ರಜದಲ್ಲೇನು ಮಾಡುವಿರಿ ಎಂದು ಕೇಳಿದರು ಟೀಚರು
ಊರಿಗೆ ಹೋಗುತ್ತೇವೆ ಎಂದರು ಒಬ್ಬಿಬ್ಬರು
ಊಟ, ಆಟ ಎಂದು ಪಿಸುಗುಟ್ಟಿ ನಕ್ಕರು ತುಂಟರು
ಒಬ್ಬರಿದ್ದಂತಿದ್ದರಲ್ಲವೆ ಇನ್ನೊಬ್ಬರು?
ತಲೆಗೊಂದರಂತೆ ಮಾತು ಗದ್ದಲಿಸಿದರು
ಅದೇನು ಮಾಡುತ್ತಿರೊ ಮಾಡಿ ಅಂದರು ಟೀಚರು
ಮಾಡಿದ್ದನ್ನೆಲ್ಲಾ ದಿನವೂ ಬರೆದಿಡಿ ಅಂದರು
‘ಇದ್ದದ್ದು ಇದ್ದ ಹಾಗೆಯೇ’ ಎಂದೂ ಸೇರಿಸಿದರು.

ಹೀಗೆ ಊಟ ಆಟದ ಜೊತೆಗೆ
ದಿನಚರಿ ಬರೆಯುವುದೂ ಸೇರಿಕೊಂಡಿತು
ಆಡಿದ್ದು, ನೋಡಿದ್ದು, ಮಾಡಿದ್ದು
ಬರೆದಂತೆಲ್ಲ ಚುರುಮುರಿ ಉಂಡೆಯದೆ ರುಚಿ ಕಂಡಿತು.

ರಜೆಯಲ್ಲೂ ಬರೆಯುವುದೇ? ಎಂದು
ಅಜ್ಜಿ ಗೊಣಗುಟ್ಟಿದರು.
ನೆಪಕ್ಕೆ ಟೀಚರಿನ ಹೆಸರು
ಇವಳದೆ ಕಾರು-ಬಾರು ಎಂದು
ಅಮ್ಮ ಮೆಣಸು ಕುಟ್ಟಿದರು.
ನಾವೂ ಬರೆಯುತ್ತೇವೆ ಎಂದು
ತಮ್ಮಂದಿರು ಹಠ ಮಾಡಿದರು.

ಹೀಗೆ

ಹೊಂಡದ ಮೀನುಗಳಿಗೆ ಮಂಡಕ್ಕಿ ಕೊಟ್ಟಿದ್ದು
ನಿಂಬೆಯ ಗಿಡದಲ್ಲಿದ್ದ ಮೊಟ್ಟೆ ಮರಿಯಾಗಿ
ಚಿಟ್ಟೆಯಾಗಿ ಹಾರಿದ್ದು
ಸೇವಂತಿಗೆ ದಾಸವಾಳಕ್ಕೆ ನೀರೆರದದ್ದು
ದಿನಚರಿಯಲ್ಲಿ ಸೇರಿತು.

ಜರಿಲಂಗಕ್ಕಾಗಿ ಅತ್ತ ಅಮ್ಮನ ಮೇಲೆ
ಮುನಿಸಿಕೊಂಡಿದ್ದು
ಅಪ್ಪ ತರುವ ಮಿಠಾಯಿಗಾಗಿ ರಾತ್ರಿಯೆಲ್ಲಾ
ಕಣ್ಣಿಗೆ ಎಣ್ಣೆ ಬಿಟ್ಟು ಕೂತದ್ದು
ದಿನಚರಿಯಲ್ಲಿ ಸೇರಿತು.

ಅಂಡಾ ಭಂಡಾ ಅಡಿ ಕುಂಟಾಬಿಲ್ಲೆ ಗೆದ್ದದ್ದು
ಒಟ್ಟು ಮಾಡಿದ ಬಳೆ ಚೂರುಗಳನ್ನು
ಗುಟ್ಟಾಗಿ ನಿಧಿಯಂತೆ ಅಡಗಿಸಿಟ್ಟಿದ್ದು
ದಿನಚರಿಯಲ್ಲಿ ಸೇರಿತು.

ಕೊಳಲೂದಿ ಅಜ್ಜಿಯ ಕಿವಿ ತೂತು ಮಾಡಿದ್ದು
ಮಣ್ಣಿಗೆ ನೀರು ಹಾಕಿ ಪಾಯಸವೆಂದು
ತಂಗಿಗೆ ನಂಬಿಸಿದ್ದು
ದಿನಚರಿಯಲ್ಲಿ ಸೇರಿತು.

ತೆಂಗಿನ ಗರಿಯ ವಾಚಿನ ಆಸೆಗೆ
ಪರಮವೈರಿಯೊಂದಿಗೂ ರಾಜಿಯಾದದ್ದು
‘ನಿದ್ರಾ ಸುಂದರಿ’ ಕಥೆಯೋದುತ್ತಾ
ಹಾಗೆಯೆ ನಿದ್ರೆ ಹೋದದ್ದು
ದಿನಚರಿಯಲ್ಲಿ ಸೇರಿತು.

ಕನಸಿನ ತುಂಬಾ ಪೆಪ್ಪರಮೆಂಟಿನ
ಮಳೆ ಸುರಿದದ್ದು
ನಿಜ ಜೀವನದಲ್ಲಿ ಪೈಗೆ ಪೈ ಕೂಡಿಟ್ಟರೂ
ಪೆಪ್ಪರಮೆಂಟು ಕೊಳ್ಳದೆ ಇದದ್ದು
ದಿನಚರಿಯಲ್ಲಿ ಸೇರಿತು.

ಕಾದೂ ಕಾದೂ ಕೊನೆಗೆ
ಶಾಲೆ ಕದ ತೆರೆಯಿತು
ಆವೊತ್ತಿನ ಮಾತುಕತೆ ಕಿತ್ತಾಟ
ಕುಣಿತ ದಿನಚರಿ ಕುರಿತೆ ಆಗಿತ್ತು
ಕೊನೆಗೆ ಎಲ್ಲರೂ ಸೇರಿ
ಎಲ್ಲವನ್ನೂ ಓದಿದ್ದೂ ಆಯಿತು.

ನನಗೋ…. ನನ್ನ ಗೆಳತಿಯರ
ದಿನಚರಿಯೆ ಚೆನ್ನಾಗಿದೆ ಅನ್ನಿಸತೊಡಗಿತ್ತು.
ನನ್ನ ಬಳಿ ಇಲ್ಲದ್ದು ಅವರ ಬಳಿ
ಇದೆ ಎಂದೆನಿಸುತ್ತಿತ್ತು.
ಅವರ ಬಳಿ ಇದ್ದದ್ದೆಲ್ಲವೂ ನನಗೂ
ಬೇಕೆನಿಸುತ್ತಿತ್ತು.

ಅವರ ದಿನಚರಿಗಳಲ್ಲಿ
ಬಣ್ಣ, ಬೆರಗು, ಬೆಡಗು
ಎಲ್ಲವೂ ಇದೆ ಎಂದೆನಿಸುತ್ತಿತ್ತು.
ಆ ರಂಗು, ರಂಜನೆ, ರೋಮಾಂಚನ
ಹೊಟ್ಟೆ ಉರಿಸುತ್ತಿತ್ತು.
ಹುಲಿ, ಕರಡಿ, ಆನೆ, ಕೊಕ್ಕರೆಗಳು
ರೈಲುಬಂಡಿ, ಅರಮನೆ ಆಟಿಕೆಗಳು
ಕಣ್ಣಿಗೆ ಕಟ್ಟಿದಂತಿತ್ತು.

ಟೀಚರೇನೋ ಎಲ್ಲರಿಗೂ ಕೊಡುವಂತೆ
ನನಗೂ ಮಾರ್‍ಕು ಕೊಟ್ಟಿದ್ದರು
ಅಭಿಮಾನವೊ? ಅನುಮಾನವೊ?
ಕಣ್ಣೀರು ತುಂಬಿ ತುಳುಕುತ್ತಿತ್ತು.

ಆಮೇಲೇನೂ ದಿನಚರಿ ಬರೆಯಲು
ಯಾರ ಒತ್ತಾಯವೂ ಇರಲಿಲ್ಲ
ಬರೆಯುವುದೂ ನಿಲ್ಲಲಿಲ್ಲ
ಆದರೆ ಇದ್ದದ್ದು ಇದ್ದ ಹಾಗೆಯೇ ಅಲ್ಲ!

ಕಲ್ಪನೆಗೆ ಕುದುರೆ ರಥ ಕಟ್ಟಿದ್ದಷ್ಟೇ ಗೊತ್ತು
ರಥ ಓಡಿತು.
ಆಸೆಹಕ್ಕಿಗೆ ರೆಕ್ಕೆ ಮೂಡಿಸಿದಷ್ಟೇ ಗೊತ್ತು
ಹಕ್ಕಿ ದೂರ ದೂರ ಹಾರಿತು.

ಇವತ್ತಿಗೂ ರಥ ಓಡುತ್ತಲೇ ಇದೆ
ಕುದುರೆಗಳ ಕಾಲು ಸೋತಂತಿಲ್ಲ
ಇವತ್ತಿಗೂ ಹಕ್ಕಿ ಹಾರುತ್ತಲೇ ಇದೆ
ಕಿಂಚಿತ್ತೂ ಆಯಾಸಗೊಂಡಿಲ್ಲ.

ಇಷ್ಟು ದಿನಗಳಾದ ಮೇಲೆ
ಇಷ್ಟು ದೊಡ್ಡವಳಾದ ಮೇಲೆ
ಕಡಲಲ್ಲಿ ಗುಮ್ಮನಂತೆ ನಿಂತಿರುವ
ಭಾರಿ ಹಡಗನ್ನ ನೋಡಿದಾಗೆಲ್ಲ
ನೆನಪಿನ ತಂತಿಗಳು ಮಿಡಿದು
ನಾನು ಕೈಯಾರೆ ಮಾಡಿ ತೇಲಿಸಿದ
ಕಾಗದದ ದೋಣಿ ಕಣ್ಣೊಳಗೇ ನಿಲ್ಲುತ್ತೆ.

ಆ ಹರ್‍ಷ, ವಿಷಾದ, ಒಲುಮೆ
ಆಸೆ ಆಕಾಂಕ್ಷೆಯ ಕುಲುಮೆ
ಇಂದಿಗೂ ಬೆಚ್ಚಗೆ ಉರಿದಿದೆ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)