೂನಿವರ್ಸಿಟಿಯಲ್ಲಿ ಮೊದಲನೆಯವನಾಗಿ ಪಾಸಾದ. ಪಾಸಾದದೊಂದೇ ಅಲ್ಲ-ಐಶ್ವರ್ಯವಂತನಾದ ಜಮೀನ್ದಾರನೊಬ್ಬನಲ್ಲಿ ಪ್ರವೇಟ್ ಟ್ಯೂಟರ್ ಕೆಲಸವೂ ಸಿಕ್ಕಿತು. ಅವನ ಪ್ರೊಫೆಸರುಗಳ ಶಿಫಾರಸು ಹಾಗೂ ಅವನ ಯೋಗ್ಯತೆಯ ಫಲವಾಗಿ ಸಂಬಳವೂ ಕಡಿಮೆಯಾಗಿರಲಿಲ್ಲ. ಬಹಳ ದಿನಗಳ ಬಯಕೆ ಕೈಗೂಡಿ ಮೂರ್ತಿ ಸ್ವತಂತ್ರನಾದ. ತಾಯಿಯನ್ನು ತನ್ನೊಡನೆ ಇರಿಸಿಕೊಂಡು ನಲಿನಿಯನ್ನು ಮದುವೆ ಯಾಗುವದೊಂದು ಬಾಕಿ.

ಆದರೆ ಎಲ್ಲಾ ಬಯಕೆಗಳೂ ಯಾರಿಗೂ ಪೂರ್ತಿಯಾಗುವಂತಿಲ್ಲ. ಆ ವರ್ಷ ಅವನ ತಾಯಿ ವಿಷಮಶೀತಜ್ವರದಿಂದ ಮಗನ ತೊಡೆಯ ಮೇಲೆ ತಲೆಯಿಟ್ಟುಕೊಂಡು – ನಲಿನಿಯನ್ನು ಮದುವೆಯಾಗಿ ಸುಖವಾಗಿಬಾಳು ನನ್ನ ಕಂದಾ’ ಎಂದಾಶೀರ್ವಾದಮಾಡಿ ಪರಲೋಕಯಾತ್ರೆ ಮಾಡಿದಳು.

ಮೂರ್ತಿಯ ಆಶೆಯ ಗೋಪುರ ಮುರಿದುಬಿತ್ತು. ಅವನ ಜೀವನದ ಧ್ರುವತಾರೆ ಅದೃಶ್ಯವಾಯಿತು. ಅವನ ಸುಖ-ದುಃಖ, ಆನಂದ ಉತ್ಸಾಹಗಳಲ್ಲಿ ಅಂದಿನವರೆಗೆ ಭಾಗಿಯಾಗಿದ್ದು ಅವನ ಮೇಲೆ ಪ್ರೇಮದ ಮಳೆಯನ್ನು ಸುರಿಸುತ್ತಿದ್ದ ತಾಯಿ ಇಲ್ಲವಾದಳು. ಜೀವನವು ಸುಖ ಸಂತೋಷಮಯವೆಂದಿದ್ದ ಮೂರ್ತಿಗೆ ಅದು ಸಾರರಹಿತವೆನಿಸಿತು.

ತಂದೆಯಂತೂ ನಲಿನಿಯ ವಿಷಯದಲ್ಲಿ ಮಗನಿಗಿದ್ದ ಭಾವನೆಯನ್ನು ತಿಳಿದಂದಿನಿಂದ ಅವನೊಡನೆ ಮಾತೇ ಆಡುತ್ತಿರಲಿಲ್ಲ. ಇನ್ನುಳಿದವರಾರು! ನಲಿನಿ-ನಲಿನಿ-ನಲಿನಿ! ಅವಳಿಲ್ಲದೆ ಬದುಕುವುದು ಅಸಾಧ್ಯ.

ಒಂದು ವರ್ಷದ ತರುವಾಯ ತಂದೆಯ ಇಚ್ಛೆಗೆ ವಿರೋಧವಾಗಿ, ಮೂರ್ತಿ ನಲಿನಿಯನ್ನು ಮದುವೆಯಾದ. ಧಾರೆಯಾದುದೊಂದೇ ತಡ. ಅವಳ ಎರಡು ಕೈಗಳನ್ನ ಹಿಡಿದುಕೊಂಡು ಅವಳ ಕಣ್ಣುಗಳನ್ನೆ ನೋಡಿ ನಗುನಗುತ್ತಾ ಮೂರ್ತಿ ಕೇಳಿದ: ‘ನಲಿನಾ, ನನ್ನ ನಲಿನಾ, ಇನ್ನು ‘ಕೂಗುತ್ತಾರೆ, ಕೆಲಸವಿದೆ, ಹೋಗಬೇಕು’ ಎಂದು ಓಡ ಬೇಕಾದುದಿಲ್ಲವಲ್ಲ. ಎಷ್ಟು ಹೊತ್ತು ಬೇಕೆಂದರೆ ಅಷ್ಟು ಹೊತ್ತು ಮಾತಾಡುವ ಅಧಿಕಾರವೀಗ ನನಗೆ ಬಂತಲ್ಲ.’

ಪ್ರೇಮಾಶ್ರುಗಳನ್ನು ಸುರಿಸುತ್ತಾ ನಲಿನಿ ಕೋಮಲ ಸ್ವರದಲ್ಲಿ ಪ್ರತ್ಯುತ್ತರವಿತ್ತಳು- ‘ನನ್ನ ದೇವರೇ, ನಿನ್ನ ದಯೆ.’

ಆ ದಿನ ರಾತ್ರಿ ನಲಿನಿಯ ಬೇಡಿಕೆಯನುಸಾರ ಮೂರ್ತಿ ಬರೆದ ಕ್ಷಮಾಯಾಚನೆಯ ಪತ್ರವನ್ನೋದುತ್ತಾ ಅವನ ತಂದೆ ‘ನನ್ನ ಪಾಪದ ಪ್ರಾಯಶ್ಚಿತ್ತವಿದು’ ಎಂದು ನಿಟ್ಟುಸಿರು ಬಿಟ್ಟರು. ಮರುದಿನ ಹಾಸಿಗೆಯಿಂದೇಳುವಾಗ ದಿಂಬೆಲ್ಲಾ ಪಶ್ಚಾತ್ತಾಪದ ಕಣ್ಣೀರಿನಿಂದ ತೋಯು ಒದ್ದೆಯಾಗಿಹೋಗಿತ್ತು.
*****
ಜನವರಿ ೧೯೫೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶಸ್ತಿ
Next post ಮಾತಿಲ್ಲದ ಕವಿತೆ

ಸಣ್ಣ ಕತೆ

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys