ಒಬ್ಬ ಕರಿಯನ ಕಥೆ

ಒಬ್ಬ ಕರಿಯನ ಕಥೆ

“ಅಲ್ಕಾ ಮುಂಡೇ…. ಅಂಗ್ಯಾಗಿದ್ದಿದ್ ಒಂದ್ ರೂಪಾಯ್ನೇನೇ ಮಾಡ್ದೇ?”

ಪ್ರತಿದಿನದ ಮಾಮೂಲಿ ಉವಾಚಗಳಲ್ಲಿ ಇದು ಕಡಿಮೆ ಶಕ್ತಿಯದು. ಇಂತಹ ಬೈಗುಳಗಳನ್ನು ಆಕೆ ಎಂದೂ ತಲೆಗೆ ಹಾಕಿಕೊಂಡವಳೇ ಅಲ್ಲ, ಮೇಲಾಗಿ ಅವು ‘ಬೈಗುಳ’ಗಳು ಎಂದು ಎಂದೂ ಅನಿಸಿಯೇ ಇಲ್ಲ. ದಿನನಿತ್ಯದ ಅವಶ್ಯಕ ಹಾಗೂ ಅನಿವಾರ್ಯ ಪದಗಳು.

ಕರಿಯ ಗದ್ದೆಯಲ್ಲಿ ಗೇದು ಬಂದಿದ್ದವನು. ಮಳೆ ಉಯ್ದು ನಾಲ್ಕೈದು ದಿನಗಳಾಗಿದ್ದುದರಿಂದ ಭೂಮಿಗೆ ಗಡಸುತನ ಬಂದು ಅವನ ಗಂಡಸುತನದ ಪರಾಕಾಷ್ಠೆಯನ್ನು ಕೆಣಕಿತ್ತು. ಹಿಡಿದು ಹಿಡಿದು ಬಿಡುತ್ತಿದ್ದ ನೇಗಿಲಿನ ಕ್ರಿಯೆಯಿಂದ ಆಳವಾಗಿ ಹರಿಯಬೇಕೆಂಬ ಕಾರಣಕ್ಕೆ ಅದನ್ನು ಒತ್ತಿ ಒತ್ತಿ ಹಿಡಿಯುತ್ತಿದ್ದುದರಿಂದ, ಕಬ್ಬಿಣದ ಹಿಡಿಯ ಪ್ರಭಾವದಿಂದಾಗಿ ಅಂಗೈಗಳು ಸವೆದು ಜಡ್ಡುಗಟ್ಟಿ ಹೋಗಿದ್ದವು. ಎಷ್ಟರ ಮಟ್ಟಿಗೆ ಎಂದರೆ ಆತನ ಕರಿ ಅಂಗೈಯಲ್ಲಿ ಭವಿಷ್ಯ ನೋಡಲೂ ಒಂದೆರಡು ಗೆರೆಗಳೂ ಕಾಣಿಸುತ್ತಿರಲಿಲ್ಲ.

ಕರಿಯ, ಇದು, ಬಿಸಿಲಿಗೆ ಅವನ ಮಿರಿ ಮಿರಿ ಮಿಂಚುವ ಚರ್ಮದ ಕಲರಿಗೆ ಮನಸೋತು ಯಾರೋ ಇಟ್ಟ ಅಡ್ಡ ಹೆಸರು. ನಿಜ ಹೆಸರು ‘ಕೃಷ್ಣ’ ಎಂದು.

ಕರಿಯ ಆ ವರ್ಷದಲ್ಲಿ ಮೊದಲ ಬಾರಿಗೆ ಪಟ್ಟಣಕ್ಕೆ ಹೊರಟಿದ್ದ. ಆದ್ದರಿಂದ ಅನಿವಾರ್ಯ ವಾಗಿ ಅಂಗಿಯ ಜೇಬು ನೋಡಿಕೊಂಡಿದ್ದ. ಆ ಅಂಗಿಯನ್ನು ತೆಗೆದು ಹಾಕಿದ್ದು ಮೂರು ತಿಂಗಳ ಹಿಂದೆ ಕಡೆಯ ಸಾರಿಗೆ ಸಿನಿಮಾ ನೋಡಲು ಹೋಗಿದ್ದಾಗ, ಪಟ್ಟಣದಲ್ಲಿ ಸಿನೆಮಾ ಇರುವುದೊಂದನ್ನು ಬಿಟ್ಟರೆ ಬೇರೆ ಏನೇನಿದೆ ಎಂಬುದು ಬಹುಶಃ ಅವನಿಗೆ ತಿಳಿದಿರಲಿಕ್ಕಿಲ್ಲ.

ಮುಂಗಾರು ಮಳೆ ಅಪ್ಪಿತಪ್ಪಿ ಒಂದೆರಡು ತಿಂಗಳು ಮೊದಲೇ ತನ್ನ ಇರುವನ್ನು ತೋರಿಸಿದ್ದು, ಅದಕ್ಕೆ ಸ್ಪಂದಿಸಿ ಕರಿಯ ನೇಗಿಲು ಕಟ್ಟಿದ್ದು, ಆ ಮಳೆ ಬಂದಷ್ಟೇ ಅನಿಶ್ಚಿತ ಅಥವಾ ಕಾಕತಾಳೀಯ. “ಮಾಡಿ ಯಾರ್ ಉದ್ದಾರ ಆಗಿದ್ದಾರೆ ತಗೋ” ಅಥವಾ “ಯಾ ದೇಸ ಆಳಕ್ಕೆ ಮಾಡ್ಬೇಕು ತಗೋ” ಎನ್ನುವ ಅವನ ಮನೋಭಾವಕ್ಕೆ ಅವನ ತಂದೆತಾಯಿಯರ ಬೈಗುಳ ಅಥವಾ ಒತ್ತಾಯದ ಮಾತುಗಳು ಯಾವ ರೀತಿ ಕೆಲಸ ಮಾಡಿದ್ದವು ಎಂದು ಹೇಳಲು
ಬಾರದು.

ಅಂದ ಮಾತ್ರಕ್ಕೇ ಅವನು ಸೋಮಾರಿಯಂದೇನೂ ಅಲ್ಲ. ಮನಸ್ಸು ಮಾಡಿ ಕೆಲಸಕ್ಕೆ ನಿಂತರೆ `ಸುತ್ತಮುತ್ತಲ ಮೂರು ಹಳ್ಳಿಲಿ ಯಾರೂ ಹಿಂದೆ ಹಾಕಲಾರರು’ ಎಂದು ಅವನ ತಂದೆ ತಾಯಿಯರೇ ಹೇಳುತ್ತಾರೆ. ಆದರೆ ಆ ಮನಸ್ಸು ಮಾಡುವುದೇ ತೀರಾ ಅಪರೂಪ. ಊರವರ ಯಾವ ಕೆಲಸವೂ ತನಗೆ ಕಷ್ಟ ಎಂದು ಅನಿಸಿಯೇ ಇಲ್ಲ ಎಂಬಂತೆ ಮಾತನಾಡುತ್ತಾನೆ. ವಾಸ್ತವವಾಗಿ ಅವನ ಗಂಡಸುತನದ ಅರಿವಿದ್ದುದು ಆತನ ಮೊದಲ ಹೆಂಡತಿ ನಾಗಮ್ಮನಿಗೆ ಮಾತ್ರಾ ಇದ್ದಿರಬೇಕು. ಉತ್ತರನಂತ ಪೌರುಷವಂತ. ಅದಕ್ಕೆಂದೇ ಆಕೆ ‘ಗಂಡಸು’ ಎಂದೇ ಸಂಬೋಧಿಸುತ್ತಿದ್ದಳು- ಇರುವಷ್ಟೂ ದಿವಸ.

ತನ್ನ ಎರಡನೇ ಹೆಂಡತಿ ರಾಧಿ ತನ್ನ ಮಾತಿಗೆ ಪ್ರತಿಕ್ರಿಯಿಸದೇ ಇದ್ದುದರಿಂದ ಕರಿಯನಿಗೆ ತಡೆಯಲಾರದ ಸಿಟ್ಟು ಬಂದಿತು. ಇನ್ನೇನು ಆಂ, ಊಂ ಅನ್ನುವ ಹೊತ್ತಿಗೆ ಪಟ್ಟಣಕ್ಕೆ ಹೋಗುವ ಡೈರಿ ಲಾರಿ ಬಂದು ಬಿಡುತ್ತದೆ ಎಂಬ ಆತಂಕ ಅವನಿಗೆ. ಅಲ್ಲದೇ ಸಿನೆಮಾ ನೋಡಲೇಬೇಕೆಂಬ ತನ್ನ ಆಸೆಗೆಲ್ಲಿ ಕುತ್ತು ಬರುವುದೋ ಎಂಬ ವ್ಯಥೆ.

“ಕಂತ್ರೀ ಮುಂಡೇ…. ಆ ಒಂದ್ರೂಪಾಯಿ ಕದ್ಗಂಡು ಯಾವ್ ನಿನ್ ಮಿಂಡುಂಗೇ ಕೊಟ್ಟೆ? ಬಾಳ ದಿನ ಆಗೋಯ್ತು, ಮರ್ತು ಬುಟ್ಟೌನೆ ಅಂದ್ಕಂಡಿದ್ದಾ?”

ಆಗಲೇ ರಾಧಿಗೆ ಅರಿವಾಗಿತ್ತು. ಇನ್ನು ಒಂದು ಎರಡು ಅನ್ನುವುದರೊಳಗೇ ಹೊಡೆತ ಬೀಳಲು ಪ್ರಾರಂಭವಾಗುತ್ತದೆಯೆಂದು. ಅವನಿಗೆ `ಗೊತ್ತಿಲ್ಲ’ ಎಂದು ಉತ್ತರಿಸುವ ಅಥವಾ ಅದು ನೋಟೋ, ದಮ್ಮಡೀನೋ ಎಂದು ವಿಚಾರಿಸುವ, ಇಲ್ಲವೇ ಬೇರೆ ಅಂಗಿಯಲ್ಲಿದೆಯೇನೋ ಎಂದು ಪರೀಕ್ಷಿಸಿ ನೋಡುವ ಅವಕಾಶವಾಗಲೀ ಇರಲಿಲ್ಲ. ಕರಿಯನಿಗೆ ತಾಳ್ಮೆಯೂ ಇರಲಿಲ್ಲ. ತಾನು ಅಂಗಿ ಒಗೆಯಲು ಅವನಿಗೆ ಗೊತ್ತಿಲ್ಲದಂತೆ ತೆಗೆದುಕೊಂಡು ಹೋಗಿದ್ದಾಗ ನೋಟಾಗಿದ್ದರೆ ನೆನೆದು ಹಿಂಡಿದಾಗ ಹರಿದು ಹೋಗಿರಬಹುದೋ ಅಥವಾ ದಮ್ಮಡಿಯಾಗಿದ್ದರೆ ನೀರಿನೊಳಗೆ ಜಾರಿರಬಹುದೋ ಎಂದು ಯೋಚಿಸುತ್ತಾ ಹೆದರಿಕೆಯಿಂದ ಕಣ್ಣಲ್ಲಿ ನೀರಿಳಿಸಲು ಸಿದ್ಧಳಾಗಲು ಹತ್ತಿದಳು.

ಆಕೆಗೆ ಹಣ ಹೇಗೆ ಕಳೆದು ಹೋಗಿರಬಹುದೆಂದು ಹೇಳುವ ಧೈರ್ಯ ಮತ್ತು ಅಧಿಕಾರ ಇರಲಿಲ್ಲ. ಅಷ್ಟೇ ಏಕೆ? ಅವನು ಕಂಡಂತೆ ಅವನ ಬಟ್ಟೆಗಳನ್ನು ಒಗೆಯುವುದು ಇರಲಿ, ಮುಟ್ಟುವುದಕ್ಕೂ ಸ್ವಾತಂತ್ರ್ಯ ಇರಲಿಲ್ಲ. ಅವನ ಪಾಲಿಗೆ ಅವಳು ಮಾದರಗಿತ್ತಿ, ತನ್ನ ಮನೆಯ ಸಗಣಿ ಗಂಜಲ ಗುಡಿಸಲು ಇರಿಸಿಕೊಂಡ ಆಳು. ಬಾಗಿಲಲ್ಲ ಕುಳಿತು ಉಣ್ಣುವುದೇ ಅವಳ ಪಾಲಿನ ಸೌಖ್ಯ- ಅದೂ ಅಲ್ಯುಮಿನಿಯಂ ತಟ್ಟೆಯಲ್ಲಿ, ಆ ಮನೆಯಲ್ಲಿ ಮುಟ್ಟಾದವರಿಗೂ ಸಹ ರಾಧಿ ಇರುತ್ತಿದ್ದ ಕೋಣೆಗಿಂತ ಒಂದು ಹೆಚ್ಚಿನ ಹೊಸಲನ್ನು ದಾಟಲು ಅವಕಾಶವಿತ್ತು.

ಆಕೆ ಆ ಮನೆಯ ಅಡಿಗೆ ಮನೆಯನ್ನು ನೋಡಿದ್ದು ಅಥವಾ ಯಾರ ಹಂಗೂ ಇಲ್ಲದೇ ತಿರುಗಾಡುತ್ತಿದ್ದುದು ಅವಳ ಮದುವೆಗೆ ಮೊದಲು ಮತ್ತು ಮದುವೆಯಾದ ಹೊಸ ಬಿಸಿಯಲ್ಲಿ.
ಅನೇಕ ದಿನಗಳಿಂದ ಅಡಿಗೆ ಮಾಡುವ ಸೌಭಾಗ್ಯ ಕಳೆದುಕೊಂಡು ಅಡಿಗೆ ಮಾಡುವ ರೀತಿಯನ್ನೇ ಮರತುಬಿಟ್ಟಿದ್ದಾಳೋ ಏನೋ? ಈಗ ಅವಳಿಗೆ ಅಡಿಗೆ ಪಾತ್ರೆಗಳನ್ನು ತೊಳೆದು ತನ್ನ ಅತ್ತೆಗೆ (ಮದುವೆಗೆ ಮೊದಲು ಅಜ್ಜಿಯಾಗಿದ್ದವರು) ಸಹಾಯ ಮಾಡುವಂತೆಯೂ ಇಲ್ಲ. ಏಕೆಂದರೆ ಅವನ್ನು ಮುಟ್ಟಲು ಅವಳು ಕುಲಗೆಟ್ಟಿದ್ದಾಳೆ ಎಂಬುದು ಕರಿಯನ ವಾದ. ತನ್ನ ಹೆಂಡತಿ ಸುಖವಾಗಿರಲಿ ಎಂದು ಇಂಗೆಲ್ಲಾ ಮಾಡುತ್ತಿರುವನೆಂದು ಸುತ್ತಮುತ್ತಲಿನವರು ಆಡಿ ಕೊಳ್ಳುತ್ತಿದ್ದರು.

ತಾನು ಬೇಸಾಯಕ್ಕೆಂದು ಹೋದಾಗ ತನ್ನ ಅವ್ವ ಮರೆಮಾಚಿ ಅವಳನ್ನು ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಅಥವಾ ಅಡಿಗೆ ಮಾಡಲು ಬಿಡುತ್ತಿದ್ದಾಳೆ ಎಂಬುದು ಕರಿಯನ ಸಂಶಯ. ಕಾರಣ ಅವ್ವನಿಗೆ ಆಗಲೇ ಸೊಂಟ ಬಾಗುವ ವಯಸ್ಸು, ಗದ್ದೆಯಿಂದ ಮನೆಗೆ ಕೇವಲ ಅರ್ಧಮೈಲಿಯಷ್ಟು ದೂರ ನಡೆಯಲೂ ಮೂರು ನಾಲ್ಕು ಸಲ ಕುಳಿತು ಎದ್ದು ಬರುವ ಆಕೆ ಇಷ್ಟೆಲ್ಲಾ ಮನೆಯ ಕೆಲಸವನ್ನು ತಾನೊಬ್ಬಳೇ ಮಾಡಲಾರಳೆಂಬುದು ಅವನ ದೃಢವಾದ ನಂಬಿಕೆ. ಅಲ್ಲದೇ ರಾಧಿ ಮನೆಗೆಲಸವನ್ನು ತಾನಿಲ್ಲದಾಗ ಮಾಡುತ್ತಿದ್ದುದನ್ನು ಕಂಡುದಾಗಿ ಚಾಡಿ ಹೇಳುವ ಅಥವಾ ನಿಜವನ್ನೇ ತಪ್ಪದೇ ಹೇಳುವ ತನ್ನ ಚಿಕ್ಕಪ್ಪನ ಮಕ್ಕಳು. ಅವರೇ ಸಾಕ್ಷಿಗಳು.

‘ನನಗೆ ಗೊತ್ತಿಲ್ಲ’ ಎಂದು ಬಿಡಲೇ; ಅಥವಾ ತನ್ನ ಅಪ್ಪ, ಅವ್ವ ಊರಿಂದ ಬಂದಿದ್ದಾಗ ಕದ್ದು (ಅಂದರೆ ಕರಿಯನಿಗೆ ಕಾಣದಂತೆ) ಕೊಟ್ಟಿದ್ದ ಒಂದು ರೂಪಾಯಿಯನ್ನು ಕೊಟ್ಟು ಬಿಡಲೇ `ಇದೇ ಅದು’ ಎಂದು ತನ್ನಲ್ಲಿದ್ದುದು ದಮ್ಮಡಿಯಾದುದರಿಂದ ಬಹುಶಃ ಅವನು ಇಟ್ಟಿದ್ದು ಒಂದು ರೂಪಾಯಿಯ ನೋಟಾಗಿದ್ದರೆ, ಈ ದುಡ್ಡು ಯಾವ ಮಿಂಡ ಕೊಟ್ಟ ಎಂದು ಇನ್ನಷ್ಟು ರೇಗಾಡಿದರೇ…. ಎಂದೆಲ್ಲಾ ಕ್ಷಣದೊಳಗೆ ಯೋಚಿಸಿ ಸುಮ್ಮನಿರುವುದೇ ಕ್ಷೇಮವೆಂದು ನಿರ್ಧರಿಸಿ ಹಾಗೇ ಮಾಡಿದಳು.

ರಾಧಿಯ ಆ ಮೌನ ಕರಿಯನನ್ನು ಮತ್ತಷ್ಟು ರೇಗಿಸಿತು. ಮೊನ್ನೆಯಷ್ಟೇ ಮಾದಿರನವನು ತಂದುಕೊಟ್ಟಿದ್ದ ಚರ್ಮದ ನೊಗಸುತ್ತು ಮತ್ತು ಬಾರೀಕೋಲನ್ನು ರಾಧಿಯ ಮಲಗುವ ಕೋಣೆಯಲ್ಲಿ ನೇತು ಹಾಕಿದ್ದನ್ನು ಕಂಡ ಕರಿಯ, ಅದನ್ನು ನೇತುಹಾಕುವಾಗ ಕಾಲಡಿಗೆ ಹಾಕಿಕೊಂಡಿದ್ದರೂ ಪ್ರಸ್ತುತ ಯಾವುದರ ಸಹಾಯವೂ ಇಲ್ಲದೆ ನೆಗೆದು ಅದನ್ನು ಎಳೆದುಕೊಂಡು ಮನಸ್ವೀ ಬಡಿಯ ಹತ್ತಿದ. ಅಳುವುದನ್ನೇ ಕಲಿತೇ ಇಲ್ಲವೇನೋ ಎಂಬಂತ ಆಕೆಯ ವರ್ತನ ನಿಜಕ್ಕೂ ಆಶ್ಚರ್ಯಜನಕವಾದದ್ದು. ಬಾರೀಕೋಲಿಗೆ ಹೊಸ ಚಾಟಿಗಳನ್ನು ಕಟ್ಟಿದ್ದರಿಂದ, ಬರೀ ಕೋಲನ್ನೇ ಬಡಿದರೂ ಸಾಕು `ಛಟಾರ್’ ಎಂದು ಜೋರಾಗಿ ಶಬ್ದ ಮಾಡುತಿತ್ತು. ಅವನ ರಭಸದ ಹೊಡೆತಕ್ಕೆ ಅದರ ಸದ್ದು, ಪಟಾಕಿಯ ಸರಕ್ಕೇ ಬೆಂಕಿ ಹಚ್ಚಿದಾಗ ಬರುವ ಸದ್ದಿನಂತಿತ್ತು. ಸ್ಕೂಲಿಲ್ಲದ ಆ ಊರಿನ ಬೀದಿ ಹುಡುಗರು ಕುತೂಹಲಕ್ಕಾಗಿ ಮನೆಯ ಮುಂದೆ ಬಂದು ನಿಂತರು. ತಲೆಬಾಗಿಲ ಬಳಿಯ ಪಕ್ಕದಲ್ಲೇ ಸಮರ ನಿರತನಾಗಿದ್ದ ಅವನ ಪೌರುಷಕ್ಕೆ ಆ ಹುಡುಗರು ಕೇಕೆ ಹಾಕಿ ನಗುತ್ತಿದ್ದರು. ಆದರೆ ಅವರಲ್ಲಿ ಯಾವನೋ ಒಬ್ಬ ಹುಡುಗ, ಕರಿಯ ತನ್ನ ಹೆಂಡತಿಗೆ ಹೊಡೆಯುತ್ತಿದ್ದಾನೆ ಎಂಬುದನ್ನು ಅನುಭವದಿಂದಲೋ ಏನೋ ಅರ್ಥೈಸಿಕೊಂಡು, ಯಾವ ಮಾಯದಲ್ಲೋ ಕರಿಯನ ಅಪ್ಪ ಅವ್ವರಿಗೆ ಸುದ್ದಿ ಮುಟ್ಟಿಸಿದ. ಮುದಿ ತಂದೆ ತಾಯಿಗಳು, ತನಗೆ ಎರಡು ರೀತಿಯಿಂದ ಸಂಬಂಧಿಯಾದ ರಾಧಿಯ ಸಾವು ಬದುಕಿನ ಬಗ್ಗೆಯೇ ಚಿಂತಿಸುತ್ತಾ ತಮ್ಮ ಏಳು ಬೀಳನ್ನು ಲೆಕ್ಕಿಸದೇ ಓಡಿ ಬಂದರು.

ತಲೆಬಾಗಿಲಿನ ಒಳ ಹೋಗುತ್ತಿದ್ದಂತೆಯೇ ಹೊಟ್ಟೆ ಮುಖಡೆಯಾಗಿ ಮಲಗಿದ್ದ ರಾಧಿಯನ್ನು ಕಂಡು ಸತ್ತೇ ಹೋಗಿದ್ದಾಳೆಂದು ಭಾವಿಸಿದ ಅವರು ಕರಿಯನನ್ನು ತಮ್ಮ ಶಕ್ತಿ ಮೀರಿ ಇಬ್ಬರೂ ಎರಡು ಕೈ ಹಿಡಿದು ಹಿಂದೆ ಎಳೆದರು. ಆಯ ತಪ್ಪಿದಂತಾದ ಕರಿಯ ಹಿಂದಕ್ಕೆ ಎರಡು ಹೆಜ್ಜೆ ಸರಿದು, ಕೈ ಝಾಡಿಸಿದ ಮಾತ್ರಕ್ಕೆ ತನ್ನ ಮುದಿ ತಂದೆ ತಾಯಿಗಳಿಬ್ಬರೂ ನೆಲಕ್ಕೆ ಬಿದ್ದಿದ್ದರು. ನಂತರ ಕೆಳಗೆ ಬಿದ್ದ ಬಾರಿಕೋಲನ್ನು ಎತ್ತಿಕೊಂಡು ಮೊದಲಿನಂತೆಯೇ ಆಕೆಯನ್ನು ಹೊಡೆಯಲು ಪ್ರಾರಂಭಿಸಿದ. ತಟ್ಟಾಡುತ್ತ ಎದ್ದ ಕರಿಯನ ತಾಯಿ ಬಾಗಿಲಿಗೆ ಬಂದವಳೆ ಬಾಯಿ ಬಡಿದುಕೊಳ್ಳಲಾರಂಭಿಸಿದಳು. ಕೆಲವರನ್ನು ಹೆಸರಿಡಿದೂ ಕರೆದಳು.

ಕಾಡಿನ ಮಧ್ಯೆಯ ಸಣ್ಣ ಹಳ್ಳಿಯಾದುದರಿಂದ ಅಲ್ಲೊಂದು ಇಲ್ಲೊಂದು ದೂರದೂರದ ಮನೆಗಳು. ಒಬ್ಬರ ಮನೆಯ ವ್ಯವಹಾರ ಮತ್ತೊಬ್ಬರ ಮನೆಗೆ ತಿಳಿಯಲಾರದಷ್ಟು ದೂರ.

ಅಜ್ಜಿಯ ಬಾಯಿ ಬಡಿತಕ್ಕೆ ಪ್ರತಿಕ್ರಿಯಿಸಿ ಓಡಿಬಂದವರು ನಾಲ್ಕೈದು ಜನರು. ಅವರಲ್ಲಿ ಒಬ್ಬನೇ ಕರಿಯನ ವಯಸ್ಸಿನ ಯುವಕ.

ಅವರೆಲ್ಲ ಬರುವ ಹೊತ್ತಿಗೆ ಅಲ್ಲಿ ರಾಧಿ ಇರಲೇ ಇಲ್ಲ! ಕರಿಯ ಹೊಡೆಯುತ್ತಿದ್ದುದು ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಅವಳ ಹಾಸಿಗೆಗೆ, ಆ ಯುವಕ ಕರಿಯನನ್ನು ಹಿಡಿದುಕೊಂಡು ಸಮಾಧಾನ ಮಾಡಲು ಹೋದಾಗ ರಾಧಿ ಏನಾದಳು ಎಂದು ಉಳಿದವರೆಲ್ಲರೂ ಹುಡುಕ ಲಾರಂಭಿಸಿದರು.

ಕರಿಯನ ಅವ್ವನಿಗೆ ಮತ್ತೊಂದು ತವಕ : ರಾಧಿಗೆ ಆರು ತಿಂಗಳಾಗಿತ್ತೆಂಬುದು.

ಅಷ್ಟರಲ್ಲಿ ಡೈರಿ ಲಾರಿ ಬಂದ ಸದ್ದಾಯಿತು. ಕರಿಯ ಬಾರೀಕೋಲನ್ನು ಬಿಸಾಡಿ, ಒಂದೇ ಉಸುರಿಗೆ ಓಡಿಹೋಗಿ, ಲಾರಿ ನಿಲ್ಲಿಸಿ ಹತ್ತಿಕೊಂಡು ಹೊರಟೇ ಬಿಟ್ಟ. ಅವನ ವರ್ತನೆಯನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಲಾರಿ ಮುಂದೆ ಹೋಗಿತ್ತು.

ಕರಿಯ ಹೋದದ್ದು ರಾಧಿಗೆ ತಿಳಿದು ಇವರ ಬಳಿಗೆ ಬಂದಳು. ಮೈ ನೆನೆದಿತ್ತು. ಎಲ್ಲರೂ ಕಾತರದಿಂದ ಕೇಳಿದರು: “ಎಲ್ಲಿಗೋಗಿದ್ದೇ?” “ಕರಿಯ ಹೊಡುದ್ನೇನೇ?”….

ವಾಸ್ತವವಾಗಿ ಕರಿಯನನ್ನು ಅವನ ತಂದೆತಾಯಿಗಳು ಹಿಡಿದಳೆದಾಗಲೇ ಆಕೆ ಎದ್ದು ಓಡಿಹೋಗಿದ್ದುದು ಯಾರ ಗಮನಕ್ಕೂ ಬಾರದುದು ಅವಳ ಅದೃಷ್ಟ. ಮನೆಯ ಪಕ್ಕದ ಪಾರ್ಶ್ವದಲ್ಲಿ ಇದ್ದ ದನದ ಕೊಟ್ಟಿಗೆಯಲ್ಲಿ, ದನದ ಗಂಜಲದ ಶೇಖರಣೆಗಾಗಿ ನೆಲದಲ್ಲಿ ಅದ್ದಿದ್ದ ಮಡಕೆಯಲ್ಲಿ ಅಡಗಿಕೊಂಡು, ಮೇಲೆ ಅದರ ಮುಚ್ಚಳವನ್ನೇ ಮುಚ್ಚಿಕೊಂಡು ಮರೆಮಾಡಿಕೊಂಡಿದ್ದಳು. ಅದರಲ್ಲಿ ಇದ್ದ ಸ್ವಲ್ಪ ಗಂಜಲದಿಂದ ಅವಳ ಮೈ ನೆನೆದಿತ್ತು. ಒಂದು ರೀತಿಯಲ್ಲಿ ಆ ಗಂಜಲವೇ ಆಕೆಯ ಗಾಯಕ್ಕೆ ಔಷಧಿಯಾಗಿತ್ತು. ಪ್ರತಿಸಲ ಗಂಡ ಹೂಡೆದಾಗಲೂ ಆಕೆ ಗಂಜಲವನ್ನೇ ಆ ಗಾಯಗಳಿಗೆ ಹಚ್ಚುತ್ತಿದ್ದುದು. ಏಕೆಂದರೆ ಬೇರೆ ಮದ್ದು ಎಲ್ಲಿ ಸಿಗಬೇಕು ಆಕೆಗೆ.

ಯಾರ ಪ್ರಶ್ನೆಗೂ ಉತ್ತರಿಸದೇ, ತಲೆತಗ್ಗಿಸಿಕೊಂಡು ತನ್ನ ಕೋಣೆಗೆ ನಡೆದಳು. ಮತ್ತೆ ಯಾರೂ ಅವಳನ್ನು ಪ್ರಶ್ನಿಸುವ ಗೋಜಿಗೇ ಹೋಗಲಿಲ್ಲ.

ಶೇಂಗಾ ಬೆಳೆಗೆ ಹಂದಿಗಳ ಕಾಟ ಅತಿಯಾಯಿತೆಂದು ಅವುಗಳ ಬೇಟೆಗೆ ಮನಸ್ಸು ಮಾಡಿದ ಮುತ್ತಯ್ಯ, ರಾಧಿಯ ತಂದೆಗೆ ಬಂದೂಕನ್ನು ತರಲು ಹೇಳಲು ಆ ಊರಿಗೆ ಹೋಗಿದ್ದವನು, ಕರಿಯ ರಾಧಿಗೆ ಹೊಡೆದ ವಿಚಾರವನ್ನು ತಿಳಿಸಿದ. ಸರಿ. ಶಿಕಾರಿ ಶಂಕರಯ್ಯ ಬಂದೂಕನ್ನು ಹೆಗಲಿಗೇರಿಸಿ ಮುತ್ತಯ್ಯನ ಜೊತೆಯಲ್ಲೇ ಹೊರಟ.

ಕರಿಯ ಮಧ್ಯಾಹ್ನದ ಸಿನೆಮಾ ನೋಡಿಕೊಂಡು ಸಂಜೆ ಮನೆಗೆ ಬಂದಾಗ ಶಂಕರಯ್ಯ ನಡುಮನೆಯಲ್ಲಿ ತನ್ನ ಅತ್ತೆಯ ಬಳಿ ನಡೆದ ಪ್ರಸಂಗದ ಬಗ್ಗೆ ಚರ್ಚಿಸುತ್ತಿದ್ದ. ಕರಾರನ್ನು ಮೀರಿ ತನ್ನ ಅನುಮತಿಯಿಲ್ಲದೇ ನಡುಮನೆಯಲ್ಲಿ ಕುಳಿತಿರುವ ರಾಧಿಯ ತಂದೆಯನ್ನು ಕಂಡು ಅವನ ಮೈಯೆಲ್ಲಾ ಉರಿಯಿತು.

ರಾಧಿಯನ್ನು ಮದುವೆಯಾದ ಮೊದಲಲ್ಲಿ ಇದೇ ರೀತಿಯ ಒಂದು ರಾದ್ಧಾಂತ ನಡೆದಿತ್ತು. ಎರೆಗದ್ದೆಯಲ್ಲಿ ನೇಗಿಲು ಉಳುತ್ತಿದ್ದವನಿಗೆ ರಾಧಿ ಊಟಕ್ಕೆ ಕರೆಯಲು ಹೋಗಿದ್ದಳು. ಆಗಲೇ ಸೂರ್ಯ ನೆತ್ತಿಯನ್ನು ಮೀರಿ ನಡೆಯುತ್ತಿದ್ದ. ಆಗಿನ್ನೂ ಕರಿಯ ಮತ್ತು ರಾಧಿಯರ ವೈವಾಹಿಕ ಜೀವನದಲ್ಲಿ ಅಷ್ಟೇನೂ ಕರಿನೆರಳು ಇರಲಿಲ್ಲ.

“ಬನ್ರಿ ಊಟ ಮಾಡೀ….” ಎಂದು ಕರೆದಳು.

“ಸಾಕ ಟೈಮು ಊಟುಕ್ಕೆ ತರಕ್ಕೆ?” ಎಂದು ಈತನೂ ರೇಗಿದ.

“ಸಗಣಿ-ನೀರು ಕಸ-ಮುಸುರೆ ಅಂತ ಮನೆಗೆಲಸ ಸುಮ್ನೇ ಆಗ್ತೀತಾ- ಅದ್ಕೇ ಲೇಟಾಯ್ತು”.

ಕರಿಯ ಮುಂದೆ ಮಾತನಾಡಿರಲಿಲ್ಲ. ಇನ್ನೊಂದು ನಾಲ್ಕು ಸಾಲು ಹೊಡೆದು ಆ ಹಾಳೆಯನ್ನು ಕೂಡಿಸಿದ ನಂತರ ಊಟಕ್ಕೆ ಹೋಗುವುದಾಗಿ ಮನದಲ್ಲೇ ನಿರ್ಧರಿಸಿ ಉಳುತ್ತಲೇ ಇದ್ದ.

“ಬತ್ತಿರೋ. ಇಲ್ಲ ವೋಗ್ಲೋ…. ನಂಗೆ ಆಗ್ಲೆ ಒತ್ತಾಗೈತೆ. ಇನ್ನೂ ಅಜ್ಜಿಗೆ (ಮೊಮ್ಮಗ ಳಾಗಿದ್ದಾಗ ಕರೆಯುತ್ತಿದ್ದಂತೆಯೇ ಅತ್ತೆಯಾದ ಮೇಲೆಯೂ ‘ಅಜ್ಜಿ’ ಎಂದೇ ಕರೆಯುತ್ತಿದ್ದಳು. ಕರಿಯ ಸಹ ಅವ್ವ ಎನ್ನದೇ ಎಲ್ಲರೂ ಕರೆಯುವ ರೂಢಿಯಿಂದ ಅಜ್ಜಿ ಎಂದೇ ಅನ್ನುತ್ತಿದ್ದ) ನೀರು ಕಾಯಿಸ್ಬೇಕು…. ಒಂದು ವಾರ ಆಯ್ತು ಮೈ ತೊಳ್ದು ಅಂತ ಬಯ್ಕಂತಿದ್ರು”.

ಆಕೆಯ ಮೊದಲ ಮಾತನ್ನು ಹಿಡಿದು ಹೇಳಿದ: “ಪರವಾಗಿಲ್ವೇ! ನಂಗೇ ಉಣ್ಣಕ್ಕಿಕ್ದೆ ಹೊಂಟೋಯ್ತನೀ ಅಂತ್ಯಾ? ಹೂಂ…. ಹೋಗು ನೋಡನ….” ಅವನ ಮಾತಲ್ಲಿ ಸರಸ ಇದ್ದಿತು.

“ನೋಡ್ತಿಯಾ ಅಂಗಾರೇ….?” ಅವಳೂ ಸವಾಲು ಹಾಕಿದಳು.

“ನಿಮ್ಮಪ್ಪಂಗುಟ್ಟಿದ ಮಗಳೇ ಆದ್ರೆ ಒಗ್ತಿಕಣೇ” ಕರಿಯನೂ ಸೆಟೆದೇ ಮರು ಸವಾಲು ಹಾಕಿದ.

ರಾಧಿ ತಾನು ತನ್ನಪ್ಪನಿಗೆ ಹುಟ್ಟಿದ ಮಗಳೇ ನಿಜ ಎಂದು ಸಾಬೀತು ಪಡಿಸಲು ಸ್ವಾಭಿಮಾನಿಯಂತೆ ಊಟದ ಕುಕ್ಕೆಯನ್ನು ಕಂಕುಳಲ್ಲಿ ಇರುಕಿಕೊಂಡು ನಡೆದೇ ಬಿಟ್ಟಳು. ಕರಿಯನಿಗೆ ಹೇಗೆಹೇಗೋ ಅನ್ನಿಸಿತು. ತನ್ನ ತಮಾಷೆ ಅವಳನ್ನು ಹೀಗೆ ಮಾಡಲು ಪ್ರಚೋದಿಸುತ್ತದೆಯೆಂದು ಅಂದುಕೊಂಡಿರಲಿಲ್ಲ. ಅದೇ ಮಾತು ತನ್ನ ಜೀವನಕ್ಕೆ ಒಂದು ಹೊಸ ಆಯಾಮ ತರುತ್ತದೆ ಎಂದು ತಿಳಿಯುವ ಪರಿಜ್ಞಾನವಂತೂ ಇರಲೇ ಇಲ್ಲ!

ಅವಳ ವರ್ತನೆಯನ್ನು ಹೊಲದ ಬೇರೆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜಿ, ಅಜ್ಜ, ಕೂಲಿ ಆಳುಗಳು ಎಲ್ಲರೂ ಗಮನಿಸಿದರು. “ಹೊತ್ತಾಗಿ ಉಣ್ಣಕ್ಕೆ ತಂದಳೆ ಅಂತ ಏನಂದ್ರೋ ಏನೋ, ಮುನಿಸಿಕೊಂಡು ಒಂಟೋಗ್‌ತೌಳೆಲಾ ಮಾರಾಯ” ಎಂದು ಕರಿಯನ ತಾಯಿ ಗಂಡನನ್ನು ಎಚ್ಚರಿಸಿದಳು. ಕೂಲಿ ಕೆಲಸದವರಿಗೆ ಇದು ಕಾಲಕಳೆಯಲು ಒಂದು ಚರ್ಚೆಯ ವಿಷಯವಾಯಿತು. “ನಾನೇ ಉಣ್ಣಕ್ಕಿಕ್ತೀನಿ, ಕುಕ್ಕೇನಾದ್ರೂ ತಂದಿಲ್ಲಿಟ್ಟೋಗೇ…. ಬೆಳಗ್ಗೆ ಅವಸರಕ್ಕೆ ಅವರೇಕಾಳಿನ ಗಾತ್ರ ತಂಗಳು ಮುದ್ದೆ ತಿಂದಿದ್ದೋನು….” ಎಂದು ವಾಸ್ತವತೆಯನ್ನು ಅವಳಿಗೆ ತಿಳಿಸಿದರೂ ತನಗೆ ಕೇಳಿಸದವಳಂತೆ ಎದೆ ಸೆಟೆಸಿಕೊಂಡು ಹೋಗುತ್ತಲೇ ಇದ್ದಳು.

ಕರಿಯ ಸಂಜೆಯವರೆಗೂ ತುಟಿಪಿಟಕ್ಕೆನ್ನದೇ, ಉಳುತ್ತಲೇ ಇದ್ದ. ಖಾಲೀ ಹೊಟ್ಟೆಗೂ ಎರೇಗದ್ದೆಯ ಉಳುಮೆಗೂ ಇರುವ ಸಂಬಂಧ ಬಲ್ಲವರೇ ಬಲ್ಲರು. ಹೊಟ್ಟೆ ನೋಯಲು ಶುರುವಾಗಿತ್ತು.

ಸಾಯಂಕಾಲ ಮನೆಗೆ ಬಂದು ಎತ್ತನ್ನು ಕಟ್ಟಲು ಕೊಟ್ಟಿಗೆಗೆ ಹೋದಾಗ ಅದರಡಿ ನೆನ್ನೆ ಇಟ್ಟಿದ್ದ ಸಗಣಿ ಹಾಗೆಯೇ ಇತ್ತು. ಗುಡಿಸಿ ಹುಲ್ಲು ಹಾಕಿ ಒಳಗೆ ಬಂದ.

ರಾಧಿ ಕಾಫಿ ಕೊಡಲೆಂದು ಬಂದಳು. ಮಧ್ಯಾಹ್ನದ ಪಂದ್ಯದಲ್ಲಿ ತಾನೇ ಗೆದ್ದೆನೆಂಬ ಅಹಂ ಅವಳದು. ಆದರೆ ಅದರ ಪರಿಣಾಮವೇನಾದೀತು ಎಂದು ಚಿಂತಿಸುವ ವಯಸ್ಸು ಅವಳದಾಗಿರಲಿಲ್ಲ. ಹದಿನಾಲ್ಕು ವರುಷದ ಹುಡುಗಿ. ಕರಿಯನ ಹಿರಿಯ ಹೆಂಡತಿ `ಗಂಡ ಸಮ್ಮತಿಯಿಲ್ಲ’ ಎಂದು ಬರೆದುಕೊಟ್ಟು ಹೊರಟು ಹೋದುದಕ್ಕೆ ಪ್ರತಿಯಾಗಿ ಅವನ ಅಕ್ಕನ ಮಗಳು ರಾಧಿಯನ್ನು ಕೆಲವೇ ದಿನಗಳಲ್ಲಿಯೇ ಮದುವೆ ಮಾಡಲಾಗಿತ್ತು. ರಾಧಿ ಮೈನೆರೆದು ಒಂದು ವರ್ಷ ಸಂದಿದ್ದರೇ ಹೆಚ್ಚಿನದು. ಅವಳು ಋತುಮತಿಯಾದ ನಕ್ಷತ್ರ ಸರಿಯಾಗಿಲ್ಲವೆಂದೂ ಅವಳಿಗೆ ಮಾಂಗಲ್ಯ ಭಾಗ್ಯವಿಲ್ಲ ಎಂದೂ ಅರ್ಥಾತ್ ಮದುವೆಯಾದವನಿಗೆ ಹೆಚ್ಚು ದಿನ ಆಯುಷ್ಯ ಇಲ್ಲವೆಂದೂ ಕರಿಯನ ಚಿಕ್ಕಪ್ಪ ಕೆಂಗಯ್ಯ ಪಂಚಾಂಗ ನೋಡಿ ಹೇಳಿದುದರಿಂದಲೇ ಕರಿಯ ಅವಳನ್ನು ಮದುವೆಯಾಗಲು ಒಪ್ಪಿರಲಿಲ್ಲ. ಆದರೆ ಅವನ ಇಚ್ಚೆಯಂತೆ ಮಾಡಿದ ಮೊದಲ ಮದುವೆ ನೀರಿನಲ್ಲಿ ಹೋಮ ಮಾಡಿದಂತಾಯಿತೆಂದೂ ಆದ್ದರಿಂದ ಈಗ ತಾವು ಹೇಳಿದಂತೇ ಕೇಳಿ ರಾಧಿಯನ್ನು ಮದುವೆಯಾಗಬೇಕೆಂದೂ ಅಜ್ಜ, ಅಜ್ಜಿ ಹಠ ಹಿಡಿದಿದ್ದರು. ರಾಧಿ ಮೈನೆರೆದ ನಕ್ಷತ್ರ ಕೆಟ್ಟದ್ದು ಎಂದು ಕರಿಯನ ಚಿಕ್ಕಪ್ಪನಲ್ಲದೇ ಬೇರೆ ಯಾರೂ ಹೇಳದೇ ಚೆನ್ನಾಗಿದೆ ಎಂದು ಹೇಳುತ್ತಿದ್ದುದು ಅವರ ಮುಂದುವರಿಕೆಗೆ ಕಾರಣವಾಗಿತ್ತು. ಕರಿಯ, ತನ್ನ ಹೆತ್ತವರಿಗೆ ತಾನು ಬಾಳಿ ಬದುಕ ಬೇಕೆಂಬ ಆಸೆಯಿಲ್ಲವೆಂದು ಹೇಳಿಕೊಂಡು ಕಣ್ಣೀರು ಸುರಿಸುತ್ತಲೇ ತಾಳಿ ಕಟ್ಟಿದ್ದ ತನ್ನ ಸಾವಿಗೆ ಪ್ರತಿ ಹೆಜ್ಜೆಯಲ್ಲಿ ಹತ್ತಿರ ಹೋಗುತ್ತಿರುವುದನ್ನು ನೆನೆದು. ಆತ ಮಾತಿಗೆ ಮೊದಲು `ಮುಂಡೇ’ ಎಂದು ಸಂಬೋಧಿಸಲು ಇದೂ ಒಂದು ಪ್ರಮುಖ ಕಾರಣ.

ರಾಧಿ ಕಾಫಿಯ ಲೋಟವನ್ನು ಕರಿಯನ ಮುಂದೆ ನೆಲಕ್ಕೆ ಇಡಲು ಬಗ್ಗಿದಳು. ಕರಿಯ ಕಪಾಳಕ್ಕೆ ಬೀಸಿ ಹೊಡೆದ. ಕಾಫಿ ಚೆಲ್ಲಿ ಕಾಲು ಸುಟ್ಟಿತು. ಅವನ ಹೊಡೆತ ಕಿವಿಗೆ ತಗುಲಿ ಮೂರ್ಛ ಬಂದಂತಾಗಿ ತಟ್ಟಾಡುತ್ತಿದ್ದಂತೆಯೇ “ನಿಮ್ಮಪ್ಪನ್ ಮನೆಯಿಂದ ಉಣ್ಣಕ್ಕ ತಂದಿಡ್ತಿದ್ದೇನೆ ಲೋಪರ್ ಮುಂಡೇ” ಎಂದು ಝಾಡಿಸಿ ಒದದ ಸ್ಥಿಮಿತ ತಪ್ಪಿ ನೆಲಕ್ಕೆ ಬಿದ್ದಳು. ಅಷ್ಟರಲ್ಲಿ ಕರಿಯನ ಅಪ್ಪ, ಅವ್ವ ಬಿಡಿಸಲು ಬಂದರೂ ಅವಳನ್ನು ಕಾಲು ನೀಡಿ ನೀಡಿ ಒದೆಯಲು ಪ್ರಯತ್ನಿಸುತ್ತಿದ್ದ.

ಮಾರನೆಯ ದಿನ ರಾಧಿ ಎಂದಿನಂತೆ ಮನೆಗೆಲಸ ಮಾಡಿ, ಮನೆಗೆ ಬೀಗ ಹಾಕಿ ಕೀಲಿಯನ್ನು ಮಾಮೂಲಿ ಜಾಗದಲ್ಲಿ ಇಟ್ಟು ಪೇಟೆಯತ್ತ ಹೊರಟಳು. ಎಲ್ಲಿಗಾದರೂ ಓಡಿಹೋಗಿ ತನ್ನ ಗಂಡನಿಗೆ ಸರಿಯಾಗಿ ಬುದ್ದಿ ಕಲಿಸಬೇಕೆಂಬುದು ಆಕೆಯ ಉದ್ದೇಶ.

ಯಾರಿಗೂ ಅನುಮಾನ ಬರದಂತೆ, ಕೇಳಿದವರಿಗೆ ಆಸ್ಪತ್ರೆಗೆ ಹೋಗುತ್ತೇನೆಂದು ಸುಳ್ಳು ಹೇಳಿ ಪೇಟೆ ಸೇರಿಕೊಂಡಳು. ಆದರೆ ಕೈಯಲ್ಲಿ ಸಾಕಷ್ಟು ದುಡ್ಡು ಇರದೇ ಎತ್ತ ಹೋಗಬೇಕೆಂದು ದಾರಿ ತೋರಲಿಲ್ಲ. ನೆನಪಿಸಿಕೊಂಡವಳಂತೆ, ಮದುವೆಯಲ್ಲಿ ಗಂಡನ ಮನೆಯವರು ಕೊಟ್ಟಿದ್ದ ಬೆಂಡೋಲೆಯನ್ನು ಗಾಂಧಿಬಜಾರಿಗೆ ಹೋಗಿ, ಮಾರವಾಡಿಗೆ ಬಾಯಿಗೆ ಬಂದ ರೇಟಿಗೆ ಮಾರಿಬಿಟ್ಟಳು.

ಆಕೆ ಓಡಿಹೋಗಿದ್ದಾಳೆಂಬುದು ಮನೆಯವರಿಗೆ ತಿಳಿದಿದ್ದು ರಾತ್ರಿ ಎಷ್ಟೊತ್ತಾದರೂ ಅವಳು ಬರದಿದ್ದಾಗಲೇ!

ಅಷ್ಟರಲ್ಲಾಗಲೇ ರಾಧಿ ಕರಿಯನ ಹಿರಿಯ ಹೆಂಡತಿ ನಾಗಮ್ಮನ ಮನೆಯಲ್ಲಿದ್ದಳು.

ನಾಗಮ್ಮ ಕರಿಯನನ್ನು ಮದುವೆಯಾಗುವ ಮೊದಲು ಯಾರನ್ನೋ ಪ್ರೀತಿಸಿದ್ದು, ಅದನ್ನು ವ್ಯಕ್ತಪಡಿಸುವ ಧೈರ್ಯ ಸಾಲದೆ ಮದುವೆಯ ಮಾತುಕತೆ ಮುಗಿದ ಮೇಲೆ ತನ್ನ ಪ್ರಿಯತಮನ ಜತೆ ಓಡಿಹೋಗಿಬಿಡುವ ಪ್ರಯತ್ನದಲ್ಲಿ ವಿಫಲವಾಗಿ ಸಿಕ್ಕಿ ಹಾಕಿಕೊಂಡುಬಿಟ್ಟಿದ್ದಳು. ಊರಲ್ಲಿ ಮಾನ ಮರ್ಯಾದೆ ಹರಾಜಾಗುವುದನ್ನು ಸಹಿಸದ ಅವಳ ಹಿರಿಯಣ್ಣ ಚೆನ್ನಾಗಿ ಚಚ್ಚಿ ಹಾಕಿದ್ದ. ಅವನ ಗರ್ಜನೆಗೆ ಬಾಯಿ ಮುಚ್ಚಿ ಕೊಂಡು ತಾಳಿ ಬಿಗಿಸಿಕೊಂಡಳು. ನಂತರವೂ ಪ್ರಿಯಕರನ ಆಶ್ವಾಸನೆಯಂತೆ ಕರಿಯ ನೊಂದಿಗೆ ಕೂಡದೇ ಸ್ಟ್ರೈಕ್ ಮಾಡಿದಳು. ಅವರಿವರು ಕೂಡಿ ನ್ಯಾಯ ಮಾಡಿ ಕರಿಯನಿಗೆ ಸೋಡಾ ಚೀಟಿ ಬರೆಸಿಕೊಟ್ಟು ವಾಪಸ್ಸು ಕರೆದುಕೊಂಡು ಹೋಗಿ ಕೆಟ್ಟವಳು ಹೇಗೋ ನೆಟ್ಟಗಾದರೇ ಸಾಕೆಂದು ಅವನಿಗೆ ಮದುವೆ ಮಾಡಿಕೊಟ್ಟು, ಬೇರೆ ಮನೆ ಮಾಡಿ ಇರಿಸಿದ್ದರು. ಆ ಮನೆಗೇ ಪ್ರಸ್ತುತ ರಾಧಿ ಓಡಿ ಹೋಗಿದ್ದುದು. ಮೊದಲನೆಯ ಹೆಂಡತಿಯ ಕತೆ ಹೀಗಾಯಿತೆಂದು, ಹೊಸ ಸಂಬಂಧದಲ್ಲಿ ಮರುಮದುವೆ ಮಾಡಿಕೊಳ್ಳಲು ಹೆದರಿಕೊಂಡು ಹಾಗೂ ಅವನದಲ್ಲದ ತಪ್ಪಿಗೆ ಕಳಂಕಿತನಾಗಿ ಯಾರೂ ಹೆಣ್ಣು ಕೊಡಲು ಮುಂದೆ ಬರಲಾರರೆಂದು ಭಾವಿಸಿ, ತನ್ನ ಅಕ್ಕನ ಮಗಳನ್ನೇ ಮದುವೆಯಾಗುವಂತೆ ಕರಿಯನ ಅವ್ವ ಪಟ್ಟು ಹಿಡಿದಳು. ಅವಳು ಬಜಾರಿಯೆಂದು ಕರಿಯ ನಿರಾಕರಿಸಿದ್ದಕ್ಕೆ ‘ಮದ್ವೆ ಆದ್ಮಲೆ ಸರೋಗ್ತಾಳೆ’ ಎಂದರೂ ಕೇಳದ್ದರಿಂದ ಧರಣಿ ಹೂಡಿದಳು. ಅದಕ್ಕೂ ಒಪ್ಪದಿದ್ದಾಗ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಳು. ಆದ್ದರಿಂದಲೇ ಗೋವಿಂದಯ್ಯನೇ ಮಧ್ಯಸ್ಥಿಕೆ ವಹಿಸಿ, ಕೈಯಿಂದ ಖರ್ಚಿಟ್ಟು ರಾಧಿಯನ್ನು ಮದುವೆ ಮಾಡಿಕೊಂಡು ಬಂದಿದ್ದರು. ಆದ್ದರಿಂದ ರಾಧಿ, ನಾಗಮ್ಮನ ಮನೆಗೆ ಓಡಿ ಹೋದರೆ ಹೆಂಡತಿಯನ್ನು ಬಾಳಿಸಲಾರದೆ ಷಂಡನೆಂದು ಕರಿಯನಿಗೆ ಅವಮಾನವಾಗುತ್ತದೆಂದು ಭಾವಿಸಿದ್ದಳು.

ಆಕೆ ಹೋಗಿರಬಹುದಾದ ಊರುಗಳಿಗೆ ಹುಡುಕಲು ಜನ ಕಳುಹಿಸಿದರು. ಅದೇ ವೇಳೆಗೆ ರಾಧಿಯ ಊಹೆಗೆ ವಿರುದ್ಧವಾಗಿ ಅವಳನ್ನು ಕೂಡಿ ಹಾಕಿ ಕರಿಯನ ಮನೆಗೆ ವಿಷಯ ಮುಟ್ಟಿಸಿದಳು ನಾಗಮ್ಮ. ತಾನು ಮಾಡಿದ ತಪ್ಪಿಗಾಗಿ ಕರಿಯನಿಗೆ ತೊಂದರೆಯನ್ನು ಕೊಡಲಾರೆನೆಂದು ಹೇಳಿ ಆದರ್ಶ ಮರೆದಳು.

ವಿಷಯ ಗಾಳಿಯಷ್ಟೇ ವೇಗವಾಗಿ ಸುತ್ತಮುತ್ತ ಹರಡಿತು. ಪಂಚಾಯ್ತಿ ಸೇರಿಸಿ ರಾಧಿಯನ್ನು ಕರೆತಂದು ತನ್ನ ಗಂಡನ ಜೊತೆಯಲ್ಲಿ ರಾಜಿಮಾಡಲು ಯತ್ನಿಸಿದರು. ಕರಿಯ ಅದಕ್ಕೆಲ್ಲ
ಬಗ್ಗುವವನಲ್ಲ. ಆಕೆ ಯಾವನದೋ ಜೊತೆ ಓಡಿಹೋಗಿದ್ದುದಾಗಿ ಹೇಳಿದ. ಆತ ಮಾದಿರನವನೋ, ಹೊಲೆಯರವನೋ ಆಗಿರಬಹುದಾದ್ದರಿಂದ ಕುಲಗೆಟ್ಟ ಆಕೆಯನ್ನು ಮನೆಗೆ ಸೇರಿಸಲಾರೆ ಎಂದು ಪಟ್ಟು ಹಿಡಿದು ಅವನ ವಾದ ಇತರರಿಗೆ ಸಮ್ಮತಿಯಾಗದಿದ್ದರೂ ಅವನನ್ನು ಏನೂ ಮಾಡುವ ಅಧಿಕಾರ ಯಾರಿಗೂ ಇರಲಿಲ್ಲ. ಏಕೆಂದರೆ ರಾಧಿ ಓಡಿ ಹೋಗಿದ್ದುದೇ ದೊಡ್ಡ ಅಪರಾಧವಾಗಿತ್ತು. ಮೇಲಾಗಿ ವಾಪಸ್ಸು ಬಂದಾಗ ಕಿವಿಯಲ್ಲಿದ್ದ ಬಂಗಾರದ ಓಲೆ ಬೇರೆ ಇರಲಿಲ್ಲ. ಅಲ್ಲದೇ ಇನ್ನಷ್ಟು ಅವಮಾನ ಮಾಡಲು ನಾಗಮ್ಮನ ಮನೆಗೆ ಹೋಗಿದ್ದುದು ಕಾರಣವಾಗಿತ್ತು.

ಹಾಗೂ ಹೀಗೂ ಕೊಸರಾಡಿ, ‘ಗೊತ್ತಿದ್ದೋ ಗೊತ್ತಿಲ್ಲದೇನೋ ತಾಳಿ ಕಟ್ಟಿದ ತಪ್ಪಿಗೆ ಸಾಯೋತಂಕ ಅನ್ನ ಹಾಡ್ತೀನಿ’ ಎಂದು ಕೊನೆಗೆ ಒಪ್ಪಿಕೊಂಡ. ಆದರೆ ಆಕೆ `ಹೊಲೆ ಮಾದಿಗರ ಸ್ಥಿತಿಯಲ್ಲೇ ಇರಬೇಕು’ ಎಂಬ ಕರಾರನ್ನು ಮಂಡಿಸಿದ. ಇವತ್ತೋ ನಾಳೆನೋ ಒಂದ್ ಮನೇಲಿದ್ದರೆ ಸರಿ ಹೋಗ್ತಾರೆ’ ಎಂದು ಪಂಚಾಯಿತಿಯವರೂ ಒಪ್ಪಿಕೊಂಡಿದ್ದರು. ಕರಿಯನ ಕರಾರಿನ ಪಟ್ಟಿಯಲ್ಲಿ ರಾಧಿಯ ತಂದೆ ತಾಯಿಗಳಾರೂ ತನ್ನ ಮನೆಗೆ ಬರುವುದಾಗಲೀ, ಆಕೆಯನ್ನು ಮಾತನಾಡಿಸುವುದಾಗಲೀ ಕೂಡದು ಎಂಬುದೂ ಒಂದಾಗಿತ್ತು.

ಆದರೆ ಪ್ರಕೃತ ರಾಧಿಯ ತಂದೆ ಶಂಕರಯ್ಯ, (ಕರಿಯನ ಅಕ್ಕನನ್ನು ಮದುವೆಯಾಗಿ ಭಾವನಾಗಿ, ಮಗಳನ್ನು ಕೊಟ್ಟು ಮಾವನಾದವನು) ತನ್ನ ಪ್ರತಿಬಂಧಕಾಜ್ಞೆಯನ್ನು ಮೀರಿ ತನ್ನ ಮನೆಗೆ ಬಂದಿರುವುದು ಅವನಿಗೆ ಸಹಿಸಲಾಗದಾಗಿತ್ತು. ಇವನ ಕಾಲು ಚಪ್ಪಲಿಯನ್ನೇ ಕಾಣದಿದ್ದುದರಿಂದ, ಶಂಕರಯ್ಯ ಬಾಗಿಲಿನಲ್ಲಿ ಬಿಟ್ಟಿದ್ದ ದಪ್ಪ ಚರ್ಮದ ಮೆಟ್ಟನ್ನು ಎತ್ತಿಕೊಂಡು, ಸೀದಾ ಒಳನುಗ್ಗಿ ಮನಸ್ಸಿಗೆ ಬಂದಂತೆ ಶಂಕರಯ್ಯನನ್ನು ಹೊಡೆಯಲಾರಂಭಿಸಿದನು. ಅನಿರೀಕ್ಷಿತ ಆಘಾತದಿಂದ ಎಚ್ಚರಗೊಂಡ ಶಂಕರಯ್ಯ ಇವನನ್ನು ತಡೆಯಲು ಪ್ರಯತ್ನಿಸಿ ವಿಫಲನಾಗಿ ಹಿಂದಿರುಗಿ ಕೈಕಾಲಿನಿಂದಲೇ ಪ್ರತಿಕ್ರಿಯಿಸಿದನು. ಅವನ ಶಿಕಾರೀ ಧೈರ್ಯದ ಮುಂದೆ ಕರಿಯ ಪೀಚೆನಿಸಿದರೂ ಸಿನೆಮಾ ನಾಯಕ ಅದೇ ತಾನೇ ಕೇಡಿಗಳೊಂದಿಗೆ ಹೊಡೆದಾಡಿದ್ದರ ಸ್ಫೂರ್ತಿ ಇನ್ನು ಕುಗ್ಗಿರಲಿಲ್ಲ. ಅಕ್ಕಪಕ್ಕದವರು ಬಿಡಿಸಿದರೂ ಎನ್ನಿ.

ಈ ದ್ವಂದ್ವ ಯುದ್ಧದ ಸಮಯದಲ್ಲಿ ಕರಿಯನ ಜೇಬಿನಿಂದ ಬಿದ್ದ ಒಂದು ರೂಪಾಯಿಯ ದಮ್ಮಡಿ ಕರಿಯನ ತಾಯಿಯ ಕೈಗೇ ಸಿಕ್ಕಿತು. ಕಾಳಗ ನಿಂತ ನಂತರ ಆಕೆ ಅದನ್ನು ಕರಿಯನಿಗೆ ತೋರಿಸುತ್ತಾ, ರಾಧಿಗೆ ಹೊಡೆಯಲು ಕಾರಣವಾದದ್ದು ಈ ಒಂದು ರೂಪಾಯಿಯೇ ಎಂದು ತನ್ನ ಅಳಿಯ ಶಂಕರಯ್ಯನಿಗೆ ತಿಳಿಸಿದಳು. ಕರಿಯ ತಬ್ಬಿಬ್ಬಾದ. ಆದರೂ ಸಾವರಿಸಿಕೊಂಡು “ಅದು ಬ್ಯಾರೇ ಒಂದ್ರುಪಾಯಿ, ಇದು ಬ್ಯಾರೇ ಒಂದ್ರುಪಾಯಿ” ಎಂದು ಹೇಗೋ ಧೈರ್ಯಮಾಡಿ ಹೇಳಿದ.

ಶಂಕರಯ್ಯನ ಏಟುಗಳು ಜೊತೆಗೆ ತನ್ನ ತಾಯಿಯೇ ತನಗೆ ಬೆಂಬಲ ನೀಡದೆ ಅಳಿಯನ ಕಡೆಯೆಂಬಂತೆ ಮಾತನಾಡಿದುದು ಅವನಿಗೆ ತಡೆಯದಾಯಿತು, ಅಳುತ್ತಾ ತಾನು ಮಲಗುತ್ತಿದ್ದ ಕತ್ತಲ ಕೋಣೆಗೆ ನಡೆದ. ಹಾಸಿದ ಹಾಸಿಗೆ ಹಾಗೇ ಇತ್ತು. ಕಸ, ಧೂಳು ಇದ್ದುದನ್ನೂ ಗಮನಿಸದೆ ಉರುಳಿದ.

ಶಂಕರಯ್ಯ, ಇನ್ನೂ ಇಲ್ಲಿರುವುದು ಸರಿಯಲ್ಲವೆಂದು ಬಂದೂಕನ್ನು ಎತ್ತಿಕೊಂಡು ಮುತ್ತಯ್ಯನ ಹೊಲದತ್ತ ನಡೆದ, ಅವನು ಅತ್ತ ಹೋಗುತ್ತಿದ್ದಂತೆಯೇ ಕರಿಯನ ಅಣ್ಣ ಗೋವಿಂದಯ್ಯ ಮತ್ತು ಅತ್ತಿಗೆ ಚಂದ್ರಕ್ಕ ಬಂದರು.

ಗೋವಿಂದಯ್ಯ ನಗರದಲ್ಲಿ ಸರ್ಕಾರದ ಒಂದು ಕೆಲಸದಲ್ಲಿದ್ದರು. ಯಾರೋ, ಕರಿಯ ರಾಧಿಗೆ ಹೊಡೆದ ಸುದ್ದಿ ತಿಳಿಸಿದುದರಿಂದ ಹಳ್ಳಿಗೆ ಬಂದಿದ್ದರು.

ಅತ್ತಿಗೆ ಚಂದ್ರಕ್ಕ ಸೀದಾ ಕರಿಯನ ಕೋಣೆಗೆ ನಡೆದಳು. ಅದೇನೋ ಅವರಿಬ್ಬರಿಗೂ ವಿಶ್ವಾಸ ಚೆನ್ನಾಗಿತ್ತು. ಶಂಕರಯ್ಯ ಬಂದೂಕು ತಂದು ಕೊಲೆ ಮಾಡಲು ಬಂದದ್ದಾಗಿಯೂ ತಾನು ಚೆನ್ನಾಗಿ ಚಪ್ಪಲಿಯಿಂದ ಹೊಡೆದು ಮನೆಯಿಂದಾಚೆಗೆ ಓಡಿಸಿದಾಗಿಯೂ ತಿಳಿಸಿದ.

ಗೋವಿಂದಯ್ಯನಿಗೆ ಅವ್ವ ನಡೆದ ವಿಚಾರ ತಿಳಿಸಿದಳು. ಶಂಕರಯ್ಯನಿಗೆ ಮೆಟ್ಟಿನಲ್ಲಿ ಹೊಡೆದುದನ್ನು ಹೇಳಲು ಮರೆಯಲಿಲ್ಲ. ಮನೆಗೆ ಬಂದ ನೆಂಟರನ್ನು ಮೆಟ್ಟಿನಿಂದ ಹೊಡೆದು ಅವಮಾನ ಮಾಡಿದ್ದಕ್ಕೆ ಒಂದಿಷ್ಟು ಬೈದರು ಗೋವಿಂದಯ್ಯ. ಚಪ್ಪಲಿಯಿಂದ ಹೊಡೆದವರಿಗೆ ಒಳ್ಳೆಯದಾಗುವುದಿಲ್ಲವೆಂಬುದು ಮತ್ತು ಹೊಡೆಸಿಕೊಂಡವರೇ ತುಂಬ ಅನುಕೂಲಸ್ಥರಾಗುವರೆಂಬುದೂ ಜನರ ನಂಬಿಕೆಯಾಗಿತ್ತು. ಅದೇನೇ ಇದ್ದರೂ ತನ್ನ ಮೈದುನ ಮಾಡಿದ್ದರಲ್ಲಿ ಯಾವದೇ ತಪ್ಪಿಲ್ಲವೆಂದು ಚಂದ್ರಕ್ಕ ಪ್ರತಿ ವಾದಿಸಿದಳು.

ರಾತ್ರಿ ಬಹಳ ಹೊತ್ತಿನವರೆಗೂ ಕರಿಯ ಅತ್ತಿಗೆಯೆದುರು ತನ್ನ ಮನಸ್ಸಿನದ್ದನ್ನೆಲ್ಲಾ ಹೇಳಿಕೊಂಡ. ತನ್ನ ಬದುಕಿರುವುದು ತನ್ನ ತಾಯಿ ತಂದೆಯವರಿಗೂ ಬೇಡವಾಗಿದೆಯೆಂದು ಅತ್ತ. ಅತ್ತಿಗೆಯ ಅವನ ಪರವಾಗಿನ ಮಾತಿನಿಂದ ಅಂತಃಕರಣ ಕರಗಿ ಕಣ್ಣಲ್ಲಿ ಮತ್ತಷ್ಟು ನೀರಿಳಿಯಿತು. ಯಾರಿಗೂ ಬೇಡವಾದ ತಾನು ತಲೆ ಮೇಲೆ ಬಟ್ಟೆ ಹಾಕಿಕೊಂಡು ಎತ್ತಲಾದರೂ ಹೋಗುವುದಾಗಿ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ. ಅತ್ತಿಗೆ, ಹಾಗೆಲ್ಲಾ ಮಾಡಿಕೋಬಾರದು ಎಂದು ಬೈದು ಬುದ್ದಿ ಹೇಳಿ ಸಮಾಧಾನ ಮಾಡಿ ಮಲಗಿಸಿದಳು. ಆದರೆ ಅವಳಿಗೇಕೋ ಅಲ್ಲಿಂದಾಚೆಗೆ ಆತಂಕ ಜಾಸ್ತಿಯಾಯಿತು. ‘ಏನು ಮಾಡಿಕೊಳ್ಳುವುದಕ್ಕೂ ಹೇಸದವನು’ ಎಂದು ಗಂಡನ ಬಳಿ ತನ್ನ ಅಭಿಪ್ರಾಯ ಸೇರಿಸಿ ಅವನ ಹೇಳಿಕೆಗಳನ್ನು ತಿಳಿಸಿದಳು.

ಚಂದ್ರಕ್ಕ ರಾತ್ರಿಯಲ್ಲಿ ಆಗಾಗ್ಗೆ ಎದ್ದು ಕರಿಯನ ಇರುವನ್ನು ಖಚಿತಪಡಿಸಿ ಕೊಳ್ಳುತ್ತಿದ್ದಳು. ಮಾರನೆಯ ದಿನ, ಕರಿಯ ಹಾಸಿಗೆ ಬಿಟ್ಟು ಏಳಲೇ ಇಲ್ಲ. ಅಂದು ಸೋಮವಾರವಾದ್ದರಿಂದ ಬೇಸಾಯಕ್ಕೆ ರಜೆ. ಹೆಚ್ಚಿಗೆ ಕೂಲಿ ಆಳುಗಳನ್ನು ಇಟ್ಟು ಕೊಂಡು ಬೇರೆ ಯಾವುದೋ ಕೆಲಸದಲ್ಲಿ ಎಲ್ಲರೂ ತೊಡಗಿದ್ದರು. ರಾಧಿ ಅಡಿಗೆ ಮಾಡುವಂತಿಲ್ಲವಾದ್ದರಿಂದ, ಸೊಸೆ ಬಂದದ್ದರಿಂದ ಅತ್ತೆ ಅಡುಗೆಯ ಜವಾಬ್ದಾರಿಯಿಂದ ನುಣುಚಿಕೊಂಡು ಆಳುಗಳೊಂದಿಗೆ ಗದ್ದೆಗೆ ಹೋಗಿದ್ದುದರಿಂದ, ಅವರೆಲ್ಲರಿಗೂ ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗುವ ಜವಾಬ್ದಾರಿ ಚಂದ್ರಕ್ಕನ ಮೇಲೆ ಬಿದ್ದಿತ್ತು. ತಾನು ಮನೆಬಿಟ್ಟು ಹೋದರೆ ಕರಿಯ ಎತ್ತಲಾದರೂ ಹೋದರೇ? ಎಂಬ ಆತಂಕ ಅತಿಯಾಗಿ, ಆತ ಮಲಗಿರುವಾಗ ಸದ್ದಾಗದಂತೆ ಅವನಿದ್ದ ಕೋಣೆಗೆ ಬೀಗಹಾಕಿ, ಊಟದ ಕುಕ್ಕೆ ಹೊತ್ತು ನಡೆದಳು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ತನ್ನತ್ತೆ ಎದುರಾದ್ದರಿಂದ ಊಟದ ಕುಕ್ಕೆಯನ್ನು ಕೊಟ್ಟು ಮನೆಗೆ ಬಂದು ಕರಿಯನ ಕೋಣೆಯ ಬೀಗ ತೆಗೆದರೆ ಅವನಿರಲಿಲ್ಲ!

ಚಂದ್ರಕ್ಕನ ಅಬ್ಬರ ಪ್ರಾರಂಭವಾಯಿತು. ಆ ಕೂಗು ಗದ್ದೆಗೂ ಕೇಳಿಸಿರಬೇಕು. ಅಕ್ಕಪಕ್ಕದ ಮನೆಯವರೂ ಜಮಾಯಿಸಿದರು.

ಅಷ್ಟರಲ್ಲಿ ಯಾರೋ “ಪೋಲೀಸರು” ಎಂದರು.

ಅವರು ಬಂದುದು ಕರಿಯನಿಗಾಗಿಯೇ!

ಅವರು ಬಂದ ಸಮಯಕ್ಕೇ ಕಾಕತಾಳೀಯವೆಂಬಂತೆ ಕರಿಯ ಪರಾರಿಯಾಗಿದ್ದರಿಂದ ಅವರಿಗೆ ಅನುಮಾನ ಖಚಿತವಾಯಿತು. ಚಂದ್ರಕ್ಕನಿಗೆ ಅವನು ಹೇಗೆ ಮಾಯವಾದನೆಂಬುದು ತಿಳಿಯದೇ ಪೋಲೀಸರ ಮುಂದೆ ವಿಷಯ ಮಂಡಿಸಿದಾಗ, ಅವರು ಸ್ಥಳ ಪರಿಶೀಲಿಸಿ, ಅನುಭವದ ಆಧಾರದ ಮೇಲೆ ಹೆಂಚನ್ನು ಎತ್ತಿ ಹೋಗಿರಬಹುದೆಂದು ತಿಳಿಸಿದರು. ಹೆಂಚನ್ನು ಪುನಃ ಮೊದಲಿನ ಹಾಗೆಯೇ ಜೋಡಿಸಿದ್ದರಿಂದ ಆ ವಿಷಯ ಪರಿಹಾರ ಕಾಣದೇ ಸುಮ್ಮನಾಯಿತು. ತಮ್ಮನ್ನು ಕಂಡೇ ಕರಿಯ ಓಡಿಹೋಗಿದ್ದಾನೆಂದು ಮೇಲಿನಧಿಕಾರಿಗೆ ಸ್ಟೇಷನ್ನಿನಲ್ಲಿ ತಿಳಿಸಿದರು.

ಶಂಕರಯ್ಯ, ತನ್ನ ಮಗಳಿಗೆ ‘ವರದಕ್ಷಿಣೆ ಕೊಡದಿದ್ದುದರಿಂದ ಕರಿಯ ಚಿತ್ರಹಿಂಸೆ ಕೊಡುತ್ತಿದ್ದಾನೆ’ ಎಂದು ಕಂಪ್ಲೇಂಟ್ ಕೊಟ್ಟಿದ್ದುದರಿಂದಲೇ ಅವನನ್ನು ಕರೆದೊಯ್ಯಲು ಪೋಲೀಸರು ಬಂದಿದ್ದು. ಅಲ್ಲದೇ ಮೆಟ್ಟಿನಲ್ಲಿ ಹೊಡೆದುದಕ್ಕೆ ಮುತ್ತಯ್ಯ ಸಾಕ್ಷಿ ಯಾಗಿದ್ದುದರಿಂದ ಶಂಕರಯ್ಯನ ಕೇಸು ಶಕ್ತಿಯುತವಾಗಿತ್ತು.

ಅಲ್ಲಿಷ್ಟೂ ಇಲ್ಲಿಷ್ಟು ಗಿಂಜಿಕೊಂಡು ತಿನ್ನುವ ಮನೋಭಾವದ ಪೋಲೀಸನೊಬ್ಬ ಇವನ ಹತ್ತಿರವೂ ಕಿತ್ತುಕೊಳ್ಳುವ ಉದ್ದೇಶದಿಂದ ಮಾತಿಗಾಗಿ, “ನೀನ್ಯಾಕಯ್ಯ ವರದಕ್ಷಿಣೆ ಕೊಡಲಿಲ್ಲ?” ಎಂದಿದ್ದ- ಕಂಪ್ಲೆಂಟ್ ಕೊಡಲು ಹೋಗಿದ್ದಾಗ.

“ನಾನು ಅವನಕ್ಕುನ್ನೇ ಮದ್ವೆ ಆಗಿರೋದು. ನನ್ನ ಮದ್ವೇಲೀ ‘ಇದು ಎಲ್ಡನೇ ಮದುವೆ. ಆದ್ದರಿಂದ ಹೆಣ್ ಕೊಡಾದೇ ಹೆಚ್ಚಿನ್ ಮಾತು’ ಅಂತ ವರದಕ್ಷಿಣೆ ಕೊಟ್ಟಿರಲಿಲ್ಲ. (ಶಂಕರಯ್ಯನ ಹಿರಿಯ ಹೆಂಡತಿ ಒಂದು ಹೆಣ್ಣು ಮಗುವಿನ ತಾಯಿಯಾಗಿ ಯಾವುದೋ ಕಾಯಿಲೆಯಿಂದ ಸತ್ತಿದ್ದಳಂತೆ) ಅದುಕ್ಕೆ ಅವನಿಗೂ ಇದು ಎಲ್ಡನೇ ಮದ್ವೆ ಆದ್ದರಿಂದ ನಾನೂ ವರದಕ್ಷಿಣೆ ಕೊಡಲಿಲ್ಲ” ಎಂದು ಪ್ರತಿಪಾದಿಸಿದ.

“ನಿನ್ ಮಗುಳ ವಾಪಸ್ ಕಳ್ಸುದ್ರೆ ಏನಯ್ಯಾ ಮಾಡ್ತೀಯಾ?”

“ನಾನೂ ಅವರ ಮಗುಳ್ನ (ಕರಿಯನ ಅಕ್ಕನನ್ನು) ವಾಪಾಸ್ ಕಳುಸ್ತೀನಿ”

“ಮಗುಳ ಮದ್ವೆ ಆಗಿ ಮಮ್ಮಗನ ಕಂಡು ಅಜ್ಜಿಯಾಗಿರೋಳ್ನ ವಾಪಸ್ ಕಳುಸ್ತೀನಿ ಅಂತೀಯಲ್ಲ; ನ್ಯಾಯನೇನಯ್ಯ ಇದು?”

“ನ್ಯಾಯ ಅಲ್ದೇ ಏನು? ಏಟಿಗೆ ಎದಿರೇಟು”

ಅಷ್ಟರಲ್ಲಿ ಎಸ್.ಐ. ಬಂದಿದ್ದರಿಂದ ಮಾತುಕತೆ ನಿಂತಿತ್ತು.

ಚಂದ್ರಕ್ಕ ತನ್ನ ಗಂಡನಿಗೆ, ಪೋಲೀಸರು ಬಂದದ್ದು, ಮಹಜರು ಮಾಡಿಕೊಂಡು ಹೋದದ್ದು ಎಲ್ಲವನ್ನು ತಿಳಿಸಿದಳು! ಅವನು ಮನೆಬಿಟ್ಟು ಹೋಗುವ ಮಾತನ್ನು ರಾತ್ರಿಯಷ್ಟೆ ತನ್ನ ಹೆಂಡತಿಯ ಮೂಲಕ ತಿಳಿದುಕೊಂಡಿದ್ದರಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೇ ನಿರ್ಲಿಪ್ತರಂತೆ ವರ್ತಿಸಿದರು.

“ಕೆರೆಗೋ ಬಾವಿಗೋ ಹಾರಕಂಡ್ರೆ ಏನ್ರೀ ಮಾಡೋದು” ಎಂಬ ಚಂದ್ರಮ್ಮನ ಆತಂಕದ ಪ್ರಶ್ನೆಗೆ, “ಸಾಯ್ತಿನಿ ಅನ್ನೋರು ಯಾರೂ ಸಾಯಲ್ಲ ಕಣೇ” ಎಂದು ಸಮಾಧಾನ ಮಾಡಿದರು. ಆದರೆ ಆ ಭೀತಿ ವಾಸ್ತವವಾಗಿ ಗೋವಿಂದಯ್ಯನಿಗೂ ಇದ್ದುದು ಖಂಡಿತ.

ಊರ ಪಕ್ಕದ ಕೆರೆ, ಬಾವಿಗಳನ್ನೆಲ್ಲಾ ಈಜಾಡಿ ಜಾಲಾಡಿದರು. ಕೆರೆಯ ನೀರು ಬಗ್ಗಡಾಗಿದ್ದರೆ, ಬಾವಿ ನೀರಲ್ಲಿ ಗುಳ್ಳೆ ಬರುತ್ತಿದ್ದರೆ, ಇಳಿದು ಇಳಿದು ತಡಕೀ ತಡಕೀ ಸುಸ್ತಾಯಿತು. ಆದರೆ ಕರಿಯ ಮಾತ್ರ ಸಿಗಲೇ ಇಲ್ಲ.

ರಾಧಿಯನ್ನುಳಿದು ಮನೆಯ ಹೆಂಗಸರು ಮಕ್ಕಳೆಲ್ಲ ಕರಿಯ ಸತ್ತೇ ಹೋಗಿದ್ದಾನೆಂಬಂತೆ ರೋಧಿಸುತ್ತಿದ್ದರು. ಮನೆ ಪೂರ್ತಿ ಸತ್ತವರ ಮನೆಯಾಗಿ ಪರಿವರ್ತನೆಯಾಯ್ತು.

ಗೋವಿಂದಯ್ಯ ಪಟ್ಟಣಕ್ಕೆ ಹೊರಟರು. ತಾನು ಕೆಲಸ ಮಾಡುತ್ತಿದ್ದ ಆಪೀಸಿಗೆ ಹೋಗಿ ರಜೆಯನ್ನು ಇನ್ನೂ ಎರಡು ದಿನಕ್ಕೆ ವಿಸ್ತರಿಸಿ ಬಸ್‌ಸ್ಟಾಂಡಿಗೆ ಬಂದರು. ಅಲ್ಲಿಂದ ಸುಮಾರು ಹದಿನೈದಿಪ್ಪತ್ತು ಮೈಲಿ ದೂರದಲ್ಲಿದ್ದ ತಮ್ಮ ನೆಂಟರೊಬ್ಬರ ಮನೆಗೇನಾದರೂ ಹೋಗಿದ್ದಾನೋ ಎಂದು ಅಲ್ಲಿಗೆ ಹೋದರು. ಅಲ್ಲಿಗೆ ಹೋಗಿಲ್ಲ ಎಂದು ತಿಳಿದಾಗ ನಿರಾಸೆಯಾಯಿತು. ಹತ್ತಿರದ ಮತ್ತೆ ನಾಲ್ಕೈದು ಊರಿನ ನೆಂಟರ ಮನೆಗಳಿಗೂ ಹೋಗಿ ವಿಷಯ ತಿಳಿಸಿ ಬಂದರು. ಅಷ್ಟರಲ್ಲಾಗಲೇ ಮುಚ್ಚಂಜೆ ಯಾಗಿತ್ತು. ಊಟ ಮಾಡಿಕೊಂಡು ಹೋಗಲು ಅವರು ಎಷ್ಟು ಬಲವಂತ ಮಾಡಿದರೂ ನಿಲ್ಲದೇ ಹಿಂದಿರುಗಿದರು. ಮನೆಯ ಕಡೆ ಏನೆಲ್ಲಾ ಆಗಿರಬಹುದೋ ಎಂಬುದು ಅವರ ಆತಂಕವಾಗಿತ್ತು.

ಆ ವೇಳೆಯಲ್ಲಿ ಡೈರಿ ಲಾರಿ ಅಥವಾ ಇನ್ನಾವುದೇ ವಾಹನ ಹಳ್ಳಿಗೆ ಹೋಗುವಂತಿರ ಲಿಲ್ಲವಾದ್ದರಿಂದ ಗೋವಿಂದಯ್ಯ ನಡೆದೇ ಹೊರಟರು. ಕಾಡಿನ ಹಾದಿಯಲ್ಲಿ ಸುಮಾರು ಎಂಟು ಹತ್ತು ಕಿಲೋಮೀಟರ್ ದೂರ ನಡೆಯಬೇಕಿತ್ತು. ಸಮಯ ಆಗಲೇ ಹತ್ತು ಗಂಟೆಯಾಗಿತ್ತು.

ಗೋವಿಂದಯ್ಯನವರಿಗೆ ಆ ರಸ್ತೆಯ ಪರಿಚಯ ಇದ್ದರೂ, ಅಲ್ಲಿ ನಡೆದು ಅಭ್ಯಾಸವಿರಲಿಲ್ಲ. ಡೈರಿಯ ಲಾರಿಯಲ್ಲಿ ಓಡಾಡುತ್ತಿದ್ದುದರಿಂದ ಅಂತಹ ಅವಕಾಶ ಇದುವರೆಗೂ ಬಂದಿರಲಿಲ್ಲ. ಒಟ್ಟಿನಲ್ಲಿ ಮಣ್ಣಿನ ಆ ರೋಡಿನಲ್ಲಿ ಎಡುವುತ್ತಾ, ತಗ್ಗು ಗೊತ್ತಾಗದಾಗ ಮುಗ್ಗರಿಸುತ್ತಾ, ಕರಿಯನನ್ನು ಹುಡುಕುವ ಅವಸರದಲ್ಲಿ ಚಪ್ಪಲಿಯನ್ನು ಹಾಕದೇ ಹೊರಟಿದ್ದರಿಂದ ಮುಳ್ಳನ್ನು ತುಳಿಯುತ್ತಾ ನಡೆಯುತ್ತಿದ್ದರು. ಜೊತೆಗೆ ಪ್ರಾಣಿಗಳ ಭಯ. ಹೃದಯ ಕೈಯಲ್ಲಿಡಿದು ನಡೆಯುವಂತಿತ್ತು ಅವರ ಪರಿಸ್ಥಿತಿ, ಕೊನೆಗೂ ಮನೆ ಸೇರಿದಾಗ ಸರಿ ಸುಮಾರು ಹನ್ನೆರಡೂವರೆ ಗಂಟೆಯಾಗಿತ್ತು. ಆಗಲೂ ಅವನ ತಾಯಿ ಮತ್ತು ಹೆಂಡತಿ ಅಳುತ್ತಾ ಕುಳಿತಿದ್ದರು. ಒಲೆ ಬೆಂಕಿ ಕಂಡಿರಲಿಲ್ಲ. ಕರಿಯ ಕಳೆದು ಹೋಗಿದ್ದುದು ಒಂದು ಕಡೆಯ ದುಃಖವಾಗಿದ್ದರೆ, ಇಷ್ಟು ಹೊತ್ತಾಗಿದ್ದರೂ ಗೋವಿಂದಯ್ಯ ಬಾರದುದು ಇನ್ನೊಂದು ಕಾರಣ ವಾಗಿತ್ತು. ನೂರಾರು ರೀತಿಯಲ್ಲಿ ಅವರ ಮಾತುಕತೆ ಆವರಿಸಿತ್ತು. ಬೆಳಗ್ಗೆ ಒಂದಿಷ್ಟು ತಂಗಳನ್ನ ವನ್ನು ಚಿತ್ರನ್ನ ಮಾಡಿದ್ದನ್ನು ತಿಂದದ್ದು ಬಿಟ್ಟರೆ ಹೊಟ್ಟೆಗೆ ಮತ್ತೇನೂ ಇಲ್ಲದ ಗೋವಿಂದಯ್ಯ, ಬಾವಿಗೋ ಕೆರೆಗೋ ಹುಡುಕಲು ಇಳಿದಾಗ ಕೈಕಾಲು ಸುಸ್ತಾಗಿ ಏನಾದರೋ, ಕರಿಯನ ಹೆಣವೇನಾದರೂ ಸಿಕ್ಕಿ ತಮಗೆ ತಿಳಿಸಿದರೆ ಏನು ಅನಾಹುತವಾದೀತೋ ಎಂದು ಬೇಕಂತಲೇ ತಡಮಾಡಿದ್ದಾರೋ ಇತ್ಯಾದಿ. ವಾಸ್ತವವಾಗಿ ಕರಿಯನಿಗೆ ಏನೂ ಆಗಿರಲಿಲ್ಲ. ಗೋವಿಂದಯ್ಯ ನವರು ನೆಂಟರ ಮನೆಯಿಂದ ಬಂದು ಪಟ್ಟಣದಲ್ಲಿ ಬಸ್ಸು ಇಳಿದಾಗ ಕರಿಯ ಅವರನ್ನು ಕಂಡು ಬಸ್ಸಿನ ಮತ್ತೊಂದು ಬದಿಯಿಂದ ಅಡಗಿಕೊಂಡು ಬಂದು ಅದೇ ಬಸ್ಸಿಗೆ ಹತ್ತಿದ್ದ. ಆದರೆ ಗೋವಿಂದಯ್ಯನವರು ಕರಿಯನನ್ನು ಕಾಣದುದರಿಂದ ಅದರ ನಂತರದ ದಿನಗಳಲ್ಲಿಯೂ ಅವನನ್ನು ಹುಡುಕುತ್ತಲೇ ಇದ್ದರು. ಅಲ್ಲೆಲ್ಲೋ ನಡೆದು ಹೋಗುತ್ತಿದ್ದುದನ್ನು ಬಸ್ಸಿನಲ್ಲಿ ತಾವು ಬರುವಾಗ ಕಂಡುದಾಗಿ ಒಬ್ಬರು, ಪೇಟೆಯಲ್ಲಿ ಹೋದಂಗಾಯ್ತು ಅಂತ ಒಬ್ಬರು. ಹೀಗೇ ಊಹಾಪೋಹಗಳು. ಆದರೂ ಅಲ್ಲೆಲ್ಲಾ ಹುಡುಕಿದ್ದಾಯಿತು. ದೇವರು ಹೊರಡಿಸಿ ಕೇಳಿದ್ದೂ ಆಯಿತು. ನಾಲ್ಕೈದು ದಿನಗಳ ನಂತರ ಆ ಊರಿನ ಒಬ್ಬರು ಬಂದು, ಕರಿಯ ಅಲ್ಲಿರುವುದಾಗಿ ತಿಳಿಸಿದಾಗಲೇ ಸಮಾಧಾನ. ಗೋವಿಂದಯ್ಯನಿಗಂತೂ ಸಿಕ್ಕರೆ ಕೊಂದೇ ಬಿಡುವಷ್ಟು ರೋಷ ಉಕ್ಕಿತ್ತು. “ಕರಿಯ ಓಡಿ ಹೋಗಿರುವ ಸುದ್ದಿ ನಿಮಗೆ ತಿಳಿಸಿದ್ದರೂ ನಾವು ಹುಡುಕುತ್ತಿದ್ದೇವೆ ಎಂದು ಗೊತ್ತಿದ್ದರೂ ಏಕೆ ಕರಿಯ ಅಲ್ಲಿಗೆ ಬಂದ ವಿಷಯ ತಿಳಿಸಲಿಲ್ಲ?” ಎಂಬ ಆಪಾದನೆಗೆ “ನಿಮಗೆ ಬಸ್‌ಸ್ಟಾಂಡಿನಲ್ಲಿ ಸಿಕ್ಕಿ `ಅವರ ಮನೆಗೆ ಹೋಗಿ ಬರುತ್ತೀನಿ ಅಂತ ಹೇಳಿ ಬಂದಿದೀನಿ’ ಅಂತ ಅಂದನಲ್ಲ ಮತ್ತೇ!?” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

“ಈ ನನ್ಮಗ ಹಾಯಾಗಿ ನೆಂಟ್ರು ಮನೆಯೊಳಗೆ ತಿನ್ಕಂಡುಬಿದ್ದೌನೆ, ನಾನಿಲ್ಲಿ ಕೆಲಸ ರಜೆ ಹಾಕಿ ಮಳೆ ಬಿಸಿಲು ಅಂತ ಅನ್ನದೇ, ಹೊಟ್ಟೆಗೆ ಕೂಳೂ ಇಲ್ಲದೇ ಹುಡಿಕಂಡು ತಿರ್ಗದು….ಬರ್ಳಿ ಇವನಮ್ಮನ್….” ಎನ್ನುವಾಗ ಬಯ್ಗುಳ ವೈಪರೀತ್ಯ ಅರ್ಥ ಕೊಡುವುದನ್ನು ಅರಿತು ಅಲ್ಲಿಗೇ ತಡೆದರು. “ಎಲ್ಲಾದರು ಹಾಳು ಬಡುಸ್ಕಂಡು ಸಾಯ್ಲಿ” ಎಂದು ಸಿಟ್ಟಿನಲ್ಲಿ ಹೆಂಡತಿಯನ್ನು ಕರೆದುಕೊಂಡು ಪಟ್ಟಣಕ್ಕೆ ಹೊರಟೂ ಬಿಟ್ಟರು.

ಪ್ರತಿದಿನವೂ ತಪ್ಪದೇ ಪೋಲೀಸನವನೊಬ್ಬ ಮನೆಗೆ ಕರಿಯನನ್ನು ಹುಡುಕಿಕೊಂಡು ಬರುತ್ತಿದ್ದ. ಕೊನೆಗೆ ಕರಿಯನ ತಂದೆ ಸ್ವತಃ ಅಲ್ಲಿಗೆ ಹೋಗಿ ಕರೆದುಕೊಂಡು ಬಂದು ಊರಿನ ಮುಖ್ಯಸ್ಥರನ್ನು ಹಿಡಿದು, ಅವರ ಮೂಲಕ ಒಂದಷ್ಟು ಹಣವನ್ನು ಪೊಲೀಸರಿಗೆ ಕೊಡಿಸಿ ಕರಿಯನನ್ನು ಹೊಡೆಯಲು ಆಸ್ಪದವಾಗದಂತೆ ನೋಡಿಕೊಂಡರು.

ಮಗ ಇನ್ನು ಮುಂದಾದರೂ ಸರಿಯಾಗಿ ಬಾಳಲಿ ಎಂದು ತಂದೆತಾಯಿಗಳು ನಾಲ್ಕು ಜನ ಹಿರಿಯರಿಂದ ಬುದ್ಧಿ ಹೇಳಿಸುವ ವ್ಯವಸ್ಥೆ ಮಾಡಿದರು. ಹೇಳಲು ಬಂದವರಿಗೆ “ನಿಮ್ಮ ಹೆಂಡತಿ ಹೀಗೆ ಮಾಡಿದ್ರೆ ಸುಮ್ಮನಿರುತ್ತಿದ್ದಿರಾ?” ಎಂದು ಮರು ಪ್ರಶ್ನಿಸುತ್ತಿದ್ದ, ರಾಧಿ ಓಡಿಹೋಗಿದ್ದುದು ಯಾವನ್ದೋ ಜೊತೆಯಲ್ಲಿ ಮತ್ತು ಈಗ ಆಕೆ ಬಸರಿಯಾಗಿರುವುದು ಆತನಿಗೆ ಎಂಬುದು ಅವನ ವಾದ. ಈ ಹಿಂದಿನ ಪಂಚಾಯತಿಗಳಲ್ಲಿ ಈ ಕುರಿತು ಚರ್ಚೆ ನಡೆದು ರಾಧಿಯನ್ನು ಹೊರಗೇ ಇರಿಸಲು ಒಪ್ಪಿದ್ದುದು, ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಇದ್ದ ಮಾರ್ಗ, ಅಲ್ಲದೇ, ತನ್ನನ್ನು ಪೊಲೀಸರಿಂದ ಹೊಡೆಸಿದರೆ ಬಾಯಿ ಮುಚ್ಚಿಕೊಂಡು ಸುಮ್ಮನಾಗುತ್ತೇನೆ ಎಂದೇ ಶಂಕರಯ್ಯ ಕಂಪ್ಲೇಂಟ್ ಕೊಟ್ಟಿದ್ದುದು ಎನ್ನುತ್ತಾನೆ. ಪೋಲೀಸರಿಂದ ಹೊಡೆತ ತಿನ್ನದೇ ಬಂದನೆಂಬ ಹೆಗ್ಗಳಿಕೆಯನ್ನು ಶಂಕರಯ್ಯನಿಗೆ ತಿಳಿಸಿರೆಂದು ಪಂಚಾಯತಿದಾರರಿಗೇ ಹೇಳುತ್ತಾನೆ.

ಈ ಎಲ್ಲಾ ಕಾರಣಗಳಿಂದ ಯಾರಿಗೂ ಬುದ್ಧಿ ಹೇಳುವ ಇಚ್ಚೆ ಇರಲಿಲ್ಲ. ಮೇಲಾಗಿ, ಪೋಲೀಸರಿಂದ ಹೊಡೆಸಿದ್ದರೆ ಚೆನ್ನಾಗಿತ್ತು ಎಂದು ಅವರವರಲ್ಲಿಯೇ ಅಂದುಕೊಳ್ಳುವಂತಾಯಿತು.

ಆ ನಂತರದ ದಿನಗಳಲ್ಲಿ ಕರಿಯ ಬೇಸಾಯ ಕಟ್ಟಲಿಲ್ಲ. ಮನೆಯಲ್ಲಿ ಉಣ್ಣುವುದು, ಅವರಿವರ ಮನೆಯಲ್ಲಿ ಕುಳಿತು ಹರಟೆ ಹೊಡೆಯುವುದು, ಚಕ್ಕಾಬಾರ, ಆನೆಘಟ್ಟ ಆಟ ಆಡುವುದು. ಹೀಗೇ ದಿನಗಳನ್ನು ಕಳೆಯುತ್ತಿದ್ದನು.

ಜನರ ಚರ್ಚೆಗೆ ಅತ್ಯುತ್ತಮ ವಿಚಾರವಾದ ಕರಿಯನ ವೈವಾಹಿಕ ಜೀವನ ಅನೇಕ ಆಯಾಮಗಳನ್ನು ಪಡೆದು ಅನೇಕರ ಹೇಳಿಕೆಗಳನ್ನು ತೂಗಿಸಿ, ಕರಿಯನೇನಾದರೂ ಷಂಡನೋ ಎಂಬ ಶಂಕೆಯನ್ನು ಅನೇಕರು ಅಲ್ಲಿ ಇಲ್ಲಿ ವ್ಯಕ್ತಪಡಿಸಿದರೂ ಅದನ್ನು ನೇರವಾಗಿ ಯಾರೂ ಹೇಳುತ್ತಿರಲಿಲ್ಲ.

ಆ ವರ್ಷದ ಬೇಸಾಯವನ್ನು, ಗೋವಿಂದಯ್ಯನವರು ನೀಡುತ್ತಿದ್ದ ಹಣದಲ್ಲಿ, ಕರಿಯನ ಗೈರು ಹಾಜರಿಯಲ್ಲಿ ವಯಸ್ಸಾದ ತಂದೆಯವರೇ ಆಳುಗಳ ಮೇಲೆ ನಿರ್ವಹಿಸಿದರು. ಹೀಗೇ ಇದ್ದಾಗ ರಾಧಿಗೆ ಗಂಡುಮಗು ಜನಿಸಿತು. ಅದೇ ಸಣ್ಣ ಕೋಣೆಯಲ್ಲಿ.

ಕರಿಯ ಮಗುವನ್ನು ಎತ್ತಿ ಮುದ್ದಾಡುವುದಿರಲಿ, ಮುಖವನ್ನು ನೋಡಲೂ ಬರಲಿಲ್ಲ. ಅವರಿವರ ಮನೆಯಲ್ಲಿ ಕುಳಿತು ಹರಟೆ ಹೊಡೆಯುವ ಅವನ ದೈನಂದಿನ ಕಾರ್ಯದಲ್ಲಿ ಯಾರಾದರೂ ಈ ವಿಷಯ ಪ್ರಸ್ತಾಪಿಸಿದರೆ ಯಾರಿಗೋ ಹುಟ್ಟಿದ ಮಗಾನ ನಂದು ಅಂತ ಮುದ್ದಾಡಬೇಕಾ? ನಾನೂ ಗಂಡಸು” ಎಂದು ತನ್ನ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದ. `ಆಕೆ ಓಡಿಹೋಗಿದ್ದುದು ಯಾವನೋ ಹೊಲೆಯನೋ ಮಾದಿಗನೋ ಜೊತೆಯಲ್ಲಿ’ ಎಂಬ ತನ್ನ ಹಳೆಯವಾದವನ್ನು ತಪ್ಪದೇ ಹೇಳುತ್ತಾನೆ. ಅದನ್ನು ಸಾಬೀತು ಪಡಿಸಲೆಂದು ಅಳುತ್ತಾನೆ: ತನ್ನ ಬದುಕು ಹೀಗಾಯಿತಲ್ಲಾ ಎಂದು ಕೊರಗುತ್ತಾನೆ, ತಿಂಗಳಾದರೂ ಗಡ್ಡ ಬಿಟ್ಟಿರುತ್ತಾನೆ.

ಗಂಡಸೊಬ್ಬನು ನಿಸ್ಸಹಾಯಕನಂತೆ ಅಳಬೇಕೆಂದರೆ ರಾಧಿ ಮಾಡಿಕೊಂಡಿರುವುದು ಅಚಾತುರ್ಯವೇ ಇದ್ದರೂ ಇರಬಹುದೆಂದು ನಂಬಿದರೂ ಸಾಬೀತುಪಡಿಸಲು ಸಾಕ್ಷಿ ಇರಲಿಲ್ಲ. ಆದರೆ ರಾಧಿಯ ತಾಯಿಯೂ ಅದೇ ಊರಲ್ಲಿ, ಆ ಮನೆಯಲ್ಲಿಯೇ ಹುಟ್ಟಿ ಬೆಳೆದವಳಾದ್ದರಿಂದ ಆ ವಂಶ ಅಂತಹದ್ದಲ್ಲ ಎಂದು ಬಲವಾಗಿ ನಂಬಿರುವವರೂ ಇಲ್ಲದಿಲ್ಲ. ಈ ಕುರಿತು ಯಾವ ಹೇಳಿಕೆ ಕೇಳಿಕೆಗಳಿಗೂ ರಾಧಿ ಮೌನ ವಹಿಸುವುದು, ಓಲೆ ಮಾರಿದ ಅಂಗಡಿಯ ಬಗ್ಗೆ ಕೇಳಿದಾಗಲೂ ಏನೂ ಹೇಳದಿರುವುದು ಈ ಎಲ್ಲಾ ಅಂಶಗಳು ಕರಿಯನ ವಾದಕ್ಕೆ ಪುಷ್ಟಿ ನೀಡುತ್ತವೆ.

ಮಗುವಿನ ನಾಮಕರಣವೂ ರಾಧಿಯ ತಂದೆ ತಾಯಿಗಳ ಗೈರುಹಾಜರಿಯಲ್ಲಿ ಗಂಡನ ಮನೆಯಲ್ಲಿಯೇ ನಡೆಯಿತು. ಚೊಚ್ಚಲು ಹೆರಿಗೆಯನ್ನು ತೌರಿನಲ್ಲಿ ನಡೆಸಬೇಕೆಂಬ ರಾಧಿಯ ತಾಯಿಯ ಹಂಬಲ ಹಾಗೆಯೇ ಉಳಿದಿತ್ತು. ಕರಿಯ ಆ ದಿನ ಮನೆ ಸೇರಿರಲಿಲ್ಲ. ತನ್ನ ಚಿಕ್ಕಪ್ಪ ಕೆಂಗಣ್ಣನ ಮನೆಯಲ್ಲಿ ಊಟ ಮಾಡಿದ್ದ. ಅದಕ್ಕಾಗಿ ಕರಿಯನ ತಾಯಿ ತಂದೆಯರು ಕರಿಯನ ಚಿಕ್ಕಪ್ಪನ ಕುಮ್ಮಕ್ಕೇ ಇಷ್ಟಕ್ಕೆಲ್ಲಾ ಕಾರಣವೆಂದು ದೂಷಿಸುತ್ತಿದ್ದರು.

ಮೊದಲಿನ ವ್ಯವಸ್ಥೆಯಲ್ಲಿಯೇ ನಂತರದ ದಿನಗಳೂ ಕಳೆದವು. ರಾಧಿ ಆ ಕೋಣೆಯನ್ನೇ ಪ್ರಪಂಚವೆಂದು ತಿಳಿದು ತನ್ನ ಮಗುವಿನೊಂದಿಗೆ ಬದುಕಿದ್ದಳು.

ಆ ವರ್ಷದ ಸುಗ್ಗಿ ಬಂದರೂ ಕರಿಯ ಮನೆಯ ಕೆಲಸಬಿಟ್ಟು, ತಿರುಗುವುದನ್ನು ಬಿಡಲಿಲ್ಲ. ಗೋವಿಂದಯ್ಯ ಪೇಟೆಯಲ್ಲಿದ್ದುಕೊಂಡು ಎಲ್ಲವನ್ನು ಹಣ ಹಾಕಿ ಆಳಿನಿಂದಲೇ ಮಾಡಿಸಬೇಕಾಯಿತು. ಬರುವ ಅಲ್ಪ ಸ್ವಲ್ಪ ಸಂಬಳ ತನ್ನ ಕುಟುಂಬದ ನಿರ್ವಹಣೆಗೇ ಸಾಕಾಗದಿದ್ದಾಗಲೂ ಹೇಗೋ ಮಾಡಿ ಗದ್ದೆಯ ಕೆಲಸ ಮಾಡಿಸಿ ಆ ವರ್ಷದ ಬೆಳೆ ಕಂಡರು. ಆ ಮುಂದೆಯೂ ಕರಿಯನ ಅದೇ ವರ್ತನೆಯನ್ನು ಸಹಿಸುವುದು ಅವರಿಂದಾಗದಾಯಿತು. ತನ್ನ ತಂದೆ ತಾಯಂದಿರೊಂದಿಗೆ ಕುಳಿತು ಕರಿಯನಿಗೆ ಬೇರೆ ಕಳುಹಿಸುವ ನಿರ್ಧಾರ ಪ್ರಕಟಿಸಿದರು. ಮುಂದಿನ ಆಗು ಹೋಗುಗಳ ಚರ್ಚೆ ನಡೆದು ಭಾಗ ಕೊಡುವುದೇ ಸರಿಯಾದ ಮಾರ್ಗವೆಂದು ಅಭಿಪ್ರಾಯಕ್ಕೆ ಬಂದರು. “ನಂದೇನೈತೋ ಅದನ್ನು ಕೊಟ್ಟುಬಿಡ್ರಿ, ನನ್ನಿಷ್ಟ ಬಂದಂಗೆ ನಾನಿರ್‌ತೀನಿ” ಎಂದಿದ್ದ ಕರಿಯನ ಮಾತುಗಳು ಈ ಕ್ರಿಯೆಗೆ ಪ್ರೇರಕ ಅಂಶಗಳಾಗಿದ್ದವು.

“ತನಗೆ ಪಾಲಲ್ಲಿ ಕಡಿಮೆಯಾದರೂ ಚಿಂತೆಯಿಲ್ಲ; ಅದನ್ನೇ ನಂಬಿರುವ ಕರಿಯನಿಗೆ ನಷ್ಟವಾಗಬಾರದು. ಬೇರೊಬ್ಬ ಈ ಪಾಲನ್ನು ಅಸಮರ್ಪಕ ಎನ್ನುವಂತಿರಬಾರದು” ಎಂಬ ಮನೋಭಾವದ ಗೋವಿಂದಯ್ಯ, ಉದಾರ ಬುದ್ಧಿಯಿಂದಲೇ ಕರಿಯನಿಗೆ ನ್ಯಾಯ ಪಂಚಾಯತಿಯಲ್ಲಿ ಭಾಗ ಮಾಡಿಕೊಟ್ಟರು. ಹೊಲಗದ್ದೆಗಳಲ್ಲಿ ಅರ್ಧಕ್ಕಿಂತಲೂ ಕೊಂಚ ಅಧಿಕ ಎನ್ನುವಷ್ಟು, ಹೊಲದ ಮನೆ ಇವೆಲ್ಲಾ ಬಂದವು. ಕರಿಯ ತನ್ನ ಹೆಂಡತಿ ಮಕ್ಕಳೊಂದಿಗೆ ಆ ಮನೆಗೆ ಹೋಗುವುದೆಂದೂ ತೀರ್ಮಾನವಾಯಿತು. ಆ ಹಿಂದಿನ ದಿನಸಿಯಲ್ಲಿ, ಕರಿಯ ಅದಕ್ಕಾಗಿ ಶ್ರಮವಹಿಸದಿದ್ದರೂ ಅರ್ಧಪಾಲು ನೀಡಲಾಗಿತ್ತು.

ಬೇರೆ ಹೋದ ಮೇಲೆ ಕೇವಲ ತನ್ನ ಅಧಿಕಾರಕ್ಕೆ ಮಾತ್ರ ಸೀಮಿತವಾಗುವ ರಾಧಿಯನ್ನು ಕೊಲ್ಲುತ್ತೇನೆಂಬ ಅನೇರವಾದ ಮಾತುಗಳನ್ನಾಡುತ್ತಿದ್ದ. ಆ ಭೀತಿಯಿಂದಲೇ ಚಂದ್ರಕ್ಕ ನಾಲ್ಕು ದಿನ ಆ ಮನೆಗೂ ಹೋಗಿ, ಅವರು ಅಲ್ಲಿ ಹೊಂದಿಕೊಳ್ಳುವವರೆಗೂ ಇದ್ದು ಬಂದಳು. ಹೊಲದ ಮನೆಯಲ್ಲಿಯೂ ರಾಧಿಗೆ ಅದೇ ಸ್ಥಾನಮಾನ ಸಿಕ್ಕಿದ್ದು. ಬಾಗಿಲ ಬಳಿಯಿದ್ದ ಕೋಣೆಯಲ್ಲಿಯೇ ತನ್ನ ಮಗುವಿನೊಂದಿಗೆ ಇರಬೇಕಾಯಿತು. ತನ್ನ ಆಹಾರವನ್ನು ಬೇಯಿಸಿಕೊಳ್ಳಲೂ ಮೂರುಕಲ್ಲಿನ ಒಲೆ ಇಟ್ಟು ವ್ಯವಸ್ಥೆ ಮಾಡಿಕೊಂಡಳು. ಉಳಿದ ಇಡೀ ಮನೆಯಲ್ಲಿ ಕರಿಯನೇ ತನ್ನ ಅಸ್ಥಿತ್ವವನ್ನು ಇರಿಸಿಕೊಂಡ. ತನ್ನ ಅಡಿಗೆಯನ್ನು ತಾನೇ ಮಾಡಿ ಕೊಳ್ಳುತ್ತಿದ್ದ.

ತನ್ನ ಸ್ವಾಭಿಮಾನ ಬಿಡಬಾರದೆಂದು ಕರಿಯ ಆಗಾಗ್ಗೆ ರಾಧಿಯನ್ನು ಸಣ್ಣ ಪುಟ್ಟ ತಪ್ಪಿಗಾಗಿ ಮನಸ್ವೀ ಹೊಡೆಯುತ್ತಿದ್ದ. ಬಿಡಿಸಿಕೊಳ್ಳಲು ಯಾರು ಇರುತ್ತಿರಲಿಲ್ಲವಾದ್ದರಿಂದ ಪೌರುಷವನ್ನು ಒಂದೆರಡು ನಿಮಿಷ ಮಾತ್ರ ಕೆದಕಿ ನಂತರ ಸುಮ್ಮನಾಗುತ್ತಿದ್ದ.

ರಾಧಿ ಮನೆಯೊಳಕ್ಕೆ ಹೋಗುವಂತಿರಲಿಲ್ಲವಾದ್ದರಿಂದ ಮನೆಯೆಲ್ಲಾ ಧೂಳು ಹೊಡೆಯದೇ ಜೇಡನ ಬಲೆಯಿಂದ ತುಂಬಿತ್ತು. ನೆಲವನ್ನು ತೊಳೆದು ಎಷ್ಟು ದಿನಗಳಾಗಿದ್ದವೋ ಏನೋ ಕೊಳೆ ಮೆತ್ತಿಕೊಂಡಿತ್ತು.

ದಿನಗಳು ಉರುಳುತ್ತಿದ್ದವು.

ವ್ಯವಸಾಯವನ್ನು ಬಿಡಲೂ ಆಗದ ಕಟ್ಟಿಕೊಳ್ಳಲು ಆಗದ ಮಟ್ಟದಲ್ಲಿ ನಡೆಸುತ್ತಿದ್ದ. ಸ್ವಪಾಕಕ್ಕೇ ಸಾಕಷ್ಟು ವೇಳೆ ವ್ಯಯವಾಗುತ್ತಿದ್ದುದರಿಂದ ಅವನು ದುಡಿಯುವುದು ಅಷ್ಟರಲ್ಲೇ ಇತ್ತು. ತನ್ನ ಪಾಲಿಗೆ ಬಂದ ಭೂಮಿಯಲ್ಲಿಯೂ ಅರ್ಧದಷ್ಟನ್ನು ಬೀಳು ಬಿಟ್ಟ.

ರಾಧಿ-ಕರಿಯರ ಸಂಸಾರ ಹೀಗೇ ನಡೆಯುತ್ತಿತ್ತು. ರಾಧಿ ಹೊರಗಿನ ಕೊಠಡಿಯಲ್ಲೇ, ಕರಿಯ ಇನ್ನುಳಿದ ಭಾಗದಲ್ಲೇ ತಮ್ಮ ತಮ್ಮ ಅಸ್ತಿತ್ವ ಇರಿಸಿಕೊಂಡಿದ್ದರು.

ಒಂದು ದಿನ ರಾಧಿ ವಾಂತಿ ಮಾಡಿಕೊಂಡದ್ದನ್ನು ನೆವ ಮಾಡಿಕೊಂಡು ಅನುಭವಸ್ಥ ಹೆಂಗಸರು, ಆಕೆ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಳೆಂದು ಊರಿಗೆಲ್ಲಾ ಸುದ್ದಿ ಹಬ್ಬಿಸಿದರು.

ತನ್ನ ಹೆಂಡತಿಯ ನೆರಳನ್ನು ಕಂಡರೂ ಸಿಡಿಯುವ ಕರಿಯ, ಆಕೆಯ ಈ ಬೆಳವಣಿಗೆಗೆ ನಿಜವಾಗಿ ಕಾರಣನಾಗಿದ್ದಾನೆಯೇ? ಅಥವಾ ಉಪ್ಪು ಖಾರ ತಿನ್ನುವ ದೇಹದ ರಾಧಿ, ಇಂದ್ರಿಯ ಚಪಲಕ್ಕಾಗಿ ಮತ್ತೇನಾದರೂ ಮಾಡಿಕೊಂಡಿದ್ದಾಳೋ ಎಂಬ ಸಂಶಯ ಬಹಳ ಜನರಲ್ಲಿ ಸಹಜವಾಗಿ ಬಂತು.

ಈ ಘಟನೆ ವಿಚಿತ್ರವಾದ ತಿರುವುಗಳನ್ನು ಪಡೆಯಲಾರಂಭಿಸಿತು. ಮತ್ತೊಮ್ಮೆ ಕರಿಯ ರಾಧಿಯರ ವಿಚಾರ ಪ್ರಚಾರಕ್ಕೆ ಬಂತು.

ಈ ಸಮಸ್ಯೆಗೆ ಉತ್ತರ ಸಿಗಲು ಸಾಧ್ಯವಿದ್ದದ್ದು ಅವರಿಬ್ಬರಿಂದಲೇ, ರಾಧಿಗೆ ಕೇಳಿದರೆ ಸಂಕೋಚದಿಂದ ಏನೂ ಹೇಳುತ್ತಿರಲಿಲ್ಲ; ಕರಿಯನಂತೂ ಇದು ತನ್ನ ಮಗುವೇ ಅಲ್ಲವೆಂದೂ ತಾನು ಮನೆಯಲ್ಲಿಲ್ಲದಿದ್ದಾಗ ಯಾವನದೋ ಜೊತೆ ಚಕ್ಕಂದವಾಡುತ್ತಿದ್ದಳೆಂದೂ, ರಾತ್ರಿ ಹೊತ್ತು ನೀರು ತರುವ ನೆಪದಲ್ಲಿ ಕೆರೆಯ ಕಡೆ ಬಹಳ ಹೊತ್ತು ಹೋಗುವಳೆಂದೂ ಹೇಳಿಕೆ ನೀಡಿದ. ತಾನು ಆಕೆಯನ್ನು ಮುಟ್ಟಿಯೇ ಇಲ್ಲ ಎಂದ ಮೇಲೆ ಆ ಮಗು ತನ್ನದಾಗಲು ಸಾಧ್ಯವೇ ಇಲ್ಲ ಎಂದು ಉದ್ಗರಿಸುತ್ತಿದ್ದ. ಈ ವಿಷಯ ಪ್ರಸ್ತಾಪಕ್ಕೆ ಬಂದಾಗ ಆತ ಮನಸ್ವೀ ಅಳುತಿದ್ದ. ಅಷ್ಟೂ, ಅತ್ತು ಕಣ್ಣುಗಳು ಯಾವಾಗಲೂ ಕೆಂಪಾಗಿರುತ್ತಿದ್ದವು. ತಲೆ ಬಾಚುತ್ತಿರಲಿಲ್ಲ. ಗಡ್ಡ ಬೋಳಿಸುತ್ತಿರಲಿಲ್ಲ.

ಈ ಎಲ್ಲಾ ಅಂಶಗಳನ್ನು ತೂಗಿ ನೋಡಿದರೇ ರಾಧಿ ಯಾರದೋ ಜೊತೆ ಗೌಪ್ಯ ಸಂಬಂಧ ಹೊಂದಿರುವಳೆಂಬ ಸಂಶಯವೇ ಪ್ರಬಲವಾಗುತ್ತಿತ್ತು. ಅದೇ ವೇಳೆಗೆ, ಒಂದೇ ಮನೆಯಲ್ಲಿ ಒಂದು ಹೆಣ್ಣು ಒಂದು ಗಂಡು ಇರುವಾಗ, ಅದೂ ಯಾರದೂ ಅತಿಕ್ರಮ ಪ್ರವೇಶವಿಲ್ಲದಿರುವಾಗ, ಗಂಡ-ಹೆಂಡರೆಂಬ ಸಂಬಂಧದಿಂದಾಗಿ ಕಾಮಕ್ಕೆ ಯಾವದೇ ಅಡೆತಡೆಯಿಲ್ಲದಿರುವಾಗ, ಕರಿಯನದೇ ಈ ಮಗು ಏಕಾಗಿರಬಾರದೆಂಬ ಸಂಶಯವೂ ಬಾರದಿರುತ್ತಿರಲಿಲ್ಲ. ಆದರೆ, ಕರಿಯ ‘ದೇವರಾಣೆಗೂ ನಾನು ಅವಳನ್ನು ಮುಟ್ಟಿಯೇ ಇಲ್ಲ’ ಎಂದಾಗಲಂತೂ ಅವನ ಮಾತನ್ನು ನಂಬದಿರಲೂ ಆಗುತ್ತಿರಲಿಲ್ಲ. ಆದರೂ ಯಾರೂ ಅವನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.

ಇದೊಂದು ಜಿಗುಟಿನ ಸಮಸ್ಯೆಗೆ ಪರಿಹಾರ ಹುಡುಕುವ ಕರ್ಮ ಪುನಃ ಗೋವಿಂದಯ್ಯ ನವರಿಗೇ ಅಂಟಿಕೊಂಡಿತು. ‘ಹೋದೆಯಾ ಪಿಶಾಚಿ ಅಂದರೆ ಬಂದ ಗವಾಕ್ಷೀಲಿ’ ಅನ್ನೋ ಹಾಗೆ ಬೇರೆಯಾದ ನಂತರವೂ ನಿರ್ಮಲವಾಗಿ ಉಸಿರಾಡಲು ಅವಕಾಶ ಸಿಗಲಿಲ್ಲ. “ಇವಂದು ಸಾಯತಂಕ ಇದ್ದದ್ದೇ, ಹಾಳಾಗೋಗ್ಲಿ ಬಿಡು, ನಮ್ಗೇನು” ಎಂದು ಕೋಪದಲ್ಲಿ ಅಂದರೂ ಆ ಸಂಸಾರವನ್ನು ಸರಿಪಡಿಸುವ ನೈತಿಕ ಹೊಣೆ ಅವರ ಮೇಲೆ ಇದ್ದೇ ಇತ್ತು. ಅದು ಅವರಿಗೂ ಗೊತ್ತಿತ್ತು.

ಕರಿಯನಿಗೆ ಗೋವಿಂದಯ್ಯನವರಿಂದ ಪೇಟೆಯ ಮನೆಗೆ ಬರುವಂತೆ ಕರೆ ಬಂದಿತು. ಒಂದು ಮಧ್ಯಾಹ್ನ ವಿಚಾರಣೆಯೂ ಆಯಿತು. ತನಗೂ ಆಕೆಯು ಗರ್ಭಿಣಿಯಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪುನರುಚ್ಚರಿಸಿದ. ಗೋವಿಂದಯ್ಯನ ಇದ್ದ ಒಂದೇ ಒಂದು ಗಂಡು ಮಗುವಿನ ಮೇಲೆ ಆಣೆ ಮಾಡಿ ತನ್ನ ವಾದವನ್ನು ಗಟ್ಟಿಪಡಿಸಿದ.

ಗೋವಿಂದಯ್ಯನವರು ಇಲ್ಲಿಂದಾಚೆಗೆ ನಿಜವಾಗಿ ತಲೆಕೆಡಿಸಿಕೊಳ್ಳುವ ಪ್ರಮೇಯ ಬಂದಿತು. ತಮ್ಮ ಗೌರವಾನ್ವಿತ ವಂಶಕ್ಕೆ ತನ್ನ ಅಕ್ಕನ ಮಗಳೇ, ತನ್ನ ತಮ್ಮನ ಹೆಂಡತಿಯೇ ಮಸಿ ಬಳೆಯುತ್ತಾಳೆಂದು ಅವರು ನಂಬಿರಲಿಲ್ಲ.

ಆ ದಿನವೆಲ್ಲಾ ಕರಿಯ-ರಾಧಿಯರ ವಿಚಾರವೇ ಗೋವಿಂದಯ್ಯನವರನ್ನು ಯೋಚನೆಗೀಡು ಮಾಡಿತ್ತು. ತನ್ನ ಹೆಂಡತಿ ಚಂದ್ರಕ್ಕನೊಂದಿಗೆ ಮಾತನಾಡುತ್ತಾ, ‘ರಾಧಿಯನ್ನು ಕರೆಸಿ ಕೇಳೋಣವೇ’ ಎಂದರು. “ಅವಳೂ ಅದು ತನ್ನ ಗಂಡಂದೇ ಮಗು ಅಂತಾಳೆಯೇ ಹೊರತು ಬೇರೆಯರದ್ದು ಅಂತ ಹೇಳ್ತಾಳ? ಎಂಬ ಚಂದ್ರಕ್ಕನ ಪ್ರತಿಕ್ರಿಯೆಯಿಂದ ಇಬ್ಬರನ್ನೂ ಒಟ್ಟಿಗೆ ಕರೆಸುವುದೆಂದಾಯಿತು.

ಗೋವಿಂದಯ್ಯನವರು ತಮ್ಮ ಪರಿಚಯದ ಡಾಕ್ಟರ್‌ರೊಬ್ಬರನ್ನು ಸಂಪರ್ಕಿಸಿ ಗೌಪ್ಯವಾಗಿ ರಾಧಿಗೆ ಅಬಾರ್ಷನ್ ಮಾಡಿಸುವ ಬಗ್ಗೆ ಮಾತನಾಡುತ್ತಿದರು. ಡಾಕ್ಟರರು, ಈ ವಿವರಗಳನ್ನೆಲ್ಲಾ ತಿಳಿದು, ಕರಿಯನ ಕೊನೆ ನಿರ್ಧಾರವನ್ನು ಕೇಳಿ ನಂತರ ಮುಂದು ವರೆಯೋಣವೆಂಬ ಸಲಹೆ ನೀಡಿದರು. ವಾಸ್ತವವಾಗಿ ಗರ್ಭಪಾತ ಅಪರಾಧವಾದರೂ, ತಾಯಿಯ ದೇಹಕ್ಕೆ ಆಘಾತ ವಾಗುತ್ತದೆಂದು ತಿಳಿದಿದ್ದರೂ ಗೋವಿಂದಯ್ಯನವರಿಗೆ ಇದಲ್ಲದೆ ಬೇರೆ ಮಾರ್ಗವಿರಲಿಲ್ಲ. ಅಲ್ಲದೇ ಇಂದು, ನಾಳೆ ಎಂದು ಮುಂದೂಡುವಂತಹ ವಿಷಯವೂ ಅಲ್ಲ.

‘ಮಧ್ಯಾಹ್ನ ಎರಡು ಗಂಟೆಯೊಳಗೇ ಅಂತಿಮ ತೀರ್ಮಾನ ಕೈಗೊಂಡು ಯಾವುದಕ್ಕೂ ಕೂಡಲೇ ಪೋನ್ ಮಾಡಿ ತಿಳಿಸುತ್ತೇನೆ. ಒಂದು ವೇಳೆ ಗರ್ಭಪಾತ ಮಾಡಬೇಕಾಗಿ ಬಂದಲ್ಲಿ ನೀವು ಸಹಕರಿಸುತ್ತೀರಾ’ ಎಂದು ಗೋವಿಂದಯ್ಯ ಕೇಳಿ, ಅವರ ಅಪಾಯಿಂಟ್‌ಮೆಂಟ್‌ನ ಖಚಿತಪಡಿಸಿಕೊಂಡು ಮಧ್ಯಾಹ್ನದ ಊಟಕ್ಕೆ ಅರ್ಧ ಗಂಟೆ ಬೇಗನೇ ಮನೆಗೆ ಹೊರಟರು.

ಅವರ ನಿರೀಕ್ಷೆಯಂತೆ ಕರಿಯ ಮತ್ತು ರಾಧಿ ಇಬ್ಬರೂ ಬಂದಿದ್ದರು. ತಮ್ಮ ಊಟಕ್ಕಿಂತ ಮೊದಲೇ ಈ ವಿಷಯದ ಇತ್ಯರ್ಥಕ್ಕೆ ಕುಳಿತರು.

ರಾಧಿಗೆ ಗೋವಿಂದಯ್ಯನವರು ಕೇಳಿದರು: “ಈಗ ಕೊನೇ ಮಾತು ಹೇಳು, ಈ ಮಗು
ಕರಿಯನದೋ ಅಲ್ಲವೋ? ಅಲ್ಲ ಅಂತಾದರೆ, ನಾನು ಈಗಾಗಲೇ ಡಾಕ್ಟರ್‌ನ ಕೇಳಿದೀನಿ
ಅಬಾರ್ಷನ್ ಮಾಡಕ್ಕೇ ಅಂತ. ಆ ಮಗೂನ ಹೊಟ್ಟೆಯಲ್ಲಿಯೇ ಸಾಯಿಸಿ ಕರಗಿಸಿಬಿಡ್ತಾರೆ”.

ರಾಧಿ, ಕರಿಯನ ಮುಖವನ್ನೊಮ್ಮೆ ನೋಡಿ ತಲೆ ತಗ್ಗಿಸಿದಳು. ಅವಳು ಮೌನವಾಗಿಯೇ ಇದ್ದದ್ದು ಕಂಡು ಗೋವಿಂದಯ್ಯನವರ ಸಿಟ್ಟು ಏರಿತು. “ನಿಮ್ಮ ಧಿಮಾಕನ್ನೆಲ್ಲಾ ತೀರಿಸಿಕೊಂಡು ಹೇಳೋತಂಕ ಟೈಮಿಲ್ಲ; ಜಲ್ದಿ ಎರಡರಲ್ಲೊಂದು ತೀರ್ಮಾನವಾಗಬೇಕು”. ಅವರ ಬಿರುಸಿನ ನುಡಿಗೆ ರಾಧಿ ಮಾತನಾಡದೇ ಕಣ್ಣಲ್ಲಿ ನೀರು ಸುರಿಸಲು ಪ್ರಾರಂಭಿಸಿದಳು. ತಾಳ್ಮೆ ಕಳೆದುಕೊಂಡು ಗೋವಿಂದಯ್ಯ ರೇಗಿದರು. “ಬೊಗಳೇ ಅಲ್ಕಾ ಮುಂಡೇ…. ಮಾಡಬಾರದ್ದನ್ನೆಲ್ಲಾ ಮಾಡಿಕೊಂಡು ಈಗ ಮಾಮಳ್ಳಿಯಂಗೆ ಅಳ್ತಾ ಕುಂತೌಳೆ” ಎಂಬ ಗೋವಿಂದಯ್ಯನವರ ಸಿಡಿಲಿನಂತಹ ಮಾತಿಗೆ ನಡುಗಿ ಹೇಳಿದಳು: “ಅವರದೇ”.

ಅವರು ಅದರ ಖಚಿತತೆಗೆ ಕರಿಯನ ಮುಖ ನೋಡಿದರು. ಕರಿಯ, ಸುಳ್ಳು, ದೇವರಾಣೆಗೂ ತಾಯಾಣೆಗೂ ನಾನವಳನ್ನು ಮುಟ್ಟಿಯೇ ಇಲ್ಲ. ಅವಳು ಸುಳ್ಳು ಹೇಳ್ತಾ ಇದ್ದಾಳೆ” ಎಂದು

ಇದು ಮುಗಿಯಲಾರದ ಕಥೆಯಂತಿತ್ತು. ಇಬ್ಬರ ವಾದವು ಪರಸ್ಪರ ವಿರುದ್ಧವಾಗಿದ್ದವು. ಯಾರು ನಿಜ; ಯಾರು ಸುಳ್ಳು ಎಂದು ನಿರ್ಧರಿಸುವುದು ಸುಲಭ ಸಾಧ್ಯವಲ್ಲ, ಮಗುವಿನ ತಾಯಿ ಯಾರೆಂದು ಹೇಳಬಹುದು. ಆದರೆ ತಂದೆ, ಗಂಡು ಸಂಕುಲದ ಯಾರು ಬೇಕಾದರೂ ಆಗಿರಬಹುದು! ಆದ್ದರಿಂದ, ತಂದೆಯನ್ನು ನಿರ್ಧರಿಸುವುದು, ತಾಯಿಯನ್ನು ನಿರ್ಧರಿಸುವಷ್ಟು ಸುಲಭವಲ್ಲ!

ಗೋವಿಂದಯ್ಯನವರು ಒಂದು ನಿಮಿಷ ಯೋಚಿಸಿ, ಮೇಲೆದ್ದು, ಹೆಂಡತಿಗೆ “ಅವಳಿಗೆ ಬಟ್ಟೆ ಹಾಕಿಸೆ. ಇಂತಹ ಸಮಸ್ಯೆಯ ದಂಡಪಿಂಡದಿಂದ ಏನು ತಾನೇ ಪ್ರಯೋಜನ. ಹಾಳಾಗೋಗ್ಲಿ ಅತ್ಲಗೆ ತಗಸಿ ಹಾಕಿಬಿಡಾನ” ಎಂದರು. ತಾವು ಬಟ್ಟೆ ಹಾಕಿಕೊಳ್ಳಲು ಒಳಕೋಣೆ ಯತ್ತ ಹೆಜ್ಜೆ ಹಾಕುತ್ತಿದ್ದರು.

“ಯಾಕ್ರೀ ಸುಳ್ಳು ಹೇಳ್ತೀರಾ…. ಅನ್ಯಾಯವಾಗಿ ಹುಟ್ಟೋ ಮಗೂನ ಕೊಂದು ಪಾಪ ಕಟ್‌ಕಣ್‌ಬ್ಯಾಡ್ರಿ” ರಾಧಿಯ ಧ್ವನಿಯಲ್ಲಿ ದೈನ್ಯತೆಯಿತ್ತು. “ಆ ಮಗಾನೇ ಅಲ್ಲ; ನಿನ್ನಂತ ಬೇವರ್ಸಿ ಸೂಳೆ ಮುಂಡೇರ ಕೊಂದರೂ ಪಾಪ ಬರಲ್” ಎಂದು ಕರಿಯನೂ ಜೋರಾಗಿ ಪ್ರತಿಕ್ರಿಯಿಸಿದ. “ಕಂಡೋರ ಹೆಣ್ಮಕ್ಕಳನ್ನು ಹಾಳು ಮಾಡಬೇಕು ಅಂತ ಎಷ್ಟು ದಿನದಿಂದ ಕಾದಿದ್ಯೋ? ಗಂಡಸ್ತನ ತೋರುಸ್ಕಂಡು ಹಗಲೆಲ್ಲಾ ತಿರುಗ್ತಿದ್ದೋನು ರಾತ್ರಿ ಆದ ತಕ್ಷಣ ನಾಯಿ ತರ ಬಾಲ ಅದುಮಿಕೊಂಡು ಬರ್ತಿದಿದ್ದು ಮರ್ತು ಬಿಟ್ಯಾ? ಆಗ ನಾಚೆ ಆಗ್ತಿರಲಿಲ್ವೆ? ಈಗ ಸುಳ್ಳು ಬೇರೆ ಹೇಳಿ ಅನ್ಯಾಯವಾಗಿ ಕಣ್ಬಿಡದ ಕಂದನ್ನ ಸಾಯಿಸಕ್ಕೆ ನೋಡ್ತೀಯಲ್ಲಾ…. ಗಂಡಸಾ ನೀನು….?” ಗಂಡನ ಹೊಡೆತದ ಭಯವನ್ನು ಮೀರಿ, ಹೆಣ್ಣೆಂಬ ನಾಚಿಕೆಯನ್ನು ದಾಟಿ, ಗಂಡನೆಂಬ ಗೌರವವನ್ನೂ ಕೊಡದೇ, ಹಿರಿಯರಿದ್ದಾರೆಂಬ ಸಂಕೋಚವನ್ನೂ ಮರೆತು ಆವೇಶಭರಿತಳಾಗಿ ಮಗುವಿನ ರಕ್ಷಣೆಗಾಗಿ ಮಾತನಾಡುತ್ತಿದ್ದಳು.

ಗೋವಿಂದಯ್ಯ ಒಸಲಿನ ಮೇಲೆ ಎರಡೂ ಕೋಣೆಯಲ್ಲೂ ಒಂದೊಂದು ಕಾಲನ್ನಿಕ್ಕಿ ನಿಂತು ಈ ಮಾತನ್ನೆಲ್ಲಾ ಕೇಳುತ್ತಿದ್ದವರು ಹಿಂದಿರುಗಿ ಬಂದು ಕರಿಯನ ಮುಖವನ್ನೊಮ್ಮೆ ರಾಧಿಯ ಮುಖವನ್ನೊಮ್ಮೆ ದಿಟ್ಟಿಸಿದರು. ರಾಧಿ ಮಾಡಬಾರದ್ದನ್ನು ಮಾಡಿರುವಂತೆ ಲಜ್ಜೆಯಿಂದ, ಗೋವಿಂದಯ್ಯನವರ ಕಣೋಟವನ್ನು ಎದುರಿಸಲಾರದೆ ಎದ್ದು ಒಳ ಹೋದಳು. ಕರಿಯ ತಲೆತಗ್ಗಿಸಿ ಏನೋ ಕಳಕೊಂಡವನಂತೆ ಕುಳಿತಿದ್ದ.

ಗೋವಿಂದಯ್ಯನವರಿಗೆ ಮಾತನಾಡಲು ಸದುವು ಸಿಕ್ಕಿತು. “ಅವಳನ್ನು ಮುಟ್ಟಿಸಿಕೊಂಡ ಮೇಲೆ, ಅವಳು ಮಾಡೋ ಅಡಿಗೆಯನ್ನೇಕೋ ಉಣ್ಣಕ್ಕಾಗಲ್ಲ? ಅವಳನ್ನು ಮುಟ್ಟಿ ನೀನೇ ಎಲ್ಲಾ ಕೋಣೆಗೂ ಹೋಗುವಾಗ ಅವಳು ಹೋದರೆ ಏನು ತಪ್ಪೋ? ಹೆಣ್ಣಿನಿಂದ ಸುಖ ಮಾತ್ರ ಬಯಸ್ತೀಯಲ್ಲ; ಅದೇ ರೀತಿ ಅವಳಿಗೂ ಸ್ವಾತಂತ್ರ್ಯ ಇರಬೇಕು ಅಂತ ಗೊತ್ತಾಗಲ್ವಾ”

ಕರಿಯ ಪ್ರತಿಕ್ರಿಯಿಸಲಿಲ್ಲ.

ರಾಧಿಯ ಕೈಯಿಂದಲೇ ಆ ಮಧ್ಯಾಹ್ನದ ಊಟವನ್ನು ಬಡಿಸಲಾಯಿತು.

ಮರು ಮಾತನಾಡದೇ ಕರಿಯ ಉಂಡ. ಗೋವಿಂದಯ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಕರಿಯ ತಪ್ಪಿತಸ್ಥನ ಮುಖ ಹೊತ್ತು ಅನೇಕ ದಿನ ತಿರುಗಿದ. ರಾಧಿಯ ಹಾದರತನವನ್ನು ಪುರಾವೆ ಸಹಿತ ಒದಗಿಸಲು ವಿಫಲವಾಗಿ ಕ್ರಮೇಣ ಸುಮ್ಮನಾದ. ಯಾರು ಎಲ್ಲಾದರೂ ಸಾಯಲಿ ಎಂದು ತನ್ನ ಪಾಡಿಗೆ ತಾನು ಗದ್ದೆ ಕೆಲಸ ಮಾಡಲು ಶುರು ಮಾಡಿದ್ದ.

ಮೊದಲನೆಯ ಹೆರಿಗೆ ಮಾಡಿಸಲು ಸಾಧ್ಯವಾಗದುದರಿಂದ ತವರುಮನೆಯವರು ಎರಡನೆಯದನ್ನಾದರೂ ಮಾಡಿಸಲೆಂದು ರಾಧಿಯನ್ನು ಕರೆಯಲು ಬಂದರು. ಮನೆಯ ಹಿರಿಯನೆಂದು ಕೇಳಿದ್ದಕ್ಕೆ, ಗೋವಿಂದಯ್ಯ ಅವರ ಆಸೆ-ಆಕಾಂಕ್ಷೆಗಳನ್ನು ಚಿವುಟಿ ಹೆಣ್ಣು ಮನಸ್ಸು ನೋಯಿಸಬಾರದೆಂದು ಒಪ್ಪಿಗೆ ಕೊಟ್ಟು, ಕರಿಯನನ್ನೂ ಒಂದು ಮಾತು ಕೇಳಲು ಸೂಚಿಸಿದರು. ಕರಿಯನಿಗೆ ಕೇಳಿದ್ದಕ್ಕೆ ಏನೂ ಮಾತನಾಡದೇ ಎದ್ದು ಹೋದ. ಅವನ ನಿರ್ಲಿಪ್ತತೆಯನ್ನು ಸಮ್ಮತಿ ಎಂದು ತಿಳಿದು ಕರೆದುಕೊಂಡು ಹೋದರು. ಕರಿಯ ಅಪ್ಪ ಅವ್ವ ಇದ್ದಲ್ಲಿಗೇ ಬಂದು ಸೇರಿಕೊಂಡ.

ಎರಡನೆಯ ಹೆರಿಗೆಯೇನೋ ಸುಸೂತ್ರವಾಗಿಯೇ ಆಯಿತು. ಆದರೆ ಆಪರೇಷನ್ ಮಾಡಿಸುವಾಗ ಕರಿಯನ ಅನುಮತಿ ಬೇಕಿತ್ತು. “ಮಗ್ಳು ಮಿಂಡ್ರಿಗುಟ್ಟಿದ್ ಕೆಲ್ಸ ಮಾಡಿದ್ರೂ ಗೊತ್ತಾಗದಂಗಿರ್ಲಿ ಅಂತ ಆಪ್ರೇಷನ್ ಮಾಡುಸ್ತಾರಂತೆ ಆಪ್ರೇಷನ್ನ” ಎಂದು ಬೈದಾಡಿಕೊಂಡ. ಎಂಗೂ ಆಪ್ರೇಷನ್ ಆಗದೇ, ಮಕ್ಳಾಗಕ್ಕಿಲ್ಲ ಅಂತ ಯಾವದಾದ್ರೂ ಜತಿಗಿದ್ರೆ ಹಿಡಿಯದು ಸುಲಭ’ ಎಂದೂ ಮೀಸೆ ಮರೆಯಲ್ಲೇ ನಕ್ಕ.

ತಿಂಗಳೊಪ್ಪತ್ತಿನ ಮೇಲೆ ಮಗಳನ್ನು ಬಿಟ್ಟು ಹೋಗಲು ಬಂದರೆ ತನ್ನ ಹಳೇ ಪುರಾಣ ಶುರು ಮಾಡಿದ್ದ. ‘ಯಾವನಿಗೆ ಕೇಳಿ ಮನೆ ಬಿಟ್ಟು ಹೋಗಿದ್ಲು’ ಎಂದು ಮನೆಗೆ ಸೇರಿಸುವುದಿಲ್ಲವೆಂದು ಪಟ್ಟು ಹಿಡಿದ. ಮಧ್ಯೆ ಬಂದ ಅಕ್ಕನನ್ನು ಝಾಡಿಸಿ ಒದ್ದು, ಜಡೆಯೆಳೆದು ಹೊರಗೆಸೆದು, ಮನೆ ಬಿಟ್ಟು, ತೊಲುಗ್ರೇ ಮುಂಡೇರ’ ಎಂದು ಪರಿಸ್ಥಿತಿ ಬಿಗಡಾಯಿಸಿದ. ಯಾವ ನ್ಯಾಯಕ್ಕೂ ಕರಿಯ ಬಗ್ಗಲಿಲ್ಲ. `ನಿನ್ನಷ್ಟೇ ನಂಗೂ ಅಧಿಕಾರ ಅದೇ ಕಣೋ’ ಅಂದಿದ್ದಕ್ಕೇ ‘ಇದ್ರೆ ತಿರುವ್ಕೋ ಹೋಗಲೇ’ ಎಂದು ದಢಾರನ ಬಾಗಿಲು ಹಾಕಿದ.

ಈ ಮಧ್ಯೆ ವಯಸ್ಸಾಗಿದ್ದ ಕರಿಯನ ಅಪ್ಪ ಅಸ್ವಸ್ಥರಾಗಿ ಹಾಸಿಗೆ ಹಿಡಿದರು. ಕೆಲ ದಿನದಲ್ಲಿ ತೀರಿಕೊಂಡರು. ಮುಖ ನೋಡಲಿ ಅಂತ ಹೇಳಿ ಕಳಿಸಿದರು. ಕಾದು ಕಾದು ಸಾಕಾಗಿ ಸಾಯಂಕಾಲ ಚುಕ್ಕೆ ನೋಡಿ ಮಣ್ಣು ಮಾಡಿದ ಮೇಲೆ ಓಡಿ ಬಂದಿದ್ದರು. ಬಂದವರು ತಾವು ಬರುವವರೆಗೂ ಕಾಯಲಿಲ್ಲವೆಂದು ಅಥವಾ ಗುಂಡಿ ತೆಗೆದು ಮುಖ ತೋರಿಸಲಿಲ್ಲವೆಂದು ವಿತಂಡ ವಾದ ಮಾಡಿ ಮುನಿಸಿಕೊಂಡು ಹೋದರು. ವಾರದ ನಂತರ ತಿಥಿಗೆ ಬಂದಾಗ ಮಕ್ಕಳು ಮರಿಗಳೊಂದಿಗೆ ನಾಲ್ಕಾರು ಜನ ಊರಿನವರನ್ನೂ ಕರೆದುಕೊಂಡು ಬಂದಿದ್ದರು. ಬಂದವರು ನ್ಯಾಯ ಮಾಡಿ ಮಗಳನ್ನು ಬಿಟ್ಟುಹೋದರು.

ರಾಧಿ ಇಷ್ಟು ದಿನ ಅಪ್ಪನ ಮನೆಯಲ್ಲಿದ್ದವಳು ಪಾಠ ಕಲಿಯುವ ಬದಲು ಒಂದಷ್ಟು ಋಣಾತ್ಮಕ ಗುಣಗಳನ್ನು ಕಲಿತಿದ್ದಳು. ಅದನ್ನು ಗಂಡನ ಮನೆಯಲ್ಲೂ ಮುಂದುವರೆಸಿದಳು. ಯಾರೂ ಇಲ್ಲದ ಸಮಯದಲ್ಲಿ ಮನೆಯ ಕಾಳು-ಕಡಿಗಳನ್ನು ಮಾರಲಾರಂಭಿಸಿದಳು. ತಿಂಗಳ ಪಾವತಿಯ ಮೇಲೆ ಸಾಲ ತರುತ್ತಿದ್ದ ಸಂಗಣ್ಣನ ಅಂಗಡಿಯಲ್ಲಿ ಈಕೆಯ ಚಿಲ್ಲರೆ ಬಾಯಿ ರುಚಿಯ ತಿನಿಸುಗಳ ಲಿಸ್ಟೇ ದೊಡ್ಡದಾಗಿರುತ್ತಿತ್ತು. ಮೇಲಾಗಿ ಮಕ್ಕಳಿಗೆ ಹುಷಾರಿಲ್ಲ, ಹಾಗೇ ಹೀಗೇ ಅಂತ ಸಾಲದ ಲೆಕ್ಕಕ್ಕೇ ಹೆಚ್ಚಿಸಿ ದುಡ್ಡನ್ನೂ ಈಸ್ಕೊಳ್ಳುತ್ತಿದ್ದಳು. ಕೇಳಿದರೆ ಆತನಿಗೇ ರೋಪು ಹೊಡೆಯಲು ಶುರು ಮಾಡಿದ್ದಳು. ‘ಅವರಿವರು ಹೇಳಿದ್ರು ಅ೦ತೀಯೇ ಹೊರ್ತು ನೀನೇನ್ ಕಂಡಿದ್ಯಾ?’ ಅಂತ. ಕರಿಯ ಸಾಲದ ಅಕೌಂಟ್ ತೆಗೆಸಿಬಿಟ್ಟ. ರಾಧಿಯ ಕೈ ಬಾಯಿ ಕಟ್ಟಿದಂತಾಯಿತು. ಅವಳ ಕೀಳುರುಚಿಯನ್ನು ಅರಿತಿದ್ದ ಊರಿನ ಪಡ್ಡೆ ಹುಡುಗರು ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದರು. ಕಡ್ಲೆ ಮಿಠಾಯಿ ಖಾರ ಮೆಣಸಿನಕಾಯಿ ಇತ್ಯಾದಿ ತಿಂಡಿ ತಂದು ಕೊಡಲು ಮುಂದಾದರು. ಮನೆಯಲ್ಲಿ ಯಾರೂ ಇಲ್ಲದಾಗ ಅವರು ಮನೆಗೆ ಬರುವಷ್ಟರವರೆಗೂ ಮುಂದುವರಿಯಿತು. ಊರಿನ ಹೆಂಗಸರ ಬಾಯಲ್ಲಿ ವಿಷಯ ಹರಿದಾಡಿತು.

ಒಂದು ದಿನ ಕರಿಯ ಅವಳ ಕಳ್ಳತನವನ್ನು ಹಿಡಿಯಬೇಕೆಂದು ಗದ್ದೆಗೆ ಹೋಗಿದ್ದವನು ಬೇರೆ ದಾರಿಯಲ್ಲಿ ಬಂದು ಕೊಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ. ಅದನ್ನು ಸೂಕ್ಷ್ಮವಾಗಿ ಅರಿತ ಹುಡುಗರು ಅವತ್ತು ಬರಲಿಲ್ಲ. ಏಕೆಂದು ತಿಳಿಯಲಿಲ್ಲ ರಾಧಿಗೆ ಏನಾದರೂ ತಿನ್ನಲೇ ಬೇಕೆನಿಸಿತು. ನೀರು ತರುವ ನೆಪದಲ್ಲಿ ಕೊಡದಲ್ಲಿ ರಾಗಿ ಹಾಕಿಕೊಂಡು ಹೊರಟಳು. ಕರಿಯ ಹಿಂಬಾಲಿಸಿ ಹಿಡಿದೇ ಬಿಟ್ಟ. `ಹಿಡಿದು ತೋರಿಸಲಿ’ ಎನ್ನುತ್ತಿದ್ದ ರಾಧಿ ತುಟಿ ಎರಡು ಮಾಡಲಿಲ್ಲ.

ಅವತ್ತಿನಿಂದ ಅವಳ ಎಲ್ಲಾ ಚಟುವಟಿಕೆಗಳನ್ನೂ ಬಂದು ಮಾಡಿದ. ಬೆಳ ಬೆಳಿಗ್ಗೆಯೇ ಗದ್ದೆಗೆ ಕರೆದುಕೊಂಡು ಹೋಗಲಾರಂಭಿಸಿದ. ಅವನ ಎದುರಿಗೆ ಕೆಲಸ ಮಾಡಿದಂತೆ ನಟಿಸುತ್ತಿದ್ದರೂ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮಗುವನ್ನು ಮಲಗಿಸುವ ನೆವದಲ್ಲಿ ಮರದಡಿ ಮಲಗಿಬಿಡುತ್ತಿದ್ದಳು. ಮಧ್ಯಾಹ್ನಕ್ಕೆ ಊಟಕ್ಕೆ ತರುತ್ತಿದ್ದ ಅವನ ಅವ್ವ ಜಿನುಗು ಮಳೆಯಲ್ಲಿ ಎರೆಗದ್ದೆಯಲ್ಲಿ ಜಾರಿಬಿದ್ದದ್ದನ್ನು ನೆವಮಾಡಿಕೊಂಡು ಆ ಕೆಲಸವನ್ನು ರಾಧಿಗೆ ವಹಿಸಿದ, ಸದುವು ಸಿಕ್ಕ ರಾಧಿ ಮೊದಲೆರಡು ದಿನ ಬೇಗ ಬಂದವಳು ಬರಬರುತ್ತಾ ತಡ ಮಾಡಲಾರಂಭಿಸಿದಳು. ತಡವಾಯಿತೆಂದು ಒಂದು ದಿನ ರಂಗನ ಸೈಕಲ್ಲಿನಲ್ಲಿ ಅರ್ಧದಾರಿಯವರೆಗೆ ಬಂದದ್ದನ್ನು ಕಂಡ ಕರಿಯ ಅವಳನ್ನು ದಂಡಿಸಿದ.

ಕತ್ತಲೆಯಾಗುವವರೆಗೆ ಗದ್ದೆಯಲ್ಲಿ ಇದ್ದು ಬರುವುದು, ಬಂದವಳು ಅನಾಡಿ ಕತ್ತಲೆಯಲ್ಲೂ ಒಬ್ಬಳೇ ನೀರು ತರಲು ಹೋಗುವುದು, ಹೋದವಳು ತಡವಾಗಿ ಬರುವುದು… ನಡೆದೇಯಿತ್ತು. ಅಲ್ಲಿ ರಂಗ ಅಡ್ಡಾಡುವುದನ್ನೂ ಕೆಲವರು ಕಂಡಿದ್ದರು.

ಯಾವುದೋ ಕಳ್ಳತನದ ಕೇಸಿನ ಮೇಲೆ ರಂಗನಿಗೆ ಒಂದು ತಿಂಗಳು ಜೈಲಾಯಿತು. ಆ ವೇಳೆಯಲ್ಲಿ ರಾಧಿಯ ಚಟುವಟಿಕೆಗಳು ಕಡಿಮೆಯಾಗಿದ್ದವು.

ರಾಧಿ ಒಂದು ದಿನ ಗದ್ದೆಯಲ್ಲಿ ನೀರಕಡೆಗೆಂದು ಹೋದವಳು, ಎಷ್ಟು ಹೊತ್ತಾದರೂ ಬರದಿದ್ದರಿಂದ ಅನುಮಾನಗೊಂಡ ಕರಿಯ ಕಳ್ಳ ಹೆಜ್ಜೆಯಲ್ಲಿ ನಡೆದ. ಸಪ್ಪೆಚೋಳದ ಶಬ್ದಕ್ಕೆ ಜಾಗೃತಳಾದ ರಾಧಿ ಹೊರಗಡೆಯಾದಂತೆ ನಟಿಸಿದಳು. ಆದರೆ ಲಂಟಾನ ಗಿಡಗಳ ಮರೆಯಲ್ಲಿ ಅಡುಗುತ್ತಾ ಹೋದ ರಂಗನನ್ನು ಗುರುತಿಸಿದ್ದ. ಬೇಸಾಯ ಹೊಡೆಯುತ್ತಿದ್ದ ಚರ್ಮದ ಬಾರಿಕೋಲು ಕೈಯಲ್ಲೇ ಇತ್ತು. ಅದರ ಹಿಮ್ಮಡಿಯಿಂದ ಮೊಣಕೈ, ಮೊಣಕಾಲುಗಳು ಲಟಲಟವನ್ನುವವರೆಗೆ ಹೊಡೆದ. ಪ್ರತಿರೋಧಿಸಿದ ರಾಧಿಯೂ ಅವನ ಬಾಡಿಯನ್ನು ಜಗ್ಗಿ ಹರಿದು ಎದೆಗೆ ಬಾಯಿ ಹಾಕಿ ಕಡಿದಿದ್ದಳು.

ರಾಧಿ ಸುಧಾರಿಸಿಕೊಳ್ಳುವಷ್ಟರಲ್ಲಿ ರಾತ್ರಿಯಾಗಿತ್ತು. ದೆವ್ವ ಬಂದವಳಂತೆ ಕೂದಲು ಹರಡಿಕೊಂಡು, ಉಟ್ಟ ಸೀರೆ ಹರಿದುಕೊಂಡು, ರಂಗನ ಕುಮ್ಮಕ್ಕಿನಂತೆ ಅವನ ಸೈಕಲ್ಲಿನ ಮೇಲೆ ಪೇಟೆಯವರೆಗೆ ಹೋಗಿ, ಪೋಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟು ಕೊಟ್ಟಳು. ಈ ಅಪರಾತ್ರಿಯಲ್ಲಿ ಬಂದ ಆಕೆಯನ್ನು ಕಂಡ ಸೆಂಟ್ರಿ, ಎಲ್ಲಿ ತಾನೇ ರೇಪ್ ಮಾಡಿದ ನೆಂದು ಹೇಳುತ್ತಾಳೋ ಎಂದು ಹೆದರಿ ಬೆಳಿಗ್ಗೆ ಬರುವಂತೆ ಕಳಿಸಿದ. ರಾತ್ರಿಯೆಲ್ಲ ಕರಿಯ ಮತ್ತವನ ಮನೆಯವರು ಜಾಲಾಡದ ಬಾವಿಯಿರಲಿಲ್ಲ. ರಂಗನ ಜತೆಗೇನಾದರೂ ಓಡಿ ಹೋಗಿದ್ದಾಳೆಂದರೆ ಅವನು ಊರಲ್ಲೇ ಇದ್ದ.

ಬೆಳಬೆಳಿಗ್ಗೆಯೇ ಮನೆ ಬಾಗಿಲಲ್ಲಿ ಪೋಲೀಸರನ್ನು ಕಂಡ ಕರಿಯ ದಂಗಾದ. ಬಂದ ಪೋಲೀಸು ಏನು ಹೇಳದೇ ಅವನ ಕುತ್ತಿಗೆಯ ಮೇಲೆ ಮಿದ್ದು, ಕೊಳಪಟ್ಟಿ ಹಿಡಿದೆಳೆದು ಕೊಂಡು ಹೋದ. ಅದನ್ನು ಕಂಡ ರಾಧಿಯ ಮುಖದಲ್ಲಿ ಗೆಲುವಿನ ನಗು ಮಿಂಚಿತು. ‘ಇನ್ನು ಮುಂದೇನೂ ಹಿಂಗೇ ಮಾಡುದ್ರೆ ಸೆಲ್ಲಿಗಾಕಿ ಏರೋಪ್ಲೇನ್ ಎತ್ತುಸ್ಬುಡ್ತೀನಿ’ ಎಂದು ಎಸ್ಸೈ ಗದರಿಸಿ ಕಳಿಸಿದ. ಇದಾದ ನಂತರವಂತೂ ರಾಧಿ ರಂಗನ ಜತೆ ರಾಜಾರೋಷವಾಗಿ ತಿರುಗಾಡಲಾರಂಭಿಸಿದಳು. `ಅವುಳ್ಗೂ ನಿಂಗೂ ಏನೋ ಸಂಬಂಧ’ ಅಂತ ಕರಿಯ ಕೇಳಲು ಹೋಗಿ, ಮೊದಲೇ ರೌಡಿಯಾಗಿದ್ದ ರಂಗನಿಂದ ಜಡಿಸಿಕೊಂಡು ಬಂದ. ಅತ್ತ ಪೊಲೀಸರು, ಇತ್ತ ರೌಡಿ ರಂಗ. ಇವರಿಬ್ಬರಿಂದಲೂ ಹೊಡೆತ ತಿನ್ನಬೇಕಾಗಿ ಬಂದಿದ್ದರಿಂದ ಕರಿಯನಿಗೆ ರೋಷ ಬರುವ ಬದಲು ಹೀಕು ಶುರುವಾಯಿತು. ಮೇಲಾಗಿ ರಾಧಿಯ ಅಪ್ಪನೂ ಬೇಟೆ ಯಾಡುವ ನೆಪದಲ್ಲಿ ಬಂದೂಕು ಹಿಡಿದುಕೊಂಡು ತಿರುಗಾಡುವುದೂ ತಿಳಿದಿತ್ತು. ಅಲ್ಲಿಂದ ರಾಧಿಯ ಸುದ್ದಿಗೇ ಹೋಗಬಾರದೆಂದುಕೊಂಡ. ಗದ್ದೆಯಲ್ಲಿ ಫಸಲು ಕಳ್ಳತನವಾದರೂ ಕಾಯಲು ಹೋಗುತ್ತಿರಲಿಲ್ಲ.

ಮನೆಯಲ್ಲಿ ದಾಂದಲೆ ಜಾಸ್ತಿಯಾಯಿತೆಂದು ಗೋವಿಂದಯ್ಯ ಸರಿಮಾಡಿ ಬರಲು ಹಂಡತಿಯನ್ನು ಕಳುಹಿಸಿದರು. ರಾತ್ರಿ ಕರಿಯ ಹಿತ್ತಲಲ್ಲಿ ಕುಂತು, ಹಿಂಗಿಂಗಾಯಿತೆಂದು ಅತ್ತಿಗೆಗೆ ವಿವರಿಸುತ್ತಿದ್ದ. ಎಂಜಲು ತಟ್ಟೆ ಎರಚಲು ಬಂದ ರಾಧಿ ಇವರಿಬ್ಬರೂ ಮಾತನಾಡುತ್ತಿರುವುದನ್ನು ಕಂಡು ಅಕ್ರಮ ಸಂಬಂಧವನ್ನು ಕಲ್ಪಿಸಿ ಜೋರು ಬಾಯಿ ಮಾಡಿ ಧೂಳು ಎರಚಾಡಿದಳು. ‘ದೇವ್ರಂತ ಅತ್ತೆಗೆ ಎಂತದ್ದೇ ನೀನು ಅನ್ನದು’ ಎಂದು ಕೆನ್ನಗೆ ಹೊಡೆದ. ಅಷ್ಟಕ್ಕೇ ಬಾಯಿ ಮಾಡುತ್ತ `ಸ್ಟೇಷನ್ನಿಗೆ ಹೋಗ್ತಿನಂತ ಪೇಟೆ ಕಡೆ ಓಡಿ ಹೋದಳು. ಊರ ಜನ ಎಲ್ಲ ಸೈಸೈ ಅಂದರು.

ಬೆಳಿಗ್ಗೆ ಯಾವತ್ತಿನಂಗೆ ಪೋಲೀಸು ಬಂದ. ಕರಿಯನ ಜತೇಲಿ ಅತ್ತಿಗೆಯೂ ಹೋದಳು. ಸಾವಕಾಶವಾಗಿ ಕೇಳಿದ ಇನ್ಸ್‌ಪೆಕ್ಟರ್‌. ರಾಧಿಯ ಅಪ್ಪ ಜೊತೆಯಲ್ಲಿ ದಲಿತ ಸಂಘರ್ಷ ಸಮಿತಿಯ ಚಂದ್ರಪ್ಪನನ್ನು ಕರೆದುಕೊಂಡು ಬಂದು ಎಗರಾಡುತ್ತಿದ್ದ. ಅಷ್ಟರಲ್ಲಿ ವಿಷಯ ತಿಳಿದ ಗೋವಿಂದಯ್ಯನೂ ಅಲ್ಲಿಗೆ ಬಂದರು. ಚಂದ್ರಪ್ಪನೇ ಗೋವಿಂದಯ್ಯನಿಗೆ ವಿಶ್ ಮಾಡಿ “ಏನು ಈ ಕಡೆ?” ಎಂದು ಕೇಳಿದ. ಇವರಿಬ್ಬರೂ ಸಹಪಾಠಿಗಳಂತೆ, ವಿವರ ತಿಳಿದುಕೊಂಡು `ನಿಮ್ಕೇಸು ಅಂತ ಅವ್ರು ಹೇಳೇ ಇಲ್ವಲ್ರೀ…. ಯಾವ್ದೋ ವರದಕ್ಷಿಣೆ ಕೇಸು ಅಂತ ಅಂದ’ ಎಂದು ಶಂಕರಯ್ಯನಿಗೇ ಬೈದು ಹೊರಟುಹೋದ.

ರಾಧಿಯ ಅಪ್ಪ ಎಗರಾಟ ಜಾಸ್ತಿ ಮಾಡಿದ. ಯಾರು ಹೇಳಿದರೂ ಕೇಳಲಿಲ್ಲ. ನಿಮ್ಕೈಲಿ ಆಗದಿದ್ರೆ ಹೇಳಿ, ಎಸ್ಪಿ ಅತ್ರಾನೇ ಹೋಗ್ತಿನಿ’ ಅಂದ. ಬಹಳ ವರ್ಷಗಳಿಂದ ಅದೇ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ ಲೋಕೇಗೌಡ, ‘ಏನ್ಲೇ ಶಂಕ್ರಯ್ಯ…. ಒಡ್ರು ಕೇಸಿನಾಗೆ ಮೈಮೂಳೆ ಮುರ್ಸ್ಕಂಡಿದ್ದು ಮರ್ತು ಬುಟ್ಯಾ?’ ಎಂದ ಅಷ್ಟೇ. ಗದರಿಸಿದ ನಾಯಿಯಂತೆ ಬಾಲ ಮುದುರಿಕೊಂಡ. ‘ಇವುಳ್ ಇಂಗೇ ಅಂತ ಮದ್ಲೇ ಹೇಳಕ್ಕಾಗ್ಲಿಲ್ಲೇನ್ಲೆ ಮೂಢ. ರಾತ್ರಿ ಹನ್ನೆಲ್ಡು ಗಂಟ್ಯಾಗೆ ಬಂದೌಳೆ ಟೇಷನ್‌ಗೆ. ನಾನೇ ಹೆದ್ರುಕಂಡು ಬುಟ್ಟೆ ಮಾರಾಯ. ಅವುನ್ ಜತೆ ಇನ್ನೊ೦ದೃಲ ಇದ್ದಿದ್ನಾ ಕಂಡ್ರೆ, ಅವಳಪ್ಪುನ್, ಅವಳ ಶಿರಾ ಕಡಿದು ತಾಂಬರ್ಲಾ, ನಾನಿದೀನಿ, ನೋಡ್ಕಂತೀನಿ. ಅದೇನ್‌ಬತ್ತದೋ ಬರ್ಲಿ’ ಎಂದ ಕರಿಯನಿಗೆ.

`ಹೆಂಗ್ರಿನ್ ಕಡೆಗೆ ಹೇಳ್ತಾರೆ ಅಂತ ಹೋದ್ರೆ ಎಡವಟ್ಟಾಯ್ತಲ್ಲ’ ಅಂತ ಬಾಯಿ ಮುಚ್ಕಂಡು ಮನೆಗೆ ಬಂದಳು. ಕರಿಯನನ್ನು ಒಂದು ದಿನ ಪೇಟೆಯ ತಮ್ಮ ಮನೆಯಲ್ಲೇ ಇರಿಸಿಕೊಂಡು ಅವನ ಗ್ರಹಚಾರದ ಬಗ್ಗೆ ಮರುಗಿ ‘ಧರ್ಮಸ್ಥಳಕ್ಕೆ ಹರ್ಕೆ ಮಾಡ್ಕ, ನೆಟ್ಟಗಾಗ್ತೈತೇನೋ ನೋಡನಾ’ ಅಂದವರು, `ಹೋಗೇ ಬಂದ್ಬುಡುನಾ’ ಅಂತ ಹೊರಟರು.

ಬರುವಷ್ಟರಲ್ಲಿ ರಾಧಿ, ತನ್ನ ಅತ್ತೆಗೆ `ಮಗುನ್ಗೆ ಇನ್ನೊಂದು ಮದ್ವೆ ಮಾಡಕ್ಕೆ ಕಳ್ಸಿದ್ಯೇನೆ ಬಿತ್ರಿ’ ಎಂದೇನೇನೋ ಬೈದು `ನಿನ್ನ ಕತ್ರುಸ್ಬುಡ್ತೀನಿ’ ಅಂತ ಮಚ್ಚಲ್ಲಿ ಹೊಡೆದು ಗಾಯ ಮಾಡಿದ್ದಳು. ಗೋವಿಂದಯ್ಯ ಬರುತ್ತಿದ್ದಂತೆಯೇ ವಿಷಯ ತಿಳಿದು ಕೆಂಡಮಂಡಲವಾದರು.
ಕೈಗೆ ಸಿಕ್ಕ ಹಾರೇಕೋಲಿನಿಂದ “ನಿನ್ನ ಇವತ್ತು ಮುಗುಸ್ಬುಡ್ತೀನಿ’ ಎಂದು ಮುನ್ನುಗ್ಗಿದವರನ್ನು ಅವರ ಹೆಂಡತಿ ತಡೆದು ನಿಲ್ಲಿಸಿದಳು. ಅವಳ ಎಲ್ಲಾ ಸಾಮಾನು ಹೊರಗೆಸೆದು ‘ಗೆಟ್ಲಾಸ್ಟ್’ ಎಂದು ಕುತ್ತಿಗೆಗೆ ಕೈ ಹಾಕಿ ದೂಡಿ ಕ್ಯಾಕರಿಸಿ ಉಗಿದರು.

ಕರಿಯ ಇದ್ದವನು ‘ನಮ್ಮೌವುನ ಕೊಲೆ ಮಾಡಾಕೆ ಹೋಗಿದಲು ಅಂತ ಕಂಪ್ಲೇಂಟು ಕೊಡ್ತೀನಿ’ ಎಂದು ಬೆದರಿಕೆ ಹಾಕಿದ.

ರಾಧಿ ಮಕ್ಕಳೊಂದಿಗೆ ನಾಪತ್ತೆಯಾದಳು.

ಶಂಕರಯ್ಯ ‘ನನ್ನ ಮಗುಳ್ನ ಕೊಲೆ ಮಾಡೌರೆ’ ಅಂತ ಎಸ್ಪಿ ಸಾಹೇಬರ ಹತ್ತಿರಕ್ಕೆ ನೇರವಾಗಿ ಹೋದ. ಈಗ ಅವಳನ್ನು ಹುಡುಕಿಕೊಡುವ ಜವಾಬ್ದಾರಿ ಪೂರ್ತಿ ಕರಿಯನ ಮನೆಯವರ ಮೇಲೇ ಬಿದ್ದಿತು. ರಾತ್ರಿ ಹಗಲು ಎನ್ನದೇ ಹುಡುಕಾಡಿದರು. ಶಂಕರಯ್ಯನೇ ಯಾವುದೋ ಊರಲ್ಲಿ ಇರಿಸಿದ್ದಾನೆಂಬ ರೂಮರ್ ಬಂತು. ಆದರೆ ಅವನು ಮಾತ್ರಾ ಇವರನ್ನೆಲ್ಲಾ ವರದಕ್ಷಿಣೆ ಕೊಲೆ ಆರೋಪದ ಮೇಲೆ ಅರೆಸ್ಟ್ ಮಾಡಿಸಬೇಕೆಂದು ಬಹಳ ಪ್ರಯತ್ನಪಟ್ಟ. ಮಹಿಳಾ ಸಂಘಟನೆಯವರಿಂದ ಮೆರವಣಿಗೆ ಮಾಡಿಸುವುದಾಗಿ ಪೋಲೀಸರಿಗೆ ಬೆದರಿಸಿದ. ಅವನು ಸರ್ಕಾರಿ ನೌಕರನಾದ ಗೋವಿಂದಯ್ಯನನ್ನು ಅರೆಸ್ಟ್ ಮಾಡಿಸಿದರೆ ಅವನನ್ನು ಸಸ್ಪೆಂಡ್ ಮಾಡುತ್ತಾರೆ; ಕೊನೆಗೆ ಅವರೆಲ್ಲ ಬೀದಿಪಾಲಾಗಿ ತಪ್ಪಾಯಿತೆಂದು ತನ್ನ ಕಾಲನ್ನು ಹಿಡಿಯಲು ಬರುತ್ತಾರೆಂದು ಭಾವಿಸಿದ್ದ. ಆದರೆ ಕೇಸಿನ ತಳಬುಡ ಅರಿತಿದ್ದ ಪೊಲೀಸರು ಹಾಗೇನೂ ಮಾಡದಿದ್ದುದು ಇನ್ನಷ್ಟು ಸಿಟ್ಟು ಬರಿಸಿತು. ಲಂಚ ತೆಗೆದುಕೊಂಡು ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಂದು ಡಿಲ್ಲಿಯವರೆಗೆ ಹೋದ. ಏನೇ ಆದರೂ ಅಂತಿಮವಾಗಿ ಕೆಳಗಿನ ಪೋಲೀಸರಿಗೇ ಬರುತ್ತಿತ್ತು. ಅಲ್ಲಿ ಹೋದರೆ ತಾನೇ ಬಚ್ಚಿಟ್ಟಿರುವುದಾಗಿ ಎಲ್ಲಿ ಒದ್ದು ಒಳಗೆ ಹಾಕಿಬಿಡುವರೋ ಎಂದು ಹೆದರಿ ಹೋಗುತ್ತಿರಲಿಲ್ಲ. ಈ ಮಧ್ಯೆ ಆಕೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ಪಡ್ಡೆ ಹುಡುಗರು ಅನುಮಾನಾಸ್ಪದರಾಗಿ ಸುಮ್ಮ ಸುಮ್ಮನೆ ಪೋಲೀಸರಿಂದ ಹೊಡೆತ ತಿಂದರು. ಆದರೂ ಸುಳಿವು ಸಿಕ್ಕಲಿಲ್ಲ. ಪಾಂಪ್ಲೆಟ್ ಮಾಡಿಸಿ ಹಂಚಿ, ರೇಡಿಯೋ, ಟಿ.ವಿ.ಯಲ್ಲಿ ಅನೌನ್ಸ್ ಮಾಡಿಸಿದರೂ ಪ್ರಯೋಜನವಾಗಲಿಲ್ಲ.

ಹೀಗೇ ಹುಡುಕುವ ಕ್ರಿಯೆಯಲ್ಲಿ ನಾಲ್ಕು ತಿಂಗಳು ಕಳೆದು ಹೋಯಿತು. ಕರಿಯನ ಮನೆಯವರೆಲ್ಲಾ ತನ್ನ ತಂದೆಯ ವರ್ಷದ ತಿಥಿಗೆ ಗುಂಡಿ ಬಳಿಗೆ ಹೋಗಿದ್ದಾಗ ಪೋಲೀಸರು ಹುಡುಕಿಕೊಂಡು ಬಂದರು. ಬಂದವರೇ ಅರ್ಜಂಟ್ ಮಾಡಿ ಕರಿಯನನ್ನು ಕರೆದೊಯ್ದರು. ಜತೆಗೆ ಗೋವಿಂದಯ್ಯ ಸಹ ಹೋದರು.

