ಆಲದ ಮರ

ಆಲದ ಮರ

‘ಮಾರುತಿ ಪುರ’ ಎನ್ನುವುದು ಮಲೆನಾಡಿನ ಒಂದು ಚಿಕ್ಕ ಹಳ್ಳಿ. ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಅಭಿವೃದ್ದಿಯ ಮುಖವನ್ನೇ ನೋಡದ ಹತ್ತಾರು ಮನೆಗಳ ಕಾನನದ ಮದ್ಯದ ಊರು ಮಾರುತಿಪುರ. ಅಡಿಕೆ, ಕಾಫಿ, ಭತ್ತ ಇಲ್ಲಿ ಮುಖ್ಯ ಕೃಷಿ. ಭತ್ತದ ಗದ್ದೆ ಮತ್ತು ಬಾಳೆಗೆ ಬರುತ್ತಿದ್ದ ಮಂಗಗಳ ಗುಂಪುಗಳನ್ನು ನೋಡಿಯೇ ಈ ಊರಿಗೆ ಮಾರುತಿಪುರವೆಂಬ ಹೆಸರು ಬಂದಿರಬಹುದೆಂಬುದು ಇಲ್ಲಿನ ಜನರ ಅಭಿಪ್ರಾಯ. ಇದಕ್ಕೆ ಸಾಕ್ಷಿ ಭೂತವೆನ್ನುವಂತೆ ಊರಿನ ಕೇಂದ್ರ ಸ್ಥಾನದಲ್ಲಿ ಒಂದು ಆಂಜನೇಯ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿ ಶನಿವಾರ ಮಾತ್ರ ವಿಶೇಷ ಪೂಜೆ ಉಳಿದಂತೆ ದೇವರ ಹಳೆ ಹೂ ತೆಗೆದು ಹೊಸ ಹೂವನ್ನು ಹಾಕಿದರೆ ದೇವರಿಗೆ ಅದೇ ಪೂಜೆ. ಮಳೆಗಾಲದ ಜಡಿ ಮಳೆಯಲ್ಲಿ ಆಂಜನೇಯನಿಗೆ ಪೂಜೆ ನಡೆಯುವುದೇ ಅಪರೂಪ. ಇಲ್ಲಿನ ಆಂಜನೇಯನಿಗೆ ಹರಕೆ ಹೊತ್ತರೆ ತಮ್ಮ ಗದ್ದೆ, ಬಾಳೆಯ ತೋಟ ಮತ್ತೆ ಅಡಿಕೆ ತೋಟಕ್ಕೆ ಮಂಗಗಳ ಕಾಟ ಕೊಡಲಾರವೆಂಬ ಅನಿಸಿಕೆ ಅಥವಾ ನಂಬಿಕೆ ಇಲ್ಲಿನವರದ್ದು. ಹೀಗಾಗಿ ಈ ಊರಿಗೆ ಮಾರುತಿಪುರವೆಂಬ ಹೆಸರು ಬಂದಿದೆ ಎನ್ನುವ ಜನರು ಈ ಊರಿನಲ್ಲಿ ಇದ್ದಾರೆ. ಹೀಗೆ ಊರಿನ ಹೆಸರಿನ ಬಗ್ಗೆ ಹಲವಾರು ದಂತಕಥೆಗಳು ಊರಿನಲ್ಲಿ ಹರಡಿದೆ.

ಮಾರುತಿಪುರ ಜನರ ಮುಖ್ಯ ಆರ್ಥಿಕ ಬೆಳೆ ಅಡಿಕೆ. ಅಡಿಕೆ ಬೆಲೆ ಕ್ವಿಂಟಾಲಿಗೆ ಇಪ್ಪತ್ತೈದು ಸಾವಿರ ಮುಟ್ಟಿದಾಗ ಊರಿನ ಜನರ ಖುಷಿಗೆ ಕೊನೆಯೇ ಇಲ್ಲದಾಗಿತ್ತು. ಊರಿನ ಝರಿ, ಕೆರೆ, ಕಾಡು ಎಲ್ಲವೂ ಸಾಹುಕಾರರ ಹಿಡಿತಕ್ಕೆ ಸೇರಿ ಹೋಗಿತ್ತು. ಇಡೀ ಊರು ಅಡಿಕೆ ಪ್ಲಾಂಟೇಷನ್ ತರಹ ಕಾಣುತ್ತಿತ್ತು.

ಮಾರುತಿಪುರದಲ್ಲಿ ನಲವತ್ತು ಮನೆಗಳಿದ್ದವು. ಇಡೀ ಊರಿನಲ್ಲಿ ಇದ್ದಿದ್ದು ಕೆಲವು ಮಂದಿ ಶ್ರೀಮಂತರು. ಇವರದ್ದೇ ಹತೋಟಿಯಲ್ಲಿ ಊರು ನಲಗಿಹೋಗಿತ್ತು. ಸಾಹುಕಾರರ ಕಪಿಮುಷ್ಟಿಯಲ್ಲಿ ಮಾರುತಿಪುರವು ಸಿಲುಕಿತ್ತೆಂದರೂ ಅಡ್ಡಿಯಿಲ್ಲ. ನಾರಾಯಣರಾವ್, ಪರಮಶಿವಭಟ್ಟ, ಶಂಕರಶಾಸ್ತ್ರಿಗಳೇ ಊರಿನ ಧಣಿಗಳಾಗಿದ್ದರು. ಊರಿನ ಜನ ಉಸಿರಾಡಲು ಇವರ ಪರವಾನಿಗೆಯನ್ನು ಪಡೆಯಬೇಕಾದ ಪರಿಸ್ಥಿತಿ ಊರಿನಲ್ಲಿತ್ತು.

ಇಂಥಹ ಕಾಲಘಟ್ಟದಲ್ಲಿ ಊರಿನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪೂಜಾರಿಯಾಗಿ ಬಂದವನು ಸೂರಿಭಟ್ಟ. ಸುರಿಭಟ್ಟನ ಬಗ್ಗೆ ಊರಿನ ಯಾರಿಗೂ ಸರಿಯಾಗಿ ತಿಳಿದಿರದಿದ್ದರೂ ಇವರ ಕುರಿತು ಊರಿನ ಸಮಸ್ತ ಜನರಿಗೆ ಅದು ಏನೋ ಅಕ್ಕರೆ. ಇಡೀ ಊರು ಸೂರಿಭಟ್ಟನ ಬಗೆಗೆ ಗೌರವ ಭಾವನೆ ಹೊಂದಿತ್ತು.

ಊರಿನ ಯಾರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ, ಅದು ಶುಭವೇ ಇರಲಿ ಅಶುಭವೇ ಇರಲಿ ಅಲ್ಲಿ ಸೂರಿಭಟ್ಟ ಇರಲೇಬೇಕಾಗಿತ್ತು. ಅವರವರ ಯೋಗ್ಯತೆಗೆ ತಕ್ಕಷ್ಟು ಸಂಭಾವನೆಯನ್ನು ಅವರಿಂದ ಕೇಳಿ ಪಡೆಯುತ್ತಿದ್ದರಿಂದ ಸೂರಿಭಟ್ಟ ಊರಿನ ಜನರ ಅಕ್ಕರೆಯ ಪೂಜಾರಿಯಾಗಿ ಹೋಗಿದ್ದ.

-೨-

ನಾರಾಯಣರಾವ್ ಮಾರುತಿಪುರದ ಆಗರ್‍ಭ ಶ್ರೀಮಂತ. ಒಂದು ಕಾಲದಲ್ಲಿ ಒಪ್ಪತ್ತಿನ ಗಂಜಿಗೂ ಗತಿಯಿಲ್ಲದ ದರಿದ್ರ ನಾರಾಯಣ ಕೆಲವೇ ದಶಕಗಳಲ್ಲಿ ನವಕೋಟಿ ನಾರಾಯಣನಾಗಿ ಬದಲಾಗಿರುವುದು ಪ್ರಪಂಚದ ಒಂಬತ್ತನೇ ಅದ್ಭುತವೆನ್ನುವಂತೆ ಜನ ರಾಯರ ಕಿವಿಗೆ ಬೀಳದಂತೆ ಗುಟ್ಟಾಗಿ ನಾರಾಯಣರಾಯರ ಕುರಿತು ಹಲವಾರು ಕಥೆಗಳು ಉರಿಡೀ ಜನರ ಗುಸು ಗುಸು ಚರ್ಚೆಗೆ ಕಾರಣವಾಗಿತ್ತು. ಕರಾವಳಿಯ ಭಾಗದವರು ಮಲೆನಾಡಿನ ಜನರನ್ನು ಘಟ್ಟದ ಕೆಳಗಿನವರೆಂದು ಕರೆಯುವುದು ವಾಡಿಕೆ. ಹಾಗೆಯೇ ಮಲೆನಾಡಿಗರಿಗೆ ಕರಾವಳಿ ಮಂದಿ ಘಟ್ಟದವರೆನ್ನುವುದು ವಾಡಿಕೆ. ಇಬ್ಬರಿಗೂ ತಾವೇ ಬುದ್ದಿವಂತರೆಂಬ ‘ಅಹಂ’ ಕೂಡಾ ಮೊದಲಿನಿಂದಲೂ ಇತ್ತು.

ನಾರಾಯಣರಾಯರ ತಂದೆ ಸೀತಾರಾಮರಾಯರು ಕರಾವಳಿಯ ಕಡೆಯಿಂದ ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬಂದವರು. ಅವರು ತಮ್ಮ ಚಾಲೂಕು ಬುದ್ದಿಯಿಂದ ಮಾರುತಿಪುರ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡರು. ನಂತರ ಇವರ ಮಗ ನಾರಾಯಣರಾಯ ಮಹಾಪ್ರಳಯಾಂತಕನೇ ಸರಿ. ಈತ ಅಪ್ಪನಿಗಿಂತ ಒಂದು ಹೆಜ್ಜೆ ಮುಂದಿಟ್ಟು ಅಪಾರ ಆಸ್ತಿಯನ್ನು ತನ್ನದಾಗಿ ಮಾಡಿಕೊಂಡನು. ಇವನು ಮಾಡಿದ್ದು ಪೂರ್ತಿ ವಾಮಮಾರ್ಗ ಆಸ್ತಿಯೆಂದರೆ ಯಾವುದೇ ತಪ್ಪಿಲ್ಲವಾದರೂ ಇದನ್ನು ಎದೆ ತಟ್ಟಿ ಹೇಳುವ ಎದೆಗಾರಿಕೆ ಗಂಡಸು ಮಾತ್ರ ಇನ್ನೂ ಮಾರುತಿಪುರದಲ್ಲಿ ಹುಟ್ಟಿ ಬಂದಿಲ್ಲ. ಈ ನಾರಾಯಣರಾಯ ಸಕಲ ಗುಣ ಸಂಪನ್ನ., ಹೆಣ್ಣು, ಇಸ್ಪೀಟು, ಓಸಿ ಹೀಗೆ ಎಲ್ಲಾ ರೀತಿಯ ಗುಣಗಳು ಇವನ್ನಲ್ಲಿ ಅಡಕವಾಗಿತ್ತು. ಇಂಥಹ ನಾರಾಯಣರಾಯನಾನ್ನು ಯಾರು ತಾನೇ ಎದುರು ಹಾಕಿಕೊಂಡು ಬದುಕಲು ಸಾದ್ಯ ನೀವೇ ಹೇಳಿರಿ.

ನಾರಾಯಣರಾಯ ಕಿಲಾಡಿ ಬುದ್ದಿಗೆ ಊರಿನಲ್ಲಿ ನಡೆದ ಕಥೆಯೊಂದನ್ನು ಕೇಳಿದರೆ ಸಾಕು ಅವನ ಮನಸ್ಥಿತಿ ಎಂಥಹದು ಎನ್ನುವುದನ್ನು ತಿಳಿಯಬಹುದು. ಚೂಡಾಮಣಿ ಎನ್ನುವ ಓರ್ವ ಕೆಲಸಗಾರ ಊರಿನಲ್ಲಿದ್ದನು. ಈ ಚೂಡಾಮಣಿಗೆ ವ್ಯವಹಾರ ಜ್ಞಾನವೆಂಬುದು ಚೂರು ಇರಲಿಲ್ಲ. ಜೊತೆಗೆ ವಿದ್ಯಾ ಸಂಪತ್ತು ಇರಲೇ ಇಲ್ಲ. ಆದರೆ ಒಳ್ಳೆ ಗಟ್ಟಿಮುಟ್ಟಾದ ಕೆಲಸದಾಳು. ಚೂಡಾಮಣಿ ಒಂದಾಳು ಬಂದನೆಂದರೆ. ಆ ಮನೆಯೊಡೆಯನಿಗೆ ನುರು ಆಳ ಸಿಕ್ಕಷ್ಟು ಖುಷಿ. ಅವನ ಒಂದೇ ಒಂದು ಗುಣವೆಂದರೆ ಈತ ಯಾರು ಮನೆಯಲ್ಲೂ ಖಾಯಂ ಕೆಲಸಕ್ಕೆ ನಿಲ್ಲುತ್ತಿರಲಿಲ್ಲ. ಕೇವಲ ಒಂದೆರಡು ದಿವಸ ಕೆಲಸ ಮಾಡಿದರೆ ಹೆಚ್ಚು.

ಇವನು ಯಾರ ಮನೆಯಲ್ಲಿ ಕೆಲಸ ಮಾಡಿದರೂ ಸಂಬಳ ಕೇಳುತ್ತಿರಲಿಲ್ಲ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಹೊಟ್ಟೆ ತುಂಬಾ ಊಟ ಹಾಕಿದರೆ ಸಾಕು. ಇವನಿಗೆ ಅನ್ನ ಹಾಕಿದಾಗ ಇವನಿಂದ ಸಾಕು ಎನ್ನುವ ಪದ ಬರುತ್ತಲೇ ಇರಲಿಲ್ಲ. ಎಷ್ಟು ಹಾಕಿದರು ತಿಂದು ಮುಗಿಸುತ್ತಿದ್ದನು ಈ ಭೂಪ. ಆದರೆ ಕೆಲಸದಲ್ಲಿ ಮಾತ್ರ ಇವನನ್ನು ಸರಿಗಟ್ಟುವವರು ಯಾರೂ ಇರಲಿಲ್ಲ. ಕೊಟ್ಟಿಗೆಗೆ ಸೊಪ್ಪು ತಂದನೆಂದರೆ ಅದನ್ನು ಎತ್ತಲು ಕನಿಷ್ಠ ನಾಲ್ಕು ಮಂದಿ ಬೇಕಾಗುತ್ತಿತ್ತು. ಬೇರೆ ನಾಲ್ಕು ಜನರು ಮಾಡುವ ಕೆಲಸವನ್ನು ಚೂಡಾಮಣಿ ಒಬ್ಬನೇ ಮಾಡುತ್ತಿದ್ದ.

ಇಂಥಹ ಚೂಡಾಮಣಿಯನ್ನು ತಮ್ಮ ಮನೆಯಲ್ಲಿ ಖಾಯಂ ಉಳಿಸಿಕೊಂಡು ಬಿಟ್ಟಿಯಾಗಿ ದುಡಿಸಿಕೊಳ್ಳಬೇಕೆಂಬ ಆಲೋಚನೆ ಊರಿನ ಎಲ್ಲ ಜನರಿಗೆ ಬಂದಿತ್ತಾದರೂ ಅವನನ್ನು ಯಾರು ಬಳಿಯೂ ಖಾಯಂ ಉಳಿಸಿಕೊಳ್ಳಲಾಗಲಿಲ್ಲ. ಹೀಗಾಗಿ ಚೂಡಾಮಣಿ ಊರಿಡೀ ಅಲೆಯುತ್ತಲೇ ಇದ್ದನು. ಇಂತಹ
ಚೂಡಾಮಣಿಯನ್ನು ಖಾಯಂ ಆಗಿ ತನ್ನ ಮನೆಯಲ್ಲಿ ಕೆಲಸದವನನ್ನಾಗಿ ಮಾಡಿಕೊಳ್ಳಬೇಕೆಂಬ ಯೋಚನೆಯು ಈ ನಮ್ಮ ನಾರಾಯಣರಾಯ ತಲೆಯಲ್ಲಿ ಯಾವಾಗ ಹೊಳೆಯಿತೂ ಆಗಲೇ ಅದಕ್ಕೊಂದು ಸ್ಕೆಚ್ ಹಾಕಿದ.

ಚೂಡಾಮಣಿ ನಾರಾಯಣರಾಯನ ಮನೆ ಕೆಲಸಕ್ಕೆ ಬಂದಿದ್ದ ಅದೇ ದಿನ ಅವನಿಂದ ಜಾಸ್ತಿ ಕೆಲಸವನ್ನು ಮಾಡಿಸಿ ಚೂಡಾಮಣಿಯನ್ನು ಕರೆದುಕೊಂಡು ದೂರದ ತೀರ್ಥರಾಜಪುರಕ್ಕೆ ಬಂದ. ಚೂಡಾಮಣಿ ತೀರ್ಥ ರಾಜಪುರ ನೋಡಿದ್ದು ಅದೇ ಮೊದಲು. ಮಾರುತಿಪುರ ತಾಲ್ಲೂಕು ಕೇಂದ್ರ ಸ್ಥಾನ ಈ ತೀರ್ಥರಾಜಪುರ. ಸೋಮವಾರ ದಿನ ತೀರ್ಥರಾಜಪುರದ ವಾರದ ಸಂತೆ, ಚೂಡಾಮಣಿ ಮಂಡಕ್ಕಿ ಕೂಡಿಸಿ ಕಾಮತರ ಹೋಟೆಲ್‌ಗೆ ನಾರಾಯಣರಾಯ ಕರೆದುಕೊಂಡು ಬಂದ. ಅಲ್ಲಿ ಕಾಫಿ ಕುಡಿಯುವಾಗ ಅಚಾನಕ್ಕಾಗಿ ಪೋಲಿಸ್ ಪೇದೆ ಯೊಬ್ಬ ಬಂದನು. ಅವನು ಚೂಡನನ್ನು ನೋಡಿ ಕೇಳಿದನು.

– “ನೀನು ಮಾರುತಿಪುರ ಚೂಡಾಮಣಿ ತಾನೆ?”

ಪೊಲೀಸರನ್ನು ನೋಡಿ ಮೊದಲೇ ಬೆವರಿದ್ದ ಚೂಡಾಮಣಿ, ಇನ್ನು ತನ್ನನ್ನೇ ವಿಚಾರಿಸಿದಾಗ ಚಡ್ಡಿಯನ್ನೆಲ್ಲಾ ಒದ್ದೆ ಮಾಡಿಕೊಂಡನು. ನಡುಗಲು ಶುರು ಮಾಡಿದರೆ ಪೊಲೀಸ್ ಪೇದೆ ಹೇಳಿದ – “ನೋಡು ನಿನ್ನ ಮಾವ ಚೀಂಕ್ರ ದೂರು ಕೊಟ್ಟಿದ್ದಾನೆ. ಮದುವೆಯಾದ ನೀನು ನಿನ್ನ ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟು ಬಂದಿರುವೆ. ಅವಳಿಗೆ ಬಗೆ ಬಗೆಯ ಹಿಂಸೆಯನ್ನು ಕೊಡುತ್ತಿರುವೆ. ಹೀಗಾಗಿ ನಿನ್ನ ಅರೆಸ್ಟ್ ಮಾಡುವೆ” ಎಂದಾಗ ಚೂಡಾಮಣಿ ಕುಸಿದು ಹೋದನು. ಆಗ ನಾರಾಯಣರಾಯ ಹೇಳಿದದ – “ಸ್ವಾಮಿ ಈ ಚೂಡಾಮಣಿ ನಮ್ಮ ಮನೆಯ ಕೆಲಸಗಾರ. ಇವನನ್ನು ಅರೆಸ್ಟ್ ಮಾಡಲು ನಾನು ಬಿಡಲಾರೆ, ಇನ್ನು ನನ್ನ ಮನೆ ಕೆಲಸ ಬಿಟ್ಟ ನಂತರ ನೀವು ಏನಾದರೂ ಮಾಡಿರಿ” ಎಂದಾಗ ಪೊಲೀಸ್ ಸೀದಾ ಹೋದನು. ಈ ಘಟನೆ ನಡೆದ ನಂತರ ಚೂಡಾಮಣಿ ಸಾಯುವತನಕ ನಾರಾಯಣರಾಯನ ಮನೆಯ ಜೀತದಾಳಾಗಿ ಕೆಲಸ ಮಾಡಿದ. ಆದರೆ ಆಗ ಬಂದವ ನಕಲಿ ಪೊಲೀಸ್, ಈ ನಾಟಕದ ಸೂತ್ರಧಾರ ತನ್ನೆದುರುಗಡೆಯೇ ಕುಳಿತಿರುವ ನಾರಾಯಣರಾಯನೆಂಬುದು ಮಾತ್ರ ಕೊನೆಯವರೆಗೂ ಸಹ ಚೂಡಾಮಣಿಯ ಗಮನಕ್ಕೆ ಬರಲಿಲ್ಲ. ಯಾರದೇ ಮನೆಯಲ್ಲಿಯೂ ವರ್ಷಕ್ಕಿಂತ ಹೆಚ್ಚು ಕೆಲಸವನ್ನು ಮಾಡದ ಈ ಚೂಡಾಮಣಿ ತನ್ನ ಜೀವಿತದ ಕೊನೆಯವರೆಗೂ ಕಾಸು ಸಂಬಳವಿಲ್ಲದೆ ಈ ನಾರಾಯಣರಾಯನ ಮನೆಯ ಕೆಲಸಗಾರನಾಗಿ ಜೀತದಾಳಾಗಿ ಜೀವನ ಸಾಗಿಸಿದ ಮಾತ್ರ ದುರಂತ.

ಆಲದ ಮರ ನೋಡಲು ಅದೆಷ್ಟು ಸುಂದರ. ವಿಶಾಲಾಕಾರವಾಗಿ ಹಬ್ಬಿ ನಿಂತು ತನ್ನ ಬಿಳಲು ಬೇರುಗಳಿಂದ ತನ್ನ ಸ್ಥಾನವನು ಭದ್ರವಾಗಿಸಿಕೊಂಡ ಈ ಆಲದ ಮರ ಹಲವಾರು ಪಕ್ಷಿ ಕ್ರಿಮಿ ಜಂತುಗಳಿಗೆ ಆಶ್ರಯದಾತನಾದರೂ ಇದು ತನ್ನ ಕೆಳಗೆ ಒಂದೇ ಒಂದು ಸಸಿಯನ್ನು ಸಹ ಬೆಳಯಬಿಡಲಾರದೆಂಬ ಸತ್ಯ ಮಾತ್ರ ಯಾರದೇ ಗಮನಕ್ಕೆ ಬರುವುದಿಲ್ಲ. ಜನ ಆಲದಮರದ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಆದರೆ ಅದರ ಇನ್ನೊಂದು ಮುಖ ಯಾರು ಗಮನಕ್ಕೂ ಬರುವುದಿಲ್ಲ. ಇಂತಹ ಹಲವಾರು ಮಂದಿ ಈ ಮಾರುತಿ ಪುರದಲ್ಲಿ ಇನ್ನೂ ಇದ್ದಾರೆ.

-೩-

ಪರಮಶಿವಭಟ್ಟನದೇ ಇನ್ನೊಂದು ಕಥೆ. ಇವನ ಪೂರ್ವಜರು ಬಯಲು ನಾಡಿನಿಂದ ಇಲ್ಲಿಗೆ ಬಂದವರು. ಇವನ ಪೂರ್ವಜರು ಭಿಕಾರಿಗಳಾಗೇ ಊರಿಗೆ ಬಂದಿದ್ದರು. ಇಲ್ಲಿನ ಜನರ ಅಸಹಾಯಕತೆ, ದಾರಿದ್ರಗಳನ್ನೆ ಇವರುಗಳು ಬಂಡವಾಳವನ್ನಾಗಿ ಮಾಡಿಕೊಂಡು ಇವರುಗಳು ಮಾತ್ರ ಹೆಮ್ಮರವಾಗಿ, ಆಲದಮರವಾಗಿ ಬೆಳೆದವರು. ಇವರನ್ನು ಬೆಳೆಸಿದವರು ಮಾತ್ರ ವನಸುಮವಾಗಿಯೇ ಉಳಿದರು. ಊರಿನ ಜನರುಗಳ ಅಜ್ಞಾನವನ್ನು ಈ ಶ್ರೀಮಂತರಗಳು ತಮ್ಮ ಬಂಡವಾಳವನ್ನಾಗಿಸಿಕೊಂಡರು. ಇವರನ್ನು ಜೀತದಾಳನ್ನಾಗಿ ಮಾಡಿಕೊಂಡು ಅವರುಗಳು ಮಾತ್ರ ಬೆಳೆದರು.

ಪರಮಶಿವಭಟ್ಟನದು ಚಿಕ್ಕದಾದ ಸಂಸಾರ, ಗಂಡ-ಹೆಂಡತಿ ಇಬ್ಬರು ಮಕ್ಕಳು. ಹೆಂಡತಿ ಪುಷ್ಪವತಿ ಮಕ್ಕಳು ಸೀತಾರಾಮ ಮತ್ತು ಸುಶೀಲ, ಪುಷ್ಪಾವತಿ ತವರು ಮನೆ ಮಾರುತಿಪುರ ಪಕ್ಕದ ಗ್ರಾಮ ಸುರುಳಿಯ ಶ್ರೀಮಂತ ಜಮೀನುದಾರರಾದ ಚಂದ್ರಶೇಖರ ಶಾಸ್ತ್ರಿಗಳ ಮಗಳು. ಇವರು ಸುರುಳಿಯ ಅತೀ ಶ್ರೀಮಂತರು, ಬಡವರ ರಕ್ತ ಹೀರಿ ಬೆಳೆದ ವನು. ಬಡರೈತರು ಹಾಗೂ ಕಾರ್ಮಿಕರು ಚಂದ್ರಶೇಖರನನ್ನು ನೋಡಿದರೆ ಬಿಚ್ಚಿ ಬೀಳುತ್ತಿದ್ದರು. ಇಂಥಹ ಚಂದ್ರಶೇಖರಶಾಸ್ತ್ರೀಗೆ ತಕ್ಕನಾದ ಅಳಿಯನಾಗಿದ್ದ ಈ ಪರಮಶಿವಭಟ್ಟ. ಮಾರುತಿಪುರ ಜನರು ಸಹ ಈ ಪರಮಶಿವಭಟ್ಟನನ್ನು ಕಂಡರೆ ಹೆದರಿನಡುಗುತ್ತಿದ್ದರು. ವೆನಿಲ್ಲಾ ಎನ್ನುವ ಅತಿ ದುಬಾರಿ ಬೆಳೆ ಮಲೆನಾಡಿಗೆ ಪರಿಚಯವಾದ ಹೊಸತರ ದಿನಗಳವು. ಪರಮಶಿವಭಟ್ಟ ತನ್ನ ತೋಟದ ತುಂಬಾ ವೆನಿಲ್ಲಾ ಬಳ್ಳಿ ಹಾಕಿಸಿದ. ವೆನಿಲ್ಲಾ ಬೆಳೆಗೆ ಆಗ ಚಿನ್ನದ ಬೆಲೆಯೇ ಇತ್ತು. ರಾತ್ರಿ ಸಮಯದಲ್ಲಿ ಯಾರಾದರೂ ತೋಟದಲ್ಲಿ ಓಡಾಡಿದರೆ ಅವರಿಗೆ ಕಳ್ಳನ ಪಟ್ಟ ಕಟ್ಟಿ ಅವರ ಚಾರಿತ್ರ್ಯವಧೆ ಮಾಡಿ ಬಿಡುತ್ತಿದ್ದ ಈ ಪರಮಶಿವಭಟ್ಟ. ವೆನಿಲ್ಲಾ ತೋಟದ ಕಾವಲಿಗಾಗಿಯೇ ಓರ್ವ ಕಟ್ಟುಮಸ್ತಾದ ಆಳು ಕರಿಯನಿಗೆ ನಾಡ ಕೋವಿಕೊಟ್ಟು ರಾತ್ರಿಯಿಡೀ ತೋಟದ ಕಾವಲಿಗಾಗಿ ಬಿಡುತ್ತಿದ್ದ. ರಾತ್ರಿ ಅರ್ಧ ಸಾರಾಯಿ ಬಿತ್ತೆಂದರೆ ಸಾಕು ಈ ಕರಿ ಮನುಷ್ಯನಿಗೆ ಆಗಿರುತ್ತಿರಲಿಲ್ಲ. ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಈ ಕರಿಯ ಕೈಗೆ ಭಟ್ಟರ ಮನೆಯ ನಾಡಕೋವೀ ಸಿಕ್ಕಿತ್ತು.

ಮಾರುತಿಪುರ ದಿಂದ ಪಕ್ಕದ ಸಂಕ್ಲಾಪುರಕ್ಕೆ ಹೊಗುವ ಸುಲಭ ಮಾರ್ಗ ವಿದ್ದಿದ್ದು ಈ ಪರಮಶಿವಭಟ್ಟರ ಹೊಸ ವೆನಿಲ್ಲಾ ತೋಟದ ಮಧ್ಯದಲ್ಲೇ. ಮೊದಲು ಸಂಕ್ಲಾಪುರಕ್ಕೆ ಹೋಗುವವರು ಇದೇ ಕಾಲುದಾರಿಯಲ್ಲಿ ಹೋಗುತ್ತಿದ್ದರು. ನೀರು ಚೆನ್ನಾಗಿದ್ದ ಕಾರಣ ಪರಮಶಿವಭಟ್ಟನು ಈ ಇಡೀ ಕಾಡನ್ನೆ ಒತ್ತುವರಿ ಮಾಡಿದ್ದರು. ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮನೆಗೆ ಕರೆದುಕೊಂಡು ಬಂದು ಭಾರಿ ಭೋಜನ ಹಾಕಿ ಜೊತೆಗೆ ಸ್ವಲ್ಪ ದಕ್ಷಿಣೆ ಕೊಟ್ಟು ಕಳಿಸಿದ ಕಾರಣ ಅವರ್ಯಾರು ಇತ್ತ ಸುಳಿಯುವ ಧೈರ್ಯವನ್ನು ಮಾಡಲಿಲ್ಲ. ಹೀಗಾಗಿ ಸಮೃದ್ಧವಾದ ಕಾಡು ಪರಮಶಿವಭಟನ ವೆನಿಲ್ಲಾ ತೋಟವಾಗಿ ಕಾಸು ಖರ್ಚಿಲ್ಲದೇ ಮಾರ್ಪಾಟಾಗಿ ಹೋಯಿತು. ತೋಟದಲ್ಲಿ ಹದವಾಗಿದ್ದ ಕಾಡು ಮಣ್ಣಿಂದಾಗಿ ಹೊಸ ವೆನಿಲ್ಲಾ ಬಳ್ಳಿಗಳು ಚೆನ್ನಾಗಿ ಮೇಲೆ ಬಂದವು. ಹಳ್ಳಿ ಮುಗ್ಧ ಜನರಿಗೆ ವೆನಿಲ್ಲಾ ಬಳ್ಳಿ ಕುರಿತಾಗಿ ಯಾವುದೇ ಮಾಹಿತಿಯಿರಲಿಲ್ಲ. ಈ ದುಡ್ಡಿನ ಬೆಳೆ ಶ್ರೀಮಂತರ ಸೊತ್ತಾಗಿ ಹೋಗಿತ್ತು. ಹತ್ತಾರು ಎಕರೆಗಳಲ್ಲಿ ಪರಮಶಿವ ಭಟ್ಟರ ವೆನಿಲ್ಲಾ ತೋಟ ನಳನಳಿಸತೊಡಗಿತು. ಕಾಫಿ, ಅಡಿಕೆ, ಬಾಳೆ, ತೆಂಗಿನ ಜೊತೆ ವೆನಿಲ್ಲಾ ಸಹ ಭಟ್ಟರ ಕೈ ಹಿಡಿದಿತ್ತು. ಸಾವಿರಾರು ರೂಪಾಯಿ ಆದಾಯವಿದ್ದವರೂ ಭಟ್ಟರಾಗಲಿ ಅವರ ಮನೆಯವರಾಗಲಿ ಎಂಜಲ ಕೈಯಲ್ಲಿ ಕಾಗೆಯನ್ನು ಓಡಿಸುವುದಕ್ಕೆ ಹೋಗುವ ಜನರಲ್ಲ. ಎಷ್ಟು ಜಿಪುಣತನ ಅವರಲ್ಲಿ ಮನೆ ಮಾಡಿತ್ತು. ಹಣವನ್ನೆಲ್ಲಾ ಮತ್ತೆ ಮತ್ತೆ ಬಡ್ಡಿ ಬಿಟ್ಟು ಬಡ್ಡಿ ಹಣವನ್ನು ಬಡ್ಡಿಗೆ ಬಿಡುವ ಅದರಿಂದಾದ ಲಾಭವನ್ನು ಲೆಕ್ಕಹಾಕಿ ಖುಷಿಪಡುವಂತಹ ಮನಸ್ಥಿತಿ ಭಟ್ಟರದಾಗಿತ್ತು. ಯಾವುದನ್ನೂ ಪಕ್ಕಟೆಯಾಗಿ ಕೊಡುವ ಮನಸ್ಸು ಮಾಡುತ್ತಿರಲಿಲ್ಲ. ಹೀಗಾಗಿ ಯಾರ ಬಳಿಯೂ ಪರಮಶಿವ ಭಟ್ಟರು ಅಗತ್ಯಕ್ಕಿಂತ ಹೆಚ್ಚಾಗಿ ಸಲುಗೆಯನ್ನು ಬೆಳೆಸುತ್ತಿರಲಿಲ್ಲ. ಮನೆಯಲ್ಲಿ ನಡೆಯುತ್ತಿದ್ದ ವಿಶೇಷ ಕಾರ್‍ಯಕ್ರಮಗಳೆಂದರೆ ಅವರ ಅಪ್ಪ ಮತ್ತು ಅಮ್ಮನ ವಾರ್ಷಿಕ ತಿಥಿ (ವೈದಿಕ) ಕಾರ್ಯಕ್ರಮಗಳು ಮಾತ್ರ. ಅದಕ್ಕೂ ಒಬ್ಬ ಬ್ರಾಹ್ಮಣರನ್ನು ಕರೆದು ಊಟ ಹಾಕಿ ಕಳಿಸುತ್ತಿದ್ದರು. ಕೇವಲ ನಾಲ್ಕಾಣೆ ದಕ್ಷಿಣೆ ಭಟ್ಟರ ಮನೆಯಲ್ಲಿ ಸಿಗುತ್ತಿತ್ತು. ಆದರೆ ಊರಿನ ಶ್ರೀಮಂತರನ್ನು ಎದುರು ಹಾಕಿಕೊಂಡರೆ ಬದುಕುವುದು ಕಷ್ಟ ಎನ್ನುವ ಕಾರಣಕ್ಕೆ ಸೂರಿ ಭಟ್ಟನು ಪರಮಶಿವಭಟ್ಟನ ತಂದೆ-ತಾಯಿ ತಿಥಿಯನ್ನು ತಪ್ಪದೇ ಬಂದು ಮಾಡಿಸಿ ಹೋಗುತ್ತಿದ್ದನು. ಅವರು ಕೊಟ್ಟಷ್ಟೆ ದಾನ ದಕ್ಷಿಣೆ ಪಡೆದು ಮನೆಗೆ ಹೋಗುತ್ತಿದ್ದನು.

ಸುಮಾರು ೪-೫ ದಶಕ ಕೆಳಗೆ ಪರಮಶಿವಭಟನ ಪೂರ್ವಿಕರು ಬಂದಾಗ ಮಾರುತಿಪುರವು ಗೊಂಡಾರಣ್ಯವಾಗಿತ್ತು. ಇಲ್ಲಿನ ಜನರ ಬಡತನವನ್ನೇ ಅವರು ಬಂಡವಾಳವನ್ನಾಗಿಸಿಕೊಂಡು ಊರಿನ ಕಾಡನ್ನು ತಮ್ಮ ಅಡಿಕೆ ಕಾಫಿ ತೋಟವನ್ನಾಗಿಸಿಕೊಂಡರು. ಜನರಿಗೆ ಅಗತ್ಯ ಬಿದ್ದಾಗ ಹಣವನ್ನು ಕೊಟ್ಟು ಒಂದಕ್ಕೆರಡು ಬೆರೆಸಿಕೊಂಡು ಜನರನ್ನು ಶೋಷಣೆ ಮಾಡಿ ಇವರು ಮಾತ್ರ ದೊಡ್ಡ ಶ್ರೀಮಂತರಾದರು. ಊರಿನ ಜನರ ಮನೆಯಲ್ಲಿ ನಡೆಯುವ ಮದುವೆ ಇತರೇ ಮಂಗಳಕಾರ್‍ಯಗಳಿಗೆ ಹಣವನ್ನು ಕೊಟ್ಟು ರಾಮನ ಲೆಕ್ಕ, ಕೃಷ್ಣನ ಲೆಕ್ಕ ಬರೆದು ಅದರಲ್ಲೇ ಶ್ರೀಮಂತಿಕೆಯ ಕಂಡವರು ಪರಮಶಿವ ಭಟ್ಟರ ಪೂರ್ವಜರು.

ಊರಿನ ಹೆಚ್ಚಿನ ಆಸ್ತಿಯನ್ನು ತಮ್ಮದಾಗಿಸಿಕೊಂಡು ಊರ ಜನರನ್ನು ತಮ್ಮ ಮನೆಯ ಜೀತದಾಳನ್ನಾಗಿ ಮಾಡಿಕೊಂಡರು. ಹೆಣ್ಣು ಮಕ್ಕಳ ಮದುವೆ ಬಂತೆಂದರೆ ಸಾಕು ಪರಮಶಿವಯ್ಯ ಜಮೀನು ದಾಹ ಹೆಚ್ಚಾಗುತ್ತಿತ್ತು. ಮದುವೆ ಬಾಬ್ತು ಹಣವನ್ನು ಕೊಟ್ಟು ಜಮೀನನ್ನು ಒತ್ತೆ ಮಾಡಿ ಕೊಳ್ಳುತ್ತಿದ್ದ. ಅವನು ತನ್ನ ಇಡೀ ಜೀವನದಲ್ಲಿ ತೀರಿಸಲಾರದಷ್ಟು ಪ್ರಮಾಣದ ಬಡ್ಡಿ ಹಾಕಿ ಇಡಿ ಜಮೀನನ್ನು ಕಬಳಿಸುತ್ತಿದ್ದನು. ಹೀಗಾಗಿ ಪರಮಶಿವಯ್ಯ ಕುಟುಂಬದವರು ಕಂಡವರ ಗಂಟನ್ನು ತಿಂದು ಊರಿಗೆ ಶ್ರೀಮಂತರೆನಿಸಿಕೊಂಡರು. ಆದರೆ ಈ ಮಾರುತಿಪುರ ನಿರ್‍ಗತಿಕರಿಗೆ ಹಣದ ಆಶ್ರಯಕ್ಕಾಗಿ ಬೇರಾವ ದಾರಿಯೂ ಇಲ್ಲದೇ ಮದುವೆ-ಮುಂಜಿ ಬಂದಾಗ ಇವರ ಬಳಿ ಬರಲೇಬೇಕಾದ ಅನಿವಾರ್‍ಯ ಪರಿಸ್ಥಿತಿಯಿತ್ತು.

ಪರಮಶಿವಯ್ಯ ತಂದೆ ಐದು ಗಂಡು ಮತ್ತು ಒಂದು ಹೆಣ್ಣು ಮಗುವಿನ ತುಂಬಿದ ಸಂಸಾರವಾಗಿತ್ತು. ಹದಿನೈದು ಎಕರೆ ಬಾಗಾಯ್ತು, ಐವತ್ತು ಎಕರೆ ತರಿ, ನೂರು ಎಕ್ರೆ ಖುಷ್ಕಿ ಜಮೀನು ಇವರದಾಗಿತ್ತು. ಪರಮಶಿವಯ್ಯನ ತಂದೆ ನಾರಾಯಣ ತುಂಬಾ ತಿಕ್ಕಲು ಸ್ವಭಾವದವನಾಗಿದ್ದನು. ಕೆಲಸಕ್ಕೆ ಬರುವ ಕೆಲಸಗಾರರನ್ನು ಇವರು ಜೀತದಾಳಗಳು ತರಹ ನೋಡಿಕೊಳ್ಳುತ್ತಿದ್ದನು.

ನಾರಾಯಣನ ಸಂಸಾರದಲ್ಲಿನ ಎಲ್ಲಾ ಮಕ್ಕಳಿಗೂ ಅಪ್ಪನ ಕ್ರೂರ ಗುಣಗಳು ರಕ್ತಗತವಾಗಿ ಬಂದಿತ್ತು. ಮಾರುತಿಪುರ ಮತ್ತು ಪಕ್ಕದ ಕಿಬ್ಬಳ್ಳಿ ಗ್ರಾಮಗಳಿಗೆ ಮೊದಲಿನಿಂದಲೂ ವೈಷಮ್ಯ ಭಾವನೆಯಿತ್ತು. ಕಿಬ್ಬಳ್ಳಿ ಗ್ರಾಮದಲ್ಲಿ ಮನೆಗಳು ಸಂಖ್ಯೆ ಹೆಚ್ಚಿದ್ದರೂ ಅಲ್ಲಿ ಆಗರ್ಭ ಶ್ರೀಮಂತರ ಮನೆಗಳಿರಲಿಲ್ಲ. ಬದಲಿಗೆ ಸಾಧಾರಣ ರೈತಾಪಿ ಜನರ ಮತ್ತು ಕೂಲಿ ಕಾರ್ಮಿಕರಿಂದ ತುಂಬಿತ್ತು. ಕಿಬ್ಬಳ್ಳಿ ಗ್ರಾಮದಲ್ಲಿ ಸುಮಾರು ಐವತ್ತು ಮನೆಗಳಿದ್ದವು. ಹೆಚ್ಚಿನ ಮನೆಗಳು ಒಕ್ಕಲಿಗರದ್ದೇ ಆಗಿತ್ತು. ಕಿಬ್ಬಳ್ಳಿಯಲ್ಲಿ ಶಂಕರ ನಾರಾಯಣ ಭಟ್ಟರ ಒಡೆತನದಲ್ಲಿ ವೆಂಕಟರಮಣಸ್ವಾಮಿ ಒಂದು ದೇವಸ್ಥಾನವಿತ್ತು. ದೇವಾಲಯಕ್ಕೆ ಯಾವುದೇ ರೀತಿಯ ಆಸ್ತಿ ವಗೈರೆ ಇಲ್ಲವಾದರೂ ಭಟ್ಟರ ಮನೆಯವರು ದೇವಸ್ಥಾನದ ಪೂಜೆ ಪುನಸ್ಕಾರಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದರು. ಪ್ರತಿವರ್ಷವೂ ತಪ್ಪದೇ ಕಾರ್ತಿಕ ಮಾಸವಿಡಿ ದೀಪೋತ್ಸವ ಕಾರ್‍ಯಕ್ರಮವು ಜರುಗುತ್ತಿತ್ತು. ಈ ದೇವಸ್ಥಾನದ ಒಡತನಕ್ಕಾಗಿ ನಾರಾಯಣ ಮತ್ತು ಶಂಕರನಾರಾಯಣ ಭಟ್ಟರ ಮನೆಗಳ ನಡುವೆ ವೈಷಮ್ಯ ಹೊಗೆ ಸದಾ ಕಾಲ ಆಡುತ್ತಲೇ ಇತ್ತು. ಸರ್ಕಾರವು ಕಿಬ್ಬಳ್ಳಿ ಮಕ್ಕಳಿಗೆ ಒಂದು ಸಾರ್‍ಕಾರಿ ಶಾಲೆಯನ್ನು ಮಂಜೂರು ಮಾಡಿತು. ಸರ್ಕಾರ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಹೆಚ್ಚಿನ ಮಕ್ಕಳಿರುವ ಗ್ರಾಮಗಳಿಗೆ ಶಾಲೆ ಮಂಜೂರು ಮಾಡಿತ್ತು. ಕಿಬ್ಬಳ್ಳಿಯಲ್ಲಿ ಶಾಲೆಗೆ ಹೋಗುವ ನಲವತ್ತು ಮಕ್ಕಳಿದ್ದರೆ ದೂರದ ಮಾರುತಿಪುರದಲ್ಲಿ ಕೇವಲ ಏಳು ಮಕ್ಕಳಿದ್ದವು. ಕಿಬ್ಬಳ್ಳಿಗೆ ಶಾಲೆ ಮಂಜೂರಾಗಿರುವ ಸಂಗತಿಯು ಗೊತ್ತಾದ ಸತ್ಯನಾರಾಯಣ ಹೇಗಾದರೂ ಮಾಡಿ ಈ ಕೆಲಸಕ್ಕೆ ಕಲ್ಲು ಹಾಕುವ ಪ್ರಯತ್ನ ಮಾಡಿದನು.

ಭಟ್ಟರು ಪೂಜೆ ಮಾಡುತ್ತಿದ್ದ ವೆಂಕಟರಮಣ ದೇವಸ್ಥಾನದ ಪಕ್ಕದ ತಮ್ಮ ಜಮೀನಲ್ಲಿ ಶಾಲೆ ಮಾಡಿಸುವ ಉದ್ದೇಶ ಜನರಿಗಿತ್ತು. ಈ ಹಿಂದೆ ಊರಿನವರೆಲ್ಲಾ ಸೇರಿ ವರಾಡವೆತ್ತಿ ಒರ್ವ ಶಿಕ್ಷಕರನ್ನು ನೇಮಕ ಮಾಡಿ ಸೋಗೆಮಾಡು ಮಾಡಿ ಅಲ್ಲಿಯೇ ಪಾಠ ಪ್ರವಚನ ನಡೆಸಲಾಗುತಿತ್ತು. ಇದೇ ಜಾಗದಲ್ಲಿ ಸರ್ಕಾರಿ ಶಾಲೆ ನಡೆಸುವ ಉದ್ದೇಶ ಭಟ್ಟರು ಮನೆಯವರಿಗಿತ್ತು. ಸರ್ಕಾರಿ ಕೆಲಸಕ್ಕೆ ಹೇಗೆ ಕಡ್ಡಿ ಆಡಿಸುವುದೆಂದು ಸತ್ಯನಾರಾಯಣನಿಗೆ ಚೆನ್ನಾಗಿ ತಿಳಿದಿತ್ತು. ತನಗೆ ತಿಳಿದ ಹಲವರ ಬಳಿಯಲ್ಲಿ ಶಾಲೆ ಮಾರುತಿಪುರದಲ್ಲೇ ಇದ್ದರೆ ವಾಸಿಯೆಂದು ಕಿಬ್ಬಳ್ಳಿಯ ಕೆಲವು ಮಂದಿಯಿಂದ ಮೂಗರ್ಜಿಯನ್ನು ಬರೆಸಿದನು.

ಹೀಗಾಗಿ ಕಿಬ್ಬಳ್ಳಿಗೆ ಮಂಜೂರಾಗಿದ್ದ ಶಾಲೆಯ ಆರಂಭದಲ್ಲಿಯೇ ಅಂತಿಮ ಹಂತ ತಲುಪಿತು. ಸ್ಥಳೀಯ ಶಾಸಕರು ನಾರಾಯಣ ಪರವಹಿಸಿದ್ದರಿಂದ ಕಿಬ್ಬಳ್ಳಿಗೆ ಮಲತಾಯಿ ಧೋರಣೆ ವಹಿಸಿತು. ಕಿಬ್ಬಳ್ಳಿ ಬರಬೇಕಾದ ಶಾಲೆ ಮಾರುತಿಪುರ ಪಾಲಾಗುವುದು ಹೆಚ್ಚು ಕಡಿಮೆ ಖಚಿತವಾಯಿತು. ಇದೇ ಸಂದರ್ಭದಲ್ಲಿ ಕಿಬ್ಬಳ್ಳಿಯ ಕೆಲವು ತರುಣರು ಈ ವಿಚಾರದಲ್ಲಿ ಹೋರಾಟ ಪ್ರಾರಂಭ ಮಾಡಿದರು. ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಶಾಲೆ ಕಿಬ್ಬಳ್ಳಿ ಮತ್ತು ಮಾರುತಿಪುರ ಎರಡೂ ಊರಿನ ಕೈ ತಪ್ಪುವ ಸಾಧ್ಯತೆಗಳು ದಟ್ಟವಾದಗ ಎರಡೂ ಗ್ರಾಮದ ಕೆಲವು ಹಿರಿಯರು ಕುಳಿತು ಸಂಧಾನ ಮಾಡತೊಡಗಿದರು. ಕೊನೆಗೆ ಶಾಲೆ ಕಿಬ್ಬಳ್ಳಿ ಮತ್ತು ಮಾರುತಿಪುರದ ನಡುವೆ ಕಾಡಿದ ಮದ್ಯೆ ಮಾಡುವ ಕುರಿತು ಉಭಯ ಗುಂಪಿನ ಹಿರಿಯರು ಸಮ್ಮತಿ ನೀಡಿದರು. ಶಾಲೆಗೆ ‘ಮಾರುತಿಪುರ’ ಕಿರಿಯ ಪ್ರಾಥಮಿಕ ಶಾಲೆಯೆಂದೇ ನಾಮಕರಣ ಮಾಡಲಾಯಿತು. ಕಿಬ್ಬಳ್ಳಿ ಮತ್ತು ಮಾರುತಿಪುರ ಸ್ಮಶಾನ ಜಾಗವು ಈ ಹಿರಿಯ ಮಕ್ಕಳ ಶಾಲೆ ಜಾಗವಾಗಿ ಮಾರ್ಪಾಟಾಯಿತು.

ಕೊನೆಗೂ ತನ್ನ ಕುತಂತ್ರ ಗೆದ್ದಿತೆಂದು ನಾರಾಯಣ ತನ್ನ ಮೀಸೆಯಡಿಯಲ್ಲೇ ನಕ್ಕನು, ನೀರು ಮತ್ತು ನೆರಳಿಲ್ಲದೇ ಸುಡುಗಾಡು ಮಕ್ಕಳ ಶಾಲೆಯಾಯಿತು, ಮಕ್ಕಳಿಗೆ ಕುಡಿಯುವ ನೀರು ತರಲಿಕ್ಕೆ ಸುಮಾರು ಎರಡು ಮೈಲಿ ನಡೆಯಬೇಕಾಗಿತ್ತು.

ನಾರಾಯಣನ ಐದು ಮಂದಿ ಗಂಡು ಮಕ್ಕಳಲ್ಲಿ ಪರಮಶಿವಯ್ಯನೇ ಹಿರಿಕ, ನಂತರದವರು ರಾಮರಾಜು, ವಿಶಕಂಠ, ಶಿವು ಮತ್ತು ನಾಗೇಂದ್ರ. ವಿಷಕಂಠ ಹುಟ್ಟುವಾಗಲೇ ಇವನು ವಿಕಲಾಂಗನಾಗಿ ಹುಟ್ಟಿದ. ಆದರೆ ಇವನು ಮಹಾ ಚಟ ಪುರುಷ. ಕೆಲಸಕ್ಕೆ ಬರುತ್ತಿದ್ದ ಹೆಣ್ಣಾಳುಗಳ ಮೈ ಮೇಲೆ ಇವನ ಕಣ್ಣು ಸದಾ ಇರುತಿತ್ತು. ಶಿವು ಪರೀಕ್ಷೆಯಲ್ಲಿ ಫೇಲಾದ ಎನ್ನುವ ಕಾರಣಕ್ಕೆ ಊರ ಹೊರಗಿನ ಮತ್ತಿಯ ಮರಕ್ಕೆ ನೇಣು ಹಾಕಿಕೊಂಡು ಸುತ್ತು ಹೋಗಿದ್ದ. ನಾರಾಯಣನ ಮನೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಶಿವುವಿನ ಸಾವಿನ ನಂತರ ಜನರಿಗೆ ಮನದಟ್ಟಾಗತೊಡಗಿತು. ಹಾಗೆ ಇವನು ಪರೀಕ್ಷೆ ಫಲಿತಾಂಶ ಬಂದ ದಿನ ಮನೆಗೆ ಬಂದಾಗ ಮನೆಯಲ್ಲಿ ಮಾರಾಮಾರಿ ಜಗಳವೇ ನಡೆದಿತ್ತಂತೆ.

ಅದೇ ದಿನ ರಾತ್ರಿ ಶಿವು ಮನೆಯಿಂದ ಹೊರಟವ ನಾಲ್ಕಾರು ದಿನ ಹುಡುಕಿದಾಗ ಕಾಡಿನ ಮರವೊಂದರಲ್ಲಿ ಶಿವಕುಮಾರನ ಹೆಣ ನೇತಾಡುತ್ತಿತ್ತು. ನಾರಾಯಣನ ಮೈ ಜುಮ್ಮೆನ್ನುವಂತಹ ಘಟನೆ ನಡೆದ ಹೋಗಿತ್ತು. ಊರಲ್ಲಿ ನಾರಾಯಣನಿಗಿರುವ ಬೆಲೆ ಕಡಿಮೆಯಾಗತೊಡಗಿತು. ಆದರೆ ನಾರಾಯಣನ ಗೊತ್ತು-ದೌಲತ್ತು ಮಾತ್ರ ಕಡಿಮೆಯಾಗಲೇ ಇಲ್ಲ.

ಮಾರುತಿಪುರದಲ್ಲಿ ಶಾಲೆಯಲ್ಲಿ ಪ್ರವೇಶಗಳು ಪ್ರಾರಂಭವಾಗಿತ್ತು. ಶಾಲೆಯ ಹೆಸರು ಮಾರುತಿಪುರ ಕಿ.ಪ್ರಾ.ಶಾಲೆ ಎಂದೇ ನಾಮಕರಣವಾಗಿತ್ತು. ಶಾಲೆಗೆ ಬಯಲುಸೀಮೆಯ ಹೊಸ ಶಿಕ್ಷಕರೊಬ್ಬರನ್ನು ಸರ್ಕಾರ ನೇಮಿಸಿತ್ತು. ಆದರೆ ಈ ಶಾಲೆಗೆ ಬಂದ ಶಿಕ್ಷಕ ತಿಮ್ಮಪ್ಪನಿಗೆ ಉಳಿದುಕೊಳ್ಳಲು ಯಾವುದೇ ಬಾಡಿಗೆ ಮನೆ ದೊರೆಯಲಿಲ್ಲ. ಆದರೆ ತುಂಬಾ ಸಿರಿವಂತನಾದರು ನಾರಾಯಣ ಈ ಶಿಕ್ಷಕನಿಗೆ ತನ್ನ ಮನೆಯಲ್ಲಿ ಜಾಗ ಕೊಡುವ ಉದಾರತೆಯನ್ನೇನೂ ತೋರಿಸಲಿಲ್ಲ. ಆಗ ಕಿಬ್ಬಳ್ಳಿಯ ಕಾಡ ಭಟ್ಟರು ತಮ್ಮ ಬಡತನದಲ್ಲೂ ದಾರಾಳತೆಯನ್ನು ತೋರಿಸಿ ತನ್ನದೇ ಮನೆಯಲ್ಲಿ ಮೇಷ್ಟ್ರಿಗೆ ಜಾಗ ಕೊಟ್ಟರು ಮಧ್ಯಾಹ್ನ ಸಂಜೆ ಊಟದ ವ್ಯವಸ್ಥೆಯನ್ನು ಮಾಡಿದರು.

-೪-

ನಾರಾಯಣರಾಯ ಮತ್ತು ಪರಮಶಿವಭಟ್ಟನ ನಡುವೆ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿತ್ತು. ಅದೇ ಇದೆ ಎರಡು ಮನೆಗಳ ನಡುವೆ ಇರುವ ದ್ವೇಷದ ನಡುವೆ ಎರಡು ಎಳೆ ಜೀವಿಗಳ ನಡುವೆ ಪ್ರೀತಿ ಚಿಗುರಲಾರಂಭಿಸಿತ್ತು. ನಾರಾಯಣರಾಯನ ಮೊಮ್ಮಗ ಸುಬ್ಬು ಮತ್ತು ಪರಮಶಿವಭಟ್ಟನ ಸೊಸೆ ಶೀಲಾ ನಡುವೆ ಅದೇನೋ ಆಕರ್ಶಣೆ ಪ್ರರಂಭವಾಗಿತ್ತು. ಸುಬ್ಬು ಮತ್ತು ಶೀಲಾ ದೂರದ ಹುಲ್ಲೂರಿನಲ್ಲಿ ಕಾಲೇಜು ಕಲಿಯುತ್ತಿದರು. ಸಮವಯಸ್ಕರು ಹಾಗೂ ಸಹಪಾಠಿಗಳ ನಡುವೆ ಸಲಿಗೆ ಹೆಚ್ಚಾಗಿಯೇ ಇತ್ತು. ಎರಡು ಕುಟುಂಬಗಳ ನಡುವೆ ಇರುವ ದ್ವೇಷ ಇವರ ಪ್ರೀತಿಗೆ ಮುಳ್ಳಾಗದೇ ಪ್ರೀತಿ ದಿನೇ ದಿನೇ ಗಾಢವಾಗುತ್ತಾ ಹೋಯಿತು. ಸುಬ್ಬ ಕಾಲೇಜು ಹತ್ತಿರದ ಶ್ಯಾಮಣ್ಣ ಹೆಗ್ಗಡೆಯವರ ಮನೆಯಲ್ಲಿ ಬಾಡಿಗೆ ರೂಮನ್ನು ಮಾಡಿಕೊಂಡಿದ್ದರೆ, ಶೀಲಾ ತನ್ನ ಚಿಕ್ಕಮ್ಮನ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದಳು. ಸುಬ್ಬು ಇಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪಿ.ಯು.ಸಿ ಗೆ ಹೋಗುತ್ತಿದ್ದರೆ ಶೀಲಾ ಹತ್ತನೇ ತರಗತಿ ಕಲಿಯುತ್ತಿದ್ದಳು. ಶಾಲೆ ಮತ್ತು ಕಾಲೇಜು ಅಕ್ಕ ಪಕ್ಕದಲ್ಲಿ ಇದ್ದ ಕಾರಣದಿಂದಾಗಿ ಇವರ ಪ್ರೀತಿ ಬೆಳೆದು ಹೆಮ್ಮರವಾಯಿತು.

ಇವರಿಬ್ಬರು ಪ್ರತಿ ವರ್ಷ ಎಳ್ಳಾಮಾವಾಸೆ ಜಾತ್ರೆಗೆ ತೀರ್ಥಹಳ್ಳಿಗೆ ತಪ್ಪದೆ ಬರುತ್ತಿದ್ದರು. ತಮ್ಮ ಪ್ರೀತಿ ಶಾಶ್ವತವಾಗಿರಲೆಂದು ಇಲ್ಲಿ ತೀರ್ಥರಾಮೇಶ್ವರನಿಗೆ ಹರಕೆ ಹೊರುತ್ತಿದ್ದರು. ಇಲ್ಲೇ ಪ್ರಶಾಂತವಾಗಿಯೇ ಹರಿಯುತ್ತಿರುವ ತುಂಗಾ ನದಿ ಮರಳಿನ ಮೇಲೆ ಕುಳಿತು ತಮ್ಮ ಭವಿಷ್ಯದ ಜೀವನದ ಕುರಿತಾಗಿ ದಿನವಿಡೀ ಕನಸು ಕಾಣುತ್ತಿದ್ದರೂ. ಪ್ರತಿ ವರ್ಷವು ಇಲ್ಲಿಯ ರಾಮೇಶ್ವರ ದೇವಸ್ಥಾನದ ಬಳಿ ಇರುವ ಪರಶುರಾಮನ ಕೊಂಡದಲ್ಲಿ ತಪ್ಪದೇ ತೀರ್ಥಸ್ನಾನ ಮಾಡುತ್ತಿದ್ದರು. ಈ ಕೊಂಡಕ್ಕೆ ತನ್ನದೇ ಆಗಿರುವ ಇತಿಹಾಸದ ಕಥೆ ಇದೆ.

ಪುರಾಣ ಕಾಲದಲ್ಲಿ ಜಮದಗ್ನಿ ಋಷಿಯು ತನ್ನ ಪತ್ನಿ ರೇಣುಕಾದೇವಿ ಪ್ರತೀದಿವಸವೂ ತನ್ನ ತಪಸ್ಸಿಗೆ ಯಾಗ ಯಜ್ಞಾದಿಗಳನ್ನು ಆಣಿ ಮಾಡುವ ಕೆಲಸವನ್ನು ವಹಿಸಿದ್ದ. ಆಕೆಯು ಸಹ ಅಷ್ಟೇ ಅಚ್ಚುಕಟ್ಟಾಗಿ ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಳು. ಪ್ರತಿ ದಿನವೂ ಆಕೆ ಮರಳಿನ ಕೊಡ ಮಾಡಿಕೊಂಡು ನದಿ ನೀರನ್ನು ಆಶ್ರಮಕ್ಕೆ ತರುತ್ತಿದ್ದಳು. ಒಮ್ಮೆ ನದಿಯ ನೀರಿನಲ್ಲಿ ಗಂಧರ್ವರ ಪ್ರೇಮ ಸಲ್ಲಾಪ ನೋಡಿ ಈಕೆಯ ಮನಸ್ಸು ಕೆಲವು ಕಾಲ ಯಾವುದೋ ಮಾಯೆಗೆ ಒಳಗಾಯಿತು. ನಂತರ ಎಚ್ಚರಗೊಂಡು ಮರಳಿನ ಕೊಡ ಮಾಡಲು ನೋಡಿದಾಗ ಅದು ಸಾಧ್ಯವಾಗಲೇ ಇಲ್ಲ. ಬಹಳ ಪ್ರಯತ್ನ ಮಾಡಿ ನೋಡಿ ಸೋತ ರೇಣುಕಾ ಬರಿಗೈಯಲ್ಲಿ ಆಶ್ರಮಕ್ಕೆ ವಾಪಾಸು ಬಂದಳೂ. ಇತ್ತ ಆಶ್ರಮದಲ್ಲಿ ತನ್ನ ತಪಸ್ಸಿನ ಶಕ್ತಿಯಿಂದಲೇ ಎಲ್ಲವನ್ನೂ ಗ್ರಹಿಸಿದ ಜಮದಗ್ನಿ ಋಷಿ ಬರಿಗೈಯಲ್ಲಿ ಬಂದ ರೇಣುಕಳನ್ನು ನೋಡಿ ಬಹಳ ಕೋಪಗೊಂಡನು. ಮೊದಲೇ ವ್ಯಾಘ್ರನಾದ ಋಷಿ ಈ ಪ್ರಕರಣದಿಂದ ಇನ್ನಷ್ಟು ಕುದ್ದು ಹೋಗಿದ್ದು. ಬರಿಗೈಯಲ್ಲಿ ಬಂದ ರೇಣುಕಾಳನ್ನು ಕಂಡು ತನ್ನ ಮಕ್ಕಳನ್ನು ಕರೆದು ಹೇಳಿದ – “ಈ ಹೆಣ್ಣನ್ನು ನಿಮ್ಮ ತಾಯಿ ಎನ್ನುವ ಕನಿಕರವನ್ನೂ ತೋರಿಸದೆ ‘ಕೊಂದು ಹಾಕಿ’ ಎಂದಾಗ ಮಕ್ಕಳು ತಮ್ಮ ಹೆತ್ತ ತಾಯಿಯನ್ನು ಹೇಗೆ ಕೊಲ್ಲುವುದೆಂದು ತೋರದೇ ಸುಮ್ಮನಾದರು. ಮೊದಲೇ ಕೋಪಿಷ್ಟ ಋಷಿ ತನ್ನ ಮಕ್ಕಳನ್ನು ಸುಟ್ಟು ಹಾಕಿದ. ಕೊನೆಗೆ ತನ್ನ ಹಿರಿಯ ಮಗನಾದ ಪರಶುರಾಮನಿಗೆ ಈ ಕೆಲಸ ಒಪ್ಪಿಸಿದಾಗ ಆತ ಮರು ಮಾತನಾಡದೇ ತನ್ನ ಪರಶುವಿನಿಂದ ತನ್ನ ತಾಯಿಯ ಶಿರವನ್ನೇ ಚಂಡಾಡಿದ. ಕೊನೆಗೆ ಈ ಋಷಿ ಶಾಂತನಾಗಿ ಮಗನಿಗೆ ಮೂರು ಮರಗಳನ್ನು ದಯಪಾಲಿಸಿದ. ಪರಶುರಾಮ ಮೊದಲ ವರವಾಗಿ ತನ್ನ ತಾಯಿಯನ್ನು ಎರಡನೇ ವರವಾಗಿ ಸೋದರರನ್ನು ಮೂರನೇ ವರವಾಗಿ ಸದಾ ಕೋಪಿಷ್ಟನಾದ ತನ್ನ ತಂದೆ ಶಾಂತವಾಗುವಂತೆ ವರಗಳನ್ನು ಕೇಳಿದ. ಪರಶುರಾಮ ತನ್ನ ತಾಯಿಯ ಶಿರವನ್ನು ಛೇದ ಮಾಡಿದ ಕೊಡಲಿಯನ್ನು ನೀರಿನಿಂದ ತೊಳೆದಾಗ ಅದರ ರಕ್ತದ ಕಲೆ ಮಸಾಲೇ ಇಲ್ಲ. ಅದು ಭೂಮಂಡಳದ ಯಾವುದೇ ನೀರಿನಲ್ಲಿ ತೊಳೆದರೂ ಕಲೆ ಮಾಯವಾಗಲಿಲ್ಲ. ಕೊನೆಗೆ ತುಂಗಾ ನದಿಯ ಈ ಜಾಗದಲ್ಲಿ ಬಂದು ನೀರಿನಲ್ಲಿ ತೊಳೆದಾಗ ಕಲೆ ಕೂಡಲೇ ಮಾಯವಾಯಿತಂತೆ. ಹಾಗಾಗಿ ಈ ನೀರು ಪರಮ ಪಾವನವಾಯಿತಂತೆ. ಅದರಲ್ಲೂ ಪ್ರತಿ ವರ್ಷ ಎಳ್ಳಾಮಾವಸೆ ದಿವಸ ಈ ಕೊಂಡದಲ್ಲಿ ಸ್ನಾನ ಮಾಡಿದರೆ ಮಾಡಿದ ಪಾಪಗಳೆಲ್ಲ ಪರಿಹಾರವಾಗುವುದೆಂಬ ನಂಬಿಕೆ ಇದೆ.

ಸುಬ್ಬು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬಾಯಿ ಸೇರಿದ. ಇತ್ತ ಶೀಲಾ ಕಾಲೇಜು ವಿದ್ಯಾಭ್ಯಾಸ ಮುಗಿಸಿ ತನ್ನ ಮನೆ ಸೇರಿದಳು. ಸುಬ್ಬು ಇಂಜಿನಿಯರಿಂಗ್ ಮುಗಿಸಿ ದುಡಿಮೆಗೆ ದೂರದ ದುಬೈಗೆ ಪ್ರಯಾಣ ಮಾಡಿದ. ದುಬೈಗೆ ಹೊರಡುವ ಮೊದಲು ಶೀಲಾ ಗೆ ನಿನ್ನನ್ನು ಮದುವೆಯಾಗುವುದಾಗಿ ಮಾತು ಕೊಟ್ಟು ಹತ್ತು ವರ್ಷಗಳ ಕಾಲ ಕೆಲಸ ಮಾಡಿ ನಂತರ ಊರಿಗೆ ಬಂದು ಸುಖವಾಗಿ ಸಂಸಾರ ಮಾಡುವ ಕನಸು ಮೂಡಿಸಿ ದುಬಾಯಿಗೆ ಹೊರಟ. ಇತ್ತ ಶೀಲಾ ದಿನಾಲೂ ಸುಬ್ಬು ನೆನಪಿನಲ್ಲೆ ಕಳೆಯ ತೊಡಗಿದಳು. ತಾನು ಮತ್ತು ಸುಬ್ಬು ದಿನಾಲೂ ಸೇರುತ್ತಿದ್ದ ಮಲ್ಲಿಕಾರ್ಜುನ ಸನ್ನಿದಿಯಲ್ಲಿ ಕುಳಿತು ಸುಬ್ಬುನಿನ ಸವಿ ನೆನಪಿನಲ್ಲಿ ದಿನವನ್ನು ಕಳೆಯಲಾರಂಬಿಸಿದಳು.

ದಿನಾಲೂ ಶೀಲಾ ದೇವಸ್ಥಾನಕ್ಕೆ ಬರುವುದನ್ನು ದೇವಸ್ಥಾನದ ಅರ್ಚಕರಾದ ಶಿವರಾಮ ಗಮನಿಸುತ್ತಿದ್ದ. ದಿನಾಲೂ ಶೀಲಾಳ ಬಳಿ ಅದು ಇದು ಮಾತನಾಡುತ್ತಾ ಕುಳಿತಿರುತ್ತಿದ್ದ. ಶೀಲಾ ದೇವಸ್ಥಾನ ಬಾಗಿಲು ಹಾಕಿದ ನಂತರ ಮನೆಗೆ ಹೋಗುತ್ತಿದ್ದಳು. ಹೀಗೆ ದಿನಾಲೂ ಇವರಿಬ್ಬರ ನಡುವೆ ಅದೇನೋ ಹೊಸತನದ ಸಂಬಂಧವು ಉಂಟಾಯಿತು. ಸುಬ್ಬು ದೂರ ಹೋದ ನಂತರ ಇಲ್ಲಿ ಶಿವರಾಮ ಸುಬ್ಬುವಿನ ಸ್ಥಾನ ತುಂಬಲಾರಂಭಿಸಿದನು. ಸುಬ್ಬು ಮತ್ತು ಶೀಲಾ ತಮ್ಮದೇ ಆದ ಲೋಕದಲ್ಲಿ ತೇಲಾಡಲಾರಂಭಿಸಿದಾಗ ಕಾಲ ಕಳೆದಿದ್ದೇ ತಿಳಿಯಲಿಲ್ಲ.

ಇತ್ತ ದುಬೈಗೆ ಹೋದ ಸುಬ್ಬು ಹತ್ತು ವರ್ಷ ಕಳೆದು ಊರಿಗೆ ಮರಳಿದ. ಊರಿಗೆ ಬಂದವನು ತಾನು ಸದಾ ಕಾಲ ಸಂದಿಸುತ್ತಿದ್ದ ಮಲ್ಲಿಕಾರ್ಜುನನ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಚಿಕ್ಕ ಮಗುವಿನ ಜೊತೆಗಿದ್ದ ಓರ್‍ವ ಯುವತಿಯತ್ತ ಸುಬ್ಬುವಿನ ಗಮನ ಹೋಯಿತು. ಆಕೆ ನೋಡಿದರೆ ತನ್ನ ಶೀಲಾಳಂತೆ ಕಾಣುತ್ತಿದ್ದಳು. ಹತ್ತಿರ ಹೋಗಿ ನೋಡಿದಾಗ ಆ ಯುವತಿ ಸುಬ್ಬುನನ್ನು ನೋಡಿದವಳೇ ಅವಕ್ಕಾಗಿ ನಿಂತಳು. ಆಕೆಯ ಕತ್ತಿನಲ್ಲಿ ಇದ್ದ ತಾಳಿಯನ್ನು ನೋಡಿದ ಸುಬ್ಬುವು ದಿಗ್ಭ್ರಾಂತನಾಗಿ ಹೋದ. ಸುಬ್ಬುವನ್ನು ನೋಡಿ ಶೀಲಾಳ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯಲಾರಂಭಿಸಿತು. ಶೀಲಾ ಮತ್ತು ಶಿವರಾಮ ಮದುವೆ ಯಾದ ಸಂಗತಿ ತಿಳಿದ ಸುಬ್ಬು ಹುಚ್ಚನಂತಾಗಿ ಹೋದನು.

ಮಾರುತಿಪುರ ಈಗ ಆಧುನಿಕತೆಯ ಧಾಳಿಗೆ ತುತ್ತಾಗಿ ಹೋಗಿತ್ತು. ಅಲ್ಲಿ ವಿದ್ಯಾವಂತ ಮಂದಿ ಕೆಲಸವರಸಿ ಪಟ್ಟಣಕ್ಕೆ ತೆರಳಿದರೆ ಅರೆಬರೆ ಕಲಿತ ಹುಡುಗರು ಬಾರು ಕ್ಲಬ್‌ಗಳಲ್ಲಿ ಸಪ್ಲೈ ಕೆಲಸಕ್ಕಾಗಿ ನಗರ ಸೇರಿದ್ದರು. ಮಾರುತಿಪುರ ಒಂದರ್ಥದಲ್ಲಿ ಈಗ ವೃದ್ಧಾಶ್ರಮವೇ ಆಗಿ ಹೋಗಿದೆ.
*****

ಕೀಲಿಕರಣ : ಕಿಶೋರ್ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರ್ಖಪೆಟ್ಟಿಗೆ
Next post ಸೈ

ಸಣ್ಣ ಕತೆ

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…