ಚಿದ್ರೂಪನಂತೆ ತೊಳ ತೊಳಗಿ ಬೆಳಗುತಿಹ
ದಿವ್ಯಜ್ಞಾನಿ ತಾತ
ಸದ್ಗುಣದ ಕಣಿಯು ಬಹುಪೂಜ್ಯನೆಂದು ಮನ
ಗಂಡೆನೆಂದೊ ಪೂತ

ನಿಜತತ್ವವರಿತು ಗುರು ಪೀಠವೇರಿ ಮೆರೆದಿರುವ
ಕರ್ಮಯೋಗಿ
ವಿಜಯವನುಗೈದೆ ಅದ್ವೈತದೊಳಗೆ ಬಿಡು
ನೀನೆ ಪರಮ ತ್ಯಾಗಿ

ಇಂದ್ರಿಯವ ಜಯಿಸಿ ಬಂಧನ ಹಾಯ್ದ ಆ-
ನಂದಮಯನು ನೀನು
ಬಂಧನದಿ ಬೆಂದ ಜಡಮತಿಯು ನಾನು ಏ-
ನೆಂದು ಬಣ್ಣಿಸುವೆನು

ಪರಮಾತ್ಮ ತನ್ನ ಮಡಿಲೊಳಗೆ ನಿನ್ನ ಲಾ-
ಲಿಸುತ ತೂಗುತಿಹನೊ
ಪರವಸ್ತುವಿಲ್ಲ ಪರಮಾತ್ಮ ತಾನೆ ತಾನೆನುತ
ಸುಮ್ಮನಿಹೆಯೊ

ಸೌಂದರ್ಯ ಸಗುಣ ನಿರ್ಗುಣನು ಸಕಲ ಚೈ-
ತನ್ಯ ತಪಸಿಯವನು
ಆನಂದಮಯನು ಸರ್ವಾತ್ಮನಾಗಿ ತಾ
ನಿಲ್ಲಿ ನಲಿಯುತಿಹನು

ಘನ ಶಾಂತಿಯೊಂದು ನಿನ್ನೊಳಗೆ ತುಂಬಿ ಕಿರು
ನಗೆಯ ಸೂಸುತಿಹುದು
ಜನಕಜೆಯ ಮನವು ಗಾಂಧೀಜಿ ನಿಮ್ಮ ಬಳಿ
ಬಳಿಯೆ ಸುತ್ತಿತಿಹುದು
*****