
ಕನ್ನಡ ನಾಡು ಚಿನ್ನದ ಬೀಡು
ಪಾವನವೀ ನಾಡು | ಎಲ್ಲು
ಚೆಲುವಿನ ಸಿರಿ ನೋಡು
ಕನ್ನಡ ನಾಡು ಕಿನ್ನರ ಬೀಡು
ರೂಪಸಿಯರ ನಾಡು | ಸಿಂಹ
ವಾಣಿಗಳಾ ನೋಡು
ಕನ್ನಡ ನಾಡು ಹಸಿರಿನ ಬೀಡು
ಗಿರಿ ಕಾನನ ನಾಡು | ಇಲ್ಲಿ
ಸಹ್ಯಾದ್ರಿಯ ನೋಡು
ಕನ್ನಡ ನಾಡು ಶಾರದೆ ಬೀಡು
ಕವಿಗಳ ನೆಲೆ ನಾಡು | ಸತ್ವ
ಕಾವ್ಯದ ಸೆಲೆ ನೋಡು
ಕನ್ನಡ ನಾಡು ನರ್ತನ ಬೀಡು
ನವರಂಗದ ನಾಡು | ನಿತ್ಯ
ನವಿಲಿನ ನಡೆ ನೋಡು
ಕನ್ನಡ ನಾಡು ದೇಗುಲ ಬೀಡು
ಶಿಲ್ಪಿಯ ಹೊನ್ನಾಡು | ಶಿಲ್ಪ
ನುಡಿವುದಿಲ್ಲಿ ನೋಡು
ಕನ್ನಡ ನಾಡು ಗಂಧದ ಬೀಡು
ಚೇತನಮಯ ನಾಡು | ಒಮ್ಮೆ
ಜನ್ಮ ತಾಳಿ ನೋಡು
*****


















