‘ಯಾರು ತುಂಬಿಟ್ಟರೋ
ಈ ಬಿಳಿಬಿಳಿ ಅಕ್ಕಿಯೊಳಗೆ
ನೊರಜುಗಲ್ಲು
ಕರಿ ಮಣ್ಣೆಂಟೆ
ಹುಲ್ಲು ಬೀಜ
ಭತ್ತ, ಹೊಟ್ಟು?’

ಸದಾ ಇವರ ಗೊಣಗು
ಮೊಗದಲ್ಲಿಲ್ಲ ನಗು
ಎಲ್ಲ ಶುದ್ಧವಿರಬೇಕು
ಬೇಕೆಂದಾಕ್ಷಣ ಬಳಸುವಂತಿರಬೇಕು
ಇವರಿಗೆ ತಿಳಿದಿಲ್ಲ
ತಪ್ಪು ಅಕ್ಕಿಯದಲ್ಲ !

ಇದೆಲ್ಲ ಇಲ್ಲಿ ಸಹಜ
ಅವಿಲ್ಲದಿದ್ದರೆ ಎಲ್ಲಿ ಮಜ?

ತೊನೆದ ತೆನೆಗಳಲಿ
ಮೂಡಿದ ಭತ್ತವ
ಮತ್ತೆ ನೆಲಕ್ಕೊಗೆಯಬೇಕು
ತೆನೆಯುಜ್ಜಿ ಕಾಳು ಬೇರ್ಪಡಿಸಬೇಕು
ಮಣ್ಣು – ಕಲ್ಲಲಿ ಬೆರೆತ
ತೆಗೆದೊಗೆದು ತನ್ನನಾವರಿಸಿದ ಹುತ್ತ
ಬಿಳಿ ಕಾಳಾಗಬೇಕು

ಜೊತೆಗೊಂದೋ ಎರಡೋ
ಮೂಲರೂಪದ ಭತ್ತ
ಮಣ್ಣಲ್ಲಿ ಬೆಳೆದ ಸಾಕ್ಷಿಗೆ
ಕಲ್ಲು ಕರಿ ಮಣ್ಣೆಂಟೆ
ನೆರೆಹೊರೆಯ ಹುಲ್ಲುಬೀಜ
ಜೊತೆಗಿಲ್ಲದಿದ್ದರುಂಟೆ?

ಕಸದೊಳಗೆ ರಸ
ರಸದೊಳಗೆ ಕಸ!
ಕಸವೆಸೆದ ರಸ ಮಾನ್ಯ
ಗುರುತಿಸುವ ಮನ ಧನ್ಯ!
*****