ಕನ್ನಡದ ಕೆಲಸ : ಕೆಲವು ಟಿಪ್ಪಣಿಗಳು

ಕನ್ನಡದ ಕೆಲಸ : ಕೆಲವು ಟಿಪ್ಪಣಿಗಳು

ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮ

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ

ಕರ್ನಾಟಕ ಶಿಕ್ಷಣ ಅಧಿನಿಯಮ ೧೯೮೩ರ ೨ನೇ ಪರಿಚ್ಛೇದದ ೨೫ನೇ ವಿಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಎಂದರೆ ‘ಈ ಅಧಿನಿಯಮದ ಪ್ರಕಾರ ನಿಗದಿಗೊಳಿಸಿದ ತರಗತಿಗಳ ಶಿಕ್ಷಣ ಎಂದು ವಿವರಿಸಿರುವುದಲ್ಲದೆ ೨೬ನೇ ವಿಭಾಗದಲ್ಲಿ ಪ್ರಾಥಮಿಕ ಶಾಲೆ ಎಂದರೆ ಪ್ರಾಥಮಿಕ ಶಿಕ್ಷಣದ ಯಾವುದೇ ನಿಗದಿತ ತರಗತಿಯವರೆಗಿನ ಶಾಲೆ’ ಎಂದು ವಿವರಿಸಲಾಗಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿ ೧೯೯೫ರ ಮೂರನೇ ಪರಿಚ್ಛೇದದ ‘ಎ’ – ವಿಭಾಗದಲ್ಲಿ ಏಳನೇ ತರಗತಿಯವರೆಗಿನ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣವೆಂದು ಸ್ಪಷ್ಟಗೊಳಿಸಲಾಗಿದ್ದು, ೧ ರಿಂದ ೪ನೇ ತರಗತಿಯವರೆಗೆ ಕಿರಿಯ ಪ್ರಾಥಮಿಕ ಮತ್ತು ೫ ರಿಂದ ೭ ವರೆಗೆ ಹಿರಿಯ ಪ್ರಾಥಮಿಕ ಎಂದು ವಿಂಗಡಿಸಲಾಗಿದೆ. ಮುಂದಿನದು ಪ್ರೌಢಶಾಲೆಯಾದ್ದರಿಂದ, ಪ್ರೌಢ ಶಾಲೆಗೆ ಮುಂಚಿನ ತರಗತಿಗಳು ಪ್ರಾಥಮಿಕ ಶಿಕ್ಷಣದ ವ್ಯಾಪ್ತಿಗೆ ಬರುತ್ತವೆಯೆಂದು ತಿಳಿಯ ಬಹುದು.

ಪ್ರಾಥಮಿಕ ಶಿಕ್ಷಣವು ಅವರವರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮಾಧ್ಯಮದಲ್ಲಿ ನಡೆಯಬೇಕೆನ್ನುವುದನ್ನು ವಿಶ್ವದ ಬಹುಪಾಲು ಶಿಕ್ಷಣ ತಜ್ಞರು ಪ್ರತಿಪಾದಿಸುತ್ತ ಬಂದಿದ್ದಾರೆ. ಮಾಧ್ಯಮದ ಭಾಷೆಯೆಂದರೆ, ಅದೇ ಭಾಷೆಯಲ್ಲಿ ಎಲ್ಲ ವಿಷಯಗಳನ್ನು ಕಲಿಯಬೇಕೆಂದು ಅರ್ಥ. ಯಾವುದೇ ಭಾಷೆಯನ್ನು ಒಂದು ಪಠ್ಯವಾಗಿ ಕಲಿಯುವುದು ಬೇರೆ, ಎಲ್ಲಾ ಪಠ್ಯಗಳನ್ನು ಒಂದು ನಿರ್ದಿಷ್ಟ ಭಾಷೆಯ ಮೂಲಕ ಕಲಿಯುವುದು ಬೇರೆ. ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲ ಪಠ್ಯಗಳನ್ನೂ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಕಲಿಯಲು ಮಾತ್ರ ಅವಕಾಶ ವಿರಬೇಕು. ಆಗ ಕೆಲವರು ಇಂಗ್ಲಿಷ್ ಮಾಧ್ಯಮದಲ್ಲಿ, ಅನೇಕರು ಮಾತೃಭಾಷಾ ಮಾಧ್ಯಮದಲ್ಲಿ ಕಲಿಯುವ ತಾರತಮ್ಯ ನೀತಿ ತಪ್ಪುತ್ತದೆ.

ಈಗ ಕರ್ನಾಟಕದಲ್ಲಿ ಹೊಸ ಆಂಗ್ಲ ಕಿರಿಯ ಪ್ರಾಥಮಿಕ ಶಾಲೆಗಳಿಗೆ (ಅಂದರೆ ನಾಲ್ಕನೇ ತರಗತಿಯವರೆಗಿನ ಶಾಲೆ) ಅನುಮತಿ ನೀಡುತ್ತಿಲ್ಲ. ಸರ್ಕಾರದ ೨೯-೪-೧೯೯೪ರ ಇಡಿ ೨೮ಪಿಜಿಸಿ ೯೪ ಕ್ರಮಾಂಕದ ಆದೇಶವು ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ. ಈ ಆದೇಶದ ಪ್ರಕಾರ ನಾಲ್ಕನೇ ತರಗತಿಯವರೆಗೆ ಮಾತೃಭಾಷಾ ಶಿಕ್ಷಣ, ಐದನೇ ತರಗತಿಯಿಂದ ಯಾವುದೇ ಭಾಷಾಮಾಧ್ಯಮದ ಆಯ್ಕೆಗೆ ಅವಕಾಶವಿದೆ.

ಹೊಸ ಆಂಗ್ಲ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಅನುಮತಿ ಕೊಡುತ್ತಿಲ್ಲವಾದರೂ ಹಿಂದೆ ಆರಂಭವಾದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಾತೃಭಾಷಾ ಮಾಧ್ಯಮದ ನೀತಿಯನ್ನು ಅನ್ವಯಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಮಾತೃಭಾಷಾ ಮಾಧ್ಯಮದ ಶಿಕ್ಷಣ ನೀತಿಯನ್ನು ಪೂರ್ವಾನ್ವಯ ಗೊಳಿಸದಂತೆ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯವರು ರಾಜ್ಯದ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಸತತ ಒತ್ತಾಯಗಳಿದ್ದರೂ ಸೂಕ್ತ ಕ್ರಮವನ್ನು ಕಾಣಲು ಸಾಧ್ಯವಾಗಿಲ್ಲ. ಈ ದಿಕ್ಕಿನಲ್ಲಿ ರಾಜ್ಯದ ಉಚ್ಚ ನ್ಯಾಯಾಲಯದ ತೀರ್ಪು ಮಹತ್ವದ್ದಾಗುತ್ತದೆ.

ಪ್ರಾಥಮಿಕ ಶಿಕ್ಷಣವು ಅವರವರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ನಡೆಯಬೇಕೆಂದೂ ಈ ಮೂಲಕ ಶೈಕ್ಷಣಿಕ ಸಮಾನತೆಗೆ ನಾಂದಿ ಹಾಡಬೇಕೆಂದು ಹೋರಾಟ ನಡೆಯಬೇಕು; ಒತ್ತಾಯ ನಿರಂತರವಾಗಿರಬೇಕು. ಪ್ರಾಥಮಿಕ ಶಿಕ್ಷಣ ಮಾಧ್ಯಮದಲ್ಲಿ ಏಕರೂಪತೆ ಬೇಕು. ಆಗ ಕೆಲವರಿಗೆ ಇಂಗ್ಲಿಷ್ ಶಿಕ್ಷಣ, ಅನೇಕರಿಗೆ – ವಿಶೇಷವಾಗಿ ಬಡವರಿಗೆ – ಕನ್ನಡ ಶಿಕ್ಷಣ ಎಂಬ ಅಸಮಾನತೆಯನ್ನು ದೂರ ಮಾಡಬಹುದು.

ಕನ್ನಡ/ಮಾತೃಭಾಷಾ ಮಾಧ್ಯಮಕ್ಕಾಗಿ ರಾಜ್ಯ ಮಟ್ಟದಲ್ಲಿ ಒತ್ತಾಯದ ವಾತಾವರಣವನ್ನು ನಿರ್ಮಿಸುವುದರ ಜೊತೆಗೆ ಇಡೀ ರಾಷ್ಟ್ರದಲ್ಲಿ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣದ ಬೋಧನಾ ಮಾಧ್ಯಮವನ್ನಾಗಿ ಮಾಡಲು ಸಂವಿಧಾನದಲ್ಲೇ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಬೇಕು. ಭಾಷಿಕ ಅಲ್ಪಸಂಖ್ಯಾತರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಯ ಆಶಯವನ್ನು ಮಾತೃಭಾಷಾ ಮಾಧ್ಯಮಕ್ಕೂ ನೀಡುವಂತೆ ಕೇಳಬೇಕು.

ಕನ್ನಡಕ್ಕೆ ಅನುಮತಿ, ಆಂಗ್ಲ ಮಾಧ್ಯಮದಲ್ಲಿ ಪಾಠ

ಕರ್ನಾಟಕ ಸರ್ಕಾರವು ಈಗ ಹೊಸ ಆಂಗ್ಲ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಅನುಮತಿ ನೀಡುತ್ತಿಲ್ಲವಾದ್ದರಿಂದ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮಕ್ಕೆ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡುವ ಪರಿಪಾಠ ಹೆಚ್ಚಾಗಿದೆ. ಇದನ್ನು ತಡೆಯಲು ಸೂಕ್ತ ನಿಯಮಾವಳಿ ಮತ್ತು ಕಠಿಣ ಕ್ರಮ ಅಗತ್ಯವಾಗಿದೆ.

ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಡ್ಡಾಯ

ಮಾತೃಭಾಷೆಯು ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವಾಗಿರುವುದರಿಂದ ಉರ್ದು, ತೆಲುಗು, ಮರಾಠಿ, ತಮಿಳು ಮುಂತಾದ ಭಾಷೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡುವ ಅನೇಕ ಶಾಲೆಗಳು ಕರ್ನಾಟಕದಲ್ಲಿವೆ. ೨೯-೪-೧೯೯೪ರ ಸರ್ಕಾರಿ ಆದೇಶದ ಪ್ರಕಾರ ಈ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡವನ್ನು ಐಚ್ಛಿಕವಾಗಿ ಕಲಿಸಬಹುದು. ಕಡ್ಡಾಯವಾಗಿ ಕಲಿಸಲು ಸಾಧ್ಯವಿಲ್ಲ, ಭಾಷಿಕ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಎರಡು ಅಥವಾ ಮೂರನೇ ತರಗತಿಯಿಂದ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಮಹಾ ರಾಷ್ಟ್ರದಲ್ಲಿ ಮರಾಠಿಯನ್ನು ಕಡ್ಡಾಯವಾಗಿ ಕಲಿಯಬೇಕೆಂಬ ಆದೇಶವನ್ನು ಪ್ರಶ್ನಿಸಿ ಗುಜರಾತಿ ಮಾಧ್ಯಮದ ಶಾಲೆಗಳು ಹೂಡಿದ್ದ ಮೊಕದ್ದಮೆಯ ತೀರ್ಪಿನಲ್ಲಿ ಸುಪ್ರೀಂ ಕೋರ್ಟು ಪ್ರಾದೇಶಿಕ ಭಾಷೆಯ ಕಡ್ಡಾಯ ಕಲಿಕೆಯನ್ನು ಪುರಸ್ಕರಿಸಿದೆ. ಆದ್ದರಿಂದ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲು ಕಾನೂನಿನ ತೊಡಕು ಇಲ್ಲ, ಈ ಕೆಲಸವನ್ನು ಕೂಡಲೇ ಸರ್ಕಾರವು ಮಾಡದಿರುವುದು ಮತ್ತು ಕನ್ನಡಪರರು ಮಾಡಿಸದೇ ಇರುವುದು ಮಾತ್ರ ತೊಡಕು.

(ಶ್ರೀ ಎಚ್. ವಿಶ್ವನಾಥ್ ಅವರು ಪ್ರಾಥಮಿಕ-ಪ್ರೌಢಶಿಕ್ಷಣ ಸಚಿವರಾಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಸೆಯ ಫಲವಾಗಿ ಈ ಸಂಬಂಧದ ಆದೇಶದ ಕರಡು ಸಿದ್ಧವಾಗಿತ್ತು. ಆನಂತರ ಅದು ನೆನೆಗುದಿಗೆ ಬಿದ್ದಿದೆ.)

ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಏಕರೂಪತೆ

ಒಂದನೇ ತರಗತಿಗಿಂತ ಮುಂಚಿನ ಶಿಕ್ಷಣವನ್ನು ಔಪಚಾರಿಕ ಅಥವಾ ಅಧಿಕೃತ ಎಂದು ಕರೆಯುವುದಿಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅದನ್ನು ಅಧಿಕೃತ ಹಾಗೂ ಔಪಚಾರಿಕ ಶಿಕ್ಷಣವನ್ನಾಗಿಸಿವೆ. ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಗಳು ಒಂದು ಕಡೆ, ಶಿಶುವಿಹಾರ ಮತ್ತು ಅಂಗನವಾಡಿಗಳು ಇನ್ನೊಂದು ಕಡೆ, ಡೊನೇಷನ್ ಕೊಡಲು ಕ್ಯೂ ನಿಲ್ಲುವ ಎಲ್.ಕೆ.ಜಿ.ಯ ಪ್ರವೇಶ ಪ್ರಹಸನವನ್ನು ನೋಡಿದಾಗ ಪ್ರಾಥಮಿಕ ಪೂರ್ವ ಶಿಕ್ಷಣ ನೀತಿಯ ‘ಕ್ರ್‍ಔರ್‍ಯ’ ಕಣ್ಣಿಗೆ ರಾಚುತ್ತದೆ. ಕ್ರೌರ್‍ಯಗಳು ಇರುವುದು ಈ ಕ್ಯೂನಲ್ಲಿ ಅಲ್ಲ; ಅಂಗವಾಡಿಯ ಉಪ್ಪಿಟ್ಟಿಗಾಗಿ ಬಡ ಮಕ್ಕಳು ನಿಂತಿರುವ ಕ್ಯೂನಲ್ಲಿ ಕ್ರೌರ್‍ಯ ಕಾಣಿಸುತ್ತದೆ. ಮಾತು ಕಲಿತ ಕೂಡಲೇ ಕೆಲವರ ಮಕ್ಕಳಿಗೆ ಆಂಗ್ಲ ಭಾಷಾ ಮಾಧ್ಯಮ; ಲಕ್ಷಾಂತರ ಮಕ್ಕಳಿಗೆ ಕನ್ನಡ ಮಾಧ್ಯಮ. ನಿಜ; ಇದು ಅಧಿಕೃತ ಶಿಕ್ಷಣವಲ್ಲವಾದ್ದರಿಂದ ಬೋಧನಾ ಮಾಧ್ಯಮದ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬೋಧನಾ ಮಾಧ್ಯಮವನ್ನು ‘ಇಂಗ್ಲಿಷ್’ ಎಂದು ಕರೆದು ಶಿಕ್ಷಣ ನೀತಿಯನ್ನೇ ಉಲ್ಲಂಘಿಸಿವೆ. ವಾಸ್ತವವಾಗಿ ಪ್ರಾಥಮಿಕಪೂರ್ವದಲ್ಲಿ ಮಕ್ಕಳ ಮನೆ ಮಾತಲ್ಲಿ ಅಥವಾ ನಾಡಿನ ಭಾಷೆಯಲ್ಲಿ ಏನಾದರೂ ಹೇಳಿಕೊಡಬೇಕು. ಅದರ ಬದಲು ಆಂಗ್ಲ ಮಾಧ್ಯಮವನ್ನು ಅಧಿಕೃತಗೊಳಿಸಲಾಗಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ಆಡಿದ, ಮಾತಾಡಿದ ಮಕ್ಕಳು ಮುಂದೆ ಒಂದನೇ ತರಗತಿಯಿಂದ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮದಲ್ಲಿ ಓದಬೇಕೆಂದರೆ ಹೇಗೆ ಸರಿಯಾದೀತು? ಮಾತೃಭಾಷೆಯ ಪರಿಚಯವು ಮಾತು ಬಂದ ಕ್ಷಣದಿಂದಲೇ ಶುರುವಾಗಬೇಕು.

ಆದ್ದರಿಂದ ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕೊಡಬಾರದು. ಅಂಗನವಾಡಿಯಾಗಲಿ, ಶಿಶುವಿಹಾರವಾಗಲಿ, ‘ಪ್ರತಿಷ್ಠಿತ’ ಕಿಂಡರ್‌ಗಾರ್ಟನ್‌ಗಳಾಗಲಿ, ಮಾತೃ ಭಾಷೆ ಅಥವಾ ಕನ್ನಡ ಮಾಧ್ಯಮಕ್ಕೆ ಮತ್ತು ಏಕರೂಪ ಕಲಿಕೆಗೆ ಬದ್ಧವಾಗಬೇಕು.

ಪ್ರಾಥಮಿಕ ಪೂರ್ವ ಶಿಕ್ಷಣವು ಅನೌಪಚಾರಿಕವಾದ್ದರಿಂದ ಸರ್ಕಾರವು ಅದನ್ನು ನಿಯಂತ್ರಿಸಲಾಗದು ಎಂದು ವಾದಿಸುವವರು ಇದ್ದಾರೆ. ಇದು ತಪ್ಪು ತಿಳುವಳಿಕೆ. ಸರ್ಕಾರವು ೧೯೯೫ರಲ್ಲಿ ಕೆಲವು ನಿಯಮಾವಳಿಗಳನ್ನು ರೂಪಿಸಿ ಪ್ರಾಥಮಿಕಪೂರ್ವ ಶಿಕ್ಷಣ ಸಂಸ್ಥೆಗಳು ಅನುಷ್ಠಾನಗೊಳಿಸಬೇಕೆಂದು ಹೇಳಿತು. (ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿ – ೧೯೯೫). ಈ ನಿಯಮಾವಳಿಯು ಸಾಮಾಜಿಕ ಮೀಸಲಾತಿ, ಮಹಿಳಾ ಮೀಸಲಾತಿ, ಶುಲ್ಕ ನಿಗದಿ ಮುಂತಾದ ಕಟ್ಟುಪಾಡುಗಳನ್ನು ವಿಧಿಸಿತ್ತು. ಈ ಕಟ್ಟು ಪಾಡುಗಳನ್ನು ಗಾಳಿಗೆ ತೂರಲಾಗಿದೆಯೆಂಬುದು ಬೇರೆವಿಷಯ! ಆದರೆ ಸರ್ಕಾರವು ಪ್ರಾಥಮಿಕ ಪೂರ್ವ ಶಿಕ್ಷಣವನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದೆ ಎಂಬುದಕ್ಕೆ ಈ ನಿಯಮಾವಳಿ ರಚನೆ ಒಂದು ಅಧಿಕೃತ ಉದಾಹರಣೆ. ಆದ್ದರಿಂದ ಸರ್ಕಾರವು ಪ್ರಾಥಮಿಕ ಪೂರ್ವಶಿಕ್ಷಣದಲ್ಲಿ ಮಾತೃಭಾಷೆ/ಕನ್ನಡ ಮಾಧ್ಯಮದ ಕಡ್ಡಾಯಕ್ಕೆ ಕಾನೂನು ರಚಿಸಬೇಕು. ಎಲ್ಲ ವಿಷಯಗಳಲ್ಲೂ ಏಕರೂಪತೆ ತರಬೇಕು.

(ಈ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮಾಡಿದ ಒತ್ತಾಯ ಮತ್ತು ಶಿಫಾರಸ್ಸಿನ ಫಲವಾಗಿ ಶ್ರೀ ಎಸ್.ಎಂ. ಕೃಷ್ಣ ಅವರ ನೇತೃತ್ವದ ಸರ್‍ಕಾರವು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇರುವ ಸಮಿತಿಯನ್ನು ರಚಿಸಿತ್ತು. ಎರಡು ಸಭೆಗಳು ನಡೆದಿದ್ದವು. ಪೂರಕ ಒಲವು ವ್ಯಕ್ತವಾಗಿತ್ತು.)

ಪ್ರಾಥಮಿಕ ಶಿಕ್ಷಣದಲ್ಲಿ ಆಂಗ್ಲ ಭಾಷೆಯ ಕಲಿಕೆ

ಈಗಿರುವ ನಿಯಮಗಳ ಪ್ರಕಾರ ೫ನೇ ತರಗತಿಯಿಂದ ಯಾವುದೇ ಮಾಧ್ಯಮದಲ್ಲಿ ಓದಬಹುದು. ಕನ್ನಡ ಮಾಧ್ಯಮ ಅಥವಾ ಮಾತೃಭಾಷಾ ಮಾಧ್ಯಮದವರು ೫ನೇ ತರಗತಿ ಯಿಂದ ಆಂಗ್ಲ ಭಾಷೆಯನ್ನು ಒಂದು ಪಠ್ಯವಾಗಿ ಕಲಿಯಬಹುದು. ಕೆಲವರು ಪ್ರಾಥಮಿಕ ಪೂರ್ವದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಾರೆ. ಲಕ್ಷಾಂತರ ಮಕ್ಕಳು ೫ನೇ ತರಗತಿ ಯಿಂದ ಆಂಗ್ಲ ಅಕ್ಷರ ಕಲಿಯುತ್ತಾರೆ. ಆದರ್ಶದ ಮಾತು ಏನೇ ಇದ್ದರೂ ಇಂದಿನ ವಾತಾವರಣದಲ್ಲಿ ಇಂಗ್ಲಿಷ್ ಕಲಿಕೆಯು (ಹುಸಿ) ಪ್ರತಿಷ್ಠೆಯನ್ನು ಉದ್ಯೋಗಾವಕಾಶದ (ಹುಸಿ) ಆಸೆಗಳನ್ನು ಹುಟ್ಟಿಸುತ್ತಿರುವುದು ನಿಜ. ಪ್ರಾಥಮಿಕ ಪೂರ್ವದಿಂದಲೇ ಕನ್ನಡ ಅಥವಾ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಿ ಪ್ರಾಥಮಿಕ ಎರಡು ಅಥವಾ ಮೂರನೇ ತರಗತಿಯಿಂದ ಎಲ್ಲರೂ ಆಂಗ್ಲ ಭಾಷೆಯನ್ನು ಒಂದು ಪಠ್ಯವಾಗಿ ಕಲಿಯಲು ಅವಕಾಶ ಕಲ್ಪಿಸುವುದು ಮತ್ತು ಕ್ರಮಬದ್ಧವಾಗಿ ಕಲಿಸುವುದು ಉಚಿತ.

ಮಾಧ್ಯಮವಾಗಿ ಕನ್ನಡ ಅಥವಾ ಮಾತೃಭಾಷೆ, ಕೇವಲ ಒಂದು ಪಠ್ಯವಾಗಿ ಆಂಗ್ಲ ಭಾಷೆ – ಇದು ಪ್ರಾಥಮಿಕ ಶಿಕ್ಷಣದ ಮಾಧ್ಯಮ ನೀತಿಯಾಗುವುದು ಉತ್ತಮ. (ಈ ನೀತಿಯನ್ನು ಪಶ್ಚಿಮ ಬಂಗಾಳ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.)

ಪ್ರಾಥಮಿಕ ಪೂರ್ವ ಹಂತದಿಂದಲೇ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮವನ್ನು ತಂದರೆ, ಪ್ರಾಥಮಿಕ ಪೂರ್ವದ ಎರಡು ವರ್ಷ, ಪ್ರಾಥಮಿಕ ಹಂತದ ಎರಡು ವರ್ಷ – ಒಟ್ಟು ಮೂರು ಅಥವಾ ನಾಲ್ಕು ವರ್ಷಗಳ ಮಾತೃಭಾಷಾ ಮಾಧ್ಯಮದ ಕಲಿಕೆ ಕಡ್ಡಾಯವಾಗಿ ಏಳನೇ ತರಗತಿಯವರೆಗೆ ಅದರ ಮುಂದುವರಿಕೆ. ಹೀಗಾಗಿ ಮೊದಲ ಮೂರಾಲ್ಕು ವರ್ಷಗಳ ನಂತರ ಪ್ರಾಥಮಿಕ ಎರಡು ಅಥವಾ ಮೂರನೇ ತರಗತಿಯಿಂದ ಆಂಗ್ಲ ಭಾಷೆಯನ್ನು ಒಂದು ಪಠ್ಯವಾಗಿ ಕಲಿಸುವುದು ತಪ್ಪಾಗುವುದಿಲ್ಲ. ಇದರಿಂದ ಉನ್ನತ ವ್ಯಾಸಂಗಕ್ಕೂ ಪೂರಕ.

ಇದು ಆಂಗ್ಲ ಭಾಷಾ ಪರವಾದ ನೀತಿಯಲ್ಲ. ಆಂಗ್ಲ ಭಾಷಾ ಕಲಿಕೆಗೆ ಅವಕಾಶ ನೀಡಿ ಮಾತೃಭಾಷೆ ಅಥವಾ ಕನ್ನಡ ಭಾಷಾ ಮಾಧ್ಯಮವನ್ನು ಗಟ್ಟಿಗೊಳಿಸುವ ಕ್ರಮ.

ಪದವಿಪೂರ್ವ ಶಿಕ್ಷಣದಲ್ಲಿ ‘ಐಚ್ಛಿಕ ಕನ್ನಡ’ ಕಲಿಕೆಗೆ ಮುಕ್ತ ಅವಕಾಶ

ಈ ಬೇಡಿಕೆಯನ್ನು ಅನೇಕ ಶಿಕ್ಷಣ ಸಂಸ್ಥೆಗಳು ಮುಂದಿಟ್ಟು ಒತ್ತಾಯಿಸುತ್ತಾ ಬಂದಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಯತ್ನದ ಫಲವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಒಂದು ಸುತ್ತೋಲೆಯನ್ನು ಹೊರಡಿಸಿದರು. (ಸಂಖ್ಯೆ ಪಪೂಶಿ‌ಇ/ಐಚ್ಛಿಕ ಕನ್ನಡ/ ೨೦೦೨-೨೦೦೩ ದಿನಾಂಕ ೨೭-೦೩-೨೦೦೨) ಇದರ ಸೂಕ್ತ ಅನುಷ್ಠಾನ ಆಗಬೇಕು. ಕನ್ನಡ ಅಧ್ಯಾಪಕರ ನೇಮಕಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಬೇಕು. ಎಲ್ಲ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ‘ಕನ್ನಡ’ವನ್ನು ಐಚ್ಛಿಕ ವಿಷಯಗಳ ಪಟ್ಟಿಯಲ್ಲಿ ಕಡ್ಡಾಯವಾಗಿ ಸೇರಿಸಬೇಕು.

ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾತ್ಮಕ ಒತ್ತಾಯದ ಫಲವಾಗಿ ಬಿ.ಇ., ಎಂ.ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್.ಗಳಲ್ಲಿ ಅಂದರೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ತರಗತಿಗಳಲ್ಲಿ ಮೊದಲನೇ ಒಂದು ವರ್ಷ ಅಥವಾ ಎರಡು ಸೆಮಿಸ್ಟರ್‌ ಅವಧಿಗೆ ಕನ್ನಡವನ್ನು ಒಂದು ಪಠ್ಯ ವಿಷಯವನ್ನಾಗಿ ಅಳವಡಿಸಲು ಒಪ್ಪಲಾಯಿತು. (೨೦೦೨-೦೩) ವೃತ್ತಿ ಶಿಕ್ಷಣದವರಿಗೆ ಕನ್ನಡ ಏಕೆ – ಎಂದು ಪ್ರಶ್ನಿಸುವವರೂ ಇದ್ದಾರೆ. ವೃತ್ತಿ ಶಿಕ್ಷಣದ ಮಾತಿರಲಿ ಯಾವುದೇ ಶಿಕ್ಷಣದಲ್ಲಿ ಕನ್ನಡ ಏಕೆ, ಆಡಳಿತದಲ್ಲಿ ಕನ್ನಡ ಏಕೆ ಎಂದು ಪ್ರಶ್ನಿಸುವವರೂ ಇರುವಾಗ ‘ವೃತ್ತಿ ಶಿಕ್ಷಣದಲ್ಲಿ ಕನ್ನಡ ಏಕೆ’ ಎಂದು ಪ್ರಶ್ನಿಸುವುದು ಅಸಂಗತವಾಗದು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಪಠ್ಯವಾಗಿ ಅಳವಡಿಸ ಬೇಕೆಂದು ಕೇಳುವಾಗ ಎರಡು ಅಂಶಗಳು ಮುಖ್ಯವಾಗಿದ್ದವು. (೧) ವೃತ್ತಿ ಶಿಕ್ಷಣದವರಿಗೆ ಕನ್ನಡ ಸಾಂಸ್ಕೃತಿಕ ಪಠ್ಯವೊಂದನ್ನು ಕಲಿಸುವುದರ ಮೂಲಕ ಅವರ ಮನೋಧರ್ಮಕ್ಕೆ ಹೊಸ ಆಯಾಮದ ಸೇರ್ಪಡೆಯಾಗುತ್ತದೆ ಮತ್ತು ವೃತ್ತಿ ಶಿಕ್ಷಣವನ್ನು ಒಳಗೊಂಡಂತೆ ಯಾವುದೇ ಶಿಕ್ಷಣವನ್ನು ಪಡೆಯುವ ವ್ಯಕ್ತಿಗೆ, ಸಮೂಹಕ್ಕೆ ಸಾಂಸ್ಕೃತಿಕ ತಿಳುವಳಿಕೆ ಅಗತ್ಯವಾದುದು. (೨) ಕನ್ನಡ ಬಲ್ಲವರಿಗೆ ‘ಕನ್ನಡ ಸಾಂಸ್ಕೃತಿಕ ಪಠ್ಯ’ವನ್ನು ಇಟ್ಟು ಕನ್ನಡ ಬಾರದವರಿಗೆ ಯಾವ ಪಠ್ಯವನ್ನೂ ಇಡದಿದ್ದರೆ ಅದು ಪಠ್ಯಕ್ರಮದ ಅಸಮತೋಲನವಾಗುತ್ತದೆ. ಅಲ್ಲದೆ ಈ ನಾಡಿಗೆ ಬಂದು ನಾಲೈದು ವರ್ಷವಾದರೂ ವಾಸಿಸುವ ವಿದ್ಯಾರ್ಥಿಗಳು ತಮ್ಮ ವೃತ್ತಿ ಶಿಕ್ಷಣದ ಸಂಪರ್ಕಕ್ಕಾಗಿ ಕನ್ನಡವನ್ನು ಕಲಿಯುವ ಅಗತ್ಯವಿರುತ್ತದೆ. ಆದ್ದರಿಂದ ಕನ್ನಡ ಬಾರದವರಿಗೆ ಆಂಗ್ಲ ಭಾಷೆಯ ಮೂಲಕ ದೈನಂದಿನ ಬಳಕೆಗೆ ಉಪಯುಕ್ತವಾಗುವ ಕನ್ನಡವನ್ನು ಕಲಿಸುವುದು.

ಈ ಎರಡು ಆಶಯಗಳನ್ನು ಸರ್ಕಾರವು ಒಪ್ಪಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಒಪ್ಪಿಕೊಂಡಿತು. ೨೦೦೨-೦೩ನೇ ಸಾಲಿನಿಂದ ಅನುಷ್ಠಾನಗೊಳಿಸಿತು. (ಕ.ಅ. ಪ್ರಾಧಿಕಾರಕ್ಕೆ ಬರೆದ ಪತ್ರ ಸಂಖ್ಯೆ ೯೫೧೪ ದಿನಾಂಕ ೨೬-೦೩-೨೦೦೨) ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದಿನಾಂಕ ೨೦-೫-೨೦೦೨ ರಂದು ಪತ್ರ ಬರೆದು ಅಧಿಕೃತ ಒಪ್ಪಿಗೆ ಸೂಚಿಸಿತು.

ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ವರ್ಷ ಅಥವಾ ಎರಡು ಸೆಮಿಸ್ಟರ್‌ ಅವಧಿಗೆ ಕಲಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಆಗಬೇಕಾದ ಕೆಲಸಗಳಿವೆ.

(೧) ಕಲಿಕೆಗೆ ಕಡ್ಡಾಯವಾಗಿರುವ ಕನ್ನಡವನ್ನು ಪರೀಕ್ಷೆಗೂ ಕಡ್ಡಾಯ ಮಾಡಬೇಕು. ಅಂಕಪಟ್ಟಿಯಲ್ಲಿ ನಮೂದಿಸಬೇಕು. ಅಂದಿನ ಉನ್ನತ ಶಿಕ್ಷಣ ಸಚಿವರು, ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಒಟ್ಟಾಗಿ ನಡೆಸಿದ ಅಧಿಕೃತ ಸಭೆಯಲ್ಲಿ ಪರೀಕ್ಷೆಗೆ ಕನ್ನಡವನ್ನು ಕಡ್ಡಾಯಗೊಳಿಸಲು ಒಪ್ಪಲಾಗಿತ್ತು. ಈಗ ತಾಂತ್ರಿಕ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಕಲಿಕೆ ಮತ್ತು ಪರೀಕ್ಷೆ – ಎರಡೂ ಕಡ್ಡಾಯವೆಂಬ ನಿಯಮ ಜಾರಿಯಾಗಬೇಕು. ಕಲಿಕೆಯಷ್ಟೇ ಕಡ್ಡಾಯವಾಗಿರುವುದು ಸಾಲದು.

(೨) ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಪಠ್ಯವಾಗಿಡಬೇಕೆಂದು ಒಪ್ಪಿಸುವುದಕ್ಕೆ ಆಧಾರವಾದದ್ದು ‘ಸಾಂಸ್ಕೃತಿಕ ತಿಳುವಳಿಕೆ’ಯ ಅಗತ್ಯವನ್ನು ಕುರಿತ ತಾತ್ವಿಕ ಅಂಶ. ಆದ್ದರಿಂದ ಈಗಿರುವ ಕನ್ನಡ ಪಠ್ಯವನ್ನು ಕೇವಲ, ಕತೆ, ಕವಿತೆ ಮುಂತಾದ ಪ್ರಕಾರಗಳಿಗೆ ಸೀಮಿತಗೊಳಿಸದೆ, ವೃತ್ತಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಕರ್ನಾಟಕದ ಸಾಂಸ್ಕೃತಿಕ ವಿವರಗಳನ್ನು (ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ಚಲನಚಿತ್ರ, ಜಾನಪದ ಇತ್ಯಾದಿ) ಅಗತ್ಯ ಪ್ರಮಾಣ ಹಾಗೂ ಸೂಕ್ತ ವಿಧಾನದಲ್ಲಿ ಪರಿಚಯಿಸುವುದಕ್ಕಾಗಿ ಪರಿಷ್ಕರಿಸಬೇಕು. ಕನ್ನಡ ಬಾರದ ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್‌ನಲ್ಲಿ ಕನ್ನಡವನ್ನು ಕಲಿಸಿ ಎರಡನೇ ಸೆಮಿಸ್ಟರ್‌ನಲ್ಲಿ ಸಾಂಸ್ಕೃತಿಕ ಪರಿಚಯವನ್ನು ಮಾಡಿಸುವ ಬಗ್ಗೆ ಚಿಂತಿಸಬೇಕು.

(೩) ಪಾಲಿಟೆಕ್ನಿಕ್‌, ಟಿ.ಸಿ.ಎಚ್, ಬಿ.ಇಡಿ, ಎಲ್.ಎಲ್.ಬಿ. ಮತ್ತು ಐ.ಟಿ.ಐ. ನಂತಹ ವೃತ್ತಿಪರ ಕೋರ್ಸುಗಳಲ್ಲೂ ಕನ್ನಡವನ್ನು ಒಂದು ಪಠ್ಯವಾಗಿ ಅಳವಡಿಸಬೇಕು.

ಕೇಂದ್ರೀಯ ಶಾಲೆ ಮತ್ತು ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ

ಅಂತರರಾಜ್ಯ ವರ್ಗಾವಣೆಯ ಅನಿವಾರ್ಯತೆಯುಳ್ಳವರಿಗಾಗಿ ಕೇಂದ್ರ ಸರ್ಕಾರವು ಕೇಂದ್ರೀಯ ಶಾಲೆಗಳನ್ನು ನಡೆಸುತ್ತದೆ. ಜೊತೆಗೆ ರಾಜ್ಯದ ಶಿಕ್ಷಣ ಸಂಸ್ಥೆಗಳು ಕೆಲವು ಷರತ್ತುಗಳಿಗೆ ಒಳಪಟ್ಟು ಕೇಂದ್ರೀಯ ಶಾಲಾಪಠ್ಯ ಕ್ರಮವನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರವು ಅವಕಾಶ ಕೊಡುತ್ತದೆ. ಇದು ದುರುಪಯೋಗವಾಗುತ್ತದೆ. ಕೇಂದ್ರೋದ್ಯಮ, ಕೇಂದ್ರ ಸರ್ಕಾರದ ಕಚೇರಿ, ಅಂತರರಾಜ್ಯ ವರ್ಗಾವಣೆಯ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಮಕ್ಕಳಿಗೆ ಇರುವ ಈ ಅವಕಾಶವನ್ನು ರಾಜ್ಯದ ಖಾಯಂವಾಸಿಗಳೂ ಪಡೆಯುತ್ತಿದ್ದಾರೆ. ಜೊತೆಗೆ ಕೇಂದ್ರೀಯ ಶಾಲೆ ಮತ್ತು ಕೇಂದ್ರೀಯ ಶಾಲಾಪಠ್ಯಕ್ರಮವುಳ್ಳ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿ ಕನ್ನಡ ಕಲಿಕೆಯು ಕಡ್ಡಾಯವಾಗುವಂತೆ ಸರ್ಕಾರವು ಸೂಕ್ತ ಆದೇಶ ಹೊರಡಿಸಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು. ದುರುಪಯೋಗವನ್ನು ತಡೆಗಟ್ಟಬೇಕು. ಕೇಂದ್ರೀಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಮುಂದೆ ಅನುಮತಿ ನೀಡಬಾರದು.

ಕನ್ನಡ ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿ

ಕರ್ನಾಟಕದಲ್ಲಿ ಸುಮಾರು ಅರ್ಧ ಲಕ್ಷದಷ್ಟು ಕನ್ನಡ ಮಾಧ್ಯಮ ಶಾಲೆಗಳಿವೆ. (ಸಂಖ್ಯೆ ಯಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು). ಈ ಶಾಲೆಗಳಲ್ಲಿ ಖಂಡಿತ ಉಳ್ಳವರ ಮಕ್ಕಳು ಓದುವುದಿಲ್ಲ. ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಉಳಿಸಿರುವ ಮತ್ತು ಬಡ ಜನ ವರ್ಗಗಳಿಗೆ ಶಿಕ್ಷಣದ ಹಕ್ಕನ್ನು ಅನುಭವಿಸಲು ಅವಕಾಶ ಒದಗಿಸಿರುವ ಈ ಶಾಲೆಗಳನ್ನು ಸುಸಜ್ಜಿತಗೊಳಿಸುವುದು ಸರ್ಕಾರದ ಕರ್ತವ್ಯ; ಸಾರ್ವಜನಿಕರ ಜವಾಬ್ದಾರಿ. ಉತ್ತಮ ಕಟ್ಟಡ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕ್ರಮಬದ್ಧತೆ, ಆಟದ ಮೈದಾನ, ಸಮಾನ ಸಮವಸ್ತ್ರ ಉತ್ತಮ ವಾತಾವರಣ, ಮುಂತಾದ ಸೌಲಭ್ಯಗಳ ಮೂಲಕ ಯಾವುದೇ ‘ಪ್ರತಿಷ್ಠಿತ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಸಜ್ಜುಗೊಳಿಸಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ತೊಡಗಿಸಿಕೊಂಡ ಅಧ್ಯಾಪಕರು, ಅಧಿಕಾರಿಗಳು ಸೃಜನಶೀಲ ಉತ್ಸಾಹದಿಂದ ಕೆಲಸ ಮಾಡುವಂತಾಗಬೇಕು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಮಗ್ರ ಅಭಿವೃದ್ಧಿ ಆದ್ಯತೆಯ ವಿಷಯವಾಗಬೇಕು.

ವೃತ್ತಿ ಶಿಕ್ಷಣ ಕೋರ್ಸುಗಳಲ್ಲಿ ಕನ್ನಡ ಮಾಧ್ಯಮದವರಿಗೆ ಮೀಸಲಾತಿ
ಬಿ.ಇ., ಎಂ.ಬಿ.ಬಿ.ಎಸ್., ಬಿ.ಡಿ.ಎಸ್. ಮುಂತಾದ ವೃತ್ತಿ ಶಿಕ್ಷಣದ ಕೋರ್ಸುಗಳನ್ನು ಒಳಗೊಂಡಂತೆ ಎಲ್ಲ ರೀತಿಯ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕೊಡುವಾಗ ೧ ರಿಂದ ೧೦ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಆದ್ಯತೆ ನೀಡ ಬೇಕೆಂದು ೨೦೦೧ರ ಆರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರವನ್ನು ಒತ್ತಾಯಿಸಿತು.

೦ಒಟ್ಟು ಶೇ. ೫೦ಕ್ಕಿಂತ ಹೆಚ್ಚು ಮೀಸಲಾತಿ ನೀಡಿದರೆ ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲವೆಂಬ ಕಾನೂನಿನ ಅಂಶವನ್ನು ಒಳಗೊಂಡಂತೆ ಅನೇಕ ವಿಚಾರಗಳನ್ನು ಪರಿಶೀಲಿಸಿ, ನ್ಯಾಯಾಲಯವು ಅನೂರ್ಜಿತಗೊಳಿಸಲು ಸಾಧ್ಯವಾಗದಂತೆ ಒಳಮೀಸಲಾತಿಯನ್ನು ಕಲ್ಪಿಸ ಬೇಕೆಂದು ಕೇಳಲಾಯಿತು. ಇದರ ಫಲವಾಗಿ ಸರ್ಕಾರವು (ಶ್ರೀ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳು – ಡಾ. ಜಿ. ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರು) ಬಿ.ಇ., ಎಂ.ಬಿ.ಬಿ.ಎಸ್., ಬಿ.ಡಿ.ಎಸ್. ಕೋರ್ಸುಗಳಲ್ಲಿ ಶೇ. ೫ರಷ್ಟು ಒಳಮೀಸಲಾತಿಯನ್ನು ಕೊಡಲು ಒಪ್ಪಿಕೊಂಡಿತು. ಈ ಪ್ರಮಾಣವು ಮೇಲ್ನೋಟಕ್ಕೆ ಕಡಿಮೆಯೆನ್ನಿಸಿದರೂ ಸಾಮಾನ್ಯ ವಿಭಾಗವೂ ಸೇರಿದಂತೆ ಎಲ್ಲ ಮೀಸಲಾತಿ ವಿಭಾಗಗಳಲ್ಲೂ ಕನ್ನಡ ಮಾಧ್ಯಮವನ್ನು ಪರಿಗಣಿಸಿದ್ದ ರಿಂದ ಕನಿಷ್ಠ ಒಂದು ಸಾವಿರದಷ್ಟು ಬಡವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಕಾರಣಕ್ಕಾಗಿಯೇ ಉಚಿತ ಪ್ರವೇಶ ಲಭ್ಯವಾಗುತ್ತಿದೆ. ಮೊದಲು ಬಿ.ಇ., ಎಂ.ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್. ಗಳಿಗೆ ಅನ್ವಯಿಸಿ ಆದೇಶ ಹೊರಡಿಸಿದ ಸರ್ಕಾರವು (ಸಂಖ್ಯೆ : ಇಡಿ ೧೧೮ ಯು‌ಇಸಿ ೨೦೦೦ ದಿನಾಂಕ ೪-೬-೨೦೦೧) ಆನಂತರ ಅನೇಕ ವೃತ್ತಿಪರ ಕೋರ್ಸುಗಳಿಗೆ ಈ ಮೀಸಲಾತಿಯನ್ನು ಅನ್ವಯಿಸಿ ಆದೇಶ ಹೊರಡಿಸಿತು. (ಸಂಖ್ಯೆ : ಇಡಿ ೯೧ ಯು‌ಆರ್‌ಸಿ ೨೦೦೨ ದಿನಾಂಕ ೩೧-೦೭-೨೦೦೨) ಈ ಎರಡನೇ ಆದೇಶದ ಪ್ರಕಾರ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಕಾರ್ಮಿಕ ಇಲಾಖೆಯ ಕೈಗಾರಿಕಾ ತರಬೇತಿ ಕೇಂದ್ರದ ವೃತ್ತಿಪರ ಕೋರ್ಸು ಗಳು, ಬಿ.ಬಿ.ಎಸ್, ಬಿ.ಎಚ್.ಎಂ.ಎಸ್, ಬಿ.ಯು.ಎಂ.ಎಸ್, ಬಿ.ಫಾರ್ಮ್, ಬಿ.ಎಸ್‌ಸಿ. (ನರ್ಸಿಂಗ್); ಹಾಗೂ ಇತರೆ ಅರೆವೈದ್ಯಕೀಯ ಕೋರ್ಸುಗಳು, ತಾಂತ್ರಿಕ ಶಿಕ್ಷಣ ಇಲಾಖೆಯ ಡಿಪ್ಲೊಮಾ ಕೋರ್ಸುಗಳು, ಬಿ.ಇಡಿ ಮತ್ತು ಬಿ.ಪಿ.ಎಸ್. ಕೋರ್ಸುಗಳು, ಟಿ.ಸಿ.ಎಚ್. (ಈಗ ಡಿ.ಇಡಿ) ಮತ್ತು ಸಿ.ಪಿ.ಎಡ್. ಕೋರ್ಸುಗಳು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ. ೫ರಷ್ಟು ಮೀಸಲಾತಿ ನೀಡಿ ಉಚಿತ ಪ್ರವೇಶ ಕೊಡುತ್ತಿವೆ.

ಈಗ ಕಾನೂನಿನ ಚೌಕಟ್ಟಿನೊಳಗೆ ಸಾಧ್ಯವಿರುವಷ್ಟು ಗರಿಷ್ಠ ಪ್ರಮಾಣದ ಒಳಮೀಸಲಾತಿ ಗಾಗಿ ಒತ್ತಾಯಿಸಬಹುದಾಗಿದೆ. ಜೊತೆಗೆ ಕಡೇಪಕ್ಷ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮ ದಲ್ಲಿ / ಮಾತೃಭಾಷಾ ಮಾಧ್ಯಮದಲ್ಲಿ ಪೂರೈಸಿದವರಿಗೆ ಮೊಟ್ಟಮೊದಲನೇ ಆದ್ಯತೆ ಎಂಬ ಒತ್ತಾಯ ಮಾಡಬಹುದಾಗಿದೆ. ಕನ್ನಡದ ಜೊತೆಗೆ ಮಾತೃಭಾಷಾ ಮಾಧ್ಯಮದ ಅಂಶವನ್ನು ಸೇರಿಸಿಕೊಳ್ಳುವುದು ಸಂವಿಧಾನಾತ್ಮಕವಾಗಿ ಸರಿಯಾದ ಮಾರ್ಗವಾಗುತ್ತದೆಯೆಂಬುದನ್ನು ಇಲ್ಲಿ ಗಮನಿಸಬೇಕು.

ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿ

ಸಾಮಾನ್ಯವಾಗಿ ದ್ವಿಭಾಷಿಕವಾಗಿರುವ ಗಡಿನಾಡು ಪ್ರದೇಶದಲ್ಲಿ ಕನ್ನಡಪರ ಶಿಕ್ಷಣವನ್ನು ಆಕರ್ಷಕ ಹಾಗೂ ಉತ್ತೇಜಕಗೊಳಿಸಬೇಕು. ಗಡಿನಾಡಿನ ಅನೇಕ ಕನ್ನಡ ಮಾಧ್ಯಮ ಶಾಲೆಗಳಿಗೆ ಸರಿಯಾದ ಕಟ್ಟಡಗಳಿಲ್ಲ. ಅನೇಕ ಶಾಲೆಗಳಿಗೆ ಅಧ್ಯಾಪಕರಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಇಂತಹ ಎಲ್ಲ ಕೊರತೆಗಳನ್ನು ನಿವಾರಿಸುವುದಲ್ಲದೆ ಗಡಿನಾಡು ಶಾಲಾ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ, ಪ್ರತ್ಯೇಕ ಪ್ಯಾಕೇಜ್ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು.

ಕನ್ನಡೇತರ ಮಾಧ್ಯಮ ಶಾಲೆಗಳಿಗೆ ಕನ್ನಡ ಅಧ್ಯಾಪಕರ ನೇಮಕ

ಉರ್ದುವನ್ನೂ ಒಳಗೊಂಡಂತೆ ಎಲ್ಲ ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದಲ್ಲದೆ, ಪೂರ್ಣಾವಧಿಯ ಕನ್ನಡ ಅಧ್ಯಾಪಕರನ್ನು ನೇಮಿಸಬೇಕು. ಎಷ್ಟು ಜನ ಕನ್ನಡ ಅಧ್ಯಾಪಕರ ಅಗತ್ಯವಿದೆಯೆಂಬುದನ್ನು ಖಚಿತಪಡಿಸಿಕೊಂಡು ಅಷ್ಟು ಹುದ್ದೆ ಗಳನ್ನು ಒಂದೇ ಹಂತದಲ್ಲಿ ಸೃಷ್ಟಿಸಬೇಕು. ಕೂಡಲೇ ನೇಮಕ ನಡೆಸಬೇಕು. ಈ ನೇಮಕದ ಸಂದರ್ಭದಲ್ಲಿ ಗಡಿನಾಡಿನ ಆದ್ಯತೆಯನ್ನು ಪರಿಗಣಿಸಬೇಕು.

(೨೦೦೧-೦೨ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಉರ್ದು ಶಾಲೆಗಳಲ್ಲಿ ಖಾಲಿಯಿದ್ದ ೫೦೨ ಕನ್ನಡ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಸಿತು)

ಪ್ರಥಮ ಭಾಷೆ ಪ್ರಶ್ನೆ

‘ಶಾಸ್ತ್ರೀಯ ಭಾಷೆ’ಯಾದ ಸಂಸ್ಕೃತವನ್ನು ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆಯಾಗಿ ಕಲಿಸುತ್ತಿರುವುದರಿಂದ ಕನ್ನಡ ಕಲಿಕೆಗೆ ಧಕ್ಕೆಯಾಗುತ್ತದೆಂಬ ವಿಚಾರ ಪ್ರಬಲವಾದಾಗ, ಮಾನ್ಯ ಶ್ರೀ ದೇವರಾಜ ಅರಸು ಅವರ ನೇತೃತ್ವದ ಸರ್ಕಾರವು ೧೯೭೯ರ ಅಕ್ಟೋಬರ್‌ನಲ್ಲಿ ಆದೇಶ ವೊಂದನ್ನು ಹೊರಡಿಸಿ ಸಂಸ್ಕೃತವನ್ನು ಪ್ರೌಢಶಾಲಾ ಶಿಕ್ಷಣದ ಪ್ರಥಮ ಭಾಷೆಯ ಪಟ್ಟಿಯಿಂದ ತೆಗೆದು, ತೃತೀಯ ಭಾಷೆಗಳ ಪಟ್ಟಿಗೆ ಸೇರಿಸಿತು. (ಅಂದರೆ ಈಗ ೧೯೯೪ರ ಸರ್ಕಾರಿ ಆದೇಶ ಅನುಬಂಧ-೨ರಲ್ಲಿ ತೃತೀಯ ಭಾಷೆಯಾಗಿ ಏಳನೇ ತರಗತಿಯವರೆಗೆ ಕಲಿಯುವ ಅವಕಾಶವಿರುವಂತೆ ಈಗಲೂ ಇದ್ದು ಅದನ್ನೇ ಪ್ರೌಢಶಾಲೆಗೆ ವಿಸ್ತರಿಸಲಾಯಿತು.) ಆದರೆ ಆನಂತರ ಅಧಿಕಾರಕ್ಕೆ ಬಂದ ಮಾನ್ಯ ಶ್ರೀ ಗುಂಡೂರಾವ್ ಅವನ ನೇತೃತ್ವದ ಸರ್ಕಾರವು ಶ್ರೀ ಅರಸು ಸರ್ಕಾರದ ಆದೇಶವನ್ನು ಬದಲಾಯಿಸಿ ಸಂಸ್ಕೃತವನ್ನು ಪ್ರೌಢಶಾಲಾ ಶಿಕ್ಷಣದ ಪ್ರಥಮ ಭಾಷೆಗಳ ಪಟ್ಟಿಗೆ ಸೇರಿಸಿತು. ಈ ಕ್ರಮವು ಕರ್ನಾಟಕದಾದ್ಯಂತ ವಿವಾದಕ್ಕೆಡೆ ಮಾಡಿತು. ತೀವ್ರ ಪ್ರಮಾಣದ ವಿರೋಧ ವ್ಯಕ್ತವಾಯಿತು. ಆಗ ಸರ್ಕಾರವು ೫-೧೦-೧೯೮೦ ರಂದು ಆದೇಶವೊಂದನ್ನು ಹೊರಡಿಸಿ ಡಾ. ವಿ.ಕೃ. ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಿ ಈ ವಿಷಯದಲ್ಲಿ ಮಾರ್ಗದರ್ಶನವನ್ನು ಅಪೇಕ್ಷಿಸಿತು. ಈ ಸಮಿತಿಯು ಪ್ರಥಮ ಭಾಷೆಯ ಪಟ್ಟಿಯಿಂದ ಸಂಸ್ಕೃತವೊಂದನ್ನು ಮಾತ್ರ ತೆಗೆಯದೆ ಕನ್ನಡವನ್ನು ಹೊರತುಪಡಿಸಿ ಎಲ್ಲಾ ಮಾತೃಭಾಷೆಗಳನ್ನೂ ತೆಗೆದು, ಕನ್ನಡವನ್ನು ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡ ಬೇಕೆಂದು ತಿಳಿಸಿತು. ಮೇಲ್ನೋಟಕ್ಕೆ ಇದು ಕನ್ನಡಕ್ಕೆ ಸಿಕ್ಕಿದ ಅಗ್ರಸ್ಥಾನದಂತೆ ಕಂಡರೂ ಸಂವಿಧಾನಾತ್ಮಕ ಹಕ್ಕುಗಳನ್ನು ಅರ್ಥಮಾಡಿಕೊಂಡವರಿಗೆ ಒಂದೇ ಭಾಷೆಯನ್ನು ಪ್ರಥಮ ಭಾಷೆಯೆಂದು ಕಡ್ಡಾಯ ಮಾಡುವುದು ಕಷ್ಟವೆಂಬ ವಿಷಯ ತಿಳಿದಿತ್ತು. ಆದರೂ ಸರ್ಕಾರವು ೨೭-೭-೧೯೮೨ ರಂದು ಒಂದು ಆದೇಶವನ್ನು ಹೊರಡಿಸಿತು. ಇದು ಮುಂದೆ ನ್ಯಾಯಾಲಯದಲ್ಲಿ ಸಾಬೀತಾಯಿತು.

