ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ

ಸಮಾಜವಾದದ ಮೂಸೆಯಲ್ಲಿ ಮಾಗಿದ ಮುಲ್ಕಾ

ಚಿತ್ರದುರ್ಗ ಎಂದ ಕೂಡಲೇ ಆಲ್ಲಿನ ಕಲ್ಲಿನ ಕೋಟೆ, ಒನಕೆ ಓಬವ್ವ ಹಾಗೂ ಮದಕರಿ ನಾಯಕ ನೆನಪಾಗುತ್ತಾರೆ. ದುರ್ಗದ ರಾಜಕೀಯದ ಒಳಸುಳಿ ಕಣ್ಣಲ್ಲಿ ಚಿತ್ರಗಳಾಗುತ್ತವೆ. ಆಮೇಲೆ? ಇನ್ನೂ ಇವೆ: ಎಲೆ ಮರೆಯ ಮರದಂತೆ ದುರ್ಗದ ಕೀರ್ತಿ ಪತಾಕೆಯನ್ನು ಸಾಕಷ್ಟು ಮಂದಿ ಎತ್ತಿ ಹಿಡಿದಿದ್ದಾರೆ. ಅಂತಹವರಲ್ಲಿ ಮುಲ್ಕಾ ಗೋವಿಂದ ರೆಡ್ಡಿ ಪ್ರಮುಖರು.

ಆರು ದಶಕಗಳಿಗೂ ಹೆಚ್ಚು ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸದ್ದಿಲ್ಲದೆ ಕಾರ್ಯ ನಿರ್ವಹಿಸಿದ ಅಗ್ಗಳಿಕೆಯೂ ಮುಲ್ಕಾ ಅವರದು. ಜಾತಿ ಬಲ ನೆಚ್ಚದ, ಹಣದ ಬೆಂಬಲವಿಲ್ಲದ ಸಾತ್ವಿಕ ರಾಜಕಾರಣ. ಅನುಕೂಲಸಿಂಧು ರಾಜಕಾರಣದಿಂದ ದೂರ. ಸ್ವಾತಂತ್ರ ಪೂರ್ವದಲ್ಲಿ ಜಿಲ್ಲಾ ಬೋರ್ಡ್ ಸದಸ್ಯತ್ವದಿಂದ ಪ್ರಾರಂಭವಾದ ಅವರ ರಾಜಕೀಯ ಜೀವನ ಅಂತರರಾಷ್ಟ್ರೀಯ ಮಟ್ಟದವರೆಗೂ ಬೆಳೆಯಿತು. ಚಿತ್ರದುರ್ಗದ ಕಲ್ಲುಗುಂಡುಗಳ ಮೇಲೆ ನಡೆದ ಹೆಜ್ಜೆಗಳು ವಿಶ್ವಸಂಸ್ಥೆಯ ಮೆಟ್ಟಲುಹತ್ತಿ ಬಂದವು. ಆದರೂ ನಿಗರ್ವಿಯಾಗಿಯೇ ಉಳಿದರು.

ರೈತಸಂಫದ ಪ್ರತಿನಿಧಿಯಾಗಿ ೧೯೪೫ರಲ್ಲಿ ಮೈಸೂರು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು, ೧೯೫೨ ರಲ್ಲಿ ಚಿತ್ರದುರ್ಗದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೫೮ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್‍ಟಿ (ಪಿ.ಎಸ್.ಪಿ) ಅಭ್ಯರ್ಥಿಯಾಗಿ ರಾಜ್ಯಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದರು. ೨೪ ವರ್ಷಗಳ ಕಾಲ (೧೯೫೮-೮೨) ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಪಿ‌ಎಸ್ಪಿ ಉಪ ನಾಯಕರಾಗಿ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕರಾಗಿ ದುಡಿದಿದ್ದಾರೆ.

ಭಾರತದ ಸಂಸತ್ತಿನ ಇತಿಹಾಸದಲ್ಲಿ ೧೦೦ ಅಧಿವೇಶನಗಳಲ್ಲಿ ಭಾಗವಹಿಸಿದ ಅಗ್ಗಳಿಕೆ ಮುಲ್ಕಾ ಅವರದು. ಇಂತಹ ಶತಕದ ಸಾಧನೆಗೈದ ಕೇವಲ ಆರು ಜನರಲ್ಲಿ ಇವರೂ ಒಬ್ಬರು.

ಸದನಗಳಲ್ಲಿ ಭಾಗವಹಿಸುವುದು ಅವರ ಪಾಲಿಗೆ ಔಪಚಾರಿಕ ಚಟುವಟಿಕೆ ಆಗಿರಲಿಲ್ಲ. ವ್ಯಾಪಕ ಅಧ್ಯಯನ ಹಾಗೂ ಸಿದ್ದತೆಯೊಂದಿಗೆ ಭಾಗಿಯಾಗುತ್ತಿದ್ದ ಅವರು ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಮಾತಿಗೆ ಸದನದಲ್ಲಿತೂಕವಿತ್ತು. ಈ ಅಪರೂಪದ ಸಂಸದೀಯ ಪಟುವನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸಭಯಲ್ಲಿ (ಡಿಸೆಂಬರ್ ೨೦೦೩) ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಗೌರವಿಸಿದ್ದಾರೆ. ಸದನದ ಅಭಿನಂದನೆಗೆ ಪಾತ್ರರಾದ ಮುಲ್ಕಾ ಅವರ ಮಾತುಗಳನ್ನು ಗಮನಿಸಿ:

‘ಆ ದಿನಗಳಲ್ಲಿ ಕಲಾಪದಲ್ಲಿ ಭಾಗವಹಿಸುವುದರ ಕುರಿತು ಸಂಸದರಲ್ಲಿ ಬದ್ದತೆ ಉಳಿದಿತ್ತು. ಅವರು ಶ್ರಮಜೀವಿಗಳಾಗಿದ್ದರು. ಅನೇಕ ವಿಷಯಗಳ ಬಗ್ಗೆ ಪೂರ್ವಸಿದ್ದತೆಯೊಂದಿಗೆ ಕಲಾಪದಲ್ಲಿ ಭಾಗವಹಿಸುತ್ತಿದ್ದರು. ಆದರೆ ಅದ್ಯಾವುದೂ ಇಂದು ಕಾಣಿಸುತ್ತಿಲ್ಲ. ವಿದ್ಯಮಾನಗಳು ತಪ್ಪು ದಾರಿಯಲ್ಲಿ ಸಾಗುತ್ತಿವೆ ಎಂದು ನನಗನ್ನಿಸಿತ್ತಿದೆ. ಆಕ್ರೋಶದಿಂದ ವರ್ತಿಸುವ ಮೂಲಕ ಜನರ ಗಮನ ಸೆಳೆಯಬಹುದೆಂದು ಕೆಲವರು ತಿಳಿದಿರಬಹುದು. ಆದರೆ ಅವರು ಸಂಸದೀಯ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ವಿಧಾನಮಂಡಲ ಅಧಿವೇಶನಗಳು ಇದೇ ದಿಕ್ಕಿನಲ್ಲಿ ನಡೆಯುತ್ತಿವೆ. ಸದನದಲ್ಲಿ ದೀರ್ಘ ಕಾಲ ಕಳೆದಿರುವ ನಾನು, ಸಭಿಕರ ಗ್ಯಾಲರಿಯಲ್ಲಿ ಕುಳಿತು ಕಲಾಪವನ್ನು ವೀಕ್ಷಸುವುದಿರಲಿ, ದೆಹಲಿಗೆ ಬರುವುದಕ್ಕೂ ಈಗ ಬಯಸುವುದಿಲ್ಲ ಮೇಲಿನ ಮಾತು ಸಮಕಾಲೀನ  ಪ್ರತಿನಿಧಿಗಳ ಕುರಿತು ಮುಲ್ಕಾ ಅವರಿಗಿರುವ ಅಸಮಾಧಾನ ತೋರುವಂತೆಯೇ ಅವರ ನೈತಿಕ ರಾಜಕಾರಣದ ಸೂಚಿಯೂ ಹೌದು.

ಸಮಾಜವಾದ, ಮುಲ್ಕಾ ಅವರನ್ನು ಇಂದಿಗೂ ಸೆಳೆಯುವ ಸೂಜಿಗಲ್ಲು. ರಾಮ ಮನೋಹರ ಲೋಹಿಯಾ, ಜಯ ಪ್ರಕಾಶ್ ನಾರಾಯಣ್, ಜಾರ್ಜ್‍ಫರ್ನಾಂಡಿಸ್ ಹಾಗೂ ಪ್ರೊ ಮಧು ದಂಡವತೆ ಅವರ ನಿಕಟವರ್ತಿಗಳು. ನೆಲ್‍ಸನ್ ಮಂಡೇಲಾ ಮುಲ್ಕಾ ಅವರ ಗೆಳೆಯರಲ್ಲೊಬ್ಬರು. ಕಾಂಗ್ರಸ್ ಸೇರ್‍ಪಡೆ (೧೯೭೧) ನಂತರವೂ ಅವರು ಸಮಾಜವಾದದಿಂದ ವಿಮುಖರಾಗಲಿಲ್ಲ. ಲೋಹಿಯಾ, ಶಾಂತವೇರಿ ಗೋಪಾಲ ಗೌಡ, ಸಿಜಿಕೆ ರೆಡ್ಡಿ, ಖಾದ್ರಿ ಶಾಮಣ್ಣ ಅವರ ಜೊತೆಗೂಡಿ ಕಾಗೋಡು ಸತ್ಯಾಗ್ರಹ ಸಂದರ್ಭದಲ್ಲಿ ಭೂಗತರಾಗಿ ನಡೆಸಿದ ಚಟುವಟಿಕೆಗಳ ನೆನಪುಗಳು ಮುಲ್ಕಾ ಅವರಲ್ಲಿ ಇಂದಿಗೂ ರೋಮಾಂಚನ ಹುಟ್ಟಿಸುತ್ತವೆ. ರಷ್ಯಾ ಒಡೆಯಲಿಕ್ಕೆ ಅವಕಾಶ ಕಲ್ಪಿಸಿದ ಮಿಖಾಯಿಲ್ ಗೊರ್ಬಚೆವ್ ನಿಲುವಿನ ಬಗ್ಗೆ ಖೇದವಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಏಷ್ಯಾ ಖಂಡದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರು. ವಿಶ್ವಸಂಸ್ಥೆಯ ತಜ್ಞರ ತಂಡದಲ್ಲಿ ಒಬ್ಬರಾಗಿ, ದಕ್ಷಿಣ ಆಪ್ರಿಕಾದಲ್ಲಿನ ವರ್ಣದ್ವೇಷ ನಿರ್ಮೂಲನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರು, ಮಾನವೀಯತೆಯ ಪ್ರತಿನಿಧಿಯಾಗಿ ಅನೇಕ ದೇಶ ಸುತ್ತಿದ್ದು ಅನುಭವ ಕೋಶವನ್ನು ಸಮೃದ್ಧಿಗೊಳಿಸಿದೆ.

ಮುಲ್ಕಾ ಅವರ ಮತ್ತೊಂದು ಹೆಚ್ಚುಗಾರಿಕೆ ಅವರ ಸಜ್ಜನಿಕೆ. ವಿನಯಶೀಲತೆ, ದರ್ಪ ಅಹಂಕಾರದಿಂದ ಅವರು ಸದಾ ದೂರ. ಮೊದಲ ಬಾರಿ ಭೇಟಿಯಾದವರೊಂದಿಗೂ ಸಾವಧಾನದಿಂದ ಮಾತನಾಡುವುದು ಅವರ ಶೈಲಿ. ಟೀಕೆಯೇ ಇರಲಿ, ಪ್ರಶಂಸೆಯೇ ಆಗಲಿ, ಪತ್ರ ಬರೆದ ಪ್ರತಿಯೊಬ್ಬರಿಗೂ ಉತ್ತರಿಸುವುದು ಅವರ ಮತ್ತೊಂದು ವಿಶಿಷ್ಟ ಗುಣ.
*****
ಸೆಪ್ಟೆಂಬರ ೨೫, ೨೦೦೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೇದ
Next post ಮರೆಯಲಾರೆ ಎನ್ನರಸ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…