ಸಣ್ಣಪೋರ

ತೀರ ಸಣ್ಣವ ಇದ್ದಾಗ ಸಣ್ಣಪೋರನ ಲಗ್ನ ಆಗಿತ್ತು. ಲಗ್ನ ಆಗಿದ್ದು ಅವನಿಗೆ ಸಹ ಗೊತ್ತಿರಲಿಲ್ಲ. “ಎಲ್ಲಾರೂ ಅತ್ತೀಮಾವನ ಮನೇಗಿ ಹೋಗತಾರ ನಾನೂಬಿ

ಹೋಗುತೆ” ಅಂದಾಗ “ನಿಂಗ ಖೂನ ಹಿಡಿಯುದಿಲ್ಲ ಮಗಾ” ಎಂದು ಅವ್ವ ಅಂದರೂ ಕೇಳಲಿಲ್ಲ ; ಅಪ್ಪ ಅಂದರೂ ಕೇಳಲಿಲ್ಲ. ಅತ್ತೀಮಾವನ ಮನೇಗಿ ಹೋಗಿ ಮುಟ್ಟಿದ. ಮಾವ ಬಂಕಿನಾಗ ಕೂತಿದ್ದ ; ಅತ್ತಿ ಪಡಸಾಲ್ಯಾಗ ಕುಂತಿದ್ದಳು. ಹೆಂಡತಿ ಅತ್ತೀ ಹಂತ್ಯಾಕ ನಿಂತಿದ್ದಳು. “ಅವ್ವಾ ಯಾರೋ ಬಂದಾರ ಬಾಗಿಲಾಗ” ಎಂತ ಹೆಂಡತಿ ಖೂನ ಹಿಡಿಯಲಾರದೆ ಹೇಳತಾಳ. “ನಿನ್ನ ಗಂಡ ಬಂದಾನ” ಎಂದು ಅವ್ವ ಹೇಳಿ ಮುಗಿಸತಾಳ. ಆದರೆ ಅತ್ತೀನೂ ಬಾ ಅನ್ಲಿಲ್ಲ ; ಮಾವಾನೂ ಬಾ ಅನ್ಲಿಲ್ಲ. ಏಸುದಿನಾ ಆಯ್ತು ಮದುವೆಯಾಗಿ, ಇನ್ನೂ ಯಾಕ ಬಂದಿಲ್ಲಂತ ಇಬ್ಬರಿಗೂ ಸಿಟ್ಟು. ಪೋರ ಕಿಂಡೆ ಬಾಗಿಲಕಡೆ ಹೊಂಟ.

ಕಿಂಡೆ ಬಾಗಿಲ ಹಂತ್ಯಾಕ ನಿಂತ ಹೆಂಡತೀನೂ ಗಂಡನ ಬೆನ್ನು ಹತ್ತಿದಳು. “ಪೋರಿ ಎತ್ತಹೋಯ್ತು” ಅಂತ ತಂದೆ ಕೇಳಿದರ, ಆ ಹುಡುಗನ ಬೆನ್ನು ಹತ್ತಿ ಹೋದಳು – ಎಂದು ತಿಳಿಯಿತು. ತಂದೆತಾಯಿಯರು, ಗಂಡನ ಬೆನ್ನು ಹತ್ತಿ ಮಗಳು ಹೋದರ ಹೋಗಲಿ – ಎಂದರು.

“ನನ್ನ ಹೆಂಡತಿನ್ನ ಕರಕೊಂಡು ಬಂದೀನಿ ನೋಡವ್ವ”

“ಅವರ ಮನ್ಯಾಗ ಉಣ್ಣುತಿನ್ನುದಕ ಬೇಕಾದಷ್ಟು ಒಟ್ಟ್ಯಾದ. ಅದನ್ನು ಬಿಟ್ಟು ನಮ್ಮಲ್ಲ್ಯಾಕ ಕರಕೊಂಡು ಬಂದ್ಯೋ ಮಗ” ಎಂದಳು ತಾಯಿ.

“ನೀವು ಉಂಡಿದ್ದು ನಾನು ಉಣ್ಣುವೆ ; ನೀವು ಉಟ್ಟಿದ್ದು ನಾನು ಉಡುವೆ” ಎಂದು ಸೊಸೆ ಸಮಾಧಾನ ಹೇಳಿದಳು.

ನಾಲ್ಕಾರು ತಿಂಗಳು ಹೋಗಟ್ಲೆ ಸೊಸೆ ಮೈನೆರೆದಳು. ಊರಾಗ ಯಾರ ಮನ್ಯಾಗ ಶೋಭಾನ ಆಗುತ್ತಲೇ ಪಟೇಲನ ಮನೆಗೆ ಹೆಣ್ಣುಮಗಳಿಗೆ ಕಳಿಸಬೇಕು – ಹೀಂಗ ಅಲ್ಲಿ ಪದ್ಧತಿಯಿತ್ತು. ಅತ್ತಿ ಅನ್ನ ಉಂಬಲ್ದೆ ಹೋದಳು; ನೀರು ಕುಡ್ಯಲ್ದೆ ಹೋದಳು. ಮಾರಿ ಸಣ್ಣದು ಮಾಡಿಕೊಂಡು ಕುಂತಳು. – “ಏನು ಬಂದಿದ್ದು ಬರಲಿ, ನಾ ಎದುರಿಸಲಿಕ್ಕೆ ತಯಾರಿದ್ದೀನಿ. ಬಂದದ್ದು ತಗೊಳ್ಳಾಕ ಮುಸ್ತಾದ ಇದ್ದೀನಿ” ಎಂದಳು ಸೊಸಿ.

“ಪಟೇಲನ ಮನೀಗಿ ಶೋಭಾನ ಆದ ಹುಡುಗಿ ಹೋಗಬೇಕೆನ್ನುವುದು ನಮ್ಮೂರ ಪದ್ಧತಿ ಆದ. ಅದಕ್ಕ ಹೇಂಗ ಮಾಡಬೇಕೇನ್ನೂದು ತಿಪಲ ಬಿದ್ದಾದ” ಎಂದಾಳು ಅತ್ತಿ.

ಸೊಸಿ ಚಿಂತಿ ಮಾಡಲ್ದೆ ಆರತಿ ಹಿಡಕೊಂಡು ಶೋಭಾನ ಆದ ಸೀರಿ ಉಟಕೊಂಡು ಹೋದಳು. ಪಟೇಲ ಬಂಕಿನೊಳಗೆ ನಿಂತಿದ್ದ. ಪಡಸಾಲ್ಯಾಗ ಹೋಗಿ ನಿಂತು ಸೊಸಿ ಕೇಳ್ತಾಳ – “ಯಾಕರಿ ಎಪ್ಪಾ, ನಮಗ್ಯಾಕ ಕರೆಸೀರಿ ?”

“ನನಗೆ ಅಪ್ಪ ಅಂತ ಕರೆದಳು. ನಾ ಈಗ ಇವಳಿಗೆ ಅಪ್ಪ ಆದೆ. ಇನ್ನ ಬ್ಯಾರೆ ಇಚಾರನೇ ಮಾಡೂದು ಬ್ಯಾಡ” ಎಂದು ಇಚಾರಿಸಿ – “ಬಡವರಿದ್ದೀರಿ. ಸೀರಿ ಉಡಿಸಿ ಕಳಿಸಬೇಕೆಂದು ಮಾಡಿದ್ದೆ. ಸೀರಿ ಉಡಿಸಿ ಉಡಿಯಕ್ಕಿ ಹೊಯ್ದು ಕಳಿಸಿಕೊಡುತೀನಿ ಮಗಾ” ಎಂದ.

“ಎಪ್ಪಾ, ನಾ ಒಂದ ಮಾತ ಹೇಳತೀನಿ” ಅಂದಳು ಸೊಸಿ.

“ಅದೇನು ಮಾತವ್ವ, ಖುಲಾಸ ಹೇಳಿಬಿಡು” ಎಂದು ಪಟೇಲ ಹೇಳಿದ.

“ಹೇಂಗೂ ದೀಪಾವಳಿ ಹೊಂಟಾದ. ಒಬ್ಬರೂ ಮನ್ಯಾಗ ತುಂಬಿದ ಕೊಡ ಇಕ್ಕಬಾರದು. ದೀಪ ಇಡಬಾರದು. ನೀ ಹೀಂಗ ಡಂಗುರ ಸಾರಿದರ ಜನ ನೀ ಹೇಳಿದಂಗ ಕೇಳತಾದ.”

ಪಟೇಲ ಅದರಂಗ ಡಂಗುರ ಸಾರಿಸಿದ. ಸೊಸಿಗಿ ಉಡಿಯಕ್ಕಿ ಇಕ್ಕಿ ಕಳಿಸಿದ. ನಾಲ್ಕೈದು ದಿನದಾಗ ದೀವಳಿಗೆ ಬಂತು. ದೀಪ ಇಕ್ಕಬೇಡ ಅಂತ ಪಟೇಲ ಹೇಳಿದಂತೆ ಊರವರು ಬಿಟ್ಟರ ಸೊಸೆ ಮನೇತುಂಬಾ – ಮಾಡತುಂಬಾ ದೀಪ ಹಚ್ಚಿಟ್ಟಳು. ಒಲಿಯೊಳಗೆ ಬೆಂಕಿಮಾಡಿಟ್ಟಳು. ಲಕ್ಷ್ಮೀತಾಯಿ ಊರತುಂಬಾ ತಿರುತಿರುಗಿ ಬಂದಳು. ಊರೆಲ್ಲ ಕತ್ತಲೆ ಕಂಕಾಳ ಆಗಿತ್ತು. ಸಣ್ಣ ಪೋರನ ಮನೆಯಾಗ ದೀಪ ಇರುವದು ಕಂಡು ಅಲ್ಲೇ ಬಂದಳು. “ತಟ್ಟೀ ತೆರೆ” ಅಂತ ಲಕ್ಷ್ಮೀತಾಯಿ ಅಂದಳು.

“ನೀನು ಯಾರು ಇದ್ದೀ” ಎಂದು ಸೊಸಿ ಕೇಳಿದಳು. “ನಾ ಲಕ್ಷ್ಮಿ ಇದ್ದೀನಿ. ಜಲ್ದೀ ತಟ್ಟೀ ತಗಿ ಮಗಾ” ಎಂದಳು. “ಲಕ್ಷ್ಮಿ ಇದ್ದರ ಚೆಂದ ಆಯ್ತು ಯಾಕ ಹೊಂಟೀದಿ ? ಇರುವಲ್ಲೆ ಇದ್ದರ ಮಾತ್ರ ತಟ್ಟೀ ತಗೀತೀನಿ” ಎಂದಳು. “ಊರವರಲ್ಲಿ ದೀಪ ಇಲ್ಲ. ಅದಕ್ಕ ನಿನ್ನಲ್ಲಿ ಬಂದೀನು.” “ನೀನು ಎಂದೆಂದಿಗೂ ಹೋಗದಿದ್ದರ ತಟ್ಟೀತಗೀತೀನು.” ಲಕ್ಷ್ಮಿಯಿಂದ ವಚನ ತಕ್ಕೊಂಡು ಮನಿಪ್ರವೇಶಮಾಡಗೊಟ್ಟಳು. ಲಕ್ಷ್ಮೀ ದೇವರ ಮನ್ಯಾಗ ಹೊಕ್ಕು ಅಲ್ಲಿ ಮಾಯವಾದಳು. ಹಾಲುಕ್ಕುವಂತೆ ಮನೆ ಸಿರಿ ತುಂಬಿತು. ಸಂಪತ್ತು ತುಳುಕಾಡಿತು.

ಸೊಸೆಗೆ ತಾಯಿತಂದೆಗಳಿಗೆ ಮಗಳನ್ನು ನೋಡಬೇಕೆಂಬ ಇಚ್ಛೆಯಾಯಿತು. ಅಷ್ಟರಾಗೇ ಮಗಳು ತವರೂರಿಗೂ ಗಂಡನೂರಿಗೂ ನಡುವೆ ಸಾಲಾಗಿ ಗಿಡ ಹಚ್ಚಿಸಿದಳು. ಹಾದಿಯಲ್ಲೆಲ್ಲ ನೆರಳಾಯಿತು. ಬಾವಿ ಹೊಡಿಸಿದಳು. ಬೀದಿಯಲ್ಲೆಲ್ಲಾ ನೀರಾಯ್ತು. ತಾಯಿತಂದೆ ಬಂದು ನೋಡಿದರು, ಮನೆಯಲ್ಲಿ ಅನಾಜ ಬೇಕಾದಷ್ಟು ಅದ. ಸಂದುಕ ತುಂಬಾ ಪೈಸಾ ಅದ. ಇದನ್ನೆಲ್ಲ ನೋಡಿ ತಾಯಿತಂದಿ ಹಿರಿಹಿರಿ ಹಿಗ್ಗು ಪಟ್ಟರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಡಿಗ್ರಿ
Next post ನಗೆ ಡಂಗುರ – ೬೫

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…