ಸನ್ಯಾಸಿ ರತ್ನ

ಸನ್ಯಾಸಿ ರತ್ನ

– ೧ –

ರಾಜ, ರತ್ನ ಇಬ್ಬರೂ ಸ್ನೇಹಿತರು. ಒಂದೇ ಕ್ಲಾಸಿನಲ್ಲಿ ಅವರಿಬ್ಬರೂ ಓದುತ್ತಿದ್ದುದು, ಒಂದೇ ಹಾಸ್ಟೆಲಿನಲ್ಲಿ ಅವರಿಬ್ಬರಿಗೂ ವಾಸ. ಇಬ್ಬರ ಪ್ರಾಯವೂ ಒಂದೇ; ಜಾತಿಯ ಒಂದೇ. ರಾಜ ತಂದೆತಾಯಿ ಯರಿಗೊಬ್ಬನೇ ಮಗ. ರತ್ನನಿಗೆ ಒಬ್ಬಳು ತಂಗಿ ಇದ್ದಳು. ಒಂದು ವಿಷಯ ಹೊರತು ಬೇರೆಲ್ಲಾ ವಿಷಯಗಳಲ್ಲಿ ಇವರಿಬ್ಬರು ಒಂದು.

ರಾಜನಿಗೆ ರತ್ನನ ತಂಗಿಯನ್ನು ಕೊಡುವುದು ನಿಶ್ಚಯವಾಗಿತ್ತು. ಚಿಕ್ಕಂದಿನಿಂದಲೂ ರಾಜನಿಗೆ ರತ್ನನ ತಂಗಿ ಸೀತೆಯಲ್ಲಿ ಪ್ರೀತಿ, ಅವಳ ತಂದೆತಾಯಿಯರೂ ರಾಜನಿಗೆ ಮಗಳನ್ನು ಕೊಡಲು ಅನುಮತಿಸಿದ್ದರು. ಸೀತೆಗೂ ಒಪ್ಪಿಗೆ ಇತ್ತು, ಬೇರೇನೂ ಅಭ್ಯಂತರಗಳಿಲ್ಲದುದರಿಂದ ರಾಜ ಬಿ. ಎ. ಆದೊಡನೆಯೇ ಮದುವೆ ಎಂದು ನಿಶ್ಚಯವಾಗಿತ್ತು.

ಈ ವಿಷಯದಲ್ಲಿ ರತ್ನನ ಒಪ್ಪಿಗೆ ಇಲ್ಲ. ರಾಜನಿಗೆ ತಂಗಿಯನ್ನು ಕೊಡಬಾರದೆಂದಲ್ಲ-ರಾಜನೂ ತನ್ನಂತೆಯೇ ಮದುವೆಯಾಗಬಾರದೆಂದು. ಮದುವೆಯ ಸುದ್ದಿ ಎತ್ತಿದರೆ ರತ್ನನಿಗೆ ಕೋಪ ಬರುತ್ತಿತ್ತು. ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು ‘ಥು’ ಎನ್ನುತ್ತಿದ್ದ. ‘ನಾನು ಸನ್ಯಾಸಿಯಾಗುತ್ತೇನೆ-ಸದಾ ಬ್ರಹ್ಮಚಾರಿಯಾಗಿರುತ್ತೇನೆ. ನನ್ನೊಡನೆ ಮದುವೆಯ ಮಾತೆತ್ತಬೇಡಿ’ ಎನ್ನುವುದು-ರತ್ನನ ಉತ್ತರ ಮದುವೆಯ ಪ್ರಸ್ತಾಪಕ್ಕೆ. ಇದೊಂದು ವಿಷಯಕ್ಕಾಗಿ ರಾಜ-ರತ್ನರಿಗೆ ಪ್ರತಿದಿನವೂ ವಾಗ್ವಾದ.

ಒಂದು ದಿನ ರಾತ್ರಿ ಆ ಮಾತು ಈ ಮಾತು ಆಡುತ್ತ ಕೊನೆಗೆ ರಾಜ-

‘ಲೋ ರತ್ನ, ನಿನ್ತಂಗಿ ಕಾಗ್ದ ಬಂತೇನೋ’ ಎಂದು ಕೇಳಿದ.

‘ಇದೆಂಥ ಹುಚ್ಚೋ ನಿನ್ಗೆ? ಮೊನ್ನೆ ತಾನೆ ಅವಳ ಕಾಗ್ದ ಬಂದಿದೆ. ಅದ್ಕಿನ್ನು ಉತ್ತರವೇ ಬರ್‍ದಿಲ್ಲ ನಾನು-ನನ್ನುತ್ರ ಹೋಗೋ ಮೊದ್ಲು ಅವಳು ಬರೀತಾಳೇನೋ’ ಎಂದು ಹೇಳಿಕೊಂಡು ರತ್ನ ನಗತೊಡಗಿದೆ.