ಹೋಗಿ ನೋಡಿದರೆ ರಾಧಿ ಸ್ಟೇಷನ್ನಲ್ಲಿ ಮಕ್ಕಳೊಂದಿಗೆ ಕುಳಿತಿದ್ದಾಳೆ? ‘ಕೇಸು ಟರ್ನ್ ಆಗೈತೆ’ ಎಂದು ತಿಳಿದುಕೊಂಡ ರಂಗ, `ಗಂಡ ಸಮ್ಮತಿಯಿಲ್ಲವೆಂದು ಬರೆದುಕೊಟ್ಟು ಬಂದ್ಬಿಡು.
ಹಿಂಗೆ ಕದ್ದು ಮುಚ್ಚಿ ಇರಾದ್ಕಿಂತ ರಾಜಾರೋಷವಾಗಿ ನಾವಿಬ್ರು ಇದ್ಬುಡನಾ’ ಎಂದು ಕಳಿಸಿ
ಕೊಟ್ಟಿದ್ದ.

ಸಂಬಂಧಿಸಿದವರನ್ನೆಲ್ಲಾ ಕರೆಸಿದ ಇನ್ಸ್ ಪೆಕ್ಟರ್ ಉಗ್ರಪ್ಪ ವಿಚಾರಣೆ ನಡೆಸಿದರು. ಶಂಕರಯ್ಯ ಹೇಳಿ ಕಳಿಸಿದರೂ ಬರದೇ ಕದ್ದು ಬಿಟ್ಟ.

ರಾಧಿ ತನಗೆ ಗಂಡನ ಹತ್ತಿರ ಇರಲು ಸಮ್ಮತಿ ಇಲ್ಲವೆಂದೂ, ತಂದೆಯ ಮನೆಗೂ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದಳು. ಮಕ್ಕಳು ಕತ್ತಲೆ ಬಜಾರದ ಬಾಡಿಗೆ ಮನೆಯಲ್ಲಿ ತಮಗೆ ಉಪವಾಸ ಇರಿಸಿದ್ದ ಬಗ್ಗೆ, ತಮ್ಮನ್ನು ಹೊಡೆದು ಹೊರಗೆ ಮಲಗಿಸಿ ರಂಗನೊಂದಿಗೆ ಒಳಗೆ ಮಲಗುತ್ತಿದ್ದ ಬಗ್ಗೆ ಹೇಳಿದವು. ಇನ್ನು ಮುಂದೆ ತನ್ನ ತಂದೆಯ ಬಳಿಗೆ ಹೋಗುವುದಾಗಿ ಹೇಳಿಕೆ ನೀಡಿದವು. ತಂದೆ ಬಳಿಯೂ ಇರದೆ, ಗಂಡನ ಜೊತೆಯೂ ಇರಲು ನಿರಾಕರಿಸಿದ ರಾಧಿಯನ್ನು, ಸಮಾಜ ವಿರೋಧಿಯಾಗಿ ಅಕ್ರಮವಾಗಿ ಅನೈತಿಕ ಸಂಬಂಧ ಮುಂದುವರೆಸುವಳೆಂದು ನಿರ್ಧರಿಸಿದ ಉಗ್ರಪ್ಪ ಅವಳನ್ನು ರಿಮ್ಯಾಂಡ್ ರೂಂಗೆ ಕಳಿಸಲು ತೀರ್ಮಾನಿಸಿ ಮಕ್ಕಳನ್ನು ಕರಿಯನ ವಶಕ್ಕೆ ನೀಡಿದರು. ಅವಳನ್ನು ಜೀಪಿಗೆ ಹತ್ತಿಸಲು ಸಾಕಷ್ಟು ಪ್ರಯತ್ನವನ್ನೇ ಪಡ ಬೇಕಾಯಿತು. ತಾನು ಏನೋ ಲೆಕ್ಕ ಹಾಕಿಕೊಂಡು ಬಂದರೆ ಇಲ್ಲಿ ಬೇರೆ ಏನೋ ಆಗಿ ಹೋದುದರಿಂದ ವಿಚಲಿತಳಾದಳು.

ರಿಮ್ಯಾಂಡ್ ರೂಂನಲ್ಲೂ ಅನೇಕರೊಂದಿಗೆ ಕಿತ್ತಾಡಿದಳು. ಅಲ್ಲಿಯ ವಾತಾವರಣವನ್ನು ಕೆಡಿಸಿದಳೆಂದು ಕೆಲವೇ ದಿನಗಳಲ್ಲಿ ಬೇರೆ ಊರಿಗೂ ವರ್ಗಾಯಿಸಿದರು. ಅವಳ ಮೇಲೆ ಅಡ್ವರ್ಸ್ ರಿಪೋರ್ಟ್‌ನ್ನು ಸಿದ್ಧಪಡಿಸಿದರು.
* * *

ಆರು ತಿಂಗಳು ಸುಮ್ಮನಿದ್ದ ಶಂಕರಯ್ಯ ಬೆಳೆದ ಭತ್ತವನ್ನೆಲ್ಲಾ ಮಾರಿ ಒಂದಷ್ಟು ಕಾಸು ಸಂಪಾದಿಸಿಕೊಂಡು ಲಾಯರ್‌ ಮುಖಾಂತರ ರಿಮ್ಯಾಂಡ್ ರೂಂಮಿನಿಂದ ರಾಧಿಯನ್ನು ಬಿಡಿಸಿಕೊಂಡು ಬಂದ. ಬಂದವನು ಕರಿಯ ಮತ್ತು ಮನೆಯವರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಲಾರಂಭಿಸಿದ. ರಾಧಿಯೂ ಕರಿಯನ ಬಳಿಯಿದ್ದ ಮಕ್ಕಳನ್ನು ಒಲಿಸಿಕೊಳ್ಳಲು ಬಹಳಷ್ಟು ಪ್ರಯತ್ನಿಸಲಾರಂಭಿಸಿದಳು. ಶಾಲೆಗೆ ಹೋಗಿ ಮಕ್ಕಳಿಗೆ ಚಾಕಲೇಟು, ಬಿಸ್ಕತ್ತು ಕೊಟ್ಟು ಬಂದಳು. ಕರಿಯನಿಗೆ ಇದು ತಿಳಿದು ಹೆಡ್ ಮೇಸ್ಟರ ಹತ್ತಿರ ಹೋಗಿ ಬಂದೋಬಸ್ತ್ ಮಾಡಿ ಬಂದ. ಎರಡನೆಯ ಬಾರಿ ಹೋದಾಗ ಅವರು ಶಾಲೆಯ ವೇಳೆಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲು ನಿರಾಕರಿಸಿದಾಗ `ನಾನು ಅವರನ್ನು ಹೆತ್ತ ತಾಯಿ’ಯೆಂದು ಜಗಳಾಡಿದಳು. ಮತ್ತೊಮ್ಮೆ ಹೀಗೆಯೇ ಬಂದರೆ, ಅವಳ ಮುಖಕ್ಕೆ ಕ್ಯಾಕರಿಸಿ ಉಗಿದು ‘ಬೇವರ್ಸಿ ಮುಂಡೆ’ ‘ಸೂಳೆ ಮುಂಡೆ’ ಎಂದು ಬಯ್ಯುವಂತೆ ಮಕ್ಕಳಿಗೆ ಹೇಳಿಕೊಟ್ಟ ಕರಿಯ. ಅವಳ ಹತ್ತಿರ ಹೋದರೆ ಕದ್ದು ಕೊಂಡು ಹೋಗಿ ಬಿಡುತ್ತಾಳೆಂದೂ ಇಲ್ಲ ಬಿಸ್ಕತ್ತು, ಚಾಕಲೇಟಿಗೆ ವಿಷ ಹಾಕಿ ಸಾಯಿಸಿ ಬಿಡುತ್ತಾಳೆಂದೂ ಹೆದರಿಸಿದ. ಇನ್ನು ಎಳೆಯ ವಯಸ್ಸಿನ ಈ ಮಕ್ಕಳು ಅವಳು ಅಷ್ಟು ದೂರದಲ್ಲಿ ಕಂಡರೆ ಸಾಕು ಹೀಕು ಬೀಳಲಾರಂಭಿಸಿದವು. ಇನ್ನೊಮ್ಮೆ ಅವಳು ಬಂದಾಗ ಶಾಲಾ ಕೊಠಡಿಯಿಂದ ಹೊರಗೇ ಬರಲು ನಿರಾಕರಿಸಿ ಮೂಲೆಯಲ್ಲಿ ನಡುಗುತ್ತಾ ಕುಂತುಬಿಟ್ಟಿದ್ದವು. ಅದಾಗ್ಯೂ ಅವಳು ರಮಿಸಲು ಹತ್ತಿರ ಹೋಗಿದ್ದಕ್ಕೆ ಜೋರಾಗಿ ಕಿರುಚಿ, ರಂಪ ಮಾಡಿದವು. ಸೇರಿದ ಜನರೆಲ್ಲರೂ ಮೇಸ್ಟರ ಪರವಾಗಿ ನಿಂತು, `ಇನ್ಮುಂದೆ ಬಂದ್ರೆ ಪೋಲೀಸ್‌ಗೆ ಕಂಪ್ಲೆಂಟ್ ಕೊಡ್ಬೇಕಾಗುತ್ತೆ’ ಎಂದು ಅವಮಾನಿಸಿ ಕಳಿಸಿಬಿಟ್ಟರು.

ಅಲ್ಲಿ ಸದುವು ಸಿಕ್ಕದುದರಿಂದ ಸ್ವಲ್ಪ ದಿನ ಸುಮ್ಮನಿದ್ದಳು. ರಂಗನ ಸಪೋರ್ಟಿನ ಜತೆಗೆ ಪುರ್ದ, ಪರ್ಮಶಿಯನ್ನು ಇಟ್ಟುಕೊಂಡು ಕರಿಯ ಗದ್ದೆಗೆ ಹೋಗುವುದನ್ನು ನೋಡಿಕೊಂಡು ಬಂದು ಮನೆಯ ಕಾವಲಿಗೆ ಇರುತ್ತಿದ್ದ ಕರಿಯನ ಅವ್ವನನ್ನು ಹೊಡೆದು, ಬಡಿದು ಮಾಡಿ ಹೋಗುತ್ತಿದ್ದಳು. ಇದು ಎರಡು ಸಾರಿ ಪುನರಾವರ್ತನೆ ಯಾದಾಗ ಸಹನೆ ಮೀರಿದ ಕರಿಯ ಅತ್ತಿಗೆ ಚಂದ್ರಕ್ಕನ ಜತೆ ಮನೆಯಲ್ಲಿ ಇದ್ದು ಹೊಂಚು ಹಾಕಿದ. ಮನೆಗೆ ನುಗ್ಗಿದ ರಾಧಿ ಚಂದ್ರಕ್ಕನ ಜತೆ ಜಗಳಾಡಲಾರಂಭಿಸಿದಳು. ಆಕೆಯ ಜುಟ್ಟು ಹಿಡಿದು ಎಳೆದಾಡಿ ಸೀರೆ ಜಾಕೀಟು ಹರಿದಳು. ಭತ್ತ ತುಂಬುವ ಪಂತದಲ್ಲಿ ಅಡಗಿ ಕುಳಿತಿದ್ದ ಕರಿಯ ಮಾರುದ್ದದ ಬಿದಿರು ಕೋಲಿನೊಂದಿಗೆ ಹೊರಗೆ ಬಂದು ಮುಖ ಮುಸುಡಿ ನೋಡದೇ ಚಚ್ಚಲಾರಂಭಿಸಿದ. ಅವನ ಹೊಡೆತ ತಾಳಲಾರದೇ ಚಂದ್ರಕ್ಕನಿಗೆ “ಅಕ್ಕಾ….. ಬಿಡುಸ್ಕಳೇ…. ತಪ್ಪಾತು ಅಂತೀನಿ…. ಸಾಯುಸ್ಬುಡ್ತಾನೆ….” ಎಂದೆಲ್ಲಾ ಅಂಗಲಾಚಿದಳು. ಆಗ ತಾನೇ ಜಗಳವಾಡಿದ್ದ ಸಿಟ್ಟಿದ್ದರಿಂದ ಆಕೆ ಮುಂದೆ ಬರಲಿಲ್ಲ. ಆದರೆ ಯಾವಾಗ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಳೋ ಅವಾಗ ಎಲ್ಲಿ ಸತ್ತೇ ಹೋದಳೋ ಎಂದು ಭಯಗೊಂಡು ಬಿಡಿಸಿದಳು. ಬೀದಿಯಲ್ಲಿ ನಿಂತಿದ್ದ ಪುಂಡ ಹುಡುಗರು ನೋಡುತ್ತಿದ್ದರೇ ಹೊರತು ಯಾರೂ ತುಟಿಪಿಟಕ್ಕೆನ್ನಲಿಲ್ಲ, ಬಿಡಿಸಲೂ ಬರಲಿಲ್ಲ. ಕರಿಯನೂ “ಅವ್ಳ ಸಪೋರ್ಟಿಗೆ ಬರ್ತಿದ್ರಲ್ಲಾ; ಬರಲೇ ಮಿಂಡ್ರಿಗುಟ್ಟಿದೋರಾ…. ಯಾವನ್ ಬತ್ತೀರಾ ಬರಲೇ….’ ಎಂದೂ ಸವಾಲು ಹಾಕದೇ ಬಿಟ್ಟಿರಲಿಲ್ಲ.

ಸುಮಾರು ಅರ್ಧಗಂಟೆಯವರೆಗೂ ಹಂಗೇ ಬಿದ್ದಿದ್ದ ರಾಧಿ ಎಲ್ಲರೂ ಹೋದ ನಂತರ ಮೆತ್ತಗೆ ಎದ್ದು ಸದ್ದಿಲ್ಲದೇ ಹೊರಟುಹೋದಳು. ಕರಿಯನ ಹೊಡೆತದಿಂದ ತಪ್ಪಿಸಿಕೊಳ್ಳಲು ಸತ್ತಂತೆ ಬಿದ್ದು ಕೊಂಡಳೋ, ಇಲ್ಲ ನಿಜವಾಗಿ ಪ್ರಜ್ಞೆ ತಪ್ಪಿತ್ತೋ ತಿಳಿಯಲಿಲ್ಲ.

ಹೋದವಳು ಎರಡು ದಿನ ಸುಮ್ಮನಿದ್ದು ನಂತರ ಅಪ್ಪನೊಂದಿಗೆ ಬಂದು ಗೌರ್ಮೆಂಟ್ ಆಸ್ಪತ್ರೆಯಲ್ಲಿ ಡಾಕ್ಟರ್ ಸರ್ಟಿಫಿಕೇಟ್ ಮಾಡಿಸಿ ಸೀದಾ ಎಸ್ಪಿ ಹತ್ತಿರವೇ ಹೋಗಿ ಕಂಪ್ಲೇಂಟ್ ಕೊಟ್ಟಳು. ಕೇಸು ಪುನಃ ಕೆಳಗಿನ ಸ್ಟೇಷನ್‌ಗೇ ರೆಫರ್ ಆಯಿತು. ಆದರೆ ಅಲ್ಲಿಗೆ ವಿಚಾರಣೆಗೆ ಬರಲು ನಿರಾಕರಿಸಿದ ರಾಧಿ, ಶಂಕರಯ್ಯ, ಪುನಃ ಎಸ್ಪಿ ಬಳಿಗೆ ಹೋಗಿ, “ಅವು ಜಿಲ್ಲಾ ಪಂಚಾಯ್ತಿ ಮೆಂಬ್ರು ನಾಗೇಗೌಡ್ರ ಸಪೋರ್ಟಿಂದ ನಮ್ಮೇಲೇ ಕೇಸಾಕ್ತಾರೆ. ಅವ್ರಗೆ ಒಡ್ಯದೂ ಇಲ್ಲ, ಬಯ್ಯದೂ ಇಲ್ಲ” ಎಂದವರು, “ಹಿಂದೆ ಇಂಗೇ ಮಾಡಿ ನಾಗೇಗೌಡುನ್ ಇನ್‌ಪ್ಲುಯೆನ್ಸ್ ಮ್ಯಾಲೇ ಸ್ವಾಮಿ ಉಗ್ರಪ್ಪ ಲಂಚ ತಿಂದು ನನ್ಮಗುಳ್ನ ರಿಮ್ಯಾಂಡ್ ರೂಮಿಗೆ ಕಳುಸಿದ್ದು” ಎಂದು ವರದಿ ಒಪ್ಪಿಸಿದ. ಆದ್ದರಿಂದ ಖುದ್ದಾಗಿ ಎಸ್ಪಿಯೇ ವಿಚಾರಣೆ ನಡೆಸಲು ಎಲ್ಲರನ್ನು ಕರೆಕಳಿಸಿದರು. ಸ್ಟೇಷನ್ನಲ್ಲಿದ್ದ ಫೈಲನ್ನೆಲ್ಲಾ ಸ್ಟಡಿ ಮಾಡಿದರು. ಮೇಲಾಗಿ ಇನ್ಸ್‌ಪೆಕ್ಟರ್ ಉಗ್ರಪ್ಪ “ಅವ್ಳ ಕ್ಯಾರೆಕ್ಟ್ರು ಸರಿಯಿಲ್ಲ. ಕ್ರಿಮಿನಲ್ಸ್ ಜತೆಯಲ್ಲಾ ಅವ್ಳು ಅಕ್ರಮ ಸಂಬಂಧ ಇಟ್ಕೊಂಡಿದ್ದಾಳೆ. ಮೇಲಾಗಿ ಆರು ತಿಂಗ್ಳು ರಿಮ್ಯಾಂಡ್ ರೂಂನಲ್ಲಿದ್ದರೂ ಅಲ್ಲಿಂದ ಅಡ್ವರ್ಸ್ ರಿಪೋರ್ಟ್ ಬಂದಿದೆ” ಎಂದೆಲ್ಲಾ ವಿವರಿಸಿದ್ದರು. ಎಲ್ಲರ ಹೇಳಿಕೆ ಪಡೆದ ಎಸ್ಪಿ, “ಇಷ್ಟೆಲ್ಲಾ ಆದ್ಮೇಲೂ ನಂ ಪರ್ಮಿಷನ್ ಇಲ್ದೇ ನೀನೆಂಗೆ ಅವರ ಮನೆ ಬಾಗ್ಲಿಗೆ ವೋದೆ? ಕಳ್ತನ ಮಾಡಕ್ಕೋ ಕೊಲೆ ಮಾಡಕ್ಕೋ ಅಂತ ನಿಮ್ಮೇಲೇ ಯಾಕೆ ಟ್ರೆಸ್‌ಪಾಸ್ ಕೇಸ್ ಹಾಕಿ ಜೈಲಿಗೆ ಕಳುಸ್ಬಾರ್ದು?” ಎಂದಂದು, “ಇನ್ನೊಂದ್ ಸಲ ಇಂತ ಕಂಪ್ಲೆಂಟ್ ತಂದ್ರೆ ನಿನ್ನ ಗತಿ ನೆಟ್‌ಗಾಗಕ್ಕಿಲ್ಲ” ಎಂದು ಶಂಕರಯ್ಯನಿಗೆ ಬೈದು, “ಇನ್ಮೇಲೆ ಏನಿದ್ರೂ ನೀನುಂಟು ಕೋರ್ಟ್ವುಂಟು ಹೋಗು” ಎಂದು ಸಾಗು ಹಾಕಿದರು.

ಮಾತು ಮಾತಿಗೆ ಪೋಲೀಸು ಕಂಪ್ಲೇಂಟು ಎಂದು ಹೋಗುತ್ತಿದ್ದವರಿಗೆ ಅಲ್ಲಿಯ ಎಲ್ಲಾ ದ್ವಾರಗಳು ಬಂದ್ ಆದುದರಿಂದ ಅವರ ಮಾತಿನಲ್ಲಿಯೇ ಹೊಸದಾರಿ ಕಂಡುಕೊಂಡು ಸೀದಾ ಕೇಸು ಹಾಕಲು ಕೋರ್ಟಿನ ಕಡೆಗೆ ನಡೆದರು. ಅನುಭವಸ್ಥ ತಿರುಕಪ್ಪ ಲಾಯರು ಕೇಸಿನ ವಿವರ ಕೇಳಿ ದಾಖಲು ಮಾಡಲು ನಿರಾಕರಿಸಿದ್ದರಿಂದ ಹೊಸದಾಗಿ ದಂಧೆ ಆರಂಭಿಸಿದ್ದ ರೇವಪ್ಪನನ್ನು ಹಿಡಿದರು.

ರೇವಪ್ಪನಾದರೋ ಬಂದ ಕೇಸನ್ನು ನಿರಾಕರಿಸಿ ಕಳುಹಿಸಲು ಸಿದ್ಧನಾಗಿರಲಿಲ್ಲವಾದ್ದರಿಂದ, ಹಾಗೇ ವಾದಿಸುವೆ ಹೀಗೆ ಗೆಲ್ಲುವೆ ಎಂದೆಲ್ಲಾ ಆಶ್ವಾಸನೆ ನೀಡಿದ. ಕೊನೆಗೆ ಐನೂರು ರೂಪಾಯಿ ಅಡ್ವಾನ್ಸ್ ಇಸ್ಕೊಂಡು ಕಳುಹಿಸಿದ.

ವಾರಬಿಟ್ಟು, ಬಂದರೆ ಯಾವುದೇ ಪ್ರಗತಿಯಾಗಿರಲಿಲ್ಲ. ರಿಮ್ಯಾಂಡ್ ರೂಂಗೆ ಹೋಗಿ ಬಂದಿರುವುದರಿಂದ ಕೇಸು ಕಟ್ಟುವುದಿಲ್ಲ. ಆದ್ದರಿಂದ ಜಡ್ಜ್ ಸಾಹೇಬರಿಗೆ ವ್ಯವಸ್ಥೆ ಮಾಡಬೇಕು ಎಂದೆಲ್ಲಾ ಸುಳ್ಳು ಹೇಳಿ ಎರಡು ಸಾವಿರ ಬೇಕೆಂದ. ಈಗಾಗಲೇ ಅಡ್ವಾನ್ಸ್ ಕೊಟ್ಟು ಕೇಸು ಸಿಗೆಹಾಕಿದ್ದರಿಂದ ಬಿಡಲಾಗದೆ ಮುಂದಿನವಾರ ಬಂದು ಕೊಡುವುದಾಗಿ ಹೇಳಿ ಹೋದರು. ಮನೆಯಲ್ಲಿದ್ದ ಎಂಟು ಹತ್ತು ಚೀಲ ಭತ್ತವನ್ನು ಮಾರಿ ದುಡ್ಡು ತಂದು ಕೊಟ್ಟರು.

ಕೋರ್ಟಿನಲ್ಲಿ ಮೆಂಟೆನೆನ್ಸ್ ಕೇಸು ದಾಖಲಾಯಿತು.

ಗೋವಿಂದಯ್ಯ ನೋಟೀಸು ಬಂದ ತಕ್ಷಣ ಇಳಿದು ಹೋದರು. ಕಾಲದಿಂದಲೂ ಎಂದೂ ಕೋರ್ಟು ಮೆಟ್ಟಿಲು ಹತ್ತಿದವರಲ್ಲ. ಈಕೆಯ ಕಾಲಲ್ಲಿ ಸ್ಟೇಷನ್ ಕೋರ್ಟ್ ಎಲ್ಲವನ್ನು ಕಾಣುವಂತಾಯಿತಲ್ಲ ಎಂದು ನೊಂದರು. ಯಾರನ್ನು ತಂದರೆ ತಮ್ಮ ಮನೆ ಉದ್ಧಾರವಾಗುವುದೆಂದು ಭಾವಿಸಿ ಹಠಹಿಡಿದು ಖರ್ಚು ಇಟ್ಟು ಮದುವೆ ಮಾಡಿಕೊಂಡು ತಂದದೋ ಅವರಿಂದಲೇ ಮನೆಯ ಮಾನ ಮರ್ಯಾದ ಊರಲ್ಲಿ ಹರಾಜಾಗಿದ್ದು ಮಾತ್ರ ವಿಪರ್ಯಾಸ. ಅವರ ದೇಹದಲ್ಲಿ ಚಿಂತೆಯ ಚಿಹ್ನೆಗಳು ಕಾಣಲಾರಂಭಿಸಿದವು. ಒಂದೆರಡು ಬಾರಿ ತಲೆ ತಿರುಗಿ ಆಫೀಸಲ್ಲಿ ಬಿದ್ದಾಗ ಡಾಕ್ಟರರು ಸಕ್ಕರೆ ಕಾಯಿಲೆ ಹಾಗೂ ಬ್ಲಡ್‌ ಪ್ರೆಶರ್ ಎಂಬ ಶ್ರೀಮಂತ ಕಾಯಿಲೆಗಳು ಅಂಟಿರುವುದು ತಿಳಿಸಿಬಿಟ್ಟರು. ಇಂತಹ ಘಟಾನುಘಟಿ ಕಾಯಿಲೆಗಳು ತನ್ನ ದೇಹದಲ್ಲೇ ಇರುವವೆಂದ ಮೇಲೆ ಬಹಳ ಹುಷರಾಗಿರಬೇಕೆಂದುಕೊಂಡು ಆದಷ್ಟು ಶಾಂತಚಿತ್ತ ದಿಂದ ಇರಬೇಕೆಂದುಕೊಂಡಿದ್ದರು.

ಕೋರ್ಟಿನಲ್ಲಿ ಮೊದಲ ಹಿಯರಿಂಗ್ ಆಯಿತು. ರಾಧಿ ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡಿ ಮನೆ ಬಿಡಿಸಿ ಹೊರಹಾಕಿದರೆಂದು ಹೇಳಿದರೆ, ಶಂಕರಯ್ಯ ತಾನು ಮದುವೆಯಲ್ಲಿ ಇಪ್ಪತ್ತೈದು ಸಾವಿರ ವರದಕ್ಷಿಣೆ ಕೊಟ್ಟಿದ್ದು ಸಾಲದೆಂದು ಕಿರುಕುಳ ಕೊಡುತ್ತಿರುವರೆಂದು ಸಾಕ್ಷಿ ಹೇಳಿದ. ಗೋವಿಂದಯ್ಯನಿಗೆ ದಿಗ್ಭ್ರಮೆಯಾಯಿತು. ಅಕ್ಕನ ಮಗಳ ಕಾರಣದಿಂದ ಅವರ ಮನೆಯ ಖರ್ಚನ್ನೂ ತಾನೇ ನೋಡಿಕೊಂಡು ಮದುವೆ ಮಾಡಿಕೊಂಡು ಬಂದಿದ್ದರೆ ಈಗ ಇಂತಹ ಹೇಳಿಕೆ. ಊರಿನಲ್ಲಿ ಮಾಡಿಕೊಂಡ ಸಾಲ ತೀರಿಸಲಾಗದೆ ಇದ್ದಾಗ ತನ್ನ ಅಪ್ಪ ಜಾಮೀನು ಕೊಟ್ಟು ಬಿಡಿಸಿಕೊಂಡು ಬಂದಿದ್ದರಿಂದ ಹಿಡಿದು ಸವಿಸ್ತಾರ ಸಾಕ್ಷ್ಯ ನುಡಿದರು ಗೋವಿಂದಯ್ಯ. ಏನೂ ಆಸ್ತಿ ಇಲ್ಲದ ಶಂಕರಯ್ಯ ಗುತ್ತಿಗೆ ಗದ್ದೆ ಮಾಡಿಕೊಂಡು ಇರುವವನು, ಇಪ್ಪತ್ತೈದು ಸಾವಿರ ವರದಕ್ಷಿಣೆಯನ್ನು, ಅದು ಹತ್ತು ವರ್ಷದ ಹಿಂದೆಯೇ, ಅದು ಯಾವುದೇ ನೌಕರಿ ಯಿಲ್ಲದ ಕರಿಯನಿಗೆ, ಅದೂ ಎರಡನೆಯ ಮದುವೆಯಾಗುತ್ತಿರುವವನಿಗೆ, ಅದೂ ಹೆಂಡತಿಯ ತಮ್ಮನಿಗೆ ಕೊಡಲು ಸಾಧ್ಯವೇ? ಮೇಲಾಗಿ ಹಣವನ್ನು ಗೋವಿಂದಯ್ಯನಿಗೇ ಕೊಟ್ಟಿದ್ದ ಎಂದು ಹೇಳಿಕೆ ನೀಡಿದ್ದ. ವರದಕ್ಷಿಣೆ ಪಡೆದ ತಪ್ಪಿಗೆ ಶಿಕ್ಷೆಯಾಗಿ ಅವನ ಕೆಲಸ ಹೋಗಲಿ ಎಂದು. ಆದರೆ ಹಿರಿಯನಾದ ತಂದೆ ಇದ್ದಾಗ ಗೋವಿಂದಯ್ಯನಿಗೆ ಹಣ ಕೊಟ್ಟಿದ್ದೆಯೆಂಬುದು ಹಾಸ್ಯಾಸ್ಪದವಾಗಿ ಸಾಕ್ಷ್ಯ ಮುರಿದುಬಿತ್ತು.