೨೫-೧-೧೯೮೯ ರಂದು ಹೊರಬಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್‍ಪು ಸಂವಿಧಾನದ ಅನುಚ್ಛೇದ ೧೪, ೨೯(೧) ಮತ್ತು ೩೦(೧)ರ ವಿಧಿಗಳನ್ನು ಸರ್ಕಾರದ ಆದೇಶವು ಉಲ್ಲಂಘಿಸುತ್ತದೆ ಎಂದು ತಿಳಿಸಿ, ಕನ್ನಡವನ್ನು ಏಕೈಕ ಪ್ರಥಮ ಭಾಷೆಯಾಗಿಸುವುದು ಸೂಕ್ತವಲ್ಲವೆಂದು ಸ್ಪಷ್ಟಪಡಿಸಿತು. ಇದರ ಫಲವಾಗಿ ಕನ್ನಡದ ಜೊತೆಗೆ ಕರ್ನಾಟಕವಾಸಿಗಳ ಇತರೆ ಮಾತೃಭಾಷೆ ಗಳು ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸೇರುವುದು ಅನಿವಾರ್ಯವಾಯಿತು. ಆದರೆ ಇದೇ ಸಂದರ್ಭದಲ್ಲಿ ಸಂಸ್ಕೃತವು ಪ್ರೌಢಶಾಲಾ ಶಿಕ್ಷಣದಿಂದ ಪ್ರಾರಂಭಿಸಿ ಮುಂದಿನ ಶಿಕ್ಷಣದ ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸ್ಥಾನ ಪಡೆದದ್ದು ವಿಪರ್ಯಾಸದ ಸಂಗತಿ.

ಇದು ಯಾವುದೇ ಭಾಷೆಯನ್ನು ನಿರ್ಲಕ್ಷಿಸುವ ಅಥವಾ ವಿರೋಧಿಸುವ ಪ್ರಶ್ನೆಯಲ್ಲ. ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಮಾತೃಭಾಷೆಗಳಲ್ಲದೆ ಬೇರೆ ಭಾಷೆಗಳು ಇರಬೇಕೆ ಎಂಬ ಸೈದ್ಧಾಂತಿಕ ಪ್ರಶ್ನೆ ಇಲ್ಲಿ ಮುಖ್ಯವಾದುದು. ಇದಕ್ಕೆ ಕೊಡಬೇಕಾದ ಉತ್ತರ ತೀರಾ ನೇರ ಮತ್ತು ಸ್ಪಷ್ಟ; ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಮಾತೃಭಾಷೆಗಳು ಮಾತ್ರ ಇರಬೇಕು. ಮಾತೃಭಾಷೆ ಬೇಡ ಎನ್ನುವ ವಿದ್ಯಾರ್ಥಿ ಪ್ರಥಮ ಭಾಷೆಯಾಗಿ ಪ್ರಾದೇಶಿಕ ಭಾಷೆಯನ್ನು ಕಲಿಯಬೇಕು. ಯಾವುದೇ ಪೂರ್ವಾಗ್ರಹ ಹಾಗೂ ವ್ಯಾಮೋಹವಿಲ್ಲದೆ ಶಿಕ್ಷಣ ಕ್ರಮದಲ್ಲಿ ಇಂಥ ಭಾಷಾ ನೀತಿಯನ್ನು ಅಳವಡಿಸುವ ಅಗತ್ಯವನ್ನು ಮನಗಂಡು ಯಾವ ಯಾವ ಭಾಷೆಗಳಿಗೆ ಪಠ್ಯಕ್ರಮ ದಲ್ಲಿ ಯಾವ ಯಾವ ಸ್ಥಾನ ಎಂಬುದನ್ನು ನಾವು ಖಚಿತಪಡಿಸಬೇಕಾಗಿದೆ. ತಾತ್ವಿಕ ನೆಲೆಯೊಂದೇ ಇದಕ್ಕೆ ಆಧಾರವಾಗಬೇಕಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ೨೯-೪-೧೯೯೪ರ ಆದೇಶದ ಅನುಬಂಧ-೧ ರಲ್ಲಿ ಇಂಗ್ಲಿಷನ್ನು ಪ್ರಥಮ ಭಾಷೆಗಳ ಪಟ್ಟಿಗೆ ಸೇರಿಸಿದೆ. ವಿಶ್ವವಿದ್ಯಾಲಯಗಳು ಇಂಗ್ಲಿಷಿಗೆ ಪ್ರಥಮ ಭಾಷೆಯ ಸ್ಥಾನವನ್ನು ಕೊಟ್ಟಿವೆ. ಆಂಗ್ಲೋ ಇಂಡಿಯನ್ನರಲ್ಲದವರು ಇಂಗ್ಲಿಷನ್ನು ಪ್ರಥಮ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಲೇಕೂಡದು. ಅಲ್ಲದೆ ಆಂಗ್ಲೋ ಇಂಡಿಯನ್ನರು ಪ್ರಾದೇಶಿಕ ಭಾಷೆಯನ್ನು ಕಲಿಯುವುದು ಕಡ್ಡಾಯವಾಗಬೇಕು. ಸಂಸ್ಕೃತವನ್ನು ಅಥವಾ ಯಾವುದೇ ಶಾಸ್ತ್ರೀಯ ಭಾಷೆಗಳನ್ನು ಮಾತೃಭಾಷೆ ಗಳು ಮಾತ್ರ ಇರಬೇಕಾದ ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸೇರಿಸುವುದು ಸೈದ್ಧಾಂತಿಕವಾಗಿ ಸೂಕ್ತವಲ್ಲ. ಇಂಗ್ಲೀಷನ್ನಾಗಲಿ, ಸಂಸ್ಕೃತವನ್ನಾಗಲಿ ಅಭ್ಯಾಸ ಮಾಡಲು, ಪರಿಣತಿ ಪಡೆಯಲು, ಐಚ್ಛಿಕ ಅವಕಾಶಗಳಿರಲಿ, ಪಠ್ಯಕ್ರಮದಲ್ಲಿ ಸೂಕ್ತ ಅವಕಾಶ ಲಭ್ಯವಾಗಲಿ, ಪ್ರಥಮ ಭಾಷಾ ಕಲಿಕೆಯೆಂದರೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಮಾತ್ರ ಎಂದಾಗಲಿ.

ಪದವಿ ತರಗತಿಗಳಲ್ಲಿ ಕನ್ನಡ

ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳು ಪದವಿ ತರಗತಿಗಳಲ್ಲಿ ಕನ್ನಡವನ್ನು ಒಂದು ಪಠ್ಯವಾಗಿ ಕಲಿಸುತ್ತವೆ. ಆದರೆ ಬಿ.ಎ., ಬಿ.ಎಸ್ಸಿ, ಮತ್ತು ಬಿ.ಕಾಂ.ಗಳಿಗೆ ಮೊದಲ ಎರಡು ವರ್ಷ ಕನ್ನಡವು ಪಠ್ಯ ವಿಷಯವಾಗಿದ್ದರೆ, ಬಿ.ಬಿ.ಎಂ. ಕೋರ್ಸಿಗೆ ಒಂದೇ ವರ್ಷ,

ಬಿ.ಸಿ.ಎ.ಯಂತಹ ಕೋರ್ಸುಗಳಲ್ಲಿ ಕನ್ನಡವೇ ಇಲ್ಲ. ಒಂದೊಂದು ವಿಶ್ವವಿದ್ಯಾಲಯದಲ್ಲಿ ಒಂದೊಂದು ರೀತಿಯ ಬೋಧನಾವಧಿ ಮತ್ತು ನೀತಿ. ಈ ಮಧ್ಯೆ ಅಂತರ ವಿಶ್ವವಿದ್ಯಾಲಯ ಮಂಡಳಿಯು ಪದವಿ ತರಗತಿಯ ವಿವಿಧ ಕೋರ್ಸುಗಳಿಗೆ (ಬಿ.ಎ; ಬಿ.ಎಸ್ಸಿ, ಬಿ.ಕಾಂ. ಇತ್ಯಾದಿ) ಪ್ರತ್ಯೇಕ ಭಾಷಾ ಪಠ್ಯಗಳನ್ನು ಇಡಬಾರದೆಂದೂ ಎಲ್ಲ ಕೋರ್ಸುಗಳಿಗೂ ಒಂದೇ ರೀತಿಯ ಪಠ್ಯಗಳಿರಬೇಕೆಂದು ತೀರ್ಮಾನಿಸಿದೆ. ಒಂದೊಂದು ಪದವಿ ಕೋರ್ಸಿಗೂ ಅದರದೇ ವೈಶಿಷ್ಟ್ಯವಿರುವುದರಿಂದ ಪ್ರತಿ ಪದವಿ ಕೋರ್ಸಿಗೂ ಪ್ರತ್ಯೇಕ ಪಠ್ಯ, ಪ್ರತ್ಯೇಕ ಬೋಧನಾ ವ್ಯವಸ್ಥೆ ಇರುವುದು ಅಗತ್ಯ. ಇಲ್ಲದಿದ್ದರೆ ಬಿ.ಎ; ಬಿ.ಎಸ್ಸಿ, ಬಿ.ಕಾಂ – ಹೀಗೆ ಎಲ್ಲಾ ತರಗತಿ ಗಳನ್ನು ಒಟ್ಟುಗೂಡಿಸಿ, ಕನ್ನಡ ಪಾಠ ಮಾಡಿಸಿ, ಕನ್ನಡದ ಅವಧಿಗಳನ್ನು (ಪೀರಿಯಡ್ ಗಳನ್ನು) ಕಡಿತಗೊಳಿಸಿ ಹೆಚ್ಚು ಕನ್ನಡ ಅಧ್ಯಾಪಕರ ಅಗತ್ಯವಿಲ್ಲವೆಂದು ಹೇಳಿಬಿಡುತ್ತಾರೆ.

ಎಲ್ಲ ವಿಶ್ವವಿದ್ಯಾಲಯಗಳ ಎಲ್ಲ ಪದವಿ ತರಗತಿಗಳಿಗೆ (ಬಿ.ಬಿ.ಎಂ; ಬಿ.ಸಿ.ಎ; ಇತ್ಯಾದಿ ವೃತ್ತಿಪರ ಪದವಿ ಕೋರ್ಸುಗಳೂ ಸೇರಿದಂತೆ) ಮೂರು ವರ್ಷಗಳ ಅವಧಿಗೂ ಕನ್ನಡ ಪಠ್ಯ ಇರಲೇಬೇಕು. ಪ್ರತಿ ಪದವಿಯ ಅಗತ್ಯಕ್ಕನುಗುಣವಾಗಿ ಪ್ರತ್ಯೇಕ ಪಠ್ಯಪುಸ್ತಕಗಳನ್ನು ನಿಗದಿಪಡಿಸ ಬೇಕು.

ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಎಲ್ಲ ವಿಷಯಗಳಲ್ಲಿ ನಿಗದಿತ ಪ್ರಮಾಣದ ವಿದ್ಯಾರ್ಥಿಗಳಿದ್ದರೆ ಕನ್ನಡ ಮಾಧ್ಯಮ ವಿಭಾಗವನ್ನು ಆರಂಭಿಸಬೇಕು. (ಈಗ ಮಾನವಿಕ ವಿಭಾಗದ ಕೆಲವು ವಿಷಯಗಳಿಗೆ ಮಾತ್ರ ಈ ಅವಕಾಶವಿದೆ.)

ಪದವಿ ತರಗತಿಗಳಲ್ಲಿ ಕನ್ನಡ ಅಥವಾ ಮಾತೃಭಾಷೆ ಕಡ್ಡಾಯ

ಮತ್ತೊಂದು ಅಂಶವನ್ನು ಇಲ್ಲಿ ಗಮನಿಸಬೇಕು: ಅಂತರ ವಿಶ್ವವಿದ್ಯಾಲಯ ಮಂಡಳಿಯು ಎಲ್ಲ ಪದವಿ ತರಗತಿಗಳಿಗೂ ಒಂದೇ ರೀತಿಯ ಭಾಷಾ ಪಠ್ಯಗಳಿರಬೇಕೆಂದು ಹೇಳುವುದಕ್ಕೆ ತೋರಿಸಿದ ಉತ್ಸಾಹವನ್ನು ಭಾಷಾ ಬೋಧನೆಯ ವಿಷಯದಲ್ಲಿರುವ ತಾರತಮ್ಯಗಳ ನಿವಾರಣೆ ಬಗ್ಗೆ ತೋರುವುದಿಲ್ಲ. ಮಾನ್ಯ ಉನ್ನತ ಶಿಕ್ಷಣ ಸಚಿವರು ಅಧ್ಯಕ್ಷರಾಗಿರುವ ಮತ್ತು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಸದಸ್ಯರಾಗಿರುವ ಈ ಅಂತರವಿಶ್ವವಿದ್ಯಾಲಯ ಮಂಡಳಿಯು ಕರ್ನಾಟಕದ ಅಧಿಕೃತ ರಾಜ್ಯ ಭಾಷೆಯಾದ ಕನ್ನಡ ಭಾಷಾ-ಸಾಹಿತ್ಯದ ಕಲಿಕೆಯನ್ನು ಕಡಿತ ಗೊಳಿಸುವುದಕ್ಕೆ ಪ್ರಯತ್ನಿಸುವ ಬದಲು ಕನ್ನಡವನ್ನು ಕಡ್ಡಾಯಗೊಳಿಸಲು ನಿರ್ಣಯಿಸಬೇಕಿತ್ತು. ಯಾಕೆಂದರೆ ಯಾವುದೇ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಕನ್ನಡ ಅಥವಾ ಮಾತೃಭಾಷೆಯ ಕಲಿಕೆ ಕಡ್ಡಾಯವಲ್ಲ. ಇಂಗ್ಲಿಷ್ ಭಾಷೆಯ ಕಲಿಕೆ ಮಾತ್ರ ಕಡ್ಡಾಯ. ಇದೆಂಥ ವಿಪರ್ಯಾಸ! ರಾಜ್ಯಭಾಷೆ ಹಾಗೂ ಮಾತೃಭಾಷೆಗಳ ವಿಷಯದಲ್ಲಿ ಸ್ಪಷ್ಟವಾಗಿರುವ ಈ ತಾರತಮ್ಯವನ್ನು ಸರಿಪಡಿಸಿ ಕನ್ನಡ ಅಥವಾ ಮಾತೃಭಾಷೆಯನ್ನು ಕಡ್ಡಾಯ ಪಠ್ಯವಾಗಿಸಬೇಕು. ಈ ಕಡ್ಡಾಯ ಎಲ್ಲ ಪದವಿ ತರಗತಿಗಳಿಗೂ ಅನ್ವಯಿಸಬೇಕು. ಪದವಿ ಕೋರ್ಸಿನ ಒಂದು ಅಥವಾ ಎರಡು ವರ್ಷಗಳಿಗೆ ಕನ್ನಡ ಅಥವಾ ಮಾತೃಭಾಷೆ-ಸಾಹಿತ್ಯದ ಕಲಿಕೆಯನ್ನು ಸೀಮಿತಗೊಳಿಸುವ ಬದಲು ಪದವಿ ಕೋರ್ಸಿನ ಪೂರ್ಣಾವಧಿಗೆ ಅಂದರೆ ಮೂರು ವರ್ಷಗಳಿಗೆ ಕಡ್ಡಾಯ ಮಾಡಬೇಕು. ಈ ಬಗ್ಗೆ ಕನ್ನಡ ಅಧ್ಯಾಪಕರು, ಚಿಂತಕರು, ಲೇಖಕರು, ಹೋರಾಟಗಾರರು ಮತ್ತು ಎಲ್ಲ ಆಸಕ್ತರು ಸೂಕ್ತ ಕ್ರಿಯೆಗೆ ಸಿದ್ಧವಾಗಬೇಕು.

ವಿಶ್ವವಿದ್ಯಾಲಯಗಳಲ್ಲಿ ‘ಕ್ರಿಯಾತ್ಮಕ ಕನ್ನಡ’

ಕನ್ನಡ ಕಲಿಕೆಯೆಂದರೆ ಸಾಹಿತ್ಯದ ಕಲಿಕೆ ಮಾತ್ರವಲ್ಲ. ಈ ದೃಷ್ಟಿಯಿಂದ ದೈನಂದಿನ ಬಳಕೆಯ ಪರಿಭಾಷೆ, ತಾಂತ್ರಿಕ ಪರಿಭಾಷೆ ಮುಂತಾದ ಅಂಶಗಳನ್ನು ಒಳಗೊಂಡ ‘ಕ್ರಿಯಾತ್ಮಕ ಕನ್ನಡ’ವನ್ನು ಒಂದು ವಿಷಯವಾಗಿ ಎಲ್ಲ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕಲಿಸುವ ಬಗ್ಗೆ ಸೂಕ್ತ ವ್ಯವಸ್ಥೆಯಾಗಬೇಕು. ಪರಿಣಿತರ ಜೊತೆ ಚರ್ಚಿಸಿ ಪಠ್ಯ ಸ್ವರೂಪವನ್ನು ನಿರ್ಧರಿಸಬಹುದು.

ಕೃಷಿ ವಿಶ್ವವಿದ್ಯಾಲಯದಲ್ಲಿ ಕನ್ನಡ

(ಅ) ತಾಂತ್ರಿಕ ಮತ್ತು ವೈದ್ಯಕೀಯ ವೃತ್ತಿ ಶಿಕ್ಷಣಗಳಲ್ಲಿ ಮೊದಲನೇ ಒಂದು ವರ್ಷ ಅಥವಾ ಎರಡು ಸೆಮಿಸ್ಟರ್‌ಗಳ ಅವಧಿಗೆ ಕನ್ನಡವನ್ನು ಒಂದು ಪಠ್ಯ ವಿಷಯವನ್ನಾಗಿ ಕಲಿಸುತ್ತಿರುವಂತೆ ಕೃಷಿ ವಿಶ್ವವಿದ್ಯಾಲಯದಲ್ಲೂ ಕಲಿಸಬೇಕು.

(ಆ) ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಕನ್ನಡ ಮಾಧ್ಯಮ ವಿಭಾಗವಿರಬೇಕೆಂಬ ಬಗ್ಗೆ ತಾತ್ವಿಕವಾಗಿ ಒಪ್ಪಲಾಗಿದೆ. ಆದರೆ ಅನುಷ್ಠಾನದ ಅಡಚಣೆಗಳು ಇರುವಂತೆ ಕಾಣುತ್ತಿದೆ. ಪ್ರತ್ಯೇಕ ಕನ್ನಡ ಮಾಧ್ಯಮ ವಿಭಾಗವನ್ನು ಆರಂಭಿಸಿ ಸೂಕ್ತ ಪ್ರಕಟಣೆ ನೀಡಬೇಕು. ಅನುಷ್ಠಾನವಾಗಬೇಕು.

ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ

(ಅ) ತಾಂತ್ರಿಕ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಿರುವ ಮಾದರಿಯಲ್ಲೇ ಕನ್ನಡವನ್ನು ಮೊದಲ ಒಂದು ವರ್ಷ ಅಥವಾ ಎರಡು ಸೆಮಿಸ್ಟರ್‌ನ ಅವಧಿಗೆ ಪಠ್ಯ ವಿಷಯವನ್ನಾಗಿಸಬೇಕು.

(ಆ) ಕನ್ನಡ ಮಾಧ್ಯಮ ವಿಭಾಗವನ್ನು ಆರಂಭಿಸಬೇಕು.

ಬಿ.ಇಡಿ.ಯ ಪ್ರವೇಶ ಪರೀಕ್ಷೆಯಲ್ಲಿ ಕನ್ನಡ

ಬಿ.ಇಡಿ. ಪ್ರವೇಶ ಪರೀಕ್ಷೆಗೆ ಅನೇಕ ‘ವಿಷಯ ಸಮೂಹ’ಗಳನ್ನು ನಿಗದಿಪಡಿಸಲಾಗಿದೆ. (ಉದಾಹರಣೆ – ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ, ಚರಿತ್ರೆ ಇದು ಒಂದು ಗುಂಪು ಎಂದು ಕೊಳ್ಳಬಹುದು.) ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಸಂಘ, ಕೆಲವು ಶಾಸಕರು, ಸಾಹಿತಿಗಳು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯದ ಫಲವಾಗಿ ನಾಲ್ಕು ವಿಷಯ ಸಮೂಹಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಸೇರಿಸಲಾಗಿದೆ. ಪರಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ಪ್ರಮಾಣದ ‘ವಿಷಯ ಸಮೂಹ’ಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಸೇರಿಸಿಲ್ಲ. ಇದು ತಪ್ಪು. ಗರಿಷ್ಠ ಪ್ರಮಾಣದ ‘ವಿಷಯಸಮೂಹ’ಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಸೇರಿಸಬೇಕು. ಕನ್ನಡ ವಿಷಯಕ್ಕೆ ಗರಿಷ್ಠ ಆದ್ಯತೆಯಿರಬೇಕು. ಕನ್ನಡದ ಜೊತೆಗೆ ಬೇರೆ ವಿಷಯಗಳು ಇರಲಿ.

ಕಂಪ್ಯೂಟರ್ ಕಲಿಕೆ ಮತ್ತು ಕನ್ನಡ

ಕಂಪ್ಯೂಟರ್ ಎಂದಕೂಡಲೇ ‘ಇಂಗ್ಲಿಷ್‌’ ಎಂಬಂತಹ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಕಂಪ್ಯೂಟರ್‌ಗೆ ನಿರ್ದಿಷ್ಟ ಭಾಷೆಯಿಲ್ಲ. ಯಾವ ಭಾಷೆಯನ್ನು ಅಳವಡಿಸುತ್ತೇವೆಯೋ ಅದು ಆ ಭಾಷೆಯದಾಗುತ್ತದೆ. ಈಗ ಅನೇಕ ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕಂಪ್ಯೂಟರ್ ತರಗತಿಗಳನ್ನು ನಡೆಸುತ್ತಿದ್ದು ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಕಂಪ್ಯೂಟರ್ ತರಗತಿಗಳು ನಡೆಯುವ ಎಲ್ಲ ಕಡೆಯೂ ‘ಕನ್ನಡ’ ಅಗತ್ಯ ಕಲಿಕಾ ವಿಷಯವಾಗಿರಬೇಕು. ಕನ್ನಡ ಲಿಪಿ ತಂತ್ರಾಂಶವನ್ನು ಅಳವಡಿಸಿಕೊಂಡು ಕಲಿಸಬೇಕು.

ಸರ್ಕಾರಿ ಕಾಲೇಜುಗಳಿಗೆ ವೃತ್ತಿಪರ ಕೋರ್ಸುಗಳು

ಲಾಭದಾಯಕ ವೃತ್ತಿಪರ ಕೋರ್ಸುಗಳನ್ನು (ಬಿ.ಸಿ.ಎ, ಎಂ.ಬಿ.ಎ; ಬಯೊಟೆಕ್ ಇತ್ಯಾದಿ ಎಲ್ಲಾ ಕೋರ್ಸುಗಳು) ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೊಡಲಾಗುತ್ತಿದೆ. ಈ ವಿಷಯದಲ್ಲಿ ಸರ್ಕಾರಿ ಕಾಲೇಜುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ಈ ರೀತಿಯ ವೃತ್ತಿಪರ ಕೋರ್ಸುಗಳಿಗೆ ಹೆಚ್ಚು ಹಣ ತೆತ್ತು ಪ್ರವೇಶ ಪಡೆಯುವುದು ಬಡವಿದ್ಯಾರ್ಥಿಗಳಿಗೆ ಕನಸಿನ ಮಾತೇ ಸರಿ. ಹೀಗಿರುವಾಗ ಸರ್ಕಾರವು ಸರ್ಕಾರಿ ಕಾಲೇಜುಗಳಿಗೆ ವೃತ್ತಿಪರ ಕೋರ್ಸುಗಳನ್ನು ಆದ್ಯತೆಯ ಮೇಲೆ ಕೊಟ್ಟು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ನೀತಿ ಯನ್ನು ಸಾಬೀತುಪಡಿಸಬೇಕು. ಸರ್ಕಾರಿ ಕಾಲೇಜುಗಳನ್ನು ಎಲ್ಲೂ ಪ್ರವೇಶ ಸಿಕ್ಕದವರ ಮತ್ತು ಬಡ ವಿದ್ಯಾರ್ಥಿಗಳ ಕಲಿಕಾ ಕೇಂದ್ರಗಳನ್ನಾಗಿ ಮಾತ್ರ ಉಳಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡುವ ಅವಮಾನ, ಸರ್ಕಾರವು ಎಲ್ಲ ವಿಷಯಗಳಲ್ಲೂ ತನ್ನ ಕಾಲೇಜುಗಳಿಗೆ ಆದ್ಯತೆ ನೀಡಬೇಕು. ವಿಶ್ವವಿದ್ಯಾಲಯಗಳೂ ಅಷ್ಟೇ; ತನ್ನ ಸ್ನಾತಕೋತ್ತರ ಕೇಂದ್ರಗಳನ್ನು ನಿರ್ಲಕ್ಷಿಸಿ ಬೇರೆಯವರಿಗೆ ಲಾಭ ಮಾಡಿಕೊಡುವುದು ಸರಿಯಲ್ಲ.