‘ನಗೊದೇಕೊ’ ರಾಜ ಕೇಳಿದ.
‘ನಿನ್ಹುಚ್ಚು ನೋಡಿ.’
‘ತಡಿ, ಒಂದ್ಸಲ ನಿನ್ಗೂ ಹುಚ್ಚಿಡೀದೇ ಇರೋಲ್ಲ.’
‘ಈ ಜನ್ಮದಲ್ಲಿ ಅಂಥ ಹುಚ್ಗೆ ಅವಕಾಶಿಲ್ಲ.’
‘ನೋಡೋಣ್ವಂತೆ.’
‘ನೋಡೋದೇನು! ನೋಡ್ದಾಗೇ ಇದೆ-ನಾನು ಸನ್ಯಾಸಿ.’
‘ರಾವಣ ಸನ್ಯಾಸೀ..’
‘ಮಚ್ಕೊಳೋ ಬಾಯಿ-ಹೆಚ್ಮಾತಾಡ್ಬೇಡ-ಆ ಮೇಲೆ ಕೋಪ ಬರುತ್ತೆ ನೋಡು…’
‘ಸನ್ಯಾಸಿಗಳಿಗೆ ಕೋಪ ಬರುತ್ತೇನೋ?’
‘ನೋಡ್ಮತ್ತೆ-ತೆಗೆದ್ಯಲ್ಲಾ ನಿನ್ನ ತರ್ಕಾನ. ನನ್ಮಾತು ನಂಬು- ನಾನು ಖಂಡಿತವಾಗಿಯೂ ಮದುವೆ ಆಗೋಲ್ಲ.’
‘ನೀನು ಖಂಡಿತವಾಗಿಯೂ ಮದ್ವೆ ಆಗೇ ಆಗ್ತಿ.’
‘ನಿನ್ನ್ಹಾಗೆ ಸಂಸಾರದ ಹಳ್ಳಕ್ಕೆ ಬೀಳೋ ಆಸೆ ನನ್ಗೇನಿಲ್ಲ.’
‘ನನ್ಗಿಂತ್ಲೂ ದೊಡ್ಡ ಹಳ್ಳದಲ್ಲಿ ಬಿಳ್ತಿ ನೋಡು ನೀನು. ಆವಾಗ ಹೇಳ್ತೀನಂತೆ ತಡಿ-’
‘ಆಗ್ಲಿ – ಹಾಗಾದಾಗ ಹೇಳ್ನೀನು- ಈಗ್ಸುಮ್ನೆ ಬಾಯಿ ಮುಚ್ಕೊಂಡು ಬಿದ್ಕೋ.’
‘ಬಿದ್ಕೊತೀನಿ-ಆದ್ರೆ ನೀ ಮದ್ವೆ ಆದ್ರೆ ನನ್ಗೇನು ಕೊಡ್ತಿ ಹೇಳು.’
‘ಕೊಡೋದೇನು-ಕೊಡೋದು! ಆದ್ರೆ ತಾನೆ ಕೊಡೋದು.’
‘ಒಂದ್ ಪಕ್ಷ ಆದೇಂತಿಟ್ಕೊ-ಆಗೇನು ಕೊಡ್ತಿ?’
‘ಆಗ್ದೆ ಹೋದ್ರೆ ನೀನೇನು ಕೊಡ್ತಿ ಹೇಳ್ಮೊದ್ಲು.’
‘ಮೊನ್ನೆ ಕೊಂಡ್ಕೊಂಡ ಕೆಮರಾ ಕೊಡ್ತೇನೆ-ಈಗ್ಹೇಳು ನೀನು ಏನ್ಕೊಡ್ತಿ.’
‘ನಾನೇ-ನನ್ನ ಕೈಲಿರೋ ಉಂಗ್ರ ಕೊಡ್ತೇನೆ.’
‘ನಿಜ ತಾನೆ?’
‘ನಿಜ್ವೇ; ಬಿದ್ಕೋ ಇನ್ನಾದ್ರೂ.’
‘ಸ್ವಲ್ಪ ತಡಿ, ಬಿದ್ಕೋತೇನೆ-ಆದ್ರೆ….’
‘ಏನೋ ಅದು ಆದ್ರೆ-ಗೀದ್ರೆ?’
‘ಏನೂ ಇಲ್ಲ-ಎರಡು ವರ್ಷ ತುಂಬೋದ್ರೊಳ್ಗೆ ನಿನ್ಗೆ ಮದ್ವೆ ಆಗೋಗಿರುತ್ತೆ ಅಂತ.’
‘ನಿನ್ನ ಕೆಮರಕ್ಕೆ ಬಂದಿದೆ ಹೊತ್ತು-ಸುಮ್ಮನೆ ಕಳಕೋತಿ ಅದನ್ನ.’
‘ನಿನ್ನುಂಗ್ರಕ್ಕೆ ನನ್ನ ಬೆರಳಿನ ಮೇಲೆ ಪ್ರೀತಿ ಬಂದಿರೋ ಹಾಗಿದೆ- ಎರಡು ವರ್ಷ ಕಳೆಯೋದ್ರೊಳ್ಗೆ ಕಾಣುತ್ತಲ್ಲ ಸನ್ಯಾಸಿಗಳ ಬೇಳೆ ಕಾಳು….’
‘ಬಿದ್ಕೊಳೋ ಬಾಯ್ಮುಚ್ಕೊಂಡು.’
‘ಉಂಗುರಕ್ಕೆ ಹೊತ್ತು ಬಂದಿದೆ’ ಎನ್ನುತ್ತಾ ರಾಜ ದೀಪ ಆರಿಸಿ ಮಲಗಿಕೊಂಡ. ‘ಇವನಿಗೊಂದು ಹುಚ್ಚು’ ಎಂದು ರತ್ನನೂ ಕಣ್ಣು ಮಚ್ಚಿಕೊಂಡ. ಆದರೆ ಆ ದಿನ ಅವರಿಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ.