ಯಾಕೋ ಶಂಕರಯ್ಯನಿಗೆ ಕೇಸು ತನ್ನ ಪರ ವಾಲುತ್ತಿಲ್ಲವೆಂದು ಭ್ರಮ ನಿರಸನವಾಯಿತು. ಏನಾದರೂ ಮಾಡಿ ಅವರನ್ನು ತಾನು ಹೇಳಿದಂತೆ ಕೇಳುವಂತೆ ಮಾಡಲೇಬೇಕೆಂಬ ಹಠ ತೀವ್ರವಾಯಿತು.

ಹೀಗಿರುವಾಗ ಗೋವಿಂದಯ್ಯನ ಮನೆಯಲ್ಲಿ ಇದ್ದ ತಂಗಿಯ ಮಗಳು ಸುಮತಿ ಅನಿರೀಕ್ಷಿತವಾಗಿ ನೇಣುಹಾಕಿಕೊಂಡು ಸತ್ತುಹೋದಳು. ಮನೆಯವರಾರಿಗೂ ಅವಳ ಸಾವಿಗೆ ಕಾರಣ ಹೊಳೆಯಲಿಲ್ಲ. ಅಕ್ಕಪಕ್ಕದ ಮನೆಯವರು ಹಗ್ಗವನ್ನು ಕೊಯ್ದು ಹೆಣ ಕೆಳಗಿಳಿಸಿದರು. ಬಂದ ಪೋಲೀಸರು ಅವರನ್ನು ತರಾಟೆಗೆ ತೆಗೆದುಕೊಂಡರು, ಇನ್ನೂ ಜೀವ ಇದ್ದಿದ್ರಿಂದ ಉಳಿತಾಳೇನೋ’ ಎಂದು ಅವರು ಸಮರ್ಥಿಸಿಕೊಂಡರು. ‘ಪೋಸ್ಟ್ ಮಾರ್ಟಂನಲ್ಲಿ ಡಾಕ್ಟರರು ಇದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ಹೇಳಿದರೂ, ತಮ್ಮ ಮನೆಯಲ್ಲಿ ಅದೂ ಹಾಡುಹಗಲಲ್ಲಿ ಕೊಲೆ ಮಾಡುವಂತ ದ್ವೇಷ ಯಾರಿಗಿದೆ’ ಎಂದು ಕೇಸು ಯತ್ಲಾಗೆ ಹೋಗಿ ಯತ್ಲಾಗೆ ತಿರೀಕಂತದೋ’ ಅಂತ ಹೆದರಿಕೊಂಡು ಊರ ಹಿರಿಯರಿಂದ ಹೇಳಿಸಿ, ಹಣ ತಂದು ಮಣ್ಣು ಮಾಡಿದರು.

ಗೋವಿಂದಯ್ಯ ಮನೆಯಲ್ಲಿನ ವಿಪರೀತ ಬೆಳವಣಿಗೆಗೆ ನೊಂದು ಹೋದರು. ಕರಿಯನಾದರೋ ತನಗೇನು ಆಗಿಲ್ಲವೆಂಬಂತೆ ತನ್ನ ಪಾಡಿಗೆ ತಾನಿದ್ದ. ಗೋವಿಂದಯ್ಯ ಕೇಸನ್ನು ಒಪ್ಪಂದದ ಮೂಲಕ ಬಗೆಹರಿಸಲು ಅವರಿವರನ್ನು ಎದುರುಗಡೆಯ ಲಾಯರ್‌ ರೇವಪ್ಪನಲ್ಲಿಗೆ ಕಳಿಸಿಕೊಟ್ಟರು. ಆತ ಹತ್ತು ಸಾವಿರ ಕೊಟ್ಟರೆ ತಮ್ಮ ಪಾರ್ಟಿಯನ್ನು ಒಪ್ಪಿಸಿ ಕೇಸು ಹಿಂದೆ ತೆಗೆದುಕೊಳ್ಳುವುದಾಗಿ ಹೇಳಿದ. ಇವರು ಒಪ್ಪಿ ಹಣ ತೆಗೆದುಕೊಂಡು ಹೋದರು. ರೇವಪ್ಪ ತಮ್ಮ ಪಾರ್ಟಿ ಇಪ್ಪತ್ತು ಸಾವಿರ ಕೊಟ್ಟರೆ ಮಾತ್ರ ಒಪ್ಪುವುದಾಗಿ ಹೇಳಿದ್ದಾರೆ ಎಂದು ವಾಪಾಸು ಬಂದು ಮನೆಯಲ್ಲಿದ್ದ ಶೇರು ಪತ್ರಗಳು, ಎಸ್.ಎಸ್.ಸಿ ಪತ್ರಗಳನ್ನೆಲ್ಲಾ ಒತ್ತೆಯಿಟ್ಟು ಹಣ ತೆಗೆದುಕೊಂಡು ಇವರ ಲಾಯರ್‌ ರಾಯಣ್ಣನನ್ನು ಕರೆದುಕೊಂಡು ಹೋದರು. ರೇವಪ್ಪ ಇದ್ದವನು, ಇಷ್ಟಕ್ಕೂ ಒಪ್ಪಿದರೆಂದರೆ ಇನ್ನಷ್ಟಕ್ಕೂ ಒಪ್ಪುವರೆಂದು ಭಾವಿಸಿ, ಸಾಧ್ಯವಾದಷ್ಟು ಚೌಕಾಸಿ ಮಾಡಲು ಪ್ರಯತ್ನಿಸಿ, ಇನ್ನೂ ಇಪ್ಪತ್ತು ಸಾವಿರ ಹೆಚ್ಚಿಗೆ ಕೊಟ್ಟರೆ ಕೇಸು ವಾಪಾಸು ತೆಗೆದುಕೊಳ್ಳುವುದಷ್ಟೇ ಅಲ್ಲ, ಆಸ್ತಿಯಲ್ಲಿ ಏನೂ ಪಾಲುಬೇಡೆಂದು ಬರೆಸಿ ಕೊಡುವುದಾಗಿಯೂ, ಡೈವೋರ್ಸ್‌ಗೂ ಸಹಿ ಹಾಕಿಸಿಕೊಡುವುದಾಗಿಯೂ ಹೇಳಿದ. ಸಲಿಗೆ ಕೊಟ್ಟರೆ ಮೊತ್ತ ಮತ್ತೂ ಏರಬಹುದೆಂದು ಏನೂ ಮಾತನಾಡದೆ ರಾಯಣ್ಣ, ಅದಕ್ಕೂ ಒಪ್ಪಲು ತಯಾರಾಗಿದ್ದ ಗೋವಿಂದಯ್ಯನನ್ನು ಹೊರಗೆ ಕರೆದುಕೊಂಡು ಬಂದು, ಅದೇ ದುಡ್ಡನ್ನು ಬ್ಯಾಂಕಲ್ಲಿಟ್ಟರ ಬರೋ ಬಡ್ಡಿಯಿಂದಲೇ ಅವಳಿಗೆ ಕೋರ್ಟಿನಿಂದ ಸಿಗಬಹುದಾದ ಪರಿಹಾರ ಕೊಡಬಹುದು ಎಂದೆಲ್ಲಾ ಹೇಳಿ ಒಪ್ಪಂದಕ್ಕೆ ಇನ್ನು ಮುಂದೆ ಪ್ರಯತ್ನಿಸದಿರಲು ಸೂಚಿಸಿದರು. ಬದಲಾಗಿ ಕೋರ್ಟಿಗೆ ಬಲವಾದ ಸಾಕ್ಷಿ ಒದಗಿಸಲು ತಿಳಿಸಿದರು.

ಯಾವಾಗ ಒಪ್ಪಂದಕ್ಕೆ ಬರಲಿಲ್ಲವೋ ಶಂಕರಯ್ಯನ ಸೇಡು ಮತ್ತಷ್ಟು ಉಲ್ಬಣಿಸಿತು. ತನ್ನ ಮಗ ಮೂಗನನ್ನು ರಾಧಿಯ ಅಕ್ರಮ ಸಂಬಂಧಿ ಇನ್ನೊಬ್ಬ ಕೇಡಿಯೊಂದಿಗೆ ಜತೆಮಾಡಿ ಕಳುಹಿಸಿದ. ರಾಧಿ ಓಡಿಹೋದ ಮೇಲೆ ಮಕ್ಕಳು ಮರಿಗಳನ್ನು ಕಸ ಮುಸುರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಆತನ ವಯಸ್ಸಾದ ತಾಯಿಗೆ ಬಿದ್ದಿದ್ದರಿಂದ ತನ್ನ ತಮ್ಮನ ಮಗಳನ್ನು ತಂದು ಇರಿಸಿಕೊಂಡಿದ್ದಳು. ಈ ಕೇಸು ತೀರ್ಮಾನವಾದ ಮೇಲೆ ಕರಿಯನಿಗೆ ಮದುವೆ ಮಾಡಿಕೊಳ್ಳಬೇಕೆಂದೂ ಅಂದುಕೊಂಡಿದ್ದಳು. ಅಂತಹ ಹುಡುಗಿಯನ್ನು ಎಲ್ಲರೂ ಮನೆಬಿಟ್ಟು ಗದ್ದೆಗೆ ಹೋದ ಮೇಲೆ, ಮಟ ಮಟ ಮಧ್ಯಾಹ್ನದ ಹೊತ್ತಿಗೆ, ಹೆಂಚು ಇಳಿಸಿ ಮನೆಗೆ ನುಗ್ಗಿ ಹಾಲಿಗೆ ವಿಷ ಹಾಕಿ ಕುಡಿಸಿ ಅವಳನ್ನು ಕೊಲ್ಲಲು ಯತ್ನಿಸಿದರು. ಆಕೆ ಬುದ್ಧಿವಂತಿಕೆಯಿಂದ ತಾನೇ ಕುಡಿಯುವುದಾಗಿ ಹೇಳಿ ಇನ್ನೊಂದು ಕೈ ಜಾರಿಸಿದಂತೆ ಮಾಡಿ ಚಲ್ಲಿ ಬಿಟ್ಟಳು. ಆಗಲೇ ಮೂಗ ‘ಅಷ್ಟು ಸುಲಭವಾಗಿ ಬಿಟ್ಬುಡ್ತೀನಾ ನಿನ್ನ, ಸುಮತಿಗೆ ಮಾಡ್ದಂಗೆ ನಿಂಗೂ ಒಂದು ಗತಿ ಕಾಣುಸ್ತೀವಿ’ ಎಂದಂದು ಸೂರಿಗೆ ಹಗ್ಗ ಬಿಗಿಯಲು ಅಡ್ಡ ಗೋಡೆ ಏರಿದ. ಅಷ್ಟರಲ್ಲಿ ಕರಿಯನ ಮಗ ಸ್ಕೂಲಿನಿಂದ ಬಂದವನು ಬಾಗಿಲು ಬಡಿದ. ಇವರ ಕ್ರಿಯೆಗೆ ಆಸ್ಪದ ಸಿಗದಿದ್ದರಿಂದ ಇನ್ನೊಬ್ಬ ಸ್ಟಾವ್‌ನಲ್ಲಿದ್ದ ಸೀಮೆ ಎಣ್ಣೆಯನ್ನು ಅವಳ ಮೇಲೆ ಸುರಿದ ಮೂಗ ಬೆಂಕಿಕಡ್ಡಿ ಗೀರಿ ಅವಳ ಮೇಲೆ ಎಸೆದು ಹೆಂಚು ಎತ್ತಿ ಪರಾರಿಯಾದರು. ಸೀರೆಗೆ ಬೆಂಕಿ ಹತ್ತಿಕೊಂಡಿದ್ದರಿಂದ ಭಯಭೀತಳಾಗಿ ಆರ್ತನಾದ ಮಾಡುತ್ತಾ ಸೀರೆಯನ್ನು ಜಾಣ್ಮಯಿಂದ ಕಿತ್ತೆಸೆದು ಹೊರಗೆ ಓಡಿಬಿಡಲು ಬಾಗಿಲು ತೆಗೆಯುವಷ್ಟರಲ್ಲಿ ಮೂರ್ಛೆ ಹೋಗಿಬಿಟ್ಟಳು. ಅಂಗಡಿ ಅರಳೀಕಟ್ಟೆ ಮುಂದೆಲ್ಲಾ ಕರಿಯ ಬೆಂಕಿ ಇಟ್ಟು ಹೋದನೆಂದೂ ಸುದ್ದಿ ಹರಡಿಬಿಟ್ಟಿತು. ಊರ ಜನರೆಲ್ಲಾ ಸೇರಿಕೊಂಡರು. ಗೋವಿಂದಯ್ಯ ಚಂದ್ರಕ್ಕ ಬಂದು ಆಸ್ಪತ್ರೆಗೆ ಸೇರಿಸಿ ಉಪಚರಿಸಿದರು. ಒಂದು ದಿನ ಕಳೆದ ಮೇಲೆಯೇ ಅವಳಿಗೆ ಪ್ರಜ್ಞೆ ಮರಳಿದ್ದು. ಆಗಲೂ ಅವಳ ಕೊಲೆ ಪ್ರಯತ್ನವಾಗಿ ಕಂಪ್ಲೆಂಟ್ ಕೊಡಲು ಗೋವಿಂದಯ್ಯ ಹೆದರಿದರು. “ಈ ಪೋಲೀಸ್ರು ಕೈಗೆ ಸಿಗಾಕಂಡ್ರೆ, ಎಲ್ಲಿ ನಾವೇ ಕೊಲೆ ಮಾಡಕ್ಕೆ ಹೋಗಿದ್ವಿ ಅಂತ ಒದೆಯೋ ಪೈಕಿ” ಎಂದು ಸುಮ್ಮನಾದರು.

ಆದರೆ ಸುಮತಿಯ ಸಾವು ಆತ್ಮಹತ್ಯೆಯಲ್ಲ ಕೊಲೆಯೆಂಬ ಸತ್ಯ ಈಗ ಬಯಲಾಯಿತು. ಅವರ ಬಾಯಿಯಿಂದಲೇ ಬಂದದ್ದು ಮಾತ್ರವಲ್ಲ; ಈಕೆಗೂ ಅದೇ ರೀತಿಯ ಪ್ರಯತ್ನ ನಡೆಸಿದ್ದುದು ಇನ್ನಷ್ಟು ಪುಷ್ಟಿ ನೀಡಿತ್ತು. ಆದರೆ ಇದನ್ನೆಲ್ಲಾ ಪೋಲೀಸರಿಗೆ ಅರಿಕೆ ಮಾಡುವುದು ಹೇಗೆ? ಬಲವಾದ ಸಾಕ್ಷಿಗಳಿಲ್ಲದೆ ಅವರು ನಂಬುವರೇ? ಮೇಲಾಗಿ ಕರಿಯನೇ ಬೆಂಕಿ ಇಟ್ಟು ಹೋದನೆಂದು ಜನ ಮಾತನಾಡುತ್ತಿದ್ದಾರೆ. ಒಂದು ಹೋಗಿ ಇನ್ನೊಂದಾದರೆ ಎಂದು ಸುಮ್ಮನಾದರು ಗೋವಿಂದಯ್ಯ.

ಇತ್ತ ಕೋರ್ಟ್‌ಕೇಸು ಮುಂದುವರೆದಿತ್ತು. ಶಂಕರಯ್ಯ, ‘ಕರಿಯನಿಗೆ ಇನ್ನೊಂದು ಮದುವೆ ಮಾಡಿದ್ದಾರೆ. ಆ ಹುಡುಗಿಯನ್ನು ಸೀಮೆಎಣ್ಣೆ ಹಾಕಿ ಬೆಂಕಿ ಇಟ್ಟಿದ್ದಾನೆ- ಕರಿಯ’ ಎಂದು ಸಾಕ್ಷಿ ನುಡಿದ. ಅವನ ಲಾಯರ್ ಅವಳನ್ನು ಕೋರ್ಟ್ ಮುಂದೆ ಹಾಜರು ಪಡಿಸಲು ಕೋರಿಕೆ ಸಲ್ಲಿಸಿದ. ಆ ವಿಷಯ ಈ ಕೇಸಿನ ಪರಿಮಿತಿಯೊಳಗೆ ಬರುವುದಿಲ್ಲೆಂದು ನ್ಯಾಯ ಮೂರ್ತಿಗಳು ನಿರಾಕರಿಸಿದರು.

ಶಂಕರಯ್ಯ ಇಷ್ಟಕ್ಕೇ ಸೋಲೊಪ್ಪಲು ತಯಾರಾಗಿರಲಿಲ್ಲ. ‘ನನ್ನ ಮಗಳನ್ನ ಬಾಳಿಸದ ಅವ್ರ ವಂಸುದಾಗೆ ಹೆಣ್ಮಕ್ಳೇ ಇಲ್ದಂಗ್ ಮಾಡ್ತೀನಿ’ ಎಂದು ಶಪಥ ಮಾಡಿ ತನ್ನ ಮಗ ಮೂಗನಿಗೆ ಪ್ರಚೋದಿಸಿ ಗೋವಿಂದಯ್ಯನ ಮಗಳನ್ನು ಅಪಹರಿಸಲು ಪ್ರಯತ್ನಮಾಡಿದರು. ಶಾಲೆಗೆ ಹೋಗಿ ಬರುತ್ತಿದ್ದ ಆ ಹುಡುಗಿಯನ್ನು ಆಟೋದಲ್ಲಿ ಫಾಲೋ ಮಾಡುತ್ತಿರುವ ವಿಷಯ ಗೋವಿಂದಯ್ಯನಿಗೂ ತಿಳಿಯಿತು. ಇದುವರೆಗೂ ಕರುಳು ಸಂಬಂಧಿ ಅಕ್ಕ ಮತ್ತು ಅವಳ ಮಕ್ಕಳು ಈ ಮಟ್ಟಕ್ಕೆ ಮುಂದುವರಿಯಲಾರರು ಎಂದುಕೊಂಡಿದ್ದರು ಗೋವಿಂದಯ್ಯ. ಆದರೆ ಚಂದ್ರಕ್ಕ ಇನ್ನೂ ಮುಂದೆ ಸುಮ್ಮನಿರುವುದರಲ್ಲಿ ಅರ್ಥವಿಲ್ಲವೆಂದೂ, ಈಗಾಗಲೇ ಒಂದು ಹುಡುಗಿಯನ್ನು ಕೊಂದಿದ್ದು, ಇನ್ನೊಬ್ಬಳನ್ನು ಇನ್ನೇನು ಸಾಯಿಸಿ ಬಿಡುವಷ್ಟರಲ್ಲಿ ಅದೃಷ್ಟವಶಾತ್ ಬಚಾವಾದದ್ದು, ಮುಂದೆಯೂ ಸುಮ್ಮನಿದ್ದರೆ ಇಟ್ಟುಕೊಂಡಿರುವ ಒಂದೊಂದು ಮಕ್ಕಳನ್ನು ಕಳೆದುಕೊಳ್ಳಬೇಕಾದೀತೆಂದು ಎಚ್ಚರಿಸಿದರು.

ಈಗ ಜ್ಞಾನೋದಯವಾದ ಗೋವಿಂದಯ್ಯ ತನ್ನ ಅತಿಯಾದ ತಾಳ್ಮೆ, ಕ್ಷಮೆಯ ಗುಣದಿಂದಾಗಿ ತನ್ನ ಕುಟುಂಬದ ಸದಸ್ಯರ ಜೀವದ ಮೇಲೆ ಆಟ ಆಡುವುದು ಸರಿಯಲ್ಲವೆಂದು ನಿರ್ಧರಿಸಿ ಕಠಿಣವಾಗಲಾರಂಭಿಸಿದರು. ಹೋಗಿ ಕಂಪ್ಲೇಂಟ್ ಕೊಟ್ಟರು. ಊರಿನ ಕುಲಸ್ಥ ಜನರೆಲ್ಲಾ ನಾ ಮುಂದು ತಾ ಮುಂದು ಎಂದು ಸಾಕ್ಷಿ ಹೇಳಲು ಬಂದರು. ಆದರೆ ಘಟನೆಗಳು ನಡೆದು ಅನೇಕ ತಿಂಗಳುಗಳೇ ಕಳೆದಿದ್ದು ಈಗ ಹೊಸದಾಗಿ ಕೇಸು ದಾಖಲಿಸಲು ಬರುವುದಿಲ್ಲವೆಂದರು ಪೊಲೀಸರು. ಅಸಹಾಯಕರಾಗಿ ಮನೆಗೆ ವಾಪಾಸು ಬಂದರು.

ಆದರೆ ಊರವರಾರೋ ಮೂಗನೇ ಕರಿಯನ ಅಕ್ಕನ ಮಗಳನ್ನು ಕೊಂದಿರುವುದೆಂದು ಮುಖ್ಯಮಂತ್ರಿಗೆ ಮೂಕರ್ಜಿ ಬರೆದುಬಿಟ್ಟರು. ವಾರದೊಳಗೆ ತನಿಖೆಗಾಗಿ ಮೇಲಿಂದ ಆದೇಶ ಬಂದುಬಿಟ್ಟಿತು. ಮೂಗನನ್ನು ಎಳೆದುಕೊಂಡು ಬಂದು ಚೆನ್ನಾಗಿ ಚಚ್ಚಿದರೂ ಬಾಯಿ ಬಿಡಲಿಲ್ಲ. ಅಷ್ಟರೊಳಗಾಗಿ ಶಂಕರಯ್ಯ ಇನ್ನಷ್ಟು ಹೊತ್ತು ಮೂಗ ಒಳಗೇ ಇದ್ದರೆ ಬಾಯಿ ಬಿಡಿಸುವುದು ಗ್ಯಾರಂಟಿಯೆಂದರಿತು ರೈತ ಸಂಘದ ಮುಖಂಡರ ಕಾಲು ಹಿಡಿದು ಎಮ್ಮೆಲ್ಲೆಯ ಎದುರು ಹಲ್ಲು ಗಿಂಜಿ ಪೋಲೀಸರಿಗೆ ಲಂಚ ಕೊಡಿಸಿ ಬಿಡಿಸಿಕೊಂಡು ಹೋದ. ಪೋಲೀಸರೂ “ಪರಿಶೀಲಿಸಲಾಗಿ ಇದು ಸುಳ್ಳು ಆರೋಪವೆಂದು ಸಾಬೀತಾಗಿದೆ” ಎಂದು ರಿಪೋರ್ಟ್ ಬರೆದರು.

ಹೀಗಿರುವಾಗ ಕರಿಯನ ಕೇಸಿನ ವಿಚಾರಣೆ ಅಂತಿಮ ಹಂತ ತಲುಪಿತ್ತು. ಕರಿಯನ ಮಕ್ಕಳೇ ಓಡಿಹೋದಾಗ ರಾಧಿಯೊಂದಿಗೆ ಇದ್ದುದರಿಂದ ಅವರ ವಿಚಾರಣೆ ನಡೆಯುತ್ತಿತ್ತು.

ರಾಧಿಯು ಆಸ್ಪತ್ರೆಗೆ ಹೋಗೋಣವೆಂದು ತಮ್ಮನ್ನು ಕರೆದುಕೊಂಡು ಹೋದವಳು, ಆಸ್ಪತ್ರೆಯ ಬದಲು ದೇವಸ್ಥಾನಕ್ಕೆ ಕರೆತಂದಳೆಂದೂ, ಅಷ್ಟರಲ್ಲಾಗಲೇ ಅಲ್ಲಿ ಕಾದಿದ್ದ ರಂಗನೊಡನೆ ತಮ್ಮನ್ನು ಲಾರಿಯಲ್ಲಿ ಯಾವುದೋ ಊರಿಗೆ ಕರೆದೊಯ್ದಳೆಂದೂ, ಅಲ್ಲಿ ಒಂದು ಸಣ್ಣ ಮನೆಯಲ್ಲಿ ಇರಿಸಿ ಒಬ್ಬನಿಗೆ ರಮೇಶನೆಂದೂ ಇನ್ನೊಬ್ಬನಿಗೆ ಸುರೇಶನೆಂದೂ ಕರೆದು ತನ್ನ ಹೆಸರು ಸುವರ್ಣ ಎಂದು ಹೇಳಿಕೊಂಡು ಬಾಳೆಹಣ್ಣು ಮಾರಿಕೊಂಡು ಬರುತ್ತಿದ್ದಳು ಎಂದು ಹೇಳಿಬಿಟ್ಟರು. ತಮಗೆ ಹೊಡೆದು ಬಡಿದು ಉಪವಾಸ ಕೆಡವುತ್ತಿದ್ದುದಾಗಿಯೂ, ಅವರಿಬ್ಬರೂ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಮಲಗುತ್ತಿದ್ದುದಾಗಿಯೂ ಸಾಕ್ಷಿ ನುಡಿದರು. ಹತ್ತಾರು ಜನರೆದುರು ಕಣ್ಣಾರೆ ಕಂಡ ಮಕ್ಕಳೇ ಸಾಕ್ಷಿ ನುಡಿದಿದ್ದರಿಂದಲೂ ಅವಮಾನಗೊಳ್ಳದ ಆಕೆ “ಸುಳ್ಳು ಸುಳ್ಳು….” ಎಂದು ತನ್ನ ಲಾಯರ್ ಮೂಲಕ ಪ್ರತಿಕ್ರಿಯಿಸಿದಳು. ನೀವು ಹೇಳುವುದೇ ಸುಳ್ಳು ಎಂದು ಮಕ್ಕಳೂ ಪಟ್ಟು ಹಿಡಿದುಬಿಟ್ಟರು.

ಇದರೊಂದಿಗೆ ತಮ್ಮ ತೀರ್ಮಾನ ನೀಡಲು ಸಂಪೂರ್ಣ ಮಾಹಿತಿ ಸಿಕ್ಕ ನ್ಯಾಯಾಧೀಶರೂ ಹಿಂದೂ ಕಾನೂನಿನ ಪ್ರಕಾರ ಆಕೆಯು ವ್ಯಭಿಚಾರಿಯೆಂದು ನಿರ್ಧರಿಸಿ ಯಾವುದೇ ಪರಿಹಾರಕ್ಕೆ ಅರ್ಹಳಲ್ಲವೆಂದು ತೀರ್ಮಾನ ಕೊಟ್ಟುಬಿಟ್ಟರು. ಮೊದಲೇ ಮಾನಸಿಕವಾಗಿ ಜರ್ಝರಿತನಾದ ಬಡಪಾಯಿ ಕರಿಯನಿಗೆ ಮಕ್ಕಳನ್ನು ಸಾಕುವ ಜವಾಬ್ದಾರಿಯ ಜತೆಗೆ ರಾಧಿಯ ಉಸ್ತುವಾರಿಗೆ ಹಣ ನೀಡಲು ಆದೇಶ ನೀಡಿದರೆ ಗಾಯದ ಮೇಲೆ ಬರೆ ಎಳೆದಂಗಾಗುತ್ತದೆಯೆಂದು ವಿವರಣೆ ನೀಡಿ ತೀರ್ಪು ಕೊಟ್ಟರು.

ನಂತರದ ದಿನಗಳಲ್ಲಿ ಕರಿಯನ ತಾಯಿ ಮನೆಯಲ್ಲಿ ತನ್ನ ಸಹಾಯಕ್ಕೆಂದು ತಂದಿರಿಸಿ ಕೊಂಡಿದ್ದ ತನ್ನ ತಮ್ಮನ ಮಗಳೊಂದಿಗೆ ಕರಿಯನಿಗೆ ಮೂರನೆಯ ಮದುವೆಯನ್ನು ಮಾಡಿದಳು.
*****
(ಮೇ ೧೯೮೭; ಎಪ್ರಿಲ್ ೧೯೯೩; ಆಗಸ್ಟ್ ೧೯೯೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೮
Next post ಕನ್ನಡ ನಾಡಿನ ಹಿರಿಮೆ

ಸಣ್ಣ ಕತೆ

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…