ಕನ್ನಡದಲ್ಲಿ ವಿಜ್ಞಾನ ಮತ್ತು ಮಾನವಿಕ ಗ್ರಂಥಗಳು

ಕನ್ನಡದ ಮೂಲಕ ಕಲಿಯಿರಿ ಎಂದು ಹೇಳುವಾಗ ಕನ್ನಡದಲ್ಲಿ ಎಲ್ಲ ವಿಷಯಗಳನ್ನು ತಂದಿದ್ದೇವೆಯೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ವಿಜ್ಞಾನಕ್ಕೆ ಮತ್ತು ಮಾನವಿಕಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳು, ಪರಾಮರ್ಶನ ಗ್ರಂಥಗಳು ಕನ್ನಡದಲ್ಲಿ ಬರಬೇಕು. ಅನೇಕ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು. ಕನ್ನಡ ವಿಶ್ವವಿದ್ಯಾಲಯವು ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಕನ್ನಡ ವಿಶ್ವವಿದ್ಯಾಲಯವನ್ನು ಒಳಗೊಂಡಂತೆ ರಾಜ್ಯದ ವಿಶ್ವವಿದ್ಯಾಲಯಗಳು ಈ ದಿಕ್ಕಿನಲ್ಲಿ ಕೆಲವು ಪ್ರಯತ್ನಗಳನ್ನು ಮಾಡಿವೆ. ಆದರೆ ಅಗತ್ಯ ಪ್ರಮಾಣದಲ್ಲಿ ಆಗಿಲ್ಲ. ಯೋಜಿತ ವಿಧಾನದಲ್ಲಿ ನಡೆಯಬೇಕಾದ ಅಗಾಧ ಪ್ರಮಾಣದ ಕೆಲಸಕ್ಕಾಗಿ ಈ ಕ್ಷೇತ್ರ ಕಾದಿದೆ.

ಪ್ರಸಾರಾಂಗಗಳ ಪುನಶ್ಚೇತನ

ಎಲ್ಲ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ತಕ್ಕಮಟ್ಟಿಗೆ ಕೆಲಸ ಮಾಡುತ್ತಿವೆ. ಪುಸ್ತಕ ಪ್ರಕಟಣೆಯ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯ ಈಗ ಮುನ್ನಡೆ ಸಾಧಿಸಿದೆ. ಆದರೆ ಎಲ್ಲ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಆರ್ಥಿಕ ಕೊರತೆ, ಚೈತನ್ಯಶೀಲ ಯೋಜನೆಗಳ ಅಭಾವದಿಂದ ಕೊರಗುತ್ತಿವೆ. ಕೆಲಸ ಮಾಡುವ ಮತ್ತು ಕನಸು ಕಾಣುವ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಇಲ್ಲವೆಂದು ಇದರರ್ಥವಲ್ಲ. ವಿಶ್ವವಿದ್ಯಾಲಯಗಳು ಪ್ರಸಾರಾಂಗಗಳಿಗೆ ಮೊದಲಿನ ಪ್ರಾಶಸ್ಯ ನೀಡುತ್ತಿಲ್ಲವೆಂಬ ಭಾವನೆ ಬೆಳೆಯುತ್ತಿದೆ. ಪ್ರಸಾರಾಂಗಗಳು ದೈನಂದಿನ ಯಾಂತ್ರಿಕ ಕೆಲಸಗಳನ್ನು ನಿರ್ವಹಿಸುವ ವಿಭಾಗಗಳಲ್ಲ. ಆದ್ದರಿಂದ ಪ್ರಸಾರಾಂಗಗಳನ್ನು ಪುನಶ್ಚೇತನಗೊಳಿಸಿ ಕನ್ನಡದ ಮೂಲಕ ಜ್ಞಾನ ಚೈತನ್ಯವನ್ನು ಬೆಳೆಸುವ ಕ್ರಿಯೆಗೆ ವಿಶ್ವವಿದ್ಯಾಲಯಗಳು ಅಗತ್ಯ ಯೋಜನೆಗಳನ್ನು ರೂಪಿಸಬೇಕು. ಅನುಷ್ಠಾನಗೊಳಿಸಬೇಕು.

ಸಾಮಾನ್ಯ ಶಿಕ್ಷಣದ ಉಳಿವು
ವೃತ್ತಿ ಶಿಕ್ಷಣದ ಭರಾಟೆಯಲ್ಲಿ ಸಾಮಾನ್ಯ ಶಿಕ್ಷಣವನ್ನು ಕೇಳುವವರೇ ಇಲ್ಲ. ಸಾಮಾನ್ಯ ಶಿಕ್ಷಣಕ್ಕೆ ಆದ ಹಿನ್ನಡೆಯಲ್ಲಿ ಕನ್ನಡದ ಹಿನ್ನಡೆಯೂ ಸೇರಿದೆ. ಎಲ್ಲರೂ ವೃತ್ತಿ ಶಿಕ್ಷಣಕ್ಕೆ ಆಕರ್ಷಿತ ರಾಗುತ್ತ ಬಿ.ಎ; ಬಿ.ಎಸ್ಸಿ.ಯಂತಹ ಸಾಮಾನ್ಯ ಶಿಕ್ಷಣ ಕೋರ್ಸುಗಳು ಕೀಳರಿಮೆಯ ಕೇಂದ್ರಗಳಾಗುತ್ತಿವೆ. ವೃತ್ತಿ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣದ ನಡುವಿನ ಅಸಮತೋಲನವನ್ನು ಹೋಗಲಾಡಿಸಿ ಸಾಮಾನ್ಯ ಶಿಕ್ಷಣವನ್ನು ಆಕರ್ಷಕ ಹಾಗೂ ಉಪಯುಕ್ತಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ಸರ್ಕಾರ ಮತ್ತು ಸಾರ್ವಜನಿಕರು ಸೇರಿ ಸಾಮಾನ್ಯ ಶಿಕ್ಷಣವನ್ನು ಶಕ್ತಿಯುತವಾಗಿ ಉಳಿಸಿ ಬೆಳೆಸುವ ಮಾರ್ಗೋಪಾಯಗಳನ್ನು ಹುಡುಕಬೇಕು. ವೃತ್ತಿ ಶಿಕ್ಷಣವೊಂದೇ ಶಿಕ್ಷಣವಲ್ಲ ಎಂಬ ವಾತಾವರಣ ಮೂಡಬೇಕು.

ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳು
ಗ್ಯಾಟ್ ಒಪ್ಪಂದದ ಪ್ರಕಾರ ಉನ್ನತ ಶಿಕ್ಷಣವನ್ನೂ ಒಳಗೊಂಡಂತೆ ಒಟ್ಟು ಐದು ರೀತಿಯ ಶಿಕ್ಷಣ ವಿಭಾಗಗಳು ಗ್ಯಾಟ್ಸ್ (General Agreement on Trade and Tariffs) ಹಿಡಿತಕ್ಕೆ ಬರಲಿವೆ. ಅವು ಹೀಗಿವೆ : ೧. ಪ್ರಾಥಮಿಕ ಶಿಕ್ಷಣ ೨. ಸೆಕೆಂಡರಿ ಶಿಕ್ಷಣ ೩. ಉನ್ನತ ಶಿಕ್ಷಣ ೪. ವಯಸ್ಕರ ಶಿಕ್ಷಣ ೫. ಇತರೆ ಶಿಕ್ಷಣ ಸೇವೆಗಳು. ಸದ್ಯಕ್ಕೆ ಉನ್ನತ ಶಿಕ್ಷಣದ ಮೇಲೆ ಗ್ಯಾಟ್ ಒಪ್ಪಂದದ ಹಿಡಿತ ಹೆಚ್ಚಾಗುತ್ತಿದೆ. ವಿದೇಶಿ ವಿಶ್ವವಿದ್ಯಾಲಯಗಳು ಇಲ್ಲಿನ ಶಿಕ್ಷಣ ಸಂಸ್ಥೆ ಗಳ ಜೊತೆಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ಇಲ್ಲಿಯವರೆಗೆ ನಮ್ಮ ಶಿಕ್ಷಣ ಸಂಸ್ಥೆಗಳು ಸುಮಾರು ೧೩೧ ಒಪ್ಪಂದಗಳನ್ನು ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಇವುಗಳಲ್ಲಿ ಶೇ. ೬೦ ಬಿಸಿನೆಸ್‌ ಮೇನೇಜ್‌ಮೆಂಟ್, ಶೇ. ೧೫ – ಹೋಟೆಲ್ ಮೇನೇಜ್‌ಮೆಂಟ್, ಶೇ. ೧೦ – ಫ್ಯಾಷನ್ ಡಿಸೈನಿಂಗ್, ಶೇ. ೧೦ ಆರ್ಕಿಟೆಕ್ಚರ್, ಶೇ. ೫ ಸಮಾಜ ವಿಜ್ಞಾನಗಳ ಕೋರ್ಸುಗಳಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಶಿಕ್ಷಣವನ್ನು ‘ಜ್ಞಾನ ಕೈಗಾರಿಕೆ’ (Knowledge Industry) ಎಂದು ಕರೆಯುವ ಗ್ಯಾಟ್ಸ್‌ನ ದುಷ್ಪರಿಣಾಮ ಈ ಶೇಕಡಾವಾರು ವಿವರಣೆಯಲ್ಲಿ ಸ್ಪಷ್ಟವಾಗಿದೆ. ಸಮಾಜಜ್ಞಾನಗಳು, ಭಾಷೆ-ಸಾಹಿತ್ಯಾದಿ ವಿಷಯಗಳು ಇಲ್ಲಿ ಲೆಕ್ಕಕ್ಕಿಲ್ಲ. ಎಲ್ಲವೂ ವ್ಯಾಪಾರ ಕೇಂದ್ರಿತ, ಒಟ್ಟು ಮನೋಧರ್ಮವೇ ಲಾಭಕೋರತನದ ನೆಲೆ. ಈ ರೀತಿಯ ಒಪ್ಪಂದಗಳಲ್ಲದೆ ನೇರವಾಗಿ ವಿದೇಶಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಗ್ಯಾಟ್ ಪ್ರಕಾರ ಅವಕಾಶವಿದೆ. ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಆರಂಭವಾದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಥಳೀಯ ಚಹರೆಗಳು ನಾಶವಾಗುತ್ತವೆ. ಆದ್ದರಿಂದ ವಿದೇಶಿ ವಿಶ್ವವಿದ್ಯಾಲಯ ಹಾಗೂ ವಿದ್ಯಾಸಂಸ್ಥೆಗಳಿಗೆ ಕಡಿವಾಣ ಹಾಕಿ ಕನ್ನಡ ಮತ್ತು ಮಾತೃಭಾಷೆಗಳ ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ಜೀವಶಕ್ತಿಗಳನ್ನು ಬೆಳೆಸುವುದು ಅಗತ್ಯ.

ಇದೇ ಮಾತನ್ನು ಖಾಸಗಿ ವಿಶ್ವವಿದ್ಯಾಲಯಗಳ ಬಗ್ಗೆಯೂ ಹೇಳಬೇಕಾಗುತ್ತದೆ. ಹಿಂದಿನ ಎನ್.ಡಿ.ಎ. ಸರ್ಕಾರದ ಆಡಳಿತಾವಧಿಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಕ್ತ ಅವಕಾಶ ಸಿಕ್ಕಿತು. ವಿದ್ಯಾ ಉದ್ಯಮಗಳು ಕೆಲವು ರಾಜ್ಯಗಳಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ನಾಮಫಲಕಗಳನ್ನು ನೇತುಹಾಕಿ ‘ವಿದ್ಯಾ ವ್ಯಾಪಾರ’ಕ್ಕೆ ನಿಂತವು. ಇತ್ತೀಚೆಗೆ ಛತ್ತೀಸಗಢ ರಾಜ್ಯದ ನೂರಕ್ಕೂ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳನ್ನು ರದ್ದು ಮಾಡಿ ಸುಪ್ರೀಂಕೋರ್ಟು ನೀಡಿದ ತೀರ್ಪನ್ನು ಇಲ್ಲಿ ಗಮನಿಸಬೇಕು. ಈ ತೀರ್ಪು ಖಾಸಗಿ ವಿಶ್ವವಿದ್ಯಾಲಯಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮಹತ್ವದ ದಾಖಲೆಯೆಂದರೆ ತಪ್ಪಾಗಲಾರದು. ಹೀಗೆ ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಖಾಯಂ ಕಡಿವಾಣ ಹಾಕುವುದು ಅಗತ್ಯ.

ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ಶಿಕ್ಷಣ ಪದ್ಧತಿಗೆ ಮಾಡುವ ಅನಾಹುತಗಳನ್ನು ಅರಿತು ಪ್ರತಿರೋಧ ಒಡ್ಡಬೇಕು. ಈ ಬಗ್ಗೆ ಶೀಘ್ರ ಚಿಂತನೆ ಮತ್ತು ಕ್ರಿಯೆಗಳಿಗೆ ಮುಂದಾಗಬೇಕು.

೨. ಉದ್ಯೋಗ – ಉದ್ಯಮ ಮತ್ತು ಕನ್ನಡ

ಕನ್ನಡವನ್ನು ಕೇವಲ ಅಭಿಮಾನದ ಪ್ರಶ್ನೆಯಾಗಿ ನೋಡಿದರೆ ಸಾಲದು. ನನ್ನ ದೃಷ್ಟಿಯಲ್ಲಿ ಕನ್ನಡವನ್ನು ಅನ್ನದ ಪ್ರಶ್ನೆಯನ್ನಾಗಿ ಪರಿಗಣಿಸಬೇಕು. ಉದ್ಯೋಗ ಮತ್ತು ಕನ್ನಡಕ್ಕೆ ಸಂಬಂಧವಿರ ಬೇಕು. ಆಗ ಕನ್ನಡಿಗರೂ ಉಳಿಯುತ್ತಾರೆ, ಕನ್ನಡವೂ ಉಳಿಯುತ್ತದೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ
ಜಾಗತೀಕರಣ, ಆರ್ಥಿಕ ಉದಾರೀಕರಣ ಮುಂತಾದ ಹೆಸರುಗಳ ಮೂಲಕ ನಮ್ಮ ದೇಶದ ಮಿಶ್ರ ಆರ್ಥಿಕ ಪದ್ಧತಿಯನ್ನು ಮೂಲೆಗುಂಪು ಮಾಡಿ ಮುಕ್ತ ಆರ್ಥಿಕ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದೆ. ಇದರ ಫಲವಾಗಿ ಸಂಪೂರ್ಣ ಬಂಡವಾಳ ತೊಡಗಿಸಿ ಸರ್ವಸ್ವಾತಂತ್ರ್ಯ ವನ್ನು ಪಡೆಯುವ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದೊಳಕ್ಕೆ ದಾಳಿಯಿಟ್ಟು ಸಂವಿಧಾನಾತ್ಮಕ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿವೆ. ಸಂವಿಧಾನದ ಪ್ರಕಾರ ಜನರಿಂದ ಆಯ್ಕೆಯಾದ ಸರ್ಕಾರವು ರೂಪಿಸುವ ನೀತಿ-ನಿಯಮಗಳನ್ನು ಸಮಾಜದ ವಿವಿಧ ವಲಯಗಳು ಅನುಸರಿಸ ಬೇಕಾಗುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅವರದೇ ನೀತಿ ನಿಯಮಗಳಿವೆ. ಸರ್ಕಾರದ ನಿಯಂತ್ರಣ ಇರಬಾರದು ಎಂಬುದೇ ಆರ್ಥಿಕ ಉದಾರೀಕರಣದ ಮೂಲ ನೀತಿ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರದ ನಿಯಂತ್ರಣಕ್ಕೆ ಒಳಗಾಗುವ ಬದಲು ಸರ್ಕಾರವನ್ನೇ ನಿಯಂತ್ರಿಸುವಷ್ಟು ಬಲಾಡ್ಯವಾಗಿವೆ. ವಿಶೇಷವಾಗಿ ಉದ್ಯೋಗದ ವಿಷಯದಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ನೀತಿ ನಿಯಮಗಳು ಸಹ ಈ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂಬ ನಿಯಮವಿಲ್ಲ. ಅವರು ತಾವಾಗಿ ಕೊಡುವುದೂ ಇಲ್ಲ. ಮೀಸಲಾತಿ ನೀತಿ ಅವರಿಗೆ ಬೇಕಾಗಿಲ್ಲ.

ಇಲ್ಲಿ ಡಾ. ಸರೋಜಿನಿ ಮಹಿಷಿ ಸಮಿತಿಯ ವರದಿಯನ್ನು ಪ್ರಸ್ತಾಪ ಮಾಡುವುದು ಉಚಿತವಾದುದು. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆಯಿರಬೇಕೆಂಬ ನೀತಿಯ ನೆಲೆಯಲ್ಲಿ ಖಚಿತ ಶಿಫಾರಸ್ಸುಗಳನ್ನು ಮಾಡಿದ ಈ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನಾರ್ಹರು. ೪-೮-೧೯೮೩ರ ಆದೇಶದ ಪ್ರಕಾರ ‘ವಾಣಿಜ್ಯ ಬ್ಯಾಂಕುಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆ ಗಳಲ್ಲಿ ಕರ್ನಾಟಕದ ಜನರ ಉದ್ಯೋಗದ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ಈ ಸಮಿತಿಯನ್ನು ರಚಿಸಲಾಯಿತು. ಅದೇ ಸಂಖ್ಯೆಯ ದಿನಾಂಕ ೨೮-೬-೧೯೮೫ರ ಆದೇಶದಲ್ಲಿ ಈ ಸಮಿತಿಯ ವ್ಯಾಪ್ತಿಗೆ ಖಾಸಗಿ ಉದ್ಯಮಗಳನ್ನೂ ಸೇರಿಸಲಾಯಿತು. ಈ ಸಮಿತಿಯು ಅಭಿಪ್ರಾಯಪಟ್ಟಂತೆ ಸರ್ಕಾರವು “ಕನ್ನಡಿಗರೆಂದರೆ ಅವರಿಗೆ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು – ಎಂದರೆ ಅವರಿಗೆ ವ್ಯಾವಹಾರಿಕ ಕನ್ನಡ ಜ್ಞಾನ ಇರಬೇಕು” ಎಂದು ದಿನಾಂಕ ೨-೨-೧೯೮೫ರ ಆದೇಶ ಸಂಖ್ಯೆ ಡಿಪಿ‌ಎ‌ಆರ್‌ ೩೭ ಎಸ್‌ಎಲ್‌ಸಿ೮೪ – ಇದರಲ್ಲಿ ಸ್ಪಷ್ಟಪಡಿಸಿತು. ಡಾ. ಸರೋಜಿನಿ ಮಹಿಷಿ ಸಮಿತಿಯು ದಿನಾಂಕ ೩೦-೧೨-೧೯೮೬ ರಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳ ಪರಿಶೀಲನೆ ಮತ್ತು ಅನುಷ್ಠಾನಕ್ಕಾಗಿ ‘ಕನ್ನಡಿಗರ ಉದ್ಯೋಗ ಸಮಿತಿ’ಯನ್ನು ಸಂಸದರಾದ ಡಾ. ವಿ. ವೆಂಕಟೇಶ್ ಅವರ ನೇತೃತ್ವದಲ್ಲಿ ರಚಿಸಲಾಯಿತು. ಒಟ್ಟಾರೆ ಈ ಎರಡೂ ಸಮಿತಿಗಳ ಶಿಫಾರಸ್ಸುಗಳನ್ನು ಆಧರಿಸಿ, ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ವಹಿಸಲಾಯಿತು. (ಸಂಖ್ಯೆ – ಸಿ‌ಆಸು‌ಇ೯ ಎಸ್.ಎಲ್.ಸಿ. ೯೦ ದಿನಾಂಕ ೨೯-೧೧-೧೯೯೦) ಅನುಷ್ಠಾನದ ಮೇಲ್ವಿಚಾರಣೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.

ಸರೋಜಿನಿ ಮಹಿಷಿ ವರದಿಯು ಒಟ್ಟು ೫೮ ಶಿಫಾರಸ್ಸುಗಳನ್ನು ಒಳಗೊಂಡಿದೆ. ೧೨ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪುವ ಅವಕಾಶ ತನಗೆ ಇಲ್ಲವೆಂದು ತಿಳಿಸಿ ಕೈಬಿಟ್ಟಿದೆ. (ಶಿಫಾರಸ್ಸುಗಳ ಸಂಖ್ಯೆ ೨೨, ೨೭, ೩೨, ೩೭, ೩೮, ೩೯, ೪೭, ೫೧, ೫೨, ೫೪, ೫೫ ಮತ್ತು ೫೬) ಉಳಿದ ಶಿಫಾರಸ್ಸುಗಳ ಅನುಷ್ಠಾನಕ್ಕೆ ಕ್ರಮಕೈಗೊಂಡಿದೆ. ದಿನಾಂಕ ೨೩-೧೧-೧೯೯೦ರ ಆದೇಶ ಸಂಖ್ಯೆ – ಸಿ‌ಆಸು‌ಇ ೯ ಎಸ್.ಎಲ್.ಸಿ. ೯೦- ಇದರಲ್ಲಿ ಡಾ. ಸರೋಜಿನಿ ಮಹಿಷಿ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡು ಅನುಷ್ಠಾನಕ್ಕೆ ಸೂಚಿಸಲಾಗಿದೆ. ಇದರ ಅನ್ವಯ ದಿನಾಂಕ ೧೮-೧-೧೯೯೧ ರಂದು ಹೊರಟ ಆದೇಶವು (ಸಂಖ್ಯೆ ಸಿ‌ಆಸು‌ಇ (ಸಾಕಾಮ) ೧೯೯ ಎಂಇ‌ಎ೯೦) ಹೀಗೆ ಸೂಚಿಸುತ್ತದೆ. “ರಾಜ್ಯ ಸಾರ್ವಜನಿಕ ಉದ್ದಿಮೆಗಳಲ್ಲಿ ಎಲ್ಲಾ ಹಂತಗಳಲ್ಲಿ ಶೇಕಡ ೧೦೦ರಷ್ಟು ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಬೇಕು. ವಿಶೇಷ ಪರಿಣತಿ ಬೇಕಾಗಿರುವ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆದು ಆನಂತರ ಮಾತ್ರ ಈ ನಿರ್ಬಂಧ ದಿಂದ ವಿನಾಯಿತಿಯನ್ನು ನೀಡಬಹುದು” ಜೊತೆಗೆ ಕನ್ನಡ ಭಾಷಾಜ್ಞಾನವಿರಬೇಕೆಂಬ ನಿಯಮವನ್ನು ರೂಪಿಸಲು ಸಂಬಂಧಪಟ್ಟವರಿಗೆ ಈ ಆದೇಶವು ಸೂಚಿಸುತ್ತದೆ. ದಿನಾಂಕ ೧೮-೧-೧೯೯೧ ರಂದು ಹೊರಡಿಸಿದ ಆದೇಶ ಸಂಖ್ಯೆ ಸಿ‌ಐ ೪೫ ಐ‌ಎರ್ಪಿ೦ – ಇದರಲ್ಲಿ “ಕೇಂದ್ರ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ನೆಲ, ಜಲ, ವಿದ್ಯುಚ್ಛಕ್ತಿ ಮುಂತಾದವುಗಳನ್ನು ನೀಡುವಾಗ ಸದರಿ ಕೇಂದ್ರ ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇಕಡ ೧೦೦ ರಷ್ಟು ಮತ್ತು ‘ಬಿ’ ಹುದ್ದೆಗಳಿಗೆ ಶೇ. ೮೦ರಷ್ಟು ಕಡಿಮೆ ಇಲ್ಲದಂತೆ ಮತ್ತು ಗ್ರೂಪ್ ‘ಎ’ ಹುದ್ದೆಗಳಿಗೆ ಶೇಕಡ ೬೫ರಷ್ಟು ಕನ್ನಡಿಗರನ್ನು ನೇಮಿಸಿಕೊಳ್ಳಬೇಕೆಂಬ ಷರತ್ತನ್ನು ಹಾಕಬೇಕು” ಎಂದು ತಿಳಿಸಲಾಗಿದೆ. ಸರ್ಕಾರದ ಯಾವುದೇ ಸಹಾಯವನ್ನು ಪಡೆಯುವ ಖಾಸಗಿ ಉದ್ದಿಮೆಗಳಿಗೂ ಇದು ಅನ್ವಯಿಸುತ್ತದೆಯೆಂದು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಇರುವ ಪದ್ಧತಿಯಂತೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವ ಬಗ್ಗೆ ಪ್ರತಿವರ್ಷ ಘೋಷಣೆ ಪ್ರಪತ್ರ (ಡಿಕ್ಲರೇಷನ್) ಪಡೆಯಬೇಕೆಂದು ಈ ಆದೇಶದಲ್ಲಿ ಸೂಚಿಸಲಾಗಿದೆ.

ರಾಜ್ಯದ ಸಾರ್ವಜನಿಕ ಉದ್ದಿಮೆ ಮತ್ತು ಸರ್ಕಾರದ ಸಹಾಯ ಪಡೆಯುವ ರಾಜ್ಯದ ಖಾಸಗಿ ಉದ್ದಿಮೆಗಳಲ್ಲಿ ಸರ್ಕಾರದ ಆದೇಶಗಳ ಅನುಷ್ಠಾನವಾಗುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆಗಳು ನಡೆಯುತ್ತಿವೆ. ಪರಿಶೀಲನೆ ಆಧಾರಿತ ವರದಿಗಳ ಪ್ರಕಾರ ಸಾಕಷ್ಟು ಪ್ರಮಾಣದ ಪ್ರಗತಿಯಾಗಿದೆ. ರಾಜ್ಯ ಸರ್ಕಾರದ ವ್ಯಾಪ್ತಿಯ ಉದ್ದಿಮೆಗಳ ಮಟ್ಟಿಗೆ ಅನುಷ್ಠಾನದ ಪ್ರಗತಿಯನ್ನು ಖಂಡಿತ ನಂಬಬಹುದಾಗಿದೆ. ಆದರೆ ಕೇಂದ್ರೋದ್ಯಮಗಳ ಬಗ್ಗೆ ಇದೇ ಮಾತನ್ನು ಹೇಳುವಂತಿಲ್ಲ. ಕೇಂದ್ರ ಸರ್ಕಾರದ ಉದ್ದಿಮೆಗಳು ತಮ್ಮ ಉದ್ಯೋಗ ನೀತಿ, ನಿಯಮಾವಳಿಗಳನ್ನು ಕೇಂದ್ರ ಸರ್ಕಾರದಿಂದ ಪಡೆಯುತ್ತವೆ. ಅದರಂತೆ ನಡೆದುಕೊಳ್ಳುತ್ತವೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸುವಷ್ಟು ಸ್ವಾಯತ್ತವಾಗಿವೆಯೇ? ಈ ಪ್ರಶ್ನೆ ನನಗೆ ಮುಖ್ಯ ವೆನಿಸುತ್ತದೆ. ಜೊತೆಗೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ದಿಮೆ ಅಥವಾ ಕಚೇರಿಗಳಲ್ಲಿ ನಡೆಯುವ ನೇಮಕಾತಿಗೆ ನಿಯಮಗಳನ್ನು ರೂಪಿಸುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂಬುದನ್ನು ನಾವಿಲ್ಲಿ ಮರೆಯಬಾರದು. ಒಕ್ಕೂಟ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ ಒಪ್ಪಿಕೊಂಡಿದ್ದರೂ ಆಡಳಿತಾತ್ಮಕವಾಗಿ ಕೇಂದ್ರ ಸರ್ಕಾರದ ನೇಮಕಾತಿಗಳಿಗೆ ಷರತ್ತುಗಳನ್ನು ವಿಧಿಸುವ ಅಧಿಕಾರ ವ್ಯಾಪ್ತಿ ರಾಜ್ಯ ಸರ್ಕಾರಕ್ಕೆ ಇದೆಯೆ ಎಂಬ ಬಗ್ಗೆ ಯೋಚಿಸಬೇಕು. ‘ಸರೋಜಿನಿ ಮಹಿಷಿ ವರದಿಯು ಜಾರಿಗೆ ಬರಲಿ’ ಎಂದು ಈಗಲೂ ಒತ್ತಾಯಿಸುವವರು ಅನೇಕ ಅಂಶಗಳು ಜಾರಿಯಾಗಿರುವುದನ್ನು ಒಳಗೊಂಡಂತೆ ರಾಜ್ಯ ಸರ್ಕಾರದ ಇತಿಮಿತಿಗಳನ್ನು ಗಮನಿಸಿ ಒತ್ತಾಯದ ಸ್ವರೂಪವನ್ನು ನಿರ್ಧರಿಸಿಕೊಳ್ಳಬೇಕು.

ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಇಂದಿನ ಸಂದರ್ಭದಲ್ಲಿ ನಾವು ಒತ್ತಾಯ ಮಾಡಬೇಕಾದ್ದು ಯಾವುದಕ್ಕೆ, ಯಾರನ್ನು ಎಂಬ ವಿಷಯಗಳ ಬಗ್ಗೆ ಸ್ಪಷ್ಟ ನಿಲುವು ತಾಳಬೇಕಾಗಿದೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ಸಿಗಬೇಕು. ಇದು ರಾಜ್ಯ ಸರ್ಕಾರದ ನೀತಿಯಾಗಬೇಕು. ಕೇಂದ್ರ ಸರ್ಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವುದನ್ನು ಪುರಸ್ಕರಿಸಬೇಕು. ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಸ್ಥಳೀಯರ ಪರವಾಗಿ ಷರತ್ತುಗಳನ್ನು ವಿಧಿಸಲು ಸಾಧ್ಯವಾಗಬೇಕು. ಬಹುರಾಷ್ಟ್ರೀಯ ಕಂಪನಿಗಳು ಬರದೇ ಹೋದರೆ ರಾಜ್ಯದ ಅವನತಿಯಾಗುತ್ತದೆಯೆಂಬ ಹುಸಿ ಅಳಲನ್ನು ಕಿತ್ತೊಗೆದು ರಾಜ್ಯ ಸರ್ಕಾರವು ದಿಟ್ಟವಾಗಿ ನಡೆದುಕೊಳ್ಳಬೇಕಾಗುತ್ತದೆ. ಈಗ ಬಹುರಾಷ್ಟ್ರೀಯ ಕಂಪನಿಗಳನ್ನು ಮಣಿಸುವ ಹೋರಾಟಗಳು ತೀವ್ರವಾಗಬೇಕು.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಗರಿಷ್ಠ ಆದ್ಯತೆಯನ್ನು ಕೇಳಿದರಷ್ಟೇ ಸಾಲದು. ಈ ಕಂಪನಿಗಳ ಉದ್ದಿಮೆಗಳಲ್ಲಿರುವ ಉದ್ಯೋಗದ ಸ್ವರೂಪ, ವಿವಿಧ ಹುದ್ದೆಗಳ ಮಾಹಿತಿಗಳನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಕನ್ನಡಿಗರನ್ನು ಸಿದ್ಧಗೊಳಿಸುವ ಕೆಲಸವನ್ನು ಮಾಡಬೇಕು. ಸೂಕ್ತ ತರಬೇತಿ ನೀಡಬೇಕು.

ಬಹುರಾಷ್ಟ್ರೀಯ ಕಂಪನಿಗಳ ವ್ಯಾಪ್ತಿ, ಕೇಂದ್ರ-ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರ, ಈ ಕಂಪನಿಗಳ ಉದ್ಯೋಗಾವಕಾಶಗಳ ಸಂಪೂರ್ಣ ಮಾಹಿತಿ, ಅವುಗಳಿಗೆ ಬೇಕಾದ ವಿದ್ಯಾರ್ಹತೆ, ಅದಕ್ಕಾಗಿ ಕನ್ನಡಿಗರನ್ನು ಸಜ್ಜುಗೊಳಿಸುವ ವಿಧಾನ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಮತ್ತು ಸಾಮಾಜಿಕ ಮೀಸಲಾತಿ ಇಂತಹ ಎಲ್ಲ ವಿಷಯಗಳನ್ನು ಮೂರ್‍ನಾಲ್ಕು ತಿಂಗಳಲ್ಲಿ ಅಧ್ಯಯನ ನಡೆಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ಮಾರ್ಗೋಪಾಯಗಳನ್ನು ಸೂಚಿಸುವ ಶಾಸನಬದ್ಧ ಆಯೋಗವೊಂದರ ಅಗತ್ಯವಿದೆ.

ಕನ್ನಡಿಗರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆದ್ಯತೆಯ ಮೇಲೆ ಉದ್ಯೋಗ – ಇದು ನಮ್ಮ ನೀತಿ ಮತ್ತು ಹೋರಾಟ.

ಕನ್ನಡ ಮಾಧ್ಯಮದವರಿಗೆ ಉದ್ಯೋಗ ಮೀಸಲಾತಿ
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೨೦೦೧ರ ಆರಂಭದಿಂದಲೇ ಒತ್ತಾಯಿಸುತ್ತಾ ಬಂದ ಫಲವಾಗಿ ಎಸ್.ಎಂ. ಕೃಷ್ಣ ಅವರ ನೇತೃತ್ವದ ಸರ್ಕಾರವು ಶೇ. ೫ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿ ಮಂತ್ರಿಮಂಡಲದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿತು. ಆನಂತರ ಗೆಜೆಟ್ ಪ್ರಕಟಣೆ ಯಂತಹ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಆದೇಶ ಹೊರಡಿಸಿತು. (ಆದೇಶ ಸಂಖ್ಯೆ ಡಿ.ಪಿ.ಎ.ಆರ್‌. ೭೧ ಎಸ್‌.ಆರ್‌.ಆರ್‌. ೨೦೦೧ ದಿನಾಂಕ ೨೪-೧೦-೨೦೦೨)

ಈ ಮುಂಚೆ ವೃತ್ತಿ ಶಿಕ್ಷಣ ಪ್ರವೇಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ. ೫ರಷ್ಟು ಮೀಸಲಾತಿ ನೀಡಿದ್ದನ್ನು ಇಲ್ಲಿ ನೆನೆಯಬಹುದು.

ಭಾಷೆಯ ಆಧಾರದ ಮೇಲೆ ಯಾವುದೇ ರೀತಿಯ ಮೀಸಲಾತಿ ಮತ್ತು ಆಯ್ಕೆಯಲ್ಲಿ ಅಧಿಕೃತ ಆದ್ಯತೆ ಕೊಡುವ ಆದೇಶಗಳು ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂಬುದನ್ನು ಗಮನಿಸಬೇಕು.

ಕನ್ನಡ ಮಾಧ್ಯಮ ವ್ಯಾಸಂಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮವಾಗಿ ಈ ಮಾದರಿಯ ಮೀಸಲಾತಿಗೆ ತನ್ನದೇ ಮಹತ್ವವಿದೆ.

ಕಾನೂನಿನ ಚೌಕಟ್ಟಿನಲ್ಲಿ ಊರ್ಜಿತವಾಗುವುದನ್ನು ಗಮನದಲ್ಲಿಟ್ಟುಕೊಂಡೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಬಹುದು. ಜೊತೆಗೆ ಈ ಮೀಸಲಾತಿಯನ್ನು ರಾಜ್ಯ ಸರ್ಕಾರದ ನೇಮಕಾತಿಗಲ್ಲದೆ ಖಾಸಗಿ ಉದ್ದಿಮೆಗಳಿಗೂ ವಿಸ್ತರಿಸುವಂತೆ ಕೇಳಬೇಕು.

‘ಸಿ’ ದರ್ಜೆ ನೌಕರರು ಮತ್ತು ಕನ್ನಡ

ರಾಜ್ಯ ಸರ್ಕಾರವು ತನ್ನ ಆದೇಶ ಕ್ರಮಾಂಕ : ಡಿ.ಪಿ.ಎ.ಆರ್‌. ೪೧ ಪಿ.ಓ.ಎಲ್. ೮೩ ದಿನಾಂಕ ೧೬-೭-೧೯೮೫ – ಇದರಲ್ಲಿ ‘ಸಿ’ ದರ್ಜೆ ನೌಕರರು ತಮ್ಮ ಹುದ್ದೆಗಳಿಗೆ ಆಯ್ಕೆಯಾದ ನಂತರ, ನೇಮಕಾತಿಗೆ ಮುಂಚೆ ಸರ್ಕಾರವು ಗೊತ್ತುಪಡಿಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂದು ತಿಳಿಸಿದೆ. ಈ ಆದೇಶದ ಪ್ರಕಾರ ಮೊದಲು ಆಯ್ಕೆ ನಡೆಯುತ್ತದೆ. ಹೀಗೆ ಆಯ್ಕೆಯಾದವರು ನಿರ್ದಿಷ್ಟ ಹುದ್ದೆಗೆ ಸೇರುವುದಕ್ಕೆ ಮುಂಚೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಹೇಗಿದ್ದರೂ ಹುದ್ದೆಗೆ ಆಯ್ಕೆಯಾಗಿರುವುದರಿಂದ, ಆನಂತರ ನಡೆಸುವ ಭಾಷಾ ಪರೀಕ್ಷೆಯು ತನ್ನ ಬಿಗಿ ಮತ್ತು ಮಹತ್ವವನ್ನು ಕಳೆದು ಕೊಳ್ಳುತ್ತದೆ. ಆದ್ದರಿಂದ ನಿರ್ದಿಷ್ಟ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಮಾತ್ರವೇ ‘ಸಿ’ ದರ್ಜೆ ನೌಕರಿಗೆ ಅರ್ಜಿ ಹಾಕಲು ಅರ್ಹರೆಂದು ಹೊಸ ಆದೇಶ ಹೊರಡಬೇಕು.

‘ಸಿ’ ದರ್ಜೆ ನೌಕರರು ಸಾಮಾನ್ಯವಾಗಿ ಕಚೇರಿ ಸಹಾಯಕರು, ಹೆಚ್ಚೆಂದರೆ ಶಾಖಾಧಿಕಾರಿ ಗಳ ಹಂತದವರು. ಇವರಿಗೆ ಕನ್ನಡ ಭಾಷಾ ಪರೀಕ್ಷೆಯ ಬಗ್ಗೆ ಪೂರ್ವ ಷರತ್ತು ವಿಧಿಸುವುದು ಸೂಕ್ತ. ಈ ಹಂತದ ನೌಕರರಿಗೆ ಕನ್ನಡ ಬಾರದೆ ಇದ್ದರೆ, ಕನ್ನಡವು ಆಡಳಿತ ಭಾಷೆ ಎಂಬುದಕ್ಕೆ ಏನರ್ಥ ?

ಆದ್ದರಿಂದ ಅರ್ಜಿ ಹಾಕುವುದಕ್ಕೆ ಒಂದು ಅರ್ಹತೆಯಾಗಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕೆಂಬ ಷರತ್ತನ್ನು ಸೇರಿಸಬೇಕು.

ಕರ್ನಾಟಕದಲ್ಲಿ ಕೆಲಸ ಮತ್ತು ಕನ್ನಡ

ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಕಚೇರಿ, ಉದ್ದಿಮೆ – ಹೀಗೆ ಯಾವುದೇ ಅಧಿಕೃತ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿರುವುದು ಕಡ್ಡಾಯವಾಗಬೇಕು. ಕನ್ನಡವನ್ನು ಓದಲು, ಕನ್ನಡದಲ್ಲಿ ಬರೆಯಲು – ಮಾತಾಡಲು ಅರ್ಹರಾದವರು ಮಾತ್ರ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಗಬೇಕು. ಕನ್ನಡ ಭಾಷಾಜ್ಞಾನದ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಯನ್ನು ಸಿದ್ಧಗೊಳಿಸಿ ಅದಕ್ಕೆ ಎಲ್ಲರೂ ಬದ್ಧವಾಗುವಂತೆ ಮಾಡಬೇಕು.

ಕರ್ನಾಟಕದಲ್ಲಿ ಕನ್ನಡ ಭಾಷೆಯಿಲ್ಲದೆ ಶಿಕ್ಷಣ ಪೂರೈಸಲಾಗದು ಮತ್ತು ಕನ್ನಡ ಭಾಷಾ ಜ್ಞಾನವಿಲ್ಲದೆ ಕೆಲಸ ಸಿಗದು. ಇದು ನಮ್ಮ ನೀತಿಯಾಗಬೇಕು. ಇದು ಬೇರೆ ಭಾಷೆಗಳ ವಿರೋಧವಲ್ಲ; ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಭಾಷೆಗೆ ಸಲ್ಲಬೇಕಾದ ಸೂಕ್ತ ಸ್ಥಾನ.

ಕೇಂದ್ರೋದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ

ಕರ್ನಾಟಕದಲ್ಲಿ ಸ್ಥಾಪಿತವಾಗಿರುವ, ಆಗುವ ಕೇಂದ್ರೋದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಆದ್ಯತೆಯಾಗಬೇಕು. ಮೊದಲು ಕನ್ನಡಿಗರಿಗೆ – ಅಂದರೆ ಕರ್ನಾಟಕವಾಸಿಗಳಾಗಿದ್ದು ಕನ್ನಡ ಬಲ್ಲವರಿಗೆ – ಉದ್ಯೋಗ. ಆನಂತರ ಅಗತ್ಯವಿದ್ದರೆ ಉಳಿದವರನ್ನು ಪರಿಗಣಿಸುವುದು. ಇದು ರೈಲ್ವೇ, ರಕ್ಷಣಾ ಇಲಾಖೆ – ಇತ್ಯಾದಿ ಎಲ್ಲಕ್ಕೂ ಅನ್ವಯವಾಗಬೇಕು.

ನಿಜ; ಇದು ರಾಜ್ಯ ಸರ್ಕಾರದ ಸಂಪೂರ್ಣ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಹಿಂದೆ ಪ್ರಸ್ತಾಪಿಸಲಾಗಿದೆ. ಸದ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ಬಗ್ಗೆ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು. ಒಕ್ಕೂಟ ವ್ಯವಸ್ಥೆಯು ಅರ್ಥ ಪೂರ್ಣವಾಗಬೇಕಾದರೆ ಆಯಾ ರಾಜ್ಯಗಳಲ್ಲಿ ವಾಸಿಸುವ, ಆಯಾ ರಾಜ್ಯದ ಭಾಷೆಯನ್ನು ಕಲಿತಿರುವವರಿಗೆ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು, ರಾಜ್ಯಗಳನ್ನು ಪ್ರತಿನಿಧಿಸುವ ಸಂಸದರು, ಭಾಷಾ ಹೋರಾಟಗಾರರು, ಚಿಂತಕರು ‘ರಾಷ್ಟ್ರೀಯ ನೀತಿ’ಯ ಅಗತ್ಯವನ್ನು ಪ್ರತಿಪಾದಿಸಬೇಕು.

ಕೇಂದ್ರ ಸರ್ಕಾರದ ರಾಜ್ಯ ಶಾಖೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ

ಕೇಂದ್ರೋದ್ಯಮದ ಬಗ್ಗೆ ಪ್ರಸ್ತಾಪಿಸಿದ ಅಂಶಗಳನ್ನೇ ಇಲ್ಲಿಯೂ ಗಮನಿಸಬೇಕು. ಕೇಂದ್ರ ಸರ್ಕಾರದ ವಿವಿಧ ಶಾಖಾ ಕಚೇರಿಗಳು ಎಲ್ಲ ರಾಜ್ಯಗಳಲ್ಲೂ ಇರುತ್ತವೆ. ಈ ಕಚೇರಿಗಳಲ್ಲಿ ಕಡೇ ಪಕ್ಷ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳು ಆಯಾ ರಾಜ್ಯದವರಿಗೇ ಮೀಸಲಾಗಬೇಕು.

ರಾಷ್ಟ್ರೀಯ ಭಾವೈಕ್ಯತೆಯಿಂದ ಆಯಾ ರಾಜ್ಯದವರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡ ಬೇಕೆಂದು ‘ರಾಷ್ಟ್ರೀಯ ಸಮಗ್ರತಾ ಆಯೋಗ’ವು ೧೯೬೮ರಲ್ಲೇ ಪ್ರತಿಪಾದಿಸಿದೆ; ಹೀಗೆ ಆಯಾ ರಾಜ್ಯದವರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದಿದ್ದರೆ ಮುಂದೊಂದು ದಿನ ಪ್ರತ್ಯೇಕತಾ ಭಾವವು ಬೆಳೆಯಬಹುದೆಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಸದರಿ ಆಯೋಗದ ವರದಿಯು ಸಾಕಷ್ಟು ಚಿಂತನೆಯ ಬಳಿಕವೇ ‘ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ’ಯೆಂಬ ನೀತಿಗೆ ಸಮ್ಮತಿ ಸೂಚಿಸಿದೆಯೆಂಬುದನ್ನು ಮರೆಯಬಾರದು. ಈಗ ತಲೆದೋರುತ್ತಿರುವ ಪ್ರತ್ಯೇಕತಾ ಚಳವಳಿ ಗಳಿಗೆ ಇರುವ ಅನೇಕ ಕಾರಣಗಳಲ್ಲಿ ಸ್ಥಳೀಯರಿಗೆ ಉದ್ಯೋಗ – ಉದ್ಯಮಗಳಲ್ಲಿ ಆದ್ಯತೆ ಸಿಗದೆ ಇರುವುದೂ ಒಂದು ಮುಖ್ಯಾಂಶವಾಗಿದೆ.

ಆದ್ದರಿಂದ, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದು ಒಂದು ರಾಷ್ಟ್ರೀಯ ನೀತಿಯಾಗಬೇಕು.

ಕೇಂದ್ರೋದ್ಯಮ ಕಚೇರಿ, ಕಂಪನಿಗಳಲ್ಲಿ ‘ಕನ್ನಡ ಘಟಕ’ ಸ್ಥಾಪನೆ

ರಾಜ್ಯದಲ್ಲಿರುವ ಎಲ್ಲ ಕೇಂದ್ರೋದ್ಯಮ, ಕೇಂದ್ರ ಸರ್ಕಾರದ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ‘ಕನ್ನಡ ಘಟಕ’ ಸ್ಥಾಪನೆಯಾಗಬೇಕು. ಕನ್ನಡ ಘಟಕವು ರಾಜ್ಯದೊಳಗಿನ ವ್ಯವಹಾರ ಗಳನ್ನು ಕನ್ನಡದಲ್ಲೇ ನಡೆಸುವುದಕ್ಕೆ ತನ್ನ ಸಂಸ್ಥೆಗಳಿಗೆ ಸಹಾಯಕವಾಗಿ ಕೆಲಸ ಮಾಡಬೇಕು. ನೌಕರರಿಗೆ ಕೊಡುವ ಸೂಚನೆಗಳು, ಸರ್ಕಾರಕ್ಕೆ ಸಲ್ಲಿಸುವ ಪತ್ರಗಳು, ಸಾರ್ವಜನಿಕ ಪತ್ರ ವ್ಯವಹಾರ – ಇತ್ಯಾದಿಗಳೆಲ್ಲ ಕನ್ನಡದಲ್ಲಿ ನಡೆಯಬೇಕು. ಆಂತರಿಕ ಆಡಳಿತಕ್ಕೆ ಕೇಂದ್ರ ಸರ್ಕಾರದ ಆಡಳಿತ ಭಾಷಾ ನೀತಿಯನ್ನು ಅನ್ವಯಿಸಿದರೂ ರಾಜ್ಯದ ಜನರು ಮತ್ತು ಸರ್ಕಾರದ ಜೊತೆ ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು. ಕೇಂದ್ರೋದ್ಯಮ, ಕೇಂದ್ರ ಸರ್ಕಾರದ ಕಚೇರಿ, ಬಹು ರಾಷ್ಟ್ರೀಯ ಕಂಪನಿಗಳಿಗೂ ಜನರಿಗೂ ಸಂಪರ್ಕ ಕೇಂದ್ರವಾಗಿ ‘ಕನ್ನಡ ಘಟಕ’ವು ಕೆಲಸ ಮಾಡಬೇಕು. ಜೊತೆಗೆ ಸಾಂಸ್ಕೃತಿಕ ಕ್ರಿಯೆಯನ್ನು ನಿರ್ವಹಿಸಬೇಕು. ಹೀಗೆ ‘ಕನ್ನಡ ಘಟಕ’ವು ಅಧಿಕೃತ ಅಂಗವಾಗಿ ಕೆಲಸ ಮಾಡುವಂತಿರಬೇಕು. ಅದು ಇನ್ನೊಂದು ಸ್ವಯಂರಚಿತ ಕನ್ನಡ ಸಂಘವಾಗಬಾರದು.

ಹಾಗೆ ನೋಡಿದರೆ ಆಯಾ ರಾಜ್ಯಭಾಷೆಯ ಘಟಕಗಳನ್ನು ಸ್ಥಾಪಿಸುವುದು ’ರಾಷ್ಟ್ರೀಯ ನೀತಿ’ಯಾಗಬೇಕು.

(ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಆಯಾ ಸಂಸ್ಥೆಗಳ ಕನ್ನಡ ಸಂಘಟನೆಗಳ ಸಂಯುಕ್ತ ಒತ್ತಾಯದಿಂದ ಎಚ್.ಎ.ಎಲ್. ಮತ್ತು ಬಿ.ಇ.ಎಲ್. ಫ್ಯಾಕ್ಟರಿಗಳಲ್ಲಿ ಸಾಂಸ್ಕೃತಿಕ ಉದ್ದೇಶದ ‘ಕನ್ನಡ ಘಟಕ’ಗಳು ಸ್ಥಾಪನೆಗೊಂಡಿವೆ.)

ಬ್ಯಾಂಕುಗಳು ಮತ್ತು ಕನ್ನಡ

ಯಾವುದೇ ಬ್ಯಾಂಕು ಸಾರ್ವಜನಿಕರ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ. ಆದರೆ ಅನೇಕ ಬ್ಯಾಂಕುಗಳು ವಿವಿಧ ನಮೂನೆಗಳನ್ನು ಕನ್ನಡದಲ್ಲಿ ಕೊಡುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಕನ್ನಡವನ್ನು ಸಾರ್ವಜನಿಕ ಸಂಪರ್ಕದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಬೇಕು.

ಈಗ ಕೇಂದ್ರ ಸರ್ಕಾರದ ಆದೇಶದ ಪ್ರಕಾರ (೧೯೭೬ರ ಅಧಿಕೃತ ಭಾಷಾ ನಿಯಮದ ೧೧ನೇ ಅಂಶಕ್ಕನುಗುಣವಾಗಿ) ನಾಮಫಲಕ, ಲೆಟರ್‌ಹೆಡ್, ಮೊಹರು ಮುಂತಾದವುಗಳಲ್ಲಿ ಕನ್ನಡವನ್ನು ಬಳಸಬೇಕು. ಇದು ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳು, ಉದ್ದಿಮೆಗಳು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. ಇದಿಷ್ಟೇ ಸಾಲದು. ಪ್ರಾದೇಶಿಕ ಭಾಷೆಗಳು ಅಧಿಕೃತವಾಗಿ ಸಾರ್ವಜನಿಕ ವ್ಯವಹಾರದ, ಸಂಪರ್ಕದ ಸಾಧನಗಳಾಗಬೇಕು.

ಸಾರ್ವಜನಿಕ ಉದ್ದಿಮೆಗಳ ಪುನಶ್ವೇತನ

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ (ಸರ್ಕಾರಗಳ ನೇತೃತ್ವದ) ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ಮಾರುವ ಪ್ರಕ್ರಿಯೆಗೆ ಎಂದಿಲ್ಲದ ಆದ್ಯತೆ ಬಂದಿದೆ. ಇದು ಜಾಗತೀಕರಣದ ಒಂದು ನೇರವಾದ ಪರಿಣಾಮವಾಗಿದೆ.

ಕಡೇ ಪಕ್ಷ, ನಾವು ರಾಜ್ಯಮಟ್ಟದಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಉಳಿಸುವ ಹೋರಾಟವನ್ನು ನಡೆಸಬೇಕು; ಈ ಸಂಬಂಧದಲ್ಲಿ ನಡೆಯುವ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲಬೇಕು. ಈಗಾಗಲೇ ಸಾರ್ವಜನಿಕ ಉದ್ದಿಮೆಯಾದ, ಹೆಮ್ಮೆಯ ಎನ್.ಜಿ.ಇ.ಎಫ್. ಅನ್ನು ಕಳೆದು ಕೊಂಡದ್ದಾಗಿದೆ. ಮತ್ತಷ್ಟು ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆಯೆಂಬ ನೆಪದ ಮೂಲಕ ಮುಚ್ಚಿಹೋಗುವ ಆತಂಕದಲ್ಲಿವೆ. ಸರಿಯಾದ ಆಡಳಿತದ ಮೂಲಕ ಲಾಭ ಗಳಿಕೆಯತ್ತ ಹೋಗಲು ಸಾಧ್ಯವೆಂಬುದಕ್ಕೆ ಬಿ.ಎಂ.ಟಿ.ಸಿ.ಯು ಒಂದು ಉದಾಹರಣೆಯಾಗಿದೆ. ಆಯಾ ಉದ್ದಿಮೆಗಳ ಆಡಳಿತ ವರ್ಗ ಮತ್ತು ಕಾರ್ಮಿಕ ವರ್ಗ ಒಟ್ಟಾಗಿ ಸಾರ್ವಜನಿಕ ಉದ್ದಿಮೆ ಮತ್ತು ಸಂಸ್ಥೆಗಳ (ಉದಾ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಪುನಶ್ಚೇತನಕ್ಕೆ ಪೂರಕವಾಗಿ ಕ್ರಿಯಾಶೀಲವಾಗಬೇಕು. ಕಾರ್ಮಿಕ ಸಂಘಟನೆಗಳಷ್ಟೇ ಅಲ್ಲ, ಕನ್ನಡಪರ ಸಂಘಟನೆಗಳು ಈ ಅಂಶವನ್ನು ಆದ್ಯತೆಗಳಲ್ಲೊಂದಾಗಿ ಸ್ವೀಕರಿಸಬೇಕು. ಸಾರ್ವಜನಿಕ ಉದ್ದಿಮೆ ಹಾಗೂ ಸಂಸ್ಥೆಗಳನ್ನು ಮುಚ್ಚುವ, ಮಾರುವ, ಖಾಸಗೀಕರಣಗೊಳಿಸುವ ಸರ್ಕಾರದ ಯಾವುದೇ ಕ್ರಮಗಳನ್ನು ವಿರೋಧಿಸ ಬೇಕು.

ಉದ್ಯೋಗ ವಿನಿಮಯ ಕಚೇರಿ

ಉದ್ಯೋಗ ವಿನಿಮಯ ಕಚೇರಿಯಲ್ಲಿ ವಿದ್ಯಾವಂತ ನಿರುದ್ಯೋಗಿಗಳು ನೋಂದಾಯಿಸುವುದು ಒಂದು ಸಾಮಾನ್ಯ ಪದ್ಧತಿಯಾಗಿತ್ತು. ಈಗ ಹಾಗಿಲ್ಲ. ಉದ್ಯೋಗದ ಆಯ್ಕೆ ವಿಧಾನಗಳಲ್ಲಾದ ವ್ಯತ್ಯಾಸಗಳು ಇದಕ್ಕೆ ಒಂದು ಮುಖ್ಯ ಕಾರಣ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಾದರೆ (ಕಡೇ ಪಕ್ಷ) ಸಿ ಮತ್ತು ಡಿ ಹುದ್ದೆಗಳ ಆಯ್ಕೆಗೆ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುವುದು ಕಡ್ಡಾಯವಾದರೆ ಉತ್ತಮ. ಯಾಕೆಂದರೆ ಸ್ಥಳೀಯವಾಸಿಗಳು ಮಾತ್ರ ಉದ್ಯೋಗವಿನಿಮಯ ಕಚೇರಿಯಲ್ಲಿ ನೋಂದಣಿ ಯಾಗುತ್ತಾರೆ.

ಈಗ ಒಂದೆರಡು ಕಾರ್ಖಾನೆಗಳು ಮಾತ್ರ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳುತ್ತವೆಯೆಂದು ಹೇಳಲಾಗುತ್ತಿದೆ. ಕರ್ನಾಟಕದ ಯಾವುದೇ ಉದ್ಯಮ – ಅದು ಖಾಸಗಿಯಾಗಿರಲಿ, ಬಹುರಾಷ್ಟ್ರೀಯ ಕಂಪನಿಯಾಗಿರಲಿ, ಕೇಂದ್ರೋದ್ಯಮ ಅಥವಾ ರಾಜ್ಯೋದ್ಯಮವಾಗಿರಲಿ – ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಹರ ಪಟ್ಟಿ ಪಡೆಯುವುದು ಕಡ್ಡಾಯವಾದರೆ ಈ ಕಚೇರಿಗೂ ಮಹತ್ವ ಬರುತ್ತದೆ; ಸ್ಥಳೀಯರಿಗೂ ಅವಕಾಶವಾಗುತ್ತದೆ.

ಅವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ

ಉದ್ಯೋಗದ ವಿಷಯ ಬಂದಾಗ ಕನ್ನಡಪರ ವ್ಯಕ್ತಿ ಮತ್ತು ಸಂಘಟನೆಗಳು ಸಾಮಾನ್ಯವಾಗಿ ವಿದ್ಯಾವಂತ ನಿರುದ್ಯೋಗಿಗಳ ನೆಲೆಯಲ್ಲಿ ನಿಂತು ನಮ್ಮ ವಿಚಾರಗಳನ್ನು ಮಂಡಿಸುವುದು ಸಾಮಾನ್ಯ. ಆದರೆ ಅಸಂಖ್ಯಾತ ಅವಿದ್ಯಾವಂತ ನಿರುದ್ಯೋಗಿ ಕನ್ನಡಿಗರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಕನ್ನಡಪರ ಚಿಂತನೆಗೆ ಹೊಸ ಆಯಾಮವನ್ನು ನೀಡುತ್ತದೆ. ಇದು ಅಗತ್ಯ. ಸಾಮಾಜಿಕವಾಗಿ, ಆರ್ಥಿಕವಾಗಿ ತುಳಿತಕ್ಕೊಳಗಾಗುತ್ತಿರುವ ಅಸಂಖ್ಯಾತ ಅವಿದ್ಯಾವಂತ ಮತ್ತು ಅರೆವಿದ್ಯಾವಂತ ನಿರುದ್ಯೋಗಿಗಳಿಗೆ ಹೊಟ್ಟೆಬಟ್ಟೆಗಾಗುವಷ್ಟು ಕೆಲಸ ಕೊಡುವುದು ಸರ್ಕಾರದ ಜವಾಬ್ದಾರಿಯಾಗಬೇಕು. ಇದಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸುವಂತೆ ಕನ್ನಡಪರ ಚಿಂತಕರು, ಕ್ರಿಯಾಶೀಲರು, ಸಂಘಟನೆಗಳು ಒತ್ತಾಯ ತರಬೇಕು.

ಕರ್ನಾಟಕವೆಂದರೆ ಎಲ್ಲ ಜನವರ್ಗಗಳ ಒಕ್ಕೂಟ, ಈ ನೆಲೆಯಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಅರೆವಿದ್ಯಾವಂತರು (ಮಹಿಳೆ ಮಕ್ಕಳನ್ನು ಒಳಗೊಂಡಂತೆ) – ಎಲ್ಲರಿಗೂ ಮೂಲಭೂತ ಅಗತ್ಯಗಳು ಲಭ್ಯವಾಗಬೇಕು.

೩. ಆಡಳಿತದಲ್ಲಿ ಕನ್ನಡ

ನಮ್ಮ ಸಂವಿಧಾನದ ೩೪೫ನೆಯ ಅನುಚ್ಛೇದವು ವಿವಿಧ ರಾಜ್ಯಗಳು ತಮ್ಮಲ್ಲಿರುವ ಒಂದು ಭಾಷೆ ಅಥವಾ ಭಾಷೆಗಳನ್ನು ಆಡಳಿತ ಭಾಷೆಯಾಗಿ ಅಧಿಕೃತಗೊಳಿಸುವ ಅವಕಾಶವನ್ನು ನೀಡಿದೆ. “೩೪೬ ಮತ್ತು ೩೪೭ನೇ ಅನುಚ್ಛೇದಗಳ ಉಪಬಂಧಗಳಿಗೆ ಒಳಪಟ್ಟು, ಯಾವುದೇ ಒಂದು ರಾಜ್ಯದ ವಿಧಾನ ಮಂಡಲವು ಆ ರಾಜ್ಯದಲ್ಲಿ ಬಳಕೆಯಲ್ಲಿರುವ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಯಾವುದೇ ಉದ್ದೇಶಗಳಿಗಾಗಿ ಬಳಸುವ ಭಾಷೆ ಅಥವಾ ಭಾಷೆಗಳನ್ನಾಗಿ ಅಂಗೀಕರಿಸಬಹುದು” ಎಂದು ೩೪೫ನೆಯ ಅನುಚ್ಛೇದವು ಹೇಳುತ್ತದೆ.

ಸಂವಿಧಾನದತ್ತವಾದ ಈ ಅವಕಾಶವನ್ನು ಬಳಸಿಕೊಂಡು ವಿವಿಧ ರಾಜ್ಯಗಳು ಅಧಿಕೃತ ಆಡಳಿತ ಭಾಷೆ ಅಥವಾ ಭಾಷೆಗಳನ್ನು ನಿರ್ಧರಿಸುತ್ತವೆ. ಕೆಲವು ರಾಜ್ಯಗಳಲ್ಲಿ ಎರಡನೇ ಆಡಳಿತ ಭಾಷೆಯಿರುವುದೂ ಉಂಟು. ಉದಾಹರಣೆಗೆ – ಆಂಧ್ರಪ್ರದೇಶದ ಅಧಿಕೃತ ಭಾಷೆ ತೆಲುಗು, ಎರಡನೇ ಆಡಳಿತ ಭಾಷೆ ಉರ್ದು (ಕೆಲವು ಜಿಲ್ಲೆಗಳಿಗೆ ಸಂಬಂಧಿಸಿದಂತೆ). ಪಶ್ಚಿಮ ಬಂಗಾಳದ ಕಾಲಿಂಪೊಂಗ್, ಕುರ್ಸಿಯೋಂಗ್ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಲ್ಲಿ ನೇಪಾಳಿ ಎರಡನೇ ಆಡಳಿತ ಭಾಷೆ. ಬಿಹಾರದಲ್ಲಿ ಹಿಂದಿ ಅಧಿಕೃತ ಆಡಳಿತ ಭಾಷೆಯಾಗಿದ್ದು ಉರ್ದುವನ್ನು ಎರಡನೇ ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ. ಹೀಗೆ ಉದಾಹರಿಸುತ್ತ ಹೋಗಬಹುದು. ಮೊದಲನೇ ಆಡಳಿತ ಭಾಷೆಯಲ್ಲಿ ಎಲ್ಲ ಆಡಳಿತವೂ ನಡೆಯುತ್ತದೆ. ಎರಡನೇ ಆಡಳಿತ ಭಾಷೆಯಲ್ಲಿ ಆಯಾ ಭಾಷೆಯನ್ನಾಡುವ ಅಲ್ಪಸಂಖ್ಯಾತರು ಆಡಳಿತಾತ್ಮಕ ವ್ಯವಹಾರ ನಡೆಸಲು ಅಧಿಕೃತ ಅವಕಾಶವಿರುತ್ತದೆ. ಎರಡನೇ ಆಡಳಿತ ಭಾಷೆಯ ನಿಗದಿತ ಭಾಗಗಳಲ್ಲಿ ಎರಡೂ ಭಾಷೆಗಳನ್ನು ಆಡಳಿತಕ್ಕೆ ಬಳಸಲಾಗುತ್ತದೆ.

ಕರ್ನಾಟಕದಲ್ಲಿ ಕನ್ನಡವೊಂದೇ ಅಧಿಕೃತ ಆಡಳಿತ ಭಾಷೆ. ೧೯೬೩ನೇ ಅಕ್ಟೋಬರ್ ೧೦ನೇ ತಾರೀಖು ಕರ್ನಾಟಕ ರಾಜ್ಯ ಪತ್ರದಲ್ಲಿ ಕನ್ನಡವು ನಮ್ಮ ರಾಜ್ಯದ ಆಡಳಿತ ಭಾಷೆ ಯೆಂದು ಪ್ರಕಟಿಸಲಾಯಿತು. ಇದಕ್ಕೆ ಮುಂಚೆ ವಿಧಾನಮಂಡಲವು ಆಡಳಿತ ಭಾಷಾ ಸಂಬಂಧದ ವಿಧೇಯಕವನ್ನು ಅಂಗೀಕರಿಸಿತ್ತು. ಮುಂದೆ ಹಂತಹಂತವಾಗಿ ಅತ್ಯಂತ ನಿಧಾನಗತಿಯಲ್ಲಿ ಆಡಳಿತ ಭಾಷೆಯ ಅನುಷ್ಠಾನ ನಡೆಯುತ್ತಾ ಬಂದಿದೆ.

೧. ತಾಲ್ಲೂಕು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕೆಂಬ ಆದೇಶವು ೧-೪-೧೯೬೮ ರಂದು ಬಂದಿತು. ಕನ್ನಡವು ಅಧಿಕೃತ ಆಡಳಿತ ಭಾಷೆಯೆಂದು ವಿಧಾನ ಮಂಡಲವು ನಿರ್ಣಯಿಸಿದ ನಾಲ್ಕೂವರೆ ವರ್ಷಗಳ ನಂತರ ತಾಲ್ಲೂಕು ಮಟ್ಟದಲ್ಲಿ ಕನ್ನಡದ ಕಡ್ಡಾಯ ಬಳಕೆಯ ತೀರ್ಮಾನವನ್ನು ಕೈಗೊಳ್ಳಲಾಗಿದೆ.

೨. ೧೯೭೦ನೇ ಇಸವಿ ನವೆಂಬರ್‌ ೧ ರಿಂದ ಉಪವಿಭಾಗ ಮಟ್ಟದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸುವ ಬಗ್ಗೆ ನಿರ್ಧರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಂದಿನ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಕೆ. ನಾರಾಯಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ‘ಕನ್ನಡ ಭಾಷಾ ಸಮಿತಿ’ಯನ್ನು ರಚಿಸಲಾಯಿತು. (ಆಗ ಶ್ರೀ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದು ಕನ್ನಡ ಬಳಕೆಗೆ ಆಸಕ್ತಿ ವಹಿಸಿದರು. ಮುಂದೆ ಇವರೇ ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೊಸ ಹೆಸರು ಇಡುವ ಬಗ್ಗೆ ನಿರ್ಧಾರ ಕೈಗೊಂಡರು. ವಿಧಾನಮಂಡಲದ ಒಪ್ಪಿಗೆ ದೊರೆಯಿತು.)

ಸರ್ಕಾರದ ಕಚೇರಿಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ೮-೧೨-೧೯೭೧ರ ಆದೇಶ ಸಂಖ್ಯೆ ಜಿ‌ಎಡಿ೫೮ ಪಿ‌ಓ‌ಎಲ್‌೭೧ ಇದರಲ್ಲಿ ಸೂಚಿಸಲಾಯಿತು.

೪. ಸರ್ಕಾರದ ಕಚೇರಿಗಳಲ್ಲಿ ರಬ್ಬರ್ ಮೊಹರು ಮತ್ತು ಶೀರ್ಷಿಕಾಪತ್ರಗಳಲ್ಲಿ (ಲೆಟರ್‌ಹೆಡ್) (ಇಂಗ್ಲಿಷಿನ ಜೊತೆ) ಕನ್ನಡವನ್ನು ಬಳಸಬೇಕೆಂದು ಸುತ್ತೋಲೆ ಸಂಖ್ಯೆ ಜಿ‌ಎಡಿ ೪೭ ಪಿ‌ಓ‌ಎಲ್ (ಕೆಸಿ‌ಎಲ್) ೭೨ ದಿನಾಂಕ ೨೯-೬-೧೯೭೨ – ಇದರಲ್ಲಿ ಸೂಚಿಸಲಾಯಿತು.

೫ ೧೯೭೨ರ ಜೂನ್ ೨೬ ರಂದು ಆದೇಶವೊಂದನ್ನು ಹೊರಡಿಸಿ ೧೫-೮-೧೯೭೨ ರಿಂದ ಜಿಲ್ಲಾಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಬೇಕೆಂದು ಸೂಚಿಸಲಾಯಿತು. ಆನಂತರ ೧೭-೮-೧೯೭೨ ರಂದು ಸುತ್ತೋಲೆಯೊಂದನ್ನು ಹೊರಡಿಸಿ, ಮುಂದೆ ಎಲ್ಲ ಹಂತಗಳಲ್ಲೂ ಕನ್ನಡವನ್ನು ಬಳಸುವ ಆರಂಭಿಕ ಕ್ರಮವಾಗಿ ಜಿಲ್ಲಾ ಹಂತವನ್ನು ಮೀರಿ ಕನ್ನಡವನ್ನು ಬಳಸಲು ಪ್ರಯತ್ನಿಸಬೇಕೆಂದು ಸೂಚಿಸಲಾಯಿತು.

೬ ೧೯೭೪ರ ನವೆಂಬರ್ ೧ ರಿಂದ ರಾಜ್ಯದ ಎಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ಕನ್ನಡವು ಅಧಿಕೃತ ಭಾಷೆಯಾಗಿ ಬಳಕೆಯಾಗಬೇಕೆಂದು ನಿರ್ದೇಶಿಸಲಾಯಿತು.

೭ ದಿನಾಂಕ ೧೫-೫-೧೯೭೬ರ ಕ್ರಮಾಂಕ ಜಿ‌ಎಡಿ ೨೮ ಪಿ‌ಒ‌ಎಲ್ ೭೬ – ಈ ಆದೇಶವು ತಾಲ್ಲೂಕು ಮಟ್ಟದಲ್ಲಿ ಯಾವುದೇ ಕಾರಣಕ್ಕೂ ಆಂಗ್ಲ ಭಾಷೆಯನ್ನು ಬಳಸ ಬಾರದೆಂದೂ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಇಲಾಖೆಗಳು ಮಾತ್ರ ಅಗತ್ಯವಿದ್ದರೆ ಆಂಗ್ಲ ಭಾಷೆಯನ್ನು ಬಳಸಬಹುದು ಎಂದು ನಿರ್ದೇಶಿಸಿದೆ.

೮ ಕರ್ನಾಟಕ ರಾಜ್ಯ ಶಾಸನಸಭೆಗಳಿಗೆ ಒದಗಿಸುವ / ಮಂಡಿಸುವ ಎಲ್ಲ ಮಸೂದೆಗಳು, ವಾರ್ಷಿಕ ಆಡಳಿತ ವರದಿಗಳು, ಆಯವ್ಯಯ ದಾಖಲೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಇರಬೇಕೆಂದು ಅಧಿಕೃತ ಜ್ಞಾಪನಪತ್ರ ಕ್ರಮಾಂಕ: ಡಿಪಿ‌ಎ‌ಆರ್ ೩೬ ಪಿ‌ಒ‌ಎಲ್‌ ೮೦ ದಿನಾಂಕ ೯-೯-೧೯೮೦ ಇದರಲ್ಲಿ ನಿರ್ದೇಶಿಸಲಾಗಿದೆ. ಅಲ್ಲಿಯವರೆಗೆ ಈ ದಾಖಲೆಗಳು ಆಂಗ್ಲ ಭಾಷೆಯಲ್ಲಿ ಮಾತ್ರ ಇರುತ್ತಿದ್ದವು.

೯ ಕನ್ನಡವನ್ನು ಎಲ್ಲ ಹಂತಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಭಾಷೆಯಾಗಿ ಜಾರಿಗೆ ತರ ಬೇಕೆಂದು ದಿನಾಂಕ ೧-೧೧-೧೯೭೯ ರಂದು ನಿರ್ಧರಿಸಲಾಯಿತು. ಈ ದಿನಾಂಕದಿಂದ ಒಂದು ವರ್ಷವನ್ನು ‘ರಾಜಭಾಷಾ ವರ್ಷ’ವೆಂದು ಘೋಷಿಸಲಾಯಿತು. ಆಡಳಿತ ಭಾಷಾ ಅನುಷ್ಠಾನದ ಬಗ್ಗೆ ಅಧಿಕೃತ ಜ್ಞಾಪನ ಪತ್ರವನ್ನು ೯-೯-೧೯೮೦ ರಂದು ಹೊರಡಿಸಿ ರಾಜ್ಯದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಬಳಸುವ ಬಗ್ಗೆ ತಿಳಿಸಲಾಯಿತು.

೧೦. ಕನ್ನಡವನ್ನು ರಾಜ್ಯದಾದ್ಯಂತ ಆಡಳಿತ ಭಾಷೆಯಾಗಿ ಕಡ್ಡಾಯವಾಗಿ ದಿನಾಂಕ ೧೫-೨-೧೯೮೩ ರಿಂದ ಅನುಷ್ಠಾನಗೊಳಿಸಬೇಕೆಂದು ಸೂಚಿಸುವ ಅಧಿಕೃತ ಸುತ್ತೋಲೆಯು ದಿನಾಂಕ ೧೦-೨-೧೯೮೨ ರಂದು ಹೊರಬಿದ್ದಿತು. ಸುತ್ತೋಲೆಯ ಕ್ರಮಾಂಕ: ಡಿಪಿ‌ಎ‌ಆರ್‌೮ ಪಿ‌ಒ‌ಎಲ್ ೮೩ – ಸಚಿವಾಲಯದ ಹಂತದಲ್ಲೂ ಕನ್ನಡವನ್ನು ಬಳಸ ಬೇಕೆಂಬ ಸೂಚನೆಗೆ ಇಲ್ಲಿಂದ ಅಧಿಕೃತ ಒತ್ತಾಸೆ ಲಭ್ಯವಾಯಿತು.

೧೧. ಶಾಸನಗಳು ಹಾಗೂ ನಿಯಮಾವಳಿಗಳನ್ನು ಇನ್ನು ಮುಂದೆ ಕನ್ನಡದಲ್ಲೇ ರಚಿಸಬೇಕೆಂದೂ ಇಲ್ಲಿಯವರೆಗೆ ಆಂಗ್ಲ ಭಾಷೆಯಲ್ಲಿ ರಚಿತವಾದ ಶಾಸನ ಹಾಗೂ ನಿಯಮಾವಳಿಗಳನ್ನು ೧೯೮೪ರ ಅಂತ್ಯದೊಳಗೆ ಕನ್ನಡಕ್ಕೆ ಭಾಷಾಂತರಿಸಬೇಕೆಂದೂ ಸೂಚಿಸುವ ಆದೇಶವನ್ನು ದಿನಾಂಕ ೧೬-೭-೧೯೮೪ ರಂದು ಹೊರಡಿಸಲಾಯಿತು. (ಆದೇಶ ಸಂಖ್ಯೆ ಡಿಪಿ‌ಎ‌ಆರ್‌ ೩೪ ಒ.ಎಲ್‌೮೪). ಈ ಕೆಲಸವು ೧೯೮೪ ರೊಳಗೆ ಪೂರೈಸಿರಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯ ಮತ್ತು ಭಾಷಾಂತರ ಇಲಾಖೆಯ ಆಸಕ್ತಿಯಿಂದ ಕಳೆದ ಎರಡು ವರ್ಷಗಳ ಹಿಂದಿನವರೆಗೆ ನೂರಾರು ಹಳೆಯ ಶಾಸನ ಹಾಗೂ ನಿಯಮಾವಳಿಗಳು ಕನ್ನಡಕ್ಕೆ ಭಾಷಾಂತರಗೊಂಡಿವೆ. ಆದರೆ ಆಗಬೇಕಾದ ಕೆಲಸ ಇನ್ನೂ ಇದೆ. ಎಲ್ಲ ಶಾಸನಗಳೂ, ನಿಯಮಾವಳಿಗಳು ಕನ್ನಡದಲ್ಲಿ ಸಿಗುವಂತಾಗಬೇಕು.

೧೨. ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ದಿನಾಂಕ ೨೩-೬-೧೯೮೩ ರಂದು ‘ಕನ್ನಡ ಕಾವಲು ಸಮಿತಿ’ಯನ್ನು ರಚಿಸಲಾಯಿತು. ಮುಂದೆ ಆದೇಶವೊಂದನ್ನು ಹೊರಡಿಸಿ (ಸಂಖ್ಯೆ: ಡಿಪಿ‌ಎ‌ಆರ್‌ ೩೨೮ ಕೆ‌ಒ‌ಎಲ್‌೯೦(ಇ) ದಿನಾಂಕ ೧೪-೯-೧೯೯೦) ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿಯ ಬದಲಿಗೆ ‘ಕನ್ನಡ ಅಭಿವೃದ್ಧಿ ಮಂಡಳಿ’ಯನ್ನು ರಚಿಸಿರುವುದಾಗಿ ತಿಳಿಸಲಾಯಿತು.

೧೩. ೧೯೯೨ರ ಫೆಬ್ರವರಿ ತಿಂಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಯಿತು. (ಅಧಿಸೂಚನೆ ಸಂಖ್ಯೆ ಡಿಪಿ‌ಎ‌ಆರ್‌ ೧೮ ಕೆ‌ಒ‌ಎಲ್‌ ೯೨) ಆಡಳಿತಭಾಷೆಯಾಗಿ ಕನ್ನಡದ ಅನುಷ್ಠಾನ, ಸರೋಜಿನಿ ಮಹಿಷಿ ವರದಿಯ ಅನುಷ್ಠಾನದ ಪರಿಶೀಲನೆ, ಕನ್ನಡ ಮಾಧ್ಯಮದ ವಿಷಯ, ಕನ್ನಡ ಪಠ್ಯಕ್ರಮ ಪರಿಶೀಲನೆ, ಕನ್ನಡ ಕಂಪ್ಯೂಟರ್ ಹೀಗೆ ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಲಾಯಿತು. ಶ್ರೀ ಜಿ. ನಾರಾಯಣ ಮೊದಲನೇ ಅಧ್ಯಕ್ಷರು. ಆನಂತರ ಕ್ರಮವಾಗಿ ಡಾ. ಎಚ್. ನರಸಿಂಹಯ್ಯ, ಪ್ರೊ. ಚಂದ್ರಶೇಖರಪಾಟೀಲ, ಪ್ರೊ. ಬರಗೂರು ರಾಮಚಂದ್ರಪ್ಪ, ಶ್ರೀ ಬಿ.ಎಂ. ಇದಿನಬ್ಬ ಪ್ರಸ್ತುತ ಮುಖ್ಯಮಂತ್ರಿ ಚಂದ್ರು ಅಧ್ಯಕ್ಷರಾಗಿದ್ದಾರೆ.

೧೪. ’ಆಗಸ್ಟ್ ೧೫-೧೯೯೩ರ ನಂತರ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಸಲ್ಲಿಸುವ ಎಲ್ಲಾ ಕಡತಗಳಲ್ಲಿನ ಟಿಪ್ಪಣಿಗಳು ಕಡ್ಡಾಯವಾಗಿ ಕನ್ನಡದಲ್ಲಿರತಕ್ಕದ್ದು, ಒಂದು ಪಕ್ಷ ಅವು ಕನ್ನಡದಲ್ಲಿರದಿದ್ದರೆ ಕಡತಗಳನ್ನು ಹಿಂದಿರುಗಿಸಲು ಈ ಮೂಲಕ ಆದೇಶಿಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅಂದಿನ ಮಾನ್ಯ ಮುಖ್ಯಮಂತ್ರಿಗಳ ಘೋಷಣೆಯನ್ನಾಧರಿಸಿ, ಸುತ್ತೋಲೆಯೊಂದನ್ನು ಹೊರಡಿಸಿದರು. ಅಂದಿನ ಮುಖ್ಯ ಮಂತ್ರಿಗಳು ಕನ್ನಡ ಜಾಗೃತಿ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಘೋಷಣೆಯು ದಿನಾಂಕ ೪-೮-೧೯೯೩ ರಂದು ಸುತ್ತೋಲೆಯಾಗಿ ಹೊರಬಂದಿತು. (ಕ್ರಮಾಂಕ ಡಿಪಿ‌ಎ‌ಆರ್‌ ೨೭೪ ಕೆ‌ಒ‌ಎಲ್ ೯೩). ಆದರೆ ಇದು ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ. ಕನ್ನಡದಲ್ಲಿಲ್ಲದ ಕಡತಗಳನ್ನು ಮುಲಾಜಿಲ್ಲದೆ ವಾಪಸ್ ಮಾಡುವ ಪರಿಪಾಠವನ್ನು ಮಾನ್ಯ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಸಚಿವರೂ, ಮೇಲಧಿಕಾರಿಗಳು ಪರಿಪಾಲಿಸಿದ್ದರೆ ಕನ್ನಡದ ಜಾರಿಗೆ ಇನ್ನಿಲ್ಲದ ಬಿಗಿ ಬರುತ್ತಿತ್ತು. ಈ ಬಗ್ಗೆ ಮತ್ತೆ ಒತ್ತಾಯವನ್ನು ಹೆಚ್ಚಿಸಬೇಕಾಗಿದೆ. ಜೊತೆಗೆ ‘ಕನ್ನಡದಲ್ಲಿಲ್ಲದ ಕಡತಗಳನ್ನು ಹಿಂದಿರುಗಿಸಬೇಕು’ ಎಂಬ ಅಂಶವನ್ನು ತಿದ್ದುಪಡಿಯ ಮೂಲಕ ‘ಕರ್ನಾಟಕ ರಾಜಭಾಷಾ ಅಧಿನಿಯಮ ೧೯೬೩ – ಇದಕ್ಕೆ ಸೇರಿಸಲು ಒತ್ತಾಯಿಸಬೇಕು. ಈ ಅಂಶವು ಅಧಿನಿಯಮದ ಭಾಗ ವಾದಾಗ ಶಾಸನಬದ್ಧತೆ ಲಭ್ಯವಾಗುತ್ತದೆ.

೧೫. ೧೧-೨-೧೯೯೭ ರಂದು ರಾಜ್ಯಪಾಲರು ವಿಧಾನಮಂಡಲದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡ ಜಾಗೃತಿ ಸಮಿತಿಗಳನ್ನು ರಚಿಸುವ ಬಗ್ಗೆ ಘೋಷಣೆ ಮಾಡಿದರು. ಇದನ್ನು ಆಧರಿಸಿ ಸರ್ಕಾರವು ಜಿಲ್ಲೆ, ತಾಲ್ಲೂಕು ಮತ್ತು ನಗರಪಾಲಿಕೆಗಳ ಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿಗಳನ್ನು ರಚಿಸುವ ಬಗ್ಗೆ ವಿವರವಾದ ಆದೇಶವನ್ನು ಹೊರಡಿಸಿತು. (ಆದೇಶ ಸಂಖ್ಯೆ : ಸಂಕ‌ಇ ೧೮ ಕೆ‌ಒ‌ಎಲ್ ೯೭ ದಿನಾಂಕ ೨೧-೧೦-೧೯೯೭).

೧೬. ಕನ್ನಡ ದೈನಿಕಗಳಲ್ಲಿ ಜಾಹಿರಾತುಗಳನ್ನು ಕನ್ನಡದಲ್ಲಿಯೇ ನೀಡಬೇಕೆಂದು ದಿನಾಂಕ ೧೯-೧೧-೧೯೯೮ ರಂದು ಸುತ್ತೋಲೆಯನ್ನು ಹೊರಡಿಸಲಾಯಿತು. (ಸಂಖ್ಯೆ ಸಂಕ‌ಇ: ೪೧:ಕೆ‌ಒ‌ಎಲ್‌: ೯೮) ಸಾಮಾನ್ಯವಾಗಿ ಈ ನಿಯಮವನ್ನು ಅನುಸರಿಸಲಾಗುತ್ತಿದೆ ಯಾದರೂ ಕೆಲವೊಮ್ಮೆ ಕೆಲವು ಇಲಾಖೆಗಳು ಸುತ್ತೋಲೆಯನ್ನು ಉಲ್ಲಂಘಿಸುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಅಗತ್ಯ. ಕನ್ನಡ ಪತ್ರಿಕೆಗಳಲ್ಲಿ ಯಾವುದಾದರೂ ಆಂಗ್ಲಭಾಷೆಯ ಜಾಹಿರಾತು ಬಂದಾಗ ಸಾರ್ವಜನಿಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತರುವುದು ಉತ್ತಮ.

೧೭. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅರೆಸರಕಾರಿ ಪತ್ರವನ್ನು ಆಧರಿಸಿ (ಪತ್ರ ಸಂಖ್ಯೆ : ಕ‌ಅಪ್ರಾ / ಅ /೪೦೦ / ೨೦೦೦, ದಿನಾಂಕ ೨೦-೭-೨೦೦೦) ‘ಸರ್ಕಾರಿ ವಾಹನಗಳ ಮೇಲೆ ಕನ್ನಡ ನೋಂದಣಿ ಸಂಖ್ಯೆಯನ್ನು ಅಳವಡಿಸಬೇಕೆಂದು ಸರ್ಕಾರವು ಸುತ್ತೋಲೆ ಹೊರಡಿಸಿತು. ಕ್ರಮಾಂಕ: ಡಿಪಿ‌ಎ‌ಆರ್‌ ೧೭೪ ಕೆ‌ಓ‌ಎಲ್‌ ೨೦೦೦ ದಿನಾಂಕ ೧೮-೮-೨೦೦೦) ಇದನ್ನು ಅನುಷ್ಠಾನಕ್ಕೆ ತರಲಾಗಿದ್ದು ಎಲ್ಲ ಸರ್ಕಾರಿ ವಾಹನಗಳ ನೋಂದಣಿ ಸಂಖ್ಯೆ ಮತ್ತು ಅಕ್ಷರಗಳನ್ನು ಕನ್ನಡದಲ್ಲಿ ಬರೆಸಲಾಗಿದೆ. ಅಕಸ್ಮಾತ್ ಬರೆಸಿಲ್ಲದೆ ಇರುವ ಪ್ರಕರಣವಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತರಬಹುದು.

೧೮. ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ‘ಕನ್ನಡ ಅನುಷ್ಠಾನ ವಿಭಾಗ’ವನ್ನು ತೆರೆದು ಕನ್ನಡ ಅನುಷ್ಠಾನದ ಪರಿಶೀಲನೆ ನಡೆಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸಬೇಕೆಂದು ಪ್ರಾಧಿಕಾರದ ಅಧ್ಯಕ್ಷರು ಬರೆದ ಪತ್ರವನ್ನು (ಸಂಖ್ಯೆ ಅಸಪ.ಕ. ಅಪೂ.ಕಾ. ೧೧ ದಿನಾಂಕ ೧೩-೬-೨೦೦೦) ಪುರಸ್ಕರಿಸಿ ಸರ್ಕಾರವು ದಿನಾಂಕ ೫-೯-೨೦೦೧ ರಂದು ಸುತ್ತೋಲೆಯನ್ನು ಹೊರಡಿಸಿತು. (ಸಂಖ್ಯೆ ಸಂಇ: ೨೮೭: ಬಿ‌ಎಂಎಂ ೨೦೦೦). ಸದರಿ ಸುತ್ತೋಲೆಯನ್ವಯ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ‘ಕನ್ನಡ ಅನುಷ್ಠಾನ ವಿಭಾಗಗಳು ರಚನೆಯಾಗಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೂಕ್ತ ನಿರ್ದೇಶನ ಮತ್ತು ಕ್ರಮಗಳ ಮೂಲಕ ಕನ್ನಡ ಅನುಷ್ಠಾನ ವಿಭಾಗದ ಕೆಲಸವನ್ನು ಸದಾ ಚುರುಕುಗೊಳಿಸಬೇಕು.

೧೯. ದಿನಾಂಕ ೩೧-೧೦-೨೦೦೧ ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬರೆದ ಅರೆಸರ್ಕಾರಿ ಪತ್ರಸಂಖ್ಯೆ : ಕ.ಅ.ಪ್ರಾ|ಅ| ೪೬೧| ೨೦೦೧ ಇದರ ಪ್ರಕಾರ ಸರ್ಕಾರವು ಸಚಿವಾಲಯದ ಹಂತದಲ್ಲಿ ‘ಕನ್ನಡ ಅನುಷ್ಠಾನ ವಿಭಾಗ’ವನ್ನು ರಚಿಸಿ ಆದೇಶವನ್ನು ಹೊರಡಿಸಿತು. (ಆದೇಶ ಸಂಖ್ಯೆ : ಸಿ‌ಆಸು‌ಇ ೧೦೨ ಕತವ ೨೦೦೧ ದಿನಾಂಕ ೮-೨-೨೦೦೨) ಈ ಆದೇಶದ ಪ್ರಕಾರ ಸಚಿವಾಲಯದಲ್ಲಿ ಕನ್ನಡ ಅನುಷ್ಠಾನ ವನ್ನು ಪರಿಶೀಲಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪೂರಕವಾಗಿ ಕೆಲಸ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವ ಕರ್ತವ್ಯವನ್ನು ಈ ಸಮಿತಿಗೆ ನೀಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸದರಿ ಸಮಿತಿಯ ಕರ್ತವ್ಯ ನಿರ್ವಹಣೆಯ ಬಗ್ಗೆ ಸೂಕ್ತ ನಿಗಾ ವಹಿಸಬೇಕು.

೨೦. ಸರ್ಕಾರಿ ಮತ್ತು ಸರ್ಕಾರಿ ಅಂಗ ಸಂಸ್ಥೆಗಳ ಸಮಾರಂಭಗಳ ಬ್ಯಾನರ್‌ಗಳಲ್ಲಿ (ನಾಮ ಪಟ್ಟಿಗಳಲ್ಲಿ) ಕನ್ನಡವನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಸೂಕ್ತ ಸುತ್ತೋಲೆ ಹೊರಡಿಸ ಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಒತ್ತಾಯಿಸಿದ ಫಲವಾಗಿ ಸರ್ಕಾರವು ದಿನಾಂಕ ೧೫-೩-೨೦೦೨ ರಂದು ಸುತ್ತೋಲೆಯೊಂದನ್ನು ಹೊರಡಿಸಿತು. (ಸಂಖ್ಯೆ ಸಂಕ‌ಇಂ೬ಕೆ‌ಒ‌ಎಲ್ ೨೦೦೨) ಈ ಸುತ್ತೋಲೆಯಲ್ಲಿರುವ ಅಂಶಗಳನ್ನು ಗಮನಿಸಬೇಕು.

(ಅ) ಕರ್ನಾಟಕದ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿಗಳು ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ಆಡಳಿತಕ್ಕೊಳಪಟ್ಟ ಯಾವುದೇ ಸಂಸ್ಥೆಗಳು ನಡೆಸುವ ಸಮಾರಂಭಗಳಲ್ಲಿ ಬಳಸುವ ಬ್ಯಾನರುಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು.

(ಆ) ಅಂತರರಾಜ್ಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸಮಾರಂಭಗಳಲ್ಲಿ ಕನ್ನಡದ ಜೊತೆಗೆ ಅದೇ ಬ್ಯಾನರ್‌ನಲ್ಲಿ ಆಂಗ್ಲ ಅಥವಾ ಹಿಂದಿ ಭಾಷೆಯನ್ನು ಬಳಸಬಹುದು.

(ಇ) ಬ್ಯಾನರ್‌ಗಳಲ್ಲಿ ಕನ್ನಡವನ್ನು ಬಳಸದೆ ಇದ್ದರೆ, ಅದು ಸರ್ಕಾರದ ಭಾಷಾನೀತಿಯ ಉಲ್ಲಂಘನೆಯಾಗುತ್ತದೆ.

ಈ ಮೂರು ಅಂಶಗಳನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದೂ ತಿಳಿಸಲಾಗಿದೆ.

ಕೆಲವು ಸರ್ಕಾರಿ ಮತ್ತು ಸರ್ಕಾರಿ ಅಂಗಸಂಸ್ಥೆಗಳು ಈ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬರುತ್ತಿದೆ. ಕನ್ನಡಪರ ಸಾರ್ವಜನಿಕರು ಇಂತಹ ಪ್ರಕರಣಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತರಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡಿ, ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕು.

೨೧. ಕರ್ನಾಟಕದಲ್ಲಿ ನೋಂದಣಿಯಾದ ಅನೇಕ ಖಾಸಗಿ ಬಸ್‌ಗಳ ಹೆಸರುಗಳನ್ನು ಕನ್ನಡದಲ್ಲಿ ಬರೆಸಿಲ್ಲವೆಂಬ ಅಂಶವನ್ನು ಗಮನಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ೧೭-೭-೨೦೦೨ ರಂದು ಸಾರಿಗೆ ಆಯುಕ್ತರಿಗೆ ಪತ್ರ ಬರೆದು ಸೂಕ್ತ ನಿರ್ದೇಶನ ನೀಡ ಬೇಕೆಂದು ಒತ್ತಾಯಿಸಿತು. ಸಾರಿಗೆ ಆಯುಕ್ತರು ದಿನಾಂಕ ೫-೮-೨೦೦೨ ರಂದು ಸುತ್ತೋಲೆಯನ್ನು ಹೊರಡಿಸಿ ಎಲ್ಲಾ ಖಾಸಗಿ ಬಸ್ಸುಗಳು ಕನ್ನಡದಲ್ಲಿ ಹೆಸರು ಮತ್ತು ಇತರೆ ವಿವರಗಳನ್ನು ಬರೆಸಬೇಕೆಂದು ಸೂಚಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ. (ಸುತ್ತೋಲೆ ಸಂಖ್ಯೆ: ಸಾ‌ಆ.ಎಸ್‌ಟಿ‌ಎ೧ಎ೧, ವೈವ: ೨೫/೦೨/೦೩).

ಆದರೆ ಈ ಕೆಲಸದಲ್ಲಿ ಸಾಕಷ್ಟು ಪ್ರಗತಿಯಾಗಿಲ್ಲ. ಕನ್ನಡಪರರು ತಮಗೆ ಸಾಧ್ಯವಾದ ಕಡೆಗಳಲ್ಲಿ ಸದರಿ ಸುತ್ತೋಲೆಯ ಅನುಷ್ಠಾನಕ್ಕೆ ಒತ್ತಾಯಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಾರಿಗೆ ಇಲಾಖೆಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಬೇಕು.

೨೨. ಅಂಗಡಿ ಮುಂತಾದ ಯಾವುದೇ ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಕಚೇರಿಗಳು ಹೀಗೆ ಸಾರ್ವಜನಿಕವಾಗಿರುವ ಎಲ್ಲ ವಲಯಗಳು ಕನ್ನಡದಲ್ಲಿ ನಾಮಫಲಕಗಳನ್ನು ಬರೆಸಬೇಕಾದ್ದು ಕಡ್ಡಾಯವಾಗಿದೆ. ಸರ್ಕಾರದ ಅಂಗಡಿ ಮತ್ತು ವಾಣಿಜ್ಯ ಅಧಿನಿಯಮದ ೨೪ಎ ನಿಯಮದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿದ್ದು, ಮೊದಲು ಕನ್ನಡದಲ್ಲಿ ಬರೆಸಿ ಅದರ ಕೆಳಗೆ ಇತರ ಭಾಷೆಗಳಲ್ಲಿ ಬರೆಸಬಹುದಾಗಿದೆ. ನಾಮಫಲಕದಲ್ಲಿ ಕನ್ನಡ ಅನುಷ್ಠಾನದ ನೇರ ಉಸ್ತುವಾರಿಯನ್ನು ಕಾರ್ಮಿಕ ಇಲಾಖೆಯು ನಿರ್ವಹಿಸುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಈ ಅಂಶವು ಬರುವುದರಿಂದ ಕಾರ್ಮಿಕ ಇಲಾಖೆಯ ಮೂಲಕ ಅನುಷ್ಠಾನದ ಕ್ರಮಗಳನ್ನು ಪ್ರಾಧಿಕಾರವು ನಿರ್ದೇಶಿಸುತ್ತದೆ.

ಈ ಬಗ್ಗೆ ನಿರಂತರ ನಿಗಾವಹಿಸಬೇಕು. ಕನ್ನಡದಲ್ಲಿ ನಾಮಫಲಕ ಇಲ್ಲದಿದ್ದಾಗ ಕನ್ನಡಪರ ಆಸಕ್ತರು ಕಾರ್ಮಿಕ ಇಲಾಖೆ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತರಬೇಕು.

೨೩. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಕೆ.ಡಿ.ಪಿ. ಸಭೆಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿಯನ್ನು ಪರಿಶೀಲಿಸಬೇಕೆಂದು, ಈ ಬಗ್ಗೆ ಸರ್ಕಾರವು ಸೂಕ್ತ ನಿರ್ದೇಶನ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮಾಡಿದ ಶಿಫಾರಸ್ಸು ಮತ್ತು ಒತ್ತಾಯದ ಫಲವಾಗಿ ದಿನಾಂಕ ೨-೭-೨೦೦೨ ರಂದು ಸುತ್ತೋಲೆಯನ್ನು ಹೊರಡಿಸಲಾಯಿತು. (ಸಂಖ್ಯೆ: ಪಿಡಿ೮:ಐ.ಎಂ.ಎಂ.೨೦೦೨) ’ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಹಂತದ ಕೆ.ಡಿ.ಪಿ. ಸಭೆಗಳು ನಡೆಯುತ್ತವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸೂಕ್ತ ಹಾಗೂ ಅಧಿಕೃತ ಮಾಹಿತಿಗಳೊಂದಿಗೆ ಕನ್ನಡ ಅನುಷ್ಠಾನದ ಅಂಶಗಳನ್ನು ಕೆ.ಡಿ.ಪಿ. ಸಭೆಗಳಲ್ಲಿ ಮಂಡಿಸಬೇಕಾಗುತ್ತದೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಇಲಾಖೆ ಮತ್ತು ಸಂಸ್ಥೆಗಳ ಮುಖ್ಯಸ್ಥರು ಸಹಾಯಕ ನಿರ್ದೇಶಕರಿಗೆ ಮಾಹಿತಿ ಒದಗಿಸಿ ಸಹಕರಿಸಬೇಕೆಂದು ಸೂಚಿಸಲಾಗಿದ್ದು, ಸೂಕ್ತ ಸಹಕಾರ ನೀಡದಿದ್ದರೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಡೆದಿರುತ್ತಾರೆ.

೨೪. ಆಡಳಿತದಲ್ಲಿ ಕನ್ನಡವನ್ನು ಬಳಸದೆ ಇರುವ ನೌಕರರ ವಿರುದ್ಧ ಶಿಸ್ತುಕ್ರಮವನ್ನು ಜಾರಿ ಗೊಳಿಸುವ ಬಗ್ಗೆ ಸರ್ಕಾರವು ನಿರ್ದಿಷ್ಟ ಅಂಶಗಳುಳ್ಳ ಸುತ್ತೋಲೆಯನ್ನು ಹೊರಡಿಸ ಬೇಕೆಂದೂ, ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳ (ಕೆ.ಸಿ.ಎಸ್.ಆರ್.) ಅನ್ವಯ ಈ ಶಿಸ್ತು ಕ್ರಮವನ್ನು ಕೈಗೊಳ್ಳಬೇಕೆಂದೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ದಿನಾಂಕ ೧೭-೪-೨೦೦೨ ರಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದರು. (ಸಂಖ್ಯೆ ಕ.ಅ.ಪ್ರಾ..ಅ:೧೪೪:೨೦೦೨) ನಿರಂತರ ಒತ್ತಾಯ ಮತ್ತು ಸಮಾಲೋಚನೆಯ ಫಲವಾಗಿ ಸರ್ಕಾರವು ಕನ್ನಡ ಬಳಸದೆ ಇರುವ ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಕುರಿತು ಖಚಿತ ನಿರ್ದೇಶನಗಳುಳ್ಳ ಸುತ್ತೋಲೆಯನ್ನು ಹೊರಡಿಸಿತು. (ಸಂಖ್ಯೆ: ಸಂಕ ಇ ೩೯ ಕೆ‌ಒ‌ಎಲ್ ೨೦೦೨ ದಿನಾಂಕ ೧೩-೬-೨೦೦೨)

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದಲ್ಲಿ – ಕನ್ನಡವನ್ನು ಬಳಸದೆ ಇರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕರ್ತವ್ಯಲೋಪದ ಪ್ರಕರಣವನ್ನು ದಾಖಲಿಸಿ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ನೇಮಕಾತಿ ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡುವಂತೆ ತಿಳಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆರಂಭದಿಂದಲೂ ಅಗತ್ಯವಾದ ಸಂದರ್ಭಗಳಲ್ಲಿ ಈ ರೀತಿಯ ಕ್ರಮವನ್ನು ಕೈಗೊಳ್ಳುತ್ತ ಬಂದಿದೆ. ಆದರೆ ‘ಅಗತ್ಯ ಕ್ರಮ’ ಎಂಬುದನ್ನು ‘ಶಿಸ್ತಿನ ಕ್ರಮ’ವೆಂದು ಸ್ಪಷ್ಟಗೊಳಿಸುವ ಮತ್ತು ಶಿಸ್ತು ಕ್ರಮವನ್ನು ಕೆ.ಸಿ.ಎಸ್.ಆರ್. ಪ್ರಕಾರ ಕೈಗೊಳ್ಳುವ ಖಚಿತತೆಯ ಅಗತ್ಯವಿತ್ತು. ಈ ಅಗತ್ಯವನ್ನು ೧೩-೬-೨೦೦೨ರ ಸುತ್ತೋಲೆ ಪೂರೈಸಿದೆ. ಈ ಸುತ್ತೋಲೆಗಳ ಅಂಶಗಳು ‘ಕರ್ನಾಟಕ ರಾಜ್ಯಭಾಷಾ ಅಧಿನಿಯಮ ೧೯೬೩’ ಮತ್ತು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ’ಗಳ ಭಾಗವಾದರೆ ಮತ್ತಷ್ಟು ಶಾಸನಾತ್ಮಕ ಶಕ್ತಿ ಲಭ್ಯವಾಗುತ್ತದೆ. ಈ ಬಗ್ಗೆ ವಿಧಾನಮಂಡಲವು ಅನುಮೋದನೆ ನೀಡಬೇಕಾಗುತ್ತದೆ.

ಮಾಹಿತಿಗಾಗಿ ೧೩-೬-೨೦೦೮ರ ಸುತ್ತೋಲೆಯ ಕೆಲವು ಮುಖ್ಯಾಂಶಗಳನ್ನು ಗಮನಿಸಬಹುದು.

(ಅ) ಕನ್ನಡವನ್ನು ಬಳಸದೆ ಇರುವ ಸರ್ಕಾರಿ ನೌಕರರ ವಿರುದ್ಧ ಕೆ.ಸಿ.ಎಸ್.ಆರ್.ನ (ಕರ್ನಾಟಕ ಸಿವಿಲ್ ಸೇವೆಗಳ ನಿಯಮಾವಳಿ) ನಿಯಮ (೧೨ರ ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವನ್ನು ಈ ಸುತ್ತೋಲೆಯು ಒದಗಿಸುತ್ತದೆ. ವಾಗ್ದಂಡನೆ, ವಾರ್ಷಿಕ ವೇತನ ಬಡ್ತಿ ತಡೆಯುವುದು, ಪದೋನ್ನತಿಯನ್ನು ತಡೆಹಿಡಿಯುವುದು ಕಾಲವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸುವುದು- ಇವುಗಳಲ್ಲಿ ಒಂದು ಶಿಸ್ತಿನ ಕ್ರಮವನ್ನು ಕೈಗೊಳ್ಳಬಹುದು.

(ಆ) ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ದಿಷ್ಟ ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಸದರಿ ನೌಕರರ ‘ನೇಮಕಾತಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ ಮೂರು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು. ಹೀಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಂತಹ ನೇಮಕಾತಿ ಪ್ರಾಧಿಕಾರವನ್ನು ಸಕ್ಷಮ ಪ್ರಾಧಿಕಾರವು ಕರ್ತವ್ಯಲೋಪದ ಆರೋಪದ ಮೇಲೆ ಶಿಸ್ತಿನ ಕ್ರಮಕ್ಕೆ ಒಳಪಡಿಸತಕ್ಕದ್ದು.

(ಇ) ಈ ಸೂಚನೆಗಳು ಸರ್ಕಾರಿ ಇಲಾಖೆಗಳಿಗಲ್ಲದೆ, ಅಧೀನದಲ್ಲಿರುವ ನಿಗಮ, ಮಂಡಳಿ, ಕಂಪನಿ, ಸಾರ್ವಜನಿಕ ಉದ್ದಿಮೆಗಳು, ವಿಶ್ವವಿದ್ಯಾಲಯಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೂ ಅನ್ವಯಿಸುತ್ತವೆ.

ಸದರಿ ಸುತ್ತೋಲೆ ಹೊರಟ ನಂತರ ಕೆಲವು ನೌಕರರು ವಾಗ್ದಂಡನೆಗೆ ಒಳಗಾಗಿದ್ದರೆ, ಅನೇಕರು ಲಿಖಿತ ಕ್ಷಮಾಯಾಚನೆ ಮಾಡಿದ್ದಾರೆ. ನಿರಂತರ ಪರಿಶೀಲನೆ, ಒತ್ತಡ ಮತ್ತು ಕ್ರಿಯಾಶೀಲತೆಯಿಂದ ಈ ಸುತ್ತೋಲೆ ಯಶಸ್ವಿಯಾಗುತ್ತದೆ.

೨೫. ಕನ್ನಡವನ್ನು ಆಡಳಿತ ಭಾಷೆಯಾಗಿ ಪೂರ್ಣ ಅನುಷ್ಠಾನಗೊಳಿಸುವ ದಿಕ್ಕಿನಲ್ಲಿ ಅಂದಂದಿನ ಅಗತ್ಯಕ್ಕನುಗುಣವಾದ ತರಬೇತಿ ಶಿಬಿರಗಳನ್ನು ವ್ಯವಸ್ಥೆಗೊಳಿಸುವುದು, ಆಡಳಿತಕ್ಕೆ ಉಪಯುಕ್ತವಾದ ಸಾಹಿತ್ಯ ಸಾಮಗ್ರಿಯನ್ನು ಸಿದ್ಧಗೊಳಿಸುವುದು ಒಂದು ಪ್ರಕ್ರಿಯೆಯಾಗಬೇಕು.

೪. ಕನ್ನಡಾಭಿಮಾನದ ತಾತ್ವಿಕತೆ

ಕನ್ನಡಾಭಿಮಾನವೆಂದರೆ ಕೇವಲ ಭಾಷಿಕ ನೆಲೆಯಲ್ಲಿ ಇದ್ದರೆ ಸಾಲದು; ಅದು ಕನ್ನಡತನವಾಗಿ ಹೊರಹೊಮ್ಮಬೇಕು. ರಾಷ್ಟ್ರೀಯ ಅಂತರರಾಷ್ಟ್ರೀಯ ವಸ್ತು ವಿಶೇಷಗಳನ್ನು ಸ್ವೀಕರಿಸಿದರೂ ಸ್ಥಳೀಯ ಸಾಚಾತನವನ್ನು ಉಳಿಸಿಕೊಳ್ಳುವುದರಲ್ಲಿ ಈ ಕನ್ನಡತನವಿದೆ. ಯಾವುದೇ ಕ್ಷೇತ್ರ, ವಸ್ತು, ವಿನ್ಯಾಸ, ಪ್ರಕಾರಗಳಿರಲಿ, ಸ್ಥಳೀಯ ವಿಚಾರ, ವಿವೇಕ ಹಾಗೂ ಔಚಿತ್ಯಗಳನ್ನು ಒಳಗೊಂಡ ಸಂವೇದನೆಯ ಸ್ವರೂಪದಲ್ಲಿ ಕನ್ನಡತನವಿರಬೇಕು.

ಒಂದು ಕಾಲದಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಿ, ಕನ್ನಡ ಚಲನಚಿತ್ರಗಳನ್ನು ನೋಡಿ, ಎನ್ನುವುದೇ ಕನ್ನಡಾಭಿಮಾನವಾಗಿತ್ತು. ಎಂಥದೇ ಆಗಲಿ ಕನ್ನಡ ಪುಸ್ತಕ ಓದಿ ಎನ್ನುವುದು ಕನ್ನಡಾಭಿಮಾನವಾಗಿತ್ತು. ಕನ್ನಡ ನಾಟಕ ನೋಡಿ ಎಂದರೆ ಅದು ಕನ್ನಡಾಭಿಮಾನ ಎನ್ನಿಸುತ್ತಿತ್ತು. ಇಂದು ಕನ್ನಡ ಚಲನಚಿತ್ರ, ನಾಟಕ, ಪುಸ್ತಕಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಉತ್ತಮ ಅಭಿರುಚಿಯ ಚಲನಚಿತ್ರ, ನಾಟಕ, ಪುಸ್ತಕಗಳ ಬೆಳವಣಿಗೆಗೆ ಕಾರಣವಾಗುವುದು ಇಂದಿನ ಕನ್ನಡಾಭಿಮಾನವಾಗಬೇಕು. ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ಕೊಡಬೇಕೆಂದು ಅಶ್ಲೀಲ ಅರ್ಥದ ಮಾತುಗಳುಳ್ಳ ಚಿತ್ರವನ್ನು ನೋಡಿ ಕನ್ನಡಾಭಿಮಾನವನ್ನು ತೋರಬೇಕಾಗಿಲ್ಲ. ವಿಕಾರಗಳನ್ನು ಪ್ರದರ್ಶಿಸಿದ ಕನ್ನಡ ಚಲನಚಿತ್ರಗಳಿಗೆ ಮಾರುಹೋಗುವುದು ಕನ್ನಡಾಭಿಮಾನವಲ್ಲ. ದ್ವಂದ್ವಾರ್ಥ ಸಂಭಾಷಣೆಯ ನಾಟಕಕ್ಕೆ ಚಪ್ಪಾಳೆ ತಟ್ಟುವುದು, ಅಗ್ಗದ ಪುಸ್ತಕ, ನಾಟಕ, ಚಿತ್ರ, ಪತ್ರಿಕೆ-ಪೋಸ್ಟರ್‌ಗಳಿಗೆ ಪ್ರೋತ್ಸಾಹ ಕೊಡುವುದು ಕನ್ನಡತನದ ಕೆಲಸವಲ್ಲ. ಇಂದಿನ ಕನ್ನಡಾಭಿಮಾನವು ವಿವೇಕ, ಔಚಿತ್ಯ, ವಿಚಾರಗಳನ್ನು ಒಳಗೊಂಡ ಸಾಚಾ ಸಂವೇದನೆಯ ಆಕಾರವಾಗಿ ಪ್ರಕಟವಾಗಬೇಕು. ಕನ್ನಡದ ಹೊರಗಿನ ದಬ್ಬಾಳಿಕೆಗೆ ಪ್ರತಿರೋಧ ಒಡ್ಡುವುದಷ್ಟೇ ಅಲ್ಲ, ಕನ್ನಡದ ಒಳಗಿನ ವಿಕೃತಿಗಳಿಗೆ ವಿರೋಧವಾಗುವುದು ಕನ್ನಡಾಭಿಮಾನದ ತಾತ್ವಿಕ ನೆಲೆಯಾಗಬೇಕು. ಆಗ ಕನ್ನಡ ಹಾಗೂ ಕರ್ನಾಟಕದ ಮರ್‍ಯಾದೆ ಉಳಿಯುತ್ತದೆ.

ಕನ್ನಡಾಭಿಮಾನವೆಂದರೆ ಕೇವಲ ‘ಗತವೈಭವ’ದ ಕನವರಿಕೆಯಲ್ಲ : ಕನ್ನಡಾಭಿಮಾನವು ಸದಾ ಸಮಕಾಲೀನವಾಗುತ್ತ ಹೋಗುವ ಸಾರ್ಥಕ ಸಂವೇದನೆ.

ಈಗ ನೋಡಿ, ಕನ್ನಡ ನಾಡು ಶ್ರೀಗಂಧದ ನಾಡು ಎಂದು ವೈಭವೀಕರಿಸಲಾಗುತ್ತದೆ. ಕರ್ನಾಟಕದ ಬಹುಪಾಲು ಜನರು ಶ್ರೀಗಂಧವನ್ನು ನೋಡಲು ಸಾಧ್ಯವೇ ಆಗಿಲ್ಲ. ಹಾಗಿದ್ದರೆ ಶ್ರೀಗಂಧವಿಲ್ಲದೆ ಇರುವ ನಾಡು ಕನ್ನಡನಾಡಲ್ಲವೇ? ಕನ್ನಡನಾಡಿನಲ್ಲಿ ಶ್ರೀಗಂಧವೂ ಇದೆ; ಜಾಲಿಯ ಮರವೂ ಇದೆ; ಕೋಗಿಲೆಯೂ ಇದೆ, ಕಾಗೆಯೂ ಇದೆ; ಹರಿಯುವ ನದಿಗಳಿವೆ, ಬತ್ತಿದ ಕೆರೆಗಳಿವೆ. ವೈಭವೋಪೇತ ಸೌಧಗಳಿವೆ; ಸೊರಗಿದ ಗುಡಿಸಲುಗಳಿವೆ. ತುಂಬಿದ ಕಡಲು ಇದೆ; ಹಸಿದ ಒಡಲು ಇದೆ. ಹಸಿರಿನ ಕಾಡು ಇದೆ; ಒಣಗಿದ ಊರು ಇದೆ, ಕಾವೇರಿ ಕೃಷ್ಣೆಯರೂ ಇದ್ದಾರೆ; ನೀರಿಲ್ಲದ ಹಳ್ಳಗಳು ಇವೆ. ಬಿರುಕುಬಿಟ್ಟ ಕೆರೆಗಳೂ ಇವೆ. ಕನ್ನಡ-ಕರ್ನಾಟಕ ವೆಂದರೆ ಇವೆಲ್ಲವೂ ಮುಖ್ಯ. ನಮ್ಮದು ಹೇಗೆ ಶ್ರೀಗಂಧದ ಕರ್ನಾಟಕವೋ ಹಾಗೆಯೇ ಜಾಲಿ ಹೊಂಗೆಗಳ ಕರ್ನಾಟಕ, ಹೇಗೆ ಕೋಗಿಲೆಗಳ ಕರ್ನಾಟಕವೋ ಹಾಗೆಯೇ ಕಾಗೆಗಳ ಕರ್ನಾಟಕ ತುಂಬಿದ ಕಡಲ ಕರ್ನಾಟಕದಂತೆಯೇ ಹಸಿದ ಒಡಲುಗಳ ಕರ್ನಾಟಕ; ನಮ್ಮದು ಕಾವೇರಿ ಕೃಷ್ಣೆಯರ ಕರ್ನಾಟಕವೂ ಹೌದು; ಕೆರೆಗಳ ಕರ್ನಾಟಕವೂ ಹೌದು. ಇವೆಲ್ಲವನ್ನೂ ಬಿಟ್ಟು ಹುಸಿ ವೈಭವೀಕರಣದಲ್ಲಿ, ಗತವೈಭವದ ಗಾಣದಲ್ಲಿ, ಜಡವಾಗುವ ಮನೋಧರ್ಮವನ್ನು ರೂಪಿಸುವುದು ಕನ್ನಡಾಭಿಮಾನವಲ್ಲ, ಭೇದಭಾವಗಳಿಲ್ಲದ ಕರ್ನಾಟಕವನ್ನು ಕಾಣುವುದು ಕನ್ನಡಾಭಿಮಾನದ ಒಳನೋಟವಾಗಬೇಕು.

ಇಂದು ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿಕೊಂಡಿರುವವರು ಗ್ರಾಮೀಣ ಜನರು, ಹಾಗೂ ಹಳ್ಳಿ-ನಗರಗಳ ಬಡವರು. ಕನ್ನಡವನ್ನು ಉಸಿರಾಗಿಸಿಕೊಂಡಿರುವ ಬಡವರ ಉನ್ನತಿಯಲ್ಲಿ ಕನ್ನಡಾಭಿಮಾನದ ವಿಚಾರಗಳು ವಿಕಾಸವಾಗಬೇಕು. ಕರ್ನಾಟಕದ ಬಲ್ಲಿದರ ನೆಲೆಯಿಂದ ಬೆಳೆಯುವ ಕನ್ನಡಾಭಿಮಾನವು ರಾಜ ಮಹಾರಾಜರ ವೈಭವ, ಯುದ್ಧೋನ್ಮಾದ, ಹುಸಿ ವೀರತನಗಳನ್ನು ಒಳಗೊಂಡು, ನಾಡನ್ನು ಕಟ್ಟಿದ ಬಡವರ ಬೆವರನ್ನು ನಿರ್ಲಕ್ಷಿಸುವಂತಾಗ ಬಾರದು. ಕೋಟೆ, ಕೊತ್ತಲಗಳನ್ನು, ಗುಡಿಗೋಪುರಗಳನ್ನು, ಬೆವರು ಬಸಿದು ಕಟ್ಟಿದ ಬಡ ಕನ್ನಡಿಗರನ್ನು ಮರೆತು ಕೇವಲ ಕಟ್ಟಿಸಿದ ರಾಜಮಹಾರಾಜರನ್ನು ಮೆರೆಸುವುದು ಕನ್ನಡ ಸಂಸ್ಕೃತಿ ಯಾಗಬಾರದು; ಇದೇ ಕರ್ನಾಟಕದ ಚರಿತ್ರೆಯಾಗಬಾರದು. ಕಟ್ಟಿಸಿದವನನ್ನು ಮತ್ತು ಕಟ್ಟಿದವರನ್ನು ಒಟ್ಟಿಗೇ ಗ್ರಹಿಸುತ್ತ ಕಟ್ಟಿ ಕೊಡುವುದು ನಿಜವಾದ ಚರಿತ್ರೆ. ಕನ್ನಡಾಭಿಮಾನವು ಇಂತಹ ಚರಿತ್ರೆಯನ್ನು ತನ್ನದಾಗಿಸಿಕೊಂಡು ಬೆಳೆಯಬೇಕೇ ಹೊರತು, ಜನರನ್ನು ಮರೆತು ರಾಜರನ್ನು ಮೆರೆಸುತ್ತ ಹೋಗಬಾರದು. ಉತ್ತಮ ರಾಜರು ಮತ್ತು ಜನರು ಈ ನಾಡಿನ ಇತಿಹಾಸವನ್ನು ನಿರ್ಮಿಸಿದ ನಿಜದ ನೆಲೆಗಳೆಂಬ ಅರಿವು ಅಗತ್ಯ.

ಇಂಡಿಯಾ ಹೇಗೆ ಏಕಮುಖೀ ಸಂಸ್ಕೃತಿಯನ್ನು ಪಡೆದಿಲ್ಲವೋ ಹಾಗೆಯೇ ಕರ್ನಾಟಕವೂ ಏಕಮುಖೀ ಸಂಸ್ಕೃತಿಯನ್ನು ಪಡೆದಿಲ್ಲ. ನಮ್ಮ ದೇಶ ಬಹುಸಂಸ್ಕೃತಿಗಳ ದೇಶ. ಅಂತೆಯೇ ಪ್ರತಿರಾಜ್ಯದಲ್ಲೂ ಬಹುಸಂಸ್ಕೃತಿಗಳಿವೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ನಮ್ಮಲ್ಲಿ ಒಂದೇ ಮತವಿಲ್ಲ; ಒಂದೇ ಧರ್ಮವಿಲ್ಲ. ಒಂದೇ ಜೀವನವಿಧಾನವಿಲ್ಲ; ಒಂದೇ ಮಾದರಿಯ ಚರಿತ್ರೆ ಪುರಾಣಗಳಿಲ್ಲ. ನಗರದ ಜನರಿದ್ದಾರೆ; ಗ್ರಾಮೀಣ ಜನರಿದ್ದಾರೆ. ಗ್ರಾಮ-ನಗರಗಳನ್ನು ನೋಡದ ಬುಡಕಟ್ಟುಗಳ, ಜನರೂ ಇದ್ದಾರೆ. ಅಲೆಮಾರಿ ಬಂಧುಗಳೂ ಇದ್ದಾರೆ. ಇವರೆಲ್ಲರನ್ನು ಒಳ ಗೊಂಡದ್ದು ಕರ್ನಾಟಕ, ಕನ್ನಡವನ್ನು ಇಡೀ ಕರ್ನಾಟಕದ ಆಡಳಿತಾತ್ಮಕ ಏಕಸೂತ್ರವಾಗಿ ಸ್ವೀಕರಿಸುತ್ತಲೇ ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುವುದು ನಮ್ಮ ಕನ್ನಡಾಭಿಮಾನದ ವಿವೇಕವಾಗಬೇಕು. ಕನ್ನಡದ ಕೆಲಸವೆಂದರೆ ಏಕಮುಖೀ ಕೆಲಸವಲ್ಲ. ಅದು ಬಹುಮುಖೀ ಕೆಲಸ. ಅದೊಂದು ಚಲನಶೀಲ, ಚಿಂತನಶೀಲ ಪ್ರಕ್ರಿಯೆ, ಕನ್ನಡಾಭಿಮಾನವು ಸದಾ ಚಲನಶೀಲ ವಾಗಿರಬೇಕು; ಚಿಂತನಶೀಲವಾಗಿರಬೇಕು. ಬಹುಮುಖಿಯಾದ ಕನ್ನಡದ ಕೆಲಸಗಳಲ್ಲಿ ಆದ್ಯತೆಯನ್ನು ಗುರುತಿಸಿಕೊಳ್ಳಬೇಕು. ದೂರಗಾಮಿ ಪರಿಣಾಮ ಹಾಗೂ ಗಟ್ಟಿ ಫಲಶೃತಿಯ ಕೆಲಸ ಗಳನ್ನು ಮೊದಲ ಆದ್ಯತೆಯಾಗಿ ಸ್ವೀಕರಿಸಬೇಕು. ನಮ್ಮಲ್ಲಿ ಕಾಲು ಶತಮಾನದ ಹಿಂದಿನ ಆದ್ಯತೆಗಳೇ ಇಂದಿನ ಆದ್ಯತೆಗಳೂ ಆಗಿರುವುದು ಒಂದು ವಿಪರ್ಯಾಸ. ಹೌದು, ಪಟ್ಟಿ ಮಾಡಿದರೆ ಅದರಲ್ಲಿ ಅಡಕವಾಗುವ ಹತ್ತಾರು ಕೆಲಸಗಳೆಲ್ಲ ಕನ್ನಡದ ಕೆಲಸಗಳೇ ಆಗಿರುತ್ತವೆ. ಆದರೆ ಅತಿಮುಖ್ಯವಾದುದು ಯಾವುದು ಎಂದು ಗುರುತಿಸುವ ವಿವೇಕವೂ ಬೇಕಲ್ಲವೆ?

ಕನ್ನಡಾಭಿಮಾನವೆಂದರೆ ಪೀಳಿಗೆಯಿಂದ ಪೀಳಿಗೆಗೆ ಕನ್ನಡತನವನ್ನು ಕೊಂಡೊಯ್ಯುವ ಒಂದು ಪರಂಪರೆ.

ಕೇವಲ ಕಂಠದಲ್ಲಿ ಹುಟ್ಟಿ ಅಲ್ಲಿಯೇ ಅಂತ್ಯವಾಗುವ ಕೂಗು ಕನ್ನಡವನ್ನು ಬೆಳೆಸುವುದಿಲ್ಲ. ಒಂದು ಕಾಲಘಟ್ಟದಲ್ಲಿ ಕನ್ನಡವನ್ನು ಉಳಿಸುವುದಕ್ಕೆ ಇಂತಹ ಕೂಗು ಸಹಕಾರಿಯಾಗಿರುವುದು ನಿಜ; ಆದರೆ ಇಂದು ನಾವು ಅಲ್ಲಿಯೇ ನಿಲ್ಲಬೇಕಾಗಿಲ್ಲ. ನಮ್ಮ ಕನ್ನಡಕ್ಕೆ ಕಂಠದ ಕೂಗುಬೇಕು. ಆದರೆ ‘ಕೇವಲ’ ಕಂಠದ ಕೂಗಾಗುವುದು ಬೇಡ. ಕೇವಲ ಕಂಠದಲ್ಲೇ ಉಳಿಯುವ ಕೂಗುಗಳು ಕನ್ನಡದ ಬಾಹ್ಯ ಸಂಕೇತಗಳನ್ನು ವಿಜೃಂಭಿಸುತ್ತವೆ; ಕನ್ನಡಾಭಿಮಾನವೆಂದರೆ ಕೇವಲ ಹೊರಗಷ್ಟೇ ಕಾಣಿಸುವ ಕನ್ನಡದ ಅಂಕಿ-ಅಕ್ಷರಗಳಷ್ಟೇ ಎಂದು ಪ್ರಚುರಪಡಿಸುತ್ತವೆ. ಈ ಅಂಕಿ-ಅಕ್ಷರಗಳು ಅಂತರಂಗವಾಗಬೇಕು ಎಂಬ ಕಾಳಜಿಯಿಂದ ಕನ್ನಡಾಭಿಮಾನ ಬೆಳೆದಾಗ ಅದಕ್ಕೆ ಜೀವಶಕ್ತಿ ಒದಗುತ್ತದೆ. ಅಂತರಂಗ-ಬಹಿರಂಗಗಳೊಂದಾದ ಕನ್ನಡತನ ರೂಪುಗೊಳ್ಳುತ್ತದೆ. ನಾವು ಹೊರಗೆ ಎದ್ದುಕಾಣುವ ಸಾಂಕೇತಿಕ ಕನ್ನಡದ ಕೆಲಸಗಳ ಬಗ್ಗೆ ಮಾತಾಡಬೇಕು; ಆದರೆ ಅಲ್ಲಿಯೇ ನಿಲ್ಲಬಾರದು. ಅದೆ ಅಂತಿಮವಾಗಬಾರದು. ಸಾಂಕೇತಿಕ ಕೆಲಸಗಳನ್ನು ಒಳಗೊಳ್ಳುತ್ತಲೇ ಅವನ್ನು ಮೀರಿದ ಕನ್ನಡಾಭಿಮಾನದ ಭಾಷೆ-ಪರಿಭಾಷೆಗಳು ನಮ್ಮದಾಗಬೇಕು. ಆಗ ನಾವು ಆಡುವ ಕನ್ನಡಪರ ಮಾತುಗಳು ಕೇವಲ ಕಂಠದ ಕೂಗುಗಳಾಗುವುದಿಲ್ಲ. ಈ ಕೂಗಿನಲ್ಲೂ ನೈಜ ಕಾಳಜಿ, ಕಳಕಳಿ ಇರುತ್ತದೆ. ಕೂಗು ಒಂದು ದನಿಯಾಗುತ್ತದೆ; ಧ್ವನಿಯಾಗುತ್ತ ಹೋಗುತ್ತದೆ.

ಕನ್ನಡ ಪರಂಪರೆಯನ್ನು ಬೆಳೆಸಿದ ಸಾವಿರಾರು ವರ್ಷಗಳ ವಿವಿಧ ವ್ಯಕ್ತಿತ್ವಗಳ ಜೊತೆಗೆ ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಕನ್ನಡವನ್ನು ದನಿಯಾಗಿಸಿದ ಕನ್ನಡ ಚಿಂತನಕಾರರು ಹಾಗೂ ಕನ್ನಡ ಚಳವಳಿಗಾರರನ್ನು ಇಡಿಯಾಗಿ ನೆನೆಯಬೇಕು. ಆಧುನಿಕ ಸಂದರ್ಭದಲ್ಲಿ ಅವರು ಆರಂಭಿಸಿದ ಕೆಲಸವನ್ನು ನೆನೆಯುತ್ತಲೇ ಸಮಕಾಲೀನ ಸಂದರ್ಭಕ್ಕೆ ತಕ್ಕುದಾದ, ದೂರಗಾಮಿಯಾದ ಕನ್ನಡಾಭಿಮಾನದತ್ತ ಸಾಗಬೇಕು. ನಾವು ನಿಂತ ನೀರಾಗಬಾರದು; ಕನ್ನಡಾಭಿಮಾನ ಕ್ಲೀಷೆಯಾಗಬಾರದು. ಕ್ರಿಯಾಶೀಲತೆ ಮತ್ತು ಚಿಂತನಶೀಲತೆಗಳು ಒಂದಾದ ತತ್ವವಾಗಬೇಕು.

ಕನ್ನಡಪರವಾದ ಮಾತು ಕರುಳಿನಿಂದ ಬಂದರೆ, ಅದಕ್ಕೆ ತಾಯಿತನ ಮತ್ತು ತಾಯಿತತ್ವ – ಎರಡೂ ಸೇರಿಕೊಳ್ಳುತ್ತವೆ. ತಾಯಿತನ ಯಾವತ್ತೂ ದ್ವೇಷಮೂಲವಾದುದಲ್ಲ. ಅದು ದ್ವೇಷದಿಂದ ಅಭಿಮಾನವನ್ನು ಬೆಳೆಸುವುದಿಲ್ಲ. ಒಳಗಿನ ವಾತ್ಸಲ್ಯದಿಂದ ವಿಕಾಸಗೊಳಿಸುತ್ತದೆ. ತಾಯಿಯ ಸಂವೇದನಾಶೀಲತೆ, ಸಂಕಟಮೂಲ ಸಿಟ್ಟಿನ ಸ್ಫೋಟ, ಪ್ರೀತಿಯ ಒತ್ತಾಸೆಗಳನ್ನು ಒಳಗೊಂಡ ಅಭಿಮಾನದ ಸ್ವರೂಪ ವಿಶಿಷ್ಟವಾಗುತ್ತದೆ. ಇದು ಅಂತಃಕರಣ ಮೂಲ ಅಭಿಮಾನ-ಕರುಳಿನ ಕನ್ನಡಾಭಿಮಾನ.

ಒಳಗಿನ ಒತ್ತಾಸೆಯಲ್ಲಿ ಹುಟ್ಟಿ ರಚನಾತ್ಮಕ ರೂಪ ಪಡೆಯಬೇಕಾದ ಕನ್ನಡಾಭಿಮಾನಕ್ಕೆ ಬದಲಾಗಿ, ನಕಾರಾತ್ಮಕ ಹಾಗೂ ಪ್ರಚೋದನಾತ್ಮಕ ವಿಧಾನವನ್ನೇ ಕನ್ನಡಾಭಿಮಾನವೆಂದು ನಂಬಿಸುವ ಪ್ರಯತ್ನಗಳು ನಾಡು-ನುಡಿಗೆ ಯಾವತ್ತೂ ಪ್ರಯೋಜನಕಾರಿಯಲ್ಲ.

ನಮಗೆ ನೆನಪಿರಬೇಕು: ಸಂಕಟವಿಲ್ಲದ ಸಿಟ್ಟು, ಅಂತಃಕರಣವಿಲ್ಲದ ಆಕ್ರೋಶಗಳು ಕೇವಲ ಕಂಠವನ್ನಷ್ಟೇ ವಿಜೃಂಭಿಸುತ್ತವೆ. ಕರುಳು ಕಂಠಕ್ಕೆ ಒಂದು ಮಾತಾದಾಗ ಪ್ರಖರ ಪ್ರಾಮಾಣಿಕತೆ ಮತ್ತು ಪ್ರಬುದ್ಧತೆಗಳು ಒದಗಿ ಬರುತ್ತವೆ. ನಿಜ; ನಮ್ಮ ಕನ್ನಡಾಭಿಮಾನಕ್ಕೆ ಕರುಳಿನ ಜೊತೆ ಕಂಠವೂ ಬೇಕು. ಆದರೆ ಕರುಳಿಲ್ಲದ ಕಂಠ, ಅರ್ಥವಿಲ್ಲದ ಅಬ್ಬರವಾಗುವ ಅಪಾಯವಿದೆ.

ಇಂದು ಕನ್ನಡಕ್ಕೆ ಬೇಕಾದ್ದು ನಾಗರವಾಗದ ನಾಲಗೆ; ದೂರಗಾಮಿ ಬೆಳವಣಿಗೆ, ನಮಗೆ ಕೊರಳಿನ ಕನ್ನಡಾಭಿಮಾನದ ಬದಲು ಕರುಳಿನ ಕನ್ನಡಾಭಿಮಾನ ಬೇಕು; ಕನ್ನಡಿಗರ ಕೊರಳು, ಕರುಳಿನ ದನಿಯಾಗಬೇಕು.
*****
(ಮೇ-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡಿನಾ ಮರೀ!
Next post ಕೊನೆಗೀಗ ನೋವೆಂದರೆ…..

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…