– ೨ –
ರಾಜ ಬಿ. ಎ. ಆದ ವರ್ಷವೇ ಅವನ ಅಜ್ಜಿ ಸತ್ತುಹೋದರು. ಆದುದರಿಂದ ಆ ವರ್ಷ ರಾಜನ ಮದುವೆ ನಿಂತು ಹೋಯಿತು. ಅಜ್ಜಿ ಮುದುಕಿ; ಸತ್ತು ಹೋದರು. ಆದರೆ ನಾನಿನ್ನೂ ಸೀತೆಯನ್ನು ಮದುವೆ ಯಾಗುವುದಕ್ಕೆ ಒಂದು ವರ್ಷ ಕಳೆಯಬೇಕಲ್ಲಾ ಎಂದು ರಾಜನಿಗೆ ವ್ಯಸನ. ಅದೇ ವರ್ಷ ಲಾ ಕಲಿಯುವುದಕ್ಕೆ ಮದರಾಸಿಗೂ ಹೊರಡ ಬೇಕಾಗಿತ್ತು. ಸೀತೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳದೆ ರಾಜನಿಗೆ ಊರಿನಿಂದ ಹೊರಗೆ ಹೋಗುವುದಕ್ಕೆ ಮನಸ್ಸಿಲ್ಲ. ಮದುವೆಯಾದ ಮೇಲೆ ಅಜ್ಜಿ ಸಾಯಬಾರದಿತ್ತೇ ಎಂದುಕೊಳ್ಳುವನು ರಾಜ. ರತ್ನನೊಡನೆ ಮಾತನಾಡುವ ನೆವನದಿಂದ ದಿನಕ್ಕೆ ಹತ್ತುಸಾರೆಯಾದರೂ ಸೀತಾದರ್ಶನಕ್ಕೆ ರಾಜ ಹೋಗದ ದಿನವಿರಲಿಲ್ಲ. ರತ್ನನಿಗೆ ರಾಜನ ಈ ತರದ ವ್ಯವಹಾರದಿಂದ ತಡೆಯಲಾರದಷ್ಟು ನಗು ಬರುತ್ತಿತ್ತು. ರತ್ನ ನಕ್ಕಾಗಲೆಲ್ಲಾ ರಾಜ ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುತ್ತಿದ್ದ. ಆಗ ರತ್ನ ‘ಸೊಸೆ’ಗೆ ಕಾಲ ಬಂದಾಗ ಹೇಳ್ಮುತ್ತೆ ಎನ್ನುತ್ತಿದ್ದ. ‘ಬಂದೇ ಬರುತ್ತೆ, ಬಾರದೆ ಹೋದ್ರೆ ಹಳ್ಮತ್ತೆ’ ಎಂದು ರಾಜ ರತ್ನನ ಬೆರಳಿನಲ್ಲಿದ್ದ ಉಂಗುರವನ್ನು ನೋಡಿ ನಗುತ್ತ ಹೇಳುತ್ತಿದ್ದ.

ರಜೆ ಕಳೆದು ಹೋಯಿತು. ಜೊತೆಯಾಗಿಯೇ ಇಬ್ಬರೂ ಮದರಾಸಿಗೆ ಹೊರಟರು. ಸೀತೆಯನ್ನು ಬಿಟ್ಟು ಹೊರಡುವಾಗ ರಾಜನಿಗೆ ತಡೆಯಲಾರದಷ್ಟು ದುಃಖ; ರತ್ನನಿಗೆ ಹಿಡಿಸಲಾರದಷ್ಟು ನಗು ರಾಜನ ಅವಸ್ಥೆ ನೋಡಿ. ಅಂತೂ ಇಂತೂ ರೈಲು ಹೊರಟುಬಿಟ್ಟಿತು. ಮದರಾಸಿಗೂ ತಲಪಿದರು.

ಒಂದು ದಿನ ಸಾಯಂಕಾಲ ರಾಜ ಮತ್ತು ರತ್ನ ಸಮುದ್ರತೀರದಲ್ಲಿ ತಿರುಗಾಡುತ್ತಿದ್ದರು. ಆ ದಿನವೇ ಸೀತೆಯ ಕಾಗದ ರತ್ನನಿಗೆ ಬಂದಿದ್ದಿತು. ಅವಳ ಕಾಗದ ಬಂದಾಗಲೆಲ್ಲಾ ತಾನು ಓದಿದ ಮೇಲೆ ರಾಜನಿಗೆ ಕೊಡುವುದು ರತ್ನನ ಪದ್ದತಿ. ಆ ದಿನ ಮಾತ್ರ ರಾಜನನ್ನು ತಮಾಷೆ ಮಾಡಬೇಕೆಂದು ಕಾಗದವನ್ನು ಕೊಟ್ಟಿರಲಿಲ್ಲ. ಏನೇನು ಬರೆದಿದೆ ಆ ಕಾಗದದಲ್ಲಿ ಎಂದು ತಿಳಿದುಕೊಳ್ಳಲು ರಾಜನಿಗೆ ಆತುರ. ಕೇಳಿದರೆ ರತ್ನ ಚೇಷ್ಟೆ ಮಾಡುತ್ತಾನೆಂದು ಭಯ. ತಾನಾಗಿ ಕೇಳದೆ ರಾಜನಿಗೆ ಕಾಗದ ಕೊಡಬಾರದೆಂದು ರತ್ನನಿಗೆ ಹಟ. ಕೊನೆಗೆ ರತ್ನನ ಹಟವೇ ಗೆದ್ದಿತು. ರಾಜ ತಾನೇ ಕೇಳಿದ-‘ರತ್ನ, ಊರಿಂದ ಕಾಗ್ದ ಬಂತೇನೋ?’ ‘ಹೂ’ ‘ಏನಂತೆ?’ ‘ಏನೂ ಹೆಚ್ಚಿಗೆ ವಿಶೇಷವಿಲ್ಲ.’ ರಾಜನಿಗೆ ಸೀತೆಯ ಸುದ್ದಿ ಕೇಳಬೇಕೆಂದು ಆಸೆ; ಕೇಳಿದರೆ ರತ್ನನ ಹಾಸ್ಯಕ್ಕೆ ದಾರಿಮಾಡಿ ಕೊಟ್ಟಂತಾಗುತ್ತಿತ್ತು. ಕೊನೆಗೂ ಆಸೆಯೇ ಅಭಿಮಾನವನ್ನು ಗೆದ್ದುಬಿಟ್ಟಿತು.

