ಮರೆಯಲಾರೆ ಎನ್ನರಸ
ಮರೆಯದಿರು ಎನ್ನ
ಮರೆತಂತೆ ಭಾವನೆಗಳನು||

ಕನಸಿನ ಹಗಲಿರುಳಲ್ಲಿ
ಸುಂದರ ನೆನಪುಗಳ ತೀಡಿ
ಸೆರೆಯಾದ ಭಾವ ಜೀವವ
ಕದಡಿ ಕಾಡುವೆ ಏಕೆ ಹಗಲಿರುಳು||

ಮುಂಜಾನೆಯಂಗಳದೆ
ಬಾನಂಚಿನ ಬಣ್ಣ ಧರೆಗೆ
ಮುಖ ಚೆಲ್ಲಿದಾಗ ಮನವ
ಕದಡಿ ಕಾಡುವೆ ಏಕೆ ಹಗಲಿರುಳು||

ಸಿಕ್ಕು ಹಿಡಿದಾ ಬಲೆಯ
ದುಃಖ ದುಮ್ಮಾನ ಕಳೆಯ
ಬಿಡಿಸಿ ಜೋಪಾನವಾಗಿಸಿ
ಕದಡಿ ಕಾಡುವೆ ಏಕೆ ಹಗಲಿರುಳು||

ಮಿಡಿವ ತುಡಿವ ಮೌನ
ಗಾನದೆದೆಯಲ್ಲಿ ಝೇಂಕರಿಸಿ
ಭೃಂಗ ನರ್‍ತಿಸಿ ಸೆಳೆದಾಗ ಮನ
ಕದಡಿ ಕಾಡುವೆ ಏಕೆ ಹಗಲಿರುಳು||

ತಳಿರು ತೋರಣ
ಸುಖಾಗಮನ ಅನುಪಮದೊಲುಮೆ
ರಮೆ ಉಮೆಯರ ಕದ್ದು ಎನ್ನ
ಕದಡಿ ಕಾಡುವೆ ಏಕೆ ಹಗಲಿರುಳು||
*****