ದೇಹದೊಳಗೊಂದು ದೇಹ
ಬೆಳೆಸಿದಳು ಇನ್ನೊಂದು ಜೀವ
ಹೊರುವಳು ಗರ್ಭದಿ ನವಮಾಸ
ಹೆರುವಳು ನವ ರಂಧ್ರದ ಕಾಯ.

ಭುವಿಗೆ ತರುವ ತವಕದಿ ತಾನು
ತಿಂದು ಸಹಿಸಿ ಸಾವಿರ ನೋವು
ಆ ನೋವಿಗೆ ಸರಿ ಸಾಟಿ ಯಾರಿಹರು?
ಹೆತ್ತಿರುವ ಮಗುವಲ್ಲದೇ ಮತ್ತಾರು.

ಜನ್ಮವಿತ್ತಾಕ್ಷಣ ನೋವೆಲ್ಲಾ ಮಾಯ
ಲಾಲಿ ಹಾಡುತಾ ಕೈಗೆತ್ತಿ ನಲಿಯುತ
ಮನತುಂಬಿ ಮುತ್ತಿಕ್ಕಿ ಸಂತೈಸುತ
ಹಾಡಿ ಹೊಗಳಿ ಬೆಳಸುವಳು ಮಗುವ.

ಹೇಗಿದ್ದರೇನಂತೆ ನನಗೆ ನೀನು
ಜೀವವೇ ನೀನು ಜೀವನವೇ ನೀನು
ನಿನ್ನಂತೆ ಯಾರುಂಟು ಈ ಜಗದಲಿ?
ಎನ್ನುವುದು ತಾಯಿಯಲ್ಲದೆ ಮತ್ತಾರು?

ಅದಷ್ಟೋ ಜನ್ಮ ನಾವು ತಳೆದರೇನು
ತಾಯಿಯ ಋಣ ತೀರುವುದೇನು?
ತಾಯಿಯೇ ನಿನ್ನ ಹೊಗಳ ಬೇಕೆಂದರೂ
ಪದಗಳಿಗೆ ನಿಲುಕದ ದೇವತೆಯು ಅವಳು.

ದೇವತೆಯು ನೀನೆಂದು ತಿಳಿದು
ನಾನು ನಿನ್ನ ಪೂಜಿಸಿದರೆ ಫಲವೇನು?
ನನ್ನ ಜೀವ ಇರುವವರೆಗೆ ನಿನ್ನನ್ನು
ಪೋಷಿಸಿದರೆ ಪಾವನ ಈ ನನ್ನ ಜನ್ಮವು
*****