‘ನಿನ್ನ ತಂಗಿ ಹೇಗಿದ್ದಾಳಂತೋ?’
‘ಇರೋ ಹಾಗೆ ಇದ್ದಾಳಂತೆ.’
ರಾಜನಿಗೆ ಈ ಉತ್ತರದಿಂದ ತೃಪ್ತಿಯಾಗಲಿಲ್ಲ. ‘ಕೊಡು ನೋಡೋಣ’ ಎಂದ. ‘ನನಗೆ ಬರ್‍ದ ಕಾಗ್ದ, ನಿನ್‍ಗ್ಯಾತಕ್ಕೆ ಕೊಡ್ಲಿ’ ಎಂದ ರತ್ನ.
‘ಕೊಡೋ ಸುಮ್ನೆ-ತಮಾಷೆ ಮಾಡ್ಬೇಡ.’
‘ದಮ್ಮಯ್ಯ ಅನ್ನು ಕೊಡ್ತೀನಿ.’

ರಾಜನ ಆಸೆಯನ್ನು ಅಭಿಮಾನವು ಸ್ವಲ್ಪ ಹೊತ್ತಿನವರೆಗೆ ತಡೆದರೂ ಪುನಃ ಆಸೆಯೇ ಜಯಶಾಲಿಯಾಯಿತು. ‘ದಮ್ಮಯ್ಯ-ಕೊಡೀಗ’ ಎಂದ. ‘ದಮ್ಮಯ್ಯ ಅನ್ನಲಿಕ್ಕೆ ಈ ಕಾಗದ ಚೂರೊಳ್ಗೆ ಏನಿದ್ಯೋ ದೇವ್ರೇ ಬಲ್ಲ’ ಎಂದು ನಗುತ್ತಾ ರತ್ನ ಕಾಗದ ಕೊಟ್ಟ. ‘ನಿನ್ಗೂ ಬರದೆ ಇರೋಲ್ಲ ಕಾಲ, ಆಗಾಗ್ಲಿ ಮಾಡ್ತೀನ್ನೋಡು’ ಎಂದುಕೊಂಡು ಕಾಗದ ಓದುತ್ತಾ ಅಲ್ಲಿದ್ದ ಒಂದು ಬೆಂಚಿನ ಮೇಲೆ ರಾಜ ಕುಳಿತುಕೊಂಡ. ರತ್ನ ತನ್ನ ಕಡೆ ಬರುತ್ತಿದ್ದ ಒಬ್ಬ ಸ್ನೇಹಿತನ ಹತ್ತಿರಹೋಗಿ ಹರಟೆಗಾರಂಭಿಸಿದ. ಆ ಮಾತು ಈ ಮಾತು ಆಡಿ ಕೊನೆಗೆ ಆ ಸ್ನೇಹಿತ ‘ಮೈಸೂರು ಸಿಮೆಂದ ಕುಮಾರಿ ವಾಣಿ ಎಂಬೋಳು ಬಂದಿದ್ದಾಳೆ ಅವಳ ಸಂಗೀತವಿದೆಯಂತೆ. ಬಾರೋ ಹೋಗೋಣ’ ಎಂದ. ರತ್ನನಿಗೆ ಸಂಗೀತವೆಂದರೆ ಜೀವ. ರಾಜ, ಬರ್ತೀಯೇನೋ’ ಎಂದು ಕೇಳಿದ. ಸೀತೆಯ ಕಾಗದ ನೂರು ಬಾರಿಯಾದರೂ ಓದದಿದ್ದರೆ ರಾಜನಿಗೆ ತೃಪ್ತಿಯಿಲ್ಲ. ಅವನು ‘ನಾ ಬರೋಲ್ಲ. ನೀ ಹೋಗು’ ಎಂದ. ಸ್ನೇಹಿತನೊಡನೆ ರತ್ನ ಕುಮಾರಿ ವಾಣಿಯ ಸಂಗೀತಕ್ಕೆ ಹೋದ. ಸೀತೆಯ ಕಾಗದ ಕಂಠಪಾಠಮಾಡುತ್ತಾ ರಾಜ ಬೆಂಚಿನ ಮೇಲೆಯೇ ಕೂತಿದ್ದ.

– ೩ –
ರಾತ್ರಿ ಹತ್ತುಗಂಟೆಯಾಗಿತ್ತು. ರಾಜ ನೂರ ಒಂದನೆಯ ಸಲ ಸೀತೆಯು ಕಾಗದವನ್ನೋದುತ್ತಾ ಅವಳ ಚಿತ್ರದ ಮುಂದೆ ತನ್ನ ರೂಮಿನಲ್ಲಿ ಕೂತಿದ್ದ. ಕುಮಾರಿ ವಾಣಿಯ ಸಂಗೀತಕ್ಕೆ ಹೋಗಿದ್ದ ರತ್ನ ಇನ್ನೂ ಬಂದೇ ಇರಲಿಲ್ಲ. ಹತ್ತೂವರೆಗೆ ಸರಿಯಾಗಿ ರತ್ನ ಬಂದ. ರಾಜ ಇನ್ನೂ ಸೀತಾಧ್ಯಾನದಲ್ಲೇ ಇದ್ದ. ರತ್ನನೂ ಎಂದಿನಂತೆ ಹಾಸ್ಯಮಾಡದೆ ಸುಮ್ಮನೆ ಬಂದು ಒಂದು ಕುರ್ಚಿಯ ಮೇಲೆ ಕುಳಿತುಕೊಂಡ. ರತ್ನನನ್ನು ಕಂಡೊಡನೆ ರಾಜ ಸೀತೆಯ ಚಿತ್ರವನ್ನು ಮುಚ್ಚಿಟ್ಟು ಎದ್ದು ನಿಂತ. ರಾಜನಿಗೆ ವೇಳೆ ಹೋದುದು ತಿಳಿದಿರಲಿಲ್ಲ. ಗಡಿಯಾರವನ್ನು ನೋಡಿ ‘ಇಷ್ಟೊತ್ತೆಲ್ಲಿಗೆ ಹೋಗಿದ್ದೆ ರತ್ನ?’ ಎಂದ.

‘ಆಗ್ಲೇ ಮರೆತು ಹೋಯ್ತೆನೋ-ಕುಮಾರಿ ವಾಣಿ ಸಂಗೀತ ಕೇಳೋದಕ್ಕೆ, ಈಗ್ತಾನೆ ಮುಗ್ತು-ಸೀದಾ ಬಂದೆ.’
‘ಹೇಗಿತ್ತೋ ಸಂಗೀತ.’
‘ಹಾಡಿದವಳು ವಾಣಿ ಕಣೋ.’
‘ಮೈಸೂರವಳೇನೋ?’

‘ಹೌದಂತೆ-ಇನ್ನೂ ಚಿಕ್ಕ ಹುಡುಗಿ-ಹದ್ನೆಂಟು ವರ್ಷಕ್ಕೆ ಹೆಚ್ಚಿಲ್ಲ. ರೂಪು ರಾಗ ಎರಡಲ್ಲೂ ವಾಣೀನೇ ಅವಳು.’

‘ಇದೇನೋ ಸನ್ಯಾಸಿ! ರೂಪು ರಾಗದ ವರ್ಣನೆಗೆ ಹೊರಟ್ಬಿಟ್ಯಲ್ಲಾ!’

‘ಸನ್ಯಾಸಿಗೆ ಕಣ್ಣಿಲ್ಲಾಂತ ತಿಳ್ಕೊಂಡ್ಯ ನೀನು? ಇದ್ದಿದ್ದಿದ್ದಾಗೆ ಹೇಳಿದ್ರೆ ಸನ್ಯಾಸಕ್ಕೆ ಕೊರ್‍ತೆ ಏನೋ?’

‘ಈಗಿಲ್ಲಾಂತನ್ನು-ಆದ್ರೆ ಸನ್ಯಾಸಿಗಳು ಸಂಗೀತಕ್ಕೂ ಸೌಂದರ್ಯಕ್ಕೂ ಮರುಳಾದ್ರೆ ಮುಂದ್ಗತಿ?’

‘ತಾ ಕೆಟ್ಟ ಕಪಿ, ವನವೆಲ್ಲಾ ಕೆಡ್ಸಿತು’ ಎಂತ ಗಾದೆ ಇದೆಯಲ್ಲ ಹಾಗೆ-ನಿನ್ನ ಮಾತಿಗೆ ಕಿವಿಕೊಟ್ರೆ ಸರಿ-ನೀನು ಹೇಳ್ದಾಗೇ ಮುಂದ್ಗತಿ-ನಿನ್ನತ್ರ ಇದೇ ಮಾತು-ನಡಿ ಊಟಕ್ಕೊಗೋಣ.’

ರಾಜ ಮರುದಿನ ಸಾಯಂಕಾಲ ಕಾಲೇಜಿನಿಂದ ಬಂದೊಡನೆಯೇ ಬಟ್ಟೆಯನ್ನು ತೆಗೆದಿಟ್ಟು ಒಂದು ನಾವೆಲ್ ಹಿಡಿದುಕೊಂಡು ಕುರ್ಚಿಯ ಮೇಲೆ ಕುಳಿತುಬಿಟ್ಟ. ರತ್ನ ಹೊಸ ಸೂಟ್ ಹಾಕಿಕೊಂಡು ಕನ್ನಡಿಯ ಮುಂದೆ ನಿಂತು ತಲೆಬಾಚಿಕೊಳ್ಳುತ್ತಾ ‘ರಾಜ ತಿರುಗಾಡೋಕ್ಕೆ ಬರೋದಿಲ್ವೇನೋ’ ಎಂದು ಕೇಳಿದ. ‘ಈ ನಾವೆಲ್ ಮುಗೀದೆ ನಾನೇಳೋಲ್ಲ ಇಲ್ಲಿಂದ-ನೀ ಬೇಕಾದ್ರೆ ಹೋಗು’ ಎಂದ ರಾಜ. ರತ್ನನೂ ಹೆಚ್ಚಿಗೆ ಒತ್ತಾಯ ಮಾಡಲಿಲ್ಲ. ಮತ್ತೊಂದು ಸಾರಿ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಹೊರಗೆ ಹೋದ. ಆ ದಿನ ರತ್ನ ಹಿಂತಿರುಗಿ ಬರುವಾಗ ಒಂಬತ್ತು ಗಂಟೆ ಹೊಡೆದು ಹೋಗಿತ್ತು. ರಾಜನ ನಾವೆಲ್ ಮುಗಿದಿರಲಿಲ್ಲ-ಹಾಗಾಗಿ ಅವನಿಗೂ ಹೊತ್ತು, ಹೋದುದೇ ತಿಳಿದಿರಲಿಲ್ಲ. ಆದರೆ ಮರುದಿನವೂ ರತ್ನ ತಿರುಗಾಡಲು ಹೋಗಿ ಬರುವಾಗ ಹತ್ತುಗಂಟೆಯಾಗಿತ್ತು. ರಾಜ ಆ ದಿನ ಊರಿಗೆ ಕಾಗದ ಬರೆಯಲಿಕ್ಕಿದ್ದುದರಿಂದ ರತ್ನನೊಡನೆ ಹೋಗಿರಲಿಲ್ಲ. ರಾತ್ರಿಯ ಊಟದ ಸಮಯವಾದರೂ ‘ರತ್ನ ಬರಲಿ, ಜೊತೆಯಲ್ಲಿ ಊಟ ಮಾಡಿದರಾಯಿತು’ ಎಂದು ಊಟಮಾಡದೆ ಕೂತಿದ್ದ. ಬಹಳ ಹೊತ್ತಾದರೂ ರತ್ನ ಬರಲಿಲ್ಲ. ಕಾದು ಕಾದು ಸಾಕಾಗಿ ಹೋಯಿತು ರಾಜನಿಗೆ, ರತ್ನ ಬಂದೊಡನೆಯೆ-

‘ಎಲ್ಗೋಗಿದ್ಯೋ ಇಷ್ಟೊತ್ತು? ಕಾದು ಕಾದು ಸಾಕಾಯ್ತು’

‘ನಾರಾಯಣನ ಹತ್ರ ಮಾತಾಡ್ತಾ ವೇಳೆ ಆದ್ದೇ ತಿಳಿಲಿಲ್ಲ ಕಣೋ.’

‘ನಡಿ, ಇನ್ನಾದ್ರೂ ಹೋಗೋಣ ಊಟಕ್ಕೆ-ಏನ್ಮಾತಾಡ್ತಿದ್ರೋ ಇಷ್ಟೊತ್ತು?’

‘ಏನೋ ಕಾಡುಹರಟೆ-ಹೋಗೋಣ ಊಟಕ್ಕೆ.’

ಊಟಮಾಡಿಕೊಂಡು ಬಂದ ಮೇಲೆ ರತ್ನ- ‘ಲೋ, ನಾಳೆ ವಾಣಿ ಸಂಗೀತ ಇದೆ ಮಧ್ಯಾಹ್ನ ಮೂರು ಗಂಟೆಗೆ-ಬರ್ತೀಯೇನೋ?’

‘ಕಾಲೇಜು!’

‘ಫ್ರೆಂಚ್ ಲೀವ್ ತಕೊಳೋದು-ಬಹಳ ಚೆನ್ನಾಗಿ ಹಾಡ್ತಾಳೋ ಕೇಳಿದರೆ ಕೇಳ್ಬೋಕು ವಾಣಿ ಸಂಗೀತ.’

‘ಇದೇನೋ! ವಾಣಿ ಸಂಗೀತ ಎಡ್ವರ್‌ಟೈಸ್ ಮಾಡೋಕ್ಕೆ ಒಪ್ಪಿದ್ದಿಯಾ? ಯಾವಾಗ್ಗೂ ವಾಣಿನ ಹೊಗ್ಳೊಕ್ಕೆ ಹೊರಟಿದ್ದೀಯಲ್ಲ.’

‘ನೀನೊಂದು ಸಾರಿ ಕೇಳು ಸಂಗೀತ. ಆ ಮೇಲೆ ಹೇಳ್ತಿ ನೋಡು ನಿಜ್ವಾಗ್ಲೂ ವಾಣೀಂತ.’

‘ಆಗ್ಲಿ ಹಾಗಾದ್ರೆ-ನಾಳೆ ನಿನ್ನ ವಾಣೀನ ನೋಡೋಕ್ಕೆ ಬಂದೇ ಬರ್‍ತೀನಿ.’

– ೪ –
‘ಹೇಗಿದ್ಯೋ ಸಂಗೀತ?’
‘ಪರವಾ ಇಲ್ಲ-ಚೆನ್ನಾಗಿ ಹಾಡ್ತಾಳೆ-ಆದ್ರೆ….’
‘ಏನು ಆದ್ರೆ?’
‘ನೀನ್ಹೇಳೋಷ್ಟು ಮಟ್ಟಿಗೆ ಹಾಡೋಲ್ಲ. ನಿನ್ಮಾತು ಕೇಳಿ ಹೇಗಿದ್ದಾಳೋ ಎಂತಿದ್ದೆ-ಈಗ.’
‘ಈಗ?’
‘ನಮ್ಮಾಗೇ ಇದ್ದಾಳೆ-ಹೆಚ್ಚೇನೂ ತೋರೋದಿಲ್ಲ…’
‘ಅಯ್ಯೋ ಮಂಕೆ-ಕೋಣನ ಮುಂದೆ ಕಿನ್ರಿ ಬಾರಿಸ್ತಾಗೆ ನಿನ್ಮುಂದೆ ಅವಳ ಸಂಗೀತ-ಆ ರೂಪು ನೋಡು-ಕಂಠಸ್ಪರ ಹೇಗಿದೆ ಕೇಳು.’
‘ಇದೇನೋ ಸನ್ಯಾಸೀ-’
ರಾಜನ ಮಾತು ಮುಗಿಯುವ ಮೊದಲೇ ಸಂಗೀತ ಮುಗಿಯಿತು.
ಜನರು ಹೊರಗೆ ಹೊರಡತೊಡಗಿದರು. ರತ್ನ- ‘ಸ್ವಲ್ಪ ತಡಿ ರಾಜ- ಈಗ್ಬಂದೆ’ ಎಂದು ಹೇಳಿ ಹೊರಗೆ ಹೊರಟ. ಈಗ್ಬಂದೆ ಎಂದು ಹೇಳಿ ಹೋದ ರತ್ನ ಒಂದು ಗಂಟೆಯಾದರೂ ಬರಲಿಲ್ಲ. ಕೂತು ಕೂತು ರಾಜನಿಗೆ ಸಾಕಾಗಿ ಹೋಗಿತ್ತು. ಹೊರಗೆ ಹೋಗಿ ನಿಂತುಕೊಂಡ. ಅಷ್ಟರಲ್ಲಿ ರತ್ನ ಯಾರೋ ಇಬ್ಬರೊಡನೆ ಮಾತಾಡುತ್ತಾ ಅಲ್ಲೇ ನಿಂತಿದ್ದ ಒಂದು ಮೋಟಾರುಗಾಡಿಯ ಹತ್ತಿರ ಹೋದ. ರತ್ನನೊಡನೆ ಬಂದವರು ಕಾರಲ್ಲಿ ಕುಳಿತರು. ರತ್ನ ತಲೆಯಮೇಲಿದ್ದ ಹೇಟನ್ನು ಕೈಯಲ್ಲಿ ಹಿಡಿದುಕೊಂಡು ಕಾರು ಕಣ್ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದ. ರಾಜ ಹಿಂದಿನಿಂದ ಹೋಗಿ ಅವನ ಬೆನ್ನಿನ ಮೇಲೆ ಕೈಯಿಟ್ಟು – ಯಾರೋ ಈಗ್ಹೋದೋರು?’ ಎಂದ. ಬೆಚ್ಚಿ ಬಿದ್ದು ರತ್ನ ‘ಯಾರು’ ಎಂದ- ನಾನು ಕೇಳೋದೂ ಅದೇ, ಯಾರೂಂತ?’ ಎಂದ ರಾಜ.

‘ಅವ್ರೇ-ನಿನ್ಗವ್ರನ್ನ ಗೊತ್ತಿಲ್ಲ-ಯಾರೂಂತನ್ಲಿ?’

‘ಯಾರೂಂತ ಅಂದ್ರೆ ಹೇಗೆ ತಿಳಿಯೋದು-ಕುಮಾರಿ ವಾಣಿ ಅವಳ ಅಪ್ಪ ಎಂದ್ರೆ ಚೆನ್ನಾಗಿ ತಿಳಿಯೋತ್ತೆ’ ಎನ್ನುತ್ತ ನಗುವನ್ನು ಸಹಿಸಿಕೊಂಡ ರಾಜ.

ರತ್ನ ಉತ್ತರಕೊಡಲಿಲ್ಲ.

‘ನಿನ್ಗವರ ಪರಿಚಯ ಹೇಗಾಯ್ತೋ?’

ನಾರಾಯಣನಿಗೂ ಕುಮಾರಿ ವಾಣಿ ತಂದೆಗೂ ಗುರ್ತಿದೆ. ಅವನೇ ಮೊನ್ನೆ ಇಂಟರ್‌ಡ್ಯೂಸ್‌ಮಾಡ್ದ’-

‘ಅದೇ ಮೊನ್ನೆ ರಾತ್ರಿ, ಸನ್ಯಾಸಿಗಳ ಸವಾರಿ ಬರೋಕ್ಕೆ ಅಷ್ಟೊತ್ತೋ? ಮುಚ್ಚು ಮರೆ ಮಾಡೋದೂ ಸನ್ಯಾಸದ ಲಕ್ಷಣ ಅಂತ್ಕಾಣುತ್ತೆ ಅಲ್ವೇ?’ ರತ್ನ ಜವಾಬು ಕೊಡಲಿಲ್ಲ. ರಾಜ ಗಟ್ಟಿಯಾಗಿ ನಗುತ್ತಾ ‘ಬಂತು-ನಿನ್ನುಂಗ್ರಕ್ಕೆ ನನ್ನ ಹತ್ತಿರ ಬರೋಕಾಲ’ ಎಂದ. ಅದಕ್ಕೂ ರತ್ನ ನಿರುತ್ತರ. ದಾರಿಯಲ್ಲಿ ಹೋಗುತ್ತಾ ‘ರಾಜ, ಉಂಗ್ರ ನಿನ್ಗೆ ಸಿಕ್ಕೊಲ್ಲ’ ಎಂದ ರತ್ನ. ‘ಅದ್ಯಾಕಪ್ಪಾ?’

‘ನಮ್ಮಂಥಾವ್ರನ್ನೆಲ್ಲಾ ವಾಣಿ ಮದ್ವೆ ಆಗ್ತಾಳೇನೋ! ನಾ ಮದ್ವೆ ಆದ್ರೆ ತಾನೆ ಸಿಕ್ಕೋದು ಉಂಗ್ರ ನಿನ್ಗೆ?’

‘ಇಷ್ಟರ ಮಟ್ಟಿಗೂ ಸನ್ಯಾಸ ಈಗ್ಬಂತೇ? ಅವಳು ನಿನ್ನ ಮದ್ವೆ ಆದ್ರೆ ನೀನು ತಾಳ ಹೊಡಿಯೋಕೆ ಕಲ್ತ್ಕೊ. ಸರಿಯಾಗುತ್ತೆ ಆಗ-

‘ಲೋ, Don’t joke. I am really serious about this matter.

`I am sorry -ಆದ್ರೆ ನಿನ್ತಂದೆತಾಯಿ ಒಪ್ತಾರೇನೋ?’

‘ಅವರನ್ನೊಪ್ಸೋದು ನನ್ನ ಕೆಲ್ಸ-ವಾಣಿ ಒಪ್ಪಬೇಕಲ್ಲ.’

‘ಅಯ್ಯೋ ಸನ್ಯಾಸೀ-ಸಂಸಾರದ ಹಳ್ಳಕ್ಕೆ ಬೀಳೋ ಕಾಲ ಬಂತೇ ನಿನ್ಗೆ? ನಿನ್ನ ಸ್ಥಿತಿ ನೋಡಿ ಅಳುಬರುತ್ತೆ ನನ್ಗೆ.’

‘ಮುಚ್ಕೊಳೋ ಬಾಯೀನ.’

‘ಇದು ಸೊಸೆಕಾಲ ಕಣೋ-ಅಕಾಲ ಕಳೆದು ಹೋಯ್ತು-’

– ೫ –
‘ರಾಜ-’
ಓದುತ್ತಾ ಕೂತಿದ್ದ ರಾಜ ತಲೆ ಎತ್ತಿ ‘ಏನ್ರತ್ನ’ ಎಂದ.
‘ಸ್ವಲ್ಪ ಬಾ ಇಲ್ಲಿ.’
‘ಏನೋ ಬರೀತಿದೀಯ-ಹೇಳ್ಕೊಡ್ಬೇಕ ನಾನೇನಾದ್ರೂ?’
‘ಅದ್ಕೇ ಕೂಗೋದು ಬಾ ಅಂತ.’
‘ಅಯ್ಯೋ ಸನ್ಯಾಸೀ, ಲವ್ ಲೆಟರ್ ಬರೀಲಿಕ್ಕೂ ನಿನಗೆ ಅಭ್ಯಾಸವಾಗಿ ಬಿಟ್ಟಿದೆಯೇ?’
‘ಹಾಸ್ಯ ಕೊನೆಗ್ಮಾಡು-ಸ್ವಲ್ಪ ನೋಡು ಸಾಕೋ ಹೀಗಿದ್ರೆ’ ಓದಿನೋಡಿ ರಾಜ ಬಿದ್ದು ಬಿದ್ದು ನಗತೊಡಗಿದ.

‘ಇದೇನ್ರತ್ನ, ಸಿನಿಮಾ ನೋಡಿ ಬರೆದ ಹಾಗಿದೆ-ಓದಿದ್ಕೂಡ್ಲೆ’ ವಾಣಿ ನಕ್ಕು ನಕ್ಕು ಸತ್ತೋದಾಳು.’

‘ಮತ್ತೇಗೋ ಬರಿಯೋದು-ಅನುಭವಸ್ತ ನೀನಾದ್ರೂ ಸ್ವಲ್ಪ ಹೇಳ್ಕೊಡ್ಬಾರ್‍ದೇನೋ?’

‘ನನ್ಹುಚ್ಚು ಯಾಕಪ್ಪಾ ಈ ಸನ್ಯಾಸಿಗೆ ಹಿಡಿಯಿತು’ ಎಂದು ಹೇಳಿಕೊಂಡು ರಾಜ ರತ್ನನಿಗೆ ಕಾಗದ ಬರೆದುಕೊಟ್ಟ, ಪೋಸ್ಟುಮಾಡಿದರು. ಮರುದಿನವೇ ಪ್ರತ್ಯುತ್ತರ ಬಂತು ವಾಣಿಯದು. ವಾಣಿಯ ಒಪ್ಪಿಗೆ ಓದಿ ರತ್ನ ಕುಣಿದಾಡಿದೆ. ರಾಜ ‘ಸನ್ಯಾಸಿಯ ಬೇಳೆಕಾಳು ಗೊತ್ತಾಯ್ತು’ ಎಂದು ನಗುತ್ತಾ ತಾನೂ ಅವನೊಡನೆ ಕುಣಿಯತೊಡಗಿದ.

ರಾಜ-ರತ್ನ ಊಹಿಸಿದಷ್ಟು ತೊಂದರೆಯಾಗಲಿಲ್ಲ-ರತ್ನನ ತಂದೆ-ತಾಯಿಯರ ಅನುಮತಿಗೆ, ಸನ್ಯಾಸಿ ಸಂಸಾರಿಯಾಗುವುದಕ್ಕೆ ಒಪ್ಪಿದ್ದೇ ಸಾಕೆಂದು ಅವರು ಅದೇ ವರ್ಷ ರತ್ನನಿಗೆ ವಾಣಿಯನ್ನು ಮದುವೆ ಮಾಡಿಸಿದರು. ಮದುವೆಯ ದಿನ ರತ್ನನ ಬೆರಳಿನಲ್ಲಿದ್ದ ವಜ್ರದ ಉಂಗುರ ರಾಜನ ಬೆರಳಿಗೆ ವರ್ಗವಾಯಿತು. ‘ಸನ್ಯಾಸಿಗೆ ಮೋಕ್ಷವಾಯಿತು’ ಎಂದ ರಾಜ. ಮರುವರ್ಷವೇ ಸೀತೆ ರಾಜನವಳಾದಳು. ಈಗ ಎಲ್ಲಾ ವಿಷಯದಲ್ಲಿ ರಾಜ-ರತ್ನರು ಒಂದು. ಅನುವು ದೊರೆತಾಗಲೆಲ್ಲಾ ರಾಜ ರತ್ನನನ್ನು ಪೀಡಿಸಿ ಹಾಸ್ಯವಾಡುತ್ತಿದ್ದ. ಸುಮ್ಮನಿರೆಂದರೆ-ಇದು ಸೊಸೆ ಕಾಲ, ಅತ್ತೆ ಕಾಲ ಕಳೆದುಹೋಯ್ತು ಎಂದು ಪ್ರತ್ಯುತ್ತರವಿತ್ತು ರತ್ನನ ಬಾಯಿಗೆ ಬೀಗ ಹಾಕುತ್ತಿದ್ದ.
*****
ಜೂನ ೧೯೩೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏರುಪೇರು
Next post ನೀಛಾಗ್ರೇಸರ

ಸಣ್ಣ ಕತೆ

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys