ಬ್ರೋಕರ್
ಒಂದು ಒಳ್ಳೆಯ ಮನೆ
ತೋರಿಸುವುದಾಗಿ ಕರೆದೊಯ್ದ.
ಬಹಳ ಉತ್ಸಾಹದಿಂದ ವಿವರಿಸಿದ
ಇದು ಪೋರ್ಟಿಕೋ, ಇದು ವರಾಂಡಾ
ಇದು ದೊಡ್ಡ ಹಾಲು, ಇದು ದೇವರ ಮನೆ
ಇದು ಬೆಡ್ರೂಮು, ಇದು ಅಡುಗೆ ಮನೆ
ಇಲ್ಲಿ ಮತ್ತೊಂದು ರೂಮು
ಇಲ್ಲಿ ಅಟ್ಯಾಚ್ಡ್ ಬಾತ್‌ರೂಮು
ಇದು ಡೈನಿಂಗ್ ಹಾಲು
ಇದು ಸಿಟೌಟು
ಇಲ್ಲಿಂದ ಗೆಟೌಟು.
ಹೋಗ ಬೇಡಿ, ಸ್ವಲ್ಪ ನಿಲ್ಲಿ,
ಇಲ್ಲಿ ನೋಡಿ ನೀರಿನ ನಲ್ಲಿ
ಇದು ಸಂಪು, ಅದು ಪಂಪು
ಇದು ನೋಡಿ ಮಹಡಿ ಮೆಟ್ಟಿಲು
ನಾಲ್ಕು ಲಕ್ಷ ಈ ಮನೆ ಕಟ್ಟಲು.
ಕಾಂಪೌಂಡು, ಓವರ್‌ಹೆಡ್ ಟ್ಯಾಂಕು
ವಾಶ್ ಬೇಸಿನ್, ವಾರ್ಡ್‌ರೋಬು
ಎಲ್ಲ ಇದೆ… ಬಂದು ನೋಡಿ
ನಾಲ್ಕು ಕಂತಿನಲ್ಲಿ ಹಣ ಕೊಡಿ.
ಮನೆ ಸಾಲ ಕೂಡಾ ನಾವೇ ಕೊಡಿಸ್ತೀವಿ
ಆರೇ ತಿಂಗಳಲ್ಲಿ ಮನೆ ಬಿಟ್ಟು ಕೊಡ್ತೀವಿ.
ಬ್ರೋಕರ್ ತೋರಿಸಿದ್ದು ಬರಿಯ ಪ್ಲ್ಯಾನು!
ನಾವು ಕೊಡೋ ಹಣದಲ್ಲಿ ಮನೆ ಕಟ್ಟಿ
ಆರು ತಿಂಗಳಲ್ಲಿ ಮನೆ ಕೊಡೋ ಬುದ್ಧಿವಂತರು.
ಇಂತಹವರನ್ನು ನಂಬಿ ಮೋಸ ಹೋಗೋ
ನಾವು – ಮನೆ ಕಟ್ಟುವ ಧೈರ್ಯ ಇಲ್ಲದ
ಕನಸುಗಾರರು.
*****
೦೯-೦೪-೧೯೯೨