ಒಂದೂರಲ್ಲಿ ಕಲ್ಲಣ್ಣ ಮಲ್ಲಣ್ಣ ಎಂಬ ಇಬ್ಬರು ಗರಡಿಯಾಳುಗಳು, ಸಮ ವಯಸ್ಕರು, ಸಮಾನಶೀಲರು ಆಗಿದ್ದರು. ಅವರ ಸ್ನೇಹವೇ ಸ್ನೇಹ, ಹಾಲು ಸಕ್ಕರೆ ಬೆರೆತಂತೆ. ದಿನಾಲು ಗರಡಿ ಮನೆಯಲ್ಲಿ ಕೊಡಿಯೇ ಸಾಮು – ಬೈಠಕುಗಳಲ್ಲದೆ ಲೋಡು ತಿರುಹುವುದು, ಮಲ್ಲಕಂಬ ಆಡುವುದು ಮೊದಲಾದ ಶಾರೀರಿಕ ಶಿಸ್ತುಗಳಲ್ಲಿ ನಿಪುಣರಾಗಿದ್ದರು. ಕ್ರಮವರಿತು ಕತ್ತಿಢಾಲುಗಳನ್ನು ಉಪಯೋಗಿಸುವ ಕಲೆಯನ್ನು ಸಾಧಿಸಿದವರು, ಈ ಊರಲ್ಲಿ ಅವರಿಬ್ಬರೇ ಆಗಿದ್ದರು. ಇಷ್ಟೊಂದು ಅನ್ಯೋನ್ಯವಾಗಿ ಅವರು ತಪ್ಪದೆ ಒಂದೆಡೆಯಲ್ಲಿಯೇ ಇರುತ್ತಿದ್ದರೂ ಕಲ್ಲಣ್ಣನ ಮನೆ ಯಾವ ಓಣಿಯಲ್ಲಿದೆ ಎನ್ನುವುದು ಮಲ್ಲಣ್ಣನಿಗೆ ತಿಳಿಯದು. ಮಲ್ಲಣ್ಣನ ಮನೆಯೆಲ್ಲಿ ಎನ್ನುವುದು ಕಲ್ಲಣ್ಣನಿಗೆ ತಿಳಿಯದು. ಕಲ್ಲ – ಮಲ್ಲ ಹೆಸರಿಗೆ ಒಪ್ಪುವಂತೆ ಅವರಿದ್ದರು.

ಹನುಮಂತದೇವರ ಗುಡಿಯ ಮಗ್ಗುಲಲ್ಲಿರುವ ಗರಡಿಮನೆಯಲ್ಲಿ ಅವರಿಬ್ಬರು ಸಾಧನೆಮಾಡುತ್ತಿರುವಾಗ, ಕಲ್ಲಣ್ಣನು ಕೊಡಹೊತ್ತು ಸಾಗಿದ ಒಬ್ಬ ತರುಣಿಯನ್ನು ಕಂಡನು. ಆಕೆಯನ್ನು ಕಂಡು ಆತನಿಗೆ ಬವಳಿಕೆಯೇ ಬಂತು. ಕಣ್ಣು ಕುಕ್ಕಿ ಹೋದವು. ಮನಸ್ಸು ಕಕ್ಕಾವಿಕ್ಕಿ ಆಯಿತು. ಮಲ್ಲಣ್ಣನನ್ನು ಹತ್ತಿರ ಕರೆದು ಕೇಳಿದನು – “ಆ ಚೆಲುವೆಯಾರು ? ಆಕೆ ಒಂದು ರಾತ್ರಿಮಟ್ಟಿಗಾದರೂ ನನ್ನವಳಾಗುವಂತೆ ಮಾಡಿ ಈ ಮಿತ್ರನನ್ನು ಬದುಕಿಸು.”

ಆ ಮಾತು ಕೇಳಿ ಮಲ್ಲಣ್ಣನಿಗೆ ದಿಕ್ಕೇ ತೋಚದಂತಾಯಿತು. ಅಲ್ಲಿ ಹಾದು ಹೋದ ಚೆಲುವೆ ಆತನ ಹೆಂಡತಿಯೇ ಆಗಿದ್ದಳು. ಅದನ್ನು ಹೇಳಿಬಿಟ್ಟರೆ ತಮ್ಮ ಗೆಳೆತನಕ್ಕೇನಾದರೂ ಭಂಗವುಂಟಾದೀತೆಂದು ಭಾವಿಸಿ – “ಆಕೆ ಈ ಊರಿನ ಸೂಳೆ” ಎಂದು ಗಟ್ಟಿ ಜೀವಮಾಡಿ, ಧೃಢಮನದಿಂದ ನುಡಿದನು. ಅದೇ ಯೋಚನೆಯಲ್ಲಿಯೇ ಮನೆಗೆ ಬಂದನು ಮಲ್ಲಣ್ಣ.

ಮೆಲ್ಲನೆ ಹೆಂಡತಿಯ ಬಳಿಗೆ ಹೋಗಿ ಆಕೆಯನ್ನು ಒಲಿಸಲು ಯತ್ನಿಸಿದ್ದು ಹೇಗೆಂದರೆ – “ರಾಣೀ, ನನ್ನ ಗೆಳೆಯನೊಬ್ಬ ನಿನ್ನ ಚೆಲುವಿಕೆಗೆ ಮಾರುವೋಗಿದ್ದಾನೆ. ಅವನನ್ನು ತಿರಸ್ಕರಿಸಬೇಡ. ನನ್ನ ಮಾತು ನಡೆಸಿಕೊಡು”.

“ಗಂಡನಾಡಿದ ಸೊಲ್ಲು ಆಕೆಯ ಕಿವಿಯನ್ನು ಕೊರೆದು ಎದೆಯಲ್ಲಿಳಿದು ಅದನ್ನು ಗಾಯಗೊಳಿಸಿತು. ತನ್ನನ್ನು ಪರೀಕ್ಷಿಸುವ ಸಲುವಾಗಿಯೇ ಇಂಥ ಮಾತು ಆಡಿರಬಹುದೇ – ಎಂದು ದಿಗಿಲುಬಿದ್ದು ನಿಟ್ಟುಸಿರಿಡುತ್ತ ಮರುನುಡಿದಳು – “ಮನ್ಮಥನಂಥ ಪತಿ ನೀವಾಗಿರುವಾಗ ಇನ್ನಾರನ್ನು ಕೂಡಲಿ ? ಇಂಥ ಮಾತು ನಿಮ್ಮ ಬಾಯಲ್ಲಿ ಬಂದುದಾದರೂ ಹೇಗೆ ?”

ಮಲ್ಲಣ್ಣನು ತನಗೊದಗಿದ ಧರ್ಮಸಂಕಟವನ್ನು ಬಿಚ್ಚಿ ಹೇಳಿ ಹೆಂಡತಿ ಸಮ್ಮತಿಸುವಂತೆ ಮಾಡಿದನು. ಇದೆಂಥ ತ್ಯಾಗ ಇಬ್ಬರದು ? ಮಹಾತ್ಯಾಗ, ತ್ಯಾಗದ ತ್ಯಾಗ!

ಗಂಡಹೆಂಡಿರಿಬ್ಬರು ಮಲಗುವ ಕೋಣೆಯನ್ನು ಸಾಧ್ಯವಾದ ಸಲಕರಣೆಗಳಿಂದ ಅಣಿಗೊಳಿಸಿದರು. ಸಡಗರದ ಆ ಮಂಚ. ಅದರ ಅಂಚುಗಳಲ್ಲಿ ಕಣ್ಣು ಕೋರಯಿಸುವ ದೀಪಗಳು. ಆ ಬಳಿಕ ಕಲ್ಲಣ್ಣನನ್ನು ಕರೆತಂದು ದೂರದಿಂದಲೇ ತೋರಿಸಿದನು – “ಅದೇ ಆ ಸೂಳೆಯ ಮನೆ” ಎಂದು.

ಮಂಚವನ್ನೇರಿ ಕುಳಿತು ಕಲ್ಲಣ್ಣನು ಅತ್ಯಂತ ಪ್ರೀತಿಯಿಂದ, ಹತ್ತಿರಕ್ಕೆ ಬಾಯೆಂದು ಚೆಲುವೆಯನ್ನು ಕರೆದನು. ಆಕೆ ಹಾಗೆ ಮಾಡುವ ಮೊದಲು ದೀಪದ ಕಾಳಿಕೆಯನ್ನು ಕಳೆಯಲು ಉಜ್ಜುಗಿಸಿದಳು. ಆ ಸಂದರ್ಭದಲ್ಲಿ ಆಕೆಯ ಮುಖವನ್ನು ಕೊರಳನ್ನು ಚೆನ್ನಾಗಿ ನೋಡಿ ಆತನಿಗೆ ಸಂಶಯವೇ ಉಂಟಾಯಿತು – “ಈಕೆ ಸೂಳೆ ಅಲ್ಲ ! ಯಾರೋ ಗೃಹಿಣಿ !! ಕೆಲಸ ಕೆಟ್ಟಿತು !!!” ಎಂದು ತಲ್ಲಣಿಸುತ್ತ, ತನ್ನ ತಪ್ಪಿಗೆ ಇನ್ನಾವ ಪ್ರಾಯಶ್ಚಿತ್ತ ಎಂದುಕೊಳ್ಳುವಷ್ಟರಲ್ಲಿ, ಮೂಲೆಯಲ್ಲಿ ತೂಗಹಾಕಿದ ಕತ್ತಿ ಗುರಾಣಿಗಳು ಕಾಣಿಸಿಕೊಂಡವು. ಆಗಂತೂ ಕಲ್ಲಣ್ಣನ ಕೈಕಾಲೇ ಹೋದವು. “ಇದು ಮಲ್ಲಣ್ಣನ ಮನೆಯೇ” ಎಂದು ನಿರ್ಧರಿಸಿ, ಒಡಹುಟ್ಟಿದ ತಂಗಿಯ ಮೇಲೆ ಮನಸ್ಸು ಮಾಡಿದ ಪಾಪಿ ತಾನೆಂದು, ಚಕ್ಕನೇ ಮಂಚದಿಂದಿಳಿದು ತೂಗ ಹಾಕಿದ ಕತ್ತಿಯನ್ನು ಕೈಗೆ ತೆಗೆದುಕೊಂಡವನೇ ಕತ್ತಿನ ಮೇಲೆ ಹೊಡಕೊಂಡನು.

“ಅಯ್ಯಯ್ಯೋ, ಇದೇನಾಯಿತು ? ಬೆಳಗಾಗುವ ಹೊತ್ತಿಗೆ ನನ್ನ ರಾಜ ಬಂದು ನನ್ನ ಪ್ರಾಣತೆಗೆದುಕೊಳ್ಳುವುದು ಖಂಡಿತ” ಎಂದು ಬಗೆದಳು. “ಅವನು ಬಂದು ತನ್ನ ಪ್ರಾಣತೆಗದುಕೊಳ್ಳುವ ಮೊದಲೇ ತಾನು ನನ್ನ ಪ್ರಾಣಕಳಕೊಳ್ಳುವುದು ಸುಗಮದಾರಿ” ಎಂದುಕೊಂಡು ಅಲ್ಲಿ ಬಿದ್ದ ಕತ್ತಿಯಿಂದ ತನ್ನನ್ನು ತುಂಡರಿಸಿಕೊಂಡಳು.

ಬೆಳಗಿಗೆ ಬಂದು ಮಲ್ಲಣ್ಣ ನೋಡಿದರೆ ಎರಡು ಹೆಣಗಳು ! ನಚ್ಚಿನ ಗೆಳೆಯ ಮೆಚ್ಚಿನ ಹೆಂಡತಿ ಇಬ್ಬರೂ ಸತ್ತುಬಿದ್ದಿದ್ಧಾರೆ. ಕೈಕಾಲು ತಣ್ಣಗಾದವು. ಬಾಯಿ ಒಣಗಿತು. ದುಃಖ ಒತ್ತರಿಸಿ ಬಂದಿತು – “ಕಲಣ್ಣಾ, ನನ್ನನ್ನು ಅಗಲಿದೆಯಾ? ಇನ್ನಾರೊಡನೆ ನಾನು ಕುಸ್ತಿ ಆಡಲಿ ?” ಎಂದು ಗೆಳೆಯನಿಗೆ ದುಃಖಾಂಜಲಿ ಅರ್ಪಿಸಿದನು.

“ಭೂಮಿ ತಿರುಗಿದರೂ ಇಂಥ ಸತಿ ಸಿಗುವುದಿಲ್ಲ” ಎಂದು ಹೆಂಡತಿಯ ನಿಷ್ಠೆ-ಗುಣಗಳನ್ನು ಒಂದೇ ಮಾತಿನಲ್ಲಿ ಸ್ಮರಿಸಿ, – “ಇನ್ನಾರಿಗಾಗಿ ನಾನು ಬದುಕಲಿ” ಎಂದು ಅದೇ ಕತ್ತಿಯಿಂದ ಶಿರವನ್ನು ಕತ್ತರಿಸಿಕೊಳ್ಳಲು ಅಣಿಯಾದಾಗ ಶಿವನು ಕಾಣಿಸಿಕೊಂಡು, ಅವನ ಕೈಹಿಡಿದು ಕಾಪಾಡಿದನಲ್ಲದೆ, ಆತನ ಸತಿಯನ್ನೂ ಸ್ನೇಹಿತನನೂ ಬದುಕಿಸಿಕೊಟ್ಟು ಹರಸಿದನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)