ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ
ದೇವಗಂಗೆಯ ಆಳವೆಷ್ಟು ಹೇಳು ?
ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ
ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ?

ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ
ಎಷ್ಟೆಷ್ಟು ಬಾರಿ ಬಂದೆ ಸುತ್ತು?
ತೊಯ್ದ ದಂಡೆಯಲಿ ಏನು ಸೋಜಿಗ ಕಂಡೆ
ಸಂಜೆಯಾಗಸದಲ್ಲಿ ಏನು ಮೂಡಿತ್ತು ?

ಗೋಪಿಚಂದನ ಕೊರಡು ಶಂಖ ಸಾಲಿಗ್ರಾಮ
ತಣಿಸಿಕೊಳ್ಳಲೆಂದು ಮನಸ್ಸಾಕ್ಷಿ
ಕೊಂಡೆಯಲ್ಲವೆ ಹಿಮಾಲಯದ ತಪ್ಪಲಿನ
ಕಾಡುಗಳಲ್ಲಿ ಬೆಳೆದ ರುದ್ರಾಕ್ಷಿ

ಮರೆಯದಿರು ಮತ್ತೆ ದಾರಿ ನೋಡುವ ಮಕ್ಕಳಿಗೆ
ಆಡಿಕೊಳ್ಳಲು ಕವಡೆ ಬಾರಿಸಲು ಡೋಲು
ನಿನ್ನ ಸುಖಾಗಮನ ಕಾಯುತಿಹ ಶ್ರೀಮತಿಗೆ
ಅಸಲು ಕುರಿಗಳ ಮೈಯ ಉಣ್ಣೆ ಶಾಲು

ಎಲ್ಲವನು ಮುಗಿಸಿ ನೀ ಮರಳಲಣಿಯಾದಾಗ
ಹಿಂದೇಟು ಹಾಕಿತೆ ಮನಸ್ಸು?
ಜಗ್ಗಿದಂತಾಯಿತೆ ಬಟ್ಟೆ? ಸುಸ್ತಾದ ಮನುಷ್ಯ!
ಹೊರಟು ನಿಂತಿದೆ ನೋಡು ಬಂದ ಬಸ್ಸು
*****