ನನಗೆ ತಿಳಿದಿಲ್ಲ
ನೀ ಬಲು ದುಬಾರಿ ಎಂದು
ಎಂದೂ ಅನ್ನಿಸಿಲ್ಲ ಹಾಗೆ
ಯಾಕೋ ಗೊತ್ತಿಲ್ಲ, ನಿನ್ನ
ಒಳತೋಟಿಯಲ್ಲಿ ನನ್ನದೇ
ನೆರಳು ಸರಿದಾಡುವುದು
ಎಂಬ ಭ್ರಮೆ.

ಗೊತ್ತು ನಿನ್ನ ಮಿತಿ
ಅಪರಿಮಿತವೆಂದೂ
ಎಂದೂ ನನ್ನೊಂದಿಗೆ ಒಗ್ಗದೆಂದು
ಆದರೂ ಹೃದಯದ ಆರ್ದ್ರತೆಯಲ್ಲಿ
ನನ್ನ ಒಲುಮೆಯ ಹನಿಯು
ನಿನಗೆ ಪ್ರಿಯವೆಂದು.

ಕೆಲವೊಮ್ಮೆ ನಿನ್ನಲ್ಲಿ ಉಕ್ಕುವ
ಜ್ವಾಲಾಮುಖಿ ಶಿಖೆ
ನನ್ನನ್ನೆ ಸುಡಲೆಂದು
ಮತ್ತೆ ತಣ್ಣನೆಯ ಮಂದಾನಿಲ
ಮುದ ಮಾರುತ ಕೂಡ
ನನ್ನ ಅನುರಾಗಕ್ಕೆಂದು

ಬರಬಹುದು ನಿನ್ನಲ್ಲೂ
ಮನೆಯೂಟದ ಬಗ್ಗೆ
ತಾತ್ಸಾರ
ಹೊರಗಿನೂಟದ ಆಸೆ
ಪರಿಮಳದ ಉನ್ಮತ್ತತೆಗೆ

ಆದರೂ ನನಗೆ ಗೊತ್ತು
ನಿನ್ನ ಪುಂಗಿ ಹಾಗೆಲ್ಲ
ಬಾರಿಸದೆಂದೂ,
ಅದಕ್ಕೆ ಕುಣಿಯುವ ನಾಗ
ನಾನೇ ಆಗಬೇಕೆಂದು
*****