ತುಂಬಿದೊಡಲ ಅಬಲೆ ಮೇಲೆ
ಕಾಮಾಂಧರ ನರ್ತನ
ತಾಯೆ ನಿನ್ನ ಒಡಲ ಮೇಲೆ
ನಿತ್ಯ ರಕ್ತ ತರ್ಪಣ
ಅರಳಲಿಲ್ಲಿ ತಾವು ಎಲ್ಲಿ
ಫಲಪುಷ್ಪದ ನಂದನ?

ಅತ್ತು ಅತ್ತು ಸತ್ತ ಭ್ರೂಣ
ಬಿಕ್ಕಿ ಬಿಕ್ಕಿ ಅತ್ತ ’ಬಾನು’
ಜೀವ ಜೀವದಾರ್ತನಾದ
ಕಾಣಲಿಲ್ಲ ಕುರುಡು ಜನಕೆ
ಕೇಳಲಿಲ್ಲ ಕಿವುಡು ಮನಕೆ

ಖಾಕಿಬೂಟಿನಟ್ಪಹಾಸ
ಖಾದಿ ಖದರ ಜಯದ ಘೋಷ
ಹಾಡುಹಗಲೆ ಮೃತ್ಯುಪಾಶ
ಹೆಣ್ಣೆ ನಿನಗೆ ಜೀವಶಿಕ್ಷೆ
ಹೆಜ್ಜೆ ಹೆಜ್ಜೆಗಿರಲು ಎಲ್ಲಿರಕ್ಷೆ?

ಹಿಂದು ಮುಸ್ಲಿಂ ಹೆಸರಿನಲ್ಲಿ
‘ಬಲ್ಕೀಸ’ಳಾ ಉಸಿರು ಎಲ್ಲಿ
ಅಂಧ ಮತಕೆ ಬಂಧವೆಲ್ಲಿ
ತಂದೆ ತಾಯಿ ಬಂಧುವೆಲ್ಲಿ
ಎಲ್ಲಿ ಎಲ್ಲಿ ಎಲ್ಲೆ ಎಲ್ಲಿ
ಉರಿಯ ಸುರಿವ ಜ್ವಾಲೆಗೆ?

ಪ್ರೇತದಂತೆ ನರ್ತನ
ಭೂತದಂತೆ ಕೀರ್ತನ
ಹೆಣ್ಣ ದಾಹ ಹೊನ್ನ ದಾಹ ಮಣ್ಣ ದಾಹ
ದಾಹ ದಾಹ ದಾಹ ದಾಹ…
ದಾಸನಾಗಿ ಮರೆತೆಯಲ್ಲೋ
ಮನುಜನೆಂಬುದ

ಕಮರಿಹೋಯ್ತೆ ಮೊಗ್ಗೆ ನಿನ್ನ
ಹೂವಾಗುವ ಕನಸು?
ಕಸವಾಯಿತೆ ಕಾಲಡಿಯಲ್ಲಿ
ಕಂದ ನಿನ್ನ ಮನಸು?
ಕಣ್ಣು ತೆಗೆವ ಮುನ್ನ ಕೊಂದರಲ್ಲ ನಿನ್ನ
ಥೂ… ಎಂಥ ಹೊಲಸು

ಅಲ್ಲಿ ’ಬಾನು’ ಇಲ್ಲಿ ನಾನು
ನಿತ್ಯ ನರಕಯಾತನೆ
ಎಲ್ಲೆ ಇರಲಿ ಹೇಗೆ ಇರಲಿ
ತಪ್ಪಲಿಲ್ಲ ಯೋಚನೆ
ಹೆಣ್ಣಿಗಿರುವ ಸ್ವಾತಂತ್ರ್ಯ
ಬರಿಯ ಹುಚ್ಚು ಕಲ್ಪನೆ

ತಾಯಿ ತಂಗಿ ಮಾತೃದೈವ
ಎನುವದೆಲ್ಲ ಬೊಗಳೆ
ಸಂತೈಸಲಿ ಹೇಗೆ ಮಗಳೆ
ಇರಲು ದಿನವೂ ರಗಳೆ?
ನಿನ್ನ ನೋವು ನಿನ್ನ ಸಾವು
ತಿಳಿವುದೆಂತು ತಾಯ್ಗಂಡರ ಎದೆಗೆ?

ನ್ಯಾಯವಿಲ್ಲಿ ಕಣ್ಣು ಕುರುಡು
ಕೂಗಿಗಿಲ್ಲಿ ಕಿವಿಯೆ ಕೊರಡು
ಹೃದಯವದು ಬರಿದೆ ಬರಡು
ಇರುವ ಜನರ ಮಾತಿಗಿಲ್ಲ ಎರಡು
ಎನಿತು ಕಾಲ ನೂಕಬೇಕೋ
ನಾಕ ಬೆಳಗಲು?

ನೋವಿಗಿಲ್ಲ ಜಾತಿ ಧರ್ಮ
ಜೀವಕೇಕೆ ಮತದ ಕರ್ಮ
ಬಸವ ಬುದ್ಧ ಏಸು ಬಿದ್ದ
ರಾಮ ರಹಿಮ ಎಲ್ಲಿ ಗೆದ್ದ?
ಕಡಿ ಬಡಿ ಮಂತ್ರವಾಯ್ತೆ ಭಾರತಾಂಬೆಗೆ?
*
ಕಾಯತಿರುವೆ ಕಣ್ಣು ತೆರೆದು
ಹೊಸ ಸೂರ್ಯನ ಉದಯಕೆ!

(ಬಲ್ಕಿಶ್ ಬಾನು ಹೃದಯ ವಿದ್ರಾವಕ ಸಾವಿನ ನೋವಿನಲಿ)